ಭಾನುಮತಿಯ ಸ್ವಗತ
– ಅನಿತ ನರೇಶ್ ಮಂಚಿ
ಸೌಂದರ್ಯ ಎಂದರೆ ಏನು 
ನೀನೇ ನೀನು ..
ಎಣೆಯಾರು ನಿನಗೆ ಎಂದಿದ್ದವ
ದ್ರೌಪದಿಗೆ ಸ್ವಯಂವರ
ಎಂಬ ವಾರ್ತೆಗೆ
ಬಾಸಿಂಗ ಕಟ್ಟಿದ್ದ ಕೌರವ
ಭುಜಬಲದ ಗದೆಯಲ್ಲ
ಎತ್ತಬೇಕಿದೆ ಬಿಲ್ಲು
ಹೂಡಬೇಕಿದೆ ಬಾಣ
ನೀರೊಳಗೆ ನಿಜವಲ್ಲದ
ಪ್ರತಿಬಿಂಬ ಗುರಿ
ತಿರುಗುವ ಮೀನ ಕಣ್ಣ
ಸೋತನಂತೆ ಆವ
ಗೆದ್ದೆ ಎಂದುಕೊಂಡಿದ್ದೆ ನಾನು
ಒಳಗೆಲ್ಲ ಅವಮಾನದ ಗಾಳಿ
ಅವಳಿಗಾದರೋ
ಹೊರಲಾರದ ಭಾರ
ಕೊರಳೊಳಗೆ ಐವರ ತಾಳಿ
ತುಂಬಿದ ಸಭೆಯೊಳಗೆ
ಸೀರೆಯನೆಳೆವ ಹಠ
ಕಣ್ಣಿಗೆ ಅಸೂಯೆಯ ಬಟ್ಟೆ
ಬಿಚ್ಚಿದಂತೆ ಮುಚ್ಚಿತ್ತು
ಅವಳ ಮೈ ಮನಸ್ಸು
ನಾ ಬೆತ್ತಲಾಗಿದ್ದೆನಷ್ಟೆ
ಯುದ್ಧದಲಿ ಸತ್ತವರು
ಯಾರ ಬಂಧುಗಳು ಅಲ್ಲ
ಇರಲಿಲ್ಲ ಅವರಿಗೆ ಬಂಧನದ ಚಿಂತೆ
ನನ್ನದೋ ಒಳಗೊಳಗೇ
ಉರಿವ ದೇಹ
ಹಾರಬೇಕೇಕೆ ಮತ್ತೊಮ್ಮೆ ಚಿತೆ
ನಾನೇನು ಅವಳೇನು
ಒಂದೇ ದೋಣಿಯ ಪಯಣಿಗರು
ಕಣ್ಣೊಳಗೆ ಚಿನ್ನದ ಸೂಜಿ
ಚಿಗುರಿದಂತೆಲ್ಲ ಬಾಡಿದ್ದೆ
ಬಿದ್ದಿದ್ದೆ ಬೇಡಿದ್ದೆ
ಕಟ್ಟಬೇಡಿ ಜೀವನದ ಬಾಜಿ




