ವಿಷಯದ ವಿವರಗಳಿಗೆ ದಾಟಿರಿ

ಜನವರಿ 28, 2018

3

ಸುಪ್ರೀಂ ಕೋರ್ಟಿನ ನ್ಯಾಯಾಧೀಶರನ್ನೇ ಪ್ರಶ್ನಿಸಬಹುದಾದರೆ ಡಾರ್ವಿನ್ ನ ವಿಕಾಸವಾದವನ್ನೇಕಲ್ಲ?

‍ನಿಲುಮೆ ಮೂಲಕ

– ಸುಜಿತ್ ಕುಮಾರ್

ವರ್ಷ ಕ್ರಿಸ್ತ ಶಕ 1917. ಸಾಪೇಕ್ಷತಾ ಸಿದ್ಧಾಂತವೆಂಬ (Theory of Relativity) ಮಹಾನ್ ವೈಜ್ಞಾನಿಕ ಸಿದ್ಧಾಂತವನ್ನು ಮಂಡಿಸಿದ್ದ ಐನ್ಸ್ಟೀನ್ ಎಂದರೆ ಇಡೀ ವಿಶ್ವವೇ ತಲೆಬಾಗುತಿದ್ದ ಕಾಲ. ಆನೆ ನಡೆದಿದ್ದೆ ದಾರಿ ಎಂಬಂತೆ ಅಂದು ಐನ್ಸ್ಟೀನ್ ಮಂಡಿಸುತಿದ್ದ ಸಿದ್ಧಾಂತಗಳೆಲ್ಲವೂ ಸಂಶೋಧನಾ ವಲಯದಲ್ಲಿ ಅಲ್ಲಿಯವರೆಗೂ ನಂಬಿಕೊಂಡು ಬಂದಿದ್ದ ವೈಜ್ಞಾನಿಕ ಸೂತ್ರಗಳನೆಲ್ಲವನ್ನೂ ತಲೆಕೆಳಗಾಗಿಸುತ್ತಿದ್ದವು. ವಿಜ್ಞಾನವೆಂದರೆ ಹಾಗೆಯೆ ಅಲ್ಲವೇ ಮತ್ತೆ? ಹೀಗೆ ಅಣು, ಪರಮಾಣು, ಭೂಮಿ, ಸೌರಮಂಡಲ, ಜಗತ್ತು ಎಂಬ ಸೂಕ್ಷ್ಮದಿಂದಿಡಿದು ಸಮಗ್ರದವರೆಗೂ ಆತನ ಸಂಶೋಧನೆಗಳು ಜರುಗುತ್ತಿದ್ದವು. ಅಂತಹದೇ ಸಂಶೋಧನೆಗಳಲ್ಲಿ ವಿಶ್ವದ ರಚನೆಯ ಸಂಶೋದನೆಯೂ ಕೂಡ ಒಂದು. ಐನ್ಸ್ಟೀನ್ನ ಪ್ರಕಾರ ಸಕಲ ವಿಶ್ವದ (ಬ್ರಹ್ಮಾಂಡ) ಆಕಾರವು ಜಡ ವಸ್ತುವಿನಂತೆ ಸ್ಥಿರವಾಗಿದ್ದೂ ಗೋಳಾಕಾರದ ರಚನೆಯನ್ನು ಹೊಂದಿದೆ ಎಂಬುದಾಗಿತ್ತು (Static Universe). ಆದರೆ ಅಷ್ಟೊತ್ತಿಗಾಗಲೇ ಕೆಲ ವಿಜ್ಞಾನಿಗಳು ವಿಶ್ವವು ಸ್ಥಿರವಾಗಿರದೆ ದಿನದಿಂದ ದಿನಕ್ಕೆ ಹಿಗ್ಗುತ್ತಿದೆ ಎಂಬ ವಾದವನ್ನು ಮಂಡಿಸಿರುತ್ತಾರೆ. ಅದನ್ನು ಸಾಧಿಸಿ ತೋರಿಸುವ ಸನಿಹದಲ್ಲೂ ಇರುತ್ತಾರೆ. ಆದರೆ ಐನ್ ಸ್ಟೀನಿನ್ನ ಸ್ಥಿರವಾದದ ನಂತರ ಅವರೆಲ್ಲರ ವಾದಗಳು ಕೊಂಚ ಮಂಕಾಗತೊಡಗುತ್ತವೆ. ಅಂದಿನ ವಿಜ್ಞಾನ ವಲಯ ಕ್ರಮೇಣವಾಗಿ ಐನ್ಸ್ಟೀನ್ ನ್ನಿನ Static Universe ವಾದವನ್ನು ಒಪ್ಪಿಕೊಳ್ಳತೊಡಗಿತು. ಅದು ವರ್ಷ 1929. ಅಮೇರಿಕಾದ ಖಗೋಳಶಾಸ್ತ್ರಜ್ಞ ಎಡ್ವಿನ್ ಹಬಲ್ ವಿಶ್ವದ ರಚನೆಯ ಬಗ್ಗೆ ಐನ್ಸ್ಟೀನ್ ನ್ನಿನ ವಾದಕ್ಕೆ ವಿರುದ್ಧವಾಗಿರುವ ಸಿದ್ಧಾಂತವೊಂದನ್ನು ಮಂಡಿಸುತ್ತಾನೆ ಅಲ್ಲದೆ ಅದನ್ನೂ ಸಾಧಿಸಿಯೂ ತೋರುತ್ತಾನೆ. ಆತನ ಪ್ರಕಾರ ಗ್ಯಾಲಕ್ಸಿಗಳ (ತಾರಾಗಣ) ದೂರ ಅವುಗಳ ಸ್ಥಾನಪಲ್ಲಟದೊಟ್ಟಿಗೆ ನೇರ ಸಂಬಂಧವನ್ನು ಹೊಂದಿರುತ್ತವೆ ಎಂಬುದಾಗಿರುತ್ತದೆ. ಅರ್ಥಾತ್ ಪ್ರಸ್ತುತ ಕಾಣಸಿಗುವ ಗ್ಯಾಲಕ್ಸಿಗಳು ದೂರಸರಿಯುತ್ತಿರುವುದು ವಿಶ್ವವು ಹಿಗ್ಗುತ್ತಿದೆ ಎಂಬುದಾಗಿರುತ್ತದೆ. ಹಬಲ್ನ ಸಿದ್ದಾಂತ ನಿಜವಾದ ಸುದ್ದಿಯನ್ನು ಕೇಳಿದ ಕೂಡಲೇ ಐನ್ಸ್ಟೀನ್ ತನ್ನ Static Universe ಸಿದ್ದಾಂತವನ್ನು ಕೈಬಿಡುತ್ತಾನೆ ಅಲ್ಲದೇ ಮುಂದೊಂದು ದಿನ ಆತ ತನ್ನ ಜೀವನದಲ್ಲಿ ಜರುಗಿದ ಅತಿ ದೊಡ್ಡ ಪ್ರಮಾದಗಳಲ್ಲಿ Static Universe ಸಿದ್ಧಾಂತವೂ ಒಂದು ಎಂಬುದನ್ನು ಒಪ್ಪಿಕೊಳ್ಳುತ್ತಾನೆ. ಮತ್ತೊಮ್ಮೆ ವಿಜ್ಞಾನವೆಂಬುದು ನಿಂತ ನೀರಲ್ಲ ಎಂಬುದು ಸಾಬೀತಾಗುತ್ತದೆ.

ಇನ್ನು ನಮ್ಮ ವಿಷಯಕ್ಕೇ ಬಂದರೆ ಸಹಸ್ರಾರು ಶತಮಾನಗಳ ಮೊದಲು ಜರುಗಿದ ರಾಮಾಯಣ, ಮಹಾಭಾರತವನ್ನು ಅಲ್ಲಗೆಳೆಯುತ್ತಿದ್ದ ಹಲವರು ಇಂದು ಬಿಬಿಸಿ ಚಾನೆಲ್ಲಿನಲ್ಲಿ ರಾಮಸೇತುವಿನ ಸಮಗ್ರ ವರದಿ ಹಾಗು ಅದು ನೈಸರ್ಗಿಕವಲ್ಲವೆಂದು ತೋರಿಸಿದ ಪುರಾವೆಗಳಿಗೆ ಮುಖ ಕೆಂಪಾಗಿಸಿಕೊಳ್ಳತೊಡಗಿದ್ದಾರೆ. ಈಗ ರಾಮಸೇತುವನ್ನು ರಾಮ ಹಾಗು ಅವನ ಸಂಗಡಿಗರು ನಿರ್ಮಿಸಿದರು ಎಂಬುದನ್ನು ಒಪ್ಪಿಕೊಂಡಮೇಲೆ ರಾಮಾಯಣದ ಇತರ ಪಾತ್ರಗಳು, ಘಟನೆಗಳನ್ನು ಅಲ್ಲಗೆಳೆಯಬಲ್ಲರೆ? ಹಾಗೆ ಅಲ್ಲೆಗೆಳೆಯಲು ಅವರಲ್ಲಿ ಇರುವ ಪುರಾವೆಗಳಾದರೂ ಎಂತಹದ್ದು?

ಏಕೆ ಈ ವಿಷಯಗಳನ್ನು ಇಲ್ಲಿ ಚರ್ಚಿಸಲಾಗುತ್ತಿದೆ ಎಂದರೆ ಮೊನ್ನೆ ಮೊನ್ನೆಯಷ್ಟೇ ಉನ್ನತ ಶಿಕ್ಷಣ ಸಚಿವರಾಗಿದ್ದ(MoS) ಸತ್ಯಪಾಲ್ ಸಿಂಗ್ ರವರು ‘ಡಾರ್ವಿನ್ನಿನ ವಿಕಾಸವಾದ’ ಸಿದ್ದಾಂತವನ್ನು ಅಲ್ಲಗೆಳೆದು ಅದನ್ನು ಪಠ್ಯಪುಸ್ತಕಗಳಿಂದಲೂ ತೆಗೆಯಬೇಕೆಂಬ ಒಂದು ಆತುರದ ಹೇಳಿಕೆಯನ್ನು ನೀಡಿದ್ದರು. ಅವರ ಪ್ರಕಾರ ನಮ್ಮಿ ಸಮಗ್ರ ಇತಿಹಾಸದಲ್ಲಿ ಎಲ್ಲಿಯೂ ಸಹ ಮಂಗನಿಂದ ಮಾನವರಾಗುತ್ತಿದ್ದ ಜೀವಿಗಳನ್ನು (Ape) ಕಂಡಿರುವ ಪುರಾವೆಗಳಾಗಲಿ, ಬರವಣಿಗೆಯಾಗಲಿ ಅಥವಾ ಯಾವುದೇ ಆಡು ಮಾತಿನಲ್ಲೂ ಅವುಗಳ ಉಲ್ಲೇಖವಿರದ ಕಾರಣ ವಿಕಾಸ ಸಿದ್ದಾಂತ ನಿಜವೆಂದು ಹೇಳಲಾಗದು ಎಂದಿದ್ದಾರೆ. ನಮ್ಮ ದೇಶೀ ಪುರಾಣಗಳ ಉಲ್ಲೇಖವನ್ನೂ ಮಾಡುವುದ ಅವರು ಅಲ್ಲಿ ಮರೆಯಲಿಲ್ಲ. ಸಹಸ್ರಾರು ವರ್ಷಗಳ ಇತಿಹಾಸವಿರುವ ನಮ್ಮ ಯಾವುದೇ ಪುರಾಣಗಳಲ್ಲಿಯಾದರು ಇಂತಹ ಜೀವಿಗಳ ಉಲ್ಲೇಖವಿದೆಯೇ, ಯಾವುದಾದರೂ ಕತೆಗಳಲ್ಲಿ ಅಂತಹ ಪಾತ್ರಗಳಿವೆಯೇ ಎಂಬುದನ್ನು ಕೇಳುತ್ತಾರೆ. ಇಂದಿಗೂ ವಿಶ್ವದಲ್ಲಿ ಹಲವಾರು ವಿಜ್ಞಾನಿಗಳು ಅಲ್ಲದೆ ದಿ ಗ್ರೇಟ್ ಐನ್ಸ್ಟೀನ್ ಕೂಡ ಡಾರ್ವಿನ್ ನ ಈ ಸಿದ್ದಾಂತಕ್ಕೆ ವಿರುದ್ದವಾಗಿದ್ದನು ಎಂಬುದನ್ನು ತಿಳಿಸುತ್ತಾರೆ. ಅಲ್ಲದೆ ಡಾರ್ವಿನ್ ನ ಸಿದ್ದಾಂತವನ್ನು ನಿಜವೆಂದು ಪ್ರತಿಪಾದಿಸುವವರಿಗೆ ಹಾಗು ಅದನ್ನು ವಿರೋಧಿಸುವವರಿಗೂ ಒಂದು ಸೂಕ್ತ ವೇದಿಕೆಯನ್ನು ನೀಡುವ ಅಂತರಾಷ್ಟ್ರಿಯ ಸಮ್ಮೇಳನವನ್ನೂ ಆಯೋಜಿಸುವುದಾಗಿ ಹೇಳುತ್ತಾರೆ.

ಸತ್ಯಪಾಲ್ ಸಿಂಗ್ರವರ ಹೇಳಿಕೆಯನ್ನು ಕೇಳಿದ ಕೂಡಲೇ ಕನಿಷ್ಠ ಅಂಕ ಪಡೆಯುವ ವಿದ್ಯಾರ್ಥಿಯನ್ನು ಕಿಚಾಯಿಸುವ ಗುಂಪಿನಂತಾದ ನಮ್ಮ ಮಾಧ್ಯಮಗಳು, ಚಿಂತಕರು ಹತ್ತಾರು ವಿಧಗಳಿಂದ ಅವರನ್ನು ಹೀಯಾಳಿಸತೊಡಗಿದರೆ ವಿನಃ ಕನಿಷ್ಠ ಕುತೂಹಲಕ್ಕಾದರೂ ಆ ಹೇಳಿಕೆಯ ಇನ್ನೊಂದು ಮಗ್ಗಲನ್ನು ನೋಡಲು ಬಯಸಲಿಲ್ಲ. ಅಂದು ರಾಮಸೇತುವನ್ನು ಮಾನವ ನಿರ್ಮಿತವೆಂದು ಹೇಳಿದಾಗ ಹೀಗೆಯೇ ಬೊಬ್ಬೆಯೊಡೆದು ಇಂದು ಅದು ನಸರ್ಗಿಕವಲ್ಲದೆಂಬ ವಾದವನ್ನು ಹರಳೆಣ್ಣೆ ಮುಖವನ್ನು ಮಾಡಿ ಒಪ್ಪಿಕೊಳ್ಳುವವರು.

ಮಾನವನ ಅಷ್ಟೇ ಏಕೆ ಇಡೀ ಜೀವ ಸಂಕುಲದ ವಿಕಸನಕ್ಕೆ ಕಾರಣವಾಗಿದ್ದ ಡಾರ್ವಿನ್ ನ ಸಿದ್ಧಾಂತವನ್ನು ಜಗತ್ತು ಒಪ್ಪಿಕೊಂಡಿತ್ತು. 1809 ರಲ್ಲಿ ಇಂಗ್ಲೆಂಡಿನಲ್ಲಿ ಜನಿಸಿದ ಡಾರ್ವಿನ್ ಚಿಕ್ಕನಿಂದಲೇ ನಿಸರ್ಗದ ಆಗಾಧತೆಯನ್ನು ಕುತೂಹಲದಿಂದ ನೋಡುತ್ತಾ ಬೆಳೆಯುತ್ತಾನೆ. ಓದಿನಲ್ಲೂ ನಿಸರ್ಗ ವಿಜ್ಞಾನ (Natural Science) ವಿಷಯವನ್ನೇ ಆಯ್ದುಕೊಂಡ ಆತ 1831 ರಲ್ಲಿ HMS Beagle ಎಂಬ ಹಡಗಿನಲ್ಲಿ ವಿಶ್ವ ಪರಿಹಟನೆ ಮಾಡುವ ಅವಕಾಶವನ್ನು ಪಡೆದು ಸತತ 5 ವರ್ಷಗಳ ಕಾಲ ತನ್ನ ಸಂಶೋಧನೆಯನ್ನು ನಡೆಸುತ್ತಾನೆ. ಆಗ ಆತ ಗಳಿಕೊಂಡಿದ್ದ ಪುರಾವೆಗಳನ್ನು ನಂತರದ ಹಲವಾರು ವರ್ಷಗಳ (ದಶಕಗಳ ) ಕಾಲ ಉಜ್ಜಿ, ಒರೆಹಚ್ಚಿ, ಚರ್ಚಿಸಿ, ಅವಲೋಕಿಸಿ ಕೊನೆಗೆ 1859 ರಲ್ಲಿ ‘ದಿ ಒರಿಜಿನ್ ಆಫ್ ಸ್ಪೀಷೀಸ್’ ಎಂಬ ಪುಸ್ತಕವನ್ನು ಪ್ರಕಟಗೊಳಿಸುತ್ತಾನೆ. ಈ ಪುಸ್ತಕವೇ ಸಮಗ್ರ ಜೀವಿಗಳ ಹುಟ್ಟು ಹಾಗು ಬೆಳವಣಿಗೆಯ ಬಗೆಗಿನ ಜಗತ್ತಿನ ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ಗಳಿಸಿಕೊಟ್ಟಿತ್ತು.

ಡಾರ್ವಿನ್ ನ ಪ್ರಕಾರ ಮಿಲಿಯನ್ ಗಟ್ಟಲೆ ವರ್ಷಗಳಿಂದ ಜೀವಿಗಳು ದಿನದಿಂದ ದಿನಕ್ಕೆ ವಿಕಸನಹೊಂದುತ್ತ ಬೆಳೆದು ಪ್ರಸ್ತುತ ಕಾಣಸಿಗುವ ರೂಪಕ್ಕೆ ಬಂದು ನಿಂತಿವೆ ಎಂಬುದಾಗಿರುತ್ತದೆ. ಹೀಗೆ ಜೀವಿಗಳು ವಿಕಸನ ಹೊಂದಲು ಅವುಗಳ ನೈಸರ್ಗಿಕ ಆಯ್ಕೆ (ನ್ಯಾಚುರಲ್ ಸೆಲೆಕ್ಷನ್) ಎಂಬ ಕ್ರಿಯೆ ಬಹಳ ಮಹತ್ವವನ್ನು ಪಡೆಯುತ್ತದೆ ಎನ್ನುತ್ತಾನೆ. ಮಂಗನಿಂದ ಮಾನವನಾದ ಬಗ್ಗೆ, ಜಿರಾಫೆಗಳ ಕತ್ತು ಉದ್ದವಾದ ಬಗ್ಗೆ, ಹಕ್ಕಿಗಳ ಕೊಕ್ಕು ಮಾರ್ಪಾಡಾದ ಬಗ್ಗೆ ಹೀಗೆ ಇನ್ನು ಹಲವಾರು ಉದಾಹರಣೆಗಳ ಮೂಲಕ ಆತ ತನ್ನ ಸಿದ್ಧಾಂತವನ್ನು ಎತ್ತಿ ಹಿಡಿಯುತ್ತಾನೆ. ಜೀವಿಗಳು ತಮ್ಮ ಅನುಕೂಲತೆಗೆ ತಕ್ಕಂತೆ (ಓಡಲು, ಹಾರಲು, ರಕ್ಷಣೆಗಾಗಿ) ತಮ್ಮ ದೇಹದ ಅಂಗಾಂಗಗಳನ್ನು ಬಳಸುವುದರಿಂದ ಅವುಗಳು ಕ್ರಮೇಣವಾಗಿ ಮಾರ್ಪಾಡು ಹೊಂದಿ ಒಂದು ಹೊಸಬಗೆಯ ಜೀವಿಯೇ ಸೃಷ್ಟಿಯಾಗಬಲ್ಲದು  ಎಂಬುದಾಗಿರುತ್ತದೆ ಆತನ ವಾದ. ಇದನ್ನೇ ನಾವು ನೀವುಗಳೆಲ್ಲ ಓದಿ, ಕಲಿತು, ಬರೆದು ಬೆಳೆದವರು. ಒಟ್ಟಿನಲ್ಲಿ ಕ್ಯಾಮೆರಾಗಳಿಲ್ಲದ ಕಾಲಕ್ಕೆ ತನ್ನ ತಲೆದೂರಿ ಕತೆಯನ್ನು ಹೇಳುವ ಸಂಜಯನಂತೆ ಡಾರ್ವಿನ್ ನ್ನಾದರೆ, ಹೇಳಿದ್ದನ್ನೆಲ್ಲ ಭಕ್ತಿಯಿಂದ ಕೇಳುವ ದೃತರಾಷ್ಟ್ರನಂತಾದೇವು ನಾವುಗಳೆಲ್ಲ!

ಆದರೆ ಕಳೆದ ಒಂದೂವರೆ ಶತಮಾನಗಳಿಂದಲೂ ಡಾರ್ವಿನ್ನ ಈ ವಿಕಸನವಾದವನ್ನು ಪ್ರಶ್ನಿಸುತ್ತಲೇ ಬಂದಿರುವವರೂ ಹಲವರಿದ್ದಾರೆ. ವಿಜ್ಞಾನಿಗಳು, ಚಿಂತಕರು, ಇತಿಹಾಸಕಾರರು ಹೀಗೆ ಇನ್ನು ಹಲವರ ಪ್ರಶ್ನೆಗಳೇನು ಅತ್ತ ಕಿವಿಯಿಂದ ಕೇಳಿ ಇತ್ತ ಕಿವಿಯಿಂದ ಬಿಡುವಂತವುಗಳೇನಲ್ಲ. ಅವರ ಹೇಳಿಕೆಗಳೂ ಬಾಲಿಶವಾದವುಗಳೇನಲ್ಲ. ಅಂತಹ ಹಲಕೆಲವು ಪ್ರಶ್ನೆ, ವಾದಗಳನ್ನು ಇಲ್ಲಿ ಚರ್ಚಿಸಲಾಗಿದೆ.

೧. ಹಕ್ಕಿಗಳ ಮೋಟು ರೆಕ್ಕೆಗಳು :
ಸಂಶೋಧಕರ ಪ್ರಕಾರ ಲಕ್ಷಾಂತರ ವರ್ಷಗಳ ಹಿಂದೆ ಹಕ್ಕಿಗಳ ರೆಕ್ಕೆಗಳು ಅತ್ತ ಹಾರಲು ಆಗದೆ ಇತ್ತ ಓಡಲೂ ತಡೆಯೊಡ್ಡುತ್ತಿದ್ದ ಅಂಗಗಳಾಗಿದ್ದವು. ವಿಕಸನವಾದಿಗಳ ಪ್ರಕಾರ ಹಕ್ಕಿಗಳು ಈ ಮೋಟು ರೆಕ್ಕೆಗಳೆನ್ನೇ ಹಾರಲು ಬಳಸಿ ಬಳಸಿ ಕ್ರಮೇಣವಾಗಿ ಅವುಗಳು ಪ್ರಸ್ತುತ ರೆಕ್ಕೆಗಳ ಸ್ವರೂಪವನ್ನು ಪಡೆದವು, ಹಕ್ಕಿಗಳು ಹಾರಾಡಲು ಶುರುಮಾಡಿದವು ಎನ್ನುವುದಾಗಿದೆ. ಆದರೆ ನೈಸರ್ಗಿಕ ಆಯ್ಕೆಯ (ನ್ಯಾಚುರಲ್ ಸೆಲೆಕ್ಷನ್) ಪ್ರಕಾರ ಮೋಟು ರೆಕ್ಕೆಯ ಹಕ್ಕಿಗಳು ಅಥವಾ ರೆಕ್ಕೆಗಳಿರದ ಹಕ್ಕಿಗಳೇ ಬದುಕುಳಿಯುವ ಸಂಭವ ಹೆಚ್ಚು. ಏಕೆಂದರೆ ರೆಕ್ಕೆ ಚಿಕ್ಕದಾದಷ್ಟು ದೇಹದ ತೂಕ ಕಡಿಮೆಯಾಗಿ, ಓಡುವಾಗ ಬಂದೊದಗುತಿದ್ದ ಅಡಚಣೆಗಳೂ ಕಡಿಮೆಯಾಗುತ್ತಿದ್ದವು. ಅಲ್ಲದೆ ಇಂದಿಗೂ ಹಕ್ಕಿಗಳು ಚಲನೆಗಾಗಿ ಹೆಚ್ಚಾಗಿ ಕಾಲುಗಳನ್ನೇ ಬಳಸಲು ಪ್ರಯತ್ನಿಸುತ್ತಾವೆ ವಿನ್ಹಾ ರೆಕ್ಕೆಗಳನ್ನಲ್ಲ. ( https://www.youtube.com/watch?v=JMuzlEQz3uo&t=333s ) ಹಾಗಾಗಿ ನೈಸರ್ಗಿಕವಾಗಿ ಹಕ್ಕಿಗಳ ಆಯ್ಕೆ ರೆಕ್ಕೆರಹಿತ ದೇಹದ ರಚನೆಯಾಗಿದ್ದಿತೇ ವಿನಹ ರೆಕ್ಕೆ ಸಹಿತವಾಗಿದ್ದಿರಲಿಲ್ಲ. ಹಾಗಾದರೆ ಹೆಬ್ಬೆರೆಳಿನಂತಿದ್ದ ಮೋಟು ರೆಕ್ಕೆಗಳು ಮುಂದೆ ವಿಕಸನವನ್ನು ಹೊಂದಿದವೇ ಅತವಾ ಪ್ರಸ್ತುತ ಕಾಣಸಿಗುವ ಹಕ್ಕಿಗಳ ಪೂರ್ವಿಕರು ಮೋಟು ರೆಕ್ಕೆಗಳ ಹಕ್ಕಿಗಳಲ್ಲವೇ ಎಂಬುದು ಚರ್ಚೆಯಲ್ಲಿರುವ ವಿಷಯ.

2.ಮೀನುಗಳ ವಿಕಸನ :
ವಿಕಾಸನವಾದಿಗಳ ಪ್ರಕಾರ ನೆಲದ ಮೇಲಿನ ಹಲವಾರು ಜೀವಿಗಳ ಉಗಮ ನೀರಿನ ಒಳಗಿಂದಲೇ ಆಗಿದೆ. ಅರ್ಥಾತ್ ಮೀನುಗಳು ವಿಕಸನಹೊಂದಿ ಕ್ರಮೇಣವಾಗಿ ಭೂಜೀವಿಗಳಾಗಿ ಮಾರ್ಪಾಡಾದವು ಎಂಬುದಾಗಿದೆ. ಆದರೆ ಮೀನಿನ ಕಿವಿರುಗಳು ನೀರಿನಿಂದ ಆಮ್ಲಜನಕವನ್ನು ಹೀರಿಕೊಳ್ಳಲು ಸೂಕ್ತವಾಗಿವೆಯೇ ವಿನ್ಹಾ ಗಾಳಿಯಿಂದಲ್ಲ. ಹಾಗಿರುವಾಗ ನೀರಿನೊಳಗೆ ಹಾಯಾಗಿ ಈಜಿಕೊಂಡು ಬದುಕುತ್ತಿದ್ದ ಜೀವಿಯೊಂದು ಕಾಲಕಾಲಕ್ಕೂ ನೆಲದ ಮೇಲೆ ಬಂದು ಜೀವನ್ಮರಣ ಹೋರಾಟ ನಡೆಸಿ ಪುನಹ ನೀರಿನೊಳಗೆ ಜಿಗಿಯುತ್ತಿದ್ದಿತೇ? ಹೀಗೆ ಮಾಡಿದರಷ್ಟೇ ನೀರಿನೊಳಗಿನ ಮೀನಿನ ಕಿವಿರುಗಳು ಭೂವಾಸಿ ಜೀವಿಗಳ ಶ್ವಾಸಕೋಶಗಳಂತೆ ಮಾರ್ಪಾಡಾಗುವುದು. ಕ್ರಮೇಣವಾಗಿ ನೆಲದ ಮೇಲೆ ವಾಸಿಸಲು ಸೂಕ್ತವಾದ ಜೀವಿಯ ದೇಹವೊಂದು ರಚನೆಯಾಗುವುದು. ಆದರೆ ಜೀವವೇ ಹಾರಿಹೋಗುವಂತಹ ಕ್ರಿಯೆಯಿಂದ ಜಲಚರಗಳು ವಿಕಸನ ಹೊಂದಿದವೇ? ಇದು ನ್ಯಾಚುರಲ್ ಸೆಲೆಕ್ಷನ್ನಿನ ಕೆಟಗರಿಯೊಳಗೆ ಬರುತ್ತದೆಯೇ ಎಂಬುದು ಮತ್ತೊಂದು ಪ್ರೆಶ್ನೆ?

3. ದೈತ್ಯ ಡೈನೋಸಾರ್ಗಳ ವಿಕಸನ :
ವಿಕಾಸನವಾದ ಪ್ರಕಾರ ಉದ್ದಕತ್ತಿನ ದೈತ್ಯ ಸಸ್ಯಾಹಾರಿ ಡೈನೋಸಾರ್ಗಳು (Cetiosaurus ) ಮರಗಳ ಮೇಲಿನ ಹೂವು ಹಣ್ಣುಗಳನ್ನು ತಿನ್ನಲು ವಿಕಸನ ಹೊಂದಿ ಮಾರ್ಪಾಡಾದ ಜೀವಿಗಳು ಎಂಬುದಾಗಿದೆ. ಇದೆ ತತ್ವ ಜಿರಾಫೆಗಳಿಗೂ ಅನ್ವಹಿಸುತ್ತದೆ. ಆದರೆ ಕೆಲಸಮಯದ ಇತ್ತೀಚಿಗೆ ದೊರೆತ ಪಳೆಯುಳಿಕೆಗಳ ಪ್ರಕಾರ ಅಂತಹ ಡೈನೋಸಾರ್ಗಳ ಕುತ್ತಿಗೆಯ ಕಶೇರುಖಂಡವು (Vertebrae) ಸಮತಲವಾಗಿ (Horizontal) ಚಲಿಸಬಲ್ಲ ರಚನೆಯನ್ನು ಹೊಂದಿದ್ದೀತೆ ವಿನಹ ಲಂಬರೇಖೆಯ (vertical) ಪತದಲ್ಲಿ ಚಲಿಸುವ ಆಕಾರವಾಗಿರಲಿಲ್ಲ. ಅಂದರೆ ಅಂತಹ ಡೈನೋಸಾರ್ಗಳು ನೆಲದ ಮೇಲಿನ ಹುಲ್ಲು ಹಣ್ಣುಗಳನ್ನು ತಿನಲ್ಲು ಮಾತ್ರ ಸೀಮಿತವಾಗಿದ್ದವು ಎಂಬುದಾಗಿದೆ. ಹೀಗಿರುವಾಗ ಅಂತಹ ಉದ್ದಕತ್ತಿನಿಂದ ಅವುಗಳಿಗೆ ಉಪಯೋಗಕ್ಕಿಂತ ತೊಂದರೆಯೇ ಹೆಚ್ಚಾಗಿದೆ ಎಂಬುದಾಗಿದ್ದಿತು. ಹಾಗಾದರೆ ಕ್ರಮೇಣವಾಗಿ ಉದ್ದಕತ್ತುಗಳು ನಶಿಸಬೇಕಿದ್ದಿತು. ಆದರೆ ವಿಕಾಸನವಾದದ ಪ್ರಕಾರ ಹಾಗಾಗುವುದಿಲ್ಲ!

4. ಮಾನವನೊಬ್ಬನನ್ನು ಬಿಟ್ಟು ಇತರ ಯಾವುದೇ ಜೀವಿಗಳ ಮಧ್ಯಂತರ ಪಳೆಯುಕೆಗಳು ಸಿಗದಿರುವುದು.
‘ಮಂಗನಿಂದ ಮಾನವ’ ಎಂಬ ವಿಕಾಸನವಾದಕ್ಕೆ ಸಾಕಷ್ಟು ಪುರಾವೆಗಳನ್ನು ವಿಕಾಸನವಾದಿಗಳು ನೀಡುತ್ತಾರೆ. ಆದರೆ ಇತರ ಪ್ರಾಣಿಗಳ ವಿಷಯಕ್ಕೆ ಬಂದಾಗ ಈ ಪುರಾವೆಗಳ ಕೊರತೆ ಯಥೇಚ್ಛವಾಗಿ ಕಾಣುತ್ತದೆ. ಇಂತಹ ಇತರ ಜೀವಿಗಳ ಮಧ್ಯಂತರ ಪಳೆಯುಳಿಕೆಗಳು ಸಿಗದೇ ವಿಕಸನವಾದವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ ಹಲವು ವಿಜ್ಞಾನಿಗಳು. ಸತ್ಯಪಾಲ್ ಸಿಂಗ್ರವರ ಹೇಳಿಕೆಯೂ ಒಂತಿಷ್ಟು ಇದೆ ವಾದಕ್ಕೆ ಪೂರಕವಾಗಿರುತ್ತದೆ. ಡಾರ್ವಿನ್ ಕೂಡ ಇಂತಹ ಒಂದು ಮಧ್ಯಂತರ ಜೀವಿಯ ಪಳೆಯುಳಿಕಗಾಗಿ ಕಾದರೂ ಕೊನೆಯವರೆಗೂ ಯಾವುದೊಂದು ಅಂತಹ ಪಳೆಯುಳಿಕೆಗಳು ಸಿಗದಿದ್ದದ್ದು ಮಾತ್ರ ಸೋಜಿಗದ ಸಂಗತಿ.

5. ಸಾಧ್ಯವಿರದ ಮಾರ್ಪಾಡು.
ಸಂಶೋಧನೆಗಳ ಪ್ರಕಾರ ಯಾವುದೇ ಜೀವಿಯ DNA ವಿಕಸನ ಹೊಂದಲು ಅಥವಾ ಮಾರ್ಪಾಡಾಗಲು ಸಾಧ್ಯವಿರುವುದಿಲ್ಲ, ಹಾಗೇನಾದರೂ DNA ಮಾರ್ಪಾಡು ಹೊಂದಲು ಪ್ರಯತ್ನಿಸಿದರೂ ಅದರ ಆ ಮಾರ್ಪಾಡುಗೊಳ್ಳುವಿಕೆ ಕೂಡಲೇ ನಿಲ್ಲುತ್ತದೆ ಅಥವಾ ವ್ಯತಿರಿಕ್ತವಾಗಿರುತ್ತದೆ. ಒಂದು ಪಕ್ಷ ವಿಕಾಸನವಾದದ ಪ್ರಕಾರ ಜೀವಿಯೊಂದು ಮಾರ್ಪಾಡು ಹೊಂದಿ ಹೊಸ ಜೀವಿಯೊಂದು ಹುಟ್ಟಿಕೊಂಡರೂ ಆ ಹೊಸ ಜೀವಿಯ DNA ತನ್ನ ಹಳೆಯ ಜೀವಿಗೆ ಹೋಲುವುದಿಲ್ಲ. ಹಾಗಾದರೆ ಹೊಸ ದೇಹದ ರಚನೆ, ಆಕಾರ ಎಲ್ಲವುಗಳಿಗೂ ಕಟ್ಟಿಕೊಂಡಿರುವ ಹೊಸ DNA ವಿಕಸನ ಹೊಂದಿದಾದರೂ ಹೇಗೆ?!

ಇಂತಹ ಹಲವಾರು ಪ್ರಶ್ನೆಗಳನ್ನು ಹಲವಾರು ಜನರು ಕಾಲಕಾಲಕ್ಕೆ ಕೇಳಿಕೊಂಡೆ ಬಂದಿದ್ದಾರೆ. ಮಂಗನಿನ ಮಾನವನಾದರೆ ಮಂಗಗಳು ಇನ್ನೂ ಏಕೆ ಕಾಣಸಿಗುತ್ತವೆ? ವಿಕಾಸನವಾದದ ನೂರೈವತ್ತು ವರ್ಷಗಳ ನಂತರವೂ ಅ ವಾದಕ್ಕೆ ಪೂರಕವಾದ ಪಳೆಯುಳಿಕೆಗಳು ಸಿಗಲಿಲ್ಲವೇಕೆ? ಮಾನವ ವಿಕಸನ ಹೊಂದುತ್ತಾ ಬಂದಿದ್ದರೆ ಇಂದಿಗೂ ಆತನ ಆಕಾರವೇಕೆ ಹಾಗೆಯೆ ಉಳಿದಿದೆ? ಇತಿಹಾಸದ ಗ್ರಂಥಗಳಲ್ಲಿ, ಪುರಾಣಗಳಲ್ಲಿ (ಹನುಮಂತನಂತಹ ಪಾತ್ರಗಳನ್ನು ಅಲ್ಲಗೆಳೆಯಲಾಗುವುದಿಲ್ಲ) ಅಲ್ಲದೆ ಸಾವಿರಾರು ವರ್ಷಗಳ ವೈಜ್ಞಾನಿಕ ಇತಿಹಾಸವಿರುವ ಭಾರತೀಯ ಯಾವುದೇ ಪುಸ್ತಕಗಳಲ್ಲೂ ಏಕೆ ಇಂತಹ ಜೀವಿಗಳ ಅಥವ ತತ್ವಗಳ ವಿಚಾರವಿಲ್ಲ? ಇಂತಹ ನೂರಾರು ಪ್ರಶ್ನೆಗಳು ಸಾಮಾನ್ಯರಾದ ನಮ್ಮಲ್ಲೇ ಮೂಡುವಾಗ ಜೀವನಪೂರ್ತಿ ಇಂತಹ ಒಂದೆರೆಡು ವಿಷಯಗಳ ಬಗ್ಗೆಯೇ ಅಧ್ಯಯನ ಮಾಡುವ ವಿಜ್ಞಾನಿಗಳಲ್ಲಿ ಅದೆಷ್ಟು ಮೂಡಿರುವುದಿಲ್ಲ?! ಇಂತಹ ಒಂದು ಚರ್ಚೆಯನ್ನೇ ಸತ್ಯಪಾಲ್ ಸಿಂಗ್ ರವರು ಆಶಿಸಿದ್ದು. ಅಲ್ಲದೆ ವಿಕಸನವಾದವನ್ನು ಒಪ್ಪಿಕೊಳ್ಳದ ಸತ್ಯಪಾಲ್ ಸಿಂಗ್ ಏನು ಮೂರನೇ ತರಗತಿ ಪಾಸುಮಾಡಿದ ಮಂತ್ರಿಗಳಂತಲ್ಲ. ‘President’s Police Medal’  ಪದಕವನ್ನು ಪಡೆದ, ಎರಡೆರಡು ಪುಸ್ತಕಗಳನ್ನೂ ಬರೆದು ಹೆಸರು ಮಾಡಿರುವ ದಕ್ಷ IPS ಅಧಿಕಾರಿ. ಅವರ ಹೇಳಿಕೆಯನ್ನು ‘ಮೂರ್ಖವಾದ’ ಎನ್ನುವ ಹಲವರು ಇಂತಹ ಅದೆಷ್ಟೋ ಪಶ್ಚಿಮದ ವಾದಗಳು ಕೊನೆಗೊಂದು ದಿನ ಟೊಳ್ಳುವಾದವಾದವನ್ನು ಕಣ್ಣ ಮುಂದೆಯೇ ಕಂಡಿದ್ದಾರೆ. ಅಲ್ಲಿ ಮಾನವರು ಹಸಿದ ಮಾಂಸವನ್ನು ಬೇಯಿಸಿ ತಿನ್ನಲು ಶುರುವಿಟ್ಟ ಕಾಲದಲ್ಲಿ ನಮ್ಮಲ್ಲಿ ಅಂತರಿಕ್ಷದ ಬಗೆಗಿನ ಸಂಶೋಧನೆಗಳನ್ನು ಜರುಗಿಸುತಿದ್ದ ವಿಜ್ಞಾನಿಗಳೇ ಇಂತಹ ಒಂದು ವಿಕಸನವಾದವನ್ನು ಹೇಳದಿದ್ದಾಗ ಒಂದಿನಿತಾರು ನಾವುಗಳು ಈ ವಿಷಯದ ಬಗ್ಗೆ ಚರ್ಚಿಸಬೇಕಿದೆ ಅಲ್ಲವೇ? ಎಷ್ಟಿದ್ದರೂ ವಿಜ್ಞಾನವೆಂಬುದು ಹರಿಯುವ ನೀರಲ್ಲವೇ?

ಸುಪ್ರೀ ಕೋರ್ಟಿನ ನ್ಯಾಯಾಧೀಶರನ್ನೇ ನಾವುಗಳು ಪ್ರಶ್ನಿಸಬಹುದಾದರೆ ಡಾರ್ವಿನ್ ನ ವಿಕಸನವಾದವನ್ನು ಪ್ರಶ್ನಿಸುವುದರಲ್ಲಿ ತಪ್ಪೇನಿದೆ ಹೇಳಿ.

3 ಟಿಪ್ಪಣಿಗಳು Post a comment
  1. s.dinni
    ಜನ 29 2018

    ಸೋಮಾರಿಗಳು ಯಾವುದೋ ಒಂದು ವಿಷಯವನ್ನು ಎತ್ತಿ, ನೀರು,ಶಿಕ್ಷಣ,ಅರೋಗ್ಯ,ನಿರುದ್ಯೋಗ ದಂತಹ ಗಂಭೀರ ಸಮಶ್ಶಗಳಿಗೆ ಸ್ಪಂದಿಸದೆ ಮಾಡುವ ಕೆಲಸ. ಬೇರೆ ಎಷ್ಟೋ ಮಹತ್ವದ ಕೆಲಸಗಳ್ಳನ್ನು ಬಿಟ್ಟು ನಾವು ಬರೆಯುವದು ಕೂಡ ವ್ಯರ್ಥ ಸಮಯ ಹಾಳು

    ಉತ್ತರ
  2. vasu
    ಜನ 29 2018

    ಡಾರ್ವಿನ್ ವಾದದ ಪೊಳ್ಳುತನವನ್ನು ಬಹಿರಂಗ ಪಡಿಸಲು ಈ ಕೇಂದ್ರ ಮಂತ್ರಿ ಶಾಸ್ತ್ರಾರ್ಥಕ್ಕೆ ರೆಡಿಯಿದ್ದಾರೆ. ಆವರ ಎದೆಗಾರಿಕೆ ಗೆ ಮೂಲ ಸ್ವಾಮಿ ದಯಾನಂದರು ಮತ್ತು ಅವರು ಪ್ರತಿಪಾದಿಸಿದ ವೈದಿಕ ಸಿದ್ಧಾಂತಗಳು, ಸ್ವಾಮಿ ದಯಾನಂದರು ಸ್ಥಾಪಿಸಿದ ಆರ್ಯಸಮಾಜದ ಕಟ್ಟಾಳುವಾದ ಈ ಮಂತ್ರಿ ರಸಾಯನ ಶಾಸ್ತ್ರದಲ್ಲಿ ಎಂ.ಎಸ್.ಸಿ ಮಾಡಿ ತದನಂತರ ಪಿ.ಎಚ್.ಡಿಯನ್ನು ಪಡೆದು ನಂತರ ಪೋಲಿಸ್ ಇಲಾಖೆಗೆ ಸೇರಿ ಮುಂಬೈ ನಗರದ ಪೋಲಿಸ್ ಕಮಿಷನರ್ ಸಹ ಆಗಿದ್ದರು, ಈ ದಯಾನಂದ ರ ವಿಚಾರ ಸರಣಿಯೇ ಇವರು ಡಾರ್ವಿನ್ ಸಿದ್ಧಾಂತವನ್ನು ಎದುರಿಸುವಂತೆ ಮಾಡಿದೆ. ಅವರ ಈ ಧೈರ್ಯ ಮೆಚ್ಚುವುಂತಹುದು,
    ಇನ್ನೊಬ್ಬ ಮಂತ್ರಿ ಜಾವಡೇಕರ್ ವಿವೇಕಾನಂದರ ಶಿಷ್ಯರಾಗಿ ಯಾವುದೇ ವೈಚಾರಿಕ ಗಟ್ಟಿಯಿಲ್ಲದೆ. ನಮಗೇಕೆ ಈ ಉಸಾಬರಿ ಎಂದು ಕೈಚೆಲ್ಲಿ ಕುಳಿತಿದ್ದಾರೆ. ದಯಾನಂದ ಮತ್ತು ವಿವೇಕಾನಂದರ ಶಿಷ್ಯರ ಬಗ್ಗೆ ಇದೇ ವೆತ್ಯಾಸ.
    ಸ್ವಾಮಿ ದಯಾನಂದರು ತಮ್ಮ ಅಮೋಘ ಕೃತಿ ” ಸತ್ಯಾರ್ಥ ಪ್ರಕಾಶ” ದಲ್ಲಿ ಸೃಷ್ಟಿಯ ಉತ್ಪತ್ತಿ, ಮನುಷ್ಯನ ಅವಿರ್ಭಾವ ಮುಂತಾದ ವಿಷಯಗಳನ್ನು ವೇದಗಳ ವಿಚಾರದ ಹಿನ್ನಲೆಯಲ್ಲಿ ಚರ್ಚಿಸಿ, ಮಾನವನ ಅವಿರ್ಭಾವ ಅಮೈಥುನಿ [ Asexual] ರೀತಿ ಆರಂಭದಲ್ಲಿ ಆಯಿತೆಂದು ಪ್ರತಿಪಾದಿಸಿದ್ದಾರೆ. ಇದು ಡಾರ್ವಿನ್ ನ ವಿಕಾಸವಾದಕ್ಕೆ ಸುತರಾಂ ಹೊಂದುವುದಿಲ್ಲ. ಮುಂದುವರೆದು ಅನ್ಯ ಗ್ರಹ, ಲೋಕಗಳಲ್ಲಿ ಜೀವಿಗಳಿದ್ದಾರೆ ಎಂಬ ಪ್ರಶ್ನೆಗೆ ಜೀವಿಗಳು ಇರುವುದು ಸಾಧ್ಯತೆಯಿದೆ. ಏಕೆಂದರೆ ಪರಮೇಶ್ವರನ ಸೃಷ್ಟಿಯಲ್ಲಿ ಶೂನ್ಯತೆಗೆ ಅವಕಾಶವಿಲ್ಲ ಎಂದು ಹೇಳಿದಾಗ ವಿಜ್ಞಾನಿಗಳು ಇವರನ್ನು ಮತ್ತು ಇಂತಹ ವಿಚಾರಗಳನ್ನು ಅಪಹಾಸ್ಯ ಮಾಡಿದರು ಈಗ, ಗುರು, ಶುಕ್ರ ಮುಂತಾದ ಗ್ರಹಗಳನ್ನು ಮನುಷ್ಯನು ತಲುಪಿದ್ದಾನೆ. ಅಲ್ಲೆಲ್ಲೂ ಜೀವಕಣಗಳಿವೆ ಎಂದು ಧೃಡಪಡಿಸಿ ಅಲ್ಲಿಯೂ ಜೀವಗಳ ಇರುವಿಕೆಯನ್ನು ತಳ್ಳಿಹಾಕುವಂತಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಒಂದು ರೀತಿಯಲ್ಲಿ ಇದು ಸತ್ಯ ವಿಚಾರಗಳ ಭಂಡಾರವಾದ ವೇದಗಳಿಗೆ ಸಂದ ಜಯ.
    ಡಾರ್ವಿನ್ ಸಿದ್ಧಾಂತಗಳು ವೈದಿಕ ಸಿದ್ಧಾಂತಗಳಿಗೆ ವೈತಿರೇಕವಾಗಿದೆ. ಸೃಷ್ಟಿಯ ಉತ್ಪತ್ತಿಯಬಗ್ಗೆ ವೇದಗಳ ವಿಚಾರಗಳನ್ನು ಇಂದು ಆಧುನಿಕ ವಿಜ್ಞಾನ ಬಹುತೇಕ ಒಪ್ಪಿದೆ. ಅದೇ ರೀತಿ ಇನ್ನೂ ಹೆಚ್ಚು ಸಂಶೋಧನೆ ಕೈಗೊಂಡಾಗ ವೇದಗಳು ಪ್ರತಿಪಾದಿಸುವ ಮನುಷ್ಯನ ಅವಿರ್ಭಾವವನ್ನು ಒಪ್ಪಬಹುದು ಮತ್ತು ಡಾರ್ವಿನ್ ನ ಸಿದ್ಧಾಂತವನ್ನು ತಳ್ಳಿಹಾಕಬಹುದು, ಇದರ ಬಗ್ಗೆ ಪೂರ್ವಾಗ್ರಹ ಬಿಡಬೇಕು, ಆದರೆ ನಮ್ಮ ಇಂದಿನ ವಿಜ್ಞಾನಿಗಳಿಗೆ ವೈದಿಕ ಸಿದ್ಧಾಂತಗಳ ಬಗ್ಗೆ ದ್ವೇಷ ಭಾವನೆ ಇರುವುದರಿಂದ ಡಾ|| ಸಿಂಗ್ ರವರ ವಿಚಾರಗಳನ್ನು ಸರಿಯಾಗಿ ವಿಮರ್ಶಿಸಲು ಹೋಗದೆ ಅವರನ್ನು ಖಂಡಿಸಲು ಹೋಗಿರುವುದು ತುಂಬಾ ದುರಂತ.

    ಉತ್ತರ
    • ಜನ 29 2018

      ಪ್ರತಿಕ್ರಿಯೆಗೆ ಹಾಗು ತಿಳಿಯದಿರದ ಮೇಲಿನ ಇನ್ನಿತರ ಮಾಹಿತಿಗಳಿಗೂ ಧನ್ಯವಾದಗಳು. ಆಧುನಿಕತೆಯ ಭರಾಟೆಯಲ್ಲಿ ವೇದ ಉಪನಿಷತ್ತುಗಳ ವೈಜ್ಞಾನಿಕ ವಿಚಾರಗಳನ್ನು ನಮ್ಮವರೇ ಮೂಲೆಗುಂಪಾಗಿಸುತ್ತಿರುವುದು ಹೊಸತೇನಲ್ಲ. ಪ್ರಸ್ತುತ ಆಧುನಿಕ ವಿಜ್ಞಾನ ಉತ್ತರಿಸಲಾಗದ ‘ಅದೆಷ್ಟೋ’ ಪ್ರಶ್ನೆಗಳಿಗೆ ನಮ್ಮ ವೇದ ಉಪನಿಷತ್ತುಗಳಲ್ಲಿ ನಿಖರವಾದ ವಿವರಣೆಗಳಿವೆ ಎಂದು ಕೇಳಿದ್ದೇನೆ. ನೋಡಿದ್ದೇನೆ. ಅಂತಹ ವೇದ ಉಪನಿಷತ್ತುಗಳಲ್ಲೇ ಎಲ್ಲಿಯೂ ವ್ಯಾಖ್ಯಾನಿಸದ ವಿಕಸನವಾದವನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳುವ ಬದಲು ಕನಿಷ್ಠ ಪಕ್ಷ ಕುತೂಹಲತೆಗಾದರೂ ನಮ್ಮ ಸರ್ಕಾರಗಳು ಚರ್ಚೆಯೊಂದನ್ನು ಆಹ್ವಾನಿಸಿದರೆ ತಪ್ಪೇನು? ತಾವು ತಿಳಿಸಿದ ಹಾಗೆ ಸ್ವಾಮಿ ದಯಾನಂದರು ಹಾಗು ಇನ್ನೂ ಹಲವು ದೇಶೀ ಮಹಾನುಭಾವರ ವಿಚಾರಗಳನ್ನೇ ಮುಂದಿಟ್ಟುಕೊಂಡು ನಾವುಗಳು ವಾದ ಮಂಡಿಸಬಹುಸು. ಆದರೆ ಆ ಮಟ್ಟಿನ ಧೈರ್ಯ ಹಾಗು ಜ್ಞಾನ ನಮ್ಮ ಅದೆಷ್ಟು ನಾಯಕರುಗಳಲ್ಲಿವೆ ಎಂಬುದೇ ಸದ್ಯಕ್ಕೆ ಉತ್ತರಿಸಲಾಗದ ಪ್ರಶ್ನೆ!

      ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments