ವಿಷಯದ ವಿವರಗಳಿಗೆ ದಾಟಿರಿ

Archive for

4
ಆಗಸ್ಟ್

ಕೊಳವೆಬಾವಿ ಅವಾಂತರ-ಕೊನೆ ಹೇಗೆ?

 – ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ

ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು, ಕರ್ನಾಟಕ

borewellಸೂರಜ್ (ಉತ್ತರ ಭಾರತ), ಪ್ರಿನ್ಸ್ (ಕುರುಕ್ಷೇತ್ರ), ವಂದನಾ (ಉತ್ತರ ಪ್ರದೇಶ), ಆರತಿ ಚಾವ್ಡಾ (ಭಾವನಗರ್), ನವನಾಥ್ (ಗುಲ್ಬರ್ಗಾ), ಕರಿಯ (ದಾವಣಗೆರೆ), ಕಾರ್ತಿಕ್ (ಆಂಧ್ರ), ತಿಮ್ಮ (ಚಿತ್ರದುರ್ಗ), ಸಂಧ್ಯಾ (ಬಳ್ಳಾರಿ), ಸಂದೀಪ್ (ರಾಯಚೂರು), ಸೋನು (ಆಂಧ್ರ), ಏಗವ್ವ (ಬಿಜಾಪುರ) –ಇವರೆಲ್ಲ ಎರಡರಿಂದ ಹತ್ತು ವರ್ಷದ ಮಕ್ಕಳು. ಹೀಗೆ ಹೆಸರನ್ನು ಹೇಳುತ್ತ ಹೋದರೆ ಪ್ರಾಥಮಿಕ ಶಾಲೆಯೊಂದರ ಹಾಜರಿ ಪಟ್ಟಿಯಂತೆ ಕಾಣುತ್ತದೆ. ಇವರು 2001ರಿಂದ ಈಚೆಗೆ ದೇಶಾದ್ಯಂತ ಕೊಳವೆ ಬಾವಿಯ ಕಗ್ಗತ್ತಲ ನರಕ ಕಂಡವರು.

ಇವರಲ್ಲಿ ಪ್ರಿನ್ಸ್, ವಂದನಾ ಮತ್ತು ಸಂಧ್ಯಾ ಎಂಬ ಮೂವರು ಮಕ್ಕಳು ಮಾತ್ರ ಬದುಕಿ ಬಂದು ಹೊಸ ಜೀವನ ಕಂಡಿದ್ದಾರೆ. ತೆರೆದ ಕೊಳವೆ ಬಾವಿಗೆ ಮಕ್ಕಳು ಆಗಾಗ ಬೀಳುತ್ತಲೇ ಇರುತ್ತಾರೆ. ಇದೀಗ ಈ ಪಟ್ಟಿಗೆ ಸೇರಿದ ಹೊಸ ಹೆಸರುಗಳು ನಾಲ್ಕು ವರ್ಷದ ಪೋರಿ ವಿಜಾಪುರದ ನಾಗಠಾಣಾದ ಅಕ್ಷತಾ ಹಾಗೂ ಇದೀಗ ಕೊಳವೆಬಾವಿಯಲ್ಲಿ ಬಿದ್ದು ಹೋರಾಟ ಮಾಡುತ್ತಿರುವ ಬಾಗಲಕೋಟೆಯ ಆರು ವರ್ಷದ ಬಾಲಕ ತಿಮ್ಮಣ್ಣ.

ನೀರಿನ ಲಭ್ಯತೆ ಹೆಚ್ಚಿಸಿಕೊಳ್ಳಲು ಹೆಚ್ಚು ಹೆಚ್ಚು ಆಳದ ಕೊಳವೆ ಬಾವಿ ತೆಗೆದಂತೆಲ್ಲ ಸುತ್ತಲಿನ ತೋಡು ಬಾವಿಗಳ ನೀರು ಕೂಡ ಇಂಗಿ ಹೋಗುತ್ತದೆ. ಆಗ ಅನಿವಾರ್ಯವಾಗಿ ತೋಡು ಬಾವಿ ಉಳ್ಳವರೂ ಕೊಳವೆ ಬಾವಿ ತೆಗೆಸುತ್ತಾರೆ. ವಿಶ್ವಬ್ಯಾಂಕ್ ಭಾರತದ ಅಂತರ್ಜಲದ ಬಗ್ಗೆ ವರದಿಯೊಂದನ್ನು ನೀಡಿ ಅಂತರ್ಜಲ ಬಳಕೆ ಪ್ರಮಾಣ ಹೀಗೇ ಇದ್ದರೆ ಇನ್ನು 15 ವರ್ಷದಲ್ಲಿ ದೇಶದ ಶೇ. 60ರಷ್ಟು ಜಲಮೂಲಗಳು ಸಂಪೂರ್ಣ ಬತ್ತಿಹೋಗಲಿವೆ ಎಂದು ಎಚ್ಚರಿಸಿದೆ. ಅಂದರೆ ಕೊಳವೆ ಬಾವಿಗಳು ಮಾತ್ರವಲ್ಲ, ಕೆರೆ ಕೊಳ್ಳಗಳು ಮಾತ್ರವಲ್ಲದೇ ನದಿ ನೀರಿನ ಮೂಲಗಳು ಕೂಡ ಬತ್ತಲಿವೆ. ಕೊಳವೆ ಬಾವಿ ತಂದಿಟ್ಟ ದೊಡ್ಡ ಅಪಾಯದಲ್ಲಿ ಇದೂ ಒಂದು.

ಜನರಿಗೆ ಸುಲಭವಾಗಿ ನೀರು ಕುಡಿಸುವುದಕ್ಕೂ ಮತಬೇಟೆಗೂ ನೇರ ಸಂಬಂಧವಿದೆ. ಈಗಂತೂ ಸಂಸತ್‍ನಿಂದ ಹಿಡಿದು ನಗರ ಸಭೆ, ಪಂಚಾಯ್ತಿವರೆಗೆ ಒಂದಲ್ಲ ಒಂದು ಚುನಾವಣೆ ಆಗಾಗ ನಡೆಯುತ್ತಲೇ ಇರುವುದರಿಂದ ಕೊಳವೆಬಾವಿ ತೋಡಿಸಿ ನೀರಿನ ವ್ಯವಸ್ಥೆ ತೋರಿಸಿ ಜನರನ್ನು ಸುಲಭವಾಗಿ ಮರುಳುಗೊಳಿಸುವ ಯತ್ನ ನಡೆಯುತ್ತಲೇ ಇರುತ್ತದೆ. 2009ರ ಸಂಸತ್ ಚುನಾವಣೆಗೆ ಮುನ್ನ ಆಂಧ್ರದ ಪ್ರಕಾಶಂ ಜಿಲ್ಲೆಯ ಒಂದೇ ಕ್ಷೇತ್ರದಲ್ಲಿ 400ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಸಲಾಯಿತು!

ಮತ್ತಷ್ಟು ಓದು »

4
ಆಗಸ್ಟ್

ವಾಲ್ಮೀಕಿ ಯಾರು?

– ನವೀನ್ ನಾಯಕ್

ವಾಲ್ಮೀಕಿ ಯಾರುಕೆ.ಎಸ್ ನಾರಾಯಣಾಚಾರ್ಯರ ” ವಾಲ್ಮೀಕಿ ಯಾರು ” ಎಂಬ ಕೃತಿಗೆ ನಿಷೇಧದ ಭೀತಿ ಎದುರಾಗಿದೆ. ಕೆಳವರ್ಗದವರು ಮಹಾಗ್ರಂಥಗಳನ್ನು ಬರೆಯಲು ಸಾಧ್ಯವಿಲ್ಲ ಅದು ಕೇವಲ ಬ್ರಾಹ್ಮಣರ ಸೊತ್ತು ಎಂಬಂತೆ ಪುಸ್ತಕ ಸೂಚಿಸುತ್ತದೆ ಎಂಬ ಆರೋಪವನ್ನೂ ಹೊರಿಸಿ ಹಲವು ಸಂಘಟನೆಗಳು ಪ್ರತಿಭಟಿಸುತ್ತಿವೆ. ಈ ಎಲ್ಲಾ ವಿವಾದಗಳಿಗೆ ಮೂಲ ಕಾರಣ ವಾಲ್ಮೀಕಿಯವರ ಜನ್ಮ ವೃತ್ತಾಂತವನ್ನು ಕೆ ಎಸ್ ನಾರಾಯಣಾಚಾರ್ಯರು ತಡಕಾಡಿದ್ದು. ತಡಕಾಡಲು ಕಾರಣವನ್ನೂ ಅವರು ಕೃತಿಯಲ್ಲೇ ನೀಡಿದ್ದಾರೆ. ವಾಲ್ಮೀಕಿ ರಾಮಾಯಣ ಮತ್ತು ಆನಂದರಾಮಾಯಣದ ಆಧಾರವನ್ನೇ ಈ ಕುರಿತ ಚರ್ಚೆಗೆ ಬಳಸಿದ್ದಾರೆ.

ವಾಲ್ಮೀಕಿ ಬ್ರಾಹ್ಮಣ ಪುತ್ರನೋ ಇಲ್ಲವೋ ಎಂಬುದಕ್ಕೆ ಲೇಖಕರು ಕೊಟ್ಟ ಆಧಾರಗಳು ಇಂತಿವೆ.ವಾಲ್ಮೀಕಿಯವರ ಆಶ್ರಮದಲ್ಲಿ ನೆಲೆಸಿ ಲವ ಕುಶರನ್ನು ಹಡೆದ ಸೀತಾಮಾತೆಯನ್ನು ಮತ್ತೆ ಶ್ರೀರಾಮನೆದುರು ನಿಲ್ಲಿಸಿ ” ಈಕೆ ಪರಿಶುದ್ಧೆ ! ಸ್ವೀಕರಿಸು ” ಎನ್ನುವಾಗ ಮಹರ್ಷಿಯು ತಾನು ಸುಳ‍್ಳಾಡುವವನು ಅಲ್ಲ ಎಂದು ಪ್ರತಿಜ್ಞೆ ಮಾಡಿ ತನ್ನ ಕುಲಗೋತ್ರವನ್ನು ತಂದೆಯವರನ್ನು ಸ್ಮರಿಸಿ ಹೇಳುತ್ತಾರೆ ” ಪ್ರಚೇತಸೋಹಂ ದಶಮಃ ಪುತ್ರೋ , ರಾಘವನಂದನ” |

( ಉತ್ತರಾಯಣ 96-16 ). ಹೇ ಶ್ರೀರಾಮ ! ನಾನು ಪ್ರಚೇತಸನೆಂಬ ಮಹರ್ಷಿಯ ಹತ್ತನೆಯ ಮಗ. ಎರಡನೆಯದಾಗಿ ಲವಕುಶರು ಶ್ರೀರಾಮನೆದುರೇ ರಾಮಾಯಣವನ್ನು ಗಾನ ಮಾಡಿ ತೋರಿಸಿದಾಗ ಶ್ರೀರಾಮಚಂದ್ರನು ಇದನ್ನು ಬರೆದವರಾರು ಎಂದು ಕೇಳಿದಾಗ, ಮಕ್ಕಳು ಇದನ್ನು ಭಾರ್ಗವ ಗೋತ್ರದ ಮಹರ್ಷಿ ವಾಲ್ಮೀಕಿ ಬರೆದರು ಎನ್ನುತ್ತಾರೆ. ಇದಲ್ಲದೇ ಇತರ ಪುರಾಣಗಳಲ್ಲೂ ಅಲ್ಲಲ್ಲಿ ವಾಲ್ಮಿಕಿಯನ್ನು ” ಪ್ರಾಚೇತಸ , ಭಾರ್ಗವ, ವರುಣಪುತ್ರ, ಭೃಗುಸೋದರ ” ನೆಂದೂ ಹೇಳಿದೆ.

ವಾಲ್ಮೀಕಿಯವರು ಬೇಡನಾಗಲು ಇರುವ ಕಾರಣಗಳನ್ನು ಹಲವಾರು ಕಾವ್ಯಗಳು ಎರಡು-ಮೂರು ರೀತಿಯಲ್ಲಿ ಚಿತ್ರಿಸಿವೆ. ಬೇಡನಾದ ನಂತರ ವಾಲ್ಮೀಕಿಯವರಿಗೆ ಸಪ್ತರ್ಷಿಗಳು ಅಥವ ನಾರದರ ಅನುಗ್ರಹದಿಂದ ರಾಮ ಮಂತ್ರದ ಉಪದೇಶವನ್ನು ಪಡೆದು ಜಪಿಸತೊಡಗಿದರು. ಕಾಲ ಚಲಿಸಿದಂತೆ ಬೇಡನ ಸುತ್ತ ಹುತ್ತ ( ವಾಲ್ಮೀಕ ) ಬೆಳೆಯಿತು. ನಂತರ ಸಪ್ತರ್ಷಿಗಳು ಬೇಡನನ್ನು ಹೊರ ಬರುವಂತೆ ಕರೆದಾಗ ಹುತ್ತವನ್ನೊಡೆದುಕೊಂಡು ಹೊರ ಬಂದು ವಾಲ್ಮೀಕರೆಂದು ಪ್ರಖ್ಯಾತರಾದರು. ಇದರಲ್ಲಿ ಆಚಾರ್ಯರು ಯಾವುದಾದರೂ ವಿಷಯವನ್ನು ಸೃಷ್ಟಿಸಿರುವುದು ಕಂಡು ಬರುತ್ತದೆಯೇ ? ಇಲ್ಲವಲ್ಲ. ಕೃತಿಯ ಮದ್ಯಭಾಗದಲ್ಲಿ ಲೇಖಕರು ಬರೆಯುತ್ತಾರೆ, ಪಾಮರನಾದ ಬೇಡನೊಬ್ಬ ದಿಢೀರನೆ ರಾಮಾಯಣದಂತಹ ಕಾವ್ಯ ಬರೆದ ಎಂದು ಹೇಳುವುದು ಹಾಸ್ಯಾಸ್ಪದವಾಗುತ್ತದೆ. ಈ ವಾಕ್ಯದ ಕುರಿತಾದ ದೃಷ್ಠಿಕೋನವನ್ನು ಈಗ ತಿರುಚಿರುವುದೇ ವಿವಾದಕ್ಕೆ ಮೂಲವಾಗಿರುವುದು.
ಮತ್ತಷ್ಟು ಓದು »