‘ಪ್ರಜಾವಾಣಿ’ಯ ವಚನಗಳ ಕುರಿತ ಚರ್ಚೆಗೊಂದು ಚರಮಗೀತೆ
ಪ್ರಜಾವಾಣಿ ಪತ್ರಿಕೆಯಲ್ಲಿ ವಚನಗಳ ಕುರಿತು ಡಂಕಿನ್ ಹಾಗೂ ಬಾಲಗಂಗಾಧರರ ವಿಚಾರಗಳ ಕುರಿತ ಚರ್ಚೆಗೆ ತೆರೆ ಎಳೆಯಲಾಗಿದೆ. ಇವರ ವಿಚಾರಗಳನ್ನು ವಿರೋಧಿಸುವವರಿಗೆಲ್ಲ ಸಾಕಷ್ಟು ಅವಕಾಶ ಸಿಕ್ಕಿರುವುದರಿಂದ ಇನ್ನೂ ಹೇಳಲಿಕ್ಕೆ ಅವರ ಬಳಿ ಏನೂ ಇಲ್ಲ ಎಂಬುದು ಸ್ಪಷ್ಟ. ಇವರು ಏನು ಹೇಳಿದ್ದಾರೆ ಎಂಬುದನ್ನೇ ಆಧರಿಸಿ ಅದರಲ್ಲಿ ನಮಗೇನಾದರೂ ಉಪಯೋಗವಾಗುವಂಥದ್ದು ಇದೆಯೆ ಎಂಬ ಕುರಿತ ಸಮೀಕ್ಷೆಯೇ ಈ ಬರೆಹ.
ವಚನಗಳು ಜಾತಿ ವಿರೋಧೀ ಚಳವಳಿಯಲ್ಲ ಎಂಬ ಹೇಳಿಕೆಗೆ ಕನ್ನಡದ ಪ್ರಗತಿಪರರನೇಕರು ಉಗ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಅವರು ಕೆಲವೊಂದು ವಚನಗಳನ್ನು ಪದೇ ಪದೇ ಉದ್ಧರಿಸಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರ ಪ್ರಕಾರ ವಚನಗಳು ಆಧ್ಯಾತ್ಮಿಕ ಸಾಹಿತ್ಯವೆಂದರೆ ಪುರೋಹಿತಶಾಹಿಯ ಹುನ್ನಾರ. ಅದು ಹೇಗೆ? ಇವರು ವಚನಗಳು ಆಧ್ಯಾತ್ಮವೇ ಅಲ್ಲ ಎನ್ನುವ ದಾರಿಯನ್ನು ಏಕೆ ಹಿಡಿಯುತ್ತಿದ್ದಾರೆಂದರೆ ಇವರ ಪ್ರಕಾರ ಆಧ್ಯಾತ್ಮವು ಪುರೋಹಿತಶಾಹಿಯ ಹುನ್ನಾರ ಎಂಬ ನಿರ್ಣಯವೇ ಆಗಿದೆ. ಅವರು ಆಧ್ಯಾತ್ಮಿಕತೆಗೂ ಪುರೋಹಿತಶಾಹಿಗೂ ಒಂದು ಅವಿನಾಭಾವೀ ಸಂಬಂಧವನ್ನು ಕಲ್ಪಿಸುತ್ತಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ. ಅವರ ಪ್ರಕಾರ ವಚನಗಳು ಏಕೆ ಜಾತಿ ವ್ಯವಸ್ಥೆಯ ವಿರುದ್ಧದ ಚಳವಳಿಗಳೆಂದರೆ ಇಷ್ಟೊಂದು ಮಂದಿ ಕೆಳಜಾತಿಯ ವಚನಕಾರರು ಜಾತಿ ಬೇಧ, ಬ್ರಾಹ್ಮಣ ಆಚರಣೆಗಳ ಕುರಿತು ಟೀಕೆಗಳನ್ನು ಮಾಡಿದ್ದೇ ಆಗಿದೆ. ಆದರೆ ಅವರು ನಮ್ಮ ವಾದವನ್ನು ಸರಿಯಾದ ಅರ್ಥದಲ್ಲಿ ಗ್ರಹಿಸಬೇಕಾದರೆ ಆಧ್ಯಾತ್ಮದ ಕುರಿತ ಪೂರ್ವಾಗ್ರಹಗಳನ್ನು ತೊಡೆದುಕೊಳ್ಳಬೇಕಾಗುತ್ತದೆ. ಅವರು ಯಾವಯಾವ ವಚನಕಾರರನ್ನು ಹಾಗೂ ವಚನಗಳನ್ನು ತಮ್ಮ ವಾದದ ಪುಷ್ಟೀಕರಣಕ್ಕೆ ಬಳಸಿಕೊಳ್ಳುತ್ತಾರೊ ಆ ಉದಾಹರಣೆಗಳನ್ನೆಲ್ಲ ಸಾಧ್ಯ ಮಾಡಿದ್ದು ಭಾರತೀಯ ಆಧ್ಯಾತ್ಮ ಸಂಪ್ರದಾಯದ ವೈಶಿಷ್ಟ್ಯತೆಯೇ ಆಗಿದೆ. ಅಂದರೆ ಅಷ್ಟೊಂದು ಕೆಳಜಾತಿಯ ವಚನಕಾರರು, ಅಷ್ಟೊಂದು ನಿಷ್ಟುರವಾಗಿ ಬ್ರಾಹ್ಮಣರನ್ನು ಹಾಗೂ ರೂಢಮೂಲ ಆಚರಣೆಗಳನ್ನು ಖಂಡಿಸುವ ಸಾಧ್ಯತೆಯನ್ನು ಆ ಆಧ್ಯಾತ್ಮಿಕ ಮಾರ್ಗ ಸೃಷ್ಟಿಸುತ್ತದೆ ಅಂತಲೇ ಅರ್ಥ. ಆಧ್ಯಾತ್ಮಿಕತೆಗೆ ನಿಜವಾಗಿಯೂ ಅವರು ಆರೋಪಿಸುವ ಪುರೋಹಿತಶಾಹಿಯ ಏಕಸ್ವಾಮ್ಯದ ಸ್ವರೂಪವಿದ್ದಿದ್ದರೆ ಈ ಮೇಲಿನ ಸಂಗತಿ ಹೇಗೆ ಸಾಧ್ಯವಾಗುತ್ತದೆ? ಹಾಗಾಗಿ ವಚನಗಳು ಆಧ್ಯಾತ್ಮಿಕ ಸಾಹಿತ್ಯಗಳು ಎಂಬುದು ಕೆಳಜಾತಿಯವರ ಹಿತಾಸಕ್ತಿಗೆ ವಿರುದ್ಧವಾದ ಹೇಳಿಕೆ ಎನ್ನುವುದೇ ಒಂದು ಪೂರ್ವಾಗ್ರಹಪೀಡಿತ ನಿಲುವು. ಅದು ಪಾಶ್ಚಾತ್ಯ ಚಿಂತಕರಿಂದ ಬಂದ ಬಳುವಳಿ.