ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 25, 2015

11

ಯತ್ರ ನಾರ್ಯಸ್ತು ಪೂಜ್ಯಂತೇ

‍ನಿಲುಮೆ ಮೂಲಕ

– ಮಯೂರಲಕ್ಷ್ಮಿ,ಮೈಸೂರು

ದೀಪನೂರಾರು ವರ್ಷಗಳಿಂದ ಭಾರತವನ್ನು ಎಷ್ಟೇ ಪ್ರಯತ್ನಿಸಿದರೂ ವಶಪಡಿಸಿಕೊಳ್ಳಲಾಗದ ಪಾಶ್ಚಾತ್ಯರು ಹತಾಶರಾಗಿ ತಮ್ಮ ಪ್ರಯತ್ನಗಳನ್ನು ಕೈಬಿಡದಿದ್ದರೂ ಅಸಹಾಯಕರಾಗಿ ಮತ್ತೆ ಮತ್ತೆ ಭಾರತದ ಮೇಲೆ ಬೇರೆ ಬೇರೆ ರೀತಿಯಲ್ಲಿ ಆಕ್ರಮಣಗಳಲ್ಲಿ ತೊಡಗಿದರು. ಸ್ವತಂತ್ರ ಬಂದ ಹೊಸದರಲ್ಲಿ ಆರ್ಥಿಕವಾಗಿ ಬಲಹೀನವಾಗಿದ್ದೇನೋ ನಿಜ, ಆದರೆ ಎಂತಹ ಪರಿಸ್ಥಿತಿಯಲ್ಲೂ ತನ್ನ ಅಂತ:ಶಕ್ತಿ ಮತ್ತು ಸತ್ಯ ಧರ್ಮಗಳ ಆಧಾರದಿಂದಲೇ ತಲೆಯೆತ್ತಿ ನಿಂತ ಈ ದೇಶ ನಂತರ ಸಾಧಿಸಿದ್ದು ಅಪಾರ.

ಸನಾತನ ಸಂಸ್ಕೃತಿಯ ಸಾಕಾರ ಅಡಿಪಾಯವೇ ಈ ದೇಶವನ್ನು ಎಷ್ಟೆಲ್ಲಾ ಘೋರ ಆಕ್ರಮಣ, ದೌರ್ಜನ್ಯಗಳು ನಡೆದರೂ ಮತ್ತೆ ಮತ್ತೆ ತಲೆಯೆತ್ತಿ ವಿಶ್ವಮಾನ್ಯ ರಾಷ್ಟ್ರವಾಗಿಸಿದ್ದು. ಅಲೆಕ್ಸಾಂಡರಿನಿಂದ ಹಿಡಿದು ಡಚ್, ಪೋರ್ಚುಗೀಸ್ ಮತ್ತು ಬ್ರಿಟಿಷರವರೆಗೂ ಭಾರತವನ್ನು ವಶಪಡಿಸಿಕೊಳ್ಳಲಾಗದ ಸೋಲಿನ ಕಥೆಗಳೇ ಸಾಕ್ಷಿಯಾಗಿರುವುದು ಇತಿಹಾಸದ ಪುಟಗಳಲ್ಲಿ.ಭಾರತವನ್ನು ಹಾವಾಡಿಗರ ದೇಶ, ಜಾತಿಯಾಧಾರಿತ ಸಮಾಜ ವ್ಯವಸ್ಥೆಯ ದೇಶ, ಮೂಢನಂಬಿಕೆಗಳ ನೆಲೆವೀಡು…. ಎಂದೆಲ್ಲಾ ಬಿಂಬಿಸಿದ್ದಾಯ್ತು… ಒಂದು ದೇಶವು ವಿಶ್ವಶಕ್ತಿಯಾಗಿ ಹೊರಹೊಮ್ಮುವುದನ್ನು ನಿರ್ಬಂಧಿಸುವ ಗುರಿಯು ತನ್ನ ದಿಕ್ಕನ್ನು ಬದಲಿಸಿ ಸಾಂಸ್ಕೃತಿಕವಾಗಿ ಭಾರತವನ್ನು ಪಾಶ್ಚಾತ್ಯ ಸಂಸ್ಕೃತಿಯ ಪ್ರತಿರೂಪವನ್ನಾಗಿ ಮಾಡುವತ್ತ ತಿರುಗಿದ್ದು, ಇದಕ್ಕಾಗಿ ಕಳೆದ ನೂರು ವರ್ಷಗಳಿಂದ ಪ್ರಯತ್ನ ಹೊಸ ರೀತಿಯಲ್ಲಿ ನಡೆಯುತ್ತಲೇ ಇದೆ.

ಜಾಗತೀಕರಣ ಮತ್ತು ಉದಾರೀಕರಣವನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾರತವು ಒಪ್ಪಿ ತನ್ನ ಸಹಿ ಹಾಕಿ ಬಂದದ್ದು ನಂತರ ಭಾರತವನ್ನು ತನ್ನ ಮಾರುಕಟ್ಟೆಯನ್ನಾಗಿ ಮಾಡಿಕೊಂಡು ಮತ್ತೊಂದು ರೀತಿಯಲ್ಲಿ ವಿದೇಶೀ ಕಂಪನಿಗಳು ವಿಜೃಂಭಿಸತೊಡಗಿದವು.ವೈಚಾರಿಕವಾಗಿ ಮತ್ತು ಬೌದ್ಧಿಕವಾಗಿ ಈ ದೇಶದ ಮಾನವೀಯ ಸಂಪತ್ತು ಅತ್ಯಂತ ಶ್ರೀಮಂತವಾಗಿದ್ದು ತನ್ನ ಸ್ವಂತ ಶಕ್ತಿಯಿಂದ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಮತ್ತು ಸಂಶೋಧನೆ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿ ತನ್ನದೇ ಛಾಪನ್ನು ಮೂಡಿಸುತ್ತಾ ಮುಂದುವರೆಯುತ್ತಿದ್ದಾಗ.. ಮತ್ತೊಂದೆಡೆ ಜಾಗತೀಕರಣದ ನೆಪದಲ್ಲಿ ಭಾರತಕ್ಕೆ ಧಾಳಿಯಿಟ್ಟ ವಿದೇಶೀ ಕಂಪನಿಗಳು ಆರ್ಥಿಕವಾಗಿ ಭಾರತವನ್ನು ದುರ್ಬಲ ಮಾಡುವುದರೊಂದಿಗೆ ಈ ದೇಶದ ಮುಂದಿನ ಭವಿಷ್ಯವಾದ ಯುವಶಕ್ತಿಯನ್ನು ಬಲಹೀನಗೊಳಿಸುತ್ತಾ ಪ್ರತಿಭಾ ಪಲಾಯನಕ್ಕೆ ಐ.ಐ.ಟಿ., ಐ.ಐ.ಎಂ.ಗಳ ಮೂಲಕ ಆಮಿಷ ತೋರಿಸಿ ನಮ್ಮ ಪ್ರತಿಭೆಗಳನ್ನು ಸೆಳೆದುಕೊಂಡಿತು. ಇದರೊಂದಿಗೆ ನಮ್ಮ ಯುವಜನತೆಯ ಮಾನಸಿಕ ಸ್ಥಿತಿಯನ್ನು (ಮೈಂಡ್ ಸೆಟ್) ಬದಲಿಸಲು ಮಾಧ್ಯಮಗಳ ಜಾಲ ಹೊಸೆಯಿತು.

ಹೊಸ ತಂತ್ರಜ್ಞಾನವು ನಮ್ಮ ದೇಶಕ್ಕೆ ವರವಾಗಬೇಕಿತ್ತು, ಆದರೆ ಅತ್ತ ಲಾಭವೂ ಇದ್ದು ಇತ್ತ ಆಧುನಿಕ ತಂತ್ರಜ್ಞಾನವು ಶಾಪವಾಗತೊಡಗಿದ್ದು ನಮ್ಮ ಅರಿವಿಗೆ ಬರಲೇ ಇಲ್ಲಾ…ಸರಿಸುಮಾರು 1990ರವರೆಗೂ ಈ ದೇಶದಲ್ಲಿ ದೂರದರ್ಶನವೊಂದೇ ಮನರಂಜನೆಯ ಮಾಧ್ಯಮವಾಗಿತ್ತು…ಮನರಂಜನೆಯೊಂದಿಗೆ ಮಾಹಿತಿಯೂ ಮುಖ್ಯ ಗುರಿಯಾಗಿತ್ತು.. ನಂತರ ಆರಂಭವಾದ ವಿದೇಶೀ ಚಾನೆಲ್ಲುಗಳ ಪ್ರಸಾರಗಳು ಮನರಂಜನೆಗೆ ಒತ್ತುಕೊಟ್ಟಿದ್ದಲ್ಲದೇ ನಮ್ಮ ಯುವಕರ ದೃಷ್ಟಿಯನ್ನು ಬೇರೆಡೆಗೆ ತಿರುಗಿಸಲು ಸಫಲವಾಗತೊಡಗಿದವು. ನಮ್ಮ ಜೀವನಶೈಲಿ ಬದಲಾಗತೊಡಗಿದ್ದು ನಂತರದ ದಿನಗಳಲ್ಲೇ!

ರಾಜೀವ ದೀಕ್ಷಿತರು ವಿಶ್ಲೇಷಿಸಿರುವಂತೆ, ಭಾರತಕ್ಕೆ ಆಗಮಿಸಿದ ವಿದೇಶೀ ದೃಶ್ಯ ಮಾಧ್ಯಮಗಳು ಕಂಪನಿಗಳು ನಮ್ಮ ಯುವಕರಿಗೆ ಮೊದಲು ಪೆಪ್ಸಿ, ಕೋಕ್‍ಗಳನ್ನು ಕೊಟ್ಟು ‘ಶಕ್ತಿಶಾಲಿಗಳಾಗಿ. . ..  ಉಲ್ಲಾಸಗೊಳ್ಳಿ..’ ಎಂದರು, ನಿಧಾನವಾಗಿ ನಮ್ಮ ಆಹಾರ ಕ್ಷೇತ್ರವನ್ನೂ ಆಕ್ರಮಿಸಿದರು. ತಮ್ಮ ದೇಶದಲ್ಲಿ ಬಿಕರಿಯಾಗದ ಎಲ್ಲಾ ವಸ್ತುಗಳಗೂ ಭಾರತವೇ ಮುಖ್ಯ ಮಾರುಕಟ್ಟೆಯಾಯಿತು.ಈ ದೇಶದ ಮುಖ್ಯ ಕ್ರೀಡೆ ಹಾಕಿ ಎನ್ನುವುದನ್ನೇ ಮರೆತುಹೋಗುವಷ್ಟು ಕ್ರಿಕೆಟ್ ಜನಪ್ರಿಯವಾಯಿತು.ನಮ್ಮ ದೇಶದ ಕ್ರಿಕೆಟ್-ಸಿನೆಮಾ ತಾರೆಯರು, ನಮ್ಮ ‘ರೋಲ್ ಮಾಡೆಲ್’ಗಳಾದರು…. ಹಾನಿಕಾರಕ ರಾಸಾಯನಿಕಯುಕ್ತ ಪಾನೀಯಗಳು ಪ್ರಧಾನವಾಯಿತು.ರಾಸಾಯನಿಕ ಕೀಟನಾಶಕಗಳಿಂದ ನಮ್ಮ ಭೂಮಿಯ ಫಲವತ್ತತೆ ಹಾಳಾಯಿತು… ರೈತ ಆತ್ಮಹತ್ಯೆಗೆ ಶರಣು ಹೋದ.ಇಲ್ಲಿನ ಸ್ವತಂತ್ರ ಹೋರಾಟಗಾರರೂ, ವಿಜ್ಞಾನಿಗಳೂ, ವಿವಿಧ ಕ್ಷೇತ್ರದ ಸಾಧಕರೂ ನಮ್ಮ ಪ್ರೇರಕ ಶಕ್ತಿಗಳಾಗಲಿಲ್ಲಾ… ಅಷ್ಟರಮಟ್ಟಿಗೆ ಭಾರತೀಯರ ಪರಿವರ್ತನೆಯಾಗತೊಡಗಿತು.

ನಮ್ಮ ಬಾಲ್ಯದಲ್ಲಿ ನಮ್ಮ ಹಿರಿಯರ ಕೈಗಳಿಂದ ತಿಂದ ತಿನಿಸುಗಳು ಮಾಯವಾಯಿತು, ಎಲ್ಲಾ ಮಕ್ಕಳ ಕೈಗಳಲ್ಲೂ ‘ಲೇಸ್ ಚಿಪ್ಸ್’ಗಳೂ, ಆರೋಗ್ಯಕರ ಆಹಾರಗಳನ್ನೇ ಮರೆತುಬಿಡುವಂತೆ ‘ಪಿಜ್ಜಾ-ಬರ್ಗರ್’ಗಳು ನಮ್ಮ ದಿನನಿತ್ಯದ ಆಹಾರಗಳಾಗತೊಡಗಿದವು. ಹಿರಿಯರೊಂದಿಗೆ ವಾಸಿಸುವ ಒಟ್ಟು ಕುಟುಂಬಗಳ ಸಂಖ್ಯೆ ಕಡಿಮೆಯಾಗತೊಡಗಿತು. ಇದಕ್ಕೆ ಪೂರಕವಾಗಿ ಅನಾಥಾಶ್ರಮಗಳ ಮತ್ತು ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚತೊಡಗಿತು. ಜಾಹೀರಾತುಗಳಲ್ಲೆಲ್ಲಾ ವಿದೇಶೀ ಬಹುರಾಷ್ಟ್ರೀಯ ಕಂಪನಿಗಳ ಸೋಪುಗಳು, ಶ್ಯಾಂಪುಗಳು, ತಿನಿಸುಗಳು, ಟೂತ್ ಪೇಸ್ಟುಗಳಿಂದಾ ಕೂಡಿದ ನೂರಾರು ಗ್ರಾಹಕ ವಸ್ತುಗಳಿಂದಾ ತುಂಬತೊಡಗಿತು. ಇದು ದೃಶ್ಯ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಪ್ರಧಾನವಾದವು. ದುರಂತವೆಂದರೆ ಈ ಎಲ್ಲಾ ಜಾಹೀರಾತುಗಳಿಗೂ ಈ ದೇಶದ ಮಹಿಳೆಯೇ ಪ್ರಧಾನವಾದಳು. ಪುರುಷರು ಬಳಸುವ ಶೇವಿಂಗ್ ಕ್ರೀಮುಗಳು ಮತ್ತು ಡಿಯೋಡರೆಂಟುಗಳಿಂದಾ ಹಿಡಿದು ಅವರ ಒಳಉಡುಪುಗಳವರೆಗೂ ಮಹಿಳೆಯೇ ಜಾಹೀರಾತಿನ ವಸ್ತುವಾದಳು. ಹೀಗಿತ್ತು ಪಾಶ್ಚ್ಯಾತ್ಯೀಕರಣದ ಪ್ರಭಾವ!

ಅಂದರೆ ಮಹಿಳೆಯನ್ನು ‘ಸೇಲೆಬಲ್’ ವಸ್ತುವನ್ನಾಗಿಸಿಕೊಂಡು ಲಾಭ ಪಡೆದುಕೊಳ್ಳಲಾರಂಭಿಸಿದ್ದು ಮೊದಲು ವಿದೇಶೀಯರೇ.ಬದಲಾಗುವ ಕಾಲದೊಂದಿಗೆ ಮನಸ್ಥಿತಿಯನ್ನೂ ಬದಲಿಸುವ ಮೆಕಾಲೆ ಪ್ರಯತ್ನಗಳಿಗೆ ಪೂರಕವಾಗುವಂತೆ ಈ ದೇಶದ ಪುರಾತನ ಪರಂಪರೆ, ಸಂಸ್ಕೃತಿಯ ಅವಹೇಳನ ಯತೇಚ್ಛವಾಗಿ ನಡೆದು,ಸಂಪ್ರದಾಯಗಳ ಚೌಕಟ್ಟಲ್ಲಿ ಶತಮಾನಗಳಿಂದಾ ಜೀವಿಸುತ್ತಾ ಬಂದವರನ್ನು ‘ಮನುವಾದಿ’ಗಳೆಂದು ಜರೆಯಲಾಯಿತು.ಈ ದೇಶದ ಮೂಲ ಸಂಸ್ಕೃತಿಯ ಅಪಹಾಸ್ಯ ನಡೆದು ಒಟ್ಟಾರೆ ನಾವುಗಳು ಸಂಕುಚಿತ ಮನೋಭಾವದ ಪ್ರಗತಿಯನ್ನೇ ಬಯಸದ ಜನರೆಂದು ಅಂತ್ರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವ ಸಿನೆಮಾ ಮತ್ತು ಸಾಹಿತ್ಯಗಳು ಮನ್ನಣೆ ಪಡೆದವು. ಸಾವಿರಾರು ವರ್ಷಗಳಿಂದ ಇಲ್ಲಿರುವ ಜಾತಿ-ಮತಗಳ ಭೇಧಗಳ ಸಮಸ್ಯೆಗಳೇ ಇಲ್ಲಿ ಪ್ರಮುಖವಾದವು. ಇಲ್ಲಿನ ಸಾಧಕರ್ಯಾರೂ ವಸ್ತು-ವಿಷಯವಾಗಲೇ ಇಲ್ಲಾ. ದೇಶಭಕ್ತಿಯೆಂದರೆ ಕೋಮುವಾದ ಎನ್ನುವ ಅಪವಾದ ಬೇರೆ!

ಬಾಲ್ಯದಲ್ಲಿ ತಂದೆಯಿಂದ, ಕೌಮಾರ್ಯದಲ್ಲಿ ಪತಿಯಿಂದ ಮತ್ತು ವೃದ್ಧಾಪ್ಯದಲ್ಲಿ ಪುತ್ರ ಸಂರಕ್ಷಿಸಬೇಕೆಂಬ ವಾಕ್ಯವು ನಮ್ಮ ಸಂಕುಚಿತ ಮನಸ್ಸಿನ ಪ್ರತೀಕವಲ್ಲಾ… ಇಲ್ಲಿರುವುದು ನಮ್ಮ ಸ್ತ್ರೀಶಕ್ತಿ ಸಂರಕ್ಷಣೆಯ ಕಾಳಜಿ. ನಮಗೆ ಸ್ತ್ರೀ ಎನ್ನುವುದೇ ಒಂದು ಶಕ್ತಿಯ ಸಂಕೇತ!..ನಮ್ಮ ದೇಶದ ಎಲ್ಲಾ ಜಾತಿ-ಮತಗಳ ಅಭಿಪ್ರಾಯಗಳೂ ಪ್ರತಿಪಾದಿಸುವುದು ಮಗಳು, ಮನದನ್ನೆ ಮತ್ತು ಮಾತೆಯಾಗಿ ಮಹಿಳೆ ಪೂಜನೀಯಳೆಂದೇ!. ಅಷ್ಟೇ ಏಕೆ… ಪ್ರಪಂಚದ ಎಲ್ಲಾ ಧರ್ಮಗಳಿಗಿಂತಲೂ ನಮ್ಮ ಸನಾತನ ಧರ್ಮ ನಾರಿಗೆ ಪುರಷನಿಗಿಂತಾ ಹೆಚ್ಚಿನ ಸ್ಥಾನವನ್ನೇ ಕೊಟ್ಟಿದೆ. ಏಕೆಂದರೆ ಅನ್ಯ ಧರ್ಮೀಯರ ಪ್ರತಿಪಾದನೆಯಂತೆ ಇಲ್ಲಿ ಸ್ತ್ರೀಯು ಭೋಗಲಾಲಸೆಗಾಗಿ ಜನಿಸಿದವಳಲ್ಲಾ ಅಥವಾ ಪುರುಷನ ಮೂಳೆಯಿಂದಾ ಸೃಷ್ಟಿಸಲ್ಪಟ್ಟವಳಲ್ಲಾ, ಅರ್ಧನಾರೀಶ್ವರ ತತ್ವದಂತೆ, ಇಲ್ಲಿ ನಾರಿಯು ಮಹಾಲಕ್ಷ್ಮೀ, ಜಗನ್ಮಾತೆ, ಸರಸ್ವತಿಯ ರೂಪ, ಮತ್ತು ಅಧರ್ಮ ತಾಂಡವವಾಡಿದಾಗ ಪರಮಾತ್ಮನ ಜೊತೆಗೂಡಿ ದುಷ್ಟಶಿಕ್ಷಣ ಮಾಡುವ ಚಾಮುಂಡಿ. ನೂರಾರು ವರ್ಷಗಳಿಂದಾ ದೇಶದ ಮೇಲೆ ನಡೆದ ಆಕ್ರಮಣಗಳಲ್ಲಿ ಮತ್ತು ಯುದ್ಧಗಳಲ್ಲಿ ಇಲ್ಲಿನ ಗೌರವಾನ್ವಿತ ಸ್ತ್ರೀಯರ ಸಂರಕ್ಷಣೆಗಾಗಿ ಕೆಲವು ನಿರ್ಬಂಧಗಳನ್ನು ವಿಧಿಸಬೇಕಾಯಿತೆನ್ನುವುದೇನೋ ನಿಜ, ಅದರಿಂದಾ ಮಹಿಳೆಯರ ಮೇಲಿನ ಕಟ್ಟುಪಾಡುಗಳು ಹೆಚ್ಚಾದದ್ದೂ ಮತ್ತು ನಮ್ಮದೇ ಕೆಲವು ಸಂಕುಚಿತ ಮನಸ್ಸುಗಳ ತಪ್ಪುಗಳಾದರೂ ಇಲ್ಲಿನ ವ್ಯವಸ್ಥೆಯೇ ಮಹಿಳೆಯರ ಮೇಲಿನ ನಿರ್ಬಂಧ ಮತ್ತು ಮಹಿಳಾಶಕ್ತಿಯ ಪ್ರತಿರೋಧವೆಂದಲ್ಲಾ!

ಆದಿಕಾಲದ ಗಾರ್ಗಿ, ಮೈತ್ರೇಯಿಯರು ತಮ್ಮ ಜ್ಞಾನ ಮತ್ತು ಮೇಧಾಶಕ್ತಿಯ ಪ್ರತಿರೂಪವಾಗಿದ್ದರು. ದ್ರೌಪದಿ ಮತ್ತು ದಮಯಂತಿಯರು ಶೋಷಿತ ಮಹಿಳೆಯರಲ್ಲಾ, ಸಮಾಜದ ವ್ಯವಸ್ಥೆಯ ವಿರುದ್ಧ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದ ದಿಟ್ಟ ನಾರಿಯರು. ಇನ್ನು ಈ ದೇಶದ ಹಿತಕ್ಕಾಗಿ ಹೋರಾಡಿದ ಕಿತ್ತೂರು ಚೆನ್ನಮ್ಮಾ, ಝಾನ್ಸಿ ರಾಣಿಯರು ಹೋರಾಟದ ಕಿಚ್ಚನ್ನು ಹಚ್ಚಿ ಈ ದೇಶದ ಸಂರಕ್ಷಣೆಗೆ ಪಣ ತೊಟ್ಟು ನಿಂತರು. ನಮ್ಮ ದೇಶವು ಮುಕ್ತ ಮನಸ್ಸಿನಿಂದ ಇದನ್ನು ಸ್ವೀಕರಿಸಿತು, ಏಕೆಂದರೆ ಇಲ್ಲಿ ನಾರಿಯು ಶಕ್ತಿಯ ಸಂಕೇತ! ಇನ್ನು ಇಂದಿನ ಮಹಿಳೆಯರು ಯಾವ ಪುರುಷರಿಗೂ ಕಡಿಮೆಯಿಲ್ಲದಂತೆ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಮುಂತಾದ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆಗೈದಿದ್ದಾರೆ. ಕಲ್ಪನಾ ಛಾವ್ಲಾ, ನೀರಜಾ ಬಾನೋಟ್, ಸುನೀತಾ ವಿಲಿಯಂಸ್, ಅರುಣಿಮಾ ಸಿನ್ಹಾ, ದುರ್ಗಾಶಕ್ತಿ ನಾಗಪಾಲ್.. ಇವರೆಲ್ಲರೂ ಶಕ್ತಿಯ ಸಂಕೇತವೇ!
ಆದಾಗ್ಯೂ ಇಲ್ಲಿನ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ಮತ್ತು ಅತ್ಯಾಚಾರಗಳಂತಹ ಹೇಯ ಕೃತ್ಯಗಳು ಖಂಡನೀಯ. ಈ ಕುರಿತು ನಮ್ಮ ವ್ಯವಸ್ಥೆಯಲ್ಲಿ  ಮಹಿಳೆಯರ ಮತ್ತು ಬಾಲಕಿಯರ ಮೇಲೆಸಗುವ ದೌರ್ಜನ್ಯಗಳ ತಡೆ ಮತ್ತು ಶಿಕ್ಷೆಗೆ ತ್ವರಿತವಾಗಿ ಬಲವಾದ ಕಾನೂನು ಬರಬೇಕು, ಇದು ಸಧ್ಯದ ಅತಿ ಅವಶ್ಯಕವಾದ ಆಗ್ರಹ. ಇಲ್ಲಿ ಬದಲಾಗಬೇಕಾಗಿರುವುದು ಮಹಿಳೆಯರಲ್ಲಾ ನಮ್ಮ ಮನಸ್ಥಿತಿಗಳು. ನಮ್ಮದೇ ಮಾಧ್ಯಮಗಳು ಧಾರಾವಾಹಿಗಳು ಮಹಿಳೆಯನ್ನು ಬಿಂಬಿಸುತ್ತಿರುವ ರೀತಿ ಬದಲಾಗಬೇಕು. ರಸ್ತೆಗಳಲ್ಲಿ ಕಾಣಬರುವ ಜಾಹೀರಾತುಗಳಿಂದಾ ಹಿಡಿದು ಎಲ್ಲಾ ಸ್ತರಗಳಲ್ಲಿಯೂ ನಾವು ಸ್ತ್ರೀಯನ್ನು ಪ್ರತಿಬಿಂಬಿಸುವ ರೀತಿ ಗೌರವಾನ್ವಿತವಾಗಿರಬೇಕಲ್ಲವೇ?

ಮಹಿಳೆಯರು ಧರಿಸುವ ವಸ್ತ್ರಗಳಿಂದಾಗಿಯೇ ಪ್ರಚೋದನೆಗಳಾಗಿ ಬಲಾತ್ಕಾರಗಳಾಗುತ್ತದೆಂದರೆ ಏನೂ ಅರಿಯದ ಪುಟ್ಟ ಪುಟ್ಟ ಕಂದಮ್ಮಗಳು ಬಲಿಯಾಗುತ್ತಿರುವುದಾದರೂ ಏಕೆ? ಆದರೆ….ಈ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಭಾರತವು ತನ್ನ ಪ್ರಯತ್ನದ ತೀವ್ರತೆಯನ್ನು ಹೆಚ್ಚಿಸುತ್ತಿದೆ. ಇಂದು ಎಲ್ಲೇ ಆದರೂ ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ಅಪರಾಧಗಳಾದರೆ ನಮ್ಮ ನಾಗರೀಕರು ಪ್ರತಿಭಟಿಸುವುದರೊಂದಿಗೆ ಸ್ಪಂದಿಸುತ್ತಿದ್ದಾರೆ ಮತ್ತು ಭಾರತಕ್ಕೆ ಈ ಸಮಸ್ಯೆಯನ್ನೆದುರಿಸುವ ಸ್ವ-ಸಾಮಥ್ರ್ಯವಿದೆ. ಇದಕ್ಕೆ ಬಿಬಿಸಿಗಾಗಲೀ ಅಥವಾ ಇನ್ಯಾವುದೇ ದೇಶಕ್ಕಾಗಲೀ ನಮ್ಮ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ನೆಪದಲ್ಲಿ ಸಮಸ್ಯೆಯನ್ನು ಇನ್ನಷ್ಟು ಕ್ಲಿಷ್ಟಗೊಳಿಸುವ ಅವಶ್ಯಕತೆಯಿಲ್ಲ.

ಇಷ್ಟಕ್ಕೂ ಮಹಿಳೆಯನ್ನು ಭೋಗವಸ್ತುವನ್ನಾಗಿ ತಮ್ಮ ಮಾಧ್ಯಮಗಳಲ್ಲಿ, ನಿಯತಕಾಲಿಕೆಗಳಲ್ಲಿ ಬಿಂಬಿಸುವ ಯು.ಕೆ. ಯು.ಎಸ್.ನಂತಹಾ ದೇಶಗಳಾದರೂ ತಮ್ಮದೇ ದೇಶದ ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸಿವೆಯೇ? ಮಹಿಳೆಯರು ಸದಾ ಸುರಕ್ಷಿತರೇ?…ಖಂಡಿತಾ ಇಲ್ಲಾ! ಈಗಾಗಲೇ ಅನೇಕ ವರ್ಷಗಳಿಂದಾ ಜನಹಿತ ಕಾನೂನುಗಳು ನೂರಾರು ಸಂಖ್ಯೆಯಲ್ಲಿದ್ದರೂ ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಯುವುದರಲ್ಲಿ ಈ ದೇಶಗಳು ವಿಫಲವಾಗಿದೆ.

ಬ್ರಿಟನ್ನಿನ ದಿನಪತ್ರಿಕೆಗಳು, ನಿಯತಕಾಲಿಕೆಗಳು, ದೃಶ್ಯಮಾಧ್ಯಮಗಳು ತಮ್ಮ ಕಾರ್ಯ ನಿರ್ವಹಿಸುವುದು ಜಾಹೀರಾತುಗಳಿಂದಾ ಇದೆಲ್ಲದರ ಕೇಂದ್ರವಸ್ತು ಮಹಿಳೆ! ಚಿತ್ರ ತಾರೆಯರ ಮತ್ತು ರಾಜಕೀಯದಲ್ಲಿ ಸಕ್ರಿಯವಾಗಿರುವ ಮಹಿಳೆಯರ ಖಾಸಗೀ ಬದುಕಿನ ವಿವರಗಳು ಬಹುತೇಕ ಮಾಧ್ಯಮಗಳ ಮುಖ್ಯ ವಿಚಾರಗಳು. ಕನಿಷ್ಠವೆಂದರೂ 50% ದಿನನಿತ್ಯದ ಆಗು-ಹೋಗುಗಳು, ಅಲ್ಲಿನ ಟಿ.ವಿ. ಧಾರಾವಾಹಿಗಳೂ ಮಹಿಳೆಯನ್ನು ಭೋಗವಸ್ತುವನ್ನಾಗಿಯೇ ಬಳಸಿಕೊಂಡಿವೆ. ಸಮೀಕ್ಷೆಯೊಂದರ ಪ್ರಕಾರ ಪ್ರತಿ ದಿನವೂ ಬ್ರಿಟನ್ನಿನಲ್ಲಿ ಕನಿಷ್ಠವೆಂದರೂ 150 ಮಹಿಳೆಯರ ಮೇಲೆ ಅತ್ಯಾಚಾರಗಳಾಗುತ್ತದೆ, ನೂರಾರು ನಿರ್ಭಯಾಳಂತಹ ಹತಭಾಗ್ಯರು ಬಲಿಯಾಗುತ್ತಲೇ ಇದ್ದಾರೆ. 1/3ರಷ್ಟು ಬ್ರಿಟಿಷರ ಪ್ರಕಾರ ಈ ದೌರ್ಜನ್ಯಗಳಿಗೆ ಮಹಿಳೆಯರೇ ಕಾರಣ!, ಇನ್ನು ಶಿಕ್ಷೆಯಾಗುವುದು ಕೇವಲ 10% ಅಪರಾಧಿಗಳಿಗೆ ಮಾತ್ರ. ಇಂಗ್ಲೆಂಡ್ ಅಮೇರಿಕಾ ದೇಶಗಳಲ್ಲಿ ಭಾರತಕ್ಕೆ ಹೋಲಿಸಿದರೆ ದಿನನಿತ್ಯ ನಡೆಯುವ ಕೊಲೆ ಮತ್ತು ದೌರ್ಜನ್ಯಗಳಂತಹ ಅಪರಾಧಗಳ ಸಂಖ್ಯೆ ಭಾರತಕ್ಕಿಂತಲೂ ನೂರು ಪಟ್ಟು ಅಧಿಕ.
ಹೀಗಿದ್ದಲ್ಲಿ ಪ್ರಚಲಿತವಾಗಿ ಭಾರತವನ್ನು ಕೇಂದ್ರೀಕರಿಸಿ ವಿಶ್ವದ ಗಮನ ಸೆಳೆಯುವ ಅಗತ್ಯ ‘ಲೆಸ್ಲೀ ಉಡ್ವಿನ್’ರಂತಹವರಿಗಿದೆಯೇ? ಅಥವಾ ತನ್ನದೇ ಆಂತರಿಕ ಸಾಮಾಜಿಕ, ರಾಜಕೀಯ ಮತ್ತು ವರ್ಣಭೇಧಗಳ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲಾಗದ ಬ್ರಿಟನ್ ಮತ್ತು ಅಮೇರಿಕಾದಂತಹ ದೊಡ್ಡಣ್ಣರಿಗೆ ಭಾರತಕ್ಕೆ ಬೌದ್ಧಿಕತೆಯನ್ನೂ ನೈತಿಕತೆಯನ್ನೂ ತಿಳಿಹೇಳುವ ಅಗತ್ಯವಾದರೂ ಇದೆಯೇ? ಇದರ ಹಿಂದಿರುವ ಉದ್ದೇಶಗಳ ಸುತ್ತಾ ಅನುಮಾನದ ಹುತ್ತ ಬೆಳೆಯುವುದು ಸಹಜವಲ್ಲವೇ? ಅಥವಾ ಇದೀಗ ತಾನೇ ತನ್ನ ನೆರೆ ರಾಷ್ಟ್ರಗಳೊಂದಿಗೆ ಸುಧಾರಿತ ಸಂಬಂಧಗಳನ್ನು ಬೆಸೆಯುತ್ತಾ ಅಭಿವೃದ್ಧಿಯ ಪಥದೆಡೆಗೆ ಸಾಗುತ್ತಿರುವ ಭಾರತವು ವಿಶ್ವಶಕ್ತಿಯಾಗಿ ಹೊರಹೊಮ್ಮುವ ಭಯವೇ? ಭಾರತದ ಕುರಿತು ಎಲ್ಲೆಡೆ ಸಕಾರಾತ್ಮಕ ಪ್ರತಿಕ್ರಿಯೆಗಳ ಸ್ಪಂದನೆಯಾಗುತ್ತುರುವಾಗ ನಕಾರಾತ್ಮಕ ನಿಲುವುಗಳಿಂದ ಗಮನ ಸೆಳೆಯುವ ತಂತ್ರವೇ? ಈ ದೇಶದ ಹೆಣ್ಣುಮಕ್ಕಳು ಸುರಕ್ಷಿತವಾಗಿರಬೇಕೆಂಬುದು ಎಲ್ಲರ ಆಶಯ, ಅಪರಾಧಿಗಳಿಗೆ ಸೂಕ್ತ ಶಿಕ್ಷೆಯಾಗಿ ಇನ್ನು ತಪ್ಪುಗಳಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ, ಏಕೆಂದರೆ ಭಾರತವು ನಮ್ಮ ಮಾತೆ, ನಮ್ಮನ್ನು ಪೊರೆವ ಜನನಿ, ಇವಳ ಮಕ್ಕಳು ಕೇವಲ ‘ಇಂಡಿಯಾಸ್ ಡಾಟರ್’ಗಳಲ್ಲಾ ವಿಶ್ವ ವಂದನೀಯರು ಮಾನನೀಯರು ಮತ್ತು ಇಡೀ ಭಾರತವೇ ಭೂತಾಯಿಯ ಹೆಮ್ಮೆಯ ಪುತ್ರಿ.

‘ಯತ್ರ ನಾರ್ಯಸ್ತು ಪೂಜ್ಯಂತೇ.. ರಮಂತೇ ತತ್ರ ದೇವತ:’ ಎನ್ನುವುದೇ ನಮ್ಮ ನಿಲುವು.

Read more from ಲೇಖನಗಳು
11 ಟಿಪ್ಪಣಿಗಳು Post a comment
 1. Ganapathi
  ಏಪ್ರಿಲ್ 30 2015

  ನಾನು ಈ ಲೇಖನ ಓದುತ್ತಿದ್ದಂತೆ ನಿಮ್ಮ ಲೇಖನದ ಹೆಡ್ಡಿಂಗ್ಗೂ ನಾನು ಬೆಳೆದ ಪರಿಸರದಲ್ಲಿ ನಡೆಯುತ್ತಿದ್ದಿದ್ದಕ್ಕೂ ಒಂದಕ್ಕೊಂದು ಸಾಮ್ಯವೇ ಕಾಣುತ್ತಿಲ್ಲ. ಬ್ರಾಹ್ಮಣರಲ್ಲಿ ಹೆಣ್ಣು ವಿಧವೆಯಾದಾಗ ವಯಸ್ಸು ಎಷ್ಟೇ ಚಿಕ್ಕದಿದ್ದರೂ ತಲೆ ಬೋಳಿಸಿ ಕೆಂಪು ಬಟ್ಟೆ ಉಡಿಸುವುದು. ಊಟದ ಮೇಲೆ ನಿರ್ಬಂಧ. ಅವರ ತಿರುಗಾಟಗಳ ಮೇಲೆ ನಿರ್ಬಂಧ. ವಿಧವೆ ಎಂದರೆ ಅಮಂಗಳ. ತಮ್ಮ ಮನೆಗಳಲ್ಲೇ ಶುಭಕಾರ್ಯದಲ್ಲಿ ಭಾಗವಹಿಸುವಂತೆ ಇಲ್ಲ. ಇದು ಈಗಲೂ ಚಾಲ್ತಿಯಲ್ಲಿ ಇದೆ. ವಿಧವೆಯರಿಗೆ ತಲೆ ಬೋಳಿಸುವುದು ತಪ್ಪು, ಅಮಾನವೀಯ ಎಂದು ಅರಿವಿಗೆ ಬಂದಿದ್ದು ಆ ಸಮುದಾಯಗಳ ಜನ ಕೆಲ ಮಟ್ಟಿಗೆ ಓದಲು ಓಡಾಡಲು ಆರಂಭಿಸಿದಾಗ. ಪ್ರತಿ ಮನೆಯಲ್ಲಿ ತಾಯಿ, ಅಕ್ಕ, ತಂಗಿ ಹೀಗೆ ತಮ್ಮ ಮನೆಯ ರಕ್ತ ಸಂಬಂಧಿಗಳ ತಲೆ ಬೋಳಿಸುವುದನ್ನು ನಿಲ್ಲಿಸಲು ೧೯೭೦-೮೦ರ ದಶಕದಲ್ಲಿ ಯುವಕರಾಗಿದ್ದವರು ಹೋರಾಡಿದ್ದು ನನ್ನ ಕಣ್ಣ ಎದುರಿಗೆ ಇದೆ.
  ವಿಧವೆಯ ತಲೆಕೂದಲಿನಿಂದ ಕೆಳಕ್ಕೆ ಬೀಳುವ ಒಂದೊಂದು ಹನಿ ನೀರು ನೀರು ಆಕೆಯ ಗಂಡನ ಸದ್ಗತಿಯನ್ನು ಅಷ್ಟು ವರ್ಷಗಳ ಕಾಲ ಮುಂದಕ್ಕೆ ಹಾಕುತ್ತದೆ ಎಂದು ನಂಬುತ್ತಿದ್ದರು. ನಿಮ್ಮ ಲೇಖನದ ಹೆಡ್ಡಿಂಗ್ ಹೇಳುವುದು ಹೌದು. ಆದ್ದರೆ ಆಚರಣೆಯಲ್ಲಿ? ಕಳೆದ ಕೆಲ ಕಾಲದಿಂದ ಈ ಒಂದು ಅನಿಷ್ಟ ಆಚರಣೆ ನಿಂತಿದೆ ಎನ್ನಬಹುದಾದರೂ ಪೂರ್ತಿಯಾಗಿ ನಿಂತಿಲ್ಲ. ಹಾಗಾಗಿ ಸಾರಾಸಗಟಾಗಿ ಆಧುನಿಕತೆಯೇ ಇಂದಿನ ಹೆಣ್ಣಿನ ಸಂಕಷ್ಟಕ್ಕೆ ಖಾರಣ ಎನ್ನುವುದನ್ನು ಒಪ್ಪಲು ಆಗದು. ನಾನು ಹೇಳಿದಂತೆ ಇನ್ನೂ ಹಲವಾರು ಅನಿಷ್ಟ ಪದ್ದತಿಗಳು ಕಡಿಮೆಯಾಗಿವೆ ಅಥವಾ ನಿಂತಿವೆ. ಇನ್ನೂ ಹಲವು ಚಾಲ್ತಿಯಲ್ಲಿದೆ. ಉದಾ. ಮುಟ್ಟಾದ ಹೆಂಗಸು ಅಪವಿತ್ರಳು ಎನ್ನುವುದು. ಅದಕ್ಕೆ ಕೊಡುವ ಕಾರಣವೇನೇ ಇದ್ದರೂ ಸಹ ವೈಜ್ಞಾನಿಕ ಕಾರಣಗಳನ್ನು ತಿಳಿದ ಆಧುನಿಕ ಮಹಿಳೆಯರೂ ಸಹ ಆಚರಣೆಗೆ ಬಂದಾಗ ಮಂಗಲ ಕಾರ್ಯದಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಾರೆ ಯಾಕೆ? ನಂಬಿಕೆ ಅಷ್ಟು ಗಾಢವಾಗಿದೆ. ನಿಮ್ಮ ಹೆಡ್ಡಿಂಗ್ ನ ಆಶಯ ಇದ್ದಿದ್ದು ಹೌದು. ಆದರೆ ಆಚರಣೆಯಲ್ಲಿ ಹೇಗೆ ಇತ್ತು ಎಂಬುದನ್ನೂ ಸಹ ಗುರುತಿಸಬೇಕು. ಅಕ್ಕಿಯನ್ನು ತೊಳೆಯುವಾಗ ನೀರನ್ನು ಮಾತ್ರ ಚೆಲ್ಲಿ ಅಕ್ಕಿಯನ್ನು ಚೊಕ್ಕಮಾಡುವ ಹಾಗೆ ಹಳೆಯದರಲ್ಲಿ ಇರುವ ಅನಿಷ್ಟಗಳನ್ನು ಬಿಟ್ಟು ಉತ್ತಮಾವದುದನ್ನು ಉಳಿಸಿಕೊಳ್ಳಬೇಕು ಎನ್ನುವುದು ಮಾತ್ರ ಸರಿ.

  ಉತ್ತರ
  • Nagshetty Shetkar
   ಏಪ್ರಿಲ್ 30 2015

   “ಬ್ರಾಹ್ಮಣರಲ್ಲಿ ಹೆಣ್ಣು ವಿಧವೆಯಾದಾಗ ವಯಸ್ಸು ಎಷ್ಟೇ ಚಿಕ್ಕದಿದ್ದರೂ ತಲೆ ಬೋಳಿಸಿ ಕೆಂಪು ಬಟ್ಟೆ ಉಡಿಸುವುದು. ಇದು ಈಗಲೂ ಚಾಲ್ತಿಯಲ್ಲಿ ಇದೆ.”

   ಗಣಪತಿ ಅವರೇ, ಮನುಸಂಸ್ಕ್ರುತಿಯು ಇಂತಹ ಜೀವವಿರೋಧಿ ಆಚರಣೆಗಳ ಮೂಲಕ ತನ್ನ ಸಾರ್ಥಕ್ಯವನ್ನು ಕಾಣುತ್ತದೆ. ಮನು ಪ್ರಣೀತ ಬ್ರಾಹ್ಮಣ್ಯದಿಂದ ಬ್ರಾಹ್ಮಣೇತರರು ಮಾತ್ರವಲ್ಲ ಬ್ರಾಹ್ಮಣ ಹೆಂಗಸರೂ ಅನಾದಿ ಕಾಲದಿಂದ ತ್ರಸ್ತರಾಗಿದ್ದಾರೆ. ಜಾತಿ ವಿನಾಶವೇ ಈ ಅನಿಷ್ಟ ಪದ್ಧತಿಗೆ ಮದ್ದು.

   ಉತ್ತರ
   • ವಿಜಯ್ ಪೈ
    ಮೇ 1 2015

    ಹೌದು ..ಬಿರುಬಿಸಿಲಿನಲ್ಲಿ ಕೂಡ ಹೆಂಗಸರಿಗೆ ಬುರ್ಕಾ (ಇತ್ತೀಚಿಗೆ ಮಕ್ಕಳಿಗೆ ಕೂಡ!) ಹಾಕುವಂತೆ ಮಾಡಿದ್ದು ಮನುವೆ!!..ಅಂದ ಹಾಗೆ ನಿಮ್ಮ ಗುರುಗಳು ಲಿಂಗಾಯತ ಧರ್ಮ ಸೇರಿ ಆಯಿತೆ?

    ಉತ್ತರ
    • WITIAN
     ಮೇ 1 2015

     ವಿಜಯ್ ಅವರೆ, female circumcision (ಆಫ್ರಿಕಾ ದಲ್ಲಿ ಕೆಲವು ಮುಸ್ಲಿಮ್ ಬುಡಕಟ್ಟುಗಳು ಅನುಸರಿಸುವ ಆಚರಣೆ) ಕೂಡಾ ಮನುವೇ ಹೇರಿದ್ದಲ್ಲವೆ!

     ಉತ್ತರ
    • Shripad
     ಮೇ 2 2015

     ಛಿ. ಇದೆಂಥ ಪ್ರಶ್ನೆ ಪೈ ಅವರೇ? ಅವರು “ಜಾತ್ಯತೀತ”ರಾದ್ದರಿಂದ ಅವರು ಏನು ಬೇಕಾದರೂ ಅನುಸರಿಸಬಹುದು. ಆದರೆ ಅವರು ಇನ್ನೂ ಮುಸ್ಲಿಮರೇ. ಅದನ್ನು ಬಿಡಲಾಗದು. ಆದರೂ ಶರಣರು! ಹೇಳಿಕೊಳ್ಳೋಕೆ ಇವೆಲ್ಲ ಬೇಕಾಗುತ್ತವೆ. ನುಡಿದಂತೆ ನಡೆಯಲು ಅವರೇನು ಬಸವಣ್ಣನವರೇ?

     ಉತ್ತರ
 2. Ganapathi
  ಏಪ್ರಿಲ್ 30 2015

  ಮಾನ್ಯರೇ ಪ್ರತಿಕ್ರಿಯೆಗೆ ಧನ್ಯವಾದಗಳು. ನೀವು ಹೇಳಿದ ಹೇಳಿಕೆಗೆ ಈಗ ಇರುವ ಪರಿಸ್ಥಿತಿಯನ್ನು ನಾನು ಹೇಳಿದ್ದು. ನಾನು ಗಮನಿಸಿದ ಹಾಗೆ, ಕಂಡು ಕೇಳಿದ ಹಾಗೆ ಎಲ್ಲಾ ವರ್ಗ ಜಾತಿಯಲ್ಲೂ ಹೆಂಗಸರು, ಅವರು ಎಷ್ಟೇ ಓದಿರಲಿ, ಕೆಲಸದಲ್ಲಿ ಇರಲಿ ದೇವರ ವಿಚಾರ ಬರುವಾಗ ಅವರು ಬಹಳ ಹಿಂದಿನ ನಂಬಿಕೆ/ ಆಚರಣೆಯನ್ನೇ ಮುಂದುವರಿಸಿದ್ದಾರೆ. ಇದು ಒಂದು ರೀತಿಯಲ್ಲಿ ವೈರುಧ್ಯ. ಆಧುನಿಕತೆ – ಹಳೆ ಕಂದಾಚಾರದ ಅಂಧಾನುಕರಣೆ. ಈ ದ್ವಂದ್ವದಿಂದ ಹೊರ ಬರುವ ದಾರಿ ಯಾವುದು?

  ಉತ್ತರ
  • Nagshetty Shetkar
   ಏಪ್ರಿಲ್ 30 2015

   ಗಣಪತಿ ಅವರೇ, ನಮ್ಮ ದೇಶದ ಸಾಮಾಜಿಕ ಜೀವನವನ್ನು ಇನ್ನೂ ಮನುಸ್ಮ್ರುತಿಯೇ ನಿರ್ದೆಶಿಸುತ್ತಿದೆ. ಆದುದರಿಂದಲೇ ಎಲ್ಲಾ ಜಾತಿಗಳಲ್ಲೂ ಸ್ತ್ರೀಯರ ಪರಿಸ್ಥಿತಿ ಶೋಚನೀಯವಾಗಿದೆ. ಇದರಿಂದ ಹೊರ ಬರುವ ದಾರಿ ಯಾವುದು ಅಂತ ಕೇಳಿದ್ದೀರಿ. ದಾರಿ ಒಂದೇ – ಮನುಸ್ಮೃತಿ ಮುಕ್ತ ಭಾರತವನ್ನು ನಾವೆಲ್ಲರೂ ಸೇರಿ ನಿರ್ಮಿಸುವುದು. ವಚನಕಾರರ ತತ್ವಾದರ್ಶಗಳನ್ನು ಪ್ರೇರಣೆಯಾಗಿಸಿಕೊಂಡು ನವವೈದಿಕತೆಯ ಕುಟಿಲ ಜಾಲವನ್ನು ಭೇದಿಸುವುದು. ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದ ಹಂತದಲ್ಲೇ ವಚನ ಶಿಕ್ಷಣವನ್ನು ನೀಡತಕ್ಕದ್ದು. ಸ್ವಜಾತಿ ವಿವಾಹಗಳ ಮೇಲೆ ಟಾಕ್ಸ್ ಹಾಕತಕ್ಕದ್ದು. ಮಹಿಳೆಯರಿಗೆ ಇನ್ನೂ ಹೆಚ್ಚಿನ ಮೀಸಲಾತಿ ನೀಡತಕ್ಕದ್ದು. ಜಾತಿ ವಿನಾಶಕ್ಕೆ ಕಂಕಣಬದ್ಧರಾಗಿರುವ ಪ್ರಗತಿಪರ ಹೋರಾಟಗಾರರಿಗೆ ಮನ್ನಣೆ, ಅನುದಾನ, ಅಧಿಕಾರ ನೀಡತಕ್ಕದ್ದು.

   ಉತ್ತರ
  • shripad
   ಮೇ 1 2015

   ಇನ್ನೇನು? ದರ್ಗಾ ಮಾರ್ಗ ಅನುಸರಣೆಯೊಂದೇ ಎಲ್ಲ ಸಮಸ್ಯೆಗೂ ಪರಿಹಾರ!

   ಉತ್ತರ
   • WITIAN
    ಮೇ 1 2015

    ಹ ಹಾ..’ಸರ್ವರೋಗಾನಿಕಿ ಸಾರಾಯಿ ಮಂದು…'(ತೆಲುಗು ಗಾದೆಯೊಂದರ ಸಹಾಯ ಪಡೆಯುತ್ತಿದ್ದೇನೆ, ಅರ್ಥ ಸುಸ್ಪಷ್ಟ!)

    ಉತ್ತರ
 3. Nagshetty Shetkar
  ಮೇ 2 2015

  ಆಫ್ರಿಕಾ ಖಂಡದ ಸಾಮಾಜಿಕ ಸಮಸ್ಯೆಗಳಿಗೆ ಮನುಸ್ಮೃತಿ ಕಾರಣ ಅಂತ ಯಾರು ಹೇಳಿದ್ದಾರೆ? “ಯತ್ರ ನಾರ್ಯಸ್ತು ಪೂಜ್ಯಂತೇ” ಎನ್ನುವುದು ಸತ್ಯವಾಗಿದ್ದರೆ ಮೊನ್ನೆ ಪಂಜಾಬಿನಲ್ಲಿ ಬಸ್ಸಿನಿಂದ ತಾಯಿ ಮಗಳು ಬೀಳುವ ಪರಿಸ್ಥಿತಿ ಇರುತ್ತಿತ್ತೇ? ಭಾರತದ ಮಟ್ಟಿಗೆ ಮನುಸ್ಮೃತಿಯೇ ಸಾಮಾಜಿಕ ಜೀವನದ ಸಂವಿಧಾನವೆನಿಸಿದೆ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments