ರಾಫೆಲ್ ಯುದ್ಧ ವಿಮಾನದ ಸತ್ಯಾಸತ್ಯತೆಗಳು
– ರಾಕೇಶ್ ಶೆಟ್ಟಿ
ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿ ಮುಗಿದ ನಂತರ ಕೇಂದ್ರದ ರಾಜಕೀಯ ವಲಯದಲ್ಲಿ ಅತಿಹೆಚ್ಚು ಸದ್ದು ಮಾಡುತ್ತಿರುವುದು ರಾಫೆಲ್ ಯುದ್ಧ ವಿಮಾನ ಖರೀದಿಯ ವಿವಾದ.ಕಳೆದ ವಾರದ ಅಂಕಣದಲ್ಲಿ ಸಂಸದ ರಾಹುಲ್ ಗಾಂಧೀ ಸಂಸತ್ತಿನಲ್ಲಿ ರಾಫೆಲ್ ಬಗ್ಗೆ ಮಾತನಾಡಿದ್ದನ್ನು ಅದಕ್ಕೆ ಭಾರತ ಹಾಗೂ ಫ್ರಾನ್ಸ್ ಸರ್ಕಾರ ನೀಡಿದ ಸ್ಪಷ್ಟಿಕರಣದ ಬಗ್ಗೆ ಹೇಳಿದ್ದೆ.
ಇದೆಲ್ಲದರ ಮೂಲವಿರುವುದು ೨೦೦೧ರಲ್ಲಿ ಭಾರತೀಯ ವಾಯುಪಡೆ (IAF) ತನಗೆ ೧೨೬ ಮೀಡಿಯಂ ಮಲ್ಟಿ ರೋಲ್ ಕಂಬ್ಯಾಟ್ ಯುದ್ಧ ವಿಮಾನಗಳ ಅವಶ್ಯಕತೆಯಿದೆ ಎನ್ನುವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದಾಗ. ಸಾಧಾರಣವಾಗಿ IAF ಬಳಿ ಕಡಿಮೆಯೆಂದರೂ ೪೫ ಸ್ಕ್ವಾಡ್ರನ್ಸ್ ನಷ್ಟು ಯುದ್ಧವಿಮಾನಗಳು ಇರಬೇಕು ಅಥವಾ ಕನಿಷ್ಟವೆಂದರೂ ೩೯ಸ್ಕ್ವಾಡ್ರನ್ಸ್ ನಷ್ಟು ಇರಬೇಕು ಎನ್ನುವ ನಿಯಮವಿದೆ.ನಮ್ಮ ಬಳಿಯಿದ್ದ ಮಿಗ್ ೨೧ ಮತ್ತು ಮಿಗ್ ೨೭ರ ಜೀವಿತಾವಧಿಗಳು ಮುಗಿಯುತ್ತ ಬಂದಿದ್ದವು ಮೇಲಾಗಿ,ಆ ಯುದ್ಧ ವಿಮಾನಗಳ ಮಿತಿಯನ್ನು ಕಾರ್ಗಿಲ್ ಯುದ್ಧ ಮನಗಾಣಿಸಿತ್ತು ಕೂಡ. ಈ ಹಿನ್ನೆಲೆಯಲ್ಲಿ ಇಂತಹದ್ದೊಂದು ಬೇಡಿಕೆ IAF ನಿಂದ ಬಂದಿತ್ತು. ೨೦೦೭ರಲ್ಲಿ ಈ ಕುರಿತು RFP (request for proposals) ಸಲ್ಲಿಸಿತ್ತು. ೬ ಶಸ್ತ್ರಾಸ್ತ್ರ ತಯಾರಿಕಾ ಕಂಪೆನಿಗಳು ಬಿಡ್ ಸಲ್ಲಿಸಿದ್ದವು. ತೀವ್ರತರನಾದ ಪರೀಕ್ಷೆಗಳ ಮೂಲಕ ಅಂತಿಮವಾಗಿ ರಾಫೆಲ್ ಮತ್ತು ಯುರೋ ಫೈಟರ್ ಟೈಫೂನ್ ವಿಮಾನಗಳು ಅಂತಿಮ ಸುತ್ತಿನಲ್ಲಿ ಉಳಿದಿದ್ದವು.ಇದರಲ್ಲಿ ಅಂತಿಮವಾಗಿ ಆಯ್ಕೆಯಾಗಿದ್ದು ರಾಫೆಲ್.ಇಷ್ಟೆಲ್ಲಾ ಆಗುವಾಗ ೨೦೧೨ ಬಂದಿತ್ತು. ಸರಿ ಸುಮಾರು ಹನ್ನೊಂದು ವರ್ಷಗಳು ವರದಿ,ಪ್ರಪೋಸಲ್ ಹಾಗೂ ಯುದ್ಧ ವಿಮಾನದ ಆಯ್ಕೆಯಲ್ಲಿಯೇ ಕಳೆದು ಹೋಗಿತ್ತು. ಹಾಗೂ ಹೀಗೂ ರಾಫೆಲ್ ಖರೀದಿಯ ಕುರಿತ ವ್ಯಾವಹಾರಿಕ ಚರ್ಚೆಗಳು ಶುರುವಾಗಿದ್ದು ೩೧ ಜನವರಿ ೨೦೧೨ ರ ನಂತರ.