ಐಡಿಯಾಲಜಿ,ಚಿಂತನೆ ಮತ್ತು ಜೀವನದ ವಾಸ್ತವಗಳು
– ಮು.ಅ ಶ್ರೀರಂಗ,ಬೆಂಗಳೂರು
ಡಾ. ಕಿರಣ್ ಎಂ ಗಾಜನೂರು ಅವರು ೧೩-೪-೧೫ರ ಪ್ರಜಾವಾಣಿ ದಿನಪತ್ರಿಕೆಯ ‘ಸಂಗತ’ ಕಾಲಂನಲ್ಲಿ ‘ಮೋಡಿ’ಯಿಂದ ಬಿಡಿಸಿಕೊಳ್ಳಿ ಎಂಬ ಶೀರ್ಷಿಕೆಯಲ್ಲಿ ಬರೆದಿರುವ ಲೇಖನಕ್ಕೆ ಇದೊಂದು ಪ್ರತಿಕ್ರಿಯಾತ್ಮಕ ಸಹಸ್ಪಂದನ.
‘ಶ್ರಮಸಹಿತ ಸರಳ ಬದುಕು, ಸುಂದರ ಬದುಕು’ ಎಂಬ ತತ್ವವನ್ನು ಸಾರುವ ಸಲುವಾಗಿ ರಂಗಕರ್ಮಿ ಪ್ರಸನ್ನ ಅವರು ಬದನವಾಳುವಿನಲ್ಲಿ ‘ಸತ್ಯಾಗ್ರಹ ಮತ್ತು ಸುಸ್ಥಿರ ಬದುಕಿನ ರಾಷ್ಟ್ರೀಯ ಸಮಾವೇಶ’ ಆಯೋಜಿಸಿರುವ ಬಗ್ಗೆ ಈಗಾಗಲೇ ಪತ್ರಿಕೆಗಳಲ್ಲಿ ವರದಿಗಳು,ಲೇಖನಗಳು ಬಂದಿವೆ. ‘ಶ್ರಮಸಹಿತ ಸರಳ ಬದುಕು’ ಎಂಬ ಮೂರ್ನಾಲಕ್ಕು ಪದಗಳನ್ನು ವಿಶ್ಲೇಷಿಸಿದರೆ ನಮಗೆ ಸಿಗಬಹುದಾದ ಸಂಭಾವ್ಯ ಉತ್ತರಗಳು –
(೧) ಈಗ ಒಂದಿಲ್ಲೊಂದು ಕೆಲಸದ ಮೂಲಕ ತಮ್ಮ ಅನ್ನ ಸಂಪಾದಿಸಿಕೊಳ್ಳುತ್ತಿರುವ ಜನಗಳು ಶ್ರಮಪಡದೆ ಅದನ್ನು ಪಡೆಯುತ್ತಿದ್ದಾರೆ ಅಥವಾ
(೨) ಜನಗಳ ಕೈಯಲ್ಲಿ ಹೆಚ್ಚು ದೈಹಿಕ ಶ್ರಮದ ಅವಶ್ಯಕತೆ ಇಲ್ಲದ ಸಣ್ಣಪುಟ್ಟ ಕೆಲಸಮಾಡಿಸಿಕೊಂಡು ಅವರ ಸರಳ ಬದುಕಿಗೆ ಎಷ್ಟು ಬೇಕೋ ಅಷ್ಟು ಅನ್ನ ಕೊಟ್ಟು ಸಾಕುತ್ತಿರುವ ಧರ್ಮಾರ್ತರು ನಮ್ಮ ನಡುವೆ ಇದ್ದಾರೆ.
ಸ್ವಲ್ಪ ಸಾಮಾನ್ಯ ಜ್ಞಾನ ಇರುವವರಿಗೂ ಮೇಲಿನ ಎರಡು ಉತ್ತರಗಳಲ್ಲಿರುವ ಹುಳುಕುಗಳು,ತಪ್ಪುಗಳು ಕಾಣುತ್ತವೆ.ಇಂದು ಒಬ್ಬ ಶ್ರೀಸಾಮಾನ್ಯ ಒಂದು ಹೊತ್ತಿಗೆ ಊಟ ಸಂಪಾದಿಸಿಕೊಳ್ಳಬೇಕಾದರೂ ಶ್ರಮ ಪಟ್ಟು ಕೆಲಸ ಮಾಡಲೇಬೇಕು. ಅದು ಅವರವರ ವಿದ್ಯೆ,ಕುಶಲತೆ,ಕೆಲಸದ ರೀತಿಗೆ ಸಂಬಂಧಪಟ್ಟಿರುತ್ತದೆ…ಕೆಲಸಮಾಡದೆ ಸಿಕ್ಕಷ್ಟು ತಿಂದು ತನ್ನ ಹೊಟ್ಟೆಹೊರೆದುಕೊಳ್ಳಬೇಕಾದರೆ ಎಲ್ಲರಂತೆ ಕೆಲಸ ಮಾಡೋಕ್ಕೆ ನಿನಗೇನು ಧಾಡಿಯೆಂದು ಬೈಸಿಕೊಂಡು ಬೀದಿ ಬೀದಿಯಲ್ಲಿ ಭಿಕ್ಷೆ ಬೇಡಬೇಕು.
‘ಸುಂದರ ಬದುಕು’ ಸಾಧ್ಯವಾಗುವುದು ಯಾವಾಗ? ನಮ್ಮ ಜೀವನ ನಿನ್ನೆಗಿಂತ ಇಂದು,ಇಂದಿಗಿಂತ ನಾಳೆ ಉತ್ತಮವಾಗಿದ್ದರೆ ಅದನ್ನು ಸುಂದರ ಅನ್ನಬಹುದು.ನಮ್ಮ ತಾತ ಎಲ್ಲಾ ಕಡೆಗೂ ನಡೆದುಕೊಂಡೇ ಹೋಗುತ್ತಿದ್ದ; ನಾನೂ ನಡೆದುಕೊಂಡೇ ಓಡಾಡುವ ಸ್ಥಿತಿಯಲ್ಲಿ ಜೀವನ ನಡೆಸುತ್ತೇನೆ ಎನ್ನುವುದು ಬದುಕು ಸುಂದರವಾಗುವ ಲಕ್ಷಣವೆ? ಕೆಲವೊಂದು ವಿಚಾರಗಳನ್ನು ನಾವು ನಮ್ಮ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವುಗಳ ಸಾಧ್ಯತೆ-ಅಸಾಧ್ಯತೆಗಳ ಬಗ್ಗೆ ಯೋಚಿಸಬೇಕಾಗುತ್ತದೆ.ಇಲ್ಲವಾದರೆ ನಮ್ಮನ್ನು ನಾವೇ ಮಾನಸಿಕವಾಗಿ ವಂಚಿಸಿಕೊಳ್ಳುತ್ತಾ ಹೋಗುತ್ತೇವೆ. ಇದೇನು ದೊಡ್ಡ ತತ್ವಶಾಸ್ತ್ರೀಯ ಸಮಸ್ಯೆ ಅಲ್ಲ. ಚಿಕ್ಕ ಚಿಕ್ಕ ಸಂಗತಿಗಳನ್ನೇ ನೋಡೋಣ ಸಾಕು.
(೧) ಗಾಂಧಿಯವರು ಕಾಗದ ಉಳಿಸಲೆಂದು ತಮಗೆ ಬರುತ್ತಿದ್ದ ಪತ್ರಗಳ ಹಿಂಭಾಗದಲ್ಲಿ ಖಾಲಿ ಜಾಗವಿದ್ದರೆ ಅಲ್ಲಿ ಅಥವಾ ತಮ್ಮ ವಿಳಾಸ ಬರೆದಿದ್ದ ಲಕೋಟೆಯನ್ನು ಅಗಲವಾಗಿ ಹರಿದು ಅದರ ಇನ್ನೊಂದು ಬದಿಯ ಖಾಲಿ ಜಾಗದಲ್ಲಿ ಬರೆಯುತ್ತಿದ್ದರು. ತಾವು ಬರೆಯುತ್ತಿದ್ದ ಪತ್ರಗಳಲ್ಲೂ ಸಹ ಸ್ವಲ್ಪವೂ ಖಾಲಿ ಜಾಗ ಬಿಡದೆ ಬರೆಯುತ್ತಿದ್ದರು ಎಂದೆಲ್ಲಾ ನಾವು ಓದಿದ್ದೇವೆ. ಈಗ ಪತ್ರಿಕೆಗಳ ‘ವಾಚಕರವಾಣಿ’ ವಿಭಾಗಕ್ಕೆ , ‘ಸಂಗತ’ ಕಾಲಂಗೆ ನಾವೂ ಸಹ ಗಾಂಧಿಯವರಂತೆ ಕಾಗದ ಉಳಿಸಲು ಪ್ರತಿಜ್ಞೆಮಾಡಿ ನಮಗೆ ಬಂದ ಪತ್ರದ ಹಿಂಭಾಗ ಖಾಲಿ ಇದ್ದರೆ ಅದರಲ್ಲಿ ಬರೆದು ಕಳಿಸಿದರೆ ನಮ್ಮ ಪತ್ರ ನೇರವಾಗಿ ಪತ್ರಿಕೆಗಳ ಕಸದ ಬುಟ್ಟಿ ಸೇರುತ್ತದೆ. ಪತ್ರಿಕೆಗಳಿಗೆ ಕೈ ಬರಹದ ಮೂಲಕ ಪತ್ರ ಬರೆದರೆ ಖಾಲಿ ಕಾಗದದ ಒಂದೇ ಬದಿಗೆ ಬರೆಯಬೇಕು; ಹಿಂಭಾಗದಲ್ಲಿ ಬರೆಯುವ ಹಾಗಿಲ್ಲ. ಇತ್ತೀಚೆಗಂತೂ ಆಯಾ ಪತ್ರಿಕೆಗಳ formatಗೆ ತಕ್ಕ ಹಾಗೆ ಇಮೇಲ್ ಮೂಲಕವೇ ಕಥೆ/ಕವನ/ಲೇಖನಗಳನ್ನು ಬರೆಯುವ ಸ್ಥಿತಿಯಿದೆ. (ಯುಗಾದಿ, ದೀಪಾವಳಿ ಸಂಚಿಕೆಗಳಲ್ಲಿ ಸ್ಪರ್ಧೆಗೆ ಕಳಿಸುವಾಗ ಇದಕ್ಕೆ ವಿನಾಯಿತಿ ಇರಬಹುದು)… ಡಾ. ಕಿರಣ್ ಅವರೂ ಇಮೇಲ್ ಮೂಲಕವೇ ‘ಸಂಗತ’ಕ್ಕೆ ಬರೆದಿದ್ದಾರೆ ಎಂದು ನಾನು ಭಾವಿಸುತ್ತೇನೆ!!
(೨) ಒಂದು ಕನ್ನಡ ದಿನಪತ್ರಿಕೆಯನ್ನು ತಿಂಗಳುಪೂರ್ತಿ ಮನೆಗೆ ತರಿಸಿಕೊಂಡರೆ ೧೨೦ ರಿಂದ ೧೩೦ ರೂಪಾಯಿಗಳು ಆಗುತ್ತದೆ. ಒಂದು ತಿಂಗಳಿಗೆ ಸುಮಾರು ೬೫೦ ರೂಪಾಯಿ ಕೊಟ್ಟು ಇಂಟರ್ನೆಟ್ ಸಂಪರ್ಕ ಹಾಕಿಸಿಕೊಂಡರೆ ಮೂರ್ನಾಲಕ್ಕು ಕನ್ನಡ ದಿನಪತ್ರಿಕೆಗಳನ್ನು ಇಂಟರ್ನೆಟ್ ಮೂಲಕವೇ ಓದುವುದರ ಜತೆಗೆ ಇಂಟರ್ನೆಟ್ ನಿಂದ ಸಿಗುವ ಸಕಲ ಸೌಲಭ್ಯಗಳನ್ನೂ ಪಡೆಯಬಹುದು. ಮನೆಯಲ್ಲೇ ಕೂತು ಬಸ್ಸು, ರೈಲಿನ ಟಿಕೆಟ್ ಬುಕ್ ಮಾಡಬಹುದು. ಬಸ್ಸಿನಲ್ಲಿ ಕಿಟಕಿ ಪಕ್ಕದ ಸೀಟು ಬೇಕೋ ಬೇಡವೋ ಎಂಬುದನ್ನೂ ನಾವೇ ನಿರ್ಧರಿಸಿಕೊಳ್ಳಬಹುದು. ಹಿಂದಿನಂತೆ ಬಸ್ಸು, ರೈಲ್ವೇ ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕಾಗಿಲ್ಲ. ಇಂಟರ್ನೆಟ್ ಸಂಪರ್ಕದ ಮೂಲಕ ಮನೆಯಲ್ಲೇ ಬ್ಯಾಂಕಿನ ವ್ಯವಹಾರಗಳನ್ನು ಮಾಡಿಕೊಳ್ಳಬಹುದು. ಈಗ ATM ಗಳು ಇರುವುದರಿಂದ ನಮಗೆ ಬಿಡುವಾದಾಗ ಹಣ ಪಡೆಯಬಹುದು. ಹಿಂದಿನಂತೆ ಬ್ಯಾಂಕಿನ ವ್ಯವಹಾರದ ದಿನ/ವೇಳೆಗೆ ಕಾಯುವ ಅಗತ್ಯವಿಲ್ಲ. ಹೀಗೆ ಇನ್ನೂ ಎಷ್ಟೋ ಉದಾಹರಣೆಗಳನ್ನು ಕೊಡುತ್ತಾ ಹೋಗಬಹುದು. ಅವೆಲ್ಲಾ ಡಾ. ಕಿರಣ್ ಅವರಿಗೂ ತಿಳಿದಿರುವಂತಹುದೇ ಆಗಿರುವುದರಿಂದ ಪುನಃ ಪ್ರಸ್ತಾಪಿಸುವ ಅಗತ್ಯವಿಲ್ಲ. ಇದು ಸುಂದರ ಬದುಕಲ್ಲದಿದ್ದರೆ ಇನ್ನ್ಯಾವುದು ಸುಂದರ ಬದುಕು? ಇಂತಹ ಆಧುನಿಕ ನಾಗರಿಕತೆಯ ಸೌಲಭ್ಯಗಳು ಮನುಕುಲದ ನಿಜವಾದ ಶತ್ರುಗಳಾಗುತ್ತವೆಯೇ? ಹೇಗೆ? ಈಗ ಪ್ರಸನ್ನ ಅವರ ಗಾಂಧಿ ಪ್ರಣೀತ ಶ್ರಮಸಹಿತ ಸರಳ ಬದುಕು, ಸುಂದರ ಬದುಕು ಎಂಬ ತತ್ವಾಧಾರಿತ ಜೀವನ ರೀತಿಗೆ ಈ ಹಿಂದೆ ಪ್ರಸ್ತಾಪಿಸಿದ ಅನುಕೂಲತೆಗಳು ಬೇಕಾಗಿಲ್ಲವೇ? ಅದಿಲ್ಲದೆಯೂ ಬದುಕು ಸುಂದರವಾಗಬಹುದು ಎಂಬುದು ಅವರ ಚಿಂತನೆಯೇ? ಡಾ. ಕಿರಣ್ ಮತ್ತು ಅವರಂತೆ ಇತರರು ಇಂದಿನ ತಂತ್ರಜ್ಞಾನದ ಸೌಲಭ್ಯಗಳು ಕೇವಲ ಮಹಾನಗರ, ನಗರ ಮತ್ತು ಪಟ್ಟಣವಾಸಿಗಳಿಗೆ ಮಾತ್ರ ಲಭ್ಯವಾಗುತ್ತಿದೆ; ಹಳ್ಳಿಗಳಿಗೆ ಎಲ್ಲಿದೆ ಆ ಸೌಲಭ್ಯಗಳು ಎಂದು ಪ್ರಶ್ನಿಸಬಹುದು. ಅವರ ಪ್ರಶ್ನೆ ಸರಿಯಾದುದೇ. ಮೂವತ್ತು ಮೂವತ್ತೈದು ವರ್ಷಗಳ ಹಿಂದೆ ಭಾರತದ ಜನರು ಮೊಬೈಲ್ ಫೋನ್ ಗಳನ್ನು ಕೇವಲ ಹಾಲಿವುಡ್ಡಿನ ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಮಾತ್ರ ನೋಡಿ ಆಶ್ಚರ್ಯಪಟ್ಟಿರಬಹುದು.ಇಂತಹ ಮಾತಾಡುವ ಸಾಧನ ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂದುಕೊಂಡಿರಲೂಬಹುದು ಆದರೆ,ಕಳೆದ ವರ್ಷದ ಅಂತ್ಯದ ಹೊತ್ತಿಗೆ ಭಾರತದಲ್ಲಿದ್ದ ಮೊಬೈಲ್ ಸಂಪರ್ಕಗಳ ಸಂಖ್ಯೆ ೯೩ ಕೋಟಿ!
ಇತ್ತೀಚಿನ ಲೆಕ್ಕಾಚಾರದಂತೆ ಭಾರತದಲ್ಲಿ ಬಳಕೆಯಲ್ಲಿರುವ ಸ್ಮಾರ್ಟ್ ಫೋನ್ ಗಳ ಸಂಖ್ಯೆ ೨೮ ಕೋಟಿ!! (ನೋಡಿ ‘ಇ–ಹೊತ್ತು’ ಅಂಕಣ ಪ್ರಜಾವಾಣಿ ೧೩-೪-೧೫) ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ಫೋನುಗಳು ಇಂದು ಸಾಮಾನ್ಯವಾಗಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ವಿದ್ಯುತ್ ಅಭಾವ ನೀಗಲು ಇಂದು ಸೌರ ವಿದ್ಯುತ್ ಫಲಕಗಳನ್ನು ಜಲಾಶಯಗಳ ಕಾಲುವೆ ಮೇಲೆ ಹಾಕಲಾಗುತ್ತಿದೆ. ಕರ್ನಾಟಕದಲ್ಲೂ ಇದು ಪ್ರಾರಂಭವಾಗಿದೆ. ನಮ್ಮನಾಳುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ರಾಜಕೀಯ ಇಚ್ಚಾಶಕ್ತಿ ಇದ್ದರೆ ಜನರ ಬದುಕು ಹಸನಾಗುತ್ತದೆ. ಅಂತಹ ಇಚ್ಚಾಶಕ್ತಿ ಹಿಂದೆಯೂ ಇತ್ತು ಮತ್ತು ಈಗಲೂ ಇದೆ ಎನ್ನುವುದರಲ್ಲಿ ಅನುಮಾನವಿಲ್ಲ. ಪ್ರಮಾಣದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಇರಬಹುದು. ಆದರೆ ಭಾರತದ ಬದುಕು ನಿಂತ ನೀರಾಗಿದೆ ಎಂದು ಕೊರಗುವುದರಲ್ಲಿ ಅರ್ಥವಿಲ್ಲ.
ಜನಸಂಖ್ಯಾ ಸ್ಪೋಟ ಮತ್ತು ಅಭಿವೃದ್ಧಿ :- ಗಾಂಧಿವಾದಿಗಳು ಮರೆತಿರುವ ಅಥವಾ ಗೊತ್ತಿದ್ದೂ ಮರೆತಂತೆ ನಟಿಸುತ್ತಿರುವ ಒಂದು ಮುಖ್ಯ ಅಂಶ ಇದು. ಒಂದು ಕಡೆ ನಾವು ಪ್ರಗತಿಯತ್ತ ಹೆಜ್ಜೆ ಹಾಕಬೇಕು, ಹಳ್ಳಿಗಳನ್ನು ಮುಂದಕ್ಕೆ ತರಬೇಕು ,ಸಕಲ ಸೌಲಭ್ಯಗಳನ್ನು ಒದಗಿಸಬೇಕು ಎನ್ನುತ್ತೇವೆ. ಹಳ್ಳಿಯ ಮಕ್ಕಳಿಗೆಲ್ಲ ಶಿಕ್ಷಣ ಕೊಟ್ಟು ಅವರನ್ನು ಜ್ಞಾನದ ಆ ಮೂಲಕ ಜನ ಜೀವನದ ಮುಖ್ಯವಾಹಿನಿಗೆ ತರಬೇಕು ಎನ್ನುತ್ತೇವೆ. ಅದರಂತೆ ಕಲಿತವರು ಹಂತಹಂತವಾಗಿ ಹಳ್ಳಿಗಳಿಂದ ಪಟ್ಟಣ, ನಗರಗಳತ್ತ ನಡೆಯುತ್ತಾರೆ. ಅಲ್ಲಿ ಅವರ ವಾಸಕ್ಕೊಂದು ಬಾಡಿಗೆ ಮನೆ, ಜೀವನ ನಡೆಸಲು ಒಂದು ಉದ್ಯೋಗದ ಹುಡುಕಾಟ ಪ್ರಾರಂಭವಾಗುತ್ತದೆ. ಇದು ಅನಿವಾರ್ಯ. ಏಕೆಂದರೆ ದಿನೇದಿನೇ ಬೆಳೆಯುತ್ತಿರುವ ಜನಸಂಖ್ಯೆಗೆ ತಕ್ಕಷ್ಟು ಉದ್ಯೋಗಗಳು ಹಳ್ಳಿಗಳಲ್ಲಿ ಹಿಂದೆ ನಡೆಯುತ್ತಿದ್ದ ಕೆಲಸಗಳಾದ ನೇಕಾರಿಕೆ, ಎಣ್ಣೆಯ ಗಾಣಗಳು, ಕುಡಿಕೆ ಮಡಿಕೆಗಳನ್ನು ಮಾಡುವ ಕುಂಬಾರಿಕೆ, ಕಂಬಳಿ ನೇಯುವುದು, ಖಾದಿ ಗ್ರಾಮೋದ್ಯೋಗ ಇತ್ಯಾದಿಗಳಿಂದ ಸಿಗಲು ಸಾಧ್ಯವೇ? ಶ್ರಮಸಹಿತ ಸರಳ ಬದುಕಿಮೂಲಕ ಗ್ರಾಮ ಸುರಾಜ್ಯದಲ್ಲಿ ಸುಂದರ ಬದುಕು ತರಬಹುದು ಎಂದು ಆಶಿಸುವವರು ಈ ಅಂಶದತ್ತ ಗಮನ ಹರಿಸಬೇಕಾಗುತ್ತದಲ್ಲವೇ? ಹಿಂದೆ ಗಾಂಧಿಯವರು ಮಾಡಿದ ವಿದೇಶಿ ವಸ್ತ್ರಗಳ ಬಹಿಷ್ಕಾರ ಚಳುವಳಿ ವಿದೇಶದಿಂದ ಆಮದಾದ ಒಂದಷ್ಟು ಬಟ್ಟೆಗಳನ್ನು ಅಲ್ಲಲ್ಲಿ ಸುಡುವುದಕ್ಕೆ ಸೀಮಿತವಾಯಿತೇ ಹೊರತು ಬೇರೇನೂ ಅದರಿಂದ ಸಾಧನೆ ಆಗಲಿಲ್ಲ. ಅವರ ಕಾಲದಲ್ಲೇ ಖಾದಿ ಬಟ್ಟೆಯು ವಿದೇಶಿ ವಸ್ತ್ರಗಳಿಗಿಂತ ದುಬಾರಿಯಾಗಿತ್ತು. [ಶಿವರಾಮಕಾರಂತರು ತಾವು ಪಕ್ಕಾ ಗಾಂಧಿವಾದಿಗಳಾಗಿದ್ದಾಗ ಖಾದಿ ವಸ್ತ್ರಗಳನ್ನು ಮಾರಾಟಮಾಡಲು ಪಟ್ಟ ಪಾಡು, ನಂತರ ಅದರಿಂದ ನಷ್ಟ ಅನುಭವಿಸಿ ಅನಿವಾರ್ಯವಾಗಿ ತಮ್ಮ ಬಟ್ಟೆ ವ್ಯಾಪಾರ ನಿಲ್ಲಿಸಬೇಕಾದ ಪರಿಸ್ಥಿತಿ ಇವುಗಳ ಬಗ್ಗೆ ತಮ್ಮ ಆತ್ಮ ಕಥನ ‘ಸ್ಮೃತಿಪಟಲದಿಂದ’ (ಪ್ರಕಾಶಕರು-ರಾಜಲಕ್ಷ್ಮಿ ಪ್ರಕಾಶನ, ಬಳೆಪೇಟೆ, ಬೆಂಗಳೂರು-೫೩) ಎಂಬ ಕೃತಿಯಲ್ಲಿ ವಿವರಿಸಿದ್ದಾರೆ. ಆಸಕ್ತರು ಆ ಕೃತಿಯನ್ನು ಓದಬಹುದು].
ಡಾ. ಕಿರಣ್ ಅವರು ಸಂಗತದ ತಮ್ಮ ಲೇಖನದಲ್ಲಿ ‘ಇಂದು ನಾವು ಸ್ಮಾರ್ಟ್ ನಗರಗಳನ್ನು ಕಟ್ಟುವುದು ಬೇಕಾಗಿಲ್ಲ. ಅದಕ್ಕೆ ಬದಲಾಗಿ ಸ್ವಾವಲಂಬಿ ಹಳ್ಳಿಗಳನ್ನು ಕಟ್ಟಬೇಕಿದೆ. ಹಳ್ಳಿಗಳು ಬರಿದಾಗುತ್ತಿರುವ ಈ ಹೊತ್ತಿನಲ್ಲಿ ನಗರಗಳನ್ನು ಇನ್ನಷ್ಟು ದೊಡ್ಡದಾಗಿಸಲು ಹೊರಡುವುದು ಪ್ರಜ್ಞಾವಂತಿಕೆಯ ನಡೆಯಾಗಲಾರದು’ ಎಂದಿದ್ದಾರೆ. ಹಳ್ಳಿಗಳು ಏಕೆ ಬರಿದಾಗುತ್ತಿವೆ ಎಂದು ಈಗಾಗಲೇ ವಿವರಿಸಿದ್ದೇನೆ. ಜನರಿಗೆ ಹಳ್ಳಿಗಳಲ್ಲಿ ಉದ್ಯೋಗದ ಅವಕಾಶಗಳು ಕಡಿಮೆಯಾಗುತ್ತಿರುವಾಗ ಹತ್ತಿರದ ಪಟ್ಟಣ/ನಗರಗಳಿಗೆ ಅವರು ವಲಸೆ ಬರುವುದು ಸಹಜ ಪ್ರಕ್ರಿಯೆ. ಕಾಲಾನುಕಾಲದಲ್ಲಿ ಪಟ್ಟಣಗಳು ಜನಸಂಖ್ಯೆಯ ಒತ್ತಡ ತಡೆಯಲಾರದೆ ನಗರಗಳಾಗಿ ನಂತರ ಮಹಾನಗರಗಳಾಗಲೇ ಬೇಕಲ್ಲವೇ? ನಮ್ಮ ಕರ್ನಾಟಕದ ರಾಜಧಾನಿಯಾದ ಬೆಂಗಳೂರನ್ನೇ ಒಂದು ಉದಾಹರಣೆಯಾಗಿ ತೆಗೆದುಕೊಳ್ಳೋಣ. ೧೯೬೦ರ ತನಕ ಬೆಂಗಳೂರೆಂದರೆ ಕಂಟೋನ್ಮೆಂಟ್, ಸಿಟಿಮಾರ್ಕೆಟ್, ಮಲ್ಲೇಶ್ವರಂ ಮತ್ತು ಬಸವನಗುಡಿ ಹಾಗು ಅದರ ಸುತ್ತಲಿನ ಮೂರ್ನಾಲಕ್ಕು ಕಿ. ಮಿ.ಪ್ರದೇಶಗಳು ಎಂದಷ್ಟೇ ಆಗಿತ್ತು. ಅಲ್ಲಿ ಯಾವಾಗ ಜನಸಂಖ್ಯೆ ಹೆಚ್ಚಾಗತೊಡಗಿತೋ ತನ್ನ ಸುತ್ತಮುತ್ತಲಿನ ಹಳ್ಳಿಗಳತ್ತ ಬೆಂಗಳೂರು ಬೆಳೆಯತೊಡಗಿತು. ಇಂದು ಬೆಂಗಳೂರಿನ ಒಂದು ಭಾಗವೇ ಆಗಿಹೋಗಿರುವ ಯಲಹಂಕ, ವೈಟ್ ಫೀಲ್ಡ್, ಕೋರಮಂಗಲ ಇತ್ಯಾದಿಗಳೆಲ್ಲಾ ಹಿಂದೆ ಹಳ್ಳಿಗಳೇ ಆಗಿದ್ದವು. ಈಗ ಈ ಪ್ರದೇಶಗಳಲ್ಲಿ ನಾನಾ ರೀತಿಯ ಕೈಗಾರಿಕೆಗಳು, ಅಂಗಡಿ ಮಳಿಗೆಗಳು, ಹೋಟೆಲ್ಲುಗಳು ಇವುಗಳಿಗೆ ಪೂರಕವಾದ ಇತರ ಉದ್ಯಮಗಳು ಸಾಕಷ್ಟು ಬೆಳೆದಿವೆ. ರಸ್ತೆ ಸಂಪರ್ಕಗಳು ಆಗಿವೆ. ಇದು ಸ್ವಾವಲಂಬನೆಯಲ್ಲವೇ? ಇದೇ ರೀತಿ ಕರ್ನಾಟಕದ ಇತರ ಜಿಲ್ಲಾ ಕೇಂದ್ರಗಳು ಬೆಳೆಯುತ್ತಿವೆ. ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಯಾವುದಾದರೊಂದು ಉದ್ಯೋಗದ ಅವಕಾಶ ಇರುತ್ತದೆ. ಇದನ್ನು ನಾವು ಮರೆತರೆ ವಾಸ್ತವಕ್ಕೆ ಕಣ್ಣುಮುಚ್ಚಿ ಕೂತಂತೆ ಆಗುತ್ತದೆ. ಇಂದು ಭಾರತದ ಪ್ರಜೆಗಳು ಅವರವರ ಮಟ್ಟದಲ್ಲಿ ಎರಡು ಹೊತ್ತಿನ ಊಟ, ವಾಸಿಸಲು ಒಂದು ಮನೆಗಾಗಿ ತನ್ನ ದೈಹಿಕ ಮತ್ತು ಮಾನಸಿಕ ಶ್ರಮವನ್ನು ಸಾಕಷ್ಟು ವಿನಿಯೋಗಿಸುತ್ತಿದ್ದಾರೆ . ಅಂತಹವರಿಗೆ ತಾವು ದುಡಿದ ಹಣದಲ್ಲಿ ಸ್ವಲ್ಪವಾದರೂ ಸಂತೋಷಸಿಗಬಹುದಾದ ಒಂದು ಟಿ.ವಿ., ಮನೆಗೆ ಬೇಕಾದ ಒಂದೆರೆಡು ಅತ್ಯವಶ್ಯಕತೆಯ ವಸ್ತುಗಳನ್ನು ಕೊಳ್ಳಲು ಹಕ್ಕಿರಬಾರದೆ? ‘ಬದುಕಿನ ಕುರಿತು ಹೆಚ್ಚು ಹೆಚ್ಚು ಸರಳವಾಗಿ ಯೋಚಿಸು, ಅತಿ ಕಡಿಮೆ ಸಂಪನ್ಮೂಲಗಳಿಂದ ಬದುಕನ್ನು ಸಂತೋಷದಾಯಕವಾಗಿ ಇಟ್ಟುಕೊಳ್ಳುವುದೇ ಮನುಷ್ಯ ಎತ್ತರಕ್ಕೆ ಬೆಳೆಯುವುದರ ಲಕ್ಷಣ’ ಎಂಬುದು ತೀರಾ ಅತಿಯಾದ ಆಧ್ಯಾತ್ಮಿಕತೆ ಅಲ್ಲವೇ? ಅದರ ಅವಶ್ಯಕತೆ ಇದೆಯೇ?
‘ಹೆಚ್ಚಾಗಿ ಶ್ರಮವನ್ನು ಸ್ವ-ದುಡಿಮೆಯನ್ನು ಗೌರವಿಸುವುದೇ ಪ್ರಸನ್ನ ಅವರು ಪ್ರತಿಪಾದಿಸುತ್ತಿರುವ ಸುಸ್ಥಿರ ಬದುಕು’ ಎಂದು ತಮ್ಮ ಅಭಿಪ್ರಾಯ ಎಂಬುದಾಗಿ ಡಾ. ಕಿರಣ್ ಅವರು ಹೇಳುತ್ತಾರೆ. ಬೆಳಗಿನಿಂದ ರಾತ್ರಿ ಮಲಗುವ ತನಕ ಕೇವಲ ದೈಹಿಕ ಶ್ರಮದಿಂದಷ್ಟೇ ಕೆಲಸಮಾಡುತ್ತಾ ಹೋದರೆ ನಿದ್ದೆ ಚೆನ್ನಾಗಿ ಬರಬಹುದು. ಅಷ್ಟಾದರೆ ಸಾಕೆ? ಅದರ ಬದಲು ಯಂತ್ರಗಳ ಉಪಯೋಗದಿಂದ, ಆಧುನಿಕ ಸಾರಿಗೆ ಸಂಪರ್ಕಸಾಧನಗಳಿಂದ ತನ್ನ ಕೆಲಸ ಬೇಗ ಮುಗಿಸಿ ಬಿಡುವಿನ ವೇಳೆಯನ್ನು ಇನ್ನಿತರ ಸೃಜನಶೀಲ ಕೆಲಸಕ್ಕೆ ಉಪಯೋಗಿಸಿಕೊಂಡರೆ ತಪ್ಪೇ? ಹಿಂದಿನ ನಮ್ಮ ಹಿರಿಯರು ಏನೇ ಹೇಳಿರಲಿ ಯಾವ, ಯಾರ ಚಿಂತನೆಯೂ ಸಾರ್ವಕಾಲಿಕವಾದ ಸತ್ಯವಾಗಲು ಸಾಧ್ಯವಿಲ್ಲ. ಕಾಲ ಸರಿದಂತೆ ಎಲ್ಲರ ಚಿಂತನೆಗಳು,ಐಡಿಯಾಲಜಿಗಳು out dated ಆಗುತ್ತವೆ. ಇದು ಪ್ರಕೃತಿ ನಿಯಮ..
ಚಿತ್ರಕೃಪೆ: ದಿ.ಹಿಂದೂ
ಲೇಖನ ಚೆನ್ನಾಗಿದೆ. ಚಿಂತನ ಶೀಲವಾಗಿದೆ. ಕಡೆಯ ಎರಡು ವಾಕ್ಯಗಳು ಸ್ವಲ್ಪ ಬದಲಾಗಬೇಕಿತ್ತು.
ಸಾಂದರ್ಭಿಕ ಸತ್ಯಗಳು ಬದಲಾಗುತ್ತವೇಳೆ.
ಕೆಲವು ಸಾರ್ವಕಾಲಿಕ ಸತ್ಯಗಳು ಹಾಗು ಅವುಗಳ ಮೇಲೆ ಕಟ್ಟಿದ ಐಡಿಯಾಲಜಿಗಳು ಬದಲಾಗದೆ ಇರಬಹುದು. ಅವುಗಳ ಕುರಿತ ಜನರ ಆಸಕ್ತಿ ಬದಲಾಗಬಹುದು!
ನನಗೆ ಗಾಂಧಿವಾದಿ ನೆಂಟರೊಬ್ಬರಿದ್ದಾರೆ. ನಿವೃತ್ತಿ ಅಂಚಿನ ಸರ್ಕಾರಿ ಸೇವೆ. ಸೇವೆಯಲ್ಲೂ ಗಾಂಧಿವಾದ ಅವರದು. ಮೊಬೈಲ್ ಬಳಸಲ್ಲ. ಪ್ರಾಣ ಹೋದರೂ ಸರಿ ರಿಕ್ಷಾ, ಟ್ಯಾಕ್ಸಿ ಹತ್ತುವ ಜನ ಅಲ್ಲ (ಈ ಕಾರಣಕ್ಕೆ ಸ್ವಂತ ತಾಯಿ ಎಚ್ಚರತಪ್ಪಿ ಬಿದ್ದಾಗ ಬಸ್ ಕಾಯುತ್ತ ಬೆಂಗಳೂರಿನ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಬರಲು ಮೂರು ತಾಸು ತಡ ಮಾಡಿಕೊಂಡು ತಾಯಿಯನ್ನು ಕಳಕೊಂಡರು!). ಅವರು ಮಾತ್ರ ತಮ್ಮ ಪಾಲಿಸಿಯ ಗುಣದಿಂದ ಕೂಲ್ ಆಗಿಯೇ ಇರುತ್ತಾರೆ. ಆದರೆ ಇದರಿಂದ ಅವರ ಜೊತೆಗೇ ಸಾಗಬೇಕಾದ, ಆದರೆ ಇಂದಿನ ಪ್ರಪಂಚದ ವೇಗಕ್ಕೆ ಹೊಂದಿಕೊಂಡವರಿಗೆ ಆಗುತ್ತಿರುವ ಪರಿಪಾಟಲು?
+1
ಲೇಖನ ಚಿಂತನಾರ್ಹವಾಗಿದೆ. ನಿಜ, ನಾವು ಹಿಂದಕ್ಕೆ ಹೋಗಲಾಗುವುದಿಲ್ಲ, ಅದು ಸಾಧ್ಯವಾಗುವುದೂ ಇಲ್ಲ. ಸರಳತೆ, ಸ್ವಾವಲಂಭನೆ, ಸ್ವಯಂ ಉದ್ಯೋಗ ಮುಂತಾದ ಪರಿಕಲ್ಪನೆಗಳು ಬದಲಾಗಿವೆ. ಆ ಬದಲಾದ ಸ್ವರೂಪವನ್ನು ಅರ್ಥಮಾಡಿಕೊಳ್ಳಲೇಬೇಕು. ಆದರೆ ಇಲ್ಲಿನ ಸೀಮಿತ ಸಂಪನ್ಮೂಲಗಳ ಅರಿವು ಕೂಡ ನಮಗಿರಬೇಕು. ಅತಿಯಾದ ಬಳಕೆಯಿಂದಾಗಿ ಅಂತರ್ಜಲ ಎಷ್ಟು ವೇಗವಾಗಿ ಕುಸಿದಿದೆಯೆಂದರೆ ಹೊಟ್ಟೆಗೆ ಅನ್ನ ಕೊಡುವ ಕೃಷಿ ನಶಿಸುತ್ತಿದೆ, ಕುಡಿಯುವ ನೀರನ್ನು ಕೊಳ್ಳಬೇಕಾದ ಸ್ಥಿತಿಗೆ ಕೂಡ ಬಂದಿದ್ದೇವೆ. ಎಲ್ಲವನ್ನೂ ಕೊಳ್ಳುವ ಸ್ಥಿತಿಗೆ ಬರುವುದು ’ಮುಂದುವರಿಕೆ’ಯಾಗುವುದಿಲ್ಲ. ನಿಸರ್ಗದೊಡನೆಯ ಸಹಬಾಳ್ವೆಯ ಕೊಂಡಿ ಕಳಚದಂತೆ ನಾವು ಮುಂದುವರಿಯಬೇಕಾಗಿದೆ. ಇಲ್ಲದಿದ್ದರೆ ನಾವು ನಮ್ಮ ಸುತ್ತ ಕಟ್ಟಿಕೊಳ್ಳುತ್ತಿರುವ ’ಸೌಲಭ್ಯ’ಗಳೇ ಮುಂದೊಂದು ದಿನ ನಮಗೆ ಗೋರಿಗಳಾದರೆ ಆಶ್ಚರ್ಯಪಡಬೇಕಾಗಿಲ್ಲ. ಹಾಗಾಗಿ ಹಳೆಯ ಪದ್ಧತಿಯನ್ನು ಸಾರಾಸಗಟು ತಳ್ಳಿಹಾಕುವ ಆತುರವಾಗಲೀ, ಆಧುನಿಕತೆಯನ್ನು ಕಣ್ಣುಮುಚ್ಚಿಕೊಂಡು ಆರಾಧಿಸುವ ಹುಂಬತನವಾಗಲೀ ಎರಡೂ ಅಪಾಯಕಾರಿಯೇ.
NaMo should read the above comment.
+1