ಸಾವಿನಲ್ಲೂ ಸಂದೇಶ ಬಿಟ್ಟುಹೋದ ರಾಷ್ಟ್ರವಾದದ ದಧೀಚಿ
– ಸಂತೋಷ್ ತಮ್ಮಯ್ಯ
ಆ ಘಟನೆಯನ್ನು ನೆನಪಿಸಿಕೊಳ್ಳುತ್ತಾ ಕೆಲವರು “ಕೊನೆ ಕ್ಷಣಕ್ಕೆ ಅದೊಂದು ಬದಲಾವಣೆ ಆಗದೇ ಹೋಗಿದಿದ್ದರೆ ಜನಸಂಘದ ಕಥೆಯೇ ಬೇರೆ ಇರುತ್ತಿತ್ತು” ಎಂದು ಹೇಳುತ್ತಾರೆ. ಬೇರೆ ಎಂದರೆ ಹೇಗೆ ಎಂದರೆ ಅದಕ್ಕೆ ಉತ್ತರವಿಲ್ಲ. ಹಾಗೆನ್ನುವ ಎಲ್ಲರಲ್ಲೂ ಒಂದು ನಂಬಿಕೆ ಸ್ಪಷ್ಟವಾಗಿದೆ. ಜನಸಂಘ ವ್ಯಕ್ತಿ ಕೇಂದ್ರಿತ ಪಕ್ಷವಲ್ಲ ಎಂದು ಎಲ್ಲರಿಗೂ ತಿಳಿದಿದೆ. ಆದರೂ ಕೂಡಾ ಎಲ್ಲರೂ ಕಥೆ ಬೇರೆಯಾಗಿರುತ್ತಿತ್ತು ಎಂದೇ ಹೇಳುವರು. ಒಂದೇ ಒಂದು ಕ್ಷಣಕ್ಕೆ ಒಂದು ಪಕ್ಷದ ಆಗುಹೋಗುಗಳು ನಿರ್ಧರಿತವಾಗುವುದಿಲ್ಲ ಎಂದು ಅವರೆಲ್ಲರೂ ನಂಬಿದ್ದರೂ ‘ಕಥೆ ಬೇರೆಯಾಗಿರುತ್ತಿತು’ ಎಂಬ ಮಾತನ್ನು ನಿಟ್ಟುಸಿರಿನಿಂದ ಆವರೆಲ್ಲರೂ ಹೇಳದೇ ಇರುವುದಿಲ್ಲ. ದೀನದಯಾಳರ ನಂತರವೂ ಪಕ್ಷ ಅದೇ ತತ್ತ್ವ ಸಿದ್ಧಾಂತಗಳಿಂದ ಮುನ್ನಡೆಯುವುದು ಎಂದು ಅಂದುಕೊಂಡಿದ್ದರೂ ಅವರ ನಂತರ ಜನಸಂಘದಲ್ಲಿ ಏನೋ ಖಾಲಿತನ. ಸಿದ್ಧಾಂತವನ್ನು ಮುನ್ನಡೆಸಲು ದೀನದಯಾಳರಂಥ ವಾಹಕರು ಬೇಕು ಎನ್ನುವ ಚಡಪಡಿಕೆ. ಬೇಸರ, ಗೊಂದಲ, ಅಸಹನೆ. ಹಾಗಾದರೆ ದೀನದಯಾಳರು ಪಕ್ಷಕ್ಕಿಂತ, ಸಿದ್ಧಾಂತಕ್ಕಿಂತ ಮೇಲಾಗಿ ಬೆಳೆದುಬಿಟ್ಟಿದ್ದರೇ ಎಂದರೆ ಅದೂ ಇಲ್ಲ. ರಾಜಕೀಯ ಅವರಿಗೆಂದೂ ಗುರಿಯಾಗಿರಲೇ ಇಲ್ಲ. ಬದಲಿಗೆ ಮಾರ್ಗವಾಗಿತ್ತು. ಕೇವಲ ಒಂದು ಸಾಧನ ಮಾತ್ರವಾಗಿತ್ತು. ಅದುವರೆಗೆ ಭಾರತದಲ್ಲಿ ಏನಿತ್ತೋ ಅದನ್ನೇ ಅವರು ರಾಜಕೀಯ ಪರಿಭಾಷೆಯಲ್ಲಿ ಹೇಳಿದ್ದರು. ಅನುಷ್ಠಾನಕ್ಕೆ ಪ್ರಯತ್ನಿಸಿದ್ದರು. ಹಾಗಾದರೆ ಜನರಿಗೆ ಚಡಪಡಿಕೆ, ಖಾಲಿತನ, ಗೊಂದಲ, ಗೊಣಗುವಿಕೆಗಳು ಊಂಟಾಗಲು ಕಾರಣವೇನು? ಗಟ್ಟಿ ಸಿದ್ಧಾಂತದ ಪಕ್ಷದಲ್ಲೂ ಹೀಗಾಗುತ್ತವೆಯೇ?
ಸಾವು ಸಹಜವಾಗಿರದಿದ್ದರೆ ಎಲ್ಲೆಲ್ಲೂ ಹೀಗಾಗುತ್ತದೆ. ಅವರದ್ದು ಎಂಥವರೂ ಅಲ್ಲಾಡಿಹೋಗುವಂಥಾ ಸಾವು. ಸಾಧಾರಣವಾಗಿ ಸಂಘದವರು ಎಂಥಾ ಸಾವಿಗೂ ಕಣ್ಣೀರು ಹಾಕಲಾರರು. ಆದರೆ ಅಂಥ ಸಂಘದವರೂ ಕಣ್ಣೀರು ಹಾಕಿ ಬಿಕ್ಕಳಿಸಿದ ಸಾವು ದೀನದಯಾಳದ್ದು. ಗುರೂಜಿಯಂಥಾ ಆಧ್ಯಾತ್ಮ ಸಾಧಕರೇ ವಿಚಲಿತರಾಗಿಹೋದ ಸಾವು ದೀನದಯಾಳರದ್ದು. ದೇಶಕ್ಕೆ ದೇಶವೇ ಮಾತಾಡಿಕೊಂಡ ಸಾವು ದೀನದಯಾಳರದ್ದು. ಇಂದಿಗೂ ಉತ್ತರ ಸಿಗದ ಸಾವು ದೀನದಯಾಳರದ್ದು. ಸಾಧಕನ ಬದುಕನ್ನು ಆತನ ಸಾವಿನಲ್ಲಿ ನೋಡಬೇಕೆಂಬ ಮಾತಿದೆ. ಅದನ್ನು ೧೯೬೮ರ ಫೆಬ್ರವರಿ ೧೨ರಂದು ದೇಶ ನೋಡಿತು.
ಇಂದು ದೀನದಯಾಳರ ಜನ್ಮಶತಮಾನೋತ್ಸವ. ಅವರ ಹುಟ್ಟಿದ ದಿನದಂದೇ ಸಾವಿನ ಮಾತನ್ನಾಡಬೇಕು. ಏಕೆಂದರೆ ದೀನದಯಾಳರ ಅಂತಿಮ ಸಂಸ್ಕಾರ ನಡೆದ ನಂತರ ಅಟಲಬಿಹಾರಿ ವಾಜಪೇಯಿಯವರು ಅಂದೇ ಕರೆಕೊಟ್ಟಿದ್ದರು, “ಬನ್ನಿ, ಪಂಡಿತ್‌ಜಿ ಅವರ ರಕ್ತದ ಒಂದೊಂದು ಹನಿಯನ್ನೂ ಹಣೆಯ ಗಂಧವನ್ನಾಗಿಸಿಕೊಂಡು ನಮ್ಮ ಗುರಿಯತ್ತ ಸಾಗೋಣ. ಅವರ ಚಿತೆಯಿಂದ ಹೊರಬರುತ್ತಿರುವ ಒಂದೊಂದು ಕಿಡಿಯನ್ನು, ಹೃದಯದಲ್ಲಿರಿಸಿಕೊಂಡು ಪರಿಶ್ರಮದ ಪರಾಕಾಷ್ಠೆಯನ್ನು ಹಾಗೂ ಪ್ರಯತ್ನಗಳ ಎಲ್ಲೆಯನ್ನು ತಲುಪೋಣ. ಈ ದಧೀಚಿಯ ಅಸ್ಥಿಗಳ ವಜ್ರಾಯುಧವನ್ನು ತಾಯಾರಿಸಿ ಅಸುರರ ಮೇಲೆ ಆಕ್ರಮಣ ಮಾಡೋಣ ಹಾಗೂ ಪವಿತ್ರ ಭೂಮಿಯನ್ನು ನಿಷ್ಕಂಟಕವನ್ನಾಗಿಸೋಣ”. ಹಾಗಾಗಿ ದೀನದಯಾಳರ ಸಾವು ಸಿದ್ಧಾಂತಿಗಳು ಮರೆಯಬಾರದ ಸಾವು. ಆ ಚಿತೆಯ ಬೆಂಕಿ ಸದಾ ಎದೆಯಲ್ಲಿ ಸುಡುತ್ತಿರಬೇಕಾದ ಉರಿ.
ಸಾವು..!
– ಗೀತಾ ಹೆಗಡೆ
ಇತ್ತೀಚಿನ ದಿನಗಳಲ್ಲಿ ಈ ಸಾವು ಎಂಬ ಶಬ್ದ ಬೇಡ ಬೇಡಾ ಅಂದರೂ ನನ್ನ ಚಿತ್ತದ ಸುತ್ತ ಬಿಡದೇ ಗಿರ್ಗೀಟಿ ಹೊಡಿತಾನೇ ಇದೆ. ಕುಳಿತಲ್ಲಿ ನಿಂತಲ್ಲಿ ಬರೀ ಇದರ ಬಗ್ಗೆಯೆ ತರ್ಕ. ಏನೇನೊ ಯೋಚನೆ, ಭಯ, ಯಾತನೆ, ಕಳವಳ ಇತ್ಯಾದಿ. ಏನಾದರೂ ಬರಿಬೇಕು. ಬರಿಲೇ ಬೇಕು ಎಂಬ ಹಠ ಮನಸ್ಸಿಗೆ. ಆದರೆ ಹೇಗೆ ಬರೆದರೆ ಹೇಗೊ ಏನೊ. ನನ್ನಿಂದ ಏನಾದರೂ ತಪ್ಪು ಬರವಣಿಗೆ ಅನಾವರಣವಾದರೆ? ತಪ್ಪು ಒಪ್ಪುಗಳನ್ನು ವಿಶ್ಲೇಷಿಸುವಷ್ಟು ತಿಳುವಳಿಕೆ ನನಗೆ ಖಂಡಿತಾ ಇಲ್ಲ. ಆದರೆ ನಮ್ಮ ಸುತ್ತಮುತ್ತಲೂ ನಡೆಯುವ ಸಾವಿನ ಸಮಾಚಾರ ನನಗೆ ನಿಜಕ್ಕೂ ಸಂಕಟವಾಗುತ್ತಿರುವುದು ದಿಟ. ಮತ್ತಷ್ಟು ಓದು