ವಿಷಯದ ವಿವರಗಳಿಗೆ ದಾಟಿರಿ

Archive for

7
ಜೂನ್

ಇದು ವಿಮರ್ಶೆಯಲ್ಲ ನನ್ನನಿಸಿಕೆ…

-ಕೆ.ಗುರುಪ್ರಸಾದ್

yADSಇತ್ತೀಚೆಗೆ ಒಂದು ವಿಷಯದ ಬಗ್ಗೆ ನಾ ಮೆಚ್ಚುವ ಇಬ್ಬರು ಲೇಖಕರ ಆರ್ಟಿಕಲ್ ಓದಿದೆ. ಒಂದು ಪ್ರತಾಪ್ ಸಿಂಹ ಅವರ ” ಮೇನಕೆ ಬಂದು ಕುಣಿಯುವವರೆಗೆ ವಿಶ್ವಾಮಿತ್ರ ಮಹಾತಪಸ್ವಿಯಾಗಿದ್ದ, ಬಿಜೆಪಿ ಕಥೆಯೂ ಹಾಗೇಯೇ ಆಯಿತು ” ಇನ್ನೊಂದು ಚಕ್ರವರ್ತಿ ಸೂಲಿಬೆಲೆಯವರ ” ಎರಡು ರಾಷ್ಟ್ರೀಯ ಪಕ್ಷ ಎಷ್ಟೊಂದು ಅಂತರ “. ಮೊದಲೇ ಹೇಳಿದಂತೆ ಎರಡೂ ಕರ್ನಾಟಕದಲ್ಲಿನ ಬಿಜೆಪಿಯ ಸೋಲಿನ ಕುರಿತಾಗೇ ಇರೋದು. ಪ್ರತಾಪ್ ಸಿಂಹ ಅವರು ಯಾವ ರೀತಿ ಸೋಲನುಭವಿಸಿತು ಅನ್ನೋದನ್ನ ವಿಶ್ಲೇಷಣೆ ಮಾಡಿದ್ದರೆ, ಸೂಲಿಬೆಲೆಯವರು ಎರಡು ಪಕ್ಷಗಳ ನಡುವಿನ ವ್ಯತ್ಯಾಸವನ್ನ ಜನರ ಮುಂದಿಡುವ ಪ್ರಯತ್ನ ಮಾಡಿದ್ದಾರೆ. ಈ ಎರಡು ಲೇಖನಗಳನ್ನ ಓದಿದ ನಂತರ ನನಗೆ ನನ್ನ ಅನಿಸಿಕೆಯನ್ನು ಹೇಳೋ ಮನಸಾಯಿತು ಹಾಗಾಗಿ ಈ ಸಣ್ಣ ಲೇಖನ…ಮೊದಲೇ ಶೀರ್ಷಿಕೆಯ ರೂಪದಲ್ಲಿ ಹೇಳಿದ್ದೇನೆ, ಇದು ವಿಮರ್ಶೆಯಲ್ಲ ಯಾಕೆಂದರೆ ಇಬ್ಬರೂ ತಮ್ಮ ಬರಹಗಳಿಂದ ಜನರ ಮಂತ್ರಮುಗ್ಧರನ್ನಾಗಿಸಿದವರು. ಅವರ ಕುರಿತಾಗಿ ವಿಮರ್ಶೆ ಮಾಡುವ ಯೋಗ್ಯತೆ ಎಳ್ಳಷ್ಟೂ ನನ್ನಲ್ಲಿಲ್ಲ ಅನ್ನೋದು ನನ್ನ ಧೃಡವಾದ ನಂಬಿಕೆ. ಹಾಗಾಗಿ ಇಲ್ಲಿರೋದು ಅದೇ ವಿಷಯದ ಕುರಿತಾದ ನನ್ನ ಅನಿಸಿಕೆ ಅಷ್ಟೇ..

ಮೊದಲಿಗೆ ಪ್ರತಾಪ್ ಸಿಂಹರ ಲೇಖನವನ್ನ ನೋಡೋದಾದ್ರೆ… ಬಿಜೆಪಿಯ ಸೋಲಿನ ಕುರಿತಾದ ಪ್ರತಾಪ್ ಅವರ ಅನಾಲಿಸಿಸ್ ಸೂಪರ್… ಎರಡು ಮಾತಿಲ್ಲದೆ ಒಪ್ಪಿಕೊಳ್ಳಬಹುದಾದ ರೀತಿಯಲ್ಲಿ ಪ್ರಸ್ತುತ ಪಡಿಸಿದ್ದಾರೆ. ಅಧಿಕಾರದ ಮೆಟ್ಟಲೇರುವ ಹೊತ್ತಲ್ಲಿ ಆದ ಸಣ್ಣ ಸಣ್ಣ ತಪ್ಪುಗಳು ಮುಂದೆ ಯಾವ ರೀತಿ ಯುಡಿಯೂರಪ್ಪ ಅವರನ್ನ ಕಾಡತೊಡಗಿತು, ಯಾವ ರೀತಿ ಹೈಕಮಾಂಡ್ ನ ನಡೆಗಳು ಯಡಿಯೂರಪ್ಪ ಅವರನ್ನ ತಪ್ಪು ದಾರಿ ಹಿಡಿಯುವಂತೆ ಪ್ರೇರೇಪಿಸಿತು ಅನ್ನೋದರ ಸ್ಪಷ್ಟ ಚಿತ್ರಣ ಕೊಡುತ್ತಾ ಹೋಗುತ್ತಾರೆ. ಆಪರೇಶನ್ ಕಮಲ, ರೆಡ್ಡಿಗಳ ದರ್ಪ, ಸುಷ್ಮಾರವರ ಮಾತುಗಳು, ಅನಂತ್ ಕುಮಾರರ ಒಳಸಂಚು ಹೀಗೆ…ಏಕಾಂಗಿತನವನ್ನ ಅನುಭವಿಸಿದ ಯಡಿಯೂರಪ್ಪನವರು ಎಡವಿದರು ಅಂದರು. ಇದೆಲ್ಲವನ್ನೂ ಒಪ್ಪೋಣ ಆದರೆ ಸ್ವಲ್ಪ ಹಿಂದಿನದನ್ನು ಮೆಲುಕು ಹಾಕಿದರೆ ಇದೇ ಪ್ರತಾಪ್ ಸಿಂಹ ಅವರು ಯಡಿಯೂರಪ್ಪ ಅವರನ್ನ ತಮ್ಮ ಎರಡು ಮೂರು ಲೇಖನದಲ್ಲಿ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದರು…( ೨೦೦೮ ರ ಲೇಖನಗಳು.. ಅವರ ಬ್ಲಾಗ್ ನಲ್ಲಿ ಈಗಲೂ ಲಭ್ಯವಿದೆ) ವರ್ಗಾವಣೆಯ ಕುರಿತಾಗಿ, ನಿವೃತ್ತಿ ವಯಸ್ಸನ್ನು ಏರಿಸಿದ್ದುದರ ಕುರಿತಾಗಿ ಹೀಗೆ ಹಲವು ವಿಷಯಗಳಲ್ಲಿ ನೇರವಾಗಿ ದೋಷಾರೋಪಣೆ ಮಾಡಿದ್ದ ಪ್ರತಾಪರಿಗೆ ಈಗ ಯುಡಿಯೂರಪ್ಪನವರ ತಪ್ಪುಗಳು ಕೂಡ ಬಿಜೆಪಿಯ ಸೋಲಿಗೆ ಒಂದು ಕಾರಣ ಅಂತನ್ನಿಸದೇ ಇರೋದು ನನಗೇಕೋ ಸರಿ ಅನ್ನಿಸಲಿಲ್ಲ. ಯಡಿಯೂರಪ್ಪನವರ ಪುತ್ರ ಪ್ರೇಮದ ಬಗ್ಗೆ ಟೀಕಿಸಿದ್ದ ಪ್ರತಾಪರು ಯಾಕೋ ಇಲ್ಲಿ ಅದನ್ನ ಉಲ್ಲೇಖಿಸಲಿಲ್ಲ. ಬಿಜೆಪಿಯಿಂದ ಹೊರ ಬಂದ ಮೇಲೆ ಯಡಿಯೂರಪ್ಪನವರ ನಡೆಯ ಬಗೆಗೆ ಯಾವುದೇ ರೀತಿಯ ಮಾತುಗಳನ್ನಾಡದೇ “ಬಿಜೆಪಿ” ಯಡಿಯೂರಪ್ಪನವರ ಬಳಿ ಹೋಗಿ ಅವರನ್ನ ಕರೆತರುವ ಪ್ರಯತ್ನ ಮಾಡಬೇಕು ಅಂದರು.

ಮತ್ತಷ್ಟು ಓದು »

7
ಜೂನ್

ಶಿವ ನಾನು, ಶಿವ ನಾನು!

Shankaraacharya1ಈ ಬರಹವು ’ಎಲ್ಲರ ಕನ್ನಡ ‘ ದಲ್ಲಿದೆ.ಎಲ್ಲರ ದನಿಗೂ ವೇದಿಕೆಯಾಗುವ ನಿಲುಮೆಯ ಎಂದಿನ ನಿಲುವಿನಂತೆ ಈ ಲೇಖನವನ್ನು “ನಿಲುಮೆ” ಪ್ರಕಟಿಸುತ್ತಿದೆ.ಆದರೆ ವಿಷಯಗಳು ಸಾಮಾನ್ಯ ಕನ್ನಡಿಗರಿಗೆ ತಲುಪಬೇಕೆಂದರೆ ವಿಷಯ ಸಾಮಾನ್ಯ ಕನ್ನಡದಲ್ಲಿದ್ದರೆ ಒಳಿತಾದ್ದರಿಂದ ಪ್ರಚಲಿತ ಬಳಕೆಯಲ್ಲಿರುವ ಕನ್ನಡದ ಲೇಖನಗಳನ್ನು ಅಪೇಕ್ಷಿಸುತ್ತದೆ.

– ಕಿರಣ್ ಬಾಟ್ನಿ

{ಇತ್ತೀಚೆಗೆ ಜಾತಿಗಳ ಬಗೆಗಿನ ಚರ‍್ಚೆ ಹಾದಿ ತಪ್ಪುತ್ತಿದೆ ಎಂದು ನನ್ನ ಅನಿಸಿಕೆ. ಒಂದು ಕಡೆ ’ಬಲಗಡೆ’ಯವರಲ್ಲಿ ಮುಂಚೂಣಿಯಲ್ಲಿದ್ದಾರೆ ಎನಿಸಿಕೊಂಡವರು ಬಾರತದಲ್ಲಿ ಜಾತಿಯೇರ‍್ಪಾಡೆಂಬುದೇ ಇಲ್ಲ ಎಂದು ವಾದಿಸಿ ಆ ಮೂಲಕ ಕೂಡಣಮಾರ‍್ಪಿಗೆ ಅರ‍್ತವೇ ಇಲ್ಲವೆಂಬ ಅನಿಸಿಕೆಯನ್ನು ಬಿತ್ತುತ್ತಿದ್ದಾರೆ. ಇನ್ನೊಂದು ಕಡೆ ’ಎಡಗಡೆ’ಯವರಲ್ಲಿ ಜಾತಿಯೇರ‍್ಪಾಡಿನ ಕೆಡುಕುಗಳ ಬಗ್ಗೆ ಹಾಡಿ ಗೋಳಾಡುವುದೇ ಒಂದು ಕಸುಬಾಗಿ ಬಿಟ್ಟಿರುವುದರಿಂದ ಅವರಿಂದ ಕೂಡಣಮಾರ‍್ಪಿನ ನಿಟ್ಟನ್ನು ಬಯಸುವುದೇ ತಪ್ಪೆಂಬಂತಿದೆ. ಇನ್ನು ಇವೆರಡು ಗುಂಪುಗಳು ಅರಿವನ್ನು ಹಂಚಿಕೊಳ್ಳುವುದಂತೂ ದೂರದ ಮಾತು.

ಇವೆರಡರ ನಡುವಿನ ಹಾದಿಯೊಂದನ್ನು ನಾವು ಕಂಡುಕೊಳ್ಳದೆ ಹೋದರೆ ಒಟ್ಟಾರೆಯಾಗಿ ಕನ್ನಡಿಗರಿಗೆ ಏಳಿಗೆಯಿಲ್ಲ ಎಂಬ ನಂಬಿಕೆ ನನ್ನಲ್ಲಿ ಬಹಳ ಗಟ್ಟಿಯಾಗಿದೆ. ’ಎಲ್ಲರಕನ್ನಡ’ವನ್ನು ನಾನು ಒಪ್ಪಿ ಅದನ್ನೇ ಬಳಸುವ ಹಟ ಹಿಡಿದಿರುವುದಕ್ಕೆ ಈ ನಂಬಿಕೆ ಒಂದು ಮುಕ್ಯವಾದ ಕಾರಣ. ಹುಟ್ಟಿನಿಂದ ಮಾದ್ವ ಬ್ರಾಮಣ ಜಾತಿಗೆ ಸೇರಿದ ನಾನು ಈ ನಡುಹಾದಿಯಲ್ಲಿ ನಡೆಯುವಾಗ ಸಂಸ್ಕ್ರುತದಲ್ಲಿ ಈಗಾಗಲೇ ಇರುವ ಮತ್ತು ಕನ್ನಡದ ಕೂಡಣವನ್ನು ಒಡೆಯದೆ ಅದನ್ನು ಇಡಿಯಾಗಿ ಆದ್ಯಾತ್ಮಿಕ ಎತ್ತರಕ್ಕೊಯ್ಯುವಂತಹ ಅರಿವನ್ನು ನನ್ನ ಕಯ್ಲಾದಶ್ಟು ಎಲ್ಲರಕನ್ನಡಕ್ಕೆ ತರಬೇಕಾದುದು ನನ್ನ ಕರ‍್ತವ್ಯವೆಂದೇ ತಿಳಿದುಕೊಂಡಿದ್ದೇನೆ.

ಇಲ್ಲಿ ಬಹಳ ಚಿಕ್ಕದಾದ ಅಂತಹ ಒಂದು ಮೊಗಸನ್ನು ಮಾಡಿದ್ದೇನೆ. ಎಲ್ಲರಕನ್ನಡದಲ್ಲಿ ಹೀಗೆ ಗೇದರೆ ಬ್ರಾಮಣರು ಜಾತಿಯೇರ‍್ಪಾಡನ್ನು ಕೆಡವಲು ನೆರವಾಗಬಹುದು ಮತ್ತು ಬ್ರಾಮಣಿಕೆಯನ್ನು ಒಂದು ಜಾತಿಯಂತೆ ಕಾಣುವುದನ್ನು ನಿಲ್ಲಿಸಿ ಹಿಂದಿನ ಬ್ರಾಮಣರು ಮಾಡಿದ ಕೆಲಸದಲ್ಲಿ ನಿಜವಾಗಲೂ ಉಳಿಸಿಕೊಳ್ಳತಕ್ಕುದನ್ನು ಉಳಿಸಿಕೊಂಡು ಆ ಮೂಲಕ ಕೂಡಣಕ್ಕೆ ನೆರವಾಗಬಹುದು. ಇದನ್ನು ಎಶ್ಟು ಸಾರಿ ಕೂಗಿ ಹೇಳಿದರೂ ಸಾಲದು. – ಕಿ. ಬಾ.}

ಮತ್ತಷ್ಟು ಓದು »