ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 13, 2014

4

ಓದುಗ, ಸಾಹಿತ್ಯ ಮತ್ತು ವಿಮರ್ಶಕ- ಭಾಗ -೧

‍ನಿಲುಮೆ ಮೂಲಕ

– ಮು.ಅ ಶ್ರೀರಂಗ ಬೆಂಗಳೂರು

ಕನ್ನಡ ಸಾಹಿತ್ಯಹೊಸಗನ್ನಡ ಸಾಹಿತ್ಯದ ಒಬ್ಬ ಹವ್ಯಾಸಿ ಓದುಗನಾಗಿ  ನನ್ನ ಪ್ರಾರಂಭದ ಹೆಜ್ಜೆಗಳಿಂದ ಇಲ್ಲಿಯ ತನಕದ ಸುಮಾರು ನಲವತ್ತು ವರ್ಷಗಳ  ಪಯಣವನ್ನು ‘ನಿನ್ನೆಗೆ ನನ್ನ ಮಾತು’ ಎಂಬ ಲೇಖನಗಳ ಸರಣಿಯಲ್ಲಿ ಈಗಾಗಲೇ ‘ನಿಲುಮೆ’ ಬ್ಲಾಗಿನಲ್ಲಿ ಬರೆದಿದ್ದೇನೆ. (ದಿನಾಂಕ ೫/೧೨/೧೩, ೩/೧/೨೦೧೪, ೪/೨/೧೪, ೧೩/೩/೧೪ ಮತ್ತು ೨೫/೪/೧೪. ಇದರಲ್ಲಿ ಮೊದಲ ಎರಡು ಭಾಗಗಳು ದೀಪವು ನಿನ್ನದೇ ಗಾಳಿಯು ನಿನ್ನದೇ ಆರದಿರಲಿ ಬೆಳಕು ಮತ್ತು ಕಡಲು ನಿನ್ನದೇ ಹಡಗು ನಿನ್ನದೇ ಮುಳುಗದಿರಲಿ ಬದುಕು ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾಗಿದೆ). ನಂತರ ೨/೬/೧೪ರಂದು ‘ಸಾಹಿತ್ಯ ಮತ್ತು ವಿಮರ್ಶೆ’ ಎಂಬ  ಲೇಖನವನ್ನು ಇದೇ ಬ್ಲಾಗಿನಲ್ಲಿ ಬರೆದಿದ್ದೇನೆ. ಅವುಗಳ ಮುಂದುವರಿಕೆಯಾಗಿ ಈ ಲೇಖನವನ್ನು ಓದುಗರು ಗಮನಿಸಬಹುದು. ಅಥವಾ ಇದೊಂದನ್ನೇ ಪ್ರತ್ಯೇಕ ಲೇಖನವಾಗಿಯೂ ಓದಬಹುದು. 

 

ಖ್ಯಾತ ಚಿಂತಕರೂ ಮತ್ತು ವಿಮರ್ಶಕರೂ ಆದ ಜಿ. ರಾಜಶೇಖರ ಅವರು ತಮ್ಮ ಒಂದು ಲೇಖನದಲ್ಲಿ (ನಮ್ಮ ಕಾಲದ ತವಕ ತಲ್ಲಣಗಳು:  ‘ಮತ್ತೊಬ್ಬನ ಸ್ವಗತ ‘ ಪುಟ ೯೪, ‘ಜಿ. ರಾಜಶೇಖರ ಅವರ ಆಯ್ದ ಲೇಖನಗಳು ‘ ಪ್ರಕಾಶಕರು: ಅಕ್ಷರ ಪ್ರಕಾಶನ ಹೆಗ್ಗೋಡು, ಸಾಗರ, ೨೦೦೯) ಕೆಲವು ಪತ್ರಿಕಾ ವರದಿಗಳನ್ನು ಉಲ್ಲೇಖಿಸುವ ಮೂಲಕ ತಾವು ಹೇಳಬೇಕೆಂದಿರುವ ವಿಷಯವನ್ನು ಪ್ರಸ್ತುತ ಪಡಿಸಿದ್ದಾರೆ.(ಅವರ ಲೇಖನದ ವಿಷಯ ಜಾತಿ,ಭಾಷೆ ಮತ್ತು ರಾಜಕೀಯಕ್ಕೆ ಸಂಬಂಧಿಸಿದ್ದು). ರಾಜಶೇಖರ ಅವರ ಲೇಖನದ ವಿಷಯಕ್ಕೂ ನನ್ನ ಲೇಖನದ ವಿಷಯಕ್ಕೂ ಸಂಬಂಧವಿಲ್ಲ. ಆದರೆ ಅವರ  ಲೇಖನದ ಆ ತಂತ್ರವನ್ನು ನಾನು ಬೇರೊಂದು ರೀತಿಯಲ್ಲಿ  ಇಲ್ಲಿ ಉಪಯೋಗಿಸಿಕೊಂಡಿದ್ದೇನೆ. ಅವರಿಗೆ ನಾನು ಆಭಾರಿಯಾಗಿದ್ದೇನೆ. 
 
ನಾನು ಒಂದು ಕಥಾಸಂಕಲನ/ ಕಾದಂಬರಿ/ವಿಮರ್ಶೆಯ ಸಂಕಲನ  ಅಥವಾ ಸಾಹಿತ್ಯ ಪತ್ರಿಕೆ/ದಿನಪತ್ರಿಕೆಗಳ ಭಾನುವಾರದ ಪುರವಣಿಗಳಲ್ಲಿ ಪ್ರಕಟವಾಗುವ ಲೇಖನ/ವಿಮರ್ಶೆಯನ್ನು ಓದಿದ ಮೇಲೆ ಅವುಗಳ ಬಗ್ಗೆ ಪ್ರತಿಕ್ರಿಯೆ ಬರೆಯಬೇಕೆಂದು ತೀವ್ರವಾಗಿ ಅನ್ನಿಸಿದಾಗ ಬರೆಯುವುದುಂಟು. ಸುಮಾರು ೨೫–೩೦ ವರ್ಷಗಳಿಂದ  ನನ್ನ ಈ ಅಭ್ಯಾಸ ಚಾಲ್ತಿಯಲ್ಲಿದೆ. ನಾನು ಬರೆದಿದ್ದು ಸಂಬಂಧಪಟ್ಟ ಪತ್ರಿಕೆಯಲ್ಲಿ ಪ್ರಕಟವಾದರೆ ಸಂತೋಷ ; ಆಗದಿದ್ದರೆ ಬೇಸರವಿಲ್ಲ. ಇಷ್ಟು  ವರ್ಷಗಳ ಅನುಭವದಿಂದ ಹೇಳುವುದಾದರೆ ಪತ್ರಿಕೆ/ಸಾಹಿತ್ಯ ಪತ್ರಿಕೆಗಳಿಗೆ ‘ ಯಾವ ರೀತಿಯ ‘ ಪ್ರತಿಕ್ರಿಯೆಗಳು ಇಷ್ಟವಾಗುತ್ತದೆ ಯಾವುದು ಆಗುವುದಿಲ್ಲ ಎಂಬುದು ಅಷ್ಟಿಷ್ಟು ತಿಳಿದಿದೆ. ಹಾಗೆಂದು ನಾನು ಕೇವಲ ನನ್ನ ಹೆಸರು ಪತ್ರಿಕೆಯಲ್ಲಿ ಪ್ರಿಂಟಾಗಲಿ ಎಂಬ ಉದ್ದೇಶದಿಂದ , ಆಸೆಯಿಂದ  ನನ್ನ ಅಭಿಪ್ರಾಯಗಳ ಜತೆ ರಾಜಿ ಮಾಡಿಕೊಂಡವನಲ್ಲ.  ಕೆಲವು ಪತ್ರಿಕೆಗಳಲ್ಲಿ ಲೇಖನ/ವಿಮರ್ಶೆ ಬರೆದವರ  ವಿಳಾಸ ಮತ್ತು ಇತ್ತೀಚಿಗೆ ಇಮೇಲ್ ಐ ಡಿ ಯನ್ನು ಒಮ್ಮೊಮ್ಮೆಪ್ರಕಟಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ ಪತ್ರಿಕೆ/ಸಾಹಿತ್ಯ ಪತ್ರಿಕೆಗೆ ಬರೆದ ಪ್ರತಿಕ್ರಿಯೆಯ copy ಒಂದನ್ನು ಸಂಬಂಧಪಟ್ಟ ಲೇಖಕ/ವಿಮರ್ಶಕರಿಗೂ ಕಳಿಸುತ್ತೇನೆ. ಕೆಲವರು ಉತ್ತರಿಸಿದ್ದಾರೆ. ನಾವು  ಬರೆದ ಪತ್ರಗಳಿಗೆಲ್ಲಾ ಉತ್ತರ  ನಿರೀಕ್ಷಿಸುವುದು ವ್ಯಾವಹಾರಿಕವಲ್ಲ. ಆ ಅರಿವು ನನಗಿದೆ. ನನ್ನ ಅಭಿಪ್ರಾಯ ಅವರಿಗೆ ತಿಳಿಸುವುದಷ್ಟೇ ನನ್ನ ಕೆಲಸ.  ಅಂತಹ ಕೆಲವು ಪತ್ರಗಳು ,ಅದಕ್ಕೆ ಸಂಬಂಧಪಟ್ಟವರಿಂದ ಬಂದ ಪ್ರತ್ಯುತ್ತರ  ಮತ್ತು ಪತ್ರಿಕೆಗಳಲ್ಲಿ ಪ್ರಕಟವಾದ ಅಥವಾ ಆಗದ ನನ್ನ ಪತ್ರಗಳು, ಲೇಖನಗಳು  (ನಾನು ಬರೆದಿದ್ದರ ಒಂದು xerox copy /carbon copy ಯನ್ನು ಸಾಧ್ಯವಾದಷ್ಟೂ ಇಟ್ಟುಕೊಂಡಿದ್ದೇನೆ.  ಇನ್ನು ಕೆಲವು ಕಳೆದು ಹೋಗಿವೆ)  ಇವುಗಳಲ್ಲಿ  ಪ್ರಸ್ತುತ ವಿಷಯಕ್ಕೆ ಸಂಬಂಧಿಸಿದಂತೆ ಆಯ್ದ ಕೆಲವು ಪತ್ರಗಳ/ಲೇಖನಗಳ  ಉಲ್ಲೇಖದ  ಈ  ಪ್ರಕ್ರಿಯೆಯಲ್ಲಿಯೇ   ‘ ಓದುಗ, ಸಾಹಿತ್ಯ ಮತ್ತು ವಿಮರ್ಶಕ ‘  ಎಂಬ ಮೂರೂ ವಿಷಯಗಳ ಸಮ್ಮಿಲನ ಇರುವುದರಿಂದ  ಪ್ರಸ್ತುತ ವಿಷಯಕ್ಕೆ ಸಂಬಂಧಿಸಿದಂತೆ  ನಾನು ಮತ್ತೊಮ್ಮೆ ಹೇಳುವ ಅಗತ್ಯವಿಲ್ಲ ಎಂದು ಭಾವಿಸಿದ್ದೇನೆ.  . 

ಇಂದಿನ ನಮ್ಮ ಜೀವನದಲ್ಲಿ ಸಾಹಿತ್ಯಕ್ಕೆ ಅವಕಾಶವಿದೆಯೇ?
                                                                  
ಹೊಸಗನ್ನಡ ಸಾಹಿತ್ಯವನ್ನು  ನವೋದಯ, ನವ್ಯ, ಪ್ರಗತಿಶೀಲ, ದಲಿತ, ಬಂಡಾಯ, ಸ್ತ್ರೀವಾದಿ  ಎಂದು ಅಭ್ಯಾಸದ ಅನುಕೂಲಕ್ಕೆ ಮತ್ತು  ಒಂದು ಕೃತಿಯ ಸ್ವರೂಪದ ಆಧಾರದ ಮೇಲೆ ವಿಂಗಡಿಸಿರುವುದು ಸಾಹಿತ್ಯಾಸಕ್ತರಿಗೆ ತಿಳಿದ ವಿಷಯ. ಇದರ  ಜತೆಗೆ ಈ ಯಾವುದೇ ಗುಂಪಿಗೆ ಸೇರದ, ಸೇರಿಸಲಾಗದ ಕೃತಿಗಳೂ ಹೊಸಗನ್ನಡ ಸಾಹಿತ್ಯದಲ್ಲಿವೆ. ಈ ವಿಂಗಡಣೆ ಸ್ಥೂಲವಾದದ್ದು ; ಅಷ್ಟೇ ಹೊರತು  ಕಟ್ಟುನಿಟ್ಟಾದ ಕಾಲಾನುಕ್ರಮದ ಪಟ್ಟಿಯಲ್ಲ.  ಸುಮಾರು ಒಂದು ನೂರು ವರ್ಷಗಳಷ್ಟು ಇತಿಹಾಸವಿರುವ ಹೊಸಗನ್ನಡ ಸಾಹಿತ್ಯವನ್ನು,  ಸರ್ಕಾರಿ ಕಛೇರಿಗಳ ನಿರ್ಜೀವ ಕಡತಗಳನ್ನು ವರ್ಷಾವಾರು ಕಟ್ಟಿ ಇಡುವ ರೀತಿಯಲ್ಲಿ ಇವು ನವೋದಯ ಸಾಹಿತ್ಯದ್ದು  ; ಇಷ್ಟು   ನವ್ಯಸಾಹಿತ್ಯದ್ದು ಎಂದು ವಿಭಾಗ ಮಾಡಲಿಕ್ಕೆ ಆಗುವುದಿಲ್ಲ. ಇದಕ್ಕೆ ಒಂದು ಉತ್ತಮ ಉದಾಹರಣೆ ‘ಶ್ರೀರಂಗ’ (ಆದ್ಯ ರಂಗಾಚಾರ್ಯ)ರ ”ವಿಶ್ವಾಮಿತ್ರನ ಸೃಷ್ಟಿ” ಎಂಬ ಸಾಮಾಜಿಕ ಕಾದಂಬರಿ. ನವ್ಯ ಸಾಹಿತ್ಯದ ಕುರುಹುಗಳೂ ಕಾಣದಿದ್ದ, ಅಂತಹದೊಂದು ಸಾಹಿತ್ಯ ಪ್ರಕಾರ ಕನ್ನಡ ಸಾಹಿತ್ಯದಲ್ಲಿ ಬರಬಹುದು ಎಂದು ಯಾರೂ ಊಹಿಸಲಾಗದಂತಹ ಕಾಲದಲ್ಲಿ ಆ ಕಾದಂಬರಿಯು ಪ್ರಕಟವಾಯ್ತು (ಆಗಸ್ಟ್ 1934).ಆ ಕಾದಂಬರಿಯ ನಾಯಕನಾದ ನಾರಾಯಣನು ಮುಂದೆ  ಕನ್ನಡ ಸಾಹಿತ್ಯದಲ್ಲಿ ಬಂದ ನವ್ಯ ಕಾದಂಬರಿಗಳ ನಾಯಕರ ಸಮರ್ಥ ಪ್ರತಿನಿಧಿ. ಎರಡನೆಯ ಮುದ್ರಣವಾಗಿದ್ದು  1974ರ  ಜೂನ್ ತಿಂಗಳಲ್ಲಿ. ಎರಡನೆಯ ಮುದ್ರಣಕ್ಕೆ ‘ಶ್ರೀರಂಗ’ ಅವರು ಬರೆದ ಈ ಐದಾರು ವಾಕ್ಯಗಳು ಗಮನಾರ್ಹವಾಗಿದೆ. ‘ಸರಿಯಾಗಿ ನಾಲ್ವತ್ತು ವರ್ಷಗಳ ತರುವಾಯ ಈ ಕಾದಂಬರಿ ಎರಡನೆಯ ಮುದ್ರಣವನ್ನು ಕಾಣುತ್ತಿದೆ. ಮೊದಲ ಮುದ್ರಣದ ಕಾಲಕ್ಕೆ ‘ಇದೂ ಒಂದು ಕಾದಂಬರಿ’ ಎಂದು ಇದನ್ನು  ಓದುಗರಿಗೆ ಅರ್ಪಿಸಿದ್ದೆ. ಇಂದಿನ ವಾಚಕರಿಗೆ ಅಂತಂಹ ಸ್ಪಷ್ಟನೆ ಅಗತ್ಯವಿಲ್ಲ ಎಂಬುದರ ಮಟ್ಟಿಗೆ ಕನ್ನಡ ಕಾದಂಬರೀ ಶೈಲಿ ಬದಲಾಯಿಸಿದೆ. ಇಂದಿನ ಅನೇಕ ಬದಲಾವಣೆ ಮತ್ತು ವೈಶಿಷ್ಟ್ಯಗಳ ಉಷಃ ಕಿರಣಗಳನ್ನು ನಾಲ್ವತ್ತು ವರ್ಷಗಳ ಮುಂಚಿತದ ಈ ಕೃತಿಯಲ್ಲಿ ಕಾಣಬಹುದುದೆಂಬುದೂ ದ್ವಿತೀಯ ಮುದ್ರಣಕ್ಕೆ ಬಲವಾದ ಕಾರಣವಾಗಿದೆ. ಅಕ್ಷರ ಪ್ರಕಾಶನಕ್ಕೆ ವಂದನೆಗಳು.’ —‘ಶ್ರೀರಂಗ’. ಅಂತಹ  ಕೃತಿಗಳ ಓದು  ಒಂದು ರೀತಿಯ ಹೆಮ್ಮೆ, ಹೆಚ್ಚುಗಾರಿಕೆ ಎಂಬುದು ಈಗ್ಗೆ ಕನಿಷ್ಟವೆಂದರೂ ಹತ್ತಿಪ್ಪತ್ತು ವರ್ಷಗಳ ಹಿಂದಿನ ತನಕವಾದರೂ ಇತ್ತು. ಈಗ ಆ ಪರಿಸ್ಥಿತಿ ಇದೆಯೇ? ಇಲ್ಲವಾದರೆ ಅದಕ್ಕೆ ಕಾರಣಗಳೇನಿರಬಹುದು ಎಂಬುದನ್ನು ಯೋಚಿಸುವ ನಿಟ್ಟಿನಲ್ಲಿ  ಒಂದು ಸಣ್ಣ ಪ್ರಯತ್ನ ಈ ಲೇಖನ.
 
ಇಂದು ನಮ್ಮ ಶಾಲಾ-ಕಾಲೇಜುಗಳಲ್ಲಿ ವಿಜ್ಞಾನದ ವಿಷಯಗಳಿಗಿರುವ ಪ್ರಾಮುಖ್ಯತೆ ಮಾನವಿಕ ವಿಷಯಗಳಿಗಿಲ್ಲದೆ ಇರುವುದು ಎಲ್ಲರಿಗೂ ತಿಳಿದ ವಿಷಯ. ಇದು ಈಗಿನ ವಿದ್ಯಮಾನವಲ್ಲ. ಇಪ್ಪತ್ತು ಇಪ್ಪತ್ತೈದು ವರ್ಷಗಳ ಕಾಲಾಂತರದಲ್ಲಿ ದಿನೇ ದಿನೇ ,ವರ್ಷವರ್ಷವೂ ಇಳಿಮುಖವಾಗುತ್ತಾ ಬಂದಿರುವಂತಹುದು. ಇಂತಹ ವಿದ್ಯಮಾನವನ್ನು  ಸಿನಿಕತನದಿಂದ ಟೀಕಿಸಿ, ಸಮಸ್ಯೆಯನ್ನು ಸರಳಗೊಳಿಸಿ,ಕೈ ತೊಳೆದುಕೊಳ್ಳುವುದು ಸುಲಭ. ಆದರೆ ವಾಸ್ತವಿಕ ಅಂಶಗಳನ್ನೂ ಯೋಚಿಸಬೇಕಲ್ಲವೇ? ತಾಂತ್ರಿಕ,ವೈದ್ಯಕೀಯ ವಿಷಯಗಳಲ್ಲಿ ಪದವಿ ಪಡೆದರೆ ಹೇಗೋ ಎಲ್ಲಾದರೊಂದು ಕಡೆ ಕೆಲಸ ಸಿಗುವುದು ಖಾತರಿ. ಓದಿನ ನಂತರ ಕೆಲಸ,ನಂತರ   ಮದುವೆ , ಸಂಸಾರ ನಿರ್ವಹಣೆ ಇತ್ಯಾದಿಗಳನ್ನು ನಿರಾಕರಿಸುವುದು ಹೇಗೆ ತಾನೇ ಸಾಧ್ಯ? ಇದು ತಪ್ಪು, ಕೂಡದು ಎಂದು ಹೇಳುವುದು ಅಸಹಜ. 
 
ಇನ್ನು ಮಾನವಿಕ ವಿಷಯಗಳನ್ನು ಆಯ್ದು ಕೊಳ್ಳುವವರು ಎಲ್ಲೂ ಸಲ್ಲದೆ ಇರುವವರು ಎಂಬ ಅಭಿಪ್ರಾಯವಿದೆ. ಇದು ಅರ್ಧ ಸತ್ಯ.  ಇದರ ಜತೆಗೆ ಆರ್ಥಿಕ,ಸಾಮಾಜಿಕ ಸ್ಥಿತಿಗಳ ಒತ್ತಡದ ನಡುವೆ ತಾಂತ್ರಿಕ/ವೈದ್ಯ ಶಿಕ್ಷಣಕ್ಕೆ ಬೇಕಾದ ಖರ್ಚುಗಳನ್ನು ಹೊಂದಿಸಲಾಗದೆ ಅನಿವಾರ್ಯವಾಗಿ ಬಿ ಎ ತರಗತಿಗಳಿಗೆ ಸೇರುವವರೂ ಇದ್ದಾರೆ. ಇತ್ತೀಚಿಗೆ  ಪಿ ಸಿ ಎಂ /ಸಿ ಬಿ ಜೆಡ್  ವಿಷಯಗಳ ಬಿ ಎಸ್ಸಿ ತರಗತಿಗಳಿಗೂ  ವಿಧ್ಯಾರ್ಥಿಗಳ ಕೊರತೆಯಿದೆ ಎಂಬ ಸುದ್ದಿ ಪತ್ರಿಕೆಗಳಲ್ಲಿ ಬಂದಿತ್ತು. ಇಂತಹ ವಿಧ್ಯಾರ್ಥಿಗಳಿಗೆ  ಯಾವ ವಿಷಯದಲ್ಲಾಗಲಿ  ಒಂದು ಪದವಿ, ಸಾಧ್ಯವಾದರೆ ಮತ್ತೆರೆಡು ವರ್ಷ ಸ್ನಾತಕೋತ್ತರ ಪದವಿಗಾಗಿ ಓದಿ ಕೈಗೊಂದು  ಪ್ರಮಾಣ ಪತ್ರ (ಡಿಗ್ರಿ ಸರ್ಟಿಫಿಕೇಟ್/ಮಾರ್ಕ್ಸ್ ಕಾರ್ಡ್) ಬಂದರೆ ಕೆಲಸದ ಬೇಟೆಗೆ ಪ್ರಾರಂಭಿಸಬಹುದೆಂಬ ಕಾತುರ. ಇಂತಹ ಪರಿಸ್ಥಿತಿಯಲ್ಲಿ  ಸ್ವಂತ ಆಸಕ್ತಿಯಿಂದ ಕನ್ನಡ/ಇಂಗ್ಲಿಷ್/ ಸಂಸ್ಕೃತ   ಭಾಷೆಗಳನ್ನಾಯ್ದುಕೊಂಡು ಪದವಿ/ಸ್ನಾತಕೋತ್ತರಮಟ್ಟದಲ್ಲಿ ಓದುವವರು ಎಷ್ಟು ಮಂದಿ ಸಿಕ್ಕಾರು? ಅವರಲ್ಲೂ ”ನಿಜವಾದ ಆಸಕ್ತಿ” ಇರುವವರು ಎಷ್ಟು ಮಂದಿ ಇದ್ದಾರು? ಇದು ಸದ್ಯದ ಪರಿಸ್ಥಿತಿ. ಆದರೆ ಜೀವನೋಪಾಯಕ್ಕಾಗಿ ಯಾವುದೇ ಕೆಲಸವನ್ನಾಯ್ದು ಕೊಂಡಿರಲಿ ಅಂತಹವರು ತಮ್ಮ ಬಿಡುವಿನ ವೇಳೆಯನ್ನು ಹೇಗೆ ಕಳೆಯುತ್ತಾರೆ ಎಂಬುದನ್ನು ಸ್ವಲ್ಪ ನೋಡೋಣ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಮನೆಯಿಂದ ಕೆಲಸದ ಸ್ಥಳಕ್ಕೆ ಸರಿಯಾದ ಸಮಯಕ್ಕೆ ಹೋಗಿ ನಂತರ ವಾಪಸ್ಸು ಬರುವುದೇ ಒಂದು ಸಾಹಸ. ಮನೆಗೆ ಬಂದ ಮೇಲೆ ದೇಹಾಯಾಸ  ಪರಿಹಾರ ಮಾಡಿಕೊಂಡು ಟಿ. ವಿ. ಮುಂದೆ  ರಿಮೋಟ್ ಕೈಯಲ್ಲಿ ಹಿಡಿದು  ಕುಳಿತರೆ ಸಾಕು. 24X7  ವಾಹಿನಿಗಳ ಹಾವಳಿಯಲ್ಲಿ  ಕಾಲ ಸರಿದಿದ್ದು, ನಿದ್ದೆ ಬಂದಿದ್ದೇ  ತಿಳಿಯಲಾರದಂತಹ ಸಂಮೋಹನಾಸ್ತ್ರ  ಆವರಿಸುತ್ತದೆ. ಸೋಮವಾರದಿಂದ ಶನಿವಾರದವರೆಗೆ ಇದೇ ರಾಗ, ಇದೇ ಹಾಡು. ಭಾನುವಾರ ಬಂದರೆ ಆರು ದಿನಗಳ ಆಯಾಸ ಪರಿಹಾರಕ್ಕಾಗಿ ಸ್ವಲ್ಪ ಹೆಚ್ಚು ನಿದ್ದೆ. ನಂತರ ಕೈಯಲ್ಲಿ ಹಣವಿದ್ದರೆ  shopping ,out going. ಒಂದು ದಿನವಾದರೂ ಖುಷಿಯಾಗಿರೋಣ; ನಾಳೆಯಿಂದ ಇದ್ದೆ  ಇದೇ ಗೋಳು ಎಂಬಂತಹ ಮನಸ್ಥಿತಿ .  ಇತರ ಜಿಲ್ಲಾ ಕೇಂದ್ರಗಳಲ್ಲಿ, ತಾಲ್ಲೂಕು ಮಟ್ಟದ ಪಟ್ಟಣಗಳಲ್ಲಿ ಏನಾದರೂ ಪರಿಸ್ಥಿತಿ ಭಿನ್ನವಾಗಿದೆಯೇ ಎಂದು ನೋಡಿದರೆ ಅಲ್ಲೂ ಇಲ್ಲ. ಅಲ್ಲಿ ಸಹ ಸರ್ಕಾರಿ ನೌಕರರು, ಬ್ಯಾಂಕು ಮತ್ತಿತರ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಲ್ಲಿ ಸುಮಾರು ಮಂದಿ ಬೆಂಗಳೂರು,ಮೈಸೂರು,ತುಮಕೂರು,ಮಂಡ್ಯ ಇತ್ಯಾದಿ ತಮಗೆ ಹತ್ತಿರದ ಜಿಲ್ಲಾ ಸ್ಥಳಗಳಿಂದ ದಿನಾ ಬಸ್ಸು,ರೈಲು ಇಲ್ಲವೇ ಅವರ ಸ್ವಂತ ವಾಹನಗಳಲ್ಲಿ ಕೆಲಸದ ಆರೂ ದಿನಗಳೂ ಪ್ರಯಾಣಿಸುವವರೇ. ಇವರದೂ ಸಹ ಹಿಂದೆ ಹೇಳಿದಂತಹ ಬೆಂಗಳೂರಿನವರ ಪರಿಸ್ಥಿತಿಯೇ. ಇಷ್ಟಿದ್ದೂ ಇವುಗಳ ನಡುವೆಯೇ ತಮ್ಮ ಆಸಕ್ತಿಯ ಇತರ ಹವ್ಯಾಸಗಳ ಕಡೆಗೆ ಮನಸ್ಸು, ಸಮಯ ಮಾಡಿಕೊಂಡವರು ಇದ್ದಾರೆ. ಅವರು ನಿಜವಾಗಲೂ ಪ್ರಶಂಸೆಗೆ ಅರ್ಹರು
 
ಇನ್ನು ನಮ್ಮ ಶಾಲಾ ಕಾಲೇಜಿನ  ಬಹುಪಾಲು ಯುವಕ/ಯುವತಿಯರಿಗೆ ಸಾಹಿತ್ಯ , ಸಂಸ್ಕೃತಿಯ ವಿಷಯಗಳೆಂದರೆ  ಅಲರ್ಜಿ.ಅವರುಗಳ extra  curricular  activities ಏನಿದ್ದರೂ ಮೊಬೈಲ್,ಟಿ ವಿ ,ಎಫ್ ಎಂ ಗಳಲ್ಲಿ ಕರ್ಣ ಕಠೋರವಾಗಿಬರುವ ‘ಪ್ಯಾರ್ ಗೆ  ಆಗ್ಬುಟೈತೆ ನಮ್ದುಕೆ’, ‘ನೈಂಟಿ  ಹೊಡಿ’, ಇತ್ಯಾದಿಗಳ ಕಲರವ ಅಷ್ಟೇ. ಬಿಡುವಿನ ವೇಳೆಯಲ್ಲಿ ಸಲ್ಮಾನ್ ಖಾನ್ ಏಕೆ ಮದುವೆಯಾಗುವುದಿಲ್ಲ, ಶಾರುಕ್–ಸಲ್ಮಾನ್ ಖಾನರ ಫೈಟಿಂಗ್ ನ ಇತ್ತೀಚಿನ status ಏನು? ಧೋನಿ–ಸೆಹ್ವಾಗ್ –ಗಂಭೀರ್ ಇವರುಗಳ  ವಿಷಯದ  ಚರ್ಚೆ. ಇತ್ಯಾದಿಗಳು. ಆದರೂ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ   ಕೆಲವು ಯುವಕ ಯುವತಿಯರಿಗೆ ಸಾಹಿತ್ಯ ಸಾಂಸ್ಕೃತಿಕ  ವಿಷಯಗಳ  ಕಡೆ  ಸ್ವಲ್ಪ ಒಲವಿದೆ .ಅವರು ಅದನ್ನು ಮುಂದುವರಿಸಿಕೊಂಡರೆ ಪರಿಸ್ಥಿತಿ ಉತ್ತಮವಾದೀತು. ಎಪ್ಪತ್ತು ಎಂಭತ್ತರ ದಶಕಗಳಲ್ಲಿ ಕನ್ನಡ/ಇಂಗ್ಲಿಷ್ ಎಂ ಎ ಮಾಡುವುದು ಹೆಮ್ಮೆಯ ವಿಷಯವೆನಿಸಿತ್ತು. ಆಗ  ಇದ್ದ ಸಾಹಿತ್ಯದ ವಾತಾವರಣವೂ ಅದಕ್ಕೆ ಪುಷ್ಟಿ ನೀಡುವಂತೆ ಇದ್ದವು. ಈಗ ಸಾಹಿತಿಗಳು ತಮ್ಮ ತಮ್ಮ cabinಗಳಲ್ಲಿ ಹಂಚಿ ಹೋಗಿದ್ದಾರೆ. ಅದೇ ರೀತಿ ಸಾಹಿತ್ಯವೂ ನಾನಾ ವಾದಗಳ  ಬಿರುಬಿಸಿಲು ,ಬಿರುಮಳೆ, ಸಿಡಿಲು, ಗುಡುಗು, ಗಾಳಿಗಳಿಂದ   ಬಸವಳಿದಿದೆ. ಈ ಹಿಂದೆಯೂ ವಾದ–ವಿವಾದಗಳು ಇದ್ದವು. ಅವುಗಳ ನಡುವಿನ ಚರ್ಚೆಗಳಿಂದ ಬೆಳಕು ಮೂಡುತ್ತಿತ್ತು.  ಈಗ ಬೆಂಕಿ ಹೊತ್ತಿಕೊಳ್ಳುತ್ತಿದೆ.  ಇವೆಲ್ಲದರ ನಡುವೆಯೇ ಇಂದು , ಜೀವನದ, ವೃತ್ತಿಯ ಕ್ಷೇತ್ರದಲ್ಲಿ ಯಾವುದನ್ನು ನಾವು ಸಾಮಾನ್ಯವಾಗಿ  ‘ನಾನ್ ಅಕಾಡೆಮಿಕ್ ‘ ಎನ್ನುತ್ತೇವೆಯೋ  ಅಂತಹ ಕ್ಷೇತ್ರಗಳಲ್ಲಿ ದುಡಿಯುತ್ತಿರುವರು ಸಾಹಿತ್ಯ,ಸಾಂಸ್ಕೃತಿಕ ರಂಗಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಜತೆಗೆ ಅಂತಹವರಿಂದ ಉತ್ತಮ ಕೃತಿಗಳೂ ಬರುತ್ತಿವೆ. 
 
ಇಷ್ಟು ವಾಸ್ತವಾಂಶಗಳ ನಡುವೆ ‘ಸಾಹಿತ್ಯ ಜೀವನಕ್ಕೆ ಅನಿವಾರ್ಯವೇ? ಎಂಬ  ಒಂದು ಪ್ರಶ್ನೆ ಸಹಜವಾಗಿ ಮೂಡಬಹುದು. ಅನಿವಾರ್ಯವೇನಲ್ಲ ಎಂಬುದೇ ಉತ್ತರ. ಸಾಹಿತ್ಯ ಎಂದರೇನು ಎಂದು ತಿಳಿಯದ, ಅದರ ಬಗ್ಗೆ ಯೋಚಿಸದ ಜನ ಹಿಂದೆಯೂ ಇದ್ದರು, ಈಗಲೂ ಇದ್ದಾರೆ ಮತ್ತು ಮುಂದೆಯೂ ಇರುತ್ತಾರೆ.  ಅಂತಹವರಲ್ಲಿ ಸಹೃದಯತನಕ್ಕೇನೂ ಬಡತನವಿಲ್ಲ. ಸ್ನೇಹಿತರ, ಬಂಧು ಬಾಂಧವರ ಕಷ್ಟಗಳಿಗೆ ತಮ್ಮ ಶಕ್ತ್ಯಾನುಸಾರ ಸ್ಪಂದಿಸುತ್ತಾರೆ, ಸಹಾಯಮಾಡುತ್ತಾರೆ.  ಆದರೆ ನಮ್ಮ ನಾಡಿನ ಇತಿಹಾಸ, ಸಂಸ್ಕೃತಿಗಳನ್ನು ಅರಿಯಲು ಆಶಿಸುವವರಿಗೆ  ಸಾಹಿತ್ಯದ ಓದು ಮೊದಲನೇ ಮೆಟ್ಟಿಲಾಗಬಹುದಲ್ಲವೇ? ಎಂಬುದು ನನ್ನ ಭಾವನೆ, ಅನಿಸಿಕೆ. ಈ ಮೆಟ್ಟಿಲ ಉದ್ದ ಅಗಲಗಳು ಬರಬರುತ್ತಾ ಕಿರಿದಾಗುತ್ತಾ ಇದೆಯೇ?
.                                                                                %%%%%
 [ಇದು ೨೨ ಎಪ್ರಿಲ್ ೨೦೧೨ರ  ಕನ್ನಡ ಪ್ರಭದ  ಸಾಪ್ತಾಹಿಕ ಪ್ರಭದಲ್ಲಿ  ಪ್ರಕಟವಾದ  ಲೇಖನದ ಪರಿಷ್ಕೃತ ರೂಪ. ( ಸ್ವಲ್ಪ add  ಮತ್ತು  delete ಮಾಡಲಾಗಿದೆ. ಆದರೆ   ಆ  ಮೂಲ  ಲೇಖನದ  ಆಶಯಕ್ಕೆ ಭಂಗವಾಗಿಲ್ಲ ). ಈ ಲೇಖನಕ್ಕೆ ಸಾಪ್ತಾಹಿಕ ಪ್ರಭದವರು ಓದುಗರಿಂದ ಚರ್ಚೆಗೆ ಅವಕಾಶ ಕಲ್ಪಿಸಿದರು.. ಐದು ಪ್ರತಿಕ್ರಿಯೆಗಳು ಬಂದ ನಂತರ ಚರ್ಚೆ ಮುಗಿಯಿತು. ಅದರ ಬಗ್ಗೆ ಮುಂದಿನ ಭಾಗದಲ್ಲಿ  ಮಾತಾಡೋಣ ].    
Read more from ಲೇಖನಗಳು
4 ಟಿಪ್ಪಣಿಗಳು Post a comment
  1. Nagshetty Shetkar's avatar
    Nagshetty Shetkar
    ಆಗಸ್ಟ್ 13 2014

    ಉತ್ತಮ ಲೇಖನ. ಮುಂದಿನ ಭಾಗಗಳ ಬಗ್ಗೆ ಕುತೂಹಲ ಇದೆ.

    ಉತ್ತರ

Trackbacks & Pingbacks

  1. ಓದುಗ ಸಾಹಿತ್ಯ ಮತ್ತು ವಿಮರ್ಶಕ – ಭಾಗ 2 | ನಿಲುಮೆ
  2. ಓದುಗ ಸಾಹಿತ್ಯ ಮತ್ತು ವಿಮರ್ಶಕ – ಭಾಗ 3 | ನಿಲುಮೆ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments