ಕೃಷ್ಣ ಗಾರುಡಿ ವರ್ಸಸ್ ನರೀಂದ್ರ ಮೋಡಿ!
– ತುರುವೇಕೆರೆ ಪ್ರಸಾದ್
ಮೋದಿ: ಗುರುಗಳೇ, ಕಮಲ ಸೈನ್ಯದ ಮುಂದಿನ ಮಹಾಸಮರ ದಳಪತಿಯಾಗಿ ನೇಮಿಸಲ್ಪಟ್ಟಿರುವೆ. ಕೃಪೆ ಮಾಡಿ ಆಶೀರ್ವದಿಸಿ
ಅಡ್ವಾನಿ: ಛೀ! ಗುರುದ್ರೋಹಿ, ತೊಲಗಿಲ್ಲಿಂದ! ನಿನ್ನ ಮುಖ ತೋರಿಸಬೇಡ ನನಗೆ..!
ಮೋದಿ: ಈ ದುರಾಗ್ರಹವೇಕೆ ಗುರುವೇ! ಇದು ನೀವೇ ಕಲಸಿಕೊಟ್ಟ ಪಟ್ಟು.. ಏಕೀ ವಿರೋಧ? ಗುರು ಮಿಂಚಿನ ಶಿಷ್ಯಡು ಎಂದು ಎದೆ ತಟ್ಟಿ ಹೇಳುವುದು ಬಿಟ್ಟು! ನಿಮ್ಮ ಮುಖವಾಣಿಯಾಗಿದ್ದ ನನಗೇ ನೀವು ಅಡ್ಡವಾಣಿಯಾಗುವುದೇ?
ಅಡ್ವಾನಿ: ರಥ ಹತ್ತಿ ಅತಳ ಸುತಳ ಪಾತಾಳ ಸುತ್ತಿದ ಈ ಅತಿರಥ ಮಹಾರಥನ ಮುಂದೆ ನೀನ್ಯಾವ ಲೆಕ್ಕ?
ಮೋದಿ: ಯಾರು ತಿಳಿಯರು ನಿಮ್ಮ ರಥಬಲದ ಪರಾಕ್ರಮ
ಸಂದಿಗೊಂದಿಗಳೊಳ್ ಸಂಚರಿಸಿದ ನಿಮ್ಮ ರಥಯಾತ್ರೆಗಳ ಕರ್ಮ
ಎಲ್ಲದಕೂ ಕಾರಣವು ಶ್ರೀ ರಾಮ ನಾಮ
ಕಲ್ಯಾಣಸಿಂಗ್ ಇಲ್ಲದಿದ್ದರೆ ಮೂರು ನಾಮ
ಕಡಾಣಿ ಮುರಿದ ರಥದೊಡೆಯ ನೀವು ತೃಣಕ್ಕೆ ಸಮಾನ..!
ಅಡ್ವಾನಿ: ಜನಸಂಘ ಶೂರ ನಾ ಶ್ರೀರಾಮ ಬಲನೋ, ಸಂಘದೊಡನೆ ಹೋರಾಡಿ ಅಧ್ಯಕ್ಷ ಗಾದಿಯಂ ಪಡೆದವನೋ,ಗಡ್ಕರಿಯ ಉತ್ಸವಕೆ ಸಂಚಕಾರ ತಂದವನೋ? ಪ್ರಧಾನಿ ಪಟ್ಟಕ್ಕೆ ಎದುರಾಗೋ ಕುರಿಗಳಂ ನೀವಾಳಿಸೋ ವ್ಯಾಘ್ರನಿವನೋ..ಉಗ್ರ ಪ್ರತಾಪಿ..
ಮೋದಿ: ಓ ಹೋಹೋ ಮುದಿ ವ್ಯಾಘ್ರ ಹಾಂ! ಉಗ್ರ ಪ್ರತಾಪಿ ಅಲ್ಲ ಉಗ್ರರನ್ನು ಬಿಟ್ಟ ಒಣ ಪ್ರತಾಪಿ.. ಜಿನ್ನನ ಹೊಗಳಿ ಗುನ್ನ ಹಾಕಿಸಿಕೊಳ್ಳುವಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ, ಧನಂಜಯ ಕತೆ ಕಟ್ಟಿ ದುಡ್ಡು ಹೊಡೆದೆನೆಂದಾಗ ತುಟಿ ಬಿಚ್ಚದವರು ನೀವು,ಲೆಹರ್‍ಸಿಂಗ್ ಆರೋಪಗಳಿಗೆ ಮೌನವಾಗುಳಿದ ಮೋಹ ಪುರುಷ ನೀವು, ಮೋಹನ ಪುಂಗಿಗೆ ತಲೆದೂಗಿ ಬಿಟ್ಟ ಬಾಣವ ಮತ್ತೆ ತೊಟ್ಟವರು ನೀವು..ಮುಂದಿನ ಎಲೆಕ್ಷನ್ ರಥಕ್ಕೆ ಸಾರಥಿಯಾಗೋ ಧಂ ಎಲ್ಲಿ , ತೆಪ್ಪಗೆ ರಾಜಕೀಯ ಸನ್ಯಾಸ ಸ್ವೀಕರಿಸಿರೋ ಬುಡ್ಡಾ
ಅಡ್ವಾನಿ: ಫಡಾ ಫಡಾ ಬುಡ್ಡನೆಂದಡಿಗಡಿಗೆ ನುಡಿಯ ಬೇಡೋ ಮೂಡಾ..ಭರತ ಖಂಡವ ಬುಡ್ಡರೇ ಆಳಲು ಗುತ್ತಿಗೆಯ ಪಡೆದಿಹರು ಕಣ್ ಬಿಟ್ಟು ನೋಡಾ! ಗೋದ್ರಾ ಕುಂಡದಲಿ ಬಿದ್ದು ಕೊತ ಕೊತನೆ ಕುದಿಯುವಾಗ ಮೇಲೆತ್ತಿ ಮರು ಜನ್ಮ ನೀಡಿದವರು ಯಾರು? ನಾ..ಇಲ್ಲದಿರೆ ನೀ ಸೂರತ್ ತಿಪ್ಪೆಯ ನೊಣವಾಗುತ್ತಿದ್ದೆಯೋ ಎಲೆ ನರೀಂದ್ರ..
ಮೋದಿ: ಗುರುವರ್ಯ, ಗುರು ಶಿಷ್ಯರಲ್ಲಿ ಏಕೆ ಈ ವಿರಸ? ನಿಮ್ಮ ಕಾಲ ಮುಗಿಯಿತು..! ನೀವೀಗ ಶರಶಯ್ಯೆಯಲ್ಲಿ ಮಲಗಿರುವ ಭೀಷ್ಮ. ಇನ್ನೂ ಎಂತ ಆಸೆ ನಿಮ್ಮದು ಕುರು ಪಿತಾಮಹ?
ಅಡ್ವಾನಿ: ಅಧಿಕಾರದಾಸೆಗೆ ಗುರುವಿಗೆ ಬೆನ್ನ ಹಿಂದೆ ಚೂರಿಹಾಕಿದ ಘಾತುಕ ನೀನು..ಅಧಿಕಾರ ಎನ್ನುವುದೇನು ಸುಪ್ಪತ್ತಿಗೆ ಎಂದು ಭಾವಿಸಿರುವೆಯಾ ಮೂಡ? ಅದೂ ಶರಕುರ್ಚಿ. ನಿನ್ನ ಪೃಷ್ಟದಲ್ಲೊಂದು ಕುರುವೋ ಹದಗಡಲೆಯೋ ಆಗುವಂತೆ ಮಾಡಿ ನೀನೂ ಕೂರಲಾಗದೆ ವಿಲವಿಲ ಒದ್ದಾಡುವಂತೆ ಮಾಡುವವರೆಗೆ ನಾನು ವಿರಮಿಸೆನು..
ಮೋದಿ: ಪೇಷಾವರದ ಮುದಿ ಕುದುರೆಯಂತೆ ಏಕೀ ವ್ಯರ್ಥ ಹೇಶಾರವ? ವಾಸ್ತವದ ಬಗ್ಗೆ ಯೋಚನೆ ಮಾಡಿ. ಈ ವಯಸ್ಸಲ್ಲಿ 2ಜಿ,3ಜಿ ಹಗರಗಣಗಳ ಸೃಷ್ಟಿಸಲು ನಿಮಗೆ ಸಾಧ್ಯವೇ? ಸ್ವಿಸ್ ಬ್ಯಾಂಕಿಂದ ಈ ದೇಶದ ಕಪ್ಪು ಹಣ ಈಚೆ ತರುವುದು ಸಾಧ್ಯವೇ? ರೂಪಾಯಿಗೆ 2ಕೆಜಿ ಅಕ್ಕಿ ಕೊಡುವ ತಾಕತ್ತು ನಿಮಗಿಹುದೇ? ಯಯಾತಿಯಂತೆ ದುರಾಸೆ ಪಡುವುದು ಬಿಟ್ಟು ಲಾಲ್-ಛೀ ! ಅನಿಸಿಕೊಳ್ಳದೆ ಯತಿಯಾಗಿ ಗೌರವ ಉಳಿಸಿಕೊಳ್ಳಿ
ಅಡ್ವಾಣಿ: ಮೂಢ! ಬಿಜೆಪಿಯ ಅಶ್ವಮೇಧ ಯಾಗಕ್ಕೆ ಕುದುರೆ ಬಿಟ್ಟ ಭೂಪ ನಾನು.. ಕುದುರೆ ಕಟ್ಟಿದ ಪಾಳೇಗಾರರರನ್ನು , ಸಾಮಂತರನ್ನು ಬಗ್ಗು ಬಡೆದು ಸಿಂಹಾಸನದ ಬಳಿ ಬರುವ ವೇಳೆಗೆ ಅಟಲ್‍ಜೀ ಪಟ್ಟ ಕಟ್ಟಿಸಿಕೊಂಡರು. ಕರುನಾಡಲ್ಲಿ ನಿನ್ನೆ ಮೊನ್ನೆ ಕತ್ತೆ ಕಟ್ಟಿದವರೆಲ್ಲಾ ಪೊಗಡದಸ್ತಾಗಿ ಮೇದು ಮನೇಲಿ ಮೆಲುಕು ಹಾಕ್ತಾ ಕೂತಿದಾರೆ..’ನನ್ನ ಕಂಟ್ರಿ, ನಾನಾಗಲಿಲ್ಲ ಪ್ರಧಾನ ಮಂತ್ರಿ’ ಪುಸ್ತಕ ಬರೆದಿದ್ದೇ ಆಯ್ತು..ನಾನು ಪ್ರಧಾನಮಂತ್ರಿ ಆಗೋದು ಯಾವಾಗ?
ಮೋದಿ: ಅದೆಲ್ಲಾ ಮುಗಿದು ಹೋದ ಅಧ್ಯಾಯ..ಅಧಿಕಾರವೆಂಬ ಹುಡುಗಿಯಾಸೆಗೆ ಹಲ್ಲು, ಉಗುರು ಕಿತ್ತುಕೊಂಡ ಮುದಿಸಿಂಹ ನೀವು? ಗುಹೇಲಿ ಗಾಯ ನೆಕ್ಕಿಕೊಂಡು ಕೂತಿರೋದು ಬಿಟ್ಟು ಯಾಕೆ ಮಯೂರ ವರ್ಮನ ತರ ಕನವರಿಸ್ತೀರಿ?
ಅಡ್ವಾನಿ: ಇಷ್ಟಕ್ಕೇ ಎಲ್ಲ ಮುಗಿದು ಹೋಯಿತು, ನಾನು ಪಟ್ಟ ಹತ್ತೇ ಬಿಡ್ತೀನಿ ಅನ್ನೋ ಭ್ರಮೆ ಬೇಡ..ಈಗಲೂ ನನ್ನ ಜೊತೆ ಸಮಾನ ಮನಸ್ಕರು, ಸಮಾನ ಮನೆ ಮುರುಕರು ಇದ್ದಾರೆ. ಅವರನ್ನೆಲ್ಲಾ ಕಟ್ಕಂಡು ಮೂರನೇ ರಂಗ ಮಾಡ್ತೀನಿ..
ಮೋದಿ: ಇದೇ ಮೊದ್ಲಿಂದನೂ ನೀವು ಮಾಡ್ಕಂಡ ಎಡವಟ್ಟು.. ಗಾಂಧೀಜಿಯ ಮೂರು ಮಂಗನ ನೆಚ್ಕಂಡು ಹಾಳಾಗಿದ್ದಾಯ್ತು. ಈಗ ತೃತೀಯ ರಂಗ, ಮಮತಾ ಮಂಚ, ಜಯಾಲಂಗ ಅಂತ ಹಿಡಿಯಕ್ಕೆ ಹೊರಟಿದೀರಿ..ಇದೆಲ್ಲಾ ಬೇಕಾ ನಿಮಗೆ?
ಅಡ್ವಾನಿ: ಮತ್ತೆ ನೀನು ಆಡಿದ್ದೇ ಆಟ ಹೂಡಿದ್ದೇ ಲಗ್ಗೆ ಅಂತ ಸುಮ್ನೆ ಬಿಟ್‍ಬಿಡಕ್ಕಾಗುತ್ತಾ?
ಮೋದಿ: ಅಟಲ್‍ಜೀ ಪಾರುಪತ್ಯ ಮುಗಿದ ಮೇಲೆ ಬಿಜೆಪಿ ಶಟಲ್‍ಜೀ ಆಗಿದೆ. ರಾಮ್ ಗೇಟ್ ಮುಲಾನಿಗೆ ಗೇಟ್ ಪಾಸ್ ಕೊಟ್ಟ ಹಾಗೇ ನಿಮಗೂ ಗೇಟ್ ಪಾಸ್ ಕೊಡ್ತೀವಿ ಅಷ್ಟೇ..
ಅಡ್ವಾನಿ: ಏನು ಹೆದರಿಸ್ತೀಯಾ? ನೀವೇನು ಗೇಟ್‍ಪಾಸ್ ಕೊಡೋದು? ನಾನೇ ಬಿಜೆಪಿಯಿಂದ ಆಚೆ ಹೋಗ್ತೀನಿ..
ಮೋದಿ:ನೀವು ಹೋದ್ರೆ ನಿಮ್ಮ ಹಿಂದೆ ಯಾರು ಬರ್ತಾರೆ? ಚರಿಷ್ಮಾ ಬರೋ ಕಾಲದಲ್ಲಿ ನಿಮ್ಮ ಹಿಂದಿರೋರು ಬರೀ ಸುಷ್ಮಾ..ನನ್ನ ಹಿಂದೆ ಕರಿಷ್ಮಾ ತರ ಪಡ್ಡೆ , ತುಂಡು ಹೈಕ್ಳ ಗ್ಯಾಂಗೇ ಇದೆ..
ಅಡ್ವಾನಿ: ನನ್ನ ಹಳೇ ಶಿಷ್ಯ ಯಡಿಯೂರಪ್ಪ ಇದಾರೆ,ಲೆಹರ್ ಸಿಂಗ್ ಇದಾರೆ.ಅನಂತು, ಜೇಟ್ಲಿ, ಸಿನ್ಹಾ ಸ್ಕ್ವೈರ್, ಮುಲಾಮ್, ನಿತೀಶ್,ಯಾದವ್, ಈ ತರ ನಿನಗೆ ಬೇದಿ ಮಾತ್ರೆ ಕೊಡೋರು ಬೇಕಾದಷ್ಟು ಜನ ಇದಾರೆ. ನಾನು ಯಡಿಯೂರಪ್ಪನೋರ ತರ ಎಂಕೆಪಿ ಪಕ್ಷ ಕಟ್ತೀನಿ..!
ಮೋದಿ: ಎಂಕೆಪಿ ಅಂದ್ರೆ?
ಅಡ್ವಾನಿ: ಮೋದಿ ಕಾಲೆಳೆಯೋ ಪಕ್ಷ..
ಮೋದಿ: ನೋಡಿ, ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ ಅನ್ನೋ ಹಾಗೆ ಅತ್ರೂ ಸತ್ರೂ ನಿಮಗೆ ಪ್ರಧಾನಿ ರೋಲ್ ಸಿಗಲ್ಲ,ಆ ನಾಟಕದ ಮಾಸ್ಟ್ರು ಭಾಗವತರು ನನ್ ಕಡೆ ಇದಾರೆ.. ನೀವು ಲಾಲ್ ಕೃಷ್ಣ..ಕೃಷ್ಣ ಎಂದಾದರೂ ಹಸ್ತಿನಾವತಿ ರಾಜ್ಯ ಆಳಿದಾನಾ? ಅವನೇನಿದ್ರೂ ಪಾಂಡವರ ರಥ ಹೊಡೆಯೋ ಸಾರಥಿ ಅಷ್ಟೇ.. ನನ್ನ ಮಾತು ಕೇಳದಿದ್ರೆ ನಿಮಗೂ ಅಸ್ಥಿ ನ ಅಸ್ತಿ ಅಗುತೆ ಅಷ್ಟೇ!
ಅಡ್ವಾನಿ: ನನಗೆ ಗದ್ದುಗೆ ಸಿಗದಿದ್ರೆ ಬೇಡ, ನನಗೆ ಸಿಗದ್ದು ನಿನಗೂ ಸಿಗಕೂಡದು..!
ಮೋದಿ: ನೋಡಿ ಗುರುವರ್ಯ, ಸುಮ್ನೆ ಯಾಕೆ ನಮ್ಮಿಬ್ಬರ ನಡುವೆ ಗದ್ದುಗೆಗೆ ಗುದ್ದಾಟ? ನನ್ನನ್ನ ಪ್ರಧಾನಿ ಆಗಕ್ಕೆ ಬಿಟ್ಟು ತ್ಯಾಗ ಮಾಡಿ..ನಿಮ್ಮ ಔದಾರ್ಯನ ಇಡೀ ಸಂಘ ಕೊಂಡಾಡುತ್ತೆ..
ಅಡ್ವಾನಿ: ಆ ಚಡ್ಡಿ ಸಂಘದ ಸಹವಾಸವೇ ಬೇಡ..ನಿನ್ನಂತಹ ಗುರು ದ್ರೋಹಿ ಯಾವುದೇ ಕಾರಣಕ್ಕೆ ಪ್ರಧಾನಿ ಆಗಬಾರದು..
ಮೋದಿ: ಗುರುವರ್ಯ, ಹಠಕ್ಕೆ ಬಿದ್ದು ನನ್ನ ಅವಕಾಶ ಹಾಳು ಮಾಡಿ ನೀವೂ ಹತಾಶರಾಗಬೇಡಿ..ನನ್ನದೊಂದು ಅರಿಕೆಯಿದೆ.. ಅದನ್ನು ನೀವು ಮನ್ನಿಸುವಿರಾದರೆ ನಾನು ಶಿರಸಾವಹಿಸಿ ನೀವು ಹೇಳಿದಂತೆ ಕೇಳುತ್ತೇನೆ..
ಅಡ್ವಾನಿ: ಅದೇನು ಬೊಗಳು ದ್ರೋಹಿ..
ಮೋದಿ: ಗುರುಗಳೇ, ನಂಜೊತೆ ಕೈ ಜೋಡಿಸಿ, ಹಳೇ ರಥಕ್ಕೆ ಕಡಾಣಿ ಸಿಕ್ಕಿಸಿಕೊಂಡು ಹೊರಡಿ..ನಾವು ಸಮರದಲ್ಲಿ ಗೆದ್ದರೆ ನಾನು ಪ್ರಧಾನ ಮಂತ್ರಿ..
ಅಡ್ವಾನಿ: ಅಯ್ಯೋ ಮುಠ್ಠಾಳ! ನಿನ್ನನ್ನ ಗೆಲ್ಲಿಸೋಕೆ ನಾನು ಗ್ಯಾರೇಜಿಂದ ರಥ ತೆಗೀಬೇಕಾ?
ಮೋದಿ: ಪೂರಾ ಕೇಳಿ ಗುರುಗಳೇ..! ನಾನು ಪ್ರಧಾನಿ, ನೀವು ಸೋನಿಯಮ್ಮನ ತರ ರಾಷ್ಟ್ರೀಯ ಸಲಹಾ ಸಮಿತಿ ಅಧ್ಯಕ್ಷರು..! ನೀವು ಹೇಳಿದಂಗೆ, ನಾ ಮಾಡಿದಂಗೇ ಎಲ್ಲಾ ನಡೀಬೇಕು..ಈ ಗಡ್ಡಕೆರಿ, ಅನಾಥ ಸಿಂಗ್ ಇವರನ್ನೆಲ್ಲಾ ಮೂಲೆಗಟ್ಟಿ ಬಿಡೋಣ..ಏನಂತೀರಿ?
ಅಡ್ವಾನಿ ಕೊನೆಗೂ ಶಿಷ್ಯನ ಚಾಣಾಕ್ಷತನಕ್ಕೆ ಮರುಳಾಗಿ ಮುಗಳ್ನಕ್ಕರು. ಮೋದಿ ‘ವಾಹ್ ಮೈ ಜೀತ್ ಗಯಾ..!’ ಎಂದು ಕುಣಿದು ಕುಪ್ಪಳಿಸಿದರು.
ಚಿತ್ರ ಕೃಪೆ : ಸತೀಶ್ ಆಚಾರ್ಯ (cartoonistsatish.blogspot.com)





Nice one!!
superb!!
ವಾಸ್ತವ್ಯ ಹಾಸ್ಯಮಯ ಏನೇ ಇದ್ರೂ ತಮ್ಮ ಮತ ಮೋದಿಗೆ ಹಾಕಿ ದಯವಿಟ್ಟು
Wonderful!!!!!!!! Advani & Modis Batachita
est chand baritiri nimma talyaaga enaiti??