ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 6, 2013

14

ಇನ್ನೂ ಬೇಕೆ ಇಂಥ ರಾಜಕೀಯ ಮೀಸಲಾತಿ?

‍ನಿಲುಮೆ ಮೂಲಕ

-ಸಾತ್ವಿಕ್ ಎನ್.ವಿ.

ಒಂದು ವಿಷಯವಂತೂ ಸಂಸತ್ತಿನಲ್ಲಿ ಒಂದು ಸಣ್ಣ ಚರ್ಚೆಯೂ ಇಲ್ಲದೇ ಸರ್ವಾನುಮತದಿಂದ ಅನುಮೋದನೆ ಪಡೆಯುತ್ತದೆ. ಸಂಸದರು ಇದಕ್ಕೆ ವಿರೋಧ ಇಲ್ಲವೆ ಅನುಮಾನ ವ್ಯಕ್ತಪಡಿಸುವುದು ಪ್ರತಿಗಾಮಿತನ ಎಂದೇ ಭಾವಿಸುತ್ತಾರೆ. ಪಕ್ಷಬೇಧ ಮರೆತು ಬೆಂಬಲಿಸುತ್ತಾರೆ. ಅದುವೇ ಚುನಾವಣೆಯಲ್ಲಿ ನೀಡಲಾಗಿರುವ ರಾಜಕೀಯ ಮೀಸಲಾತಿಯ ನವೀಕರಣ. ಇದು ಪ್ರತಿ ಹತ್ತು ವರ್ಷಕ್ಕೊಮ್ಮೆ ನವೀಕರಣಕ್ಕೆ ಬರುತ್ತದೆ. ಆಗ ಸಂಸತ್ತು ಈ ಪದ್ಧತಿಯನ್ನು ನಿರಾಕರಿಸಬಹುದು ಇಲ್ಲವೇ ಮುಂದಿನ ಹತ್ತು ವರ್ಷಕ್ಕೆ ನವೀಕರಿಸಬಹುದು. ಆದರೆ ಸಂಸತ್ತು ಯಾವುದೇ ಚರ್ಚೆಯಿಲ್ಲದೇ ನವಿಕರಿಸುತ್ತಲೇ ಬಂದಿದೆ. ಸರ್ಕಾರ ಯಾ ರಾಜಕೀಯಪಕ್ಷಗಳಿಗೆ ದಲಿತ/ಹಿಂದುಳಿದ ವರ್ಗಗಳ ಬಗ್ಗೆ ಇಷ್ಟೊಂದು ಪ್ರೀತಿ ಎಲ್ಲಿಂದ ಉಕ್ಕಿತೆಂದು ಆಶ್ಚರ್ಯವಾಗಬಹುದು. ಆದರೆ ಇದರ ಹಿಂದಿನ ತಂತ್ರ ಬೇರೆಯದೇ ಇದೆ.

ಯಾಕೆಂದರೆ ಸಂವಿಧಾನದಲ್ಲಿ ದಲಿತ ಜನವರ್ಗದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ನೀಡಲಾದ ಈ ಮೀಸಲಾತಿಯು ರಾಜಕೀಯ ಪಕ್ಷಗಳ ಕೈಯಲ್ಲಿ ಸಿಕ್ಕಿ ತನ್ನ ಮೂಲ ಉದ್ದೇಶವನ್ನು ಎಂದೋ ಮರೆತಿದೆ. ಮೀಸಲು ಕ್ಷೇತ್ರದಲ್ಲಿ ಎಲ್ಲ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸುತ್ತವೆ. ಗೆದ್ದ ಸ್ಪರ್ಧಿಯು ತನ್ನ ಸಮುದಾಯದ ಪ್ರತಿನಿಧಿಯಾಗಿರುತ್ತಾನೆ. ತನ್ನ ಸಮುದಾಯದ ಅಭಿವೃದ್ಧಿಯ ಸಲುವಾಗಿ ಸದನದಲ್ಲಿ ಧ್ವನಿ ಎತ್ತುವುದು ಆತನ ಕರ್ತವ್ಯವಾಗಿರುತ್ತದೆ. ಆದರೆ ಪಕ್ಷವೊಂದರ ಹಂಗಿನಲ್ಲಿರುವ ವ್ಯಕ್ತಿಯಿಂದ ಇಂಥ ದೃಢ ಮತ್ತು ನಿಷ್ಠುರ ಕೆಲಸಗಳನ್ನು ನಿರೀಕ್ಷಿಸಲು ಸಾಧ್ಯವೇ? ಆತ ದಲಿತವರ್ಗದಿಂದ ಬಂದಿದ್ದರೂ ತನ್ನ ಪಕ್ಷಕ್ಕಾಗಿಯೇ ತಯಾರಾದವನು. ಆತ ತನ್ನ ಪಕ್ಷದ ಸಿದ್ಧಾಂತದಿಂದ ಎಷ್ಟು ಹೊರಗೆ ನಿಂತು ಕೆಲಸ ಮಾಡಲು ರಾಜಕೀಯ ಪಕ್ಷಗಳು ಅವಕಾಶ ನೀಡುತ್ತಿವೆ? ಹೆಚ್ಚಿನ ಸಂದರ್ಭದಲ್ಲಿ ಆಯ್ಕೆಯಾದ ವ್ಯಕ್ತಿಯು ಪಕ್ಷವೊಂದರಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿಸುವ ಇಲ್ಲವೇ ಹೌದಪ್ಪನಾಗಿ ಬಳಕೆಯಾಗುವ ಸಂದರ್ಭವೇ ಹೆಚ್ಚು. ಇಂಥ ಸಂದರ್ಭದಲ್ಲಿ ದಲಿತ ಸದಸ್ಯನೊಬ್ಬನಿಗೆ ಇತರೆ ವರ್ಗದ ರಾಜಕೀಯ ನೇತಾರನಿಗಿಂತ ಹೆಚ್ಚಿನ ಜವಾಬ್ದಾರಿ ಮತ್ತು ಹೊಣೆಗಾರಿಕೆ ಇರಬೇಕಾಗುತ್ತದೆ.

ಮೀಸಲು ಕ್ಷೇತ್ರ ಎನ್ನುವಾಗ ಇನ್ನೊಂದು ಸಮಸ್ಯೆ ಇದಿರಾಗುತ್ತದೆ. ಅಲ್ಲದೇ ಮೀಸಲು ಕ್ಷೇತ್ರದಿಂದ ಚುನಾವಣೆಗೆ ನಿಲ್ಲುವ ವ್ಯಕ್ತಿಯು ತನ್ನ ಗೆಲುವಿಗಾಗಿ ಎಲ್ಲ ಸಮುದಾಯಗಳ ಮತಗಳನ್ನು ನಿರೀಕ್ಷಿಸಬೇಕಾಗುತ್ತದೆ. ಕೆಲವು ಕ್ಷೇತ್ರಗಳಲ್ಲಿ ದಲಿತವರ್ಗದ ಜನತೆಯೇ ಕಡಿಮೆ ಇರಬಹುದು. ಆಗ ಅಲ್ಲಿ ಬಲಿಷ್ಠ ವರ್ಗವೊಂದು ತನ್ನ ಇಷ್ಟಾರ್ಥವನ್ನು ಈಡೇರಿಸುವ ದಲಿತ ವ್ಯಕ್ತಿಯನ್ನು ಚುನಾವಣೆಗೆ ಇಳಿಸಿ, ಗೆಲ್ಲಿಸಿ ಈ ಶಾಸನದ ಮೂಲ ಉದ್ದೇಶವನ್ನೇ ತಿರುಚಿಬಿಡಬಹುದು. ಹೀಗೆ ಗೆದ್ದ ವ್ಯಕ್ತಿಯು ಬಲಿಷ್ಟ ವರ್ಗವೊಂದರ ವಿರುದ್ಧ ಮಾತಾಡಲು ಮತ್ತು ತನ್ನ ಸಮುದಾಯಕ್ಕೆ ನ್ಯಾಯ ಒದಗಿಸಲು ಸಾಧ್ಯವೇ?

ಇದನ್ನು ಅರಿತೇ ಡಾ.ಅಂಬೇಡ್ಕರರು ವಿಶೇಷ ಮತದಾನ ಪದ್ಧತಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಿದ್ದರು. ಅದರ ಪ್ರಕಾರ ಚುನಾವಣಾ ಕ್ಷೇತ್ರವೊಂದರಲ್ಲಿ ಎರಡು ಸ್ಥಾನಗಳಿರುತ್ತವೆ. (ಈಗಿರುವ ಮೀಸಲು ಕ್ಷೇತ್ರಗಳಿಗಿಂತ ಸುಮಾರು ಅರ್ಧಕ್ಕೂ ಕಡಿಮೆ ಕ್ಷೇತ್ರಗಳನ್ನು ನೀಡಿದರೆ ಸಾಕು ಎಂಬ ಬೇಡಿಕೆ ಇಟ್ಟಿದ್ದರು ಎಂಬುದು ವಿಶೇಷ) ಒಂದು ದಲಿತ ಸಮುದಾಯದ ಸ್ಪರ್ಧಿಗಳಿಗಾಗಿ ಇದ್ದರೆ ಇನ್ನೊಂದು ಸಾಮಾನ್ಯ ಅಭ್ಯರ್ಥಿಗಳಿಗಾಗಿ. ಅಲ್ಲಿ ಮೀಸಲು ಸ್ಥಾನಕ್ಕೆ ಮತದಾನ ಮಾಡುವ ಅವಕಾಶ ದಲಿತರಿಗೆ ಮಾತ್ರ ಇರುತ್ತದೆ. ಸಾಮಾನ್ಯ ಸ್ಥಾನದ ಅಭ್ಯರ್ಥಿಗೆ ದಲಿತರೂ ಸೇರಿದಂತೆ ಆ ಕ್ಷೇತ್ರದ ಮತದಾರರೆಲ್ಲರೂ ಮತದಾನ ಮಾಡಬಹುದು. ದಲಿತ ಅಭ್ಯರ್ಥಿಯು ದಲಿತರಿಂದಲೇ ಆಯ್ಕೆಯಾಗುವುದರಿಂದ ಆತ ತನ್ನ ಸಮುದಾಯದ ಧ್ವನಿಯಾಗಲು ಮತ್ತು ದುಡಿಯಲು ಯಾರ ತೊಡಕು ಇರುವುದಿಲ್ಲ. ಆಗ ದಲಿತರ ನಿಜವಾದ ಪ್ರಾತಿನಿಧ್ಯ ಸಾಧ್ಯವಾಗುವುದು. ರಾಜಕೀಯ ಪಕ್ಷಗಳ ಕೈಗೊಂಬೆಗಳಾಗಿ ದಲಿತ ನೇತಾರರು ಜೋತಾಡಬೇಕಾಗಿಲ್ಲ ಎಂಬುದು ಅವರ ಆಶಯವಾಗಿತ್ತು. ಪ್ರಸ್ತುತವಿರುವ ರಾಜಕೀಯ ಮೀಸಲನ್ನು ವ್ಯವಸ್ಥೆಯನ್ನು ವಿರೋಧಿಸಿದ್ದರು. ದಲಿತರ ಹಕ್ಕುಗಳನ್ನು ಅದು ಪೂರೈಸದೆಂದು ತಿಳಿದಿದ್ದರು. ಆದರೆ ಅಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಅಂಬೇಡ್ಕರರ ವಿಚಾರವು ಯಶಸ್ವಿಯಾಗಲಿಲ್ಲ. ಅದರ ಮುಂದುವರಿಕೆಯಾಗಿಯೇ ಇಂದಿನ ರಾಜಕೀಯ ಮೀಸಲು ಮುಂದುವರೆಯುತ್ತಿದೆ.

************

chitrakrupe: navneetsinghchauhan.blogspot.com

14 ಟಿಪ್ಪಣಿಗಳು Post a comment
  1. tumkur sprasd's avatar
    tumkur sprasd
    ಜುಲೈ 18 2011

    ರಾಜಕೀಯ ಮೀಸಲಾತಿ ಎ೦ದರೆ ,ಕೇವಲ ಚುನಾವಣೆ ಮೀಸಲಾತಿಯಲ್ಲ .ಚುನಾವಣೆ ಮೀಸಲಾತಿ ಮೂಲಕ ಆರ್ಥಿಕ ,ಸಾಮಾಜಿಕಮ ಅಸಮಾನತೆಯನ್ನ ,ಹೊಗಲಾದಿಸುವುದು .ಇ೦ದಿನ ಹೊಲಸು ರಾಜಹೀಯವನ್ನ ವೈಭವೀಕರಿಸುತ್ತ ,ಮೀಸಲಾತಿಯ ಮೂಲ ಉದ್ದೇಶವನ್ನಮರೆ ಮಾಚುವ ತಪ್ಪು ನಡೆಯಭಾರದು .

    ಉತ್ತರ
  2. Dunkin Jalki's avatar
    ಏಪ್ರಿಲ್ 7 2013

    ರಾಜಕಾರಣಿಗಳಾದರೂ ತಮ್ಮ ಲಾಭದ ಕುರಿತು ಯೋಚಿಸುತ್ತಾರೆ ಮತ್ತು ಆರ್ಥಿಕ ಹಾಗು ಇತರೆ ಅಭಿವೃದ್ದಿಯ ಕುರಿತು ಅವರಿಗೆ ತಿಳುವಳಿಕೆ ಇರುವುದಿಲ್ಲ ಆದ್ದರಿಂದ ಮೀಸಲಾತಿಯನ್ನು ಉಳಿಸಿಕೊಳ್ಳುತ್ತಾರೆ ಎನ್ನ ಬಹುದು. ಆದರೆ ನಮ್ಮ ಆರ್ಥಿಕ ತಜ್ಞರು, ನೊಬೆಲ್ ಪ್ರಶಸ್ತಿ ಪಡೆದವರೂ ಕೂಡ ಮೀಸಲಾತಿಯಿಂದ ಆಗುವ ತೊಂದರೆಗಳ ಕುರಿತು ಏಕೆ ಯೋಚಿಸುವುದಿಲ್ಲ. ಅವರಿಗೆ ಕವಿದಿರುವ ಕುರುಡನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?

    ಉತ್ತರ
  3. Shankar NS's avatar
    Shankar NS
    ಏಪ್ರಿಲ್ 8 2013

    ಮೀಸಲಾತಿಯ ಸೌಲಭ್ಯಗಳು ಆರ್ಥಿಕವಾಗಿ ಒಂದು ಹಂತದ ವರೆಗೆ ದಲಿತರಿಗೆ ವರವಾಗಿದ್ದವು. ಆದರೆ ಇಂದು ಮೀಸಲಾತಿಯಿಂದ ಬೆರಳೆಣಿಕೆಯಷ್ಟು ಸಾಮಾನ್ಯ ದಲಿತರಿಗೆ ಸಹಾಯಕವಾಗುತ್ತಿದೆ ಹಾಗೂ ಇದೇ ಮೀಸಲಾತಿಯ ಬಹುತೇಕ ಸೌಲಭ್ಯಗಳನ್ನು ಪಡೆಯುತ್ತಿರುವವರು ಎರಡು ಮತ್ತು ಮೂರನೆಯ ತಲೆಮಾರಿನ ಸದೃಢ ಶಿಕ್ಷಿತ ದಲಿತರು ಮತ್ತು ಅವರ ಮಕ್ಕಳು. ಹಾಗಾಗಿ ಹೆಚ್ಚು ಮೀಸಲಾತಿಯ ಸೌಲಭ್ಯಗಳನ್ನು ಪಡೆಯುವ ಸದೃಢ ಮತ್ತು ಶಿಕ್ಷಿತ ದಲಿತರ ಬಗ್ಗೆ ದಲಿತರ ಮಕ್ಕಳ ಬಗ್ಗೆ ಕಾಳಜಿಯುಳ್ಳ ಪ್ರಗತಿಪರರ ಮೌನವು ನನ್ನಂಥಹ ಸಾಮಾನ್ಯ ದಲಿತನಿಗೆ ಆಶ್ಚರ್ಯವನ್ನು ಉಂಟುಮಾಡಿದೆ. ಹಾಗೂ ಪ್ರೊ. ಕೆ. ಜಿ. ನಾಗರಾಜಪ್ಪ ಅವರು ಮೀಸಲಾತಿಯ ಸೌಲಭ್ಯಗಳಿಂದ ದಲಿತರ ಮುಕ್ತಿ ಸಾಧ್ಯವಿಲ್ಲ ಎಂದು ಹೇಳುತ್ತಾರೆ (ಉದ್ಧೃತ: ಮಾಲಗತ್ತಿ, ಅರವಿಂದ, 2002. ‘ದಲಿತ ಮಾರ್ಗ’: ಪುಟ 162). ಹಾಗಾಗಿ ಸಾಮಾನ್ಯ ದಲಿತರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮೀಸಲಾತಿಯ ಬಗ್ಗೆ ಚರ್ಚೆ ನಡೆಯುವುದು ಉತ್ತಮ ಎನಿಸುತ್ತದೆಯೇ. ಏಕೆಂದರೆ ದಲಿತ ರಾಜಕಾರಣಿಗಳು ಹಾಗೂ ಸದೃಢ ದಲಿತರನ್ನು ಇಟ್ಟುಕೊಂಡು ಮೀಸಲಾತಿಯ ಪ್ರಸ್ತುತೆಯ ಬಗ್ಗೆ ಚರ್ಚೆ ಮಾಡುವುದರಿಂದ ದಲಿತ ವಿರೋಧಿಗಳ ಕೆಂಗಣಿಗೆ ಚರ್ಚೆ ಬಲಿಯಾಗುತ್ತದೆ ಹೊರತು ಮೀಸಲಾತಿಯ ಕುರಿತ ಆರೋಗ್ಯಕರವಾದ ಮತ್ತು ಸಾಮಾನ್ಯ ದಲಿತರ ನಿಜಜೀವನದ ಕುರಿತ ಚರ್ಚೆಯಾಗುವುದಿಲ್ಲ.

    ಉತ್ತರ
  4. ಬಸವಯ್ಯ's avatar
    ಬಸವಯ್ಯ
    ಏಪ್ರಿಲ್ 8 2013

    ಮೇಲೆ ಶಂಕರ ಎನ್.ಎಸ್ ಅವರು ‘ಬಲಿತ ದಲಿತ’ರ ಬಗ್ಗೆ ಉಲ್ಲೇಖಿಸಿದ್ದಾರೆ. ಇವತ್ತು ಆಗುತ್ತಿರುವುದೇ ಇದು. ಒಬ್ಬ ದಲಿತ ‘ಬಲಿತ ದಲಿತ’ನಾದ ಮೇಲೆ ಇಳಿಯುವುದೇ ತನ್ನ ಕುಟುಂಬದ ಸಾಮ್ರಾಜ್ಯ ಸ್ಥಾಪನಾ ಕಾರ್ಯಕ್ಕೆ. ಮುನಿಯಪ್ಪಂಗೆ ತಮ್ಮ ಮಗಳಿಗೆ, ಖರ್ಗೆ ಸಾಹೇಬರಿಗೆ ತಮ್ಮ ಮಗನಿಗೆ ಟಿಕೇಟ್ ಕೊಡಿಸೊ, ಸಾಮ್ರಾಜ್ಯ ವಿಸ್ತರಿಸೊ ಆಸೆ. ಎಲ್ಲ ರಾಜಕೀಯ ಪಕ್ಷಗಳಲ್ಲೂ ಇಂತಹ ತಗಡುಗಳೆ ತುಂಬಿರೋದು. ನಮ್ಮ ದಲಿತ ಚಿಂತಕರಿಗೆ ಇಂತವರ ವಿರುದ್ಧ ಚಳವಳಿ ಮಾಡಿ, ತುಳಿತಕ್ಕೊಳಗಾದವರಿಗೆ ನ್ಯಾಯ ದೊರಕಿಸುದಕ್ಕಿಂತ, ಪೇಜಾವರ ಸ್ವಾಮಿಗಳ ಪೀಠದಲ್ಲಿ ತಮ್ಮವನೊಬ್ಬನನ್ನು ಕುಳ್ಳರಿಸಿ ನೋಡುವ ಎಂದೂ ತೀರದ, ದೂರದ ಆಸೆ!

    ಉತ್ತರ
    • ರವಿ's avatar
      ಏಪ್ರಿಲ್ 9 2013

      +1

      ಎಲ್ಲ ಸಾಮಾಜಿಕ ಹೋರಾಟಗಳ ಕಥೆಯೂ ಇದೇ. ನ್ಯಾಯದ ಬದಲು ‘roles interchange’ ಆಗುತ್ತಿದೆ ಅಷ್ಟೇ. ಅನ್ಯಾಯ ಹಳೆಯದೇ. ಅನ್ಯಾಯ ಮಾಡುವವರು ಹೊಸಬರು. ಬಲಿತ-ದಲಿತ ಬಡ-ದಲಿತನೊಡನೆ ಎಂದೂ ಬೆರೆಯುವುದಿಲ್ಲ. ಬಡ-ದಲಿತ ಮತಾಂತರಗೊಂಡರೆ ಅಲ್ಲೂ ದಲಿತನೇ. ಅಂದರೆ ‘ಜಾತಿ’ಯ ಸ್ಥಾನವನ್ನು ಕ್ರಮೇಣ ‘ಸಾಮಾಜಿಕ ಸ್ಥಾನಮಾನ’ ತುಂಬುತ್ತಿದೆ.
      ಹಾಗೇ ವರ್ಣ ಪದ್ಧತಿಯೂ.
      ಬ್ರಾಹ್ಮಣರ ಸ್ಥಾನ ಬುದ್ದಿಜೀವಿಗಳ ಪಾಲಾಗಿದೆ (ಶಾಲೆ ಕಾಲೇಜುಗಳಲ್ಲಿ ನಾವು ಏನು ಓದಬೇಕು ಏನು ಓದಬಾರದು ಎಂದು ನಿರ್ಧರಿಸುವವರು )
      ಕ್ಷತ್ರಿಯರು ನಮ್ಮ ಶಕ್ತಿಶಾಲಿ ರಾಜಕಾರಣಿಗಳು
      ವೈಶ್ಯರು ನಮ್ಮ influential business leader ಗಳು (ರಾಜಕಾರಣಿಗಳ ಜೊತೆ ಸೇರಿ ತಮಗೆ ಅನುಕೂಲವಾಗುವ ಕಾನೂನನ್ನು ರೂಪಿಸುವವರು)
      ಇವರೆಲ್ಲರಿಂದ ತುಳಿಯಲ್ಪಟ್ಟ, ಆಯ್ಕೆಯೇ ಇಲ್ಲದ ಕೊನೆಯ ವರ್ಗ ‘ಶೂದ್ರರು’.
      so, ಮೀಸಲಾತಿ ಎನ್ನುವುದು ಮೊದಲ ಮೂರು ವರ್ಗಗಳಿಗೆ ಸೇರಲು ಕೊನೆಯ ವರ್ಗದವರಿಗೆ ಇರುವ ಏಣಿ. ಕೊನೆಯ ವರ್ಗವನ್ನು ಉದ್ಧಾರ ಮಾಡುವ ಸಾಧನವಲ್ಲ..

      ಉತ್ತರ
      • Shankar NS's avatar
        Shankar NS
        ಏಪ್ರಿಲ್ 10 2013

        ನಿಮ್ಮ ಬರವಣಿಗೆಯನ್ನು ಗಮನಿಸಿ ಮುಂದಿನಂತೆ ಗ್ರಹಿಸುತ್ತೇನೆ: ನೀವು ವರ್ಣ ಎಂಬ ಗುಂಪಿನಲ್ಲಿ ನಿರ್ದಿಷ್ಟ ಜಾತಿಯನ್ನು ಗುರುತಿಸುತ್ತಿಲ್ಲ. ಬದಲಿಗೆ ಯಾವ ಜಾತಿಯವರಾದರು ಸರಿ ಇಂತಹ ವೃತ್ತಿ ಮಾಡಿದರೆ ಇಂತಹ ವರ್ಣಕ್ಕೆ ಸೇರುತ್ತಾರೆ ಎಂದು ನೀವು ಭಾವಿಸುತ್ತೀರಿ. ಆದರೆ ನಿಮ್ಮ ಪ್ರತಿಕ್ರಿಯೆಯಿಂದ ಕೆಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ: 1. ಅನ್ಯಾಯ ಮಾಡುವುದುಕ್ಕೂ ಜಾತಿಗೂ ಸಂಬಂಧವಿಲ್ಲ ಎಂದು ನೀವು ಹೇಳುತ್ತೀರಾ? 2. ‘ಬಲಿತ-ದಲಿತ’ನು ತನಗಿಂತ ಕೆಳ ಅಂತಸ್ತಿನ ಆದರೆ ‘ಮೇಲ್ಜಾತಿಯ’ ಅಧಿಕಾರಿ ಮತ್ತು ರಾಜಕಾರಣಿಯನ್ನು ಎದುರುಹಾಕಿಕೊಳ್ಳತ್ತಾನೆಯೇ? 3. ಇಲ್ಲಿ ‘ಶೂದ್ರರು’ ಯಾರು? ‘ದಲಿತರಿ’ಗಿಂತ ಈ ಶೂದ್ರರು ಭಿನ್ನ ವರ್ಗ ಅಥವಾ ಜಾತಿಯೇ? ನಿಮ್ಮ ಕೊನೆಯ ಸಾಲು ಅರ್ಥವಾಗಲಿಲ್ಲ. ಏಣಿಯು ಒಂದು ಸಾಧನ ಅಲ್ಲವೇ?

        ಉತ್ತರಕ್ಕಾಗಿ ಕಾಯುವವ
        ಶಂಕರ್

        ಉತ್ತರ
        • ರವಿ's avatar
          ರವಿ
          ಏಪ್ರಿಲ್ 10 2013

          ಬದಲಿಗೆ ಯಾವ ಜಾತಿಯವರಾದರು ಸರಿ ಇಂತಹ ವೃತ್ತಿ ಮಾಡಿದರೆ ಇಂತಹ ವರ್ಣಕ್ಕೆ ಸೇರುತ್ತಾರೆ ಎಂದು ನೀವು ಭಾವಿಸುತ್ತೀರಿ

          ನಿಮ್ಮ ಗ್ರಹಿಕೆ ಸರಿ.
          ೧. ಹೌದು, ಜಾತಿಗೂ ಅನ್ಯಾಯಕ್ಕೂ ಸಂಬಂಧವಿಲ್ಲ. ಅನ್ಯಾಯ ಮೊದಲ ಮೂರು ವರ್ಗಗಳಿಂದ ಕೊನೆಯವವರಿಗೆ ಆಗುತ್ತದೆ.
          ೨. ಎದುರು ಹಾಕಿಕೊಳ್ಳಬಹುದು. ಅದು ಅವನ ಸಾಮಾಜಿಕ ಸ್ಥಾನಮಾನ, ಬಲದ ಮೇಲೆ ಅವಲಂಬಿತವಾಗಿದೆ. ಜಾತಿಗೂ, ಇದಕ್ಕೂ ಸಂಬಂಧವಿಲ್ಲ.
          ೩. ಶೂದ್ರರು ಅಂದರೆ ಮೊದಲ ಮೂರು ವರ್ಗಗಳಿಂದ ಅನ್ಯಾಯಕ್ಕೊಳಗಾದವರು. ಇದು ಯಾವುದೇ ಜಾತಿಯಲ್ಲ. ದಲಿತರೂ (ಜಾತಿ) ಇರಬಹುದು. ಬಡ ಬ್ರಾಹ್ಮಣರೂ (ಜಾತಿ) ಇರಬಹುದು.
          ಮೀಸಲಾತಿ ದಲಿತರಿಗೆ ಮಾತ್ರವಲ್ಲದೆ ಬೇರೆ ಬೇರೆ ಜಾತಿ/ಗುಂಪುಗಳಿಗೆ ಇರುವುದರಿಂದ, ಅದರ ಫಲಾನುಭವಿಗಳು ಬಲಿತ ಮೇಲೆ ಇತರರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸದೆ ತಮ್ಮ ಸಾಮ್ರಾಜ್ಯವನ್ನು ಮಾತ್ರ ವಿಸ್ತರಿಸಲು ಪ್ರಯತ್ನಿಸಿ, ಅನ್ಯಾಯದ ವಿರುದ್ಧ ದನಿಯಾಗುವ ಬದಲು ತಾವೇ ಅನ್ಯಾಯ ಮಾಡುವುದರಿಂದ ಕೊನೆಯ ವಾಕ್ಯವನ್ನು ಹೇಳಿದೆ. ಏಣಿ ಎಂಬ ಸಾಧನದ ಉಪಯೋಗ ತಕ್ಕ ರೀತಿಯಲ್ಲಿ ಆಗುತ್ತಿಲ್ಲ ಎನ್ನುವ ಅರ್ಥದಲ್ಲಿ ಹೇಳಿದೆ.

          ಉತ್ತರ
          • veena's avatar
            veena
            ಏಪ್ರಿಲ್ 10 2013

            ರವಿ ಅವರೆ,

            ನೀವು ಹೇಳುತ್ತಿರುವುದು ಸರಿ,

            ಆದರೆ ಪ್ರಸ್ತುತ ರಾಜಕೀಯದಲ್ಲಿಯಾಗಲೀ ಅಥವಾ ವಿವಿಧ ಕ್ಷೇತ್ರಗಳಲ್ಲಿನ ಮೀಸಲಾತಿಗಳು

            ಜಾತಿ ಅಂಶವನ್ನು ಪರಿಗಣಿಸುತ್ತಿತೀದ್ಳಿದಾವೆಯೇ? ಅಥವಾ ನೀವು ಮೇಲೆ ತಿಳಿಸಿರುವಂತಹ ವರ್ಣ ವಿಭಾಗಗಳನ್ನು

            ಪರಿಗಣಿಸಿ ನೀಡಲ್ಪಡುತ್ತಿದ್ದಾವೆಯೇ?, ನೀವು ತಿಳಿಸುವಂತೆ ಜಾತಿಗೂ ಮತ್ತು ಅನ್ಯಯಕ್ಕೂ ಸಂಬಂದವಿಲ್ಲ ಎಂದಾದರೆ

            ಜಾತಿ ಆದರಿತ ಮೀಸಲಾತಿಗೆ ಯಾಕೆ?

            ಉತ್ತರ
      • ಬಸವಯ್ಯ's avatar
        ಬಸವಯ್ಯ
        ಏಪ್ರಿಲ್ 10 2013

        ಹೌದು..ಇದು ಸತ್ಯ. ಇವತ್ತು ಸಾಮಾಜಿಕ ಸ್ಥಾನಮಾನದಿಂದಲೇ ಯಾರೇ ಯಾರನ್ನು ಬೇಕಾದರೂ ಕದಲಿಸಬಹುದು. ಹಣ ಬಲದಿಂದ ತೋಳ್ಬಲ, ರಾಜಕೀಯ ಬಲ. ಉತ್ತರ ಪ್ರದೇಶ, ಬಿಹಾರ ಮುಂತಾದ ರಾಜ್ಯಗಳ ರಾಜಕೀಯದಲ್ಲಿ ಮೇಲ್ವರ್ಗ, ಕೆಳವರ್ಗ ಈ ಎರಡೂ ವರ್ಗಗಳಿಗೆ ಸೇರಿದ ತೀರಾ ಭಯಂಕರ ಡಕಾಯಿತರನ್ನು ನೋಡಬಹುದು. ರಾಜಕೀಯದಲ್ಲಾಗಲಿ ಅಥವಾ ಇನ್ಯಾವುದೇ ಉನ್ನತ ಸರಕಾರಿ ಹುದ್ದೆ ಏರುವಲ್ಲಿ ಜಾತಿ ಎಂಬುದು ಮೇಲೆರಲು, ಅಂತೆಯೇ ಸ್ವಯಂ ತಪ್ಪಿನಿಂದ, ಬ್ರಷ್ಟಾಚಾರದಿಂದ ಕೆಳಗೆ ಬಿದ್ದಾಗ ‘ಅನ್ಯಾಯ, ಅನ್ಯಾಯ’ ಅಂತ ಕೂಗಿ ಗಮನ ಸೆಳೆಯಲು ಸುಲಭ ದಾರಿ, ಟ್ರಂಪ್ ಕಾರ್ಡ ಅಷ್ಟೇ..ಮತ್ತೇನಲ್ಲ. ಮಾಯಾವತಿಯ ಆನೆ ಪ್ರತಿಮೆಗಳ ಪಾರ್ಕನ್ನು, ಸಾವಿರ ರೂಪಾಯಿಗಳ ನೋಟಿನ ಹಾರವನ್ನು ಅಸ್ಮಿತೆ, ಅದು-ಇದು ಎಂದು ಸಮರ್ಥಿಸುವ ‘ಚಿಂತಕ’ರು ನಮ್ಮ ಮಧ್ಯದಲ್ಲಿದ್ದಾರೆ. ದಿನಕರ ಬ್ರಷ್ಟಾಚಾರ ಮಾಡಿ ಸಿಕ್ಕಿ ಬಿದ್ದರೂ ಇದನ್ನು ಮೇಲ್ವರ್ಗದ ಪಿತೂರಿ ಎನ್ನುವಂತೆ ಅನುಮಾನಿಸುವವರಿದ್ದಾರೆ. ಗುಡಿಸಲಿನಲ್ಲಿರುವ ದಲಿತನಿಗೆ ಕಳ್ಳನ ಜಾತಿ ಮುಖ್ಯವಾಗುವುದಿಲ್ಲ.,ಆದರೆ ‘ಚಿಂತಕ’ ದಲಿತರಿಗೆ ಕಳ್ಳನ ಜಾತಿ ಮುಖ್ಯವಾಗುತ್ತದೆ.

        ಆರ್ಥಿಕ ಆಧಾರದ ಮೀಸಲಾತಿ ಕೊಡಲು ಇದು ಸಕಾಲ. ಬಡವ ಯಾವ ಜಾತಿ-ಧರ್ಮದವನೇ ಆಗಿರಲಿ, ಅವನನ್ನು ಮೇಲೆತ್ತಬೇಕು. ಈ ಆರ್ಥಿಕ ಮೀಸಲಾತಿ ಕೂಡ ದುರುಪಯೋಗವಾಗದಂತೆ ಕಟ್ಟು ನಿಟ್ಟಾದ ನಿಯಮಗಳನ್ನು ತರಬೇಕು.

        ಉತ್ತರ
  5. Shankar NS's avatar
    Shankar NS
    ಏಪ್ರಿಲ್ 9 2013

    ಕಳೆದ 66 ವರ್ಷಗಳಿಂದ ಮೀಸಲಾತಿಯ ಸೌಲಭ್ಯಗಳು ಸಾಮಾನ್ಯ ದಲಿತರಿಗೆ ಸಿಕ್ಕಿರುವುದು ಬೆರಳೆಣಿಕೆಯಷ್ಟೇ ಎಂದರೆ ತಪ್ಪಾಗಲಾರದು. ಏಕೆಂದರೆ 50-80ರ ದಶಕಗಳಲ್ಲಿ ಮೀಸಲಾತಿಯ ಬಹುತೇಕ ಸೌಲಭ್ಯಗಳು ‘ದಲಿತರ’ ಹೆಸರಿನಲ್ಲಿ ಸಂಬಂಧಪಟ್ಟ ಹಳ್ಳಿಯ ಪುಡಾರಿಗಳ ಪಾಲಾಗುತ್ತಿದ್ದವು.ಇದೇ ಮೀಸಲಾತಿಯು ಈಗ ಎರಡು ಮತ್ತು ಮೂರನೆ ತಲೆ ಮಾರಿನ ಶಿಕ್ಷಿತ ದಲಿತರ ಹಾಗೂ ಅವರ ಮಕ್ಕಳ ಪಾಲಾಗುತ್ತಿದೆ. ಸಾಮಾನ್ಯ ದಲಿತರ ಮಕ್ಕಳು ಹೆಚ್ಚೆಂದರೆ ಸ್ಥಳೀಯವಾಗಿರುವ ಎಸ್ಸಿ ಎಸ್ಟಿ ಹಾಸ್ಟೆಲ್ ಗಳಲ್ಲಿ ಇದ್ದಾರೆ. ಅದೂ ಈ ಸೌಲಭ್ಯಗಳು ಇವರು ಪಡೆದುಕೊಳ್ಳುವುದು ಎಸ್ ಎಸ್ ಎಲ್ ಸಿ ಯ ವರೆಗೆ ಮಾತ್ರ. ಹೆಚ್ಚೆಂದರೆ ಇವರಲ್ಲಿ ಒಂದಿಬ್ಬರು ಉನ್ನತ ಶಿಕ್ಷಣವನ್ನು ಮಾಡಬಹುದು. ಇಂತಹ ಹಾಸ್ಟೆಲ್ ಗಳಲ್ಲಿ ಸಿಗುವ ಆಹಾರದ ಗುಣಮಟ್ಟವನ್ನು ಆ ದೇವರೆ ಪರೀಕ್ಷಿಸಬೇಕು (ಈಗ ಸ್ವಲ್ಪ ಸುಧಾರಿಸಲಾಗಿದೆ ಎಂದು ಹೇಳುತ್ತಾರೆ). ಇನ್ನೊಂದು ಕಡೆ ಮೀಸಲಾತಿಯ ವಿರೋಧಿಗಳು ‘ಬಲಿತ ದಲಿತ’ರ ಸುಸ್ಥಿತಿಯನ್ನು ಗಮನಿಸಿ ಹಾಗೂ ಬೇರೆ ಜಾತಿಗಳಲ್ಲೂ ಬಡವರಿದ್ದಾರೆ ಮತ್ತು ಮೆರಿಟ್ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ಗ್ರಹಿಸಿ ಮೀಸಲಾತಿಯನ್ನು ತೆಗೆಯಬೇಕೆಂದು ಒತ್ತಾಯಿಸುತ್ತಾರೆ. ಆದರೆ ಮೀಸಲಾತಿ ವಿರೋಧಿಗಳ ಈ ನಿಲುವನ್ನು ಗಮನಿಸಿದ ಕೆಲವು ದಲಿತ ವಿದ್ಯಾರ್ಥಿಗಳಲ್ಲಿ ಈ ಹಾಸ್ಟೆಲ್ ಗಳ ಸೌಲಭ್ಯಗಳಿಗೂ ಧಕ್ಕೆ ಆಗಬಹುದೆಂಬ ಭಯದ ವಾತವರಣವು ಸೃಷ್ಟಿಯಾಗುತ್ತದೆ ಎಂದು ಊಹಿಸಬಹುದು. ದಲಿತರ ಮೀಸಲಾತಿ ವಿಷಯದ ‘ಕೆನೆ ಪದರ’ದ ಬಗ್ಗೆ ಬೆರಳೆಣಿಕೆಯಷ್ಟು ವರದಿಗಳು ಆಗುತ್ತವೆ ನಿಜ, ಆದರೆ ಈ ‘ಕೆನೆ ಪದರ’ದ ವಿರುದ್ಧ ಮಾತನಾಡಿದರೆ ತಾವು ಪ್ರತಿಗಾಮಿಗಳಾಗುತ್ತವೆ ಎಂದು ಗ್ರಹಿಸಿದ ಬಹುತೇಕ ಪ್ರಗತಿಪರರು ಮತ್ತು ರಾಜಕಾರಣಿಗಳು ಚಕಾರ ಎತ್ತುವುದಿಲ್ಲ. ಇಂತಹವರನ್ನು ನೋಡಿದರೆ ಇವರು ಸಾಮಾನ್ಯ ದಲಿತರ ಪರವಾಗಿ ಇದ್ದಾರೆಯೇ? ಎಂಬ ಅನುಮಾನ ಹುಟ್ಟಿಕೊಳ್ಳುತ್ತದೆ.

    ಉತ್ತರ
    • ಉಮೇಶ ಶೆಟ್ಟಿ's avatar
      ಉಮೇಶ ಶೆಟ್ಟಿ
      ಏಪ್ರಿಲ್ 9 2013

      ಮೀಸಲಾತಿಯನ್ನು ಕೆನೆಪದರದಿಂದ ಮುಕ್ತಿಗೊಳಿಸಬೇಕಾದುದು ಅಗತ್ಯ. ಆದರೆ ಇದು ಸಾಧ್ಯವಾಗದಿರಲು ಹಲವು ಅಡೆತಡೆಗಳಿವೆ.
      ೧. ದಶಕಗಳ ಹಿಂದೆಯೇ ಬಲಪಂಥೀಯರು ಈ (“ಮೀಸಲಾತಿಯನ್ನು ಕೆನೆಪದರದಿಂದ ಮುಕ್ತಿಗೊಳಿಸುವ”) ಬಗ್ಗೆ ಒಲವು ತೋರಿಸಿರುವುದರಿಂದ ಎಡಪಂಥೀಯರು ಆ ದಾರಿ (ಸರಿಯಿದ್ದರೂ ಕೂಡ) ತುಳಿಯಲು ತಯಾರಿಲ್ಲ.
      ೨. ದಲಿತ ನಾಯಕರಲ್ಲಿ ಹಲವರು “ಕೆನೆಪದರ”ದಲ್ಲೇ ಇರುವುದರಿಂದ ತಮಗೆ ನಷ್ಟವಾಗುವ ಆ ದಾರಿ (ಸರಿಯಿದ್ದರೂ ಕೂಡ) ತುಳಿಯಲು ತಯಾರಿಲ್ಲ.

      ಉತ್ತರ
    • ಉಮೇಶ ಶೆಟ್ಟಿ's avatar
      ಉಮೇಶ ಶೆಟ್ಟಿ
      ಏಪ್ರಿಲ್ 9 2013

      ನನ್ನ ಅಭಿಪ್ರಾಯ::
      ಮೀಸಲಾತಿಯನ್ನು ಪಡೆಯಲು “ಕುಟುಂಬದ ಅರ್ಹತೆ” ಕೂಡಾ ಒಂದು ಅಂಶವಾಗಬೇಕಾದ ಅವಶ್ಯಕತೆಯಿದೆ.
      ಕುಟುಂಬದಲ್ಲಿ ಹಿಂದಿನ ತಲೆಮಾರು (ತಂದೆ/ತಾಯಿ) ಒಂದು ಹಂತದ ಮೀಸಲಾತಿಯ ಲಾಭ ಪಡೆದಿದ್ದರೆ, ಅದೇ ಹಂತದ ಮೀಸಲಾತಿಗೆ ಆ ಕುಟುಂಬದ ಮುಂದಿನ ತಲೆಮಾರು ಅರ್ಹತೆ ಕಳೆದುಕೊಳ್ಳಬೇಕು. ಅದಕ್ಕಿಂತ ಮೇಲಿನ ಹಂತಕ್ಕೆ ಅವರು ಅರ್ಹರು.
      ಉದಾಹರಣೆಗೆ: ಅಪ್ಪ ಮೀಸಲಾತಿ ಬಳಸಿ “ಗ್ರೂಪ್ ಡಿ” ಕೆಲಸ ಪಡೆದುಕೊಂಡಿದ್ದರೆ, ಮಗನಿಗೆ “ಗ್ರೂಪ್ ಡಿ” ಕೆಲಸಕ್ಕೆ ಮೀಸಲಾತಿ ಸಿಗಬಾರದು, ಅದಕ್ಕಿಂತ ಮೇಲಿನ ಹಂತದ ಹುದ್ದೆಗಳಿಗೆ ಮೀಸಲಾತಿ ಸಿಗಬೇಕು.

      ಉತ್ತರ
      • shankarcslc's avatar
        ಏಪ್ರಿಲ್ 10 2013

        ಮೀಸಲಾತಿಯ ಬಗ್ಗೆ ನೀವು ಸೂಚಿಸಿದ ‘ಪರ್ಯಾಯ ಮಾರ್ಗ’ವು ನನಗೆ ಸರಿಯಾಗಿ ಅರ್ಥವಾಗಿಲ್ಲ. ಹಾಗಾಗಿ ದಯವಿಟ್ಟು ಸ್ವಲ್ಪ ವಿಸ್ತರಿಸಿ ಹೇಳಿ.

        ಉತ್ತರ
        • ಉಮೇಶ ಶೆಟ್ಟಿ's avatar
          ಉಮೇಶ ಶೆಟ್ಟಿ
          ಏಪ್ರಿಲ್ 10 2013

          ಮೀಸಲಾತಿಯಲ್ಲಿ ವಿವಿಧ ಹಂತಗಳನ್ನು ಗುರುತಿಸಬೇಕು.
          ಉದಾಹರಣೆಗೆ ಶಿಕ್ಷಣರಂಗದಲ್ಲಿ ಉದ್ಯೋಗ ಅವಕಾಶಗಳಿಗೆ ಸಂಬಂಧ ಪಟ್ಟಂತೆ –
          (ಇದು ತುಂಬ ಸರಳವಾದ ಉದಾಹರಣೆ. ನಿಜ ಜೀವನದಲ್ಲಿ ಇಷ್ಟು ಸರಳವಾಗಿರುವುದು ಸಾಧ್ಯವಿಲ್ಲ)
          (೧) ಹಂತ ಒಂದು – ಪ್ರಾಥಮಿಕ ಶಾಲೆಯ ಶಿಕ್ಷಕ
          (೨) ಹಂತ ಎರಡು – ಹೈಸ್ಕೂಲ್ ಶಿಕ್ಷಕ
          (೩) ಹಂತ ಮೂರು – ಕಾಲೇಜು ಶಿಕ್ಷಕ

          ಮೀಸಲಾತಿಯ ಲಾಭ ಪಡೆದು ಪ್ರಾಥಮಿಕ ಶಾಲೆಯ ಶಿಕ್ಷಕರಾದವರ ಮಕ್ಕಳು ಮುಂದೊಂದು ದಿನ ‘ಪ್ರಾಥಮಿಕ ಶಾಲೆಯ ಶಿಕ್ಷಕ’ರಾಗ ಬಯಸಿದರೆ ಆ ಮಕ್ಕಳಿಗೆ ‘ಮೀಸಲಾತಿಯ ಲಾಭ’ ಸಿಗಬಾರದು. ಆದರೆ ಅದಕ್ಕಿಂತ ಮೇಲಿನ ಹಂತದ ಅವಕಾಶಗಳಿಗೆ (ಹೈಸ್ಕೂಲ್ / ಕಾಲೇಜು ಶಿಕ್ಷಕರಾಗಲು) ಅವರಿಗೆ ‘ಮೀಸಲಾತಿಯ ಲಾಭ’ ಸಿಗಬೇಕು.

          ಒಂದು ಉದ್ಯೋಗದ ಜಾಹೀರಾತಿನಲ್ಲಿ ಹೀಗೆ ಪ್ರಕಟಿಸಬಹುದು:

          ಮೀಸಲಾತಿಗೆ ಅರ್ಜಿದಾರರ ಕುಟುಂಬ ಅರ್ಹತೆಯನ್ನು ಈ ಕೆಳಕಂಡಂತೆ ನಿರ್ಧರಿಸಲಾಗುತ್ತದೆ. :
          ೧. ಈ ಉದ್ಯೋಗದ ಮೀಸಲಾತಿ ಹಂತ = ನಾಲ್ಕು (ಇದನ್ನು ಸರಕಾರ/ಉದ್ಯಮ ನಿರ್ಧರಿಸುತ್ತದೆ)
          ೨. ಅಭ್ಯರ್ಥಿಯ ತಂದೆ, ತಾಯಿ ಅಥವಾ ಪೋಷಕರು ಇಲ್ಲಿಯವರೆಗೆ ಬಳಸಿರುವ ಮೀಸಲಾತಿಯ ಅತಿ ದೊಡ್ಡ ಹಂತ = (ಇದನ್ನು ಅಫಿದವಿತ್ ನ / ದಾಖಲೆಗಳ ಮೂಲಕ ಅರ್ಜಿದಾರರು ಸಾಬೀತು ಪಡಿಸುತ್ತಾರೆ)

          (೧) > (೨) ಇದ್ದರೆ, ಅರ್ಜಿದಾರರು ಮೀಸಲಾತಿಗೆ ಅರ್ಹರು.
          (೧) = (೨) ಇದ್ದರೆ, ಅರ್ಹರಲ್ಲ.
          (೧) < (೨) ಇದ್ದರೆ, ಅರ್ಹರಲ್ಲ.

          ಉತ್ತರ

Leave a reply to ಬಸವಯ್ಯ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments