ಹೊಸ ಚಳುವಳಿಯ ಅರುಣೋದಯ
ಪ್ರೊ. ವಿವೇಕ ಧಾರೇಶ್ವರ, ಬೆಂಗಳೂರು
ವಚನ ಚಳುವಳಿ ಹಾಗೂ ಜಾತಿ ವ್ಯವಸ್ಥೆಯ ಕುರಿತ ಡಂಕಿನ್ ಅವರ ಪ್ರಬಂಧದ ವಿರುದ್ಧವಾಗಿ ನಡೆದ ವಾಗ್ದಾಳಿಯನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಅದರಲ್ಲೂ ಪ್ರೊ. ಶಿವಪ್ರಕಾಶರನ್ನು ಬಿಟ್ಟರೆ ಮತ್ಯಾರೂ ಆ ಪ್ರಬಂಧವನ್ನು ಓದಿದಂತೆ ಕಾಣುವುದಿಲ್ಲ. ಇಲ್ಲಿ ಗಮನಿಸಬೇಕಾದ ಎರಡು ಅಂಶಗಳಿವೆ: 1) ಇದು ಡಂಕಿನ್ ವಿಚಾರಕ್ಕೊಂದೇ ಹುಟ್ಟಿದ ವಿರೋಧವಲ್ಲ ಎಂಬುದು ಸ್ಪಷ್ಟ. ಬಾಲಗಂಗಾಧರರ ‘ಹೀದನ್..’ (ಸ್ಮೃತಿ-ವಿಸ್ಮೃತಿ) ಗ್ರಂಥವು ಹುಟ್ಟುಹಾಕಿದ ಸಂಶೋಧನಾ ಕಾರ್ಯಕ್ರಮದ ಕುರಿತ ಚರ್ಚೆಯಿಂದಾಗಿ ಹುಟ್ಟಿಕೊಂಡ ಚಿಂತನಾ ಪರಿಸರವನ್ನೇ ಇಲ್ಲಿ ಗುರಿಯಾಗಿಟ್ಟುಕೊಳ್ಳಲಾಗಿದೆ ಎಂಬುದು ಖಚಿತ. 2) ಇದನ್ನು ನಾನು ಗುಂಪು, ಸಮುದಾಯ ಎಂಬುದಾಗಿ ಗುರುತಿಸದೇ ಪರಿಸರ ಎಂದು ಏಕೆ ಕರೆಯುತ್ತೆನೆಂದರೆ, ಇಲ್ಲಿರುವವರು ಬೇರೆ ಬೇರೆ ದೇಶಗಳಿಗೆ ಸೇರಿದ್ದಾರೆ, ಬೇರೆ ಬೇರೆ ಭಾಷೆಗಳನ್ನು ಆಡುತ್ತಾರೆ, ವಿಭಿನ್ನ ಸಂಸ್ಥೆಗಳು ಹಾಗೂ ಸಾಮಾಜಿಕ ಹಿನ್ನೆಲೆಗಳಿಗೆ ಸೇರಿದ್ದಾರೆ. ಈ ಸಂಶೋಧಕರು ತಮಗಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ನೆಲೆಯಲ್ಲಿ ಮಾತ್ರವೇ ಒಟ್ಟಿಗೆ ಬಂದಿದ್ದಾರೆ. ಸಂಶೋಧನಾಸಕ್ತಿಯೇ ಇವರನ್ನೆಲ್ಲ ಒಟ್ಟಿಗೆ ತಂದಿದೆಯೇ ವಿನಃ ಯಾವುದೇ ರಾಜಕೀಯ ಉದ್ದೇಶವಾಗಲೀ, ಸಾಮಾಜಿಕ ಹೋರಾಟವಾಗಲೀ ಅಲ್ಲ. ಅವರ ಮೇಲೆ ನಡೆಯುತ್ತಿರುವ ದಾಳಿಯ ರಭಸವನ್ನು ಹಾಗೂ ಕೆಸರೆರಚಾಟದ ಸ್ವರೂಪವನ್ನು ವಿಶ್ಲೇಷಿಸುವುದಕ್ಕೂ ಮೊದಲು ಈ ಮೇಲಿನ ಎರಡೂ ಅಂಶಗಳನ್ನು ಗುರುತಿಸಿಕೊಳ್ಳುವುದು ಮುಖ್ಯ.
ಈ ಸಂಶೋಧಕರ ಸಂಶೋಧನೆಯ ಕುರಿತು ಚರ್ಚೆಯೇ ನಡೆಯುತ್ತಿಲ್ಲ, ಬದಲಾಗಿ ಈ ಸಂಶೋಧನೆಯ ರಾಜಕೀಯ ಪರಿಣಾಮದ ಕುರಿತು ಕಟು ಟೀಕೆಗಳು ಬರುತ್ತಿವೆ. ಒಂದು ಸಂಶೋಧನಾ ಕಾರ್ಯಕ್ರಮದ ಪರಿಣಾಮದ ಕುರಿತು ಚರ್ಚಿಸಲೇ ಬಾರದು ಎಂದು ನಾನು ಹೇಳುತ್ತಿಲ್ಲ. ಆದರೆ ಅಂಥ ಚರ್ಚೆಗೂ ಮುನ್ನ ಆ ಸಂಶೋಧಕರ ವಾದ ಹಾಗೂ ಸಂಶೋಧನೆಗಳು ಏನು ಎಂಬುದನ್ನು ತಿಳಿದುಕೊಳ್ಳುವುದಾದರೂ ಬೇಡವೆ? ಈ ಸಂಶೋಧನೆಯು ಹೊಸದೇ ಆದ ವಿಚಾರವೊಂದನ್ನು ತಿಳಿಸುತ್ತಿದೆ, ಸಾಮಾನ್ಯ ಜ್ಞಾನಕ್ಕೆ ವಿರುದ್ಧವಾಗಿದೆ, ಹಾಗೂ ಬೌದ್ಧಿಕ ಸವಾಲನ್ನು ಎಸೆಯುತ್ತದೆ ಎಂಬ ಕಾರಣಕ್ಕಾದರೂ ಅದನ್ನು ಗಂಭೀರವಾಗಿ ಪರಿಶೀಲಿಸುವ ಒಂದು ಪ್ರಯತ್ನವಾದರೂ ಕಾಣಬೇಡವೆ? ಸ್ಮೃತಿ-ವಿಸ್ಮೃತಿಯಲ್ಲಿ ಬರುವ ಹೇಳಿಕೆಯೊಂದು ನಮ್ಮಲ್ಲಿ ಅನೇಕರನ್ನು ಕಾಡಿದೆ: ಅದೆಂದರೆ, “ಹಿಂದೂಯಿಸಂ” ಎಂಬುದು ಅಸ್ತಿತ್ವದಲ್ಲಿ ಇಲ್ಲವೊಂದೇ ಅಲ್ಲ ಯುರೋಪಿಯನ್ನರು ಅಂಥದ್ದೊಂದು ಸಂಗತಿ ಇದೆ ಎಂಬುದಾಗಿ ಅಂದುಕೊಂಡೇ ಭಾರತೀಯ ಸಂಸ್ಕೃತಿಯನ್ನು ಅನುಭವಿಸಿದರು. ಈ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲಿಕ್ಕಾಗಿ ಸ್ಮೃತಿ-ವಿಸ್ಮೃತಿಯಲ್ಲಿ ರಿಲಿಜನ್ನಿನ ಕುರಿತು ಒಂದು ಸಿದ್ಧಾಂತವನ್ನು ರಚಿಸಿ ರಿಲಿಜನ್ನೆಂದರೆ ಏನು? ಅದು ಭಾರತದಲ್ಲಿ ಇರಲಿಕ್ಕೆ ಹೇಗೆ ಸಾಧ್ಯವಿಲ್ಲ ಎಂಬುದನ್ನು ವಿವರಿಸಲಾಗಿದೆ. ಇವು ಗಹನವಾದ ಹೇಳಿಕೆಗಳಾಗಿದ್ದು ಈ ವಾದವನ್ನು ಅರ್ಥಮಾಡಿಕೊಂಡ ನಮ್ಮಲ್ಲಿ ಕೆಲವರಾದರೂ ರೋಮಾಂಚಿತರಾದೆವಷ್ಟೇ ಅಲ್ಲ ಸಮಾಜ ವಿಜ್ಞಾನಗಳಲ್ಲಿ ಸಿದ್ಧಾಂತವನ್ನು ಕಟ್ಟುವುದು ಸಾಧ್ಯ ಎಂಬ ಹೇಳಿಕೆಗೆ ದೃಷ್ಟಾಂತವನ್ನು ಕಣ್ಣಾರೆ ನೋಡಿ ಸ್ಫೂರ್ತಿಗೊಂಡೆವು. ಅಂದರೆ ನಮಗೆ ಸಾಮಾಜಿಕ ಜಗತ್ತಿನ ಜ್ಞಾನವನ್ನು ನಿಸರ್ಗ ವಿಜ್ಞಾನಗಳ ದಾರಿಯಲ್ಲೇ, ಅದಕ್ಕೂ ಭಿನ್ನವಾಗಿ ಕಟ್ಟಬಹುದು ಎಂಬುದನ್ನು ಅದು ತೋರಿಸಿತು. ಈ ಸಿದ್ಧಾಂತವನ್ನು ಕಟ್ಟುವ ಕೆಲಸವೇ ಇಂದು ನಾನು ಉಲ್ಲೇಖಿಸುತ್ತಿರುವ ಈ ಹೊಸ ಸಂಶೋಧನಾ ಪರಿಸರವನ್ನು ರೂಪಿಸಿದೆ.