ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 2, 2015

21

“ಧರ್ಮ”ದ ದಾರಿ ತಪ್ಪಿಸುತ್ತಿರುವ ಹಿರಿಯರು;ಇಲ್ಲದ ಹಿಂದೂ ರಿಲಿಜನ್ನಿನ ಭ್ರಮೆಯಲ್ಲಿ ಕಿರಿಯರು

‍ನಿಲುಮೆ ಮೂಲಕ

 – ರಾಕೇಶ್ ಶೆಟ್ಟಿ

Chimu Kalburgiಕಳೆದ ಜೂನ್ ೯ರಂದು ನಡೆದಿದ್ದ ಮೌಢ್ಯಮುಕ್ತ ಸಮಾಜ,ಕರ್ನಾಟಕ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಅನುಷ್ಠಾನ ಚರ್ಚಾ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಡಾ.ಕಲ್ಬುರ್ಗಿಯವರು,ದೇವರ ವಿಗ್ರಹಗಳ ಮೇಲೆ ಮೂತ್ರ ಮಾಡಿದರೂ ಏನೂ ಆಗದುಎಂದು ಹೇಳಿ ಸುದ್ದಿಯಾಗಿದ್ದರು. ಈಗ ಮತ್ತೆ, ಗದುಗಿನಲ್ಲಿ ಆಯೋಜಿಸಲಾಗಿದ್ದ ’ಸಮಾಜಶಾಸ್ತ್ರ,ಕನ್ನಡಶಾಸ್ತ್ರ ಮತ್ತು ಅರ್ಥಶಾಸ್ತ್ರ ವಿಚಾರಗೋಷ್ಠಿ’ಯಲ್ಲಿ, ಹಿಂದುಗಳಿಗೆ ಧರ್ಮಗ್ರಂಥವೇ ಇಲ್ಲ.ಭಗವದ್ಗೀತೆ ಹಿಂದುಗಳ ಧರ್ಮ ಗ್ರಂಥವಲ್ಲ,ಅದೊಂದು ವಚನ ಸಾಹಿತ್ಯರಾಜ್ಯ ಸರ್ಕಾರ ನಡೆಸಲು ತೀರ್ಮಾನಿಸಿರುವ ಜಾತಿಜನಗಣತಿಯ ಪ್ರಶ್ನಾವಳಿಯಲ್ಲಿ ಧರ್ಮ,ಜಾತಿ,ಉಪಜಾತಿಗೊಂದು ಪ್ರತ್ಯೇಕ ಕಾಲಂ ನಿಗದಿಪಡಿಸಲಾಗಿದೆ.ಜಾತಿ ಜನಗಣತಿಯಲ್ಲಿ ಧರ್ಮ ಯಾಕೆ ಬೇಕು.ಏಕೆಂದರೆ ಧರ್ಮ ಮತ್ತು ಜಾತಿ ಎರಡೂ ಒಂದೇ.ಜೈನ ಧರ್ಮವೂ ಹೌದು,ಜಾತಿಯೂ ಹೌದು.ಅದರಂತೆ ಮುಸ್ಲಿಂ,ಕ್ರಿಶ್ಚಿಯನ್ ಮತ್ತು ಬೌದ್ಧ ಧರ್ಮವೂ ಹೌದು,ಜಾತಿಯೂ ಹೌದು.ಹೀಗಿದ್ದಾಗ ಇಂತಹ ಅನವಶ್ಯಕ ಕಾಲಂಗಳು ಏಕೆ ಬೇಕು?” ಎಂದು ಪ್ರಶ್ನಿಸಿದ್ದಾರೆಂದು ವರದಿಯಾಗಿತ್ತು.

ಡಾ.ಕಲ್ಬುರ್ಗಿಯವರ ಹೇಳಿಕೆಯನ್ನು ವಿರೋಧಿಸಿ,ಹಿರಿಯ ಸಂಶೋಧಕರಾದ ಡಾ.ಎಂ ಚಿದಾನಂದ ಮೂರ್ತಿಗಳು ವಿಜಯವಾಣಿಯ ಜನಮತ ವಿಭಾಗದಲ್ಲಿ ಪತ್ರವೊಂದನ್ನು ಬರೆದು ಕಲ್ಬುರ್ಗಿಯವರು ಗದುಗಿನಲ್ಲಿ ಮಾತನಾಡುತ್ತ ಹಿಂದೂ ಎಂಬ ಧರ್ಮವೇ ಇಲ್ಲಎಂದು ವಿತಂಡವಾದ ಮಾಡಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆಎನ್ನುತ್ತಾ ಮುಂದುವರೆದೂ ಧರ್ಮ ಎಂಬ ಶೀರ್ಷಿಕೆಯಡಿಯಲ್ಲಿ ಹಿಂದೂ ಎಂದು ದಾಖಲಿಸಲು ಸುಪ್ರೀಂ ಕೋರ್ಟ್ ಅವಕಾಶ ಮಾಡಿಕೊಟ್ಟಿದೆ.’ಹಿಂದೂ ವಿವಾಹ ಕಾನೂನುಎಂಬ ಕಾನೂನು ಕೂಡ ಇದೆ.ಕಲ್ಕತ್ತೆಯ ಮಠವೊಂದು ತಾನು ಹಿಂದು ವ್ಯಾಪ್ತಿಗೆ ಬರುವುದಿಲ್ಲವೆಂದಾಗ,೧೯೯೫ರಲ್ಲಿ ಸರ್ವೋಚ್ಚ ನ್ಯಾಯಾಲಯದ ಪೂರ್ಣಪೀಠವು ಅದು ಹಿಂದು ಧರ್ಮಕ್ಕೆ ಸೇರಿದ ಮಠಎಂದು ತೀರ್ಪು ನೀಡಿದೆ.ಗಾಂಧೀಜಿ ತಮ್ಮನ್ನು ಸನಾತನಿ ಹಿಂದೂಎನ್ನುತ್ತಾರೆ.ಸ್ವಾಮಿ ವಿವೇಕಾನಂದರು ಶಿಕಾಗೋದಲ್ಲಿ ತಮ್ಮನ್ನು ಹಿಂದುಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ… ” ಇತ್ಯಾದಿ ಉದಾಹರಣೆಗಳನ್ನು ನೀಡಿದ್ದಾರೆ.

’ಧರ್ಮ ಮತ್ತು ಜಾತಿ ಎರಡೂ ಒಂದೇ.ಹೀಗಿದ್ದಾಗ ಇಂತಹ ಅನವಶ್ಯಕ ಕಾಲಂಗಳು ಏಕೆ ಬೇಕು?’ ಎನ್ನುವ ಮಾನ್ಯ ಕಲ್ಬುರ್ಗಿಯವರ ಲಾಜಿಕ್ ಅನ್ನೇ ಮುಂದಿಟ್ಟುಕೊಂಡು “ಕಲ್ಬುರ್ಗಿ ಎನ್ನುವ ಊರು ಹಾಗೂ ವ್ಯಕ್ತಿ ಎರಡೂ ಒಂದೇ.ಹಾಗಾಗಿ ಅವಶ್ಯಕವಾದ ಊರು ಮಾತ್ರ ಇದ್ದರೆ ಸಾಕು,ಅದೇ ಹೆಸರಿನ ವ್ಯಕ್ತಿ ಬೇಡ’ ಎಂದರೆ ಹೇಗಾದೀತು? ಮಾನ್ಯ ಕಲ್ಬುರ್ಗಿಯವರ ವಾದದ ಧಾಟಿಯೂ ಅದೇ ರೀತಿಯಿದೆ.ಭಗವದ್ಗೀತೆ ಎಂಬುದು ವಚನ ಸಾಹಿತ್ಯವಂತೆ.ಹಾಗಿದ್ದರೆ ವಚನ ಸಾಹಿತ್ಯಗಳು ಭಗವದ್ಗೀತೆಯಂತೆ ಆಧ್ಯಾತ್ಮದ ಕುರಿತೇ ಮಾತನಾಡುತ್ತವೆಯೇ? ಆ ಬಗ್ಗೆ ಕಲ್ಬುರ್ಗಿಯವರಿಗೆ ಏನನ್ನಿಸುತ್ತದೆ? “ಹಿಂದೂ ಎಂಬ ಧರ್ಮವಿಲ್ಲ.ಧರ್ಮಗ್ರಂಥಗಳಿಲ್ಲ” ಎಂದೆಲ್ಲ ಹೇಳಿ ಸುಮ್ಮನಾಗುವ ಬದಲಿಗೆ “ಇರುವುದಾದರೂ ಏನು? ಅವುಗಳ ಸ್ವರೂಪವೇನು? ಧರ್ಮವೇಕೆ ಇಲ್ಲ.ಧರ್ಮ ಹಾಗೂ ಜಾತಿ ಎರಡೂ ಒಂದೇ ಬ್ರಹ್ಮಜ್ಞಾನದ ಗುಟ್ಟೇನು?” ಎಂಬುದೆಲ್ಲವನ್ನು ಮಾನ್ಯ ಕಲ್ಬುರ್ಗಿಯವರು ವಿವರಿಸಿ ತಮಗಿರುವ ಘನತೆಯನ್ನು ಉಳಿಸಿಕೊಳ್ಳುವುದಿಲ್ಲವೇಕೆ?

ಇನ್ನು ಕಲ್ಬುರ್ಗಿಯವರಿಗೆ ಚಿದಾನಂದ ಮೂರ್ತಿಗಳು ಉತ್ತರಿಸುವಾಗ ನೀಡಿರುವ ಉದಾಹರಣೆಗಳು ’ವೈಜ್ಞಾನಿಕವಾಗಿ” ಹಿಂದೂ ಎಂಬ ಧರ್ಮದ ಇರುವಿಕೆಯ ಬಗ್ಗೆ ಮಾತನಾಡುತ್ತದೆಯೇ? ನ್ಯಾಯಾಲಯದಲ್ಲಿ ಹಾಗೆ ಹೇಳಿದೆ.ಸಂವಿಧಾನದಲ್ಲಿ ಹೀಗೆ ಹೇಳಿದೆ ಎಂಬುದು ಕಾನೂನಿನ ಮಾನ್ಯತೆಯಾಗಬಲ್ಲದೇ ಹೊರತು ವೈಜ್ಞಾನಿಕವಾಗಿ ಸಾಬೀತು ಮಾಡಿದಂತಾಗಲಿಲ್ಲ ಅಲ್ಲವೇ? “ಇಲ್ಲ-ಇಲ್ಲ” ಎನ್ನುವ ಕಲ್ಬುರ್ಗಿಯವರಿಗೆ ಪ್ರತಿಕ್ರಿಯಿಸುವ ಚಿದಾನಂದ ಮೂರ್ತಿಗಳೂ “ಇದೆ.ಅವರು ಹೇಳಿದ್ದಾರೆ,ಅಲ್ಲಿ-ಇಲ್ಲಿ ಹೇಳಿದೆ” ಎನ್ನುತ್ತಾರೆ ಅಷ್ಟೇ.ಹಾಗಾಗಿ ಕಲ್ಬುರ್ಗಿಯವರು ನಮ್ಮಂತ ಜನಸಾಮಾನ್ಯರ ಮೇಲೆ ಹೇರಿದ ಗೊಂದಲವನ್ನು,ಹಿರಿಯರಾದ ಚಿದಾನಂದ ಮೂರ್ತಿಗಳ ಪ್ರತಿವಾದವೇನು ಪರಿಹರಿಸುವುದಿಲ್ಲ.

ಹಾಗಿದ್ದ ಮೇಲೆ ಕಲ್ಬುರ್ಗಿಯವರು ಹೇಳುವಂತೆ ಹಿಂದೂ ಎಂಬ ಧರ್ಮವೇ ಇಲ್ಲವೇ? ಹಾಗೇ ಪ್ರಶ್ನೆ ಕೇಳಿಕೊಳ್ಳುವ ಮೊದಲಿಗೆ,ನಮ್ಮ ಸಂಸ್ಕೃತಿಯ ಪರಿಭಾಷೆಯಲ್ಲಿ “ಧರ್ಮ” ಎಂಬ ಪದವನ್ನು ಹೇಗೆ ಬಳಸಲಾಗುತ್ತದೆ? ಎಂಬ ಪ್ರಶ್ನೆ ಕೇಳಿಕೊಳ್ಳಬೇಕು.ಧರ್ಮ ಎಂಬುದು ನಮ್ಮ ಪಾಲಿಗೆ “ಆದರ್ಶದ ನಡವಳಿಕೆ”.ಅಂದರೆ ಸತ್ಯ,ನ್ಯಾಯ ಮಾರ್ಗದಲ್ಲಿ ಬದುಕುವುದು ಇತ್ಯಾದಿಯಾಗಿ ವಿವರಿಸಬಹುದು.ಯಾರಾದರೂ ತಪ್ಪು ಮಾಡಲು ಹೊರಟಾಗ ’ಇದು ಧರ್ಮ ಅಲ್ಲವಪ್ಪ,ಹಾಗೇ ಮಾಡಬೇಡ’ ಎಂದೆಲ್ಲ ಹಿರಿಯರು ಹೇಳುವುದನ್ನು ನಾವು ಕೇಳಿಲ್ಲವೇ?

ಹೀಗೊಂದು ಉದಾಹರಣೆ :

ಶಾಲಾ ಪಠ್ಯವೊಂದರಲ್ಲಿ “ಭಾರತ ವೈವಿಧ್ಯಮಯ ದೇಶ.ಇಲ್ಲಿ ಹಿಂದೂ,ಜೈನ,ಬೌದ್ಧ,ಸಿಖ್,ಇಸ್ಲಾಂ,ಕ್ರಿಶ್ಚಿಯಾನಿಟಿ,ಪಾರ್ಸಿ…ಹೀಗೆ ಬಹಳಷ್ಟು ಧರ್ಮಗಳಿವೆ” ಎಂಬ ಪಾಠವನ್ನು ಕೇಳಿದ ವಿದ್ಯಾರ್ಥಿಯೊಬ್ಬ ಶಾಲೆ ಮುಗಿಸಿಕೊಂಡು ಹೊರಗೆ ಬಂದಾಗ,ಅವನಿಗೆ ಎದುರಾದ ಭಿಕ್ಷುಕನೊಬ್ಬ “ಧರ್ಮ ಮಾಡಪ್ಪ” ಅಂತಾನೇ. ಆಗ ಆ ಪಾಪದ ಹುಡುಗನಿಗೆ “ತರಗತಿಯಲ್ಲಿ ಮೇಷ್ಟ್ರು ಹೇಳಿದ ಅಷ್ಟೊಂದು ವೈವಿಧ್ಯಮಯ “ಧರ್ಮ”ಗಳಲ್ಲಿ ಯಾವ ಧರ್ಮವನ್ನು ಈ ಭಿಕ್ಷುಕನಿಗೆ ಮಾಡಬೇಕು? ಅಷ್ಟಕ್ಕೂ ಧರ್ಮ ಮಾಡುವುದೆಂದರೇನು?” ಎಂಬಿತ್ಯಾದಿ ಪ್ರಶ್ನೆಗಳು ಕಾಡಿದರೆ,ನಮ್ಮ ಬುದ್ಧಿಜೀವಿಗಳ ಬಳಿ ಆ ಹುಡುಗನ ಪ್ರಶ್ನೆಗೆ ಉತ್ತರವಿದೆಯೇ?

ಆ ವಿದ್ಯಾರ್ಥಿಯಂತೆಯೇ ನಮ್ಮಲ್ಲಿ ಹಲವರ ಈ ಗೊಂದಲಕ್ಕೆ ಮೂಲ,ಇಂಗ್ಲೀಷಿನ “Religion” ಪದಕ್ಕೆ ಅನುವಾದವಾಗಿ “ಧರ್ಮ” ಎಂಬ ಪದವು ಬಳಸಲ್ಪಟ್ಟಿರುವುದು ಮತ್ತು ಬಳಸಲ್ಪುಡುತ್ತಿರುವುದು.ಧರ್ಮ ಎನ್ನುವುದು ನಮ್ಮ ಬುದ್ಧಿಜೀವಿಗಳ ಪ್ರಕಾರ “Religion” ಆಗಿದ್ದರೆ,ಗಾಳಿಗೆ ಬೀಸುವುದು ಧರ್ಮ,ನೀರಿಗೆ ಹರಿಯುವುದು ಧರ್ಮ ಅಂತೆಲ್ಲ ಹೇಳುತ್ತಾರಲ್ಲ ಅದಕ್ಕೇನರ್ಥ? ಮಾತೃಧರ್ಮ,ಪಿತೃಧರ್ಮ,ರಾಜಧರ್ಮ ಇತ್ಯಾದಿ ಧರ್ಮಗಳಿವೆಯಲ್ಲ ಅದಕ್ಕೇನರ್ಥ? ಅವುಗಳೂ ಸಹ ಹಿಂದೂ,ಇಸ್ಲಾಂ,ಕ್ರಿಶ್ಚಿಯಾನಿಟಿಗಳಂತೇಯೇ ಧರ್ಮಗಳೇ? ಅಲ್ಲವೆಂದಾದರೆ “ಧರ್ಮ” ಎನ್ನುವುದಕ್ಕೆ ನಮ್ಮ ಪಂಡಿತರು ಅನ್ವಯಿಸಿರುವ “Religion” ಎಂಬ ಪದಕ್ಕಿರುವ ಅರ್ಥವಿದ್ದಂತಿಲ್ಲ.ಅದೆಲ್ಲಾ ಹೋಗಲಿ ಅಸಲಿಗೆ ಭಾರತೀಯ ನೆಲದಲ್ಲಿ ಹುಟ್ಟಿ ಬೆಳೆದಂತ ಯಾವುದಾದರೂ “Religion” ಇದೆಯೇ?

“ಭಾರತೀಯ ನೆಲದಲ್ಲಿ ಹುಟ್ಟಿ ಬೆಳೆದ ಯಾವ ರಿಲಿಜನ್ನುಗಳೂ ಇಲ್ಲ.ಹಾಗಾಗಿ ರಿಲಿಜನ್ ಎಂಬುದರ ಭಾಷಾಂತರವಾಗಿ ಹಿಂದೂ ಧರ್ಮ ಎಂಬ ಶಬ್ದವನ್ನು ಪ್ರಯೋಗಿಸಿದರೆ ಧರ್ಮ ಎಂಬುದಕ್ಕೆ ಯಾವ ನೆಲೆಯಲ್ಲೂ ಅರ್ಥವಿರಲು ಸಾಧ್ಯವಿಲ್ಲ; ಧರ್ಮ ಎಂಬ ನೆಲೆಯಲ್ಲೂ ಇರಲು ಸಾಧ್ಯವಿಲ್ಲ,ರಿಲಿಜನ್ ಎಂಬ ನೆಲೆಯಲ್ಲೂ ಸಾಧ್ಯವಿಲ್ಲ.ಒಟ್ಟಿನಲ್ಲಿ ಧರ್ಮದ ಅರ್ಥವು ರಿಲಿಜನ್ನಿನಿಂದಾಗಿ ದಿಕ್ಕುಗೆಟ್ಟಿರುವುದು ಸ್ಪಷ್ಟಎನ್ನುತ್ತಾರೆ ಪ್ರೊ.ರಾಜಾರಾಮ್ ಹೆಗಡೆ (ಬೌದ್ಧಿಕ ದಾಸ್ಯದಲ್ಲಿ ಭಾರತ ಪುಸ್ತಕದಲ್ಲಿ).

ಭಾರತದಲ್ಲಿ ಯಾವುದೇ ರಿಲಿಜನ್ನುಗಳು ಹುಟ್ಟಿಲ್ಲವೆಂದರೆ,”ಹಿಂದೂ ಧರ್ಮ”ವಿಲ್ಲ ಎಂದಂತಾಗುವುದಿಲ್ಲ.ಮೊದಲಿಗೆ ವಿವರಿಸಿದಂತೆ “ಧರ್ಮ” ಎಂಬ ಪದ ನಮ್ಮಲ್ಲಿ ಬಳಕೆಯಾಗುವ ರೀತಿಯೇ ಬೇರೆ.ಹಾಗಾಗಿ ಸದ್ಯಕ್ಕೆ ಧರ್ಮವನ್ನು ಹಿಂದುವಿನಿಂದ ಬೇರ್ಪಡಿಸೋಣ.”ಹಿಂದೂ” ಎಂಬುದು ಉಪಖಂಡದ ಜನರನ್ನು ಜನಾಂಗೀಯವಾಗಿ ಗುರುತಿಸಲು ಬಳಸಲ್ಪಡುತಿದ್ದ ಪದ.ಯುರೋಪಿಯನ್ನರ ಪಾಲಿಗೆ ರಿಲಿಜನ್ ಎಂಬುದು ಜಗತ್ತಿನೆಲ್ಲೆಡೆಯೆಲ್ಲಾ ಬೇರೆ ಬೇರೆ ಸ್ವರೂಪದಲ್ಲಿ ಅಸ್ತಿತ್ವದಲ್ಲಿದೆ ಎಂಬ ನಂಬಿಕೆಯೊಂದಿತ್ತು.ಅವರು ಭಾರತಕ್ಕೆ ಬಂದ ನಂತರ ಆ ನಂಬಿಕೆಯ ಮೇಲೆಯೇ ಇಲ್ಲೊಂದು ರಿಲಿಜನ್ ಹುಡುಕಿಕೊಂಡರು.ಸೆಮೆಟಿಕ್ ರಿಲಿಜನ್ ಗಳಾದ ’ಇಸ್ಲಾಂ,ಕ್ರಿಶ್ಚಿಯಾನಿಟಿ’ ಗಳಂತೆಯೇ ಇಲ್ಲಿನ “ಹಿಂದೂ” ಎಂದು ಗುರುತಿಸಲ್ಪಡುತಿದ್ದ ಜನರಿಗೂ ಒಂದು ರಿಲಿಜನ್ ಇರಬೇಕೆಂದು ಊಹಿಸಿ ಅದಕ್ಕೆ “ಹಿಂದೂ ರಿಲಿಜನ್” ಎಂದು ನಾಮಕರಣ ಮಾಡಿದರು.ಆ ನಂತರ ರಿಲಿಜನ್ನಿನ ಗ್ರಂಥವೊಂದು ಬೇಕಿತ್ತಲ್ಲ,ಅವರಿಗೆ ಭಗವದ್ಗೀತೆ ಸಿಕ್ಕಿತು.ಕಡೆಗೆ ಅವರಿಗೆ ವೇದಗಳು ಸಿಕ್ಕವು.ಹುಡುಕುತ್ತ ಹೋದಂತೆ ಇನ್ನೊಂದಿಷ್ಟು ಗ್ರಂಥಗಳೂ ಸಿಕ್ಕವೆನ್ನಿ.ಹಾಗೇ ಯುರೋಪಿಯನ್ನರ ಭ್ರಮೆಯಲ್ಲಿ ಹುಟ್ಟುಪಡೆದ ’ಹಿಂದೂ ರಿಲಿಜನ್’ ಎಂಬುದು ನಮ್ಮ ಪಂಡಿತರ ಕೈಯಲ್ಲಿ “ಹಿಂದೂ ಧರ್ಮ”ವೆಂದು ಅನುವಾದವಾಗಿದೆ ಮತ್ತು ಧರ್ಮ ಎಂಬ ಪದದ ಅರ್ಥವು ಕುಲಗೆಡುತ್ತಿದೆ.ಅದರ ಮುಂದುವರೆದ ಭಾಗವೇ ಒಬ್ಬರು ಇಲ್ಲಿ ಯಾವ ಧರ್ಮ ಇಲ್ಲವೆನ್ನುವುದು,ಇನ್ನೊಬ್ಬರು ಇಲ್ಲೊಂದು ಧರ್ಮವಿದೆ ಎಂದು ಹೇಳುವುದು.

ಭಾರತದಲ್ಲಿ “ಹಿಂದೂ ಧರ್ಮ” ವಿಲ್ಲವೆಂದ ಮೇಲೆ ಇರುವುದಾದರೂ ಏನು? “ಇಲ್ಲಿ ಸಂಪ್ರದಾಯಗಳಿವೆಭಾರತದಲ್ಲಿ ಹಿಂದೂಯಿಸಂ ಎಂದು ಏನನ್ನು ಪಾಶ್ಚಾತ್ಯರು ಕಂಡರೋ,ನಾವು ಕೂಡ ಏನನ್ನು ಉದ್ದೇಶಿಸಿ ಹಿಂದೂ ಧರ್ಮ ಎಂದು ಹೇಳುತ್ತೆವೆಯೋ ಅದು ಅನೇಕ ಸಂಪ್ರದಾಯಗಳ ಸಾಗರ(ಪ್ರೊ.ರಾಜಾರಾಮ್ ಹೆಗಡೆ – ಬೌದ್ಧಿಕ ದಾಸ್ಯದಲ್ಲಿ ಭಾರತ).

ನಮ್ಮಲ್ಲಿರುವುದು “ರಿಲಿಜನ್” ಅಲ್ಲ “ಸಂಪ್ರದಾಯ”ಗಳು.ರಿಲಿಜನ್ ಎಂಬುದು ರಿಲಿಜನ್ನಿನ ಗ್ರಂಥ,ಡಾಕ್ಟ್ರಿನ್,ಸತ್ಯದೇವ,ಏಕದೇವೋಪಾಸನೆಯ ಮೇಲೆ ನಿಂತಿದ್ದರೆ, ಸಂಪ್ರದಾಯಗಳು ಯಾವುದೇ ಗ್ರಂಥಗಳ ಮೇಲೆ ಆಧಾರಿತವಾಗದೇ,ನಮ್ಮ ಪೂರ್ವಜರು ಸಾವಿರಾರು ವರ್ಷಗಳಿಂದ ಆಚರಿಸಿಕೊಂಡು ಬಂದ ಆಚರಣೆಗಳ ಮೇಲೆ ಅಸ್ತಿತ್ವ ಹೊಂದಿರುತ್ತವೆ.ರಿಲಿಜನ್ ಎಂಬುದು ಧರ್ಮವಲ್ಲ ಎಂದ ತಕ್ಷಣ ಕೆಲವರು ಹಾಗಿದ್ದರೆ ಅದನ್ನು “ಮತ”ಗಳು ಎನ್ನಬಹುದು ಎನ್ನುತ್ತಾರೆ.ಆದರೆ “ಮತ”ವೂ ಸಹ “ರಿಲಿಜನ್” ಆಗುವುದಿಲ್ಲ.ಏಕೆಂದರೆ ಮತದ ಅನುಯಾಯಿಗಳಲ್ಲಿ ತಾರ್ಕಿಕ ಚರ್ಚೆಗೆ ಜಾಗವಿರುತ್ತದೆ (ಉದಾ: ಶಂಕರಾಚಾರ್ಯ ಮತ್ತು ಮಂಡನಾ ಮಿಶ್ರ).

ವೈಷ್ಣವ,ಶೈವ,ಜೈನ,ಬೌದ್ಧ,ದ್ವೈತ,ಅದ್ವೈತ ಮುಂತಾದ ಮತಗಳು,ವಿಭಿನ್ನ ಸಂಪ್ರದಾಯಗಳ ಆತ್ಮ/ ಪರಮಾತ್ಮ/ಶೂನ್ಯ ಮುಂತಾದ ಆಧ್ಯಾತ್ಮಿಕ ತತ್ವಗಳನ್ನು ಪ್ರತಿಪಾದಿಸುತ್ತವೆ ಮತ್ತು ಆ ತತ್ವಗಳನ್ನು ಸಾಧಿಸುವ,ಸಾಕ್ಷಾತ್ಕರಿಸಿಕೊಳ್ಳುವ ಮಾರ್ಗಗಳ ಕುರಿತು ಭಿನ್ನ ಅಭಿಪ್ರಾಯಗಳನ್ನು ಹೊಂದಿರುತ್ತವೆ.

ಹಾಗಾಗಿಯೇ ಒಂದು ಮತ,ಇನ್ನೊಂದು ಮತದ ಆಧ್ಯಾತ್ಮಿಕ ನಿಲುವಿನ ಬಗ್ಗೆ ನಿರಂತರ ಟೀಕೆ,ವಿಮರ್ಶೆಗಳನ್ನು ಮಾಡುತ್ತಲೇ ಬಂದಿವೆ.

ಆದರೆ ಸೆಮೆಟಿಕ್ ರಿಲಿಜನ್ನುಗಳ ಗ್ರಹಿಕೆಯ ಚೌಕಟ್ಟಿನೊಳಗೆ ಈ ಆಧ್ಯಾತ್ಮಿಕ ತತ್ವಗಳು ಬರುವುದೇ ಇಲ್ಲ ಇನ್ನು ಚರ್ಚಿಸುವುದೆಲ್ಲಿಂದ ಬಂತು? ರಿಲಿಜನ್ ಗಳಿಗೆ ಬಹುಮುಖ್ಯವಾದ ’ಗಾಡ್,ಸೋಲ್,ಸಾಲ್ವೇಶನ್,ಥಿಯಾಲಜಿ’ ಇತ್ಯಾದಿಗಳು “ಮತ”ಗಳಿಗೆ ಚರ್ಚೆಯ ವಿಚಾರಗಳೇ ಅಲ್ಲ! ಮತಗಳು ಚರ್ಚಿಸುವ ಆಧ್ಯಾತ್ಮಿಕ ತತ್ವಗಳು ರಿಲಿಜನ್ನುಗಳ ಲೋಕದೃಷ್ಟಿಯಲ್ಲಿ ಅಸ್ತಿತ್ವದಲ್ಲೇ ಇಲ್ಲ! ಹಾಗಾಗಿ “ಮತ”ಗಳೂ ಸಹ “ರಿಲಿಜನ್” ಗಳಾಗಲು ಸಾಧ್ಯವಿಲ್ಲ.

ಹೀಗಿರುವಾಗ ನಾವು ಇನ್ನೆಷ್ಟು ದಿನ ಹೀಗೆ ತಪ್ಪು ತಪ್ಪಾಗಿ ನಮ್ಮಲ್ಲೂ ಒಂದು ರಿಲಿಜನ್ ಇದೇ ಎಂಬ ಭ್ರಮೆಯಲ್ಲಿಯೇ ಬಿದ್ದು, ಅದಕ್ಕೆ “ಧರ್ಮ” ಅಥವಾ “ಮತ” ಎಂಬ ಪದವನ್ನೋ ಏಕೆ ಬಳಸಬೇಕು? ಮತ್ತು ಇಲ್ಲದಿರುವ “ರಿಲಿಜನ್” ಚೌಕಟ್ಟಿನೊಳಗೆ ನಮ್ಮ ಸಂಪ್ರದಾಯಗಳನ್ನು ನಾವೇಕೆ ಕಟ್ಟಿಹಾಕಿಕೊಳ್ಳಬೇಕು?

ಭಾರತದಲ್ಲಿ ರಿಲಿಜನ್ ಇಲ್ಲ ಹಾಗೂ ಧರ್ಮ ಎಂಬುದು ರಿಲಿಜನ್ ಅಲ್ಲ ಎಂಬುದನ್ನು ತಿಳಿದುಕೊಳ್ಳುವುದು ಭಾರತೀಯ ಸಂಸ್ಕೃತಿಯ ಅಧ್ಯಯನಕ್ಕೆ ನಿರ್ಣಾಯಕವಾದ ಹೆಜ್ಜೆಯಾಗಿದೆ ಎಂಬುದು ನನ್ನ ವಾದವಾಗಿದೆ.ಅದನ್ನು ತಿಳಿದುಕೊಳ್ಳದಿದ್ದರೆ ನಮ್ಮ ಸಂಪ್ರದಾಯಗಳ ಕುರಿತು ನಮಗೆ ಸಿಗುವುದು ಈ ಮೇಲಿನಂತಹ ವಿಕೃತ ಚಿತ್ರಣಗಳು ಮಾತ್ರ.ಈ ಚಿತ್ರಣಗಳು ವಜ್ರ ಕವಚಗಳಂತೆ ಭಾರತೀಯ ಸಂಸ್ಕೃತಿಯ ಕುರಿತ ನಮ್ಮ ಅಜ್ಞಾನವನ್ನು ರಕ್ಷಿಸುತ್ತಿವೆಎನ್ನುತ್ತಾರೆ ಪ್ರೊ.ರಾಜಾರಾಮ್ ಹೆಗಡೆ – ’ಬೌದ್ದಿಕ ದಾಸ್ಯದಲ್ಲಿ ಭಾರತ’ ಪುಸ್ತಕದಲ್ಲಿ.

“ಹಿಂದೂ ಧರ್ಮವಿಲ್ಲ,ಧರ್ಮ ಗ್ರಂಥವಿಲ್ಲ.ಜಾತಿ-ಧರ್ಮ ಎಲ್ಲ ಒಂದೇ” ಎನ್ನುವ ಕಲ್ಬುರ್ಗಿಯವರು ಅಸಲಿಗೆ ಈ ನೆಲದಲ್ಲಿ ಇರುವುದಾದರೂ ಏನು ಎಂಬುದನ್ನು ನಿರ್ಧರಿಸಲಾಗದ ಗೊಂದಲಕಾರಿ ಸ್ಥಿತಿಯಲ್ಲಿದ್ದಂತೆ ಮಾತನಾಡುತ್ತಿದ್ದಾರೆ.ಒಂದು ವೇಳೆ ಕಲ್ಬುರ್ಗಿಯವರ ಮಾತುಗಳು “ಬೌದ್ಧಿಕ ವಾದ”ವಾಗಿದ್ದರೆ,ಅವರು ಈ ನೆಲದಲ್ಲಿ ಹಿಂದೂ ಧರ್ಮವಿಲ್ಲ ಎಂದರೆ ಇರುವುದಾದರೂ ಏನು ಎಂಬುದನ್ನು ಹೇಳಬೇಕು.ಇಲ್ಲವೆಂದರೆ ಅವರದು ಹೀಗೆ ಸುಮ್ಮನೇ ಗಾಳಿಯಲ್ಲಿ ಗುಂಡು ಹಾರಿಸಿದಂತೆ ಸಭೆ-ಸಮಾರಂಭಗಳಲ್ಲಿ ವಿವಾದಾತ್ಮಕ ಹೇಳಿಕೆಗಳಷ್ಟೇ ಎನಿಸಿಕೊಳ್ಳುತ್ತವೆ ಮತ್ತು ಅಂತ ಹೇಳಿಕೆಗಳಿಗೆ ಮಾನ್ಯ ಚಿದಾನಂದ ಮೂರ್ತಿಗಳು ಧಾವಂತಕ್ಕೆ ಬಿದ್ದು ಪ್ರತಿಕ್ರಿಯೆ ನೀಡಬೇಕಾದ ಅಗತ್ಯವೂ ಇರುವುದಿಲ್ಲ.ಕಲ್ಬುರ್ಗಿಯವರು ಇಲ್ಲಿ ಧರ್ಮವಿಲ್ಲ,ಧರ್ಮಗ್ರಂಥವಿಲ್ಲ ಎಂದ ತಕ್ಷಣ ನಮ್ಮ ಜನರೇನು ದೇವಸ್ಥಾನಗಳಿಗೆ ಹೋಗುವುದನ್ನು,ತಮ್ಮ ಆಚರಣೆಗಳನ್ನು ನಿಲ್ಲಿಸುವುದಿಲ್ಲವಲ್ಲ.ಹಾಗಿದ್ದಾಗ ಚಿದಾನಂದ ಮೂರ್ತಿಗಳ ಆತಂಕಕ್ಕೆ ಕಾರಣವಿಲ್ಲ.

ಒಟ್ಟಿನಲ್ಲಿ ನಮ್ಮ ಹಿರಿಯರ ಕೈಗೆ ಸಿಕ್ಕು “ಧರ್ಮ” ಎಂಬ ಪದವು ದಾರಿತಪ್ಪಿದೆ.ಒಂದು ವೇಳೆ ಈ ಹಿರಿಯರಿಗೆ ತಾವು ಸರಿ ದಾರಿಯಲ್ಲಿದ್ದೇವೆ ಎನಿಸಿದರೆ,ಆ ದಾರಿಯ ಸ್ವರೂಪವನ್ನು ವಿವರಿಸಬೇಕಾಗುತ್ತದೆಯೇ ಹೊರತು ಮೈಕಿನ ಮುಂದೆ ನಿಂತು ವಿವಾದವೆಬ್ಬಿಸಿ ಕಿರಿಯರ ಹಾದಿಯನ್ನೂ ತಪ್ಪಿಸುವುದು ಶೋಭೆ ತರುವ ವಿಚಾರವಲ್ಲ.

 

21 ಟಿಪ್ಪಣಿಗಳು Post a comment
  1. ಏಪ್ರಿಲ್ 2 2015

    ಭಗವದ್ಗೀತೆಯಲ್ಲಿ ಹಿಂದೂ ಧರ್ಮದ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಕೃಷ್ಣನ ಹೆಸರಿನಲ್ಲಿ ಭಗವದ್ಗೀತೆಯನ್ನು ಯಾರೋ ಬರೆದಿದ್ದಾರೆ. ಅವರು ಯಾರೆಂಬುದು ಕೂಡ ಯಾರಿಗೂ ತಿಳಿಯದು. ಕೃಷ್ಣ ದೇವರೆಂಬುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಞಾಧಾರಗಳೂ ಇಲ್ಲ. ಜಾತ್ಯಾತೀತ ರಾಷ್ಟ್ರವೆಂದು ಘೋಷಿಸಿ ದಶಕಗಳೇ ಆಗಿದ್ದರೂ ಜಾತಿಯ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ನಮ್ಮ ಜನ ನಿಲ್ಲಿಸಿಯೇ ಇಲ್ಲ. ಹೇಳುವುದೊಂದು, ಮಾಡುವುದು ಮತ್ತೊಂದು. ಇಂತಹ ಇಬ್ಬಗೆಯ ನೀತಿಗಳಿಂದ ನಮ್ಮ ದೇಶ ಹಾಳಾಗುತ್ತಿದೆ ಅಷ್ಟೆ. ಶ್ರೀ ಸಾಮಾನ್ಯನಿಗೆ ದುಡಿದು ಸಂಪಾದಿಸಲು ಒಂದು ಕೆಲಸ, ಮೂರು ಹೊತ್ತು ಊಟ, ಒಂದು ಹೊತ್ತು ನಿದ್ರಿಸಲು ಮತ್ತು ತಂಗಲು ತಲೆಯ ಮೇಲೊಂದು ಸೂರು – ಇಷ್ಟು ಬೇಕೇ ಹೊರತು ಅರ್ಥವಾಗದ ಧರ್ಮಗ್ರಂಧಗಳಾಗಲೀ, ಕೆಲಸಕ್ಕೆ ಬಾರದ ಜಾತಿ ಮತಗಳಾಗಲೀ ಅಲ್ಲವೇ ಅಲ್ಲ.

    ಉತ್ತರ
    • ಏಪ್ರಿಲ್ 2 2015

      ಅಲ್ಲಾ ಸಾರ್, ಲೇಖನದಲ್ಲಿ “ಧರ್ಮ” ಪದವನ್ನು ಕುಲಗೆಡಿಸುತ್ತಿರುವ ಬಗ್ಗೆ ಹೇಳಿದರೆ,ನೀವು ಕಮೆಂಟಿನಲ್ಲಿ “ಧರ್ಮ ಗ್ರಂಥ”ಗಳು ಅಂತೀರಲ್ಲ! ಅದೇನದು?

      ಉತ್ತರ
    • ಏಪ್ರಿಲ್ 2 2015

      ತಾವು ಪಾಶ್ಚಾತ್ಯ ಚಿಂತಕರಾದ Maslow ಎಂಬುವರ ಮಾನವಾವಶ್ಯಕತೆಗಳ ಶ್ರೇಣಿಯನ್ನು Maslow’s hierarchy of human needs ಓದಿ.
      ಪೂರ್ವಾಗ್ರಹ ಇಲ್ಲದೆ ಇದ್ದರೆ ಪತಂಜಲಿಯ ಯೋಗಚಕ್ರ ಅಭ್ಯಾಸ ಮಾಡಿ.
      ಬಸವಣ್ಣನವರು ಹೇಳಿದ ಬಡತನಕೆ ಉಂಬುವ ಚಿಂತೆ ಕಲಿತು ಆಮೇಲೆ ಉಲಿಯಿರಿ.
      ಸುಖಾಸುಮ್ಮನೆ ಬಡಬಡಿಸಿದರೆ ಏನು ಬಂತು?

      ಉತ್ತರ
      • Nagshetty Shetkar
        ಏಪ್ರಿಲ್ 2 2015

        ನಿಮ್ಮ ಕಪಟ ವಾದಕ್ಕೆ ದಯವಿಟ್ಟು ಅಣ್ಣ ಬಸವಣ್ಣನವರ ದುರುಪಯೋಗ ಮಾಡುವುದನ್ನು ಈ ಕ್ಷಣವೇ ನಿಲ್ಲಿಸಿ. ಇಂಗ್ಲೆಂಡಿನಲ್ಲಿ ವೈದ್ಯನಾಗಿದ್ದೇನೆ ಎಂಬ ಅಹಂಕಾರದಿಂದ ಭಾರತದ ಬಡವರನ್ನು ನಿಕೃಷ್ಟವಾಗಿ ನೋಡುವುದನ್ನು ನಿಲ್ಲಿಸಿ. ಸ್ವಾತಂತ್ರ್ಯ ಸಿಕ್ಕಿ ೭೦ಕ್ಕೂ ಅಧಿಕ ವರ್ಷಗಳಾದ ಮೇಲೂ ಆಂಗ್ಲರ ಗುಲಾಮಗಿರಿ ಮಾಡುವುದು ಶೋಚನೀಯ.

        ಉತ್ತರ
        • WITIAN
          ಏಪ್ರಿಲ್ 3 2015

          ಏಬ್ರಹಾಮ್ ಮಾಸ್ಲೊ (Abraham Maslow) ಎಂಬ ಅಮೆರಿಕನ್ ಮನಃಶಾಸ್ತ್ರಜ್ಞನ ಬಗ್ಗೆ ಬರೆದಿರುವುದಕ್ಕೂ ಸುದರ್ಶನ ರಾವ್ ಬ್ರಿಟನ್ನಿನಲ್ಲಿ ಕೆಲಸ ಮಾಡುವುದಕ್ಕೂ ಏನು ಸಂಬಂಧವಿದೆ? ಅವರು Abraham Maslow’s heirarchy of human needs ಬಗ್ಗೆ ಬರೆದರೆ ಭಾರತದ ಬಡವರನ್ನು ನಿಕೃಷ್ಟವಾಗಿ ಕಂಡಂತೆ ಹೇಗೆ ಆದೀತು? ಮತ್ತೊಂದು ಪುಟದಲ್ಲಿ ಲೇಖನ ಬರೆದವರಿಗೆ ಮಾನಸಿಕ ತಜ್ಞರ ಹತ್ತಿರ ತಪಾಸಣೆ ಮಾಡಿಸಲು ಹೇಳುವ ನೀನು ಸ್ವತಃ paranoid ಮನೋದೌರ್ಬಲ್ಯದಿಂದ ನರಳುವುದು ಈ ಪ್ರತಿಕ್ರಿಯೆಯಿಂದ ಚೆನ್ನಾಗಿ ತಿಳಿದುಬರುತ್ತದೆ

          ಉತ್ತರ
        • ಏಪ್ರಿಲ್ 3 2015

          ಯಾವೂರು ಅಂತ ಕೇಳಿದರೆ ಎಂಟು ಮಂದಿ ಮಕ್ಕಳು ಅಂತ ಅಂದ ತಿಕ್ಕಲನ ಸಹವಾಸ. ನಾನು ಹೇಳುವ ಅಂಶಗಳಿಗೆ ಗಮನ ಕೊಡದೆ ಎತ್ತೆತ್ತಲೋ ಹೋಗುತ್ತದೆ ಕುಚೇಷ್ಟಕರ ತಲೆ.
          ಬರೀ ವಿತಂಡವಾದ ಮಾಡುವ ನಿಮ್ಮ ಗುಂಪನ್ನು ಒಪ್ಪಿಸುವ ಅವಷ್ಯಕತೆ ಇಲ್ಲ. ನಿಮ್ಮ ಸಂಕುಚಿತ ವ್ಯಖ್ಯಾನದ ಧಾಟಿಯನ್ು ಅನಾವರಣ ಮಾಡಿದೆ ಅಷ್ಟೇ.
          ಬಸವಣ್ಣ ವಿಶ್ವಮಾನವ. ನೀವೇನು ಗುತ್ತಿಗೆ ಪಡೆದಿಲ್ವಲ್ಲ.

          ಉತ್ತರ
          • ಗಿರೀಶ್
            ಏಪ್ರಿಲ್ 3 2015

            ಬಸವಣ್ಣ ವಿಶ್ವ ಮಾನವ ಹೆೇಗೆ? ವಿಶ್ವ ಮಾನವ ಎಂದರೆೇನು?

            ಉತ್ತರ
    • ಶ್ಯಾಮ್
      ಏಪ್ರಿಲ್ 2 2015

      ಕೃಷ್ಣ ದೇವರೆಂಬುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಞಾಧಾರಗಳೂ ಇಲ್ಲ
      ನಿಮಗೆ ಯಾವ ರೀತಿಯ ಸಾಕ್ಷ್ಯಾಧಾರಗಳು ಬೇಕು. ಹೇಗಿದ್ದಾರೆ ಒಪ್ಪಿಕೊಳ್ಳುತ್ತೀರಿ ತಿಳಿಸಿ .ನಂತರ ಅದನ್ನು ಕೊಡಬಹುದು

      ಉತ್ತರ
  2. ಏಪ್ರಿಲ್ 2 2015

    ಯು ಆರ್ ಅನಂತ ಮೂರ್ತಿ ರವರ ಪರಲೋಕ ಯಾತ್ರೆಯ ನಂತರ ಅವರ ಸ್ಥಾನ ತುಂಬಿಸಲು ಬುದ್ದಿ ಜೀವಿಗಳು ಎಂದು ಹೇಳಿಕೊಳ್ಳುವ ಇಂತಹ ಸಾಹಿತ್ಯ ಭಯೋತ್ಪಾದಕರು ಪ್ರವೇಶ ಪರೀಕ್ಷೆ ಬರೆಯುತ್ತಿದ್ದಾರೆ , ಹಿಂದೂ ಧರ್ಮವನ್ನು ತೆಗಳಿದರೆ ಇವರ ಬ್ಯಾಂಕ್ ಬ್ಯಾಲೆನ್ಸ್ ಏರುತ್ತದೆ, ಬೇಗ ಒಳ್ಳೆ ಪ್ರಮೋಷನ್ ದೊರೆಯುತ್ತದೆ, ಪದವಿ ಪಾರಿತೋಷಕ ಸಿಗುತ್ತದೆ . ಇವರಿಗೆ ಬೇರೆ ಧರ್ಮದ ಬಗ್ಗೆ ಮಾತನಾಡಲು ಗುಂಡಿಗೆ ಇಲ್ಲ , ಏಕೆಂದರೆ ಹಿಂದೂ ಗಳು ಎಂದರೆ ಇವರಿಗೆ ಕಾಮಿಡಿ ಅನ್ನಿಸುತ್ತದೆ , ಒಂದಲ್ಲ ಒಂದು ದಿನ ಇವರಿಗೆ ಜನರೇ ಬಟ್ಟೆ ಬಿಚ್ಚಿ ಹೊಡೆಯುವ ಕಾಲ ದೂರವಿಲ್ಲ , ಅಭಿವ್ಯಕ್ತ ಸ್ವಾತಂತ್ರ್ಯ ದ ಹೆಸರಿನಲ್ಲಿ ಜಾತಿಗಳನ್ನು ಒಡೆಯುವ ಇವರಿಗೆ ವಿದೇಶಿ ಸಂಪತ್ತು ಸಿಗುತ್ತದೆ ,

    ಉತ್ತರ
  3. Mohan Kulkarni
    ಏಪ್ರಿಲ್ 2 2015

    ಇತ್ತೀಚೆಗೆ ಕೆಲ ಬುದ್ಧಿಜೀವಿಗಳೆಂದು ಹೆಳಿಕೊಳ್ಳುಅವವರಿಗೆ ಹಿಂದೂ ಧರ್ಮ ಅವಹೇಳನ ಮಾಡುವದು ಫ್ಯಾಷನ್ ಆಗಿಬಿಟ್ಟಿದೆ

    ಉತ್ತರ
    • Nagshetty Shetkar
      ಏಪ್ರಿಲ್ 2 2015

      “ಇತ್ತೀಚೆಗೆ ಕೆಲ ಬುದ್ಧಿಜೀವಿಗಳೆಂದು ಹೆಳಿಕೊಳ್ಳುಅವವರಿಗೆ ಹಿಂದೂ ಧರ್ಮ ಅವಹೇಳನ ಮಾಡುವದು ಫ್ಯಾಷನ್ ಆಗಿಬಿಟ್ಟಿದೆ”

      ಈ ಮೇಲಿನಂತೆ ಹೇಳುವುದು ಲದ್ದಿಜೀವಿಗಳಿಗೆ ಫ್ಯಾಶನ್ ಆಗಿಬಿಟ್ಟಿದೆ.

      ಉತ್ತರ
  4. Rajaram Hegde
    ಏಪ್ರಿಲ್ 9 2015

    ಕಲ್ಬುರ್ಗಿಯವರ ಹೇಳಿಕೆಯನ್ನು ನಾನೂ ಗಮನಿಸಿದ್ದೇನೆ. ಅದರಲ್ಲೇನೂ ಆಶ್ಚರ್ಯವಿಲ್ಲ. ಅನೇಕ ಸೆಕ್ಯುಲರ್ ಚಿಂತಕರು ಹಿಂದೂ ಎನ್ನುವುದು ಕ್ರಿಶ್ಚಿಯನ್ ಥರದ ಧರ್ಮವಲ್ಲ ಎಂಬರ್ಥದಲ್ಲಿ ಇಂಥ ಹೇಳಿಕೆಗಳನ್ನು ಈಗಾಗಲೇ ಮಾಡಿದ್ದಾರೆ. ಇಂಥ ಹೇಳಿಕೆಗಳ ಉದ್ದೇಶವೆಂದರೆ ಹಿಂದುತ್ವವನ್ನು ಅಲ್ಲಗಳೆಯುವುದು. ಆದರೆ ತಾವೇನು ಹೇಳುತ್ತಿದ್ದೇವೆ ಎನ್ನುವುದು ಇವರಿಗೆಲ್ಲ ಅರ್ಥವಾಗಿದೆ ಎಂದೇನೂ ನನಗನಿಸುವುದಿಲ್ಲ. ಏಕೆಂದರೆ ಅವರಿಗೆ ರಿಲಿಜನ್ ಕುರಿತು ಯಾವುದೇ ಸಿದ್ಧಾಂತಗಳಾಗಲೀ, ಸ್ಪಷ್ಟ ತಿಳುವಳಿಕೆಯಾಗಲೀ ಇದ್ದಂತಿಲ್ಲ. ಹಿಂದೂ ಧರ್ಮ ಇಲ್ಲ ಎಂದವರು ಮತ್ತೆ ಅದೇ ಉಸುರಿನಲ್ಲೇ ಬ್ರಾಹ್ಮಣ ಪುರೋಹಿತಶಾಹಿ ಇದೆ, ಜಾತಿ ವ್ಯವಸ್ಥೆ ಇದೆ, ಹಿಂದೂ ಕಾನೂನು ಇದೆ ಎನ್ನುತ್ತಾರೆ. ರಿಲಿಜನ್ನೇ ಇಲ್ಲದೇ ಪ್ರೀಸ್ಟ್ ಹುಡ್ ಇದೆ ಎಂದರೆ ಹೇಗೆ? ಕಲ್ಬುರ್ಗಿಯವರಿಗೆ ಹಿಂದೂ ಧರ್ಮ ಇಲ್ಲ, ಎಂದು ಜ್ಞಾನೋದಯವಾಗಿದ್ದೇ ಹೌದಾದಲ್ಲಿ ಬ್ರಾಹ್ಮಣ ಪುರೋಹಿತಶಾಹಿ, ಹಿಂದೂ ಕಾನೂನು ಇರಲಿಕ್ಕೆ ಸಾಧ್ಯವಿಲ್ಲ ಹಾಗಾಗಿ ವಚನ ಚಳವಳಿ ಇವುಗಳ ವಿರುದ್ಧ ನಡೆದಿರಲಿಕ್ಕೆ ಸಾಧ್ಯವಿಲ್ಲ ಎಂದು ಘೋಷಣೆ ಮಾಡಬಲ್ಲರೆ? ಮತ್ತೆ ಅವರೇಕೆ ವಚನಗಳು ಜಾತಿ ವ್ಯವಸ್ಥೆಯ ವಿರೋಧಿ ಚಳವಳಿಯಲ್ಲ ಎಂದು ಕೆಲವರು ಅಭಿಪ್ರಾಯ ಪಟ್ಟಾಗ ಮೈಮೇಲೆ ಗಣ ಬಂದವರಂತೆ ‘ಆ ಸಂಶೋಧನೆಯ ಕೇಂದ್ರವನ್ನು ಮುಚ್ಚಿ’ ಎಂದು ಬೊಬ್ಬೆ ಹೊಡೆಯುತ್ತಿದ್ದರು? ಅಂದರೆ ಅವರ ಹೇಳಿಕೆ ಹೇಗಿದೆಯೆಂದರೆ ‘ ಆನೆ ಇಲ್ಲ, ಆದರೆ ಅದರ ಸೊಂಡಿಲು, ಕಾಲು, ಬಾಲ ಇವೆ’ ಎಂದ ಹಾಗೇ ಇದೆ. ಇಂಥವರಿಗೆ ಆನೆ ಎಂದರೆ ಏನೆಂದು ಗೊತ್ತು ಎಂದಾದರೂ ಹೇಗೆ ತೀರ್ಮಾನಿಸುತ್ತೀರಿ? ತೀರ್ಮಾನ ನಿಮಗೇ ಬಿಟ್ಟದ್ದು.

    ಉತ್ತರ
    • Nagshetty Shetkar
      ಏಪ್ರಿಲ್ 9 2015

      ಕಲಬುರ್ಗಿಯವರು ಹೆಸರಾಂತ ಲಿಂಗಾಯತ ವಿದ್ವಾಂಸರು, ತಮ್ಮ ಅಪಾರ ಪಾಂಡಿತ್ಯ ಹಾಗೂ ಮೌಲಿಕ ಸಂಶೋಧನೆಗಳಿಂದ ಖ್ಯಾತಿ ಪಡೆದ ಹಿರಿಯ ಜೀವ. ಅವರ ಬಗ್ಗೆ ಸಿ ಎಸ್ ಎಲ್ ಸಿ ಯ ಪಾಶ್ಚಾತ್ಯ ಫಂಡಿತ (ಫಂಡಿತ = ಫಂಡಿಗೆಂದು ಫಂಡಿನಿಂದ ಫಂಡಿಗೋಸ್ಕರ ಅಧ್ಯಯನ ಮಾಡುವ ಪಂಡಿತ) ವರ್ಗದವರಿಗೆ ಸಿಟ್ಟು ಅಸೂಯೆ ಈರ್ಷ್ಯೆ ಇರಬಹುದು. ಆದರೆ ಯಕಶ್ಚಿತ್ ಸಿ ಎಸ್ ಎಲ್ ಸಿ ಅನ್ನು ಮುಚ್ಚಿಸಲು ಕಲ್ಬುರ್ಗಿಯವರು ಬೊಬ್ಬೆ ಹೊಡೆಯುತ್ತಿದ್ದರು ಅಂತೆಲ್ಲಾ ಚೀಪಾಗಿ ಬರೆಯುವುದು ಫಂಡಿತರಿಗೂ ಶೋಭೆ ನೀಡುವುದಿಲ್ಲ! ಕನಿಷ್ಠ ಕಲ್ಬುರ್ಗಿ ಅವರ ವಯಸ್ಸಿಗಾದರೂ ಬೆಲೆ ಕೊಡಿ ಹೆಗಡೆ ಅವರೇ!

      ಉತ್ತರ
      • Nagshetty Shetkar
        ಏಪ್ರಿಲ್ 9 2015
      • ಏಪ್ರಿಲ್ 10 2015

        ಶೆಟ್ಕರ್ ಸಾಹೇಬರೇ,
        ವಯಸ್ಸಿನ ಹಿರಿಯ ಕಲ್ಬುರ್ಗಿಯವರ ಬಗ್ಗೆ ರಾಜಾರಾಮ್ ಹೆಗಡೆಯವರು ಈ ಹಿಂದೆ ಬರೆದಿದ್ದನ್ನು ತಾವು ಓದಿಲ್ಲವೆನಿಸುತ್ತದೆ ಓದಿಕೊಳ್ಳಿ. ಇಲ್ಲಿದೆ : http://wp.me/p14FzR-21v
        ವ್ಯಕ್ತಿಗೆ ಗೌರವ ಸಿಗುವುದು ಕೇವಲ ವಯಸ್ಸಿನ ಕಾರಣಕ್ಕಾಗಿಯಲ್ಲ,ಆತ ನಡೆದುಕೊಳ್ಳುವ ರೀತಿಯ ಮೇಲೆ.
        ಇನ್ನು “ಫಂಡಿತ”ರು ಯಾರು ಎನ್ನುವುದು ಯುವಜನರಿಗೆ ಅರ್ಥವಾಗಿರುವುದರಿಂದಲೇ ಇತ್ತೀಚೆಗೆ “ಗಂಜಿ ಗಿರಾಕಿ” ಪದ ಹೆಚ್ಚೆಚ್ಚು ಚಾಲ್ತಿಯಲ್ಲಿರುವುದು.

        ಉತ್ತರ
        • Nagshetty Shetkar
          ಏಪ್ರಿಲ್ 10 2015

          ಇಷ್ಟು ದಿನ ದರ್ಗಾ ಸರ್ ಅವರ ತೇಜೋವಧೆ ನಡೆಸಿಯಾಯಿತು ಈಗ ಬಸವಶ್ರೀ ಪ್ರಶಸ್ತಿ ವಿಜೇತ ನಾಡೋಜ ಕಲ್ಬುರ್ಗಿ ಸರ್ ಅವರ ಸರದಿ? ಬಸವ ಪರಂಪರೆ ಬಗ್ಗೆ ಇಷ್ಟೊಂದು ದ್ವೇಷ ಏಕೆ?

          ಉತ್ತರ
        • Nagshetty Shetkar
          ಏಪ್ರಿಲ್ 10 2015

          “ಇನ್ನು “ಫಂಡಿತ”ರು ಯಾರು ಎನ್ನುವುದು ಯುವಜನರಿಗೆ ಅರ್ಥವಾಗಿರುವುದರಿಂದಲೇ…”

          ದರ್ಗಾ ಸರ್ ಅವರಾಗಲಿ ಕಲ್ಬುರ್ಗಿ ಸರ್ ಅವರಾಗಲಿ ವಿದೇಶಿ ಹಣದಿಂದ ವಚನ ಸಾಹಿತ್ಯದ ಬಗ್ಗೆ ಸಂಶೋಧನೆ ನಡೆಸಿದ್ದಾರೆ ಅಂತ ನಿಮ್ಮ ಹತ್ತಿರ ಆಧಾರಗಳಿದ್ದರೆ ಬಹಿರಂಗಪಡಿಸಿ. ಹಾಗೇನೆ ಸಿ ಎಸ್ ಎಲ್ ಸಿ ಗೆ ಎಲ್ಲಿಂದ ಫಂಡ್ಸ್ ಬಂದವು ಅಂತಾ ಹೇಳಿ.

          ಉತ್ತರ
  5. aki
    ಏಪ್ರಿಲ್ 9 2015

    ಆದರೆ ಯಕಶ್ಚಿತ್ ಸಿ ಎಸ್ ಎಲ್ ಸಿ ಅನ್ನು ಮುಚ್ಚಿಸಲು ಕಲ್ಬುರ್ಗಿಯವರು ಬೊಬ್ಬೆ ಹೊಡೆಯುತ್ತಿದ್ದರು ಅಂತೆಲ್ಲಾ ಚೀಪಾಗಿ ಬರೆಯುವುದು ಫಂಡಿತರಿಗೂ ಶೋಭೆ ನೀಡುವುದಿಲ್ಲ! ಕನಿಷ್ಠ ಕಲ್ಬುರ್ಗಿ ಅವರ ವಯಸ್ಸಿಗಾದರೂ ಬೆಲೆ ಕೊಡಿ ಹೆಗಡೆ ಅವರೇ! ನಿಮ್ಮ ಜಾತಿಯವರ ನಿಂದನೆ ಆದ ಕೂಡಲೇ ಅವರ ವಯಸ್ಸು ಅವರ ಗೌರವ ಎಲ್ಲಾ ನಿಮಗೆ ನೆನಪಾಗುತ್ತಲ್ಲ ಶೆಟ್ಕರ್ ಅವರೆ . ಆದರೆ ನೀವು ಬಲಪಂಥೀಯ ವ್ಯಕ್ತಿಗಳ ಬಗ್ಗೆ ಹೇಳುವಾಗ ಕಪಿ, ಬಾಲಂಗೋಚಿ ಫಂಡಿಗಾಗಿ ಸಂಶೋಧನೆ ಮಾಡುವವ ಎಂದೆಲ್ಲಾ ಮಾತನಾಡುವಿರಲ್ಲಾ ಆಗೆಲ್ಲಾ ನಿಮಗೆ ಈ ವಯಸ್ಸು ನೆನಪಾಗದಿರುವದು ಸೋಜಿಗವಾಗಿದೆ.

    ಉತ್ತರ
    • Nagshetty Shetkar
      ಏಪ್ರಿಲ್ 9 2015

      ನಾನು ಹೆಗಡೆ ಅವರ ಬಗ್ಗೆ ಯಾವತ್ತೂ ಗೌರವದಿಂದಲೇ ಮಾತನಾಡಿದ್ದೇನೆ, ನನಗೆ ಸಿ ಎಸ್ ಎಲ್ ಸಿ ಸಂಶೋಧಕರ ಬಗ್ಗೆ ವೈಯಕ್ತಿಕ ನೆಲೆಯಲ್ಲಿ ಹಗೆತನವಿಲ್ಲ. ನನ್ನದು ಮಾನವೀಯ ನೆಲೆಯಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯ. ಡಂಕಿನ್, ಸಂತೋಷ್ ಮೊದಲಾದ ಬುದ್ಧಿವಂತ ಹುಡುಗರು ಅವರ ಮಾರ್ಗದರ್ಶಕರ ಐಡಿಯಾಲಜಿ ಒಲವಿನಿಂದ ದಾರಿ ತಪ್ಪಿ ದೇಶಕ್ಕೆ ಕಂಟಕರಾಗಕೂಡದು ಅಂತ ಸಿ ಎಸ್ ಎಲ್ ಸಿಯ ಪ್ರತಿಗಾಮಿತ್ವವನ್ನು ವಿರೋಧಿಸಿದ್ದೇನೆ. ಹೆಗಡೆ ಅವರಿಗೆ ಅನೇಕ ಎಡಪಂಥೀಯರೊಂದಿಗೆ ಸ್ನೇಹವಿದೆ. ಮುಂದೊಮ್ಮೆ ಅವರು ಬಲಪಂಥೀಯ ನಿಷ್ಠೆಯನ್ನು ತೊಡೆದು ಹಾಕಿ ಪ್ರಗತಿಪರರೊಡನೆ ಹೆಗಲು ಸೇರಿಸುತ್ತಾರೆ ಎಂಬ ವಿಶ್ವಾಸವೂ ಇದೆ.

      ಉತ್ತರ

Trackbacks & Pingbacks

  1. ಬಹುಸಂಖ್ಯಾತರಿಗೆ ರಿಲಿಜನ್ ಇಲ್ಲವಾದರೆ ಅಲ್ಪಸಂಖ್ಯಾತರು ಯಾರು? | ನಿಲುಮೆ
  2. ಬಹುಸಂಖ್ಯಾತರಿಗೆ ರಿಲಿಜನ್ ಇಲ್ಲವಾದರೆ ಅಲ್ಪಸಂಖ್ಯಾತರು ಯಾರು? – ನಿಲುಮೆ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments