ರೂಪಾಯಿ,ಪೆಟ್ರೋಲ್ ಮತ್ತು ಸ್ವದೇಶಿ
– ಪ್ರಶಸ್ತಿ.ಪಿ ಶಿವಮೊಗ್ಗ
ರೂಪಾಯಿ ಮೌಲ್ಯ ಅಪಮೌಲ್ಯ ಆಗ್ತಾ ಆಗ್ತಾ ಅದ್ರ ಬೆಲೆ ಅರವತ್ತೆಂಟು ದಾಟಾಯ್ತು.. ಇನ್ನಾದ್ರೂ ನಾವು ಎಚ್ಚೆತ್ತಿಲ್ಲ. ಮನೆಗೊಂದು ಕಾರು, ತೆಲೆಗೊಂದು ಬೈಕು ಅಂತ ಜುಂ ಜಾಮಾಗಿರೋ ನಾವು ನಮ್ಮೀ ವೈಭವದಿಂದಲೇ ಪೆಟ್ರೋಲ್ ದರ ಗಗನಕ್ಕೇರಿರೋದು ಅಂತಲೂ ತಿಳೀತಿಲ್ಲ. ಪೆಟ್ರೋಲ್ ಬೆಲೆ ಏನಾದ್ರಾಗ್ಲಿ, ಅದ್ರಿಂದ ಡಾಲರ್ ದರ ಅರವತ್ತಲ್ಲ ನೂರು ಮುಟ್ಟಿದ್ರೂ ನಮಗೇನು ಅಂದ್ರಾ ? ಡಾಲರ್ ದರ ಹೆಚ್ಚಾದಷ್ಟೂ ಟೆಕ್ಕಿಗಳಿಗೆ, ರಫ್ತು ಮಾಡೋರಿಗೆ ಲಾಭವೇ ಅಲ್ವಾ ? ದೇಶಕ್ಕೇನಾದ್ರೆ ನಮಗೇನು ಅಂದ್ರಾ ? !! ರಫ್ತೆಂದರೆ ಚೀನಾದಂತೆ ಬೇಕಾಬಿಟ್ಟಿ ವ್ಯವಹಾರವಲ್ಲ, ಅಗ್ಗದ ದರದಲ್ಲಿ ಚೀನಾದವ್ರೂ ಎಲ್ಲಾ ಕಡೆ ಕಸದಂತೆ ತಂದು ಎಲ್ಲಾ ದೇಶಗಳಲ್ಲಿ, ಭಾರತಕ್ಕೂ ತಂದು ಸುರಿತಿರುವಾಗ, ಕೂಲಿಯಿಂದ ಹಿಡಿದು ಕಚ್ಚಾವಸ್ತುಗಳವರೆಗೆ ಎಲ್ಲದರ ಬೆಲೆ ಏರಿದ್ರೂ ಗುಣಮಟ್ಟ ಕಾದುಕೊಳ್ಳೋ ಅನಿವಾರ್ಯತೆಯಿರೋ ಭಾರತೀಯ ರಫ್ತು ಉದ್ಯಮಕ್ಕೂ ಹೊಡೆತ ಬೀಳುತ್ತಿದೆ ಅದ್ರ ಮದ್ಯ ಕೊಕ್ಕೆ ತೆಗೆಯೋ ಹೊರದೇಶಗಳ ನೂರಾರು ಕಾನೂನುಗಳು ಬೇರೆ…ಅದೆಲ್ಲಾ ದೊಡ್ಡ ತಲೆ ನೋವು ಅಂದ್ರಾ ? ಸರಿ,ಹೋಗ್ಲಿ ಬಿಡಿ.ಅದಿರ್ಲಿ, ಪೆಟ್ರೋಲ್ ಬೆಲೆ ಏರ್ತಾ ಇದ್ರೂ ರೂಪಾಯಿ ಬೆಲೆ ಇಳಿತಾ ಇದ್ರೂ ಘನ ಸರ್ಕಾರ ಏನು ಮಾಡ್ತಾ ಇದೆ ಅಂತ ಬೊಬ್ಬೆ ಹಾಕೋ ಬದ್ಲು ಆ ಸಮಯದಲ್ಲಿ ನಮ್ಮಿಂದ ಏನಾದ್ರೂ ಮಾಡ್ಬಹುದಾ ಅಂತ್ಯಾಕೆ ಯೋಚ್ನೆ ಮಾಡ್ಬಾರ್ದು ?





