ರಾಜ್ ಕುಮಾರ್: ನಾಡಿನ ಸೃಜನಶೀಲ ಆಯಾಮ
– ರಾಜಕುಮಾರ.ವ್ಹಿ.ಕುಲಕರ್ಣಿ,ಮುಖ್ಯಗ್ರಂಥಪಾಲಕ
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ
‘ಐದು ಕೋಟಿ ಕನ್ನಡಿಗರನ್ನು ಜಾಗೃತಗೊಳಿಸಲು ಇಡೀ ಕನ್ನಡ ಸಾಹಿತ್ಯ ವಲಯಕ್ಕೆ ಸಾಧ್ಯವಾಗದೇ ಇದ್ದಾಗ,ಕಲಾವಿದನಾಗಿ ರಾಜ್ ಕುಮಾರ್ ಪ್ರತಿಯೊಬ್ಬ ಕನ್ನಡಿಗನ ಮನೆ ಮತ್ತು ಮನಸ್ಸನ್ನು ತಲುಪಿದರು’ ಕನ್ನಡದ ವರನಟ ರಾಜ್ ಕುಮಾರ್ ಕುರಿತು ಡಾ.ಯು.ಆರ್.ಅನಂತಮೂರ್ತಿ ಅವರು ಹೇಳಿದ ಮಾತಿದು.ಈ ಮಾತಿನಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಮತ್ತು ಇದು ಮುಖಸ್ತುತಿಯೂ ಅಲ್ಲ.
ನಿಜ.ಯಾರಿಗೂ ಸಾಧ್ಯವಾಗದೇ ಇರುವುದನ್ನು ರಾಜ್ ಕುಮಾರ್ ಒಬ್ಬ ಕಲಾವಿದನಾಗಿ ಸಾಧಿಸಿದರು.ರಾಜ್ ಕುಮಾರ್ ಎಂದರೆ ಕನ್ನಡ ಸಿನಿಮಾ ಎನ್ನುವಷ್ಟರ ಮಟ್ಟಿಗೆ ಅವರು ಅನಿವಾರ್ಯವಾದರು.ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ರಾಜ್ ಕುಮಾರ್ ಪೂರ್ವದಲ್ಲಿ ಮತ್ತು ರಾಜ್ ಕುಮಾರ್ ನಂತರ ಎನ್ನುವ ರೀತಿ ಕನ್ನಡ ಸಿನಿಮಾ ಪ್ರಪಂಚದ ಅವಿಭಾಜ್ಯ ಅಂಗವಾದರು.ಕನ್ನಡ ಚಿತ್ರರಂಗದ ಈ ಮೇರುನಟ ಎಪ್ರಿಲ್ ೧೨ ರಂದು ತೀವ್ರ ಹೃದಯಾಘಾತದಿಂದ ನಿಧನರಾದಾಗ ಸಿನಿಮಾ ಲೋಕ ಮಾತ್ರವಲ್ಲ ಇಡೀ ಕನ್ನಡ ನಾಡು ಆಘಾತದಿಂದ ತತ್ತರಿಸಿ ಹೋಯಿತು.ಬದುಕಿದ್ದರೆ ಈ ದಿನ (ಏಪ್ರಿಲ್ ೨೪) ತಮ್ಮ ೮೬ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು.ಆದರೆ ಸಾವಿನ ರೂಪದಲ್ಲಿ ಬಂದ ವಿಧಿ ಅದಕ್ಕೆ ಅವಕಾಶವನ್ನೇ ಕೊಡಲಿಲ್ಲ.