ಕಿತ್ತಳೆ ಹಣ್ಣಿನ ಋಣ!?
– ನಿತ್ಯಾನಂದ.ಎಸ್.ಬಿ
ಆಗಲೇ ನಾಲ್ಕು ಘಂಟೆ ಆಗಿಬಿಟ್ಟಿತ್ತು. ಇನ್ನು ಐದು-ಹತ್ತು ನಿಮಿಷದಲ್ಲಿ ರೈಲು, ನಿಲ್ದಾಣಕ್ಕೆ ಬರುವುದರಲ್ಲಿತ್ತು. ಕಾಲೇಜಿನಲ್ಲಿ ಕಬಡ್ಡಿ ತಂಡಕ್ಕೆ ಸೇರಿದ್ದ ಭರತ ಅಭ್ಯಾಸ ಮುಗಿಸಿ ಬರುವುದು ತಡವಾಗಿಬಿಟ್ಟಿತ್ತು. ರೈಲು ಸಿಗದಿದ್ದರೆ ಬಸ್ಸಿನಲ್ಲಿ ಹೋಗಬೇಕು. ಜೇಬಿನಲ್ಲಿ ನಯಾಪೈಸೆ ದುಡ್ಡಿಲ್ಲ. “ದೇವ್ರೇ ರೈಲು ಮಿಸ್ಸು ಮಾಡಿಸಬೇಡಪ್ಪಾ” ಅಂತ ಮನಸ್ಸಿನಲ್ಲಿಯೇ ಪ್ರಾರ್ಥಿಸುತ್ತಾ, ಒಂದೇ ಉಸಿರಿಗೆ ರೈಲು ನಿಲ್ದಾಣದ ಕಡೆಗೆ ಓಡುತ್ತಿದ್ದ. ಮದ್ಯಾಹ್ನ ಊಟ ಮಾಡದಿದ್ದುದರಿಂದ ಹೊಟ್ಟೆ ಬೇರೆ ಚುರುಗುಡುತ್ತಿತ್ತು. ರೈಲು ಸಿಕ್ಕಿಬಿಟ್ಟರೆ ಸಾಕೆಂದು ಶರವೇಗದಲ್ಲಿ ನಿಲ್ದಾಣದೆಡೆಗೆ ಧಾವಿಸುತ್ತಿದ್ದ.
ಭರತ ಹಳ್ಳಿಯ ಹುಡುಗ. ತೀರಾ ಬಡವನಲ್ಲದಿದ್ದರೂ ಮನೆಯ ಆರ್ಥಿಕ ಪರಿಸ್ಥಿತಿ ಅಂಥಾ ಉತ್ತಮವಾಗೇನೂ ಇರಲಿಲ್ಲ. ಮಗಳ ಮದುವೆಗಾಗಿ ಮಾಡಿದ್ದ ಸಾಲ ತೀರಿಸಲು ತಂದೆ ಹಗಲು ರಾತ್ರಿ ದುಡಿಯುತ್ತಿದ್ದರೆ, ಅಮ್ಮ ಮನೆಯ ಖರ್ಚನ್ನು ಸರಿಹೊಂದಿಸಲು ಬಟ್ಟೆ ಹೊಲಿಯುತ್ತಿದ್ದಳು. ತಂದೆ ತಾಯಿಯ ಕಷ್ಟವನ್ನು ಕಣ್ಣಾರೆ ಕಂಡಿದ್ದ ಭರತ, ಹೈಸ್ಕೂಲು ಮುಗಿದ ನಂತರ ಸ್ವಂತ ಖರ್ಚಿನಲ್ಲೇ ಓದಲು ತೀರ್ಮಾನಿಸಿದ್ದ. ಅದಕ್ಕಾಗಿಯೇ ರಜೆಯಲ್ಲಿ ಪಟ್ಟಣಕ್ಕೆ ಹೋಗಿ ಪೇಪರ್ ಹಾಕಿ, ಹಾಲು ಮಾರಿ, ಗಂಧದಕಡ್ಡಿ ಫ್ಯಾಕ್ಟರಿಗೆ ಹೋಗಿ ಒಂದಷ್ಟು ಹಣವನ್ನು ಸಂಪಾದಿಸಿದ್ದ. ಅದೇ ಹಣದಲ್ಲಿ ಕಾಲೇಜಿನ ಫೀಜು ಕಟ್ಟಿ, ಪುಸ್ತಕ, ಪೆನ್ನು, ಬ್ಯಾಗನ್ನು ಕೊಂಡುಕೊಂಡಿದ್ದ. ಒಂದು ರೈಲು ಪಾಸನ್ನೂ ಮಾಡಿಸಿಕೊಂಡಿದ್ದ. ಹೀಗಾಗಿ ಸದ್ಯ ಭರತನ ಹತ್ತಿರ ಒಂದು ಬಿಡಿಗಾಸೂ ಉಳಿದಿರಲಿಲ್ಲ. ಬೆಳಿಗ್ಗೆ ಊಟವನ್ನು ಡಬ್ಬಿಗೆ ಹಾಕಿಸಿಕೊಳ್ಳುವುದಕ್ಕೆ ತಡವಾಗುತ್ತದೆಂದು ಹಾಗೆಯೇ ಬಂದಿದ್ದರಿಂದ ಮದ್ಯಾಹ್ನದ ಊಟ ಖೋತಾ ಆಗಿತ್ತು.
“ಅಬ್ಭಾ.. ರೈಲು ಇನ್ನೂ ಬಂದಿಲ್ಲ”. ಎಂದು ನಿಟ್ಟುಸಿರು ಬಿಟ್ಟ ಭರತ, ದೂರದಿಂದಲೇ ಕಂಡ ಸ್ನೇಹಿತರ ಬಣ್ಣಬಣ್ಣದ ಬ್ಯಾಗುಗಳನ್ನು ನೋಡಿ ರೈಲು ಇನ್ನೂ ಬಂದಿಲ್ಲವೆಂಬುದನ್ನು ಖಚಿತಪಡಿಸಿಕೊಂಡ. ಬಹಳ ಆಯಾಸವಾಗಿದ್ದುದರಿಂದ ಓಡುವುದನ್ನು ನಿಲ್ಲಿಸಿ ನಡೆಯಲು ಪ್ರಾರಂಭಿಸಿದ.ಭರತ ಒಳ್ಳೆಯ ಕಬಡ್ಡಿ ಆಟಗಾರ. ಮುಂದಿನ ವಾರ ಚಿತ್ರದುರ್ಗದಲ್ಲಿ ನಡೆಯಲಿದ್ದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾಗಿದ್ದ. ಅದಕ್ಕಾಗಿಯೇ ದಿನನಿತ್ಯ ಕಠಿಣ ತಯಾರಿ ನಡೆದಿತ್ತು. ಜೊತೆಗೆ ಚಿತ್ರದುರ್ಗಕ್ಕೆ ಹೋಗಿಬರಲು ಬೇಕಾದ 340 ರೂಪಾಯಿಗಳನ್ನು ಒಟ್ಟು ಮಾಡಬೇಕಾಗಿತ್ತು. ಹೇಗೋ ಹೊಂದಿಸಿದರಾಯ್ತು ಎಂದುಕೊಂಡೇ ನಿಲ್ದಾಣ ಸೇರಿದ.
ಭರತನ ಬರುವಿಕೆಯನ್ನೇ ಕಾಯುತ್ತಾ ನಿಂತಿದ್ದ ಪ್ರಿಯಮಿತ್ರ ರಾಜೇಶ, ಭರತ ಹತ್ತಿರವಾಗುತ್ತಿದ್ದಂತೆ ಕೇಳಿದ. “ಏನೋ ಭರತ. ಇಷ್ಟು ಹೊತ್ತು ಮಾಡಿಬಿಟ್ಟೆ. ಕಬಡ್ಡಿ ಪ್ರಾಕ್ಟೀಸ್ ಮಾಡ್ತಿದ್ದಾ..?
ಭರತ ಹೂಂ ಎಂಬಂತೆ ತಲೆ ಆಡಿಸಿದ.
“ಇವತ್ತು ಕ್ರಾಸಿಂಗ್ ಇದ್ದದ್ರಿಂದ ರೈಲು 15 ನಿಮಿಷ ಲೇಟ್ ಆಗಿ ಬರುತ್ತಿದೆಯಂತೆ. ಇಲ್ದಿದ್ರೆ, ಇವತ್ತು ನೀನು ಬಸ್ಸಲ್ಲಿ ಬರಬೇಕಾಗಿತ್ತು. ದುಡ್ಡಿತ್ತು ತಾನೇ?” ರಾಜೇಶ ಕಾಳಜಿಯಿಂದ ಕೇಳಿದ.
ಭರತ ಸ್ವಭಾವತಃ ಸ್ವಾಭಿಮಾನಿಯಾಗಿದ್ದರೂ ರಾಜೇಶನ ಹತ್ತಿರ ಯಾವುದನ್ನೂ ಮುಚ್ಚಿಡುತ್ತಿರಲಿಲ್ಲ. “ಸಧ್ಯ ರೈಲು ಮಿಸ್ಸಾಗಲಿಲ್ಲವಲ್ಲ್ಲಾ ಬಿಡು. ನನ್ ಹತ್ರ ಒಂದು ಪೈಸಾನೂ ದುಡ್ಡಿರಲಿಲ್ಲ ಮಾರಾಯ. ಅದಕ್ಕೇ ಮದ್ಯಾಹ್ನ ಊಟಾನೂ ಮಾಡಲಿಲ್ಲ ಗೊತ್ತಾ..? ಹೊಟ್ಟೆ ಸಿಕ್ಕಾಪಟ್ಟೆ ಹಸಿತಾ ಇದೆ. ಸಖತ್ ಸುಸ್ತಾಗಿಬಿಟ್ಟಿದೆ. ಎಷ್ಟೊತ್ತಿಗೆ ಮನೆ ಸೇರಿಕೊಂಡುಬಿಡ್ತೀನೋ ಅನ್ನಿಸಿಬಿಟ್ಟಿದೆ ಕಣೋ.” ಎಂದ.
ರಾಜೇಶನಿಗೆ ಕರುಳು ಚುರುಕ್ ಎಂದಿತು. ಆದರೇನು ಮಾಡೋದು? ರಾಜೇಶನದೂ ಹೆಚ್ಚೂ ಕಡಿಮೆ ಭರತನ ಪರಿಸ್ಥಿತಿಯೇ..! ಅವನಿದ್ದ ಸ್ಥಿತಿಯಲ್ಲಿ ಕಾಲೇಜಿಗೆ ಬರುತ್ತಿದ್ದುದೇ ಹೆಚ್ಚಾಗಿತ್ತು.
“ಸರಿ. ಆಯ್ತು. ಇನ್ನೆಷ್ಟೊತ್ತು? ಅರ್ಧ ಘಂಟೆಯಲ್ಲಿ ಮನೆ ಸೇರ್ತೀಯಲ್ಲ ಬಿಡು.” ಎಂದು ಹೇಳಿ ಭರತನ ಹಸಿವಿನ ತೀವ್ರತೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿದ.
“ಅದೋ ನೋಡು ರೈಲು ಬಂದೇ ಬಿಡ್ತು!” ರಾಜೇಶ ಕೂಗಿದ.
ವೇಗವಾಗಿ ಬಂದ ರೈಲು, ನಿಲ್ದಾಣ ಕಂಡೊಡನೆ ನಿಧಾನವಾಗಿ ಚಲಿಸಲು ಪ್ರಾರಂಭಿಸಿತು. ಹುಡುಗರೆಲ್ಲರೂ ಸೀಟು ಹಿಡಿಯುವ ಸಲುವಾಗಿ ರೈಲು ನಿಲ್ಲುವ ಮೊದಲೇ ಹತ್ತಿ ಕುಳಿತರು. ಭರತನೂ ರಾಜೇಶನೊಟ್ಟಿಗೆ ರೈಲು ಹತ್ತಿ ಸೀಟು ಹಿಡಿದು ಕುಳಿತ. ಭರತನ ದೃಷ್ಟಿ ರೈಲಿನ ಬಾಗಿಲ ಕಡೆ ಹರಿಯಿತು. ಅಲ್ಲೊಬ್ಬ ಅಜ್ಜಿ ತಲೆಯ ಮೇಲೆ ಕಿತ್ತಳೆ ಹಣ್ಣುಗಳ ಬುಟ್ಟಿಯನ್ನು ಹೊತ್ತು, ರೈಲು ಹತ್ತಲು ಪ್ರಯತ್ನಿಸುತ್ತಿದ್ದಳು. ವಯಸ್ಸಾಗಿದ್ದ ಶರೀರ. ರೈಲು ಹತ್ತಲು ಚೈತನ್ಯ ಸಾಲದೇ ಪದೇ ಪದೇ ಸೋಲುತ್ತಿತ್ತು. ಭರತ ಸೀದಾ ಹೋಗಿ ಬುಟ್ಟಿಯನ್ನು ಇಳಿಸಿಕೊಂಡು ಅಜ್ಜಿಯ ರಟ್ಟೆಗಳನ್ನು ಹಿಡಿದು ಮೆಲ್ಲನೆ ಒಳಕ್ಕೆ ಕರೆದುಕೊಂಡ. ತಾನು ಕುಳಿತಿದ್ದ ಸೀಟಿನಲ್ಲಿ ಅಜ್ಜಿಯನ್ನು ಕೂರಿಸಿ ತಾನು ನಿಂತುಕೊಂಡ. ರೈಲು ಹೊರಟಿತು.
“ಏನಜ್ಜಿ, ಈ ವಯಸ್ಸಲ್ಲೂ ರೈಲಲ್ಲಿ ಓಡಾಡಬೇಕಾ? ಚೆನ್ನಾಗಿ ಊಟ ತಿಂಡಿ ತಿನ್ಕೊಂಡು, ಮಕ್ಕಳು ಮರಿ ಅಂತ ಆಡಿಸ್ಕೊಂಡು ಮನೇಲಿ ಇರೋಕಾಗಲ್ವಾ?” ಭರತ ಕೇಳಿದ.
“ಮನೇಲಿ ಕುಳಿತರೆ ಜೀವನ ನಡೀಬೇಕಲ್ಲಾ ಮಗಾ” ಅಂದಳು ಅಜ್ಜಿ.
“ಅಂಥಾ ಕಷ್ಟ ಏನು ಬಂದಿರೋದು ಈಗ ನಿಂಗೆ?” ಭರತ ಕೇಳಿದ.
“ಅಯ್ಯೋ ಮಗಾ ಅದನ್ನ್ಯಾಕೆ ಕೇಳ್ತೀಯಾ ಬಿಡು. ದೇವ್ರಂತಾ ಗಂಡ ಖಾಯಿಲೆ ಬಿದ್ದು ಮೂರು ವರ್ಷ ಆಯ್ತು. ಮಕ್ಕಳು ಮರಿ ನಮ್ಮನ್ನ ದೂರ ಮಾಡಿಬಿಟ್ರು. ಭಿಕ್ಷೆ ಬೇಡೋಕೆ ಮನಸ್ಸು ಒಪ್ಪಾಕಿಲ್ಲ. ಅದಕ್ಕೆ ಕಿತ್ತಳೆ ಹಣ್ಣು ವ್ಯಾಪಾರ ಮಾಡ್ತಾ ಇದ್ದೀನಿ. ಇದ್ರಲ್ಲಿ ಬರೋ ದುಡ್ಡಲ್ಲಿ ನಾನೂ ನನ್ನ ಗಂಡ ಜೀವನ ಮಾಡ್ತೀವಿ. ಉಳಿಯೋ ದುಡ್ಡು ನನ್ ಗಂಡನ ಔಷಧಿ ಖರ್ಚಿಗೆ ಸರಿ ಹೋಗುತ್ತೆ. ಒಟ್ನಲ್ಲಿ ನೆಮ್ಮದಿಯಾಗಿದೀವಿ ಮಗಾ. ದೇವರು ಶಕ್ತಿ ಕೊಟ್ಟಿರೋವರ್ಗೂ ದುಡೀತೀನಿ, ಅಮೇಲೆ ಆ ಶಿವನಿಚ್ಚೆ” ಅಂದಳು ಅಜ್ಜಿ.
ಈ ವಯಸ್ಸಲ್ಲೂ ಅಜ್ಜಿಯಲ್ಲಿರುವ ಸ್ವಾಭಿಮಾನ ಕಂಡು ಭರತನಿಗೆ ಅವಳ ಮೇಲೆ ಅಭಿಮಾನ ಮೂಡಿತು.
“ತಗೋ ಮಗಾ. ತಿನ್ನು” ಅಜ್ಜಿ ತನ್ನ ಬುಟ್ಟಿಯಲ್ಲಿದ್ದ ಕಿತ್ತಳೆಗಳಲ್ಲಿ ಎರಡು ಚೆನ್ನಾಗಿರುವ ಹಣ್ಣುಗಳನ್ನು ಆರಿಸಿ ಭರತನಿಗೆ ಕೊಡಲು ಮುಂದಾದಳು. ಭರತನಿಗೆ ತನ್ನ ಜೇಬಿನಲ್ಲಿ ದುಡ್ಡಿಲ್ಲದ್ದು ಚೆನ್ನಾಗಿ ಗೊತ್ತಿತ್ತು. “ಬೇಡ ಅಜ್ಜಿ” ಅಂದ.
“ಬೇಡ ಅನ್ನಬೇಡ ತಗೋ ಮಗಾ. ಭಾಳಾ ಸೀಯಾಗದೆ. ಕೊಡಗಿಂದು. ತಿನ್ನು” ಅಂತ ಕೈಗಿಟ್ಟಳು.
“ಬೇಡ ಅಜ್ಜಿ ನನ್ ಹತ್ರ ದುಡ್ಡಿಲ್ಲ.” ನಿಜ ಹೇಳಿದ ಭರತ.
“ನಿನ್ ಹತ್ರ ದುಡ್ಡು ಕೇಳಿದೋರು ಯಾರು? ಪ್ರೀತಿಗೆ ಕೊಡ್ತಾ ಇರದು ತಗೊ ಮಗಾ.” ಅಜ್ಜಿ ಪ್ರೀತಿಯಿಂದ ಹೇಳಿದಳು.
ದುಡ್ಡು ಕೊಡದೆ ಹಣ್ಣನ್ನು ಮುಟ್ಟುವುದಕ್ಕೂ ಭರತನಿಗೆ ಮನಸಾಗಲಿಲ್ಲ.
ಬೇಡಜ್ಜೀ.. ನಂಗೆ ಹಸಿವಿಲ್ಲ.” ಅಂದ.
“ಯಾಕ್ ಮಗಾ ಸುಳ್ಳೇಳ್ತೀಯಾ? ನಿಂಗೆ ಹೊಟ್ಟೆ ತುಂಬಾ ಹಸೀತಾ ಇದೆ ಅಂತ ನಂಗೊತ್ತು. ಅದೂ ಅಲ್ದೇ ಮದ್ಯಾಹ್ನ ಬೇರೆ ಊಟ ಮಾಡಿಲ್ಲ. ಬೆಳಿಯೋ ಮಕ್ಕಳು ಹಸಿದುಕೊಂಡು ಇರಬಾರದು. ತಗೋ ತಿನ್ನು” ಅಂದಳು.
ಭರತನಿಗೆ ಆಶ್ಚರ್ಯವಾಯಿತು. “ಅಲ್ಲಜ್ಜಿ, ಮದ್ಯಾಹ್ನ ನಾನು ಊಟ ಮಾಡಿಲ್ಲ ಅಂತ ನಿಂಗೆ ಹೆಂಗೆ ಗೊತ್ತು?” ಕೇಳಿದ.
“ನಿಲ್ದಾಣದಲ್ಲಿ ನೀನು ನಿನ್ನ ಗೆಳೆಯನ ಹತ್ರ ಮಾತಾಡ್ತಾ ಇದ್ದಿದ್ನ ನಾನು ಕೇಳಿಸ್ಕೊಂಡೆ. ಹಣ್ಣು ಕೊಡವಾ ಅಂತ ಬರೋವಷ್ಟರಲ್ಲಿ ನೀ ರೈಲು ಹತ್ತಿಬಿಟ್ಟೆ. ಈಗ ಸಿಕ್ಕಿದೀಯ ತಗೋ..”
ಭರತ ಹಣ್ಣು ತೆಗೆದುಕೊಳ್ಳಲಿಲ್ಲ. ಮಹಾನ್ ಸ್ವಾಭಿಮಾನಿಯಾಗಿದ್ದ ಅವನಿಗೆ ಉಚಿತವಾಗಿ ಹಣ್ಣು ತಿಂದು ಹೊಟ್ಟೆ ತುಂಬಿಸಿಕೊಳ್ಳಲು ಸ್ವಲ್ಪವೂ ಇಷ್ಟವಾಗಲಿಲ್ಲ. ಅದಕ್ಕೂ ಮಿಗಿಲಾಗಿ ಅಜ್ಜಿಯ ಈ ಕಷ್ಟದ ಪರಿಸ್ಥಿತಿಯಲ್ಲಿ ಆಕೆಯಿಂದ ಹಣ್ನು ಪಡೆಯುವುದು ಸರಿಯಲ್ಲ ಎಂಬುದು ಆತನ ನಿಲುವಾಗಿತ್ತು. ಬೇಡಜ್ಜಿ ಎಂದು ನಯವಾಗಿಯೇ ತಿರಸ್ಕರಿಸಿದ.
ಅಜ್ಜಿ ಬಲವಂತವಾಗಿ ಹಣ್ಣನ್ನು ಭರತನ ಕೈಗೆ ಇಟ್ಟಳು.
ಹಣ್ಣನ್ನು ವಾಪಾಸ್ಸು ಬುಟ್ಟಿಯೊಳಕ್ಕೆ ಹಾಕಿದ ಭರತ, “ಅಜ್ಜಿ. ಸುಮ್ನೆ ಇಟ್ಕೊತೀಯೋ ಇಲ್ವೋ?” ಅಂತ ಸ್ವಲ್ಪ ಗಟ್ಟಿಯಾಗಿಯೇ ಗದರಿದ.
ಭರತ ರೇಗಿದ್ದಕ್ಕೆ ಹೆದರಿದ ಅಜ್ಜಿ ಸುಮ್ಮನಾದಳು. ರೈಲು ವೇಗವಾಗಿ ಚಲಿಸುತ್ತಿತ್ತು. ಈಗ ಭರತನ ಮನಸ್ಸು ಚಿತ್ರದುರ್ಗದಲ್ಲಿ ನಡೆಯಲಿದ್ದ ಕಬಡ್ಡಿ ಪಂದ್ಯಾವಳಿಯ ಕಡೆ ಚಿಂತಿಸುತ್ತಿತ್ತು. ಹೋಗಿ ಬರಲು ಒಟ್ಟು ಖರ್ಚು 340 ರೂಗಳಾಗುತ್ತಂತೆ. ನನ್ ಹತ್ರ ಅಷ್ಟು ಹಣ ಇಲ್ಲ. ಏನು ಮಾಡೋದು? ಪೇಪರ್ ಮತ್ತೆ ಹಾಲು ಮಾರಿದ ದುಡ್ಡು ಬರೋದು ಇನ್ನು 2 ವಾರ ಆಗುತ್ತೆ. ಹೂಂ.. ಯಾರತ್ರನಾದ್ರೂ ಮುಂಚಿತವಾಗಿಯೇ ದುಡ್ಡು ಕೇಳಿ ಹೊಂದಿಸಕೊಳ್ಳಬೇಕು ಎಂದು ಲೆಕ್ಕಚಾರ ಹಾಕಿಕೊಂಡ.
ಅಷ್ಟರಲ್ಲಿ ಅಜ್ಜಿಯ ಊರು ಬಂದಿತು. ಅಜ್ಜಿ ಇಳಿಯುವಾಗ “ನಮ್ಮೂರು ಸಿಕ್ತು. ಹೋಗಿ ಬರ್ತೀನಿ ಮಗಾ” ಎಂದಳು.
“ಸರಿ ಹೋಗಿ ಬಾ ಅಜ್ಜಿ.” ಎಂದ.
ಅಜ್ಜಿ ಕಿತ್ತಳೆ ಹಣ್ಣಿನ ಬುಟ್ಟಿ ಹೊತ್ತುಕೊಂಡು ಕೆಳಗಿಳಿದಳು. ಅಜ್ಜಿ ಇಳಿಯುವುದನ್ನೇ ನೋಡುತ್ತಾ, ಮನಸ್ಸಲ್ಲಿ ಏನನ್ನೋ ಯೋಚಿಸುತ್ತಿದ್ದ ಭರತನ ದೃಷ್ಟಿ ಅಜ್ಜಿ ಕುಳಿತಿದ್ದ ಸೀಟಿನ ಕಡೆ ಹರಿಯಿತು. ಅರರೆ! ಸೀಟಿನ ಕೆಳಗೆ ಕೆಲವು ನೋಟುಗಳು ಬಿದ್ದಿವೆ. ಭರತ ತಟಕ್ಕನೆ ನೋಟುಗಳನ್ನು ಆರಿಸಿಕೊಂಡ. ಒಂದು.. ಎರಡು.. ಮೂರು.. ನಾಲ್ಕು….. ಒಟ್ಟು ಏಳು ನೋಟುಗಳು. 100 ರ ಮೂರು ನೋಟುಗಳು ಮತ್ತು 10 ರ ನಾಲ್ಕು ನೋಟುಗಳು. ಒಟ್ಟು ಸರಿಯಾಗಿ 340 ರೂಗಳು! ಅನುಮಾನವಿಲ್ಲ. ಅಜ್ಜಿಯದೇ ದುಡ್ಡು. ಭರತ ನಿರ್ಧರಿಸಿದ. ಭರತ ಆತುರಾತುರವಾಗಿ ಬಾಗಿಲ ಬಳಿ ಓಡಿ ಬಂದ. ಅವನ ಕಣ್ಣುಗಳು ಅಜ್ಜಿಯನ್ನು ಹುಡುಕತೊಡಗಿದವು. ರೈಲು ಅದಾಗಲೇ ನಿಧಾನವಾಗಿ ಹಳಿಗಳ ಮೇಲೆ ಹರಿಯಲು ಶುರು ಮಾಡಿತ್ತು. ಓಹ್. ಅಜ್ಜಿ ಅಲ್ಲೇ ಇದ್ದಾಳೆ. ತನ್ನ ಸೀರೆಯ ಸೆರಗನ್ನು ಜೋರಾಗಿ ಒದರುತ್ತಿದ್ದಾಳೆ. ಹಿಂದೆ ಮುಂದೆ ಹುಡುಕುತ್ತಿದ್ದಾಳೆ. ಬುಟ್ಟಿಗಳಲ್ಲಿನ ಹಣ್ಣುಗಳನ್ನು ಎತ್ತಿ ತಡಕಾಡುತ್ತಿದ್ದಾಳೆ. ಆತಂಕದಿಂದ ಅಳುತ್ತಿದ್ದಾಳೆ. ಸುಡುವ ಬಿಸಿಲಿನಲ್ಲಿ ವಾರಪೂರ್ತಿ ಕಿತ್ತಳೆ ಮಾರಿ ಪೈಸೆ ಪೈಸೆಯನ್ನೂ ಕೂಡಿಟ್ಟು ಸಂಪಾದಿಸಿದ ಬೆವರಿನ ದುಡ್ಡು ಅದು. ಸಿಗದಿದ್ದರೆ ಅಜ್ಜಿ, ಮತ್ತವಳ ಗಂಡ ವಾರವಿಡೀ ಉಪವಾಸ.
ಭರತ ಕೂಗಿದ. “ಅಜ್ಜೀ…… ನಿನ್ನ ದುಡ್ಡು ಇಲ್ಲಿದೆ ಅಜ್ಜೀ…..” ಅಜ್ಜಿ ಸಂತೋಷದಿಂದ ಭರತನ ಕಡೆಗೆ ಓಡಿದಳು. ಭರತ ರೈಲಿನಿಂದ ಇಳಿಯಲು ಪ್ರಯತ್ನಿಸಿದನಾದರೂ ರೈಲು ವೇಗವಾಗಿ ಚಲಿಸಲಾರಂಭಿಸಿದ್ದರಿಂದ ಆಗಲಿಲ್ಲ. ಇಳಿದರೆ ಕೈ ಕಾಲು ಮುರಿದುಕೊಳ್ಳುವುದು ಖಚಿತ. ನೋಟುಗಳನ್ನು ಎಸೆದರೆ ಗಾಳಿಗೆ ಸಿಕ್ಕಿ ಚೆಲ್ಲಾಪಿಲ್ಲಿಯಾಗುತ್ತದೆ. ಅಜ್ಜಿಗೆ ಖಂಡಿತಾ ಸಿಗುವುದಿಲ್ಲ. ಏನು ಮಾಡುವುದು? ರೈಲು ಕ್ಷಣ ಕ್ಷಣಕ್ಕೂ ವೇಗವನ್ನು ಹೆಚ್ಚಿಸಿಕೊಳ್ಳತೊಡಗಿತ್ತು. ಭರತ ಉಪಾಯ ಮಾಡಿದ. ನೋಟುಗಳನ್ನು ನಯವಾಗಿ ಮುದುರಿ ಚೆಂಡಿನಂತೆ ಉಂಡೆ ಮಾಡಿದ. ಜೋರಾಗಿ ಅಜ್ಜಿಯ ಕಡೆಗೆ ಎಸೆದ.
ಉಹೂಂ. ಭರತನ ಗುರಿ ತಪ್ಪಲಿಲ್ಲ. ನೋಟುಗಳ ಉಂಡೆ ಸರಿಯಾಗಿ ಅಜ್ಜಿಯ ಹತ್ತಿರವೇ ಬಿದ್ದಿತ್ತು. ಅಜ್ಜಿ ಆನಂದದಿಂದ ಹಣವನ್ನು ಎತ್ತಿಕೊಂಡಳು. ಅವಳ ಕಣ್ಣಲ್ಲಿ ನೀರು ಸುರಿಯುತ್ತಿತ್ತು. ಇತ್ತ ಭರತನ ಮುಖದಲ್ಲಿ ಹಣವನ್ನು ಕ್ಷೇಮವಾಗಿ ಅಜ್ಜಿಗೆ ತಲುಪಿಸಿದ ಸಂತೃಪ್ತಿ ಎದ್ದು ಕಾಣುತ್ತಿತ್ತು. ಅಜ್ಜಿ ತನ್ನೆರಡೂ ಕೈಗಳನ್ನು ಎತ್ತಿ “ನೂರು ಕಾಲ ಚೆನ್ನಾಗಿ ಬಾಳು ಕಂದಾ” ಎಂದು ಹರಸುತ್ತಿದ್ದಳು. ರೈಲು ಚಲಿಸುತ್ತಿದ್ದ ಹಾಗೆ ಅಜ್ಜಿಯ ಆಕೃತಿ ಚಿಕ್ಕದಾಗುತ್ತಾ ಹೋಯಿತು. ಸುಮಾರು ಹೊತ್ತು ಅಜ್ಜಿಯನ್ನೇ ನೋಡುತ್ತಿದ್ದ ಭರತ, ದೃಷ್ಟಿಯನ್ನು ಕದಲಿಸಿ ತನ್ನ ಸೀಟಿಗೆ ಬಂದು ಕುಳಿತ. ಸ್ವಲ್ಪ ಹೊತ್ತಿನ ನಂತರ ಏನೋ ತೆಗೆದುಕೊಳ್ಳಲೆಂದು ತನ್ನ ಚೀಲಕ್ಕೆ ಕೈಹಾಕಿದ ಭರತನಿಗೆ ಆಶ್ಚರ್ಯ ಕಾದಿತ್ತು. ಚೀಲದೊಳಗೆ ನಾಲ್ಕೈದು ರಸವತ್ತಾದ ಕಿತ್ತಳೆ ಹಣ್ಣುಗಳು ಬೆಚ್ಚಗೆ ಕುಳಿತಿದ್ದವು. ಅಜ್ಜಿಯ ನಿಸ್ವಾರ್ಥ ಪ್ರೀತಿಯನ್ನು ಕಂಡು ಅವನ ಹೃದಯ ತುಂಬಿ ಬಂದಿತು. ಭರತ ಅದರಲ್ಲಿ ಒಂದು ಹಣ್ಣನ್ನು ತೆಗೆದು ಸಿಪ್ಪೆ ಬಿಡಿಸಿ ತೊಳೆಯನ್ನು ಬಾಯಿಗಿಟ್ಟ.
ಕಿತ್ತಳೆ ಹಣ್ಣಿನ ಸಿಹಿಯಾದ ರಸ ಬಾಯಿ ತೋಯಿಸಿತ್ತು. ಭರತನ ಕಣ್ಣಲ್ಲಿ ಆನಂದ ಭಾಷ್ಪ ಜಿನುಗಿತ್ತು….
ಕಥೆ ಹುಟ್ಟಿದ ಸಮಯ
ಭರತ ನನ್ನ ಗೆಳೆಯ. ಮೂರ್ನಾಲ್ಕು ವರ್ಷ ಚಿಕ್ಕವನಾದ್ದರಿಂದ ಅಣ್ಣಾ.. ಅಣ್ಣಾ.. ಎನ್ನುತ್ತಾ ಸದಾ ಕಾಲ ಜೊತೆಗಿರುತ್ತಾನೆ. ತನ್ನ ಜೀವನದಲ್ಲಿ ಆಗುವ ಹೊಸ ಹೊಸ ಅನುಭವಗಳ ಬಗ್ಗೆ ನನ್ನ ಹತ್ತಿರ ಚರ್ಚೆ ಮಾಡುತ್ತಾ ಅದರ ಬಗ್ಗೆ ಆಳವಾಗಿ ಯೋಚನೆ ಮಾಡುತ್ತಾ, ಗಾಢವಾಗಿ ವಿಮರ್ಶೆ ಮಾಡುತ್ತಾ ಹಲವಾರು ಪ್ರಶ್ನೆಗಳನ್ನು ಕೇಳುತ್ತಿರುತ್ತಾನೆ. ಹೀಗೇ ಒಂದು ದಿನ ಸಿಕ್ಕಿದ ಭರತ, ರೈಲಿನಲ್ಲಿ ತನಗಾದ ಒಂದು ಅನುಭವವನ್ನು ಹೇಳಿಕೊಂಡ. ಅದನ್ನು ಕೇಳಿದ ನನಗೆ ಯಾಕೋ ಎನೋ ಅದನ್ನು ಬರೆದಿಡಬೇಕೆನಿಸಿತು. ಅದರ ಫಲವೇ ಈ “ಕಿತ್ತಳೆ ಹಣ್ಣಿನ ಋಣ!?” ಕಥೆಯ ಅರ್ಧ ಭಾಗ ಅವನ ಸ್ವಂತ ಅನುಭವ. ಇನ್ನರ್ಧ ನನ್ನ ಕಲ್ಪನೆ. ಮಾತುಕತೆ ಮುಗಿದ ನಂತರ ಭರತ ಹೊರಡುವಾಗ, ಅಣ್ಣಾ ನಾನು ಒಳ್ಳೆಯ ಕೆಲಸ ಮಾಡಿದೆ ಅಲ್ವಾ..? ದೇವರು ಮೆಚ್ಚುವ ಕೆಲಸ ಅಲ್ವಾ…? ಅಂತ ಅಭಿಮಾನದಿಂದ ಹೇಳಿಕೊಂಡಾಗ, ನನಗೆ ಹೃದಯ ತುಂಬಿ ಬಂದಿತ್ತು. ಅಭಿಮಾನದಿಂದ ಅವನ ಬೆನ್ನು ನೇವರಿಸಿದೆ. “ಭರತ ಇವತ್ತಿಗೂ ಕೂಡಾ ಮಳೆ ಬೆಳೆ ಆಗ್ತಾ ಇದೆ ಅಲ್ವಾ?” ಅಂತ ಕೇಳಿದೆ. ಅವನ ಪ್ರಶ್ನೆಗೆ ಉತ್ತರ ಸಿಕ್ಕಿತ್ತು! ಹಸನ್ಮುಖಿಯಾಗಿ ಮನೆ ಕಡೆ ಹೊರಟ.
ಚಿತ್ರ ಕೃಪೆ : http://www.martinbaileyphotography.com





ನಿಮ್ಮ ಲೇಖನಗಳು ಬಹಳ ಚೆನ್ನಾಗಿ ಮೂಡಿಬರುತ್ತಿವೆ.ಹೀಗೆ ಬರೆಯುತ್ತಿರಿ
nice story