ನ್ಯಾಸ ಕಾದಂಬರಿಯ ವಿಮರ್ಶೆ
– ಚೈತನ್ಯ ಮಜಲುಕೋಡಿ
ಹರೀಶ ಹಾಗಲವಾಡಿಯವರ ನ್ಯಾಸ ಕಾದಂಬರಿಯನ್ನು ನನ್ನ ಸ್ನೇಹಿತರು ಓದು ಅಂತ ಹೇಳಿ ನನಗೆ ಹೇಳಿದ್ದರೂ ಕೂಡಾ, ಹಲವು ಬಾರಿ ನನಗೆ ಅದರ ಗಾತ್ರ ನೋಡಿ ಓದುವುದಕ್ಕೆ ಹೆದರಿಕೆಯಾಗಿತ್ತು. ಹಾಗೆಯೇ ಕಾದಂಬರಿಯ ವಸ್ತು ಸನ್ಯಾಸದ ಕುರಿತಾದುದಾದ್ದರಿಂದ, ಓದುವುದಕ್ಕೆ ಸ್ವಲ್ಪ ಸಿದ್ಧತೆಯೂ ಬೇಕು ಅಂತ ಅನ್ನಿಸ್ತಾ ಇತ್ತು. ಕಾದಂಬರಿಯನ್ನು ಓದುವುದಕ್ಕೆ ಕೈಗೆತ್ತಿಕೊಂಡ ಮೇಲೆ ನನ್ನ ಮೇಲೆ ಅಪಾರ ಪ್ರಭಾವ ಬೀರಿ ದಿನಗಟ್ಟಲೆ ಗುಂಗು ಹಿಡಿಯುವ ಹಾಗೆ ಮಾಡುವಷ್ಟು ಪ್ರಭಾವಶಾಲಿಯಾಗಿಬಿಟ್ಟಿತು. ಲೇಖಕರ ಮೊದಲ ಕಾದಂಬರಿ ಅಂತ ಗೊತ್ತೇ ಆಗದಷ್ಟು ನೈಪುಣ್ಯ, ಚಿಂತನೆಯ ಆಳ ವಿಸ್ತಾರ ಎರಡರಲ್ಲೂ ಪ್ರಶಾಂತ ಧಾಟಿಯಿಂದ ಒಳಗೊಳ್ಳುತ್ತಾ, ಹಲವು ಬಾರಿ ಭೈರಪ್ಪರ ಬರವಣಿಗೆಯ ನಿಬಿಡ ಶೈಲಿಯನ್ನು ಮತ್ತೆ ಮತ್ತೆ ನೆನೆಸುತ್ತ, ಅವರ ರಸ ಸೃಷ್ಟಿಯ ಪಾಕವು ಕಲೆಯ ಹದ ಮುಟ್ಟಿ ನಿರಪೇಕ್ಷ ಬರವಣಿಗೆ ಸಿದ್ಧಿಸಬೇಕು ಎಂಬ ಮಾತಿಗೆ ಪ್ರತ್ಯಕ್ಷ ನಿದರ್ಶನವಾಗಿ ಹೊರಹೊಮ್ಮಿದ ಸೊಗಸಾದ ಕೃತಿ. (ಈ ಮಾತನ್ನು ಅವರು ಎಲ್ಲಿ ಹೇಳಿದ್ದಾರೆಂದು ನನಗೆ ಮರೆತು ಹೋಗಿದೆ. ಆದರೂ ಎಲ್ಲೋ ಒಂದು ಕಡೆ ಅದರ ಉದ್ಧರಣೆ ಇದೆ) ಅದೂ ಅವರ ಇಪ್ಪೈದರ ತರುಣ ವಯಸ್ಸಿನಲ್ಲೇ ರೂಪುಗೊಂಡ ನಾನೂರು ಪುಟದ ಈ ಸಾಂದ್ರ ಬರಹ ಎಂತವರನ್ನೂ ಬೆಚ್ಚಿ ಬೀಳಿಸುತ್ತದೆ.ಸನ್ಯಾಸಿಯಾದವನು ಸಮಾಜಕ್ಕೆ ತೆತ್ತುಕೊಂಡು ಲೋಕೋದ್ಧಾರಕ್ಕೆ ಸಮರ್ಪಿಸಿಕೊಳ್ಳಬೇಕು, ಸ್ವಂತಕ್ಕೆ ಸಾಧನೆಯನ್ನೂ ಮಾಡಬೇಕು ಎಂಬ ಘನ ಉದ್ದೇಶ ಹೊತ್ತು ಹೊರಡುವ ಸಂಸಾರ ವಿಮುಖವಾದ ಧೋರಣೆಯು ಹೇಗೆ ಮತ್ತೆ ಅದೇ ಪ್ರಪಂಚದ ಪಾಶ ಮೋಹಗಳಲ್ಲಿ ಸಿಲುಕಿ ಮಂಕಾಗಿ ಜನಪ್ರಿಯತೆಗೆ ಎರವಾಗುತ್ತ, ಜನಮನ್ನಣೆಗೆ ಹಿಗ್ಗುತ್ತ ಸಾಗಿ, ಕಡೆಯಲ್ಲಿ ಮೂಲೋದ್ದಿಶ್ಯವೇ ಮೂಲೋತ್ಪಾಟನೆಯಾದ ದಿಗ್ಭ್ರಮೆ ಬಹಳ ಕಡೆ ಓದುಗನನ್ನು ಚಿಂತನೆಗೆ ಹಚ್ಚುತ್ತದೆ. ತಂದೆ ತಾಯಿಗಳನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯವೇ ಎಂಬಲ್ಲಿಂದ ಸಂನ್ಯಾಸದ ಅರ್ಥವೇನು ಎನ್ನುವವರೆಗೆ ನೂರಾರು ಮೂಲಭೂತ ಪ್ರಶ್ನೆಗಳನ್ನೆತ್ತುತ್ತ, ಅದಕ್ಕೆ ಪ್ರಾಮಾಣಿಕ ಉತ್ತರಗಳನ್ನೂ ತಡವುತ್ತ, ಹೆಚ್ಚು ಹೆಚ್ಚು ಆಲೋಚನೆಗೆ, ಜವಾಬ್ದಾರಿಯುತ ನಿರ್ಣಯ ನಡುವಳಿಕೆಗಳಿಗೆ ನಾವು ತೊಡಗಬೇಕೆಂಬ ಮಾನೋನ್ನತಿಗೂ ಕೃತಿಯು ಪ್ರೇರಣೆ ನೀಡುತ್ತದೆ.





