ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 3, 2015

3

ವಿಶ್ವದಲ್ಲಿ ಮಾನವ ಏಕಾಂಗಿಯಲ್ಲ : ಒಂದು ಜಿಜ್ಞಾಸೆ – ಭಾಗ ೧

‍ನಿಲುಮೆ ಮೂಲಕ

– ಪ್ರೇಮಶೇಖರ

ಫ್ಲೈಯಿಂಗ್ ಸಾಸರ್ಫೆಬ್ರವರಿ 20-21ರ ಸುಮಾರಿಗೆ ಫ್ಲೈಯಿಂಗ್ ಸಾಸರೊಂದು ಕೆನಡಾದ ವಿನಿಪೆಗ್ ಸರೋವರಕ್ಕೆ ಬಿದ್ದ ಪ್ರಕರಣ ವರದಿಯಾಗಿದೆ.ಭೀಕರ ಚಳಿಯಿಂದಾಗಿ ಸರೋವರದ ನೀರು ಹಲವು ಅಡಿಗಳ ಆಳದವರೆಗೆ ಹಿಮಗಟ್ಟಿಹೋಗಿದೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಯಂತೆ ಮೆಟ್ಟಲುಮೆಟ್ಟಲಾಗಿರುವ ಪಿರಮಿಡ್ ಆಕಾರದ ಫ್ಲೈಯಿಂಗ್ ಸಾಸರ್ ಸರೋವರದ ಹಿಮಪದರವನ್ನು ಸೀಳಿಕೊಂಡು ಒಳತೂರಿಹೋಯಿತಂತೆ. ಇಷ್ಟರ ಹೊರತಾಗಿ ಬೇರಾವ ವಿವರಗಳೂ ದೊರೆಯುತ್ತಿಲ್ಲ. ಇದಕ್ಕೆ ಕಾರಣ, ವಿಷಯ ತಿಳಿದ ತಕ್ಷಣ ಕೆನಡಾ ರಕ್ಷಣಾಪಡೆಗಳು ವಿರಳ ಜನಸಂಖ್ಯೆಯ ಆ ಪ್ರದೇಶವನ್ನು ಹಿಡಿತಕ್ಕೆ ತೆಗೆದುಕೊಂಡು ಹೊರಗಿನವರ ಪ್ರವೇಶವನ್ನು ನಿರ್ಬಂಧಿಸಿರುವುದು.ಅಷ್ಟೇ ಅಲ್ಲ, ಫ್ಲೈಯಿಂಗ್ ಸಾಸರ್‍ನ ಛಾಯಾಚಿತ್ರ ತೆಗೆದಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣಾಪಡೆಗಳು ವಶಕ್ಕೆ ತೆಗೆದುಕೊಂಡಿವೆ.ಸರೋವರಕ್ಕೆ ಬಿದ್ದದ್ದು ಫ್ಲೈಯಿಂಗ್ ಸಾಸರ್ ಅಲ್ಲವೆಂದೂ, ಕಡುಚಳಿಗಾಲದಲ್ಲಿ ವಿಮಾನಾಫಘಾತವಾದರೆ ರಕ್ಷಣಾಕ್ರಮಗಳನ್ನು ಹೇಗೆ ಕೈಗೊಳ್ಳಬೇಕೆಂದು ತಾವು ಪ್ರಯೋಗ ನಡೆಸುತ್ತಿರುವುದಾಗಿಯೂ ಸೈನಿಕರು ಮನೆಮನೆಗೆ ಹೋಗಿ ಜನರಿಗೆ ತಿಳಿಹೇಳುತ್ತಿದ್ದಾರೆ.ಯುಎಫ್‍ಓಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಅತ್ಯಂತ ಗೌಪ್ಯವಾಗಿರಿಸುವ ಸರ್ಕಾರಗಳ ನೀತಿಯ ಮುಂದುವರಿಕೆಗೆ ಇದು ಹೊಚ್ಚಹೊಸ ಉದಾಹರಣೆ.

ಯುಎಫ್‍ಓಗಳ ಬಗೆಗಿನ ಸುದ್ಧಿಗಳಲ್ಲಿ ನೂರಕ್ಕೆ ತೊಂಬತ್ತು ಭಾಗ ತಪ್ಪು ಕಲ್ಪನೆ ಅಥವಾ ಸುಳ್ಳುಗಳು.ಶುಕ್ರ ಮುಂತಾದ ಬರಿಗಣ್ಣಿಗೆ ಕಾಣುವ ಗ್ರಹಗಳು, ಉಲ್ಕೆಗಳು, ಹವಾಮಾನ ಪರಿವೀಕ್ಷಣಾ ಬಲೂನ್‍ಗಳು, ಜಾಹಿರಾತುಗಳಿಗಾಗಿ ಹಾರಾಡಿಸಲಾಗುವ ಆಕರ್ಷಕ ಬಣ್ಣಗಳ, ದೀಪಗಳ ಪುಟ್ಟ ವಿಮಾನಗಳನ್ನು ಸಾಮಾನ್ಯ ಜನರು ಫ್ಲೈಯಿಂಗ್ ಸಾಸರ್ ಎಂದು ತಪ್ಪಾಗಿ ತಿಳಿಯುವ ಸಾಧ್ಯತೆ ಬಹಳಷ್ಟಿರುತ್ತದೆ.ಜತೆಗೆ, ಪ್ರಚಾರದ ಹುಚ್ಚಿರುವವರು ಕಥೆಗಳನ್ನು ಕಟ್ಟುತ್ತಾರೆ.  ಇಷ್ಟಾಗಿಯೂ, ಅಂತರಿಕ್ಷ, ಖಗೋಳಶಾಸ್ತ್ರ, ಅನ್ಯಲೋಕಜೀವಿಗಳ ಬಗ್ಗೆ ಏನೊಂದೂ ಕಲ್ಪನೆಯಿರದ ಸಾಮಾನ್ಯ ರೈತರು, ಮುಗ್ಧ ಮಕ್ಕಳು, ಅಮಾಯಕ ಗೃಹಿಣಿಯರು ಸಹಾ ಯುಎಫ್‍ಓಗಳನ್ನು ಕಂಡ, ವಿಚಿತ್ರಾಕಾರದ ಜೀವಿಗಳೊಂದಿಗೆ ಮುಖಾಮುಖಿಯಾದ ಪ್ರಕರಣಗಳನ್ನು ಲಕ್ಷಲಕ್ಷ ಸಂಖ್ಯೆಯಲ್ಲಿ ವರದಿಮಾಡಿದ್ದಾರೆ.  ಈ ಪಟ್ಟಿಯಲ್ಲಿ  ಗೌರವಾನ್ವಿತ ವಿಜ್ಞಾನಿಗಳು, ಜವಾಬ್ದಾರಿಯುತ ಸುರಕ್ಷಾ ಸಿಬ್ಬಂದಿಗಳು, ಸತ್ಯಸಂಧ ಧಾರ್ಮಿಕ ವ್ಯಕ್ತಿಗಳು ನೀಡಿದ ಪ್ರತ್ಯಕ್ಷದರ್ಶಿ ವರದಿಗಳೂ ಹೇರಳವಾಗಿವೆ.  ಪುಕ್ಕಟೆ ಪ್ರಚಾರದ ಯಾವ ತೆವಲೂ ಇಲ್ಲದ ಇವರ ಹೇಳಿಕೆಗಳನ್ನು ನಿರ್ಲಕ್ಷಿಸಲಾಗುವುದಿಲ್ಲ.  ಇವರು ವರದಿ ಮಾಡುವ ವಾಹನಗಳಿಗೆ ಫ್ಲೈಯಿಂಗ್ ಸಾಸರ್ ಅಥವಾ ಹಾರುವ ತಟ್ಟೆಗಳೆಂದು ಹೆಸರು ಬರಲು ಕಾರಣ ಇವು ಹೆಚ್ಚಿನಂಶ ಸಾಸರಿನ ಮೇಲೆ ಬೋರಲು ಹಾಕಿದ (ಹಿಡಿಕೆಯಿಲ್ಲದ) ಟೀಕಪ್‍ಗಳಂತಿರುತ್ತವೆ.  ಇದಲ್ಲದೇ ಅಮೆರಿಕಾದ ಸಾರ್ಜೆಂಟ್ ಜಮೋರಾ ನೋಡಿದ ಮೊಟ್ಟೆಯಾಕಾರದ, ಸಹಸ್ರಾರು ವೈಮಾನಿಕರು ವರದಿ ಮಾಡಿದ ಸಿಗಾರ್‍ನಂತಹ ಆಕಾರಗಳಲ್ಲೂ ಇವು ಕಾಣಿಸಿರುವುದುಂಟು.  ಹೀಗಾಗಿ ಇವನ್ನು ಒಟ್ಟಿಗೆ Unidentified Flying Objec (UFO), ಅಂದರೆ “ಗುರುತಿಸಲಾಗದ ಹಾರುವ ವಸ್ತು” (ಗುಹಾವ) ಎಂದು ಅಧಿಕೃತವಾಗಿ ಕರೆಯಲಾಗುತ್ತದೆ.ಇವುಗಳಿಗೆ ಸಾಕ್ಷಿಯಾದ ನಂಬಲರ್ಹ ಜನರ ಅಚ್ಚರಿಗೆ, ದಿಗ್ಭ್ರಮೆಗೆ ಕಾರಣವೇನೆಂದರೆ ಇವು ನಮಗೆ ಪರಿಚಯವಿರುವ ಭೌತಿಕ ನಿಮಯಗಳನ್ನು ಸಾರಾಸಗಟಾಗಿ ಉಲ್ಲಂಘಿಸುವ ಬಗೆ.ಮನುಷ್ಯ ಇಲ್ಲಿಯವರೆಗೆ ಸಾಧಿಸಿರುವುದಕ್ಕಿಂತಲೂ ಅಗಾಧವಾದ, ಊಹಿಸಲಾಧ್ಯವಾದ ವೇಗದಲ್ಲಿ ಹಾರುತ್ತವೆ, ಹಾರುತ್ತಲೇ ಛಕ್ಕನೆ ಎಡಕ್ಕೆ ಬಲಕ್ಕೆ 90 ಡಿಗ್ರಿ ಕೋನದಲ್ಲಿ ತಿರುಗುತ್ತವೆ, ಅಸಾಧ್ಯ ವೇಗದಲ್ಲಿ ಹಾರುತ್ತಿದ್ದರೂ ಗಕ್ಕನೆ ನಿಲ್ಲುತ್ತವೆ.ಒಂದೊಂದು ಸಲ ನಮ್ಮ ಮುಂದೆಯೇ ಕಣ್ಣಿಗೆ ಕಾಣುತ್ತಿದ್ದಂತೇ ಅಂತರ್ಧಾನ ಆಗಿಬಿಡುತ್ತವೆ. ಇಂತಹ ವೈಚಿತ್ರ್ಯಕ್ಕೆ ಸಾಕ್ಷಿಯಾದ ಫ್ರಾನ್ಸಿನ ಲ್ಯಾವೆಂಡರ್ ರೈತ ಮಾರಿಸ್ ಮಾಸ್‍ನಂಥವರು ಹಲವರಿದ್ದಾರೆ.

ಈ ವಾಹನಗಳಲ್ಲಿರುವ ಜೀವಿಗಳ ರೂಪ,ಆಕಾರ ಒಂದೇ ಬಗೆಯಾಗಿಲ್ಲ.ಮೂರು ಮೂರುವರೆಯಿಂದ ಹಿಡಿದು ಎಂಟು ಹತ್ತು ಅಡಿಗಳವರೆಗೂ ಇರುತ್ತಾರೆ.ಕೆಲವರು ನಮ್ಮ ಹಾಗೇ ಇದ್ದರೆ ಉಳಿದವರು ದೆವ್ವಗಳ ಹಾಗೆ,ಕಪ್ಪೆ,ಮೊಸಳೆಯಂತಹ ಮುಖ, ಬಾಯಿ ಹೊಂದಿರುತ್ತಾರೆ.ಅವರ ಮೈಬಣ್ಣವೋ ಅಚ್ಚಬಿಳಿಯಿಂದ ಹಿಡಿದು ಬೂದು,ಹಸಿರು,ಕಡುಗಂದು.

ಈ ಫ್ಲೈಯಿಂಗ್ ಸಾಸರ್, ಅವುಗಳಲ್ಲಿ ಕಂಡುಬಂದಿರುವ ಜನರು ಸಾವಿರಾರು ವರ್ಷಗಳಿಂದಲೂ ಭೂಮಿಗೆ ಭೇಟಿ ನೀಡುತ್ತಿರುವ ಉದಾಹರಣೆಗಳಿವೆ.ಅಲೆಕ್ಸಾಂಡರ್‍ನ ಸೇನೆ ಪರ್ಶಿಯಾದಲ್ಲಿ ಸಂಚರಿಸುತ್ತಿದ್ದಾಗ ರಾತ್ರಿಯ ವೇಳೆ ಆಕಾಶದಲ್ಲಿ ಹಾರುವ ಗುರಾಣಿಗಳು ಕಾಣಿಸಿಕೊಂಡದ್ದಾಗಿ ಅಂದಿನ ಗ್ರೀಕ್ ಇತಿಹಾಸಕಾರರು ದಾಖಲಿಸಿದ್ದಾರೆ.ಇವು ಫ್ಲೈಯಿಂಗ್ ಸಾಸರ್‍ಗಳ ಬಗ್ಗೆ ಸಿಗುವ ಬಹುಶಃ ಅತ್ಯಂತ ಪ್ರಾಚೀನ “ಅಧಿಕೃತ” ವರದಿಗಳು.ಅಲ್ಲಿಂದ ಆಧುನಿಕ ಕಾಲದವರೆಗೆ ಪ್ರಪಂಚದ ವಿವಿಧೆಡೆ, ಎಲ್ಲ ಖಂಡಗಳಲ್ಲೂ, ಅವು ಕಾಣಿಸಿಕೊಂಡ ವರದಿಗಳನ್ನು ಆಯಾ ಕಾಲದ, ಆಯಾ ಪ್ರದೇಶದ ಸಮಕಾಲೀನ ಬರಹಗಳ ಆಧಾರದ ಮೇಲೆ ಸತ್ಯಕ್ಕೆ ಅಪಚಾರವಾಗದಂತೆ ನಿಖರವಾಗಿ ದಾಖಲಿಸುವ ಪ್ರಯತ್ನಗಳಾಗಿವೆ.  ಈ ಕುರಿತಾಗಿ ನಡೆದಿರುವ ಹಲವಾರು ಪ್ರಯತ್ನಗಳಲ್ಲಿ ಉಲ್ಲೇಖಾರ್ಹವಾದ ಕೃತಿಗಳೆಂದರೆ ಗೌರವಾನ್ವಿತ ವಿದ್ವಾಂಸ ಜಾಕ್ಸ್ ವ್ಯಾಲೀ ರಚಿಸಿರುವ ಮೂರು ಸಂಪುಟಗಳಾದ 1. “Dimensions: A Casebook of Alien Contact, 2. Confrontations: A Scientist’s Search for Alien Contact  ªÀÄvÀÄÛ 3. Revelations: Alien Contact and Human Deception.” ಯುಎಫ್‍ಓ ಸಾಹಿತ್ಯದಲ್ಲಿನ ಜೊಳ್ಳುಗಳನ್ನೂ, ಕಾಳುಗಳನ್ನೂ ಯಾವುದೇ ಪೂರ್ವಾಗ್ರಹವಿಲ್ಲದೇ, ವೈಜ್ಞಾನಿಕವಾಗಿ, ಸರಳ ನಿರೂಪಣೆಯಲ್ಲಿ ವಿಶ್ಲೇಷಿಸುವ ಈ ಕೃತಿಗಳು ಈ ವೈಚಿತ್ರ್ಯದ ಬಗ್ಗೆ ಆಸಕ್ತಿಯಿರುವವರಿಗೆ ಉಪಯುಕ್ತವಾಗುತ್ತವೆ.

ಯುಎಫ್‍ಓಗಳ ಪ್ರಕರಣಗಳು ಹೆಚ್ಚಾಗಿ ವರದಿಯಾಗತೊಡಗಿದ್ದು ಎರಡನೆಯ ಮಹಾಯುದ್ಧದ ಸಮಯದಲ್ಲಿ.ಇವು ಅತಿಯಾಗಿ ಕಾಣಿಸಿಕೊಂಡದ್ದು ದಕ್ಷಿಣ ಭಾರತ ಮತ್ತು ಶ್ರೀಲಂಕಾಗಳಲ್ಲಿ.ಅವು ಜಪಾನೀ ವಾಯುಸೇನೆಯ ಹೊಸ ಮಾದರಿಯ ಅಸ್ತ್ರಗಳಾಗಿರಬಹುದೆಂದು ಮೊದಲು ಅನುಮಾನಿಸಿದ ಬ್ರಿಟಿಷ್ ಸೇನಾಧಿಕಾರಿಗಳು ನಂತರ ಆ ಅನುಮಾನ ನಿಜವಲ್ಲವೆಂದು ಅರಿತಾಗ ಇವುಗಳನ್ನು “ಫೂ ಫೈಟರ್ಸ್” ಎಂದು ಕರೆದರು.ಯುದ್ಧ ಮುಗಿದದ್ದೇ ಇವು ಪ್ರಪಂಚದ ಎಲ್ಲೆಡೆ ಕಾಣಿಸಿಕೊಳ್ಳತೊಡಗಿದವು, ಅಥವಾ ಕಾಣಿಸಿಕೊಂಡ ವರದಿಗಳು ಎಲ್ಲೆಡೆಯಿಂದ ಬರತೊಡಗಿದವು.ಫ್ಲೈಯಿಂಗ್ ಸಾಸರ್‍ಗಳು ಅಫಘಾತಕ್ಕೀಡಾದ ಪ್ರಕರಣಗಳೂ ಸುದ್ಧಿಯಾಗತೊಡಗಿದವು.ಇವುಗಳಲ್ಲಿ ಬಹುಶಃ ಮೊದಲನೆಯದೆಂದರೆ 1947ರಲ್ಲಿ ಅಮೆರಿಕಾದ ರಾಸ್‍ವೆಲ್ ಎಂಬಲ್ಲಿನ ಪಶುಸಂಗೋಪನಾ ಕೇಂದ್ರವೊಂದರ ಹುಲ್ಲುಗಾವಲಿನಲ್ಲಾದದ್ದು.ಸುದ್ದಿ ತಿಳಿದದ್ದೇ ಇಡೀ ಪ್ರದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡ ಅಮೆರಿಕಾದ ಸೇನೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ, ಕುರುಹುಗಳನ್ನೂ ಮಂಗಮಾಯ ಮಾಡಿಬಿಟ್ಟಿತು.ಆ ಬಗ್ಗೆ ಯಾರೂ ಚಕಾರವೆತ್ತಕೂಡದೆಂದು ಕಟ್ಟಪ್ಪಣೆ ಮಾಡಲಾಯಿತು.ಯುಎಫ್‍ಓಗಳ  ಬಗ್ಗೆ ಅಮೆರಿಕಾ ಸರಕಾರ ಅತಿ ಗೌಪ್ಯತೆಯ ನೀತಿಯನ್ನು ಅನುಸರಿಸತೊಡಗಿದ್ದು ಅಂದಿನಿಂದಲೇ.  ಅದು ಯಾವ ಮಟ್ಟಕ್ಕೆ ತಲುಪಿದೆಯೆಂದರೆ ಅಮೆರಿಕಾದಲ್ಲಿ ಅತ್ಯಂತ ಗೌಪ್ಯ “ಸರಕಾರೀ ರಹಸ್ಯ”ಗಳೆಂದರೆ ಅಣ್ವಸ್ತ್ರಗಳಿಗಾಗಲೀ,ನವೀನ ಶಸ್ತ್ರಾಸ್ತ್ರಗಳಿಗಾಗಲೀ ಸಂಬಂಧಿಸಿದ ಮಾಹಿತಿಗಳಲ್ಲ.ಅವು ಯುಎಫ್‍ಓಗಳು ಮತ್ತು ಅನ್ಯಲೋಕ ಜೀವಿಗಳ ಕುರಿತಾದ ವಿವರಗಳು!  ಇಷ್ಟಾಗಿಯೂ, ರಾಸ್‍ವೆಲ್‍ನಲ್ಲಿ ಯುಎಫ್‍ಓ ಅಫಘಾತಕ್ಕೀಡಾದ ಬಗ್ಗೆ, ವಾಹನದಲ್ಲಿ ಅನ್ಯಲೋಕ ಜೀವಿಗಳ ಶವಗಳಿದ್ದ ಬಗ್ಗೆ, ಅವೆಲ್ಲವನ್ನೂ ರಕ್ಷಣಾಪಡೆಗಳು ಗುಪ್ತಸ್ಥಳಕ್ಕೆ ಸಾಗಿಸಿದ ಬಗ್ಗೆ ನಿರಾಕರಿಸಲಾಗದ ಮಾಹಿತಿಗಳಿವೆ.

ಆನಂತರ ಯುಎಫ್‍ಓಗಳು ಪ್ರಪಂಚದ ಎಲ್ಲೆಡೆ ಅತಿಯಾಗಿ ಕಾಣಿಸಿಕೊಳ್ಳತೊಡಗಿದ್ದು ಎಪ್ಪತ್ತರ ದಶಕದ ಮೊದಲರ್ಧದಲ್ಲಿ.1973ರಲ್ಲಿ ಅಮೆರಿಕಾ ಒಂದರಲ್ಲೇ ಸುಮಾರು ಒಂದೂವರೆ ಕೋಟಿ ಯುಎಫ್‍ಓ ಪ್ರಕರಣಗಳು ವರದಿಯಾದವು.ಇವುಗಳಲ್ಲಿ ಹೆಚ್ಚಿನವು ವರದಿ ಮಾಡಿದವರ ತಪ್ಪು ಕಲ್ಪನೆ, ಉತ್ಪ್ರೇಕ್ಷೆ, ಉದ್ದೇಶಿತ ಕಟ್ಟುಕತೆಗಳಾಗಿ ವಿವರಣೆಗೆ ದಕ್ಕಿದರೂ ಇದಮಿತ್ಥಂ ಎಂದು ಹೇಳಲಾಗದ, ‘ಎನೋ ಇರಬಹುದು’ ಎಂದು ಸೂಚಿಸುವ ಐವತ್ತು ಸಾವಿರಕ್ಕೂ ಹೆಚ್ಚಿನ ಪ್ರಕರಣಗಳನ್ನು ವಿಖ್ಯಾತ ಯುಎಫ್‍ಓ ಸಂಶೋಧಕ ಡಾ. ಅಲೆನ್ ಹೈನೆಕ್ ಅವರ “ಇಲಿನಾಯ್ಸ್ ಸೆಂಟರ್ ಫಾರ್ ಯುಎಫ್‍ಓ ಸ್ಟಡೀಸ್” ಪಟ್ಟಿಮಾಡಿದೆ.ಇವೆಲ್ಲವುಗಳ ಬಗ್ಗೆ ತಮ್ಮಲ್ಲಿರುವ ಮಾಹಿತಿಗಳನ್ನು ಅಮೆರಿಕಾ ಸರ್ಕಾರ ಮತ್ತು ಸುರಕ್ಷಾ ಇಲಾಖೆಗಳು ಅತ್ಯಂತ ಗೌಪ್ಯತೆಯಲ್ಲಿಟ್ಟಿವೆ.  ಹಲವು ವರದಿಗಳ ಪ್ರಕಾರ ಇಡಿಯಾಗಿ ಸುಸ್ಥಿತಿಯಲ್ಲಿರುವ ಯುಎಫ್‍ಓ ಒಂದು ಅಮೆರಿಕಾದ ಅತಿ ಗೌಪ್ಯ ನೆಲೆಯಾದ “ಏರಿಯಾ 51”ನಲ್ಲಿರುವುದಾಗಿ ಪ್ರತ್ಯಕ್ಷದರ್ಶಿ ವರದಿಗಳಿವೆ.  ಕೆಲವು ವರದಿಗಳಂತೂ ಅನ್ಯಲೋಕ ಜೀವಿಗಳ ಶವಗಳು ಶ್ವೇತಭವನದಲ್ಲೇ ಸುರಕ್ಷಿತವಾಗಿ ಕಾಯ್ದಿರಿಸಲ್ಪಟ್ಟಿರುವುದಾಗಿ ಹೇಳುತ್ತವೆ!

ಹೀಗೆ ಫ್ಲೈಯಿಂಗ್ ಸಾಸರ್‍ಗಳು ಮತ್ತು ಅನ್ಯಲೋಕ ಜೀವಿಗಳು ಪ್ರಪಂಚದ ಎಲ್ಲೆಡೆ, ಎಲ್ಲ ಸಮಯದಲ್ಲೂ ಕಾಣಿಸಿಕೊಳ್ಳುತ್ತಿದ್ದರೂ ಸಾಮಾನ್ಯವಾಗಿ ಅವುಗಳ ಬಗ್ಗೆ ಅಪನಂಬಿಕೆ ಇರಲು ಕಾರಣಗಳಿವೆ. ಆ ಜೀವಿಗಳು ಹಾಗೂ ಅವರ ವಾಹನಗಳು ಪಾಶ್ಚಿಮಾತ್ಯ ವಿಜ್ಞಾನ ಹೇಳುವ ನಿಯಮಗಳಿಗೆ ಹೊಂದಿಕೆಯಾಗದೇ ಇರುವುದರಿಂದ ಅಮೆರಿಕಾ, ಯೂರೋಪ್ ಮುಂತಾದ ದೇಶಗಳ ಸುಶಿಕ್ಷಿತ ಜನ ತಾವು ಕಂಡದ್ದನ್ನು ನಂಬುವುದೇ ಇಲ್ಲ.ಏನೋ ಕೆಟ್ಟಕನಸು,ಭ್ರಮೆಯೆಂದು ಭಾವಿಸಿ ಮರೆಯುವುದೇ ಹೆಚ್ಚು.  ನಿಜವೆಂದು ತಿಳಿಯುವ ಜನ ಇಲ್ಲವೆಂದಲ್ಲ.  ಆದರೆ ಅವರ ಮಾತುಗಳನ್ನು ನಂಬಲು ಇತರ ಸುಶಿಕ್ಷಿತರಿಗೆ ತಾವು ಕಲಿತು ನಂಬಿದ ಭೌತಿಕ ಮತ್ತು ಜೈವಿಕ ನಿಯಮಗಳು ಅಡ್ಡಿಯಾಗಿ ನಿಲ್ಲುತ್ತವೆ.ನಮ್ಮ ಇಂಡಿಯಾದಂತಹ ಪೌರ್ವಾತ್ಯ ದೇಶಗಳ ಬಗ್ಗೆ ಹೇಳುವುದಾದರೆ ಅದು ಬೇರೊಂದು ದುರಂತ.ಕಡಿಮೆ ಶಿಕ್ಷಿತ ಅಥವಾ ನಿರಕ್ಷರಿಗಳಾಗಿರುವ ಬಹುತೇಕ ಜನಸಮುದಾಯದಲ್ಲಿ ಜಗತ್ತಿನ ಬಗ್ಗೆಯಾಗಲೀ, ಗ್ರಹ ನಕ್ಷತ್ರ ನೀಹಾರಿಕೆಗಳ ಬಗೆಗಾಗಲೀ ಯಾವ ತಿಳುವಳಿಕೆಯೂ ಇಲ್ಲ.ಅನ್ಯಲೋಕ ಜೀವಿಗಳು ಕಾಣಿಸಿಕೊಂಡಾಗ ಅವುಗಳನ್ನು ದೆವ್ವ, ಭೂತ, ಮುನೇಶ್ವರ ಎನ್ನುವ ಭಯಂಕರ ಪಿಶಾಚಿಯೆಂದು ತಿಳಿದು ಹೆದರಿಹೋಗುವುದು ಸಾಮಾನ್ಯ.  ಕೆಲವರಂತೂ ಹೆದರಿಕೆಯಿಂದಲೇ ಜ್ವರವೇರಿ ಸತ್ತುಹೋಗುವುದೂ ಉಂಟು.

ಇಷ್ಟೆಲ್ಲಾ ತಪ್ಪಭಿಪ್ರಾಯಗಳು, ಗೌಪ್ಯತೆ ಇದ್ದರೂ ಈಗ ನಮಗೆ ಅನ್ಯಲೋಕ ಜೀವಿಗಳ ದೇಹರಚನೆಯ ಬಗ್ಗೆ ಹಲವು ವಿವರಗಳು ಲಭ್ಯವಿವೆ.  ಮೇಲೆ ಉಲ್ಲೇಖಿಸಿರುವ ರಾಸ್‍ವೆಲ್ ಪ್ರಕರಣದಲ್ಲಿ ಅಫಘಾತ ಉಂಟುಮಾಡಿದ ಅತೀವ ಶಾಖದಲ್ಲಿ ಸುಟ್ಟು ಕಂದುಬಣ್ಣಕ್ಕೆ ತಿರುಗಿದ್ದ ಆ ಜೀವಿಗಳಿಗೆ ಜನನೇಂದ್ರಿಯಗಳಾಗಲೀ, ಗುದದ್ವಾರಗಳಾಗಲೀ, ಹೊಕ್ಕಳುಗಳಾಗಲೀ ಇಲ್ಲದಿದ್ದ ಬಗ್ಗೆ, ಕೈಗಳಲ್ಲಿ ನಾಲ್ಕೇ ಬೆರಳುಗಳಿದ್ದ ಬಗ್ಗೆ ಪೋಸ್ಟ್ ಮಾರ್ಟಂ ವರದಿಗಳೂ ನಮಗೀಗ ಲಭ್ಯವಿವೆ.ಅಲ್ಲದೇ, ದೇಹರಚನೆಯಲ್ಲಿ ನಮ್ಮಂತೇ ಇದ್ದು, ನಮಗಿಂತಲೂ ಹೆಚ್ಚಿನ ಬುದ್ದಿ ಮತ್ತು ವೈಜ್ಞಾನಿಕ ಹಾಗೂ ತಾಂತ್ರಿಕ ಉಪಕರಣಗಳನ್ನು ಹೊಂದಿದ ಜೀವಿಗಳೂ ಹೇರಳವಾಗಿ ಕಾಣಿಸಿಕೊಂಡಿವೆ.

ಈ “ಬುದ್ಧಿವಂತ ಜೀವಿಗಳು” ಯಾರು? ಎಲ್ಲಿಂದ ಬರುತ್ತಿದ್ದಾರೆ? ಈ ಪ್ರಶ್ನೆಗಳಿಗೆ ಉತ್ತರಗಳಿಲ್ಲದಿದ್ದರೂ ಆ ಜೀವಿಗಳ ಉದ್ದೇಶದ ಬಗ್ಗೆ ಒಂದು ಸ್ಥೂಲ ಕಲ್ಪನೆ ಮಾಡಿಕೊಳ್ಳಲು ಅವಕಾಶವಿದೆ.ಈ ಬುದ್ಧಿವಂತ ಜೀವಿಗಳು ಜೈವಿಕ ಪ್ರಯೋಗಳ ಮೂಲಕ ಮಾನವ ಜನಾಂಗವನ್ನು ಸುಧಾರಿಸುವ ಪ್ರಯತ್ನದಲ್ಲಿ ಅನಾದಿಕಾಲದಿಂದಲೂ ತೊಡಗಿವೆಯೆಂದು ಜಾರ್ಚ್ ಹಂಟ್ ವಿಲಿಯಂಸನ್, ಲೂಯಿಸ್ ಪಾವೆಲ್, ಜಾರ್ಚ್ ಬರ್ಜಿಯರ್, ಝಕಾರಿಯಾ ಸಿಟ್ಚಿನ್ ಮುಂತಾದ ವಿದ್ವಾಂಸರು ಹೇಳುತ್ತಾರೆ.  ಇವರೆಲ್ಲಾ ಹೇಳುವುದರ ಒಟ್ಟು ಸಾರಾಂಶ “ಮಂಗನಿಂದ ಮಾನವ ವಿಕಾಸ ಆದದ್ದರ ಹಿಂದಿರುವುದು ಅನ್ಯಲೋಕದ ಜೀವಿಗಳ ಕೈವಾಡ ಮತ್ತು ಅವರ ಪ್ರಯೋಗಗಳು ಈಗಲೂ ಜಾರಿಯಲ್ಲಿವೆ!”

ಗಾಬರಿಯಾಗುತ್ತಿದೆಯೇ? ಮುಂದಿನವಾರ ಹೆಚ್ಚಿನ ವಿವರ ನೀಡುತ್ತೇನೆ.

ಚಿತ್ರಕೃಪೆ : http://www.telegraph.co.uk

ಕೃಪೆ : ವಿಜಯವಾಣಿ ದೈನಿಕ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments