ವಿಷಯದ ವಿವರಗಳಿಗೆ ದಾಟಿರಿ

Archive for

27
ಸೆಪ್ಟೆಂ

ಭೈರಪ್ಪನವರ ಆತ್ಮಕಥನ ‘ಭಿತ್ತಿ’ ಓದುತ್ತಾ…

– ಪ್ರಶಸ್ತಿ.ಪಿ, ಸಾಗರ

Bhittiಒಂದು ಪುಸ್ತಕ ಇಷ್ಟ ಆಗ್ಬೇಕು ಅಂದ್ರೆ ಆ ಲೇಖಕನ ಪಕ್ಕಾ ಅಭಿಮಾನಿ ಆಗಿರ್ಬೇಕು ಅಂತೇನಿಲ್ಲ. ಲೇಖಕನ ಒಂದು ಪುಸ್ತಕ ಇಷ್ಟ ಆಯ್ತು ಅಂದ್ರೆ ಅವನ ಎಲ್ಲಾ ಪುಸ್ತಕಗಳು ಇಷ್ಟ ಆಗ್ಬೇಕು ಅಂತನೂ ಇಲ್ಲ. ಆ ಲೇಖಕ ಹಾಗೆ ಹೀಗೆ, ಆ ಪಂಥ, ಈ ಪಂಥ ಅಂತೆಲ್ಲಾ ಪೂರ್ವಾಗ್ರಹಗಳನ್ನ ಇಟ್ಕೊಳ್ದೇ ಪುಸ್ತಕವನ್ನು ಎಲ್ಲದರ ತರಹದ ಸುಮ್ನೆ ಒಂದು ಪುಸ್ತಕ ಅನ್ನೋ  ಓದೋ ಪ್ರಯತ್ನ ಮಾಡಿದ್ರೆ ಪುಸ್ತಕ ಓದೋ ಸವಿ ಸವಿಯಬಹುದೇನೋ ಅಂತೊಂದು ಅಭಿಪ್ರಾಯ. ಈ ಪೀಠಿಕೆಗಳನ್ನೆಲ್ಲಾ ಬದಿಗಿಟ್ಟು ಹೇಳೋದಾದ್ರೆ , ಇವತ್ತು ಹೇಳೊಕೆ ಹೊರಟಿರೋ ಬುಕ್ಕು ಇತ್ತೀಚೆಗೆ ಎತ್ಕೊಂಡ ಪುಸ್ತಕ ಭೈರಪ್ಪನವರ ಆತ್ಮಕಥನ ಭಿತ್ತಿ.

ಸಂತೇಶಿವರ ಅನ್ನೋ ಊರಲ್ಲಿ ಹುಟ್ಟೋ ಭೈರಪ್ಪನವರಿಗೆ ಹುಟ್ಟಾ ಕಷ್ಟಗಳು.ಶ್ಯಾನುಭೋಗಿಕೆಯ ಮನೆತನ. ಆದರೆ ಅಪ್ಪ ಪಕ್ಕಾ ಆಲಸಿ, ಜವಾಬ್ದಾರಿಯಿಲ್ಲದವ. ಅಮ್ಮ ಊರೆಲ್ಲಾ ಸುತ್ತಿ ಕಷ್ಟಪಟ್ಟು ಲೆಕ್ಕ ಬರೆಯೋದು. ಊರವರು ವರ್ಷಾಂತ್ಯದಲಿ ತಂದು ಕೊಟ್ಟ ರಾಗಿಯನ್ನ ಮಾರಿ ಅದರ ದುಡ್ಡು ಖರ್ಚಾಗೋವರೆಗೂ ಅರಸೀಕೆರೆಯಲ್ಲಿದ್ದು ಹೋಟೆಲಿನಲ್ಲಿ ತಿನ್ನೋಕೆ ಅಲ್ಲಿ, ಇಲ್ಲಿ ಅಂತ ದುಂದು ಮಾಡಿ ಬರುವಂತಹ ಅಪ್ಪ. ಬುಡದಿಂದ ಪುಸ್ತಕದ ಮಧ್ಯಭಾಗದಲ್ಲಿ ಅಪ್ಪನ ದೇಹಾಂತ್ಯವಾಗೋ ತನಕವೂ ಅಪ್ಪನ ಗೋಳು ಹೀಗೆ ಮುಂದುವರೆಯುತ್ತದೆ. ಅವನ ಗೋಳು ಒಂದಲ್ಲಾ ಎರಡಲ್ಲ. ಪ್ರೈಮರಿಯಿಂದ ಮಾಧ್ಯಮಿಕಕ್ಕೆ ಅಂತ ಬೇರೆ ಕಡೆ ಶಾಲೆಗೆ ಹೋಗಬೇಕಾಗಿರತ್ತೆ. ಖರ್ಚಿಗೆ ಅಂತ ಸಂತೆಗೆ ಹೋಗಿ ಶರಬತ್ತು ಮಾರಿ ೨೫ ರೂಪಾಯಿ ಕೂಡಿಸಿರುತ್ತಾನೆ ಮಗ. ಮಗ ಎಲ್ಲೋ ಹೋದ ಸಂದರ್ಭದಲ್ಲಿ ಆ ಇಪ್ಪತ್ತೈದು ರೂಪಾಯಿ ಲಪಟಾಯಿಸಿ ಅದಕ್ಕೆ ಏನೇನೋ ತರ್ಕದ ಸಮರ್ಥನೆ ಕೊಡ್ತಿರ್ತಾನೆ ಅಪ್ಪ. ಮುಂದೆ ಬೇರೆ ಊರಲ್ಲಿ ಭಿಕ್ಷಾನ್ನ ಮಾಡಿ ಶಾಲೆಗೆ ಹೋಗ್ತಿರುತ್ತಾನೆ ಮಗ.ಅಲ್ಲಿಗೂ ಬಂದ ಅಪ್ಪ ದುಡ್ಡು ಕೇಳುತ್ತಾನೆ. ಇದ್ದರೆ ತಾನೆ ಕೊಡುವುದು ? ಮಗ ಭಿಕ್ಷಾನ್ನಕ್ಕೆ ಹೋಗುತ್ತಿದ್ದ ಬೀದಿ ಬೀದಿಗೆ ಹೋಗಿ ಮಗನಿಗೆ ಇನ್ನೂ ಉಪನಯನವಾಗಿಲ್ಲ, ಯಾರೂ ಭಿಕ್ಷೆ ಕೊಡಬೇಡಿ ಅಂತ ಸಾರಿ, ಇಲ್ಲಸಲ್ಲದ್ದನ್ನೆಲ್ಲಾ ಅಪಪ್ರಚಾರ ಮಾಡಿ ಸಿಗೋ ಹೊತ್ತಿನ ಊಟವನ್ನೂ ದಕ್ಕದಂತೆ ಮಾಡುತ್ತಾನೆ. ಮುಂದೆ ಭೈರಪ್ಪನ ತಾಯಿ ಸತ್ತಾಗ ಅದರ ಕರ್ಮ ಮಾಡೋ ಜವಾಬ್ದಾರಿಯನ್ನೂ ವಹಿಸಿಕೊಳ್ಳದೇ ಎಲ್ಲೋ ತಲೆಮೆರೆಸಿಕೊಳ್ಳುತ್ತಾನೆ ಅಪ್ಪ. ಮಗನೇ ಎಲ್ಲೋ ಸಾಲ ಸೋಲ ಮಾಡಿ , ಊರೂರು ಅಲೆದು ಮನೆಗೆ ನಾಲ್ಕು ಕಾಯಿಯಂತೆ ಪಡೆದು, ಅದನ್ನು ಮಾರಿ ದುಡ್ಡು ಕೂಡಿಸಿ ತಾಯಿಯ ಶ್ರಾದ್ದ ಮಾಡುತ್ತಾನೆ. ಎಲ್ಲೂ ಇಲ್ಲದ ಅಪ್ಪ, ಊಟಕ್ಕೆ ಸರಿಯಾಗಿ ಬಂದು ಊಟಕ್ಕೆ ಕೂತುಬಿಡುತ್ತಾನೆ.ಮುಂದೆಯೂ ಅಲ್ಲಿ ದುಡ್ಡು ಕೊಡು, ಇಲ್ಲಿ ಕೊಡು ಅಂತ ಅವಾಚ್ಯ ಶಬ್ದಗಳಲ್ಲಿ ನಿಂದಿಸುತ್ತಿರುವುದೇ ಆ ಪಾತ್ರದ ಕೆಲಸ.

ಮತ್ತಷ್ಟು ಓದು »