ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 21, 2018

1

ಅಜಾತ ಶತ್ರುವಿನ ನೆಪದಲ್ಲಿ ಆಂಧ್ರದ ಬೃಹಸ್ಪತಿಯ ನೆನೆಯುತ್ತ…

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

ಬದುಕಲಿಕ್ಕೆಂದೇ ದಿನ ಸಾಯುವವರು,ಬೇಗ ಸತ್ತರೆ ಸಾಕೆಂದು ಬದುಕುವವರ ನಡುವೆ, ಸತ್ತು ಬದುಕುವುದು ಹೇಗೆ ಎಂದು ತೋರಿಸಿಕೊಟ್ಟ ಪುಣ್ಯಾತ್ಮರಿಗೆ ಈ ದೇಶದಲ್ಲಿ ಕೊರತೆಯಿಲ್ಲ. ಅದು ಹದಿಹರೆಯದಲ್ಲೇ ನೇಣಿಗೆ ಕೊರಳೊಡ್ಡಿ ಬ್ರಿಟಿಷರ ನಿದ್ದೆಗೆಡಿಸಿದ ಭಗತನಿರಬಹುದು,ಮೈ ಆಜಾದ್ ಹೂಂ ,ಆಜಾದ್ ಹೀ ರಹೂಂಗ ಎಂದು ಬ್ರಿಟಿಷರ ಕೈಗೆ ಕಡೆಯವರೆಗೂ ಸಿಗದೇ ಹುತಾತ್ಮರಾದ ಚಂದ್ರ ಶೇಖರ್ ಆಜಾದ್ ಅವರಿರಬಹುದು,ದೇಶ ಬಿಟ್ಟು ಪರದೇಶದಲ್ಲೊಂದು ಸೈನ್ಯ ಕಟ್ಟಿ ಭಾರತವನ್ನು ದಾಸ್ಯ ಮುಕ್ತ ಮಾಡುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನಿಗೂಢ ಕಣ್ಮರೆಯಿರಬಹುದು (ಅವರು ವಿಮಾನಾಪಘಾತದಲ್ಲಿ ಸಾಯಲಿಲ್ಲವೆಂದೇ ಬಲವಾಗಿ ನಂಬುವವನು ನಾನು), ೬೫ರ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿ,ಗಾಂಧಿಯವ ಥಿಯರಿಗಳನ್ನೇ,ವಾಸ್ತವದಲ್ಲಿ ಪಾಲಿಸುವಂತೆ ಬದುಕಿದ ಸಂತ ಲಾಲ್ ಬಹಾದ್ದೂರ್ ಶಾಸ್ತ್ರಿಗಳಿರಬಹುದು,ನೆಹರೂ ಕಾಲದ ಅಡಾಲೆದ್ದು ಹೋದ ಭಾರತದ ಅರ್ಥ ವ್ಯವಸ್ಥೆಯನ್ನು ಬದಲಿಸಿ ಭಾರತದ ಆರ್ಥಿಕ ಪಥವನ್ನೇ ಬದಲಿಸಿ ನಿಲ್ಲಿಸಿದ ಪಿವಿ ನರಸಿಂಹರಾವ್ ಅವರಿರಬಹುದು,ಸ್ವಾತಂತ್ರ್ಯ ಬಂದಾಗಿನಿಂದ ಅದೇ ಕಿತ್ತು ಹೋದ,ಡಾಂಬರು ಕಾಣದ ರಸ್ತೆಗಳನ್ನು ಸುವರ್ಣ ಚತುಷ್ಪತ,ಪ್ರಧಾನ್ ಮಂತ್ರಿ ಗ್ರಾಮೀಣ್ ಸಡಕ್ ಯೋಜನೆಗಳ ಮೂಲಕ ರಾವ್ ಅವರು ಹಾಕಿಕೊಟ್ಟ ಆರ್ಥಿಕ ತಳಹದಿಯ ಮೇಲೆ ನವಭಾರತ ನಿರ್ಮಾಣಕ್ಕೆ ಶರವೇಗ ನೀಡಿದ ಕವಿಹೃದಯಿ ಅಟಲ್ ಬಿಹಾರಿ ವಾಜಪೇಯಿಯವರಿರಬಹುದು… ಹೀಗೆ ಸತ್ತು ಬದುಕುವುದು ಹೇಗೆಂದು ಹೇಳಿಕೊಟ್ಟವರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ರಾಜಕಾರಣಿಯೊಬ್ಬ ಸತ್ತರೆ ಜನ ಸಾಮಾನ್ಯನೊಬ್ಬನಿಗೆ ತನ್ನದೇ ಕುಟುಂಬದ ಸದಸ್ಯನೊಬ್ಬ ಹೊರಟು ಬಿಟ್ಟನಲ್ಲ ಎನ್ನುವಷ್ಟು ದುಃಖವಾಗುತ್ತದೆಯೆಂದರೇ ಅದು ನಿಜಕ್ಕೂ ಬದುಕಿನ ಸಾರ್ಥಕತೆಯೇ ಸರಿ. ಕವಿ ಹೃದಯದ,ವಾಗ್ದೇವಿಯ ವರಪುತ್ರನಂತೆ ಮಂತ್ರಮುಗ್ಧ ವಾಗ್ಮಿಯಾಗಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಅಂತಹದ್ದೊಂದು ಬದುಕನ್ನು ಬದುಕಿ ಉದಾಹರಣೆಯಾಗಿ ಇಲ್ಲಿಂದ ಮುಂದಕ್ಕೆ ಹೊರಟಿದ್ದಾರೆ. ಆಗಸ್ಟ್ ೧೭ರ ಎಲ್ಲಾ ಪತ್ರಿಕೆ,ಚಾನೆಲ್ಲುಗಳ ತುಂಬಾ ವಾಜಪೇಯಿಯವರ ಜೀವನ ಚರಿತ್ರೆ, ಭಾಷಣಗಳು,ವ್ಯಕ್ತಿಚಿತ್ರಣ ತುಂಬಿ ಹೋಗಿತ್ತು.ಈಗಾಗಲೇ ವಾಜಪೇಯಿಯವರ ಬಗ್ಗೆ ಹಲವಾರು ಲೇಖನಗಳು ಬಂದಿವೆ,ಇನ್ನು ಅವರ ಬಗ್ಗೆ ಬರೆಯಲಿಕ್ಕೆ ಉಳಿದಿರುವುದಾದರೂ ಏನು ಅನ್ನಿಸುತ್ತದೆ.ಆದರೆ ಮಹಾನ್ ವ್ಯಕ್ತಿಗಳು ಬದುಕಿದ್ದಾಗ ಮಾತ್ರವಲ್ಲ,ಮರಣದಲ್ಲೂ ಸಂದೇಶಗಳನ್ನು ಬಿಟ್ಟು ಹೋಗುತ್ತಾರೆ ಅಥವಾ ಅವರ ಶಿಷ್ಯರು ಆ ಕೆಲಸವನ್ನು ಮಾಡುತ್ತಾರೆ. ವಾಜಪೇಯಿಯವರ ಅಂತಿಮ ಯಾತ್ರೆ ಅಂತಹದ್ದೊಂದು ಗಟ್ಟಿಯಾದ ಸಂದೇಶವನ್ನು ದೆಹಲಿ ರಾಜಕಾರಣದಲ್ಲಿ ಘಂಟಾಘೋಷವಾಗಿ ಮೊಳಗಿಸಿದೆ. ಅಂತಿಮ ಯಾತ್ರೆಯ ಐದು ಕಿಲೋಮಿಟರ್ರುಗಳನ್ನು ಪ್ರಧಾನಿ ನರೇಂದ್ರ ಮೋದಿ,ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ನಡೆದುಕೊಂಡೇ ಸಾಗಿದರು. ರಸ್ತೆಯ ತುಂಬೆಲ್ಲಾ ಜನಸಾಗರ ಸೇರಿತ್ತು. ರಾಜೀವ್ ಗಾಂಧೀಯವರ ಅವರ ಹತ್ಯೆಯಾಗಿ ಅಂತಿಮ ಯಾತ್ರೆ ನಡೆದಾಗ ಸೇರಿದ್ದು ಬಿಟ್ಟರೆ ದೆಹಲಿ ಮತ್ತೆ ಇಷ್ಟು ಜನರನ್ನು ನೋಡಿದ್ದು ಈಗಲೇ ಎನ್ನುವ ಮಾತುಗಳು ಕೇಳಿಬಂದವು.ನಿಜವಾಗಿಯೂ ದೆಹಲಿಗೆ ೧೪ ವರ್ಷಗಳ ಹಿಂದೆಯೇ ಅಂತಹದ್ದೊಂದು ದಿನ ಬಂದಿತ್ತು.ಅದು ಪಿ.ವಿ ನರಸಿಂಹರಾವ್ ಅವರು ಮರಣ ಹೊಂದಿದ್ದ ದಿನ. ನೆಹರೂ ಕಾಲದ ಹಳಿತಪ್ಪಿ ಅಡಾಲೆದ್ದು ಹೋಗಿದ್ದ ಅರ್ಥಿಕ ನೀತಿಯನ್ನೇ ೯೦ರ ದಶಕದವರೆಗೂ ನಡೆಸಿಕೊಂಡು ಭಾರತವನ್ನು ಜಗತ್ತಿನ ಬಲಾಢ್ಯ ರಾಷ್ಟ್ರಗಳ ಮುಂದೆ ಮಂಡಿಯೂರಿ ದೈನೇಸಿ ಸ್ಥಿಯಲ್ಲಿ ಕುಳಿತಿರುವಂತೆ ಮಾಡಲಾಗಿತ್ತಲ್ಲ,ಆ ಸ್ಥಿತಿಯನ್ನು ಬದಲಿಸಿ ಭಾರತದ ನವ ಆರ್ಥಿಕತೆಯಾ ರೂವಾರಿ,ಆಂಧ್ರದ ಜನರ ಪ್ರೀತಿಯ ಬೃಹಸ್ಪತಿ,ಮಾಜಿ ಪ್ರಧಾನಿ ಪಿ.ವಿ ನರಸಿಂಹರಾವ್ ಅವರು ೨೦೦೪ರಲ್ಲಿ ತಮ್ಮ ದೇಹವನ್ನು ತ್ಯಜಿಸಿದರು. ಆದರೆ,ದೇಶದ ಜನರಿಗೆ ಅಂತಹದ್ದೇನೂ ನಡೆಯಲೇ ಇಲ್ಲ,ಅಸಲಿಗೆ ಆ ವ್ಯಕ್ತಿಯ ಸಾವು ಒಂದು ಸುದ್ದಿಯೇ ಅಲ್ಲವೆನ್ನುವಂತೆ ಮಾಡಿಸುವಲ್ಲಿ ನೆಹರೂ ಪರಿವಾರ ಮತ್ತು ಅವರ ಸಾಕು ನಾಯಿಗಳಂತೆ ವರ್ತಿಸುವವರು ಮಾಡಿದ್ದರು.

ಇವತ್ತಿಗೆ ಗಂಜಿಗಿರಾಕಿಗಳು,ಸತ್ತವರ ಬಗ್ಗೆ ಕೆಟ್ಟದ್ದು ಮಾತನಾಡಬಾರದು,ಸತ್ತವರ ಮೇಲೆ ಎಂತ ದ್ವೇಷ ಅಂತೆಲ್ಲಾ ಪುಂಗಿಯೂದುತ್ತಾರೆ. ಆದರೆ ಅಂದು ನರಸಿಂಹರಾವ್ ಅವರು ಸತ್ತಾಗ, ಸೋನಿಯಾಳ ಕಾಂಗ್ರೆಸ್, ಮೌನಮೋಹನ ಸಿಂಗರ ಯುಪಿಎ ಸರ್ಕಾರ ಲಜ್ಜೆಗೆಟ್ಟವರಂತೆ ವರ್ತಿಸಿದ್ದನ್ನು ದೆಹಲಿಯ ಯಾವ ದೊಡ್ಡ ಪತ್ರಕರ್ತನೂ ಪ್ರಶ್ನಿಸಲಿಲ್ಲ. ದೇಶದಲ್ಲಿ ದ್ವೇಷದ ವಾತಾವರಣವಿದೆ ಎಂದು ಯಾವ ಅಡ್ಡಕಸುಬಿಯೂ ಪ್ರಶಸ್ತಿ ವಾಪಸ್ಸು ಮಾಡಲಿಲ್ಲ.ರಾವ್ ಅವರ ಮೇಲೆ ಸೋನಿಯಾ ಕಾಂಗ್ರೆಸ್ಸಿನ ದ್ವೇಷ ಯಾವ ಪರಿಯಿತ್ತೆಂದರೇ, ಮಾಜಿಪ್ರಧಾನಿಯವರ ಪಾರ್ಥಿವ ಶರೀರ ಅವರ ದೆಹಲಿಯ ನಿವಾಸಕ್ಕೆ ತಂದರೆ,ಅಲ್ಲಿ ವ್ಯವಸ್ಥೆಗಳೇ ಆಗಿರಲಿಲ್ಲ. ಒಂದು ಪ್ಲಾಟಫಾರ್ಮಿನಲ್ಲಿ ರಾವ ಅವರ ದೇಹವನ್ನಿಡಲಾಗಿತ್ತು. ಬಂದವರಿಗೆ ಕೂರಲಿಕ್ಕೆ ಒಂದು ಕಾರ್ಪೆಟ್ ಇಲ್ಲ,ಶಾಮಿಯಾನವಿಲ್ಲ.ಶವದ ಮೇಲೆ ಹಾಕಲು ಹೂವುಗಳಿಲ್ಲ! ಅದೆಲ್ಲವೂ ಸಾಯಲಿ ನಿಮ್ಮ ಋಣ ನಮಗೆ ಬೇಡವೆಂದು ರಾವ್ ಅವರ ಗೆಳೆಯರೇ ಸಂಜೆಯ ವೇಳೆಗೆ ವ್ಯವಸ್ಥೆಗಳನ್ನು ಮಾಡಿಕೊಂಡು ದೆಹಲಿಯಲ್ಲೇ ಅಂತಿಮ ಕಾರ್ಯಕ್ಕೆ ಸಿದ್ಧವಾಗುವಾಗ ಬಂದಿದ್ದು ಸೋನಿಯಾ ಮೇಡಂ ಆಸ್ಥಾನ ಪಂಡಿತ ಆಗಿನ ಗೃಹ ಸಚಿವ ಶಿವರಾಜ ಪಾಟೀಲ್. ಬಂದವರೇ, ರಾವ್ ಅವರ ಅಂತ್ಯ ಸಂಸ್ಕಾರ ದೆಹಲಿಯಲ್ಲಿ ನಡೆಯುವಂತಿಲ್ಲ. ನೀವು ಅವರನ್ನು ಹೈದರಾಬಾದಿಗೆ ಕರೆದುಕೊಂಡು ಹೋಗಿ .ಅಲ್ಲಿರುವ ಕಾಂಗ್ರೆಸ್ ಸರ್ಕಾರ ವ್ಯವಸ್ಥೆ ಮಾಡುತ್ತದೆ ಎನ್ನುತ್ತಾರೆ. ರಾವ್ ಕುಟುಂಬಕ್ಕೆ ಆಘಾತವಾಗುತ್ತದೆ.ಅದಾಗಲೇ ರಾವ್ ಅವರು ಆಂಧ್ರವನ್ನು ಬಿಟ್ಟು ೩೦ ವರ್ಷಗಳಾಗಿದ್ದವು. ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ,ರಕ್ಷಣಾ ಸಚಿವ,ಪ್ರಧಾನಿಯಾಗಿ ದೆಹಲಿಯೇ ಅವರ ಕರ್ಮ ಭೂಮಿಯಾಗಿತ್ತು.ಇಲ್ಲೇ ಅವರ ಅಂತಿಮ ಕ್ರಿಯೆಗಳು ನಡೆಯಬೇಕೆಂದು ರಾವ್ ಕುಟುಂಬ ಪಟ್ಟು ಹಿಡಿದ್ದಿತ್ತು. ತನ್ನ ಒಂದು ಕಾಲದ ಗುರುವಾಗಿದ್ದ ರಾವ್ ಅವರ ಅಂತಿಮ ದರ್ಶನಕ್ಕೆ ಬಂದ ಮೌನ ಮೋಹನ್ ಸಿಂಗ್ ಅವರ ಬಳಿ ಕುಟುಂಬ ಇದೇ ಬೇಡಿಕೆಯಿಟ್ಟಿತ್ತು. ಸಿಂಗ್ ಅವರ ಮನವೇನೋ ಕರಗಿತ್ತು,ಆದರೆ ಪಾಪ,ಅವರ ಹೆಸರಿಗೆ ಮಾತ್ರ ಪ್ರಧಾನಿ ರಿಮೋಟ್ ಕಂಟ್ರೋಲ್ನಿಂದ ಅವರಿಗೇ ರೆಡ್ ಸಿಗ್ನಲ್ ಸಿಕ್ಕಿ ತೆಪ್ಪಗಾದರು. ಅಂತಿಮವಾಗಿ ಆಗಿನ ಆಂಧ್ರ ಪ್ರಧಾನಿ ವೈ ಎಸ್ ರಾಜಶೇಖರರೆಡ್ಡಿಯ ಒತ್ತಡದಿಂದ ಹೈದರಾಬಾದಿನಲ್ಲಿ ರಾವ್ ಅವರ ಅಂತಿಮ ಯಾತ್ರೆ ನಡೆಸಲಾಯಿತು. ಸರಿ ಹೈದರಾಬಾದಿನಲ್ಲೇ ಶವ ಸಂಸ್ಕಾರವಾಗಲಿ . ಅವರ ಹೆಸರಿನ ಸ್ಮಾರಕವನ್ನಾದರೂ ದೆಹಲಿಯಲ್ಲೇ ಮಾಡಿಕೊಡಿ ಎಂದು ಮತ್ತದೇ ಮೌನ ಮೋಹನರ ಮನೆ ಬಾಗಿಲು ತಟ್ಟಿತ್ತು ರಾವ್ ಕುಟುಂಬ. ಆಗಲಿ ಎಂದು ತಲೆಯಾಡಿಸಿದರು ಮೌನಿ ಬಾಬಾ.ತಲೆ ಅಲ್ಲಾಡಿದ್ದು ಬಿಟ್ಟರೆ ಮತ್ತೇನೂ ಆಗಲಿಲ್ಲ.ಸೋನಿಯಾ ನೇತೃತ್ವದ ಕಾಂಗ್ರೆಸ್ ಪಕ್ಷದ ರಾವ್ ದ್ವೇಷದ ಮತ್ತೊಂದು ಮುಖ ಅನಾವರಣವಾಗಿದ್ದು ಅವರ ಪಾರ್ಥಿವ ಶರೀರವನ್ನು ಕಾಂಗ್ರೆಸ್ ಕೇಂದ್ರ ಕಚೇರಿಯೊಳಕ್ಕೂ ಬಿಡದೇ ಅವಮಾನಿಸಿದ್ದರಲ್ಲಿ ಗೊತ್ತಾಗುತ್ತದೆ. ಕಾಂಗ್ರೆಸ್ ಕಚೇರಿಯಲ್ಲೆ ದೊಡ್ಡ ದೊಡ್ಡ ನಾಯಕರೂ ಇದ್ದರು,ಅವರ್ಯಾರು ಕಮಕ್ ಕಿಮಕ್ ಎನ್ನುವಂತೇ ಇರಲಿಲ್ಲ. ಗೇಟಿನ ಕೀಲಿ ತೆಗೆಸುವ ಆರ್ಡರ್ ಕೊಡಬಲ್ಲ ತಾಕತ್ತಿದ್ದವಳು ಆ ಸೂಚನೆ ಕೊಡಲಿಲ್ಲ ಎಂದಿತ್ತು ರಾವ್ ಕುಟುಂಬ. ಕಡೆಗೂ ರಾವ್ ಅವರ ಸ್ಮಾರಕ ನಿರ್ಮಾಣ ಮಾಡಲು ನರೇಂದ್ರ ಮೋದಿಯವರ ಸರ್ಕಾರವೇ ಬರಬೇಕಾಯಿತು. ಅವರು ತೀರಿಕೊಂಡ ಹತ್ತು ವರ್ಷಗಳ ನಂತರ ಅದು ಸ್ಥಾಪನೆಯಾಯಿತು. ಕಡೆಗೂ ಆಧುನಿಕ ಭಾರತದ ನಿರ್ಮಾತೃಗಳಲ್ಲಿ ಒಬ್ಬರಾದ ರಾವ್ ಅವರ ಹೆಸರು ಹೈದರಾಬಾದಿನಿಂದ ಮತ್ತೆ ದೆಹಲಿ ತಲುಪಿಕೊಂಡಿತ್ತು.

ವಾಜಪೇಯಿಯವರು ಕೊನೆಯುಸಿರೆಳೆದಾಗ ಅವರ ಹಲವು ವಿಡಿಯೋಗಳು ಓಡಾಡಿದವು. ಅವುಗಳಲ್ಲಿ ಮುಖ್ಯವಾದದ್ದು,ಸಂಸತ್ತಿನಲ್ಲಿ ನಿಂತು “ಪಕ್ಷಗಳು ಸೃಷ್ಟಿಯಾಗುತ್ತವೆ, ಒಡೆಯುತ್ತವೆ.ಸರ್ಕಾರಗಳು ಬರುತ್ತವೆ ಹೋಗುತ್ತವೆ. ಆದರೆ,ಈ ದೇಶವೆನ್ನುವುದು ಯಾವತ್ತಿಗೂ ಸುಭದ್ರವಾಗಿರಬೇಕು” ಎನ್ನುವ ಭಾಷಣದ ತುಣುಕನ್ನು ನಾವು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕು. ಅಂದು ವಾಜಪೇಯಿಯವರು ಹೇಳಿದ್ದನ್ನೇ ಸಂಸತ್ತಿನಲ್ಲಿ ಮೋದಿಯವರು ಹೇಳಿದ್ದಾರೆ. ವಾಜಪೇಯಿಯವರ ಭಾಷಣದ ರೀತಿಯಲ್ಲೇ ಬದುಕಿದವರು ಪಿವಿ ನರಸಿಂಹರಾವ್. ೧೯೯೬ರ ಚುನಾವಯನ್ನು ರಾವ್ ಅವರು ಸೋತು ವಾಜಪೇಯಿಯವರು ಪ್ರಧಾನಿಯಾದಾಗ, ಅವರ ಕೈಗೆ ಚೀಟಿಯೊಂದನ್ನು ಕೊಟ್ಟ ರಾವ್, ಸಾಮಗ್ರಿ ತಯಾರಿದೆ,ಉಡಾಯಿಸುವುದಷ್ಟೇ ಬಾಕಿ ಎನ್ನುವ ಅರ್ಥದ ಒಕ್ಕಣೆ ಬರೆದಿದ್ದರು. ಪರಮಾಣು ಪರೀಕ್ಷೆಗೆ ಭಾರತ ಸಿದ್ಧವಾಗಿದೆ ಎನ್ನುವ ಸಂದೇಶವದು. ಇವತ್ತಿಗೆ ಭಾರತವನ್ನು ಪರಮಾಣು ಶಕ್ತಿಯನ್ನಾಗಿ ಹೊಮ್ಮಿಸಿದ ಕೀರ್ತಿಯನ್ನು ನಾವು ವಾಜಪೇಯಿಯವರಿಗೆ ನೀಡುತ್ತೇವೆ. No Doubt! ಅದು ಅವರಿಗೇ ಸಲ್ಲಬೇಕಾದ್ದು,ಆದರೆ ಆ ಪರಮಾಣು ಎಂಬ ರಿಲೇ ಓಟದ ಬ್ಯಾಟನ್ ಅನ್ನು ವಾಜಪೇಯಿಯವರಿಗೆ ಕೊಟ್ಟ ರಾವ್ ಅವರನ್ನು ನೆನಯಬೇಕು.

ತನ್ನ ಸಂಪುಟ ಸಹುದ್ಯೋಗಿಗಳ ಮೂಲಕವೇ ಅಲ್ಲಿಲ್ಲಿ ಮಾಹಿತಿ ಸೋರಿಕೆಯಾದೀತೆಂದು ಅತ್ಯಂತ ರಹಸ್ಯವಾಗಿ ರಾವ್ ಅವರ ಪರಮಾಣು ಪರೀಕ್ಷೆಗೆ ವಿಜ್ಞಾನಿಗಳ ತಂಡವನ್ನು ಕೆಲಸಕ್ಕೆ ಹಚ್ಚಿದ್ದರು. ೧೯೯೬ರ ಡಿಸೇಂಬರ್ ವೇಳೆಗೆ ಪರೀಕ್ಷೆ ನಡೆಯಲಿರುವ ಸುದ್ದಿಯನ್ನು ಅಮೆರಿಕಾ ಸ್ಯಾಟೆಲೈಟುಗಳು ಪತ್ತೆ ಮಾಡುತ್ತವೆ. ಅಮೇರಿಕಾ ಅಧ್ಯಕ್ಷ ಬಿಲ್ ಕ್ಲಿಂಟನ್ ಖುದ್ದು ರಾವ ಅವರಿಗೆ ಕರೆ ಮಾಡಿ ಒತ್ತಡ ಹಾಕುತ್ತಾನೆ. ಪರೀಕ್ಷೆ ಮಾಡುವ ಯಾವುದೇ ಕಾರ್ಯ ನಾವು ಮಾಡುತ್ತಿಲ್ಲವೆಂದು ತೇಪೆ ಹಚ್ಚುತ್ತಾರೆ ರಾವ್. ಆದರೆ ಕೆಲಸ ಮುಂದುವರಿಯುತ್ತಲೇ ಇರುತ್ತದೆ.ಪರೀಕ್ಷೆ ಮಾಡುವ ಸಮಯ ನಿಕ್ಕಿಯಾಗುವಾಗ ಕೊನೆ ಕ್ಷಣದಲ್ಲಿ ರಾವ್ ಅವರು ಹಿಂತೆಗೆಯುತ್ತಾರೆ. ಕಾರಣಗಳೇನು ಎನ್ನುವುದು ನಿಗೂಢ. ದೆಹಲಿಯ ಪತ್ರಕರ್ತರೊಬ್ಬರು ಇದರ ಬಗ್ಗೆ ಪ್ರಶ್ನಿಸಿದರೇ, ಅದರ ಕುರಿತ ರಹಸ್ಯಗಳು ನನ್ನ ಜೊತೆಯೇ ಮಣ್ಣಾಗಲಿ ಬಿಡಿ ಎನ್ನುತ್ತಾರೆ ರಾವ್. ಅಂತಹ ರಾವ್ ಅವರಿಂದ ಪರಮಾಣುವಿನ ಬ್ಯಾಟನ್ ಪಡೆದ ವಾಜಪೇಯಿ ೧೩ ದಿನಗಳಲ್ಲೇ ಅಧಿಕಾರ ಕಳೆದುಕೊಳ್ಳುತ್ತಾರೆ. ಮುಂದೆ ಪ್ರಧಾನಿಗಳಾದ ದೇವೇಗೌಡರು,ಗುಜ್ರಾಲ್ ಅವರಿಗೆ ಅಷ್ಟೊಂದು ಧೈರ್ಯ,ಪುರುಸೊತ್ತು ಇರಲಿಲ್ಲವಾಗಿ ೧೯೯೮ರಲ್ಲಿ ವಾಜಪೇಯಿಯವರು ಬರುವವರೆಗೆ ಕಾದು ಕುಳಿತಿತ್ತು. ಪರಮಾಣು ಪರೀಕ್ಷೆಯ ನಂತರ ಊಹಿಸಿದಂತೆಯೇ ಅಮೆರಿಕಾ ಮತ್ತಿತರ ದೇಶಗಳು ಭಾರತದ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರಿದವು. ಆದರೆ ಅಂತಹದ್ದೊಂದು ಪರಿಸ್ಥಿತಿಯನ್ನು ಎದುರಿಸಲು ರಾವ್ ಅಡಿಪಾಯ ಹಾಕಿಕೊಟ್ಟಿದ್ದರು ವಾಜಪೇಯಿಯವರು ಅದನ್ನು ಬೆಳೆಸಿ ನಿಲ್ಲಿಸಿದ್ದರು. ಭಾರತವೆಂಬ ಆರ್ಥಿಕ ಶಕ್ತಿಯನ್ನು ಕಡೆಗಣಿಸಲಾಗದ ಅಮೆರಿಕಾ ಕೊನೆಗೆ ನಮ್ಮೆದುರು ಮಂಡಿಯೂರಲೇ ಬೇಕಾಯಿತು.

ದೇಶಕ್ಕೋಸ್ಕರ ಇಷ್ಟೆಲ್ಲಾ ಮಾಡಿದ್ದ ರಾವ್ ಅವರನ್ನು ಕಾಂಗ್ರೆಸ್ ಅವಮಾನಿಸಿತ್ತು,ದ್ವೇಷಿಸಿತ್ತು.ವಾಜಪೇಯಿಯವರ ಅಂತಿಮ ಯಾತ್ರೆಯು ಒಂದರ್ಥದಲ್ಲಿ ನೆಹರೂ ಬಕೆಟುಗಳಿಗೆ ಕುದಿಯುವ ನೀರನ್ನು ಮೈಮೇಲೆ ಸುರಿದುಕೊಂಡ ಅನುಭವ ನೀಡಿರಬಹುದು. ಬಹುಶಃ ರಾವ್ ಅವರು ವಾಜಪೇಯಿಯವರ ಅಂತಿಮ ಯಾತ್ರೆಗೆ ಬಂದು ಈ ಬಾರಿ ಸ್ವರ್ಗದ ಬ್ಯಾಟನ್ ಅನ್ನು ಅವರಿಗೆ ಕೊಟ್ಟಿರಬಹುದು. ವೈಚಾರಿಕ ಭಿನ್ನತೆ,ರಾಜಕೀಯ ವಿರೋಧಗಳು ರಾಷ್ಟ್ರದ ಹಿತದೃಷ್ಟಿಯಲ್ಲಿ ಅಡ್ಡ ಬರಬಾರದೆನ್ನುವ ಮಹೋನ್ನತ ಹಾದಿ ತೋರಿಸಿಕೊಟ್ಟು ಹೋದ ಪಿವಿ ನರಸಿಂಹರಾವ್,ವಾಜಪೇಯಿಯವರು ಯುವ ರಾಜಕೀಯ ಪೀಳಿಗೆಗೆ ಬೆಳಕಾಗಬೇಕು.

1 ಟಿಪ್ಪಣಿ Post a comment
  1. ಎಚ್. ಎಸ್. ರಮೇಶ್
    ಜುಲೈ 2 2020

    ವಿಷಯ ನಿರೂಪಣೆ ಚೆನ್ನಾಗಿದೆ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments