“ಅರ್ನೆಸ್ಟೊ ಚೆಗುವಾರ ಕ್ರಾಂತಿಕಾರಿ ಭಾವಜೀವಿ”
– ನಾರಾಯಣ್ ಕೆ ಕ್ಯಾಸಂಬಳ್ಳಿ
‘ನಾನು ಎಂದಿಗೂ ಸೋತು ಮನೆಗೆ ಹಿಂತಿರುಗುವುದಿಲ್ಲ. ಸೋಲಿಗಿಂತ ಸಾವನ್ನೆ ಹೆಚ್ಚು ಇಚ್ಛಿಸುತ್ತೇನೆ’ ಎಂದು ಕ್ಯೂಬ ಬಿಡುವ ಮೊದಲು ಹೇಳಿದ ಮಾತಿನಂತೆಯೇ ನಿರಂತರವಾಗಿ ಹೋರಾಟದಲ್ಲೇ ತಮ್ಮ ಜೀವನವನ್ನು ಸವೆದು ಸೋಲಲು ಇಚ್ಛಿಸಿದೆ ತನನ್ನು ಸಾವಿಗೆ ಒಡ್ಡಿಕೊಂಡ ಮಹಾನ್ ಕ್ರಾಂತಿಕಾರಿ, ಮಾನವತಾವಾದಿ, ಗೆರಿಲ್ಲಾ ಯುದ್ಧ ತಂತ್ರ ನಿಪುಣ, ವೈದ್ಯ, ಬರಹಗಾರ, ಬುದ್ಧಿಜೀವಿ ಹಾಗೂ ಕ್ಯೂಬಾ ಕ್ರಾಂತಿಯ ಪ್ರಮುಖ ನೇತಾರ ಅರ್ನೆಸ್ಟೊ ಚೆಗುವರ ಜಗತ್ತಿನ ಕ್ರಾಂತಿಕಾರಿ ಹೋರಾಟಗಾರರಲ್ಲಿ ಪ್ರಮುಖರು. ಚೆಗುವಾರ ಹುಟ್ಟಿದ್ದು ಜೂನ್ 14, 1928ರಂದು ಅರ್ನೆಸ್ಟೊ ಚೆಗುವಾರ ಲಿಂಚ್ ಮತ್ತು ಸೀಲಿಯಾ ಡ ಲಾ ಸೆರ್ನ್ ಎಂಬ ಸ್ಪ್ಯಾನಿಷ್ ಮತ್ತು ಐರಿಷ್ ತಂದೆ ತಾಯಿಗಳ ಮೊದಲ ಮಗನಾಗಿ ಅರ್ಜೆಂಟೀನಾದ ರೊಸಾರಿಯೋ ಪಟ್ಟಣದಲ್ಲಿ. ಚೆಗುವರ ಚಿಕ್ಕಂದಿನಿಂದಲೇ ಬಡವರ, ಶ್ರಮಿಕರ ಪರವಾಗಿ ಹೆಚ್ಚು ಪ್ರೀತಿಯನ್ನು ಬೆಳೆಸಿಕೊಂಡವನು ಮತ್ತು ಎಡಪಂಥೀಯ ಒಲವು ಹೊಂದಿದ್ದ ಕುಟುಂಬದಲ್ಲಿ ಹುಟ್ಟಿಬೆಳೆದ ಅವನಿಗೆ ಚಿಕ್ಕಂದಿನಿಂದಲೇ ಸ್ಪಷ್ಟ ರಾಜಕೀಯ ದೃಷ್ಟಿಕೋನಗಳ ಬಗೆಗೆ ಪರಿಚಯ ದೊರೆಯುತಿತ್ತು.
ಸ್ಪ್ಯಾನಿಷ್ ಅಂತರ್ಯುದ್ಧದ ಕಾಲದಿಂದಲೂ ಗಣತಂತ್ರ ವಾದಿಗಳ ಪ್ರಬಲ ಸಮರ್ಥಕರಾಗಿದ್ದ ತಂದೆಯ ಪ್ರಭಾವ ಚೆಗುವಾರನ ಮೇಲೆ ಸಹಜವಾಗಿಯೇ ಬೀರಿತ್ತು.ಚೆಗುವಾರ ತನ್ನ 19ನೇ ವಯಸ್ಸಿನಲ್ಲಿ (1948) ವೈದ್ಯಕೀಯ ಕಲಿಕೆಗಾಗಿ ಬ್ಯೂನಸ್ ಐರ್ಸ್ ವಿಶ್ವವಿದ್ಯಾನಿಲಯಕ್ಕೆ ಸೇರುತ್ತಾನೆ. ಆದರೆ 1951ರಲ್ಲಿ ವಿಶ್ವವಿದ್ಯಾಲಯದಿಂದ ಒಂದು ವರ್ಷ ರಜೆ ಪಡೆದು ತನ್ನ ಆಪ್ತಮಿತ್ರ ಅಲ್ಬರ್ಟೊ ಗ್ರೆನಡೋ ಜೊತೆಗೂಡಿ ಮೋಟರ್ ಸೈಕಲ್ ಮೇಲೆ ದಕ್ಷಿಣ ಅಮೆರಿಕಾದ ಪ್ರವಾಸ ಹೊರಡುತ್ತಾನೆ. ಚೆಗುವಾರನ ಬದುಕಿನಲ್ಲಿ ಈ ಪ್ರವಾಸ ಬಹಳ ಪ್ರಮುಖವಾದದ್ದು ಮತ್ತು ಚೆಗುವಾರ ತಾನೊಬ್ಬ ಕ್ರಾಂತಿಕಾರಿಯಾಗಿರಲು ಪ್ರಮುಖ ಕಾರಣ ಈ ಪ್ರವಾಸದ ಅನುಭವಗಳೇ. ಅವನೆ ಹೇಳಿದ, ಬರೆದುಕೊಂಡಿರುವ ಹಾಗೆ “ಆಂಡೀಸ್ ಪರ್ವತಶ್ರೇಣಿಯ ಉನ್ನತ ಶಿಖರವಾದ ಮಾಚು ಪಿಚ್ಚುವಿಗೆ ಹೋಗುವ ದಾರಿಯಲ್ಲಿ ಶ್ರೀಮಂತ ಭೂಮಾಲೀಕರಿಂದ ತುಂಡು ಭೂಮಿಗಳನ್ನು ಪಡೆದು ಕೃಷಿ ಮಾಡುತಿದ್ದ ರೈತಾಪಿ ಜನಸಮುದಾಯಗಳ ಹೀನಾಯ ಬದುಕು, ಕಡುಬಡತನ, ನನ್ನ ಮನಸ್ಸಿಗೆ ತಾಕಿತು. ಈ ಜನರಿಗೆ ನೆರವಾಗಬೇಕಿದ್ದಲ್ಲಿ ನಾನು ವೈದ್ಯಕೀಯ ಅಭ್ಯಾಸವನ್ನು ಬಿಟ್ಟು ಸಶಸ್ತ್ರ ಹೋರಾಟದ ರಾಜಕೀಯ ರಂಗಕ್ಕೆ ಪ್ರವೇಶಿಸಬೇಕಿದೆ ಎಂದು ಮನವರಿಕೆಯಾಯಿತು” ಎಂದು ನಂತರ ಚೆಗುವಾರ ಬರೆದುಕೊಳ್ಲುತ್ತಾನೆ. ಹಾಗಾಗಿ ಈ ಮೋಟಾರ್ ಸೈಕಲ್ ಪ್ರವಾಸ್ ಚೆಗುವಾರನ ಕ್ರಾಂತಿ ಬದುಕಿನ ಬಹಳ ದೊಡ್ಡ ತಿರುವು. ಮೋಟಾರ್ ಸೈಕಲ್ ಪ್ರವಾಸದ ಜೊತೆಗಾರ ಆಲ್ಬರ್ಟೊ ಗ್ರಾನಡೊಸ್ ಚೆ ಕುರಿತು ಹೇಳುತ್ತಾ ಟೆಟೆ (‘ಚೆ’ ನನ್ನು ಪ್ರೀತಿಯಿಂದ ಕರೆಯುತ್ತಿದ್ದ ಹೆಸರು) ನನ್ನು ನಾನು ಮೊದಲು ಭೇೀಟಿ ಆಗಿದ್ದು 1941ರಲ್ಲಿ ಅದು ನನ್ನ ಸಹೋದರ ಥಾಮಸ್ ಮೂಲಕ. ಆಗ ನನಗೆ 13 ವರ್ಷ ವಯಸ್ಸು. ನಮ್ಮಿಬ್ಬರನ್ನು ಒಟ್ಟೊಟ್ಟಾಗಿ ತಂದ ವಿಷಯವೆಂದರೆ ಓದುವ ಅಭಿರುಚಿ ಮತ್ತು ನಿಸರ್ಗ ಪ್ರೇಮ. ಚೆ ಮನೆಗೆ ನಾನು ವಾಡಿಕೆಯ ಅಥಿತಿಯಾಗಿದ್ದೆ. ಅಲ್ಲಿದ್ದ ಗ್ರಂಥಭಂಡಾರವನ್ನು ನನ್ನದೆಂಬತೆಯೇ ಬಳಸಿಕೊಳ್ಳುತ್ತಿದ್ದೆ. ಟೆಟೆ (ಚೆ) ಒಬ್ಬ ರೂಢಿಯ ಮಾತುಗಾರನಾಗಿದ್ದ.