ವಿಷಯದ ವಿವರಗಳಿಗೆ ದಾಟಿರಿ

Archive for

3
ಜೂನ್

ಗಾಂಧಿ ಕ್ಲಾಸು: ಸೃಜನಶೀಲ ಬದುಕಿನ ವಿಭಿನ್ನ ಮುಖಗಳು

– ರಾಜಕುಮಾರ.ವ್ಹಿ.ಕುಲಕರ್ಣಿ, ಬಾಗಲಕೋಟ

Gaandhi Clasu‘ಬದುಕು ನನ್ನನ್ನು ರೂಪಿಸಿತೋ, ನಾನೇ ನನ್ನ ಬದುಕನ್ನು ಹೀಗೆ ರೂಪಿಸಿಕೊಂಡೆನೋ ಆದರೆ ಒಂದಂತೂ ಸತ್ಯ ನನ್ನೀ ಬದುಕು ನನ್ನ ಪ್ರಾರಬ್ಧ ಮತ್ತು ಸವಾಲಿನದು. ನಾನು ಬಾಲ್ಯವನ್ನಾಗಲೀ ಹದಿಹರೆಯದ ದಿನಗಳನ್ನಾಗಲೀ ಉತ್ಕಟವಾಗಿ ಎಲ್ಲರಂತೆ ಅನುಭವಿಸುವುದು ಆಗಲೇ ಇಲ್ಲ. ದುರ್ಬರ ಬದುಕು ಅದಕ್ಕೆ ಆಸ್ಪದ ಮಾಡಿಕೊಡಲೇ ಇಲ್ಲ. ಬಾಲ್ಯದ, ಹದಿಹರೆಯದ ಅನುಭವಗಳಿಗೆ ಅಕ್ಷರ ರೂಪ ಕೊಡುವಾಗ ನನ್ನ ಕಣ್ಣುಗಳು ಒದ್ದೆಯಾಗಿರುವುದೂ ಉಂಟು. ಹಿಂಬಾಲಿಸುತ್ತಲೇ ಇದ್ದ ಆತಂಕ, ಅನಿಶ್ಚಿತತೆಗಳನ್ನು ನಿರಾಸೆಗೊಳಿಸಿ ಬದುಕು ಅರವತ್ತರ ಹೊಸ್ತಿಲ ಬಳಿ ತಂದು ನಿಲ್ಲಿಸಿರುವುದು ಪವಾಡವೇ ಸರಿ.’ ಈ ಸಾಲುಗಳು ಇತ್ತೀಚಿಗೆ ನಾನು ಓದಿದ ‘ಗಾಂಧಿ ಕ್ಲಾಸು’ ಪುಸ್ತಕದಿಂದ ಹೆಕ್ಕಿ ತೆಗೆದವುಗಳು.

‘ಗಾಂಧಿ ಕ್ಲಾಸು’ ಕನ್ನಡದ ಖ್ಯಾತ ಬರಹಗಾರ ಕುಂವೀ ಎಂದೇ ಹೆಸರಾದ ಕುಂಬಾರ ವೀರಭದ್ರಪ್ಪನವರ ಆತ್ಮಕಥನ. ಕುಂವೀ ನಾನು ಮೆಚ್ಚುವ ಹಾಗೂ ಅತಿಯಾಗಿ ಹಚ್ಚಿಕೊಂಡಿರುವ ಲೇಖಕರಲ್ಲೊಬ್ಬರು. ಅವರ ಆತ್ಮಕಥನ ಪ್ರಕಟವಾಗಿದೆ ಎಂದು ಗೊತ್ತಾದದ್ದೆ ತಡ ಓದಲೇ ಬೇಕೆನ್ನುವ ಉತ್ಕಟ ಆಸೆ ಪುಸ್ತಕವನ್ನು ಹುಡುಕಿಕೊಂಡು ಹೋಗಿ ಖರೀದಿಸಿ0iÉುೀ ಬಿಟ್ಟಿತು. ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರಾದ ಕುಂ.ವೀರಭದ್ರಪ್ಪನವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಲಸ ಮಾಡಿ 2009ರಲ್ಲಿ ನಿವೃತ್ತರಾಗಿರುವರು. ನೂರಾರು ಕಥೆಗಳನ್ನು ಬರೆದಿರುವ ಇವರು ಕಾದಂಬರಿಗಳು ಮತ್ತು ಜೀವನ ಚರಿತ್ರೆಗಳನ್ನು ಬರೆದು ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿರುವರು. ಅವರ ಅನೇಕ ಕಥೆಗಳು ಹಾಗೂ ಕಾದಂಬರಿಗಳು ಸಿನಿಮಾಗಳಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುವುದರ ಜೊತೆಗೆ ಶ್ರೀಯುತರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳೂ ಸಂಧಿವೆ. ಅದು ಕಥೆ ಇರಲಿ, ಕಾದಂಬರಿಯಾಗಲಿ, ಜೀವನ ಚರಿತ್ರೆ ಇರಲಿ ಪ್ರತಿಯೊಂದರಲ್ಲಿ ಕುಂವೀ ಶೈಲಿ ತನ್ನ ಛಾಪು ಮೂಡಿಸಿ ಓದುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ತಮ್ಮ ಕೃತಿಗಳ ಓದಿಗಾಗಿ ಓದುಗರ ಒಂದು ವಲಯವನ್ನೇ ಸೃಷ್ಟಿಸಿಕೊಂಡಿರುವ ವಿಶಿಷ್ಟ ಬರಹಗಾರ ಕುಂವೀ. ಹಲವು ದಶಕಗಳಿಂದ ಕನ್ನಡದ ಸಾಹಿತ್ಯಾಸಕ್ತರನ್ನು ಕಾಡುತ್ತಲೇ ಬಂದಿರುವ ಈ ಲೇಖಕನ ವೈಯಕ್ತಿಕ ಬದುಕು ಹೇಗಿರಬಹುದೆಂಬ ಕುತೂಹಲ ನನ್ನದಾಗಿತ್ತು. ‘ಗಾಂಧಿ ಕ್ಲಾಸು’ ಆ ಕೃತಿ ಕೈಯಲ್ಲಿ ಹಿಡಿದ ಘಳಿಗೆ ಅದು ಹೇಗೆ ಸಮಯ ಸರಿದು ಹೋಯಿತು ಎಂದು ಅರಿವಿಗೆ ಬರದಂತೆ ಆರು ದಶಕಗಳ ಕುಂವೀ ಬದುಕು ಕಣ್ಣೆದುರು ಅನಾವರಣಗೊಂಡಿತು.

ಮತ್ತಷ್ಟು ಓದು »