ವಿಷಯದ ವಿವರಗಳಿಗೆ ದಾಟಿರಿ

Archive for

27
ಮಾರ್ಚ್

ವಸಾಹತು ಪ್ರಜ್ಞೆಯ ವಿಶ್ವರೂಪ ೨ : ಏನೀ ಮೂಢನಂಬಿಕೆ?

ಕನ್ನಡ ನಿರೂಪಣೆ: ರಾಜಾರಾಮ ಹೆಗಡೆ

Prof Balu ವಿದ್ಯಾವಂತರಿಗೆ ಈ ಶಬ್ದ ಸುಪರಿಚಿತ. ‘ಭಾರತೀಯ ಸಮಾಜದಲ್ಲಿ ಮೂಢನಂಬಿಕೆ ಆಳವಾಗಿ ಬೇರುಬಿಟ್ಟಿದೆ’, ಅಥವಾ ‘ಭಾರತೀಯರು ಯಾವ್ಯಾವುದೋ ಮೂಢನಂಬಿಕೆಗಳನ್ನು ಇಟ್ಟುಕೊಂಡಿದ್ದಾರೆ’,‘ಈ ಮೂಢನಂಬಿಕೆಗಳನ್ನು ತೊಡೆದು ಹಾಕದ ಹೊರತೂ ನಮ್ಮ ಸಮಾಜ ಉದ್ಧಾರವಾಗುವುದಿಲ್ಲ, ಇತ್ಯಾದಿ ಹೇಳಿಕೆಗಳನ್ನು ಪ್ರತಿಯೊಬ್ಬನೂ ಭಾಷಣ-ಲೇಖನಗಳಲ್ಲಿ, ತರಗತಿಯ ಪಾಠಗಳಲ್ಲಿ ಸಾಕಷ್ಟು ಕೇಳಿರುತ್ತಾನೆ. ಈ ಶಬ್ದದ ಜೊತೆಗೆ ಸಮಾನಾರ್ಥಕವಾಗಿ ‘ಕುರುಡು ನಂಬಿಕೆ’, ‘ಅಂಧ ಶ್ರದ್ಧೆ’, ‘ಗೊಡ್ಡು ಸಂಪ್ರದಾಯಗಳು’ ಇತ್ಯಾದಿ ಶಬ್ದಗಳೂ ಬಳಕೆಯಲ್ಲಿವೆ. ಈ ಶಬ್ದಗಳೆಲ್ಲ ನಮಗೆ ಅರ್ಥವಾಗುತ್ತಿವೆ ಎಂಬುದಾಗಿ ಭಾವಿಸಿಕೊಂಡೇ ನಾವು ಅವನ್ನು ಉಪಯೋಗಿಸುತ್ತಿರುತ್ತೇವೆ. ಇವುಗಳ ಅರ್ಥವನ್ನು ಕೇಳಿದರೆ ‘ಅವು ಅವೈಜ್ಞಾನಿಕ, ಅಜ್ಞಾನದಿಂದ ಮಾಡುವಂಥವು, ಹಾಗಾಗಿ ಅವು ಮೌಢ್ಯ’ ಎಂಬ ಉತ್ತರ ಬರುತ್ತದೆ.

ಹೀಗೊಂದು ಪ್ರಶ್ನೆ ಕೇಳಿಕೊಳ್ಳುವಾ.ಒಂದು ಸಮಾಜದಲ್ಲಿ ಜನರು ಮಾಡುವ ಕೆಲಸಕ್ಕೆಲ್ಲವೂ ವೈಜ್ಞಾನಿಕ ಕಾರಣಗಳಿರಲು ಸಾಧ್ಯವೆ? ಅಂಥವೆಲ್ಲವೂ ಮೂಢನಂಬಿಕೆಯಾಗುತ್ತದೆಯೆ?  ಗುರು Mooda Nambikeಹಿರಿಯರಿಗೆ ಕಾಲುಮುಟ್ಟಿ ನಮಸ್ಕರಿಸುತ್ತೇವೆ, ಮನಸ್ಸಿಗೆ, ಸಂಬಂಧಕ್ಕೆ ಎಲ್ಲ ಹಿತವೇ, ಆದರೆ ವೈಜ್ಞಾನಿಕ ಕಾರಣ ಗೊತ್ತಿಲ್ಲ. ನಮ್ಮ ವಿದ್ಯಾವಂತರ ಆಧುನಿಕ ಸಮಾಜವನ್ನೇ ತೆಗೆದುಕೊಳ್ಳಿ: ಬೇಸಿಗೆಯಲ್ಲಿ ಸೆಕೆಯಾಗಿ ಬೆವರು ಕಿತ್ತುಕೊಂಡು ಹಿಂಸೆಯಾಗುತ್ತಿರುತ್ತದೆ. ಆದರೂ ಕೋಟು, ಟೈಗಳನ್ನು ಕಟ್ಟಿಕೊಂಡು ಆಫೀಸಿಗೆ ಬರುವುದು ಶಿಷ್ಟಾಚಾರ ಅಥವಾ ಡ್ರೆಸ್ ಕೋಡು. ಕೆಲವರಿಗೆ ಕಡ್ಡಾಯ. ಇದರಲ್ಲಿ ಏನು ವೈಜ್ಞಾನಿಕತೆಯಿದೆ?  ಹೀಗೆ ಯಾವುದೇ ಸಮಾಜವನ್ನು ನೋಡಿದರೂ ಕೂಡ ವೈಜ್ಞಾನಿಕ ಕಾರಣಗಳ ಯಾವುದೇ ಹಂಗಿಲ್ಲದೇ ಇಂಥ ಪದ್ಧತಿಗಳು ಅಥವಾ ರೂಢಿಗಳು ಸಮುದಾಯಗಳನ್ನು ಒಟ್ಟಿಗೇ ಹಿಡಿದಿರುತ್ತವೆ, ಸಂಬಂಧಗಳನ್ನು ಬೆಸೆಯುತ್ತಿರುತ್ತವೆ.‘ಅವೈಜ್ಞಾನಿಕ’ ಎಂಬ ಕಾರಣವನ್ನು ಇಟ್ಟುಕೊಂಡು ಇಂಥ ಆಚರಣೆಗಳನ್ನೆಲ್ಲ ತೊಡೆದುಹಾಕಿದರೆ ಯಾವುದಾದರೂ ಮನುಷ್ಯ ಸಮಾಜ ಅಸ್ತಿತ್ವದಲ್ಲಿರಲು ಸಾಧ್ಯವೆ? ಹಾಗಿದ್ದ ಪಕ್ಷದಲ್ಲಿ ಇಂಥ ರೂಢಿಗಳು ಭಾರತೀಯ ಸಮಾಜದಲ್ಲಿ ಮಾತ್ರವೇ ಉಚ್ಛಾಟಿಸಬೇಕಾದ ಪೆಡಂಭೂತವಾಗಿದ್ದು ಹೇಗೆ ಮತ್ತು ಯಾವಾಗ? ಮೂಢ ನಂಬಿಕೆ ಏಕೆ ತೊಡೆಯಬೇಕಾದ ಅನಿಷ್ಠವೆಂಬುದಾಗಿ ನಾವೆಲ್ಲ ನಂಬಿದ್ದೇವೆ?

ಈ ಮೂಢನಂಬಿಕೆ, ಅಂಧಶ್ರದ್ಧೆ ಇತ್ಯಾದಿ ಪದಗಳೆಲ್ಲ ಕನ್ನಡದಲ್ಲಿ ಅರ್ಥವಿಲ್ಲದ ಶಬ್ದಗಳು.ಅವು ಇಂಗ್ಲೀಷಿನ Superstition ಎಂಬ ಶಬ್ದದ ಕನ್ನಡಾನುವಾದಗಳು. ಭಾರತೀಯ ಭಾಷೆಗಳಲ್ಲಿ ಮೌಢ್ಯ ಎಂದರೆ ಅಜ್ಞಾನ ಎಂಬ ಅರ್ಥವಿದೆ. ಮೂಢ ಎಂದರೆ ಅಜ್ಞಾನಿ. ಆದರೆ ಮೂಢ ನಂಬಿಕೆ ಎನ್ನುವ ಪದಗುಚ್ಛವಿಲ್ಲ. ಅದೇ ಥರ ಅಂಧ ಶ್ರದ್ಧೆ. ಶ್ರದ್ಧೆ ಕುರುಡಾಗಿರುವುದು ಅಂದರೇನು? ಕಣ್ಣಿರುವ ಶ್ರದ್ಧೆ ಅಂತ ಒಂದಿದೆಯೆ? ಭಾರತೀಯ ಭಾಷೆಯಲ್ಲಿ ಈ ಪದವನ್ನು ಅರ್ಥೈಸಲು ಹೋದರೆ ನಗೆಪಾಟಲಾಗುತ್ತದೆ. ಸೂಪರ್‍ಸ್ಟಿಶನ್ ಎಂಬುದು ಕ್ರಿಶ್ಚಿಯನ್ ಥಿಯಾಲಜಿಯಲ್ಲಿ ಹಾಗೂ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಒಂದು ಪರಿಕಲ್ಪನೆಯನ್ನು ಸೂಚಿಸುವ ಪರಿಭಾಷೆ. ಆ ಹಿನ್ನೆಲೆಯಲ್ಲಿ ಮಾತ್ರವೇ ಅರ್ಥವಾಗುವ ಶಬ್ದ.ಈ ಶಬ್ದವು ಮೂಲತಃ ರೋಮನ್ನರಲ್ಲಿ ಬಳಕೆಯಲ್ಲಿದ್ದು, ಅದರರ್ಥ ‘ದೇವರುಗಳ ಕುರಿತು ಅತಿಯಾದ ಹೆದರಿಕೆ’ ಎಂಬುದಾಗಿದೆ. ಇದನ್ನೊಂದು ಒಳ್ಳಯೆ ಲಕ್ಷಣ ಎಂಬುದಾಗಿ ರೋಮನ್ನರೇನೂ ಭಾವಿಸಿರಲಿಲ್ಲ. ಆದರೆ ರೋಮನ್ ಸಂಸ್ಕೃತಿಯನ್ನು ನಾಶಮಾಡಿ ಅದರ ಮೇಲೆ ಪ್ರತಿಷ್ಠಾಪಿತವಾದ ಕ್ರಿಶ್ಚಿಯಾನಿಟಿಯು ರೋಮನ್ನರ ದೇವತೆಗಳನ್ನು ಸುಳ್ಳು ದೇವತೆಗಳೆಂದು ನಿರೂಪಿಸಿತು. ಈ ಸುಳ್ಳು ದೇವತೆಗಳು ಕ್ರೈಸ್ತರ ಗಾಡ್‍ನ ವಿರೋಧಿಯಾದ ಡೆವಿಲ್ಲನ ಮೋಸಗಳು. ಈ ದೇವತೆಗಳ ಮೂಲಕ ಡೆವಿಲ್ಲನು ಜನರನ್ನು ದಾರಿತಪ್ಪಿಸುತ್ತಿದ್ದಾನೆ ಏಕೆಂದರೆ ಅವು ಗಾಡ್‍ನ ವೈರಿಗಳು ಎಂಬುದಾಗಿ ಶಾಸ್ತ್ರವನ್ನು ಬರೆದುಕೊಂಡರು. ಆಗ ಸೂಪರ್‍ಸ್ಟಿಶನ್ ಶಬ್ದಕ್ಕೆ ತನ್ನದೇ ಆದ ಹೊಸ ಅರ್ಥವೊಂದು ಪ್ರಾಪ್ತವಯಿತು. ಅದೆಂದರೆ ‘ ಸುಳ್ಳು ದೇವರುಗಳನ್ನು ಕುರಿತ ಭಯ ಅಥವಾ ಅವನ್ನು ಪೂಜಿಸುವುದು’ ಅಂತ.
Read more »