ಸತ್ಯ ಕೂಡ ಚಲನಶೀಲ ಎಂದರಿವು ಮೂಡಿಸಿದ ಅನಂತಮೂರ್ತಿ
-ಡಾ ಅಶೋಕ್ ಕೆ ಆರ್.
ಜಾತ್ಯತೀತವಾಗಿಯೇ ಬದುಕಿ ಬರೆದು ಬೆಳೆದ ಅವರು ಕುಮಾರಸ್ವಾಮಿ, ದೇವೇಗೌಡರನ್ನು ಇದ್ದಕ್ಕಿದ್ದಂತೆ ಬೆಂಬಲಿಸಿಬಿಡುತ್ತಾರೆ, ಕೆಲವೇ ವರುಷಗಳಲ್ಲಿ ಜೀವನಪರ್ಯಂತ ವಿರೋಧಿಸಿಕೊಂಡೇ ಬಂದಿದ್ದ ಕಾಂಗ್ರೆಸ್ಸನ್ನು ಸಿದ್ಧರಾಮಯ್ಯನವರ ಮೇಲಿನ ನಂಬುಗೆಯಿಂದ ಗೆಲ್ಲಿಸಿ ಎಂದು ಪತ್ರಿಕಾ ಹೇಳಿಕೆ ಕೊಡುತ್ತಾರೆ. ಮೋದಿಯನ್ನು ವಿರೋಧಿಸುವ ಏಕೈಕ ಕಾರಣಕ್ಕೆ ಅದರಷ್ಟೇ ಅಪಾಯಕಾರಿ ಎಂಬ ಅರಿವಿದ್ದೂ ಕಾಂಗ್ರೆಸ್ಸಿಗೆ ಮತಹಾಕಿ ಎಂದು ಹೇಳಿಬಿಡುತ್ತಾರೆ. ಇನ್ನೊಂದೈದು ವರುಷಗಳು ಅವರು ಬದುಕಿದ್ದರೆ ಮೋದಿ ಸಂಪೂರ್ಣ ಸರಿಯಿಲ್ಲದಿದ್ದರೂ ಪರ್ಯಾಯಗಳಿಲ್ಲದ ಕಾರಣ, ಇರುವ ಪರ್ಯಾಯಗಳು ಮೋದಿಗಿಂತ ಅಪಾಯಕಾರಿಯಾಗಿರುವ ಕಾರಣ ಮೋದಿಯನ್ನೇ ಗೆಲ್ಲಿಸಿದರೆ ಒಳ್ಳೆಯದೇನೋ ಎಂದು ಹೇಳಿಕೆ ನೀಡಿದ್ದರೂ ಅನಂತಮೂರ್ತಿಯವರ ಬಗೆಗೆ ಅಚ್ಚರಿಯಾಗುತ್ತಿರಲಿಲ್ಲ. ಇದು ಅವಕಾಶವಾದಿತನ, ಸ್ವಾರ್ಥಕ್ಕಾಗಿ ಕ್ಷಣಕ್ಕೊಂದು ಬಣ್ಣ ಬದಲಿಸುವ ನೀಚತನ – ಇನ್ನು ಅನೇಕಾನೇಕ ರೀತಿಯಲ್ಲಿ ಅವರನ್ನು ಟೀಕಿಸಿದ್ದರೂ ಅವರದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳುತಿರಲಿಲ್ಲವೇನೋ. ಯಾಕೆಂದರೆ ಅನಂತಮೂರ್ತಿ (ನಾನವರನ್ನು ಅವರ ಬರಹಗಳ ಮೂಲಕ ತಿಳಿದುಕೊಂಡಂತೆ) ಇದ್ದಿದ್ದೇ ಹಾಗೆ. ಸತ್ಯವೆಂಬುದು ಅವತ್ತಿನ ಆ ಮಟ್ಟಿಗಿನ ವಾಸ್ತವವೇ ಹೊರತು ಅದು ಸರ್ವಕಾಲಿಕ ಸತ್ಯವಾಗಲು ಸಾಧ್ಯವೇ ಇಲ್ಲ ಎಂಬುದು ಅವರ ಲೇಖನಗಳನ್ನು ಓದಿದಾಗ ಅರಿವಾಗುತ್ತದೆ.
ಉಂಡವರ ತೇಗು ಉಳಿದವರ ಕೊರಳ ಉರುಲಾಗದಿರಲಿ – ಯು.ಆರ್.ಎ
ಅನಂತಮೂರ್ತಿ ಕೆಲವರಿಗೆ ಮೇಷ್ಟ್ರಾಗಿ, ಕೆಲವರಿಗೆ ರಾಜಕೀಯ ಅಭಿಪ್ರಾಯ ವ್ಯಕ್ತಪಡಿಸುವ ವ್ಯಕ್ತಿಯಾಗಿ, ಇನ್ನು ಹಲವರಿಗೆ ಚಳುವಳಿಕಾರನಾಗಿ ದಕ್ಕಿದರೆ ಬಹುತೇಕರಿಗೆ ಅವರು ದಕ್ಕಿದ್ದು ಅವರ ಬರಹಗಳ ಮೂಲಕ ಲೇಖಕರಾಗಿ. ಅವರ ಕೆಲವು ಇತ್ತೀಚಿನ ಲೇಖನಗಳನ್ನು ಓದುತ್ತಿದ್ದಾಗ ಅವರ ಹಳೆಯ ಲೇಖನಗಳಲ್ಲಿ ಇದಕ್ಕೆ ತದ್ವಿರುದ್ದವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಂತಿತ್ತಲ್ಲ ಎಂಬ ಆಲೋಚನೆ ಮೂಡಿದರೆ ಅದು ಸಮಾಜದ ಚಲನಶೀಲತೆಯ ಬಗೆಗಿನ ನಂಬುಗೆಯನ್ನು ಧೃಡಪಡಿಸುತ್ತಿತ್ತೇ ಹೊರತು ಅನಂತಮೂರ್ತಿಯವರ ಅನುಕೂಲ ಸಿದ್ಧಾಂತವನ್ನಲ್ಲ. ಒಂದು ಇಸಂಅನ್ನು ಒಪ್ಪಿಕೊಂಡವರು ಆ ಇಸಂನಲ್ಲಿ ತಪ್ಪುಗಳಿದ್ದಾಗ್ಯೂ ಅದನ್ನೇ ಅಪ್ಪಿ ಒಪ್ಪಬೇಕೆನ್ನುವವರಿಗೆ ಅನಂತಮೂರ್ತಿ ದ್ವಂದ್ವದ ಮೂರ್ತಿಯಾಗಿ ಕಂಡಿದ್ದರೆ ಅಚ್ಚರಿಪಡಬೇಕಿಲ್ಲ. ಹಳೆಯ ಅಭಿಪ್ರಾಯ ತಪ್ಪಾಗಿದ್ದರೆ ಅದನ್ನು ಒಪ್ಪುವ ಗುಣ ಎಲ್ಲರಲ್ಲೂ ಕಾಣುವುದು ಕಷ್ಟಸಾಧ್ಯ. ಮತ್ತಷ್ಟು ಓದು 
ಸಾಮಾನ್ಯನ ಕಣ್ಣಲ್ಲಿ ಕರಾವಳಿ ಕೋಮುವಾದ
-ಪ್ರಸಾದ್ ಗಣಪತಿ
ಪದೇ ಪದೇ ಕರಾವಳಿಯಲ್ಲಿ ಗಲಭೆಯಾದಾಗ ಕರಾವಳಿ ಕೋಮುವಾದ, ಕರಾವಳಿ ತಾಲಿಬಾನ್ ಎನ್ನುವ ಮಾತುಗಳು ಕೇಳಿ ಬರುತ್ತವೆ. ಪಕ್ಷವೊಂದರ ಆಡಳಿತಾವಧಿಯಲ್ಲಿ ನಡೆದ ಒಂದು ಸಮುದಾಯದ ಓಲೈಕೆ ನೀತಿಗಳು, ಹಾಗೂ ಒಂದು ಸಮುದಾಯದ ಮೇಲಿನ ಹಲ್ಲೆಗಳ ಬಗ್ಗೆ ತಳೆದ ಮೃದು ನೀತಿಗಳು ಈ ಅಸಹನೆ ಇದರ ಬೆನ್ನಿಗಿದ್ದಾವೆ ಎಂದು ಯಾರು ಹೇಳುವುದಿಲ್ಲ. ಪುತ್ತೂರಿನ ಹಿಂದೂ ಯುವತಿ ಸೌಮ್ಯ ಭಟ್ ಳನ್ನು ಇರಿದು ಕೊಂದಿದ್ದು, ಕಾಟಿಪಳ್ಳದಲ್ಲಿ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ, ಬಳ್ಕುಂಜೆ ರೇಪ್ ಮತ್ತು ಆತ್ಮಹತ್ಯೆ, ಲವ್ ಜಿಹಾದ್ ಮತ್ತು ಸಾಮಾಜಿಕ ತಾಣಗಳಲ್ಲಿ ಬೆತ್ತಲೆ ಚಿತ್ರಗಳ ( ಹಿಂದೂ ಯುವತಿಯರ ಚಿತ್ರ) ಈ ರೀತಿಯ ಪ್ರಕರಣಗಳಾದಗ ಸುಮ್ಮನಿರುವ ಬುದ್ಧಿ ಜೀವಿ ಬಳಗ, ಇನ್ನೊಂದು ಸಮುದಾಯದ ಮೇಲೆ ಹಲ್ಲೆ ನಡೆದಾಗ ಮಾತನಾಡುವುದು, ದೂರದೂರಲ್ಲಿ ಕುಳಿತು ಒಂದು ಪ್ರದೇಶದ ಜನರನ್ನು ಕೋಮುವಾದಿಗಳೆನ್ನುವುದು ಸತ್ಯಕ್ಕೆ ಅಪಚಾರವೆಸಗುವ ಕೆಲಸ. ಹಿಂದೆ ರೆಸಾರ್ಟ್ ಅಟ್ಯಾಕ್ ಆದಾಗ ಬರೆದ ಒಂದು ಲೇಖನದಲ್ಲಿ ನನ್ನ ಗ್ರಹಿಕೆಯನ್ನು ಬರೆದಿದ್ದೇನೆ.
ದೃಶ್ಯ ಮಾಧ್ಯಮದಲ್ಲಿ ಒಂದೇ ಸವನೆ ಮಂಗಳೂರಿನ ಪಡೀಲ್‌ನಲ್ಲಿ ನಡೆದ ಯುವಕ- ಯುವತಿಯರ ಮೇಲಿನ ಹಲ್ಲೆಯನ್ನು ನೋಡುತ್ತಾ ಯಾವುದು ಸರಿ ? ಯಾವುದು ತಪ್ಪು ? ಎಂದು ನಿರ್ಧರಿಸಲಾಗದ ಸ್ಥಿತಿಯಲ್ಲಿ ಜನರು ಇರಬಹುದುದಾದ ಈ ಹೊತ್ತಿನಲ್ಲಿ ನನ್ನ ಅಭಿಪ್ರಾಯ ಬರೆಯುತ್ತಿರುವೆ. ಸಾಮಾನ್ಯವಾಗಿ ಕೋಮುವಾದ, ಧರ್ಮ ರಕ್ಷಣೆಯ ಕೃತ್ಯವೆಂದು ಹೇಳಲ್ಪಡುತ್ತಿರುವ ಇವು ಇನ್ನೊಂದು ಮಗ್ಗುಲಲ್ಲಿ ನೋಡಿದರೆ ಸಾಂಸ್ಕೃತಿಕ,ಸಾಮಾಜಿಕ, ಸಂಘರ್ಷವಾಗಿ ಗೋಚರಿಸುತ್ತವೆ. ಸಾಮಾನ್ಯವಾಗಿ ಇಲ್ಲಿ ಏನು ನಡೆಯುತ್ತಿದೆ ಎಂದು ಇತರೆ ಪ್ರದೇಶದಲ್ಲಿ ಕುಳಿತವರಿಗೆ ಅರ್ಥವಾಗುವುದು ಕೊಂಚ ಕಷ್ಟ.
ಸಾಹಿತ್ಯಕ್ಷೇತ್ರದ ಒಳಹೊರಗು-6
– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ,ತುಮಕೂರು ವಿಶ್ವವಿದ್ಯಾನಿಲಯ
ಸಾಹಿತ್ಯ ಕ್ಷೇತ್ರದ ಒಳಹೊರಗು – 1
ಸಾಹಿತ್ಯ ಕ್ಷೇತ್ರದ ಒಳಹೊರಗು – 2
ಸಾಹಿತ್ಯ ಕ್ಷೇತ್ರದ ಒಳಹೊರಗು – 3
ಸಾಹಿತ್ಯ ಕ್ಷೇತ್ರದ ಒಳಹೊರಗು – 4
ನಾವಿಂದು ಬಹುಶಿಸ್ತು, ಬಹುಜ್ಞಾನದ ಯುಗದಲ್ಲಿದ್ದೇವೆ. ಅದರಲ್ಲೂ ಇದು ವಿಶೇಷಜ್ಞತೆಯ ಕಾಲ. ಎಲ್ಲದಕ್ಕೂ ಸ್ಪೆಶಲೈಸೇಶನ್ ಇರಬೇಕೆಂದು ಬಯಸುತ್ತೇವೆ. ಉಳಿದೆಲ್ಲ ಕ್ಷೇತ್ರಗಳಂತೆ ಸಾಹಿತ್ಯವನ್ನೂ ಇದು ಆವರಿಸಿದೆ. ಇಂಥ ವಿಶೇಷಜ್ಞತೆಯಲ್ಲಿ ಲಾಭವೂ ಇದೆ, ನಷ್ಟವೂ ಇದೆ. ಆಧುನಿಕ ಶಿಕ್ಷಣ ವ್ಯವಸ್ಥೆ ಬ್ರಿಟಿಷರ ಬಳುವಳಿಯಾಗಿ ನಮಗೆ ಬರುವವರೆಗೂ ಎಲ್ಲ ಜ್ಞಾನವನ್ನೂ ತತ್ತ್ವಶಾಸ್ತ್ರದ ಅಡಿಯಲ್ಲೇ ಅಧ್ಯಯನ ಮಾಡಲಾಗುತ್ತಿತ್ತು. ಆಗ ಗಣಿತ, ಸಾಹಿತ್ಯ, ಇತಿಹಾಸ, ಭಾಷೆ ಎಂದು ಬೇರ್ಪಡಿಸಿ ನೋಡುವ ಕ್ರಮ ಇರಲಿಲ್ಲ. ಇದರಿಂದ ಭಿನ್ನ ಜ್ಞಾನಗಳು ಒಂದೇ ಮರದ ವಿವಿಧ ಶಾಖೆಗಳಂತೆ ಪರಸ್ಪರ ಸಂಬಂಧವಿಟ್ಟುಕೊಳ್ಳಲು ಹಾಗೂ ಆ ಮೂಲಕ ಎಲ್ಲ ವಿಷಯಗಳಲ್ಲೂ ಮಾಹಿತಿ ಸಮವಾಗಿಯೂ ಸಮಗ್ರವಾಗಿಯೂ ಇರಲು ಅನುಕೂಲವಾಗುತ್ತಿತ್ತು. ಉದಾಹರಣೆಗೆ ಸಾಹಿತ್ಯ ಅಧ್ಯಯನದಲ್ಲಿ ಪ್ರಾಚೀನ ಕವಿಯೊಬ್ಬನ ಇತಿವೃತ್ತ ಹೇಳುವಾಗ ಅದಕ್ಕೆ ಇತಿಹಾಸ, ಹಸ್ತಪ್ರತಿಶಾಸ್ತ್ರ ಹಾಗೂ ಶಾಸನಶಾಸ್ತ್ರಗಳ ನೆರವು ಬೇಕೇ ಬೇಕು. ಸಾಹಿತ್ಯದ ವಿದ್ಯಾರ್ಥಿಗೆ ಈಗ ಬೇರೆಯಾಗಿರುವ ಈ ಎಲ್ಲ ಶಾಸ್ತ್ರಗಳ ಅರಿವೂ ಅಪೇಕ್ಷಣೀಯ. ಈಗೀಗ ಏನಾಗುತ್ತಿದೆ ನೋಡೋಣ. ವಿಶ್ವವಿದ್ಯಾನಿಲಯವೊಂದರಲ್ಲಿ ಇತಿಹಾಸ ವಿಭಾಗದ ಸಮ್ಮೇಳನವೋ ವಿಚಾರ ಸಂಕಿರಣವೋ ಅಥವಾ ಗೋಷ್ಠಿಯೋ ನಡೆಯುತ್ತದೆ. ಅದರಲ್ಲಿ ಇತಿಹಾಸ ವಿಭಾಗದವರದ್ದೇ ಮಾತು-ಚರ್ಚೆ. ಸಾಹಿತ್ಯ, ಶಾಸನಶಾಸ್ತ್ರ ವಿಭಾಗದವರು ಬೇಕಿದ್ದರೆ ತಾವೇ ಅಂಥದ್ದೊಂದು ಸಮ್ಮೇಳನ ಆಯೋಜಿಸಿಕೊಳ್ಳಬೇಕು. ತಮ್ಮ ಸಮ್ಮೇಳನಕ್ಕೆ ಬರಬೇಡಿ ಎಂದು ಇತಿಹಾಸದವರೇನೂ ಹೇಳುವುದಿಲ್ಲ. ಹಾಗಾಗಿ ಆ ಸಮ್ಮೇಳನದಲ್ಲಿ ಪ್ರೇಕ್ಷಕರಾಗಿ ಕುಳಿತೆದ್ದುಬರಬಹುದು. ವಿಜಯನಗರ ಅರಸರ ಕುರಿತ ಸಮ್ಮೇಳನವನ್ನು ಇತಿಹಾಸ ವಿಭಾಗ ಆಯೋಜಿಸಿದರೆ ಅಲ್ಲಿ ಶಾಸನತಜ್ಞರು, ಸಾಹಿತಿಗಳು ಇರಬೇಕಾದುದು ಅಗತ್ಯ. ಇಲ್ಲವಾದಲ್ಲಿ ಶಾಸನದವರು ತಮ್ಮ ಪಾಡಿಗೆ ಶಾಸನ ಓದಿ ಪಠ್ಯ ಬರೆದಿಡುವುದು, ಸಾಹಿತ್ಯದವರು ವಿಜಯನಗರ ಕಾಲದ ಸಾಹಿತ್ಯವನ್ನು ಸುಮ್ಮನೇ ಓದಿ ಇಡುವುದು, ಇತಿಹಾಸದವರು ಲಭ್ಯ ಐತಿಹಾಸಿಕ ದಾಖಲೆಗಳ ಪ್ರಕಾರ ತಮ್ಮ ಪಾಡಿಗೆ ತಾವು ಆ ಕಾಲದ ವಿಷಯವನ್ನು ದಾಖಲಿಸುವುದು ನಡೆದರೆ ಒಂದೊಂದು ವಿಷಯದಲ್ಲಿ ಒಂದೊಂದು ಮಾಹಿತಿಯ ಜೊತೆಗೆ ಅಸಮಗ್ರತೆಗೆ ದಾರಿಯಾಗಬಹುದು.
“ಎಲ್ಲರ” ಕಲ್ಪನೆಗೆ ಎಟುಕದ ಕನ್ನಡ ಭಾಷೆಯ ಆಯಾಮಗಳು
– ವಿನಾಯಕ ಹಂಪಿಹೊಳಿ
ಭಾಷೆಗಳನ್ನು ಆರ್ಯ ಭಾಷೆ, ದ್ರಾವಿಡ ಭಾಷೆ ಎಂದು ವಿಂಗಡಿಸುವದು ತಪ್ಪೇ. ಯಾಕೆಂದರೆ ಆರ್ಯ ಮತ್ತು ದ್ರಾವಿಡ ಎಂಬ ಕಲ್ಪನೆಯೇ ತಪ್ಪು. ಇರಲಿ. ಬೇಕಾದರೆ ಉತ್ತರದ ಭಾಷೆಗಳು, ದಕ್ಷಿಣದ ಭಾಷೆಗಳು ಎಂದು ಬೇಕಾದರೆ ವಿಂಗಡಿಸಿಕೊಳ್ಳಬಹುದು. ಕನ್ನಡ ವಿಕಾಸ ೫-೬ ನೇ ಶತಮಾನಗಳ ನಂತರ ಅತಿ ಶೀಘ್ರವಾಗಿ ಆಯಿತು. ೧೫ನೇ ಶತಮಾನದ ಹೊತ್ತಿಗೆ ಕನ್ನಡ ಎಂಬ ಭಾಷೆ ಒಂದು ಪ್ರಾಂತ್ಯದ ಭಾಷೆಯಾಗಿ ರೂಪುಗೊಂಡಿತು. ಇದಿಷ್ಟು “ಎಲ್ಲರ” ಬಳಿ ಇರುವ ಮಾಹಿತಿ. ಆದರೆ ಕನ್ನಡ ಭಾಷೆ ಯಾವ ರಾಜಕೀಯ ಮತ್ತು ಇತಿಹಾಸಗಳ ಅಡಿಯಲ್ಲಿ ಬೆಳೆಯಿತು, ಯಾವ ಕಲ್ಪನೆಯೊಂದಿಗೆ ಅದು ವಿಕಾಸವಾಯಿತು, ಬೇರೆ ಭಾಷೆಗಳಲ್ಲಿ ಕಂಡು ಬರದ ಹೊಸ ಪ್ರಯೋಗಗಳು ಕನ್ನಡ ವ್ಯಾಕರಣಗಳಲ್ಲಿ ಯಾಕಾಯಿತು, ಅದರ ಹಿಂದಿನ ಉದ್ದೇಶವೇನು ಎಂಬುದನ್ನು ಅರಿತುಕೊಳ್ಳಬೇಕು.
ಯಾವ ರೀತಿ ಹಿಂದೂ ಎಂಬುದು ಧರ್ಮವಾದರೂ ಕೂಡ, ಉಳಿದ ಧರ್ಮಗಳನ್ನು ಒಳಗೊಳ್ಳುವ ತಾತ್ವಿಕವಾಗಿ ಎಲ್ಲ ಮತಗಳನ್ನು ಮೀರಿ ನಿಲ್ಲುವ ವ್ಯವಸ್ಥೆಯೋ, ಅಂತೆಯೇ ಕನ್ನಡ ಕೂಡ ಭಾಷೆಯಷ್ಟೇ ಅಲ್ಲ, ಉಳಿದ ಭಾಷೆಗಳ ಅಂಶಗಳನ್ನು ಒಳಗೊಳ್ಳುವ, ಕಟ್ಟುಪಾಡುಗಳನ್ನು ಮೀರಿ ನಿಲ್ಲುವ ಸಾಮಾಜಿಕ ಭಾಷೆ ಎನ್ನುವದು ನನ್ನ ಮತ. ಕನ್ನಡ ಭಾಷೆಯ ಮೂಲ ಉದ್ದೇಶ ಉತ್ತರ ಹಾಗೂ ದಕ್ಷಿಣದ ಜನಗಳ ನಡುವೆ ಸಂವಹನವಾಹಿನಿಯಾಗಿ ನಿಂತು ಒಂದು ರಾಷ್ಟ್ರವನ್ನು ಕಟ್ಟುವದು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಇದಕ್ಕೆ ಕಾರಣಗಳನ್ನೂ ಕೊಡುತ್ತೇನೆ.
ಉದಾಹರಣೆಗೆ ವ್ಯಾಕರಣದಲ್ಲಿ ಬರುವ ಪ್ರತ್ಯಯಗಳನ್ನೇ ತೆಗೆದುಕೊಳ್ಳಿ. ಕನ್ನಡ ಸಂಸ್ಕೃತದ ಪ್ರತ್ಯಗಳನ್ನು ಮತ್ತು ದಕ್ಷಿಣ ಭಾಷೆಗಳ ಪ್ರತ್ಯಯಗಳನ್ನು ಬೇರೆ ಬೇರೆ ಶಬ್ದಗಳೊಂದಿಗೆ ಸರಾಗವಾಗಿ ಸೇರಿಸಿಕೊಳ್ಳಬಲ್ಲದು. -ಇಸು ಪ್ರತ್ಯಯ ಕನ್ನಡದ್ದು ಆದರೆ ಇದರ ವ್ಯಾಪ್ತಿ ಕನ್ನಡ ಶಬ್ದಗಳನ್ನು ಮೀರಿ ಹೋಗಬಲ್ಲದು, ಕುಣಿ, ನಡೆ ಮುಂತಾದ ಕನ್ನಡ ಶಬ್ದಗಳೊಂದಿಗೆ ಸೇರಿ ಕುಣಿಸು, ನಡೆಸು ಎಂದಾಗುವದು. ಅಂತೆಯೇ ಸಂಸ್ಕೃತ ಶಬ್ದಗಳೊಡನೆಯೋ ಬೆರೆಯಬಹುದು. ನಟ್+ಇಸು=ನಟಿಸು, ವರ್ಣ್+ಇಸು=ವರ್ಣಿಸು ಇತ್ಯಾದಿ. ಇತ್ತೀಚೆಗೆ ಇಂಗ್ಲೀಷ ಕೂಡ ಸೇರಿಕೊಂಡಿದೆ, ಕ್ಲಿಕ್ಕಿಸು, ಗೂಗಲಿಸು ಇತ್ಯಾದಿ. ಹಾಗೆಯೇ ಸಂಸ್ಕೃತದ ಪ್ರತ್ಯಯಗಳನ್ನು ಕನ್ನಡದ ಶಬ್ದಗಳೊಂದಿಗೂ ಬೆರೆಸಿಕೊಳ್ಳಬಹುದು. ಉದಾ -ತನ, ಮತ್ತು -ವಂತ ಗಳು ಸಂಸ್ಕೃತದ್ದು ಬುದ್ಧಿವಂತ, ಕಪಟತನ ಇತ್ಯಾದಿ. ಕನ್ನಡ ಶಬ್ದಗಳು ಇವುಗಳ ಜೊತೆಗೂ ಬೆರೆಯಬಲ್ಲದು. ಗೆಳೆತನ, ಬಡತನ, ಹಣವಂತ ಇತ್ಯಾದಿ. ಇಲ್ಲಿ ಗೆಳೆ, ಬಡ, ಹಣ ಗಳು ಇಲ್ಲಿಯ ಶಬ್ದಗಳು.
ಸಾಹಿತ್ಯ ಕ್ಷೇತ್ರದ ಒಳಹೊರಗು – 5
– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ,ತುಮಕೂರು ವಿಶ್ವವಿದ್ಯಾನಿಲಯ
ಸಾಹಿತ್ಯ ಕ್ಷೇತ್ರದ ಒಳಹೊರಗು – 1
ಸಾಹಿತ್ಯ ಕ್ಷೇತ್ರದ ಒಳಹೊರಗು – 2
ಸಾಹಿತ್ಯ ಕ್ಷೇತ್ರದ ಒಳಹೊರಗು – 3
ಸಾಹಿತ್ಯ ಕ್ಷೇತ್ರದ ಒಳಹೊರಗು – 4
ಏನ ಬಂದಿರಿ, ಹದುಳವಿದ್ದಿರೆ ಎಂದೊಡೆ ನಿಮ್ಮ ಮೈಸಿರಿ ಹಾರಿ ಹೋಹುದೆ? ಎಂದು ಬಸವಣ್ಣನವರು ಅಂದೇ ಕೇಳಿದ್ದರು. ನಮ್ಮ ಜನರ ವರ್ತನೆಯನ್ನು ಅವರು ಚೆನ್ನಾಗಿ ಬಲ್ಲವರಾಗಿದ್ದರು ಎನಿಸುತ್ತದೆ. ಮನೆಗೆ ಬಂದವರನ್ನು ಉಪಚರಿಸುವ ಸಂದರ್ಭದಲ್ಲಿ ಅವರು ಹೇಳಿದ ಜನರ ಸಣ್ಣತನದ ವರ್ತನೆ ಕುರಿತ ಈ ಮಾತಿನ ಆಶಯವನ್ನು ಬೇರೆ ಬೇರೆ ಕಡೆಗಳಲ್ಲೂ ಅನ್ವಯಿಸಬಹುದು. ಸಾಹಿತ್ಯ ಕ್ಷೇತ್ರದಲ್ಲಂತೂ ಇದಕ್ಕೆ ಮತ್ತೆ ಮತ್ತೆ ನಿದರ್ಶನಗಳು ದೊರೆಯುತ್ತವೆ. ಒಂದು ಘಟನೆ. ಸಮ್ಮೇಳನವೊಂದರಲ್ಲಿ ಹೊಸಬರೊಬ್ಬರು ಪ್ರಬಂಧ ಮಂಡಿಸಿದ್ದರು. ಉತ್ತಮ ಪ್ರಬಂಧವೆಂದು ಆ ಗೋಷ್ಠಿಯ ಅಧ್ಯಕ್ಷರೊಬ್ಬರು ಸಕಾರಣವಾಗಿ ವಿಶ್ಲೇಷಿಸಿ, ಅಭಿನಂದಿಸಿದರು. ಅದೇ ಪ್ರಬಂಧಕಾರರೊಂದಿಗೆ ಮತ್ತೆ ಮೂವರು ಪ್ರಬಂಧ ಮಂಡಿಸಿದ್ದರು. ಅವುಗಳಲ್ಲಿ ಒಂದು ಪ್ರಬಂಧ ನೀಡಲಾದ ವಿಷಯಕ್ಕೆ ಸಂಬಂಧವೇ ಇಲ್ಲದಂತಿದ್ದರೆ, ಮತ್ತೊಬ್ಬರು ಏನನ್ನೂ ಬರೆದುಕೊಂಡು ಬಂದಿರದೇ ಆಶುಕವಿತ್ವದಂತೆ ಅಲ್ಲೇ ತೋಚಿದ್ದನ್ನು ಒಂದಿಷ್ಟು ಹೇಳಿದ್ದರು. ಇನ್ನೊಬ್ಬರು ತಕ್ಕಮಟ್ಟಿಗೆ ವಿಷಯಕ್ಕೆ ನ್ಯಾಯ ಒದಗಿಸಿದ್ದರೆಂದು ಅಧ್ಯಕ್ಷತೆ ವಹಿಸಿದ್ದ ಹಿರಿಯರು ಹೇಳಿ ಅಂಥ ಗಂಭೀರ ಸಮ್ಮೇಳನಗಳಲ್ಲಿ ವಿಷಯ ಮಂಡನೆ ಹೇಗಿರಬೇಕೆಂದೂ ತಿಳಿಸಿದರು. ವೇದಿಕೆಯಿಂದ ಇಳಿದ ಮೇಲೆ ಉಳಿದ ಪ್ರಬಂಧಕಾರರು ಉತ್ತಮ ಪ್ರಬಂಧ ಮಂಡಿಸಿದ್ದ ವ್ಯಕ್ತಿಯನ್ನು ಅಭಿನಂದಿಸುವುದಿರಲಿ, ಸೌಜನ್ಯಕ್ಕೂ ಮಾತನಾಡಿಸದೇ ಆಜನ್ಮ ವೈರಿಯಂತೆ ಕಂಡು ಮುಖ ತಿರುಗಿಸಿಕೊಂಡು ಹೊರಟೇಹೋದರಂತೆ. ಅಧ್ಯಕ್ಷತೆ ವಹಿಸಿದ್ದವರಿಗೂ ಉತ್ತಮ ಪ್ರಬಂಧ ಮಂಡಿಸಿದ್ದವರಿಗೂ ಉಳಿದ ಪ್ರಬಂಧಕಾರರಿಗೂ ಮೊದಲು ಪರಿಚಯವೇ ಇರಲಿಲ್ಲ. ವೇದಿಕೆಯಲ್ಲೇ ಅವರೆಲ್ಲ ಮೊದಲಬಾರಿ ಮುಖ ನೋಡಿಕೊಂಡಿದ್ದು. ವಸ್ತುನಿಷ್ಠವಾಗಿ ಅಧ್ಯಕ್ಷರು ಹೇಳಿದ್ದರು ಅಷ್ಟೆ. ಆದರೆ ಅನಂತರ ಹೊರಗೆ ಖಾಸಗಿಯಾಗಿ ಉಳಿದ ಪ್ರಬಂಧಕಾರರು ಮಾತನಾಡುತ್ತ ಆ ಪ್ರಬಂಧ ಚೆನ್ನಾಗಿತ್ತು ಕಣ್ರೀ, ಅಲ್ಲೇ ಅವರಿಗೆ ಹೇಳಿದ್ದರೆ ಸುಮ್ಮನೇ ಅವರಿಗೆ ಸ್ಕೋಪು ಕೊಟ್ಟಂತಾಗುತ್ತದೆ ಎಂದು ಹೇಳಿಲ್ಲ ಅಷ್ಟೆ ಅಂದರಂತೆ! ಅದೇನೇ ಇರಲಿ. ಅಧ್ಯಕ್ಷತೆ ವಹಿಸಿದವರು ಹೇಳಿದ ಮಾತಿನಲ್ಲಿ ಹುರುಳಿರಲಿಲ್ಲ, ಅದೊಂದು ಕೆಟ್ಟ ಪ್ರಬಂಧವಾಗಿತ್ತು ಎಂದಾದರೆ ಅದರ ಚರ್ಚೆಗೆ ಅವಕಾಶವಿತ್ತು. ಆ ಕುರಿತು ಪ್ರಶ್ನೆಯೇ ಇರದಿದ್ದರೆ ಉತ್ತಮ ಪ್ರಬಂಧ ಮಂಡಿಸಿದವರನ್ನು ಅಭಿನಂದಿಸುವ ಔದಾರ್ಯವಾದರೂ ಬೇಡವೇ ಎಂಬುದು ಇಲ್ಲಿರುವ ಪ್ರಶ್ನೆ.
ಕನ್ನಡದ ಅಳಿವು–ಉಳಿವು ಮತ್ತು ಭಾಷಾ ಮಾಧ್ಯಮ: ಕೆಲವು ಟಿಪ್ಪಣಿಗಳು
– ಎಂ.ಎಸ್. ಚೈತ್ರ, ನಿರ್ದೇಶಕರು, “ಆರೋಹಿ” ಸಂಶೋಧನಾ ಸಂಸ್ಥೆ, ಬೆಂಗಳೂರು
ಕಳೆದ ಒಂದು ತಿಂಗಳಿನಿಂದ ಭಾರತದ ಸುಪ್ರೀಂ ಕೋರ್ಟ್‍ನ ತೀರ್ಪೊಂದು ಕರ್ನಾಟಕದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ, ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕುರಿತು ನೀಡಿದ ತೀರ್ಪಿನ ಕಾರಣಕ್ಕಾಗಿ ಎಲ್ಲ ಹುಟ್ಟು ಹೋರಾಟಗಾರರು, ಸಾಹಿತಿಗಳು, ಬುದ್ಧಿ ಜೀವಿಗಳು ದಿಢೀರನೇ ರಾಜ್ಯದಲ್ಲಿ ಕನ್ನಡದ ಡಿಂಡಿಮ ಬಾರಿಸಲು ಪ್ರಾರಂಭಿಸಿದ್ದಾರೆ. ಈ ಚರ್ಚೆಯ ಸಂದರ್ಭದಲ್ಲಿ ಕನ್ನಡದ ಕೆಲವು ಚಿಂತಕರು ಆವೇಶ ಪೂರಿತ ಹೋರಾಟದ ಹಾದಿಯನ್ನು ಬಿಟ್ಟು, ಸುಪ್ರೀಂ ಕೋರ್ಟಿನ ತೀರ್ಪನ್ನು ಗೌರವಿಸಿ, ಕನ್ನಡದ ಬಗ್ಗೆ ಗಂಭೀರವಾಗಿ ಯೋಚಿಸಲು ಇದು ಸರಿಯಾದ ಸಮಯವೆಂದು ವಾದಿಸುತ್ತಿದ್ದಾರೆ. ನಮ್ಮ ಹಿರಿಯರ-ಹೋರಾಟಗಾರರ ಆದೇಶ-ಅಬ್ಬರಗಳಿಗೆ ಮಣಿದ ಕೆಲವರು ಸುಮ್ಮನಾದರೆ, ಮತ್ತೆ ಕೆಲವರ ಪಿಸು ಮಾತುಗಳು ಯಾರಿಗೂ ಕೇಳಿಸುತ್ತಿಲ್ಲ. ಈ ಎಲ್ಲ ಹಿನ್ನಲೆಯಲ್ಲಿ ಸ್ವಲ್ಪ ಕ್ರಮಬದ್ಧವಾಗಿ, ಈಗಿರುವ ನ್ಯಾಯಾಲಯದ ತೀರ್ಪು ಮತ್ತು ಅದಕ್ಕೂ ಕನ್ನಡದ ಉಳಿವಿಗೂ ಇರುವ ಸಂಬಂಧದ ಕುರಿತು ಯೋಚಿಸುವ ಒಂದು ಸಣ್ಣ ಪ್ರಯತ್ನವನ್ನು ಮಾಡುತ್ತೇನೆ.
ಮೇಲೆ ತಿಳಿಸಿದ ಯೋಚನೆ ಮಾಡಲು ನಾನು ಕೆಲವು ಪ್ರಮುಖ ವಿಷಯಗಳನ್ನು ಪ್ರಾರಂಭದಲ್ಲೇ ಪಟ್ಟಿ ಮಾಡಿ, ಅದೇ ಕ್ರಮದಲ್ಲಿ ಚರ್ಚೆಯನ್ನು ಕಟ್ಟುವ ಸಣ್ಣ ಪ್ರಯತ್ನವನ್ನು ಮಾಡುತ್ತೇನೆ. ಒಟ್ಟಾರೆಯಾಗಿ ಹೇಳುವುದಾದರೆ ಕನ್ನಡ ಭಾಷೆಯ ಉಳಿವಿನ ಕುರಿತು ನಾವು ಚಿಂತಿಸುವ ಮುನ್ನ ನಮಗೆ ತಿಳಿಯ ಬೇಕಿರುವ ಸಂಗತಿಗಳು ಯಾವವು ಮತ್ತು ಆ ರೀತಿಯ ಚಿಂತನೆಯ ಪ್ರಯತ್ನವನ್ನು ಮಾಡುವುದೇ ಆದಲ್ಲಿ, ಆಗ ನಮ್ಮ ಮುಂದೆ ಏಳುವ ಸವಾಲುಗಳು ಯಾವ ರೀತಿಯಲ್ಲಿರುತ್ತವೆ ಎಂಬುದನ್ನು ಹುಡುಕುವುದೇ ಈ ಲೇಖನದ ಮೂಲ ಆಶಯ.
ಈ ಆಶಯಗಳ ಹಿನ್ನೆಲೆಯಲ್ಲಿ, ಈ ಲೇಖನವು ತೆಗೆದುಕೊಳ್ಳಬಹುದಾದ ವಿಷಯಗಳನ್ನು ಪಟ್ಟಿಮಾಡುವ ಪ್ರಯತ್ನ ಆರಂಭಿಸುತ್ತೇನೆ.
1. ಅಸಲಿಗೆ ಸುಪ್ರೀಂ ಕೋರ್ಟಿನ ತೀರ್ಪಿನ ವಿಷಯದ ಕೇಂದ್ರವೇನು? ಅದರಿಂದ ನಮ್ಮ ಕನ್ನಡದ ಹೋರಾಟಗಾರರು ಗುರುತಿಸುತ್ತಿರುವ ಸಮಸ್ಯೆ ಯಾವುದು ಮತ್ತು ಆ ಕುರಿತು ನಮ್ಮ ಬುದ್ಧಿ ಜೀವಿಗಳು ಸರಿಯಾದ ಪ್ರಶ್ನೆಗಳನ್ನು ಕೇಳಿದ್ದಾರೆಯೇ? ಎನ್ನುವುದು.
2. ನಮ್ಮ ಹೋರಾಟಗಾರರು ವಾದಿಸುವಂತೆ, ಕನ್ನಡ ಮಾಧ್ಯಮದ ಶಿಕ್ಷಣಕ್ಕೂ ಮತ್ತು ಕನ್ನಡ ಭಾಷೆಯ ಅಳಿವು-ಉಳಿವಿಗೂ ಏನಾದರೂ ಸಂಬಂಧವಿದೆಯೇ? ಮತ್ತು ಹೇಗೆ ಕನ್ನಡ ಮಾಧ್ಯಮ ಶಾಲೆಗಳು ಕನ್ನಡವನ್ನು ಉಳಿಸಬಲ್ಲವು? ಎಂಬುದು.
3. ಅಂತಿಮವಾಗಿ ಈ ಎಲ್ಲ ವಾದಗಳ ಗುಣ ದೋಷಗಳನ್ನು ಗುರುತಿಸಿ, ಕನ್ನಡವನ್ನು ಕುರಿತಂತೆ ಒಂದು ಗಂಭೀರ ಯೋಚನೆಯನ್ನು ಹುಟ್ಟುಹಾಕಲು ಸಾಧ್ಯವಾದರೆ, ಆ ಮಾರ್ಗದ ಸಾಧ್ಯತೆಯನ್ನು ಹುಡುಕುವುದು.
ಸಾಹಿತ್ಯಕ್ಷೇತ್ರದ ಒಳಹೊರಗು – 4
– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ,ತುಮಕೂರು ವಿಶ್ವವಿದ್ಯಾನಿಲಯ
ಡಿವಿಜಿ ಹೇಳಿದರು: ಹಳೆ ಬೇರು ಹೊಸ ಚಿಗುರು ಕೂಡಿರಲು ಮರಸೊಗಸು! ಎಂಥಾ ಮಾತು! ಇದನ್ನು ಸಮಾಜ-ಕುಟುಂಬ ಸೇರಿದಂತೆ ಯಾವ ಕ್ಷೇತ್ರಕ್ಕೂ ಅನ್ವಯಿಸಬಹುದು. ಹಾಗೆಯೇ ಸಂಗೀತ, ಸಾಹಿತ್ಯಕ್ಕೂ ಅನ್ವಯಿಸಿ ನೋಡಬಹುದು. ಇದರಿಂದ ನಿರಾಸೆ ಕಾದಿದ್ದರೂ ಅಚ್ಚರಿ ಇಲ್ಲ.
ಮೈಸೂರಿನಲ್ಲಿ ವರ್ಷಗಳ ಹಿಂದೆ ಒಂದು ಕಾರ್ಯಕ್ರಮ. ಖ್ಯಾತ ನೃತ್ಯಗುರು, ಹಿರಿಯ ಕಲಾವಿದೆ ಡಾ. ವಸುಂಧರಾ ದೊರೆಸ್ವಾಮಿ ಅವರಿಗೆ ಶಿಷ್ಯವೃಂದದಿಂದ ಅಭಿನಂದನೆ. ಆಮೇಲೆ ಅವರು ಮಾತನಾಡುತ್ತ, ನನ್ನ ಬಳಿ ಭರತ ನಾಟ್ಯ ಕಲಿಯಲು ಉತ್ಸಾಹದಿಂದಲೇ ಹೊಸಬರು ಬರುತ್ತಾರೆ. ನಾಲ್ಕಾರು ಹೆಜ್ಜೆಗಳನ್ನು, ಒಂದಿಷ್ಟು ಅಂಗಾಭಿನಯ ಕಲಿತು ವಿದೇಶಕ್ಕೆ ಹೋಗಿಬಿಡುತ್ತಾರೆ. ಹಣ ಮಾಡುವ ಹುಮ್ಮಸ್ಸು. ನಾಟ್ಯ, ನಟುವಾಂಗಗಳ ಬಗ್ಗೆ ಸಮಗ್ರ ಪರಿಜ್ಞಾನ ಪಡೆಯುವ ವ್ಯವಧಾನವೇ ಇಂದಿನ ತಲೆಮಾರಿನಲ್ಲಿ ಇಲ್ಲ ಎಂದು ಹೇಳಿದರು. ಅಸಾಧಾರಣ ಕಲಾವಿದೆಯಾದ ಅವರು ವಿಷಾದದಿಂದಲೇ ಈ ಮಾತು ಹೇಳಿದ್ದರು. ಕಲಿಕೆಯಲ್ಲಿನ ಶ್ರದ್ಧೆ ಕುರಿತ ಇದೇ ಮಾತು ಸಾಹಿತ್ಯಕ್ಕೂ ಸಲ್ಲುತ್ತದೆ. ಸಾಹಿತ್ಯ ಕ್ಷೇತ್ರ ಪ್ರವೇಶಿಸುವವರೆಲ್ಲ ವಿದೇಶಕ್ಕೆ ಹೋಗಿಬಿಡುವುದಿಲ್ಲ. ಕನ್ನಡ ಸಾಹಿತ್ಯ ಓದುದವವರ ಕಾರ್ಯವ್ಯಾಪ್ತಿಯೂ ದೇಶ, ಭಾಷೆಗಳ ಕಾರಣದಿಂದ ಸೀಮಿತವಾಗಿಹೋಗಿದೆ; ಅಥವಾ ಹಾಗೆ ಭಾವಿಸಲಾಗಿದೆ; ಅಥವಾ ತಮಗೆ ತಾವೇ ಮಿತಿಯನ್ನು ಇವರೇ ವಿಧಿಸಿಕೊಂಡುಬಿಡುತ್ತಾರೆ. ಸ್ನಾತಕೋತ್ತರ ಪದವಿ ಅಥವಾ ಪಿಎಚ್.ಡಿ ಪದವಿಯಲ್ಲಿ ಭಾಷಾ ಪ್ರಯೋಗವನ್ನು ಅರ್ಧಂಬರ್ಧ ಕಲಿತು ತಾವು ಚಿಂತಕರೆಂದೋ ಸಾಹಿತಿಗಳೆಂದೋ ಇಲ್ಲವಾದಲ್ಲಿ ಕೊನೆಗೆ ಲೇಖಕರೆಂದೋ ಬೋರ್ಡು ಹಾಕಿಕೊಂಡೇಬಿಡುತ್ತಾರೆ. ಜೊತೆಗೆ ಪತ್ರಿಕೆ, ಟಿವಿ ಕಾರ್ಯಕ್ರಮ ಇತ್ಯಾದಿಗಳ ಲಾಬಿ ಶುರು ಮಾಡಿ ಪ್ರಚಾರದ ಹಿಂದೆ ಹೋಗುತ್ತಾರೆ. ಅಲ್ಲಿಗೆ ಅವರ ಕಲಿಕೆ ಮುಗಿದಂತೆ. ಹಳೆಯದನ್ನು ತಿರುಗಿಯೂ ನೋಡದೇ ಹೊಸದನ್ನು ಅರಗಿಸಿಕೊಳ್ಳದೇ ಕಲಿತಷ್ಟೇ ವಿದ್ಯೆಯನ್ನು ತಿರುಚುತ್ತ ಚಾಲ್ತಿಯಲ್ಲಿ ಇರಲು ಬಯಸುತ್ತಾರೆ. ಇದು ಯುವ ಸಾಹಿತ್ಯಾಸಕ್ತರ ಒಂದು ಮುಖ.
ತೆಗಳಬೇಕಾದುದು ಯಾರನ್ನು?
– ಡಾ. ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕ,ತುಮಕೂರು ವಿಶ್ವವಿದ್ಯಾನಿಲಯ
ಕನ್ನಡ ಮಾಧ್ಯಮ ಕುರಿತ ಚರ್ಚೆ ನಿಲ್ಲುವಂತೆಯೂ ಕನ್ನಡ ಉಳಿಸುವ ಪರ್ಯಾಯ ಮಾರ್ಗ ಶುರುಮಾಡುವ ಪ್ರಯತ್ನ ಆರಂಭವಾಗುವಂತೆಯೂ ಕಾಣುತ್ತಿಲ್ಲ. ಕನ್ನಡವೂ ಸೇರಿ ಯಾವ ಮಾಧ್ಯಮವನ್ನೂ ಹೇರುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಕನ್ನಡ ಮಾತ್ರ ಮಾಧ್ಯಮವಾಗಬಾರದು, ಆದರೆ ಇಂಗಿಷ್ ಮಾತ್ರ ಆಗಬಹುದು ಎನ್ನಲಾಗಿದೆ ಎಂದು ಓದಿಕೊಂಡ ಪ್ರಭೃತಿಗಳಿಗೆ ಕೊರತೆ ಇಲ್ಲ. ಇದೇ ದಾಟಿಯಲ್ಲಿ ಮಾತನಾಡುವ ಹೋರಾಟಗಾರರಿಗೆ, ಅವರಿಂದ ತಪ್ಪಿಸಿಕೊಳ್ಳಬಯಸುವ ಸಾಹಿತಿಗಳಿಗೆ ಕನ್ನಡ ಉಳಿಸುವ ಬೇರೆ ಮಾರ್ಗಗಳೇ ಕಾಣದಿರುವುದು ಆಶ್ಚರ್ಯಕರ. ಈಗ ಇವರೇ ಪ್ರತಿಪಾದಿಸುವಂತೆ ನಾಲ್ಕನೆಯತ್ತೆವರೆಗೆ ಕಡ್ಡಾಯ ಮಾಧ್ಯಮವಾದರೆ ಕನ್ನಡ ಉಳಿದುಬಿಡುತ್ತದೆಯೇ? ಪರಿಸ್ಥಿತಿ ನೋಡೋಣ:
ಮೊನ್ನೆ ತಾನೆ ಹಿರಿಯರೊಬ್ಬರು ಭೇಟಿಯಾಗಿದ್ದರು. ಕನ್ನಡ ಮಾಧ್ಯಮದ ಬಗ್ಗೆ ಮಾತು ಬಂತು. ಅವರ ಮನೆಯಲ್ಲಿ ಇದೀಗ ಡಿಗ್ರಿ ಓದುತ್ತಿರುವ ಹುಡುಗನಿದ್ದಾನಂತೆ. ಆತ ಪಿಯುಸಿವರೆಗೆ ಕನ್ನಡದಲ್ಲೇ ಓದಿದ್ದು. ಡಿಗ್ರಿಗೆ ಸೇರಿದ ಮೇಲೆ ಕನ್ನಡದ ಕಡೆ ಕಣ್ಣೆತ್ತಿ ನೋಡುವುದಿಲ್ಲವಂತೆ, ಕನ್ನಡ ಪತ್ರಿಕೆಗಳತ್ತ ಮುಖವನ್ನೂ ಹಾಕುವುದಿಲ್ಲವಂತೆ. ಕನ್ನಡ ಮಾತಾಡುವುದೇ ಅಲರ್ಜಿ ಎಂಬಂತೆ ವರ್ತಿಸುತ್ತಾನಂತೆ. ಸರ್ಕಾರದವರೇನೋ ನಾಲ್ಕನೆಯ ತರಗತಿವರೆಗೆ ಕನ್ನಡವನ್ನು ಕಲಿಕಾ ಮಾಧ್ಯಮ ಮಾಡಿಬಿಟ್ಟರೆ ಕನ್ನಡಕ್ಕೆ ಭವಿಷ್ಯವಿದೆ ಅಂತಾರಲ್ಲ, ನಮ್ಮ ಹುಡುಗ ನಾಲ್ಕನೆಯತ್ತೆಯಲ್ಲ, ಪಿಯುಸಿವರೆಗೂ ಕನ್ನಡದಲ್ಲೇ ಓದಿದ್ದಾನೆ. ಈಗ ಅವನ ವರ್ತನೆ ನೋಡಿ. ಇವನಿಂದ ಕನ್ನಡ ಮುಂದೆ ಹೇಗೆ ಉಳಿಯುತ್ತದೆ ಸ್ವಲ್ಪ ಹೇಳ್ತೀರಾ ಅಂದರು. ನಾಲ್ಕನೆಯ ತರಗತಿವರೆಗೆ ಮಾಧ್ಯಮವಾಗಿ ಕಡ್ಡಾಯ ಮಾಡುವುದರಿಂದ ಕನ್ನಡ ಉಳಿಯುತ್ತದೆ ಎಂಬ ಭ್ರಮೆ ನನಗೆ ಇಲ್ಲ. ಕನ್ನಡ ನಮ್ಮ ನಡೆ ನುಡಿಗೆ, ಬದುಕಿಗೆ ಅನಿವಾರ್ಯ ಎಂದು ಅವನಿಗೆ ಅರ್ಥವಾಗುವಂತೆ ನೀವು ಮನೆಯಲ್ಲಿ ನಡೆದುಕೊಂಡಿದ್ದೀರಾ ಎಂದು ಕೇಳಿದೆ. ಅಂದರೆ? ಎಂದು ಕೇಳಿದರು.
ಎಲ್ಲರ ಕನ್ನಡದ ಶಂಕರ ಬಟ್ ರಿಗೊಂದು ಪತ್ರ
– ವಿನಾಯಕ್ ಹಂಪಿಹೊಳಿ
ನೀವೇನೋ ಹಳೆಗನ್ನಡ, ತಮಿಳು, ಮಲಯಾಳಂ, ತುಳು, ಹವ್ಯಕ ಕನ್ನಡ ಎಲ್ಲಾ ಓದೀರಿ. ಇವೆಲ್ಲಾ ದ್ರವಿಡ ಭಾಷಾಗಳು, ಹಿಂಗಾಗಿ ಋ, ಖ, ಘ, ಙ, ಛ, ಝ, ಞ, ಠ, ಢ, ಥ, ಧ, ಫ, ಭ ಎವೆಲ್ಲ ಅಕ್ಷರಗಳು ಕನ್ನಡದಾಗ ಬ್ಯಾಡಾ ಅಂತನೂ ಹೇಳೀರಿ. ಅಚ್ಚಗನ್ನಡ ಶಬ್ದದಾಗ ಮಹಾಪ್ರಾಣ ಅಕ್ಷರಗಳು ಬರಂಗಿಲ್ಲ ಅಂತನೂ ಅಂದ್ರಿ. ಜತಿಗೆ, ಷ ಬ್ಯಾಡ ಅಂತನೂ ಅಂದ್ರಿ. ಆ ಬದ್ಲಾವಣಿ ನಿಮ್ಮಿಂದನಽ ಶುರೂನೂ ಮಾಡಿದ್ರಿ. ನಿಮ್ಮ ಹೆಸರು ಭಟ್ಟ ಅಂತಿತ್ತು ಅದನ್ನು ಬಟ್ ಅಂತ ಮಾಡ್ಕೊಂಡೀರಿ. ಇರ್ಲಿ. ಇಂಗ್ಲೀಷನ್ಯಾಗ ಬರ್ಯೋಮುಂದ ಜ್ವಾಕಿ. ಆದ್ರ ನಿಮ್ಮ ಸಲಹಾ ಸರ್ಕಾರ ಕೇಳ್ತದೋ ಬಿಡ್ತದೋ, ಆದರೆ ಅದಕ್ಕೂ ಮೊದ್ಲ ನನ್ನ ಮಾತಿಗೂ ಸ್ವಲ್ಪ ಬೆಲಿ ಕೊಟ್ಟು ವಿಚಾರ ಮಾಡ್ರೀ..
ನಾವು ಧಾರವಾಡದ ಮಂದಿ. ನಮ್ಮ ಉತ್ತರ ಕರ್ನಾಟಕದ ಕನ್ನಡ, ಕನ್ನಡ ಹೌದೋ ಅಲ್ಲೋ? ಉತ್ತರ ಕರ್ನಾಟಕದ ಕನ್ನಡದಾಗ, ಸಾಹಿತ್ಯ, ಕಾದಂಬರಿ, ಕಾವ್ಯಗಳು ಐತೋ ಇಲ್ಲೋ? ಮುಂದನೂ ಈ ಕನ್ನಡ ಇರ್ಬಕೋ ಬ್ಯಾಡೋ? ನೀವು ಎಲ್ಲ ಮಹಾಪ್ರಾಣಗಳನ್ನು ನಮ್ಮ ಕನ್ನಡದ ಲಿಪಿಯಿಂದ ತಗದ್ರ ನಮ್ಮ ಸಾಹಿತ್ಯಕ್ಕ ಯಾವ ಲಿಪಿ ಇಟ್ಕೋಳೂಣು? ಬೆಂಗ್ಳೂರವ್ರು ಸತ್ಯ ಅನ್ಲಿಕ್ಕೆ ನಿಜ, ದಿಟ ಅನ್ನು ಪದ ಉಪಯೋಗಸ್ತಾರ. ಆದ್ರ ನಮ್ದು ಗಂಡ್ ಕನ್ನಡ ನೋಡ್ರಿ. ಖರೇನ ಹೇಳ್ತೀನಿ, ನಾವು ’ಖರೆ’ ಅನ್ನುಮುಂದ ವಟ್ಟ ’ಕರೆ’ ಅಂತ ಯಾವತ್ತೂ ಅನ್ನಂಗಿಲ್ರೀ. ನೀವು ಹವ್ಯಕರು, ಅಡಿಗಿ ಹೆಂಗಾಗ್ಯದ ಅಂತ ಕೇಳಿದ್ರ ’ಬಾಽಽರಿ ಚೊಲೊ ಆಯ್ದು ಮಾರಾಯ’ ಅಂತೀರಿ. ಆದ್ರ ನಾವು ನಮ್ಮ ಗಂಡ್ ಕನ್ನಡದಾಗ ’ಭಾರೀಽಽ ಛೊಲೋ ಆಗ್ಯದ್ ಲೇ ಮಂಗ್ಯಾ’ ಅಂತೀವಿ.
ನಾವು ಕಿಟಕಿ ಅನ್ನಂಗಿಲ್ಲ. ಸ್ಪಷ್ಟ ಖಿಡಕಿ ಅಂತೀವಿ. ಸ್ಪಷ್ಟ ಶಬ್ದದಾಗೂ ’ಷ’ ಅಕ್ಷರ ಭಾರೀ ಖಡಕ್ಕಾಗಿ ಬರ್ತೈತಿ ನಮ್ಮ ಮಾತ್ನ್ಯಾಗ. ನಾವು ನಿಮ್ಮಂಗ ಗಂಟೆ ಅನ್ನಂಗಿಲ್ರೀ. ಫಕ್ತ ಘಂಟಿ ಅಂತೀವಿ. ನೀವು ಸೆಲೆ ಅಂತೀರಿ. ನಾವು ನೀರಿನ ಝರಿ ಅಂತೀವಿ. ಅನ್ನಕ್ಕ ಹಚ್ಕೊಳ್ಳಿಕ್ಕೆ ಮೈದಾ ಹಿಟ್ಟಿಲೆ ಝುಣಕ ಅಂತ ಮಾಡ್ತೇವಿ. ಬಯ್ಯೋಮುಂದ ’ಭಾಮ್ಟ್ಯಾ’ ಅಂತ ಬೈತೀವಿ. ನಿಮಗ ಉಚ್ಚಾರ ಮಾಡ್ಲಿಕ್ಕೆ ತ್ರಾಸಾಗ್ತದ, ಅದ್ರ ನಮಗ ಅಗ್ದೀ ಸರಽಽಳ ನೋಡ್ರಿ. ಯಾರರೇ ಭಾಳಽಽ ದಪ್ಪ್ ಇದ್ರ ಢೇಪ್ಯಾ ಅಂತೀವಿ. ಠೇವಣಿ ಶಬ್ದ ಹೆಂಗದನೋ ಹಂಗ ಬಳಸ್ತೀವಿ. ಬಹಳ ಅನ್ನಂಗಿಲ್ರೀ. ತಟ್ಟೆ ಅನ್ನಂಗಿಲ್ರೀ. ಥಾಬಾಣ ಅಂತೀವಿ. ಕಚ್ಚಿ ಉಡೋ ದೊಡ್ಡ ಪಂಜಾಕ್ಕ ಧೋತ್ರ ಅಂತೀವಿ.
ಸಾಹಿತ್ಯ ಮತ್ತು ವಿಮರ್ಶೆ
– ಮು ಅ ಶ್ರೀರಂಗ ಬೆಂಗಳೂರು
ನಾನು ಈ ಲೇಖನ ಬರೆಯುತ್ತಿರುವ ಇವತ್ತಿನ ತನಕ (೨೯ ಮೇ ೨೦೧೪) ಡಾ. ಶ್ರೀಪಾದ ಭಟ್ ಅವರ ‘ಸಾಹಿತ್ಯ ಕ್ಷೇತ್ರದ ಒಳ ಹೊರಗು’ ಎಂಬ ಶೀರ್ಷಿಕೆಯಡಿಯಲ್ಲಿ ಮೂರು ಲೇಖನಗಳು ‘ನಿಲುಮೆ”ಯಲ್ಲಿ ಪ್ರಕಟವಾಗಿದೆ. (೨೭/೩/೨೦೧೪, ೧೨/೪ ಮತ್ತು ೨೪/೪). ಅವರ ಈ ಲೇಖನಗಳ ಬಗ್ಗೆ ‘ನಿಲುಮೆ’ಯಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ನಾನೂ ಸಹ ಆ ಚರ್ಚೆಗಳಲ್ಲಿ ಭಾಗವಹಿಸಿದ್ದೆ. ಅಲ್ಲಿ ನಾನು ವ್ಯಕ್ತಪಡಿಸಿದ ಅಭಿಪ್ರಾಯಗಳ ಮುಂದುವರಿದ ಭಾಗವಾಗಿ ಈ ಲೇಖನ ಬರೆದಿದ್ದೇನೆ. ಸಾಹಿತ್ಯ ಮತ್ತು ಸಾಹಿತ್ಯ ವಿಮರ್ಶೆ/ವಿಮರ್ಶಕರ ನಡುವೆ ಅಂತಹ ಸೌಹಾರ್ದಯುತ ಸಂಬಂಧವೇನೂ ಇಲ್ಲ. ಇವೆರಡರ ನಡುವೆ ಇರುವ ಅಷ್ಟಿಷ್ಟು ನಂಟನ್ನು ಆಗಾಗ ಕಗ್ಗಂಟಾಗಿಸುವ ಸನ್ನಿವೇಶವನ್ನು ‘ಶೀತಲ ಸಮರ’, ಮುಸುಕಿನೊಳಗಿನ ಗುದ್ದಾಟ’ ಅಥವಾ ‘ಬೂದಿ ಮುಚ್ಚಿದ ಕೆಂಡ’ ಇಂತಹ ವಿಶೇಷಣಗಳಿಂದ ವಿವರಿಸಬಹುದು. ಕಾಲಾನುಕಾಲಕ್ಕೆ ವಿಮರ್ಶೆಯ ಪರಿಭಾಷೆಗಳು (=ಲಕ್ಷಣ; ನಿರೂಪಣೆ) ಬದಲಾಗುತ್ತಾ ಬಂದಿವೆ. ವಿಮರ್ಶೆಯೆಂದರೆ ಏನು? ಎಂಬ ಮೂಲಭೂತ ಪ್ರಶ್ನೆಯಿಂದ ಹಿಡಿದು ,ವಿಮರ್ಶೆಯೆಂದರೆ (ಮತ್ತು ಆ ಮೂಲಕ ಪರೋಕ್ಷವಾಗಿ ಸಾಹಿತ್ಯವೆಂದರೆ) ‘ಹೀಗೆ ಇರತಕ್ಕದ್ದು’ ಎಂದು ವ್ಯಾಖ್ಯಾನಿಸುವ ಅತ್ಯುತ್ಸಾಹದ, ಆತುರದ ಮಾತುಗಳೂ ಬಂದು ಹೋಗಿವೆ.
ಕುವೆಂಪು ಅವರು ‘ಮಲೆಗಳಲ್ಲಿ ಮದುಮಗಳು’ಕಾದಂಬರಿಯಲ್ಲಿ ಒಂದೆರೆಡು ಲೈಂಗಿಕ ಪ್ರಸಂಗಗಳನ್ನು ವಿವರವಾಗಿ ವರ್ಣಿಸಿದಾಗ ‘ಪುಟ್ಟಪ್ಪನವರಿಗೆ ಈ ವಯಸ್ಸಿನಲ್ಲಿ ಈ ಚಪಲವೇಕೆ?’ ಎಂದು ಅಂದಿನ ನಮ್ಮ ಹಿರಿಯ ಸಾಹಿತಿಗಳು ಹೇಳಿದ್ದುಂಟು. ನವ್ಯಕಾವ್ಯ/ಸಾಹಿತ್ಯ ಬಂದಾಗ ಅದರಲ್ಲಿ ಕೆಲವೊಮ್ಮೆ ವಾಚ್ಯವಾಗಿ ಮತ್ತು ಕೆಲವುಬಾರಿ ಸೂಚ್ಯವಾಗಿ ಇರುತ್ತಿದ್ದ ಲೈಂಗಿಕ ಅಂಶಗಳು ಹಾಗು ಅದಕ್ಕೆ ಸಂಬಂಧಿಸಿದ ಪ್ರತಿಮೆ ಪ್ರತೀಕಗಳಿಂದ ಆ ಕಾಲದ ಹಿರಿಯರಿಗೆ ಇರುಸು ಮುರುಸು ಆಗಿದ್ದುಂಟು. ಗೋಪಾಲಕೃಷ್ಣ ಅಡಿಗರ ‘ಪ್ರಾರ್ಥನೆ’ ಕವನ ಪ್ರಕಟವಾದಾಗ (ಬಹುಶಃ ಪ್ರಜಾವಾಣಿ ಪತ್ರಿಕೆಯಲ್ಲಿರಬಹುದು) ಅದನ್ನು ಓದಿದ ಡಿ ವಿ ಜಿ ಅವರು ಬಹಳ ಸಿಟ್ಟಾಗಿ ಇಂತಹ ಬರವಣಿಗೆಯನ್ನು ಬ್ಯಾನ್ ಮಾಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರಂತೆ. ಆಗಿನ ಮುಖ್ಯ ಮಂತ್ರಿ ನಿಜಲಿಂಗಪ್ಪನವರು ಅಡಿಗರಿಗೆ ‘ನಿಮ್ಮ ಮೇಲೆ ಇಂಥದ್ದೊಂದು ದೂರು ಬಂದಿದೆ. ಇದಕ್ಕೇನು ಉತ್ತರ’ ಎಂದು ಕೇಳಿ ಪತ್ರ ಬರೆದಿದ್ದರಂತೆ. (ವಿವರಗಳಿಗೆ ನೋಡಿ ಯು ಆರ್ ಅನಂತಮೂರ್ತಿ ಅವರ ‘ಸುರಗಿ’ ಪುಟ ೧೨೪ ಪ್ರಥಮ ಮುದ್ರಣ ೨೦೧೨ ಪ್ರಕಾಶಕರು–ಅಕ್ಷರ ಪ್ರಕಾಶನ ಹೆಗ್ಗೋಡು ಸಾಗರ) ನಮ್ಮ ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳನ್ನು ಸಾಮಾನ್ಯ ಜನರಿಗೂ ತಿಳಿಸುವ ರೀತಿಯಲ್ಲಿ ಸಾಹಿತ್ಯ ರಚಿಸ ಬೇಕೆಂದು ಬಂದ ಪ್ರಗತಿಶೀಲ ಸಾಹಿತ್ಯದ ಬಗ್ಗೆ ಮಾತನಾಡುತ್ತಾ ಡಾ. ಎಚ್ ತಿಪ್ಪೇರುದ್ರಸ್ವಾಮಿ ಅವರು ತಮ್ಮ “ಕವಲುದಾರಿಯಲ್ಲಿ ಕನ್ನಡ ವಿಮರ್ಶೆ” (ಪ್ರಕಾಶಕರು: ಪ್ರಸಾರಾಂಗ ಬೆಂಗಳೂರು ವಿ ವಿ ಬೆಂಗಳೂರು ೫೬) ಎಂಬ ಕೃತಿಯಲ್ಲಿ ಹೇಳಿದ ಒಂದು ಮಾತು ಗಮನಾರ್ಹವಾಗಿದೆ. ‘ಅನಕೃ’ ಮತ್ತು ಇತರ ಪ್ರಗತಿಶೀಲ ಸಾಹಿತಿಗಳು ‘ವೇಶ್ಯಾ ಸಮಸ್ಯೆಯನ್ನು ಚಿತ್ರಿಸಲು ಹೊರಟು ವೇಶ್ಯಾವಾಟಿಕೆಗಳ ಚಿತ್ರಣಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡರು ‘. ಇಂತಹ ಸಾಹಿತ್ಯವನ್ನು ಓದಿದಾಗ ಆಗುವ “ಆ ಕ್ಷಣದ” ಆಕರ್ಷಣೆ ಬಿಟ್ಟು ಬೇರೆ ಆಯಾಮಗಳನ್ನು ಅವು ನೀಡಲಾಗಲಿಲ್ಲ. ಪ್ರಗತಿಶೀಲರು ಕೇವಲ ವೇಶ್ಯಾ ಸಮಸ್ಯೆಯನ್ನು ಮಾತ್ರ ಚಿತ್ರಿಸಿದರು ಎಂದು ಇದರ ಅರ್ಥವಲ್ಲ. ಅವರು ಯಾವುದೇ ಒಂದು ಸಮಸ್ಯೆಯನ್ನು ಪರಿಭಾವಿಸಿದ ರೀತಿಗೆ ಇದು ಒಂದು ಉದಾಹರಣೆ ಅಷ್ಟೇ. ಅಂತಹ ಸನ್ನಿವೇಶದಲ್ಲೂ ನಾಲ್ಕಾರು ಗಟ್ಟಿ ಕೃತಿಗಳು ಪ್ರಗತಿಶೀಲರಿಂದ ಬಂದಿತು. ಅದೇ ಸಮಾಧಾನಪಟ್ಟುಕೊಳ್ಳಬಹುದಾದ ವಿಷಯ.




