ಅರಬ್ ರಾಷ್ಟ್ರವಾದ ಎಂಬ ಟ್ಯಾಂಕು; ಷರಿಯಾ ಎಂಬ ಪೈಪು!
– ಸಂತೋಷ್ ತಮ್ಮಯ್ಯ
ಬಹುತೇಕರಿಗೆ ರಾಮಾಯಣದ ಈ ಚಿರಪರಿಚಿತವಾದ ಪ್ರಸಂಗ ವಿಚಿತ್ರವಾಗಿ ಕಾಣಿಸಬಹುದು.
ಸುಬಾಹು ಮತ್ತು ಮಾರೀಚರು ಪದೇ ಪದೇ ಅಡ್ಡಿ ಪಡಿಸುತ್ತಿದ್ದರೂ ವಿಶ್ವಾಮಿತ್ರನೇಕೆ ಪದೇ ಪದೇ ಅಲ್ಲೇ ಯಾಗ ಮಾಡುತ್ತಿದ್ದ ಎನಿಸಬಹುದು. ಜನ್ಮತಃ ಕ್ಷತ್ರಿಯನಾಗಿದ್ದ ವಿಶ್ವಾಮಿತ್ರನೇ ಏಕೆ ಸುಬಾಹು ಮಾರೀಚರನ್ನು ಕೊಲ್ಲಲಿಲ್ಲ ಎಂಬ ಪ್ರಶ್ನೆಯೂ ಮೂಡಬಹುದು. ಹಾಗಾದರೆ ಸುಬಾವು-ಮಾರೀಚರು ವಿಶ್ವಾಮಿತ್ರನಿಗಿಂತಲೂ ಪರಾಕ್ರಮಿಗಳಾಗಿದ್ದರೇ ಎಂದು ಸಂಶಯವನ್ನೂ ಹುಟ್ಟಿಸಬಹುದು. ಅಂಥ ಪ್ರಶ್ನೆ, ಸಂಶಯ, ಗೊಂದಲಗಳು ಹುಟ್ಟುವುದಕ್ಕೆ ಕಾರಣಗಳೂ ಇವೆ. ಏಕೆಂದರೆ ಪ್ರತೀ ಭಾರಿ ಉಪಟಳ ಕೊಟ್ಟಾಗಲೂ ವಿಶ್ವಾಮಿತ್ರ ಅಷ್ಟೇ ಶ್ರದ್ಧೆಯಿಂದ ಯಾಗಕ್ಕೆ ಅಣಿಯಾಗುತ್ತಿದ್ದ. ಪ್ರತೀ ಬಾರಿಯೂ ರಾಕ್ಷಸರು ಹೊಸ ಹೊಸ ವಿಧಾನಗಳ ಮೂಲಕ ಯಾಗಕ್ಕೆ ಅಡ್ಡಿಪಡಿಸುತ್ತಲೇ ಇದ್ದರು. ರಾಕ್ಷಸರು ವಿಶ್ವಾಮಿತ್ರನಿಗಿಂತ ಒಂದು ಹೆಜ್ಜೆ ಮುಂದಿದ್ದರು. ಪ್ರತೀ ಬಾರಿಯೂ ದಾಳಿಯಾಗುವುದೆಂದು ತಿಳಿದಿದ್ದ ಮಿಶ್ವಾಮಿತ್ರ ತಕ್ಕ ಕ್ರಮವನ್ನೂ ಕೈಗೊಳ್ಳುತ್ತಿದ್ದ, ಪ್ರತಿ ಬಾರಿಯೂ ಸೋಲುತ್ತಿದ್ದ. ಕೊನೆಗೆ ವಿಶ್ವಾಮಿತ್ರ ರಾಮ ಲಕ್ಷ್ಮಣರನ್ನು ಕರೆತರುವ ಹೊತ್ತಿಗೆ ಹಣ್ಣುಗಾಯಿ ನೀರುಗಾಯಿ ಅಗಿಹೋಗಿದ್ದ.
ಏಕೆಂದರೆ ವಿಶ್ವಾಮಿತ್ರನಿಗೆ ರಾಕ್ಷಸರ ಆಚರಣೆಗಳು ತಿಳಿದಿತ್ತೇ ಹೊರತು, ಅವರ ಸಿದ್ಧಾಂತ ಮತ್ತು ಪ್ರವೃತ್ತಿಗಳು ತಿಳಿದಿರಲಿಲ್ಲ ಅಥವಾ ಅವನ್ನು ತಿಳಿಯಲು ಅತ ಬಹುಕಾಲ ತೆಗೆದುಕೊಂಡಿದ್ದ!
ಭಾರತದಲ್ಲಿ ಷರಿಯಾ ಅಥವಾ ಷರಿಯತ್ ಎಂದರೂ ಹಾಗೆಯೇ. ಇಂದಿಗೂ ಮುಸಲ್ಮಾನೇತರರಿಗೆ ಷರಿಯತ್ ಸರಿಯಾ, ತಪ್ಪಾಎಂಬ ಚರ್ಚೆಯೇ ದೊಡ್ಡದಾಗುತ್ತದೆಯೇ ಹೊರತು ಅದರಾಚೆಗೆ ಇಣುಕಿದವರು ಕಡಿಮೆ. ಆದರೆ ಮುಸಲ್ಮಾನರಲ್ಲಿ ಹಾಗಿಲ್ಲ. ಅವರಲ್ಲಿ ಷರಿಯಾ ಏಕಾಗಿ ಇದೆ? ಯಾಕಾಗಿರಬೇಕು? ಅದರ ಮೂಲ ಉದ್ದೇಶವೇನಿದೆ ಎಂಬುದರ ಬಗ್ಗೆ ಸ್ಪಷ್ಟತೆಯಿದೆ. ಆಲ್ ಇಂಡಿಯಾ ಪರ್ಸನಲ್ ಲಾ ಬೋರ್ಡ್ ಪ್ರತೀ ಜಿಲ್ಲೆಯಲ್ಲೂ ಷರಿಯಾ ನ್ಯಾಯಾಲಗಳಿರಬೇಕೆಂದು ಹೇಳುತ್ತಿರುವುದಕ್ಕೂ ಗಹನವಾದ ಕಾರಣವಿದೆ.