ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 25, 2017

1

ಸಾವು..!

‍ನಿಲುಮೆ ಮೂಲಕ

– ಗೀತಾ ಹೆಗಡೆ

ಇತ್ತೀಚಿನ ದಿನಗಳಲ್ಲಿ ಈ ಸಾವು ಎಂಬ ಶಬ್ದ ಬೇಡ ಬೇಡಾ ಅಂದರೂ ನನ್ನ ಚಿತ್ತದ ಸುತ್ತ ಬಿಡದೇ ಗಿರ್ಗೀಟಿ ಹೊಡಿತಾನೇ ಇದೆ. ಕುಳಿತಲ್ಲಿ ನಿಂತಲ್ಲಿ ಬರೀ ಇದರ ಬಗ್ಗೆಯೆ ತರ್ಕ. ಏನೇನೊ ಯೋಚನೆ, ಭಯ, ಯಾತನೆ, ಕಳವಳ ಇತ್ಯಾದಿ. ಏನಾದರೂ ಬರಿಬೇಕು. ಬರಿಲೇ ಬೇಕು ಎಂಬ ಹಠ ಮನಸ್ಸಿಗೆ. ಆದರೆ ಹೇಗೆ ಬರೆದರೆ ಹೇಗೊ ಏನೊ. ನನ್ನಿಂದ ಏನಾದರೂ ತಪ್ಪು ಬರವಣಿಗೆ ಅನಾವರಣವಾದರೆ? ತಪ್ಪು ಒಪ್ಪುಗಳನ್ನು ವಿಶ್ಲೇಷಿಸುವಷ್ಟು ತಿಳುವಳಿಕೆ ನನಗೆ ಖಂಡಿತಾ ಇಲ್ಲ. ಆದರೆ ನಮ್ಮ ಸುತ್ತಮುತ್ತಲೂ ನಡೆಯುವ ಸಾವಿನ ಸಮಾಚಾರ ನನಗೆ ನಿಜಕ್ಕೂ ಸಂಕಟವಾಗುತ್ತಿರುವುದು ದಿಟ.

ಈ ಸಾವು ಅನ್ನುವುದು ಯಾರ ಜೀವನದಲ್ಲಿ ಯಾವಾಗ ಹೇಗೆ ಬಂದೊದಗುತ್ತದೆ ಅನ್ನುವುದು ಯಾರಿಗೂ ಗೊತ್ತಾಗುವುದಿಲ್ಲ. ಆ ಸಾವು ಹೇಗಿದೆ? ಯಾವ ಆಕಾರವಿದೆ? ಅದನ್ನು ಕಣ್ಣಾರೆ ನೋಡಬೇಕಲ್ಲ? ಸಾಧ್ಯವಾ?  ಸಹಜ ಸಾವಿನವರಿಗೆ ಮಾತ್ರ ಇದು ಕಾಣಿಸುತ್ತಾ? ಇದರ ನೆನೆದರೂ ಭಯ ಯಾಕೆ ಮನಸ್ಸಿಗೆ?  ದೇವರಿಗೆ ಅಂಜದವನು ಸಾವಿಗೆ ಮಾತ್ರ ಅಂಜದೆ ಇರಲಾರ ಯಾಕೆ? ಹೀಗೆ ಒಂದಾ ಎರಡಾ ನೂರಾರು ತರ್ಕ, ವಿತರ್ಕ ಹುಚ್ಚು ಯೋಚನೆಗಳು ಮನದ ಶಾಂತಿ ಕೆಡಿಸುತ್ತಿದೆ. ಸತ್ತು ಬಿದ್ದವರ ಚಿತ್ರ, ಆ ರಕ್ತದ ಮಡುವು, ಪೋಲೀಸರ ಓಡಾಟ, ವಾಹಿನಿಗಳಲ್ಲಿ ಬರುವ ಸಾವಿನ ಕುರಿತಾದ ಸುದ್ದಿ, ಸಮಾಚಾರ ಇಡೀ ದಿನ ಒಂದೇ ಸಾವಿನ ಸುತ್ತ ಗಿರಕಿ ಹೊಡೆಯುವ ರೀತಿ ಇನ್ನಷ್ಟು ಆತಂಕ ಭಯ ಹುಟ್ಟಿಸುತ್ತಿದೆ. ಬಿಳಿ ಹಾಳೆಯಲಿ ಕಪ್ಪಕ್ಷರದಲಿ ಮೂಡುವ ಮನಸಿನ ಬರಹಗಳು ಸಾವೆಂಬ ಸೈತಾನನ ಕಪಿ ಮುಷ್ಟಿಯಲಿ ಸಿಕ್ಕಾಕ್ಕೊಂಡಿದೆಯಾ?  ಢಮಾರ್ ಎನಿಸಿದರೆ ಮುಗೀತು. ಮತ್ತೆ ಬರುವ ಹಾಗೆ ಇಲ್ಲ. ಅಕ್ಷರ ಬರೆಯುತ್ತ ಆಯಾ ಸಾಲಿನ ಕೊನೆಗೆ ಕೊಡುವ ವಿರಾಮ ಚಿನ್ನೆಯಂತೆ ಈ ಸಾವು  ಮನುಷ್ಯನ ಜೀವಕ್ಕೆ ಕೊಡುವ ಪೂರ್ಣ ವಿರಾಮ ಅಲ್ಲವೆ?  ಎಷ್ಟು ವಿಚಿತ್ರ.  ಆದರೂ ಇದು ಸಚಿತ್ರ. ಬೇಕಾದರೆ ವಿರಾಮ ಚಿನ್ನೆ ತೆಗೆದು ಸಾಲು ಮುಂದುವರಿಸಬಹುದು ; ಆದರೆ ಸಾವು ಕಳಿಸಿ ಜೀವ ವಾಪಸ್ಸು ತರಲಾಗದು!

ಅನಿರೀಕ್ಷಿತ ಸಾವಿನ ತೀವ್ರ ಪರಿಣಾಮ, ಅದರ ದುಃಖದ ತೀವ್ರತೆ, ಆ ಸಾವು ಘಟಿಸಿದಾಗ ಆಗುವ ಹೃದಯ ವಿದ್ರಾವಕ ನೋವು, ಸಂಕಟ, ಯಾತನೆಗಳನ್ನು ನಮ್ಮ ಅತ್ಯಂತ ಹತ್ತಿರದವರು ಸತ್ತಾಗ ಮಾತ್ರ ಅನುಭವಕ್ಕೆ ಬರುತ್ತದೆ. ಅಂತಹ ಅನುಭವ ನನ್ನ ಅಮ್ಮ ಅನಿರೀಕ್ಷಿತವಾಗಿ ತೀರಿಕೊಂಡಾಗ ಪೂರ್ಣ ಅನುಭವಿಸಿದ್ದೇನೆ.  ಅಮ್ಮನ ಸಾವು ಇಂದಿಗೂ ನನ್ನ ಕಣ್ಣ ಮುಂದಿದೆ.  ಪಕ್ಕದಲ್ಲಿ ಕುಳಿತು ಗಂಗಾ ಜಲ ಬಾಯಿಗೆ ಹಾಕಿದಾಗ ಗೊಟಕ್ ಎಂಬ ಶಬ್ದ ಇಪ್ಪತ್ತೆಂಟು ವರ್ಷ ಕಳೆದರೂ ಇನ್ನೂ ನನ್ನ ಕಿವಿಯಲ್ಲಿ ಮಾರ್ಧನಿಸುತ್ತಿದೆ.
ಹೃದಯಾಘಾತ, ಸಹಜ ಸಾವು ಎಲ್ಲರೂ ಅಂದರೂ ನನಗದು ದೊಡ್ಡ ಆಘಾತ.

ಅದಕ್ಕೆ ನಮ್ಮಲ್ಲಿ ಒಂದು ನಾಣ್ನುಡಿ ಇದೆ. ಸಾವಿನಲ್ಲಿ ಸಂಭ್ರಮಿಸ ಬೇಡಿ. ಮನುಷ್ಯನ ಆತ್ಮ. ಅದು ಪರಿಶುದ್ಧ. ಈ ದೇಹ ಬಿಟ್ಟ ಆತ್ಮ ಮತ್ತೊಂದು ದೇಹ ಸೇರುವಾಗ ಅದರ ಬಗ್ಗೆ ಯಾಕೆ ದ್ವೇಷ. ಪ್ರತಿಯೊಬ್ಬರ ಆತ್ಮಕ್ಕೆ ಸಹಜ ಸಾವಿನೊಂದಿಗೆ ಹೇಳಿಕೊಳ್ಳಲು ಆಂತರ್ಯದಲ್ಲಿ ಏನಾದರೂ ಸತ್ಯವೊಂದು ಇದ್ದಿರಬಹುದೆ?  ಬದುಕಿರುವಾಗ ಅವನ ಆತ್ಮ ಇವನ ತಪ್ಪು ಒಪ್ಪುಗಳ ವಿಶ್ಲೇಷಣೆಯಲ್ಲಿ ತೊಡಗಿರಬಹುದೆ? ಇದು ಪ್ರತಿಯೊಬ್ಬರೂ ಆ ಕೊನೆಯ ಕಾಲದಲ್ಲಿ ಸಾವಿನ ಮುಂದೆ ಅನಾವರಣ ಮಾಡಬೇಕೆನ್ನುವ ಆತ್ಮದ  ಹಪಹಪಿಯೆ?  ಅದು ಯಾರೇ ಆಗಿರಬಹುದು. ಆತ್ಮ ಅಂದರೆ ಒಂದೇ. ಅದು ಜೀವ. ಸಾವಿಲ್ಲದ ಸರದಾರ.  ಅದನ್ನು ಯಾವ ದ್ವೇಷ, ಅಸೂಯೆ ಇಲ್ಲದೆ ಗೌರವಿಸಬೇಕು. ಗೌರವದಿಂದ ಕಳಿಸಿಕೊಡಬೇಕು. ಅಸಹಜ ಸಾವನ್ನು ಯಾರೂ ಮಾಡಬಾರದು, ಯಾರಿಗೂ ಬರುವುದು ಬೇಡ. ಆದರೆ ಎಲ್ಲ ತಿಳಿದೂ ಪ್ರತಿನಿತ್ಯ ಜಗತ್ತಿನಲ್ಲಿ ದ್ವೇಷ, ಅಸೂಯೆಗಳಡಿಯಲ್ಲಿ ನಡೆಯುತ್ತಲೇ ಇದೆ ಅಸಹಜ ಸಾವು.

ದಯವಿಟ್ಟು ಸಾವನ್ನು ಯಾರೂ ಸಂಭ್ರಮಿಸಬೇಡಿ.  ಸತ್ತವರ ಆತ್ಮಕ್ಕೆ ಶಾಂತಿ ಕೋರಿ ಪುಣ್ಯ ಕಟ್ಟಿಕೊಳ್ಳಿ.  ನಾಳೆ ಆ ಸಾವು ನಮ್ಮನ್ನೂ ಬಿಡದು!!

******************************

ಸಾವಿನೊಂದಗಿನಂತರ್ಯದ ಮಾತು…

ಯಾವ ರೀತಿಯಲ್ಲಿ ನಿನ್ನ ಬಣ್ಣಿಸಲಿ
ಕದಂಬ ಬಾಹು ನಿನ್ನದೆ?
ಅಥವಾ ಮೀನ ಬಲೆಯಂತಿಹುದೆ
ನಿನ್ನ ಇರುವು?
ಹೇಳು ಒಮ್ಮೆ ನೋಡೇ ಬಿಡುತ್ತೇನೆ.

ಏಕೆಂದರೆ ನೀನು ನನ್ನನ್ನೂ ಬಿಡುವವಳಲ್ಲ
ನನಗೆ ನಿಖರವಾಗಿ ಗೊತ್ತು
ಹಾಗಂತ ನಿನ್ನ ನೋಡಲು ನಾ ಹೆದರುವವಳೂ ಅಲ್ಲ
ಕಾಯುತ್ತ ಕೂರಲು ನನಗೆ ಪುರುಸೊತ್ತು ಮೊದಲೇ ಇಲ್ಲ.

ಯಾರೊ ಆಗಂತುಕನು
ನಿನ್ನ ಅನುಮತಿಯಿಲ್ಲದೆ
ನನ್ನೆದೆ ಸೀಳಲೂ ಬಹುದೆಂಬ ಗುಮಾನಿ ನನಗಿದೆ
ಅದು ಗೊತ್ತಾ ನಿನಗೆ?
ಆಗ ನಿನಗೊಂದು ಬಲಿ ಲೆಕ್ಕದಲ್ಲಿ ಕಡಿಮೆ ಆಗುವುದಲ್ಲ
ಈ ಯೋಚನೆ ಕಾಡುತಿದೆ ನನಗೆ.

ನಿನ್ನ ದರ್ಶನವಿಲ್ಲದೆ
ಇನ್ನಾರೊ ನನ್ನ ಬಲಿ ತೆಗೆದುಕೊಂಡು
ಅಂತರ್ಪಿಶಾಚಿಯಾಗಿ ಅಲೆದಾಡುವ ಮನಸ್ಸು
ನನಗೆ ಕಿಂಚಿತ್ತೂ ಇಲ್ಲ
ಹಾಗಂತ ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ
ನನ್ನ ಹುಟ್ಟು ಗುಣ ಬಿಡಲಾಗುವುದಿಲ್ಲ.

ಬಾ ನನ್ನ ಮುಂದೆ ನಿಲ್ಲು
ನನ್ನುಪಚಾರ ಸ್ವೀಕರಿಸು
ಬದುಕ ಬಂಡಿಯಲ್ಲಿ ಎಲ್ಲವನ್ನೂ ನೋಡಿದ್ದಾಯಿತು
ಅನುಭವದ ಮಾತುಗಳ ಹೇಳುತ್ತ ಬರೆಯುತ್ತ
ಬೀದಿ ಬೀದಿಗಳಲ್ಲಿ ಕೆಚ್ಚೆದೆಯಿಂದ
ಹಂಚಿದ್ದೂ ಆಯಿತು
ಹೆದರಿಕೆಯೆಂಬ ತೃಣವ ಧಿಕ್ಕರಿಸಿ.

ಬರುವುದಾದರೆ ತಡಮಾಡದೇ ಬಂದು ಬಿಡು
ನಿನ್ನಲ್ಲಿ ನನ್ನದೊಂದೇ ಕೋರಿಕೆ!

ಹಾಹಾಕಾರದ ಪ್ರತಿಧ್ವನಿ
ಜನರ ಬಾಯಿ ಬಾಯಿಗಳಲ್ಲಿ ಹರಿದಾಡುವ
ಅವರೆಲ್ಲ ಪರಿತಪಿಸಿ ಕಣ್ಣೀರಿಡುವ
ಕೆಲಸ ಕಾರ್ಯ ಬಿಟ್ಟು
ನನ್ನ ರಕ್ತದೋಕುಳಿಯಲ್ಲಿ ತಮ್ಮ ಚಿತ್ರ ಬರೆವ
ಸಿಕ್ಕಿದ್ದೇ ಅವಕಾಶವೆಂದು ಜೈ ಜೈಕಾರ ಹಾಕುವ
ಮುಖವಾಡ ಧರಿಸಿ ಅಟ್ಟಹಾಸದಿ ಮೆರೆವ
ಸನ್ನಿವೇಶ ನನ್ನ ಕಾಲಡಿಯಲ್ಲಿ ತಂದಿಡಬೇಡ.

ಆಂತರ್ಯದಲಿ ಅವಿತಿರುವ
ನಿಶ್ಕಲ್ಮಷ ಸತ್ಯವೊಂದಿದೆ
ನಿನಗಾದರೂ ಅರಿವಾಗುವುದೆಂಬ ಗಾಢವಾದ ನಂಬಿಕೆ ನನಗಿದೆ
ಬಂದು ಮುಖ ತೋರು
ನಿನಗೆ ಮಾತ್ರ ತೋರಿಸುವೆ
ಅದು ಇನ್ನಾರಿಗೂ ಕಾಣದಷ್ಟು ನಿಗೂಢ
ನಿನ್ನಂತೆ!!

1 ಟಿಪ್ಪಣಿ Post a comment

Trackbacks & Pingbacks

  1. ಸಾವು..! | ನಿಲುಮೆ – Sandhyadeepa….

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments