ವಿಷಯದ ವಿವರಗಳಿಗೆ ದಾಟಿರಿ

ಜುಲೈ 9, 2014

5

ಸಾಹಿತ್ಯ ಕ್ಷೇತ್ರದ ಒಳಹೊರಗು – 5

‍ನಿಲುಮೆ ಮೂಲಕ

– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ,ತುಮಕೂರು ವಿಶ್ವವಿದ್ಯಾನಿಲಯ

ಕನ್ನಡ ಸಾಹಿತ್ಯಸಾಹಿತ್ಯ ಕ್ಷೇತ್ರದ ಒಳಹೊರಗು – 1
ಸಾಹಿತ್ಯ ಕ್ಷೇತ್ರದ ಒಳಹೊರಗು – 2
ಸಾಹಿತ್ಯ ಕ್ಷೇತ್ರದ ಒಳಹೊರಗು – 3
ಸಾಹಿತ್ಯ ಕ್ಷೇತ್ರದ ಒಳಹೊರಗು – 4

ಏನ ಬಂದಿರಿ, ಹದುಳವಿದ್ದಿರೆ ಎಂದೊಡೆ ನಿಮ್ಮ ಮೈಸಿರಿ ಹಾರಿ ಹೋಹುದೆ? ಎಂದು ಬಸವಣ್ಣನವರು ಅಂದೇ ಕೇಳಿದ್ದರು. ನಮ್ಮ ಜನರ ವರ್ತನೆಯನ್ನು ಅವರು ಚೆನ್ನಾಗಿ ಬಲ್ಲವರಾಗಿದ್ದರು ಎನಿಸುತ್ತದೆ. ಮನೆಗೆ ಬಂದವರನ್ನು ಉಪಚರಿಸುವ ಸಂದರ್ಭದಲ್ಲಿ ಅವರು ಹೇಳಿದ ಜನರ ಸಣ್ಣತನದ ವರ್ತನೆ ಕುರಿತ ಈ ಮಾತಿನ ಆಶಯವನ್ನು ಬೇರೆ ಬೇರೆ ಕಡೆಗಳಲ್ಲೂ ಅನ್ವಯಿಸಬಹುದು. ಸಾಹಿತ್ಯ ಕ್ಷೇತ್ರದಲ್ಲಂತೂ ಇದಕ್ಕೆ ಮತ್ತೆ ಮತ್ತೆ ನಿದರ್ಶನಗಳು ದೊರೆಯುತ್ತವೆ. ಒಂದು ಘಟನೆ. ಸಮ್ಮೇಳನವೊಂದರಲ್ಲಿ ಹೊಸಬರೊಬ್ಬರು ಪ್ರಬಂಧ ಮಂಡಿಸಿದ್ದರು. ಉತ್ತಮ ಪ್ರಬಂಧವೆಂದು ಆ ಗೋಷ್ಠಿಯ ಅಧ್ಯಕ್ಷರೊಬ್ಬರು ಸಕಾರಣವಾಗಿ ವಿಶ್ಲೇಷಿಸಿ, ಅಭಿನಂದಿಸಿದರು. ಅದೇ ಪ್ರಬಂಧಕಾರರೊಂದಿಗೆ ಮತ್ತೆ ಮೂವರು ಪ್ರಬಂಧ ಮಂಡಿಸಿದ್ದರು. ಅವುಗಳಲ್ಲಿ ಒಂದು ಪ್ರಬಂಧ ನೀಡಲಾದ ವಿಷಯಕ್ಕೆ ಸಂಬಂಧವೇ ಇಲ್ಲದಂತಿದ್ದರೆ, ಮತ್ತೊಬ್ಬರು ಏನನ್ನೂ ಬರೆದುಕೊಂಡು ಬಂದಿರದೇ ಆಶುಕವಿತ್ವದಂತೆ ಅಲ್ಲೇ ತೋಚಿದ್ದನ್ನು ಒಂದಿಷ್ಟು ಹೇಳಿದ್ದರು. ಇನ್ನೊಬ್ಬರು ತಕ್ಕಮಟ್ಟಿಗೆ ವಿಷಯಕ್ಕೆ ನ್ಯಾಯ ಒದಗಿಸಿದ್ದರೆಂದು ಅಧ್ಯಕ್ಷತೆ ವಹಿಸಿದ್ದ ಹಿರಿಯರು ಹೇಳಿ ಅಂಥ ಗಂಭೀರ ಸಮ್ಮೇಳನಗಳಲ್ಲಿ ವಿಷಯ ಮಂಡನೆ ಹೇಗಿರಬೇಕೆಂದೂ ತಿಳಿಸಿದರು. ವೇದಿಕೆಯಿಂದ ಇಳಿದ ಮೇಲೆ ಉಳಿದ ಪ್ರಬಂಧಕಾರರು ಉತ್ತಮ ಪ್ರಬಂಧ ಮಂಡಿಸಿದ್ದ ವ್ಯಕ್ತಿಯನ್ನು ಅಭಿನಂದಿಸುವುದಿರಲಿ, ಸೌಜನ್ಯಕ್ಕೂ ಮಾತನಾಡಿಸದೇ ಆಜನ್ಮ ವೈರಿಯಂತೆ ಕಂಡು ಮುಖ ತಿರುಗಿಸಿಕೊಂಡು ಹೊರಟೇಹೋದರಂತೆ. ಅಧ್ಯಕ್ಷತೆ ವಹಿಸಿದ್ದವರಿಗೂ ಉತ್ತಮ ಪ್ರಬಂಧ ಮಂಡಿಸಿದ್ದವರಿಗೂ ಉಳಿದ ಪ್ರಬಂಧಕಾರರಿಗೂ ಮೊದಲು ಪರಿಚಯವೇ ಇರಲಿಲ್ಲ. ವೇದಿಕೆಯಲ್ಲೇ ಅವರೆಲ್ಲ ಮೊದಲಬಾರಿ ಮುಖ ನೋಡಿಕೊಂಡಿದ್ದು. ವಸ್ತುನಿಷ್ಠವಾಗಿ ಅಧ್ಯಕ್ಷರು ಹೇಳಿದ್ದರು ಅಷ್ಟೆ. ಆದರೆ ಅನಂತರ ಹೊರಗೆ ಖಾಸಗಿಯಾಗಿ ಉಳಿದ ಪ್ರಬಂಧಕಾರರು ಮಾತನಾಡುತ್ತ ಆ ಪ್ರಬಂಧ ಚೆನ್ನಾಗಿತ್ತು ಕಣ್ರೀ, ಅಲ್ಲೇ ಅವರಿಗೆ ಹೇಳಿದ್ದರೆ ಸುಮ್ಮನೇ ಅವರಿಗೆ ಸ್ಕೋಪು ಕೊಟ್ಟಂತಾಗುತ್ತದೆ ಎಂದು ಹೇಳಿಲ್ಲ ಅಷ್ಟೆ ಅಂದರಂತೆ! ಅದೇನೇ ಇರಲಿ. ಅಧ್ಯಕ್ಷತೆ ವಹಿಸಿದವರು ಹೇಳಿದ ಮಾತಿನಲ್ಲಿ ಹುರುಳಿರಲಿಲ್ಲ, ಅದೊಂದು ಕೆಟ್ಟ ಪ್ರಬಂಧವಾಗಿತ್ತು ಎಂದಾದರೆ ಅದರ ಚರ್ಚೆಗೆ ಅವಕಾಶವಿತ್ತು. ಆ ಕುರಿತು ಪ್ರಶ್ನೆಯೇ ಇರದಿದ್ದರೆ ಉತ್ತಮ ಪ್ರಬಂಧ ಮಂಡಿಸಿದವರನ್ನು ಅಭಿನಂದಿಸುವ ಔದಾರ್ಯವಾದರೂ ಬೇಡವೇ ಎಂಬುದು ಇಲ್ಲಿರುವ ಪ್ರಶ್ನೆ.

ಇಂಥ ಸಣ್ಣತನಗಳು ನಮ್ಮ ಸುತ್ತಲೂ ಇರುವಂಥವೇ. ರುಚಿಕಟ್ಟಾದ ಅಡುಗೆ ಊಟ ಮಾಡಿದಾಗ ಅಡುಗೆ ಮಾಡಿದವರನ್ನು, ಮನಸ್ಸು ಪ್ರಫುಲ್ಲವಾಗುವ ಬರಹ ಓದಿದಾಗ, ಹಾಡು ಕೇಳಿದಾಗ ಆ ಬರಹಗಾರನನ್ನು, ಸಂಗೀತಗಾರನನ್ನು ಅಭಿನಂದಿಸಬೇಕು ಎನಿಸಿದರೂ ಹಾಗೆ ಮಾಡುವುದು ನಮ್ಮಿಂದ ಏಕೆ ಸಾಧ್ಯವಾಗುವುದಿಲ್ಲ? ನಮ್ಮನ್ನು ಹಾಗೆ ತಡೆಯುವ ಸಂಗತಿ ಯಾವುದು? ನಮ್ಮ ಸಣ್ಣತನ. ಸಾಹಿತ್ಯ, ಸಂಗೀತಗಳನ್ನು ತಿಳಿದು ಕೂಡ ಇಂಥ ಸಣ್ಣತನ ಮೀರಲಾಗಿದ್ದರೆ ಅದೆಷ್ಟು ಆಳವಾಗಿ ಅದು ಬೇರೂರಿರಬೇಡ?

ಆಧುನಿಕ ಕನ್ನಡ ಸಾಹಿತ್ಯದ ಆರಂಭಿಕ ಕಾಲಘಟ್ಟದಲ್ಲಿ ಅಂದರೆ ನವೋದಯ ಕಾಲದಲ್ಲಿ ಹಿರಿಯರು ಕಿರಿಯರನ್ನು ತುಂಬು ಹೃದಯದಿಂದ ಉತ್ತೇಜಿಸಿ ಪ್ರೋತ್ಸಾಹಿಸದಿದ್ದರೆ ಕುವೆಂಪು, ಜಿಎಸ್‍ಎಸ್ ಅವರಂಥ ಪ್ರತಿಭೆಗಳು ಸಾಹಿತ್ಯ ಬಿಟ್ಟು ಬೇರೆ ಕ್ಷೇತ್ರಕ್ಕೆ ಲಭ್ಯವಾಗುತ್ತಿದ್ದರೋ ಏನೋ. ಕುವೆಂಪು ಅವರನ್ನು ಟಿ ಎಸ್ ವೆಂಕಣ್ಣಯ್ಯ, ಜಿಎಸ್‍ಎಸ್ ಅವರನ್ನು ತ ಸು ಶಾಮರಾಯರಂಥವರು ಎದೆತುಂಬಿ ಉತ್ತೇಜಿಸಿದ್ದು ಇತಿಹಾಸ. ಅನಂತರ ಇವರು ಕೂಡ ಆ ಸತ್ಪರಂಪರೆಯನ್ನು ಮುಂದುವರೆಸಿದರು. ಅವರು ಬೆಳೆಸಿದ ಹಾಮಾನಾ, ಉ ಕಾ ಸುಬ್ಬರಾಯಾಚಾರ್, ದೇಜಗೌ ಅವರಂಥವರು ಜಾತಿ, ಮತಗಳನ್ನು ಗಣಿಸದೇ ಪ್ರತಿಭೆಗಳನ್ನು ಗುರುತಿಸಿ ಹೊರಗೆಳೆದಿದ್ದು ಕೂಡ ಅಷ್ಟೇ ಸತ್ಯ. ಮೈಸೂರು ವಿವಿಯ ಕನ್ನಡ ಅಧ್ಯಯನ ಸಂಸ್ಥೆ 90ರ ದಶಕದವರೆಗೂ-ಅಂದರೆ ಇವರು ಬೆಳೆಸಿದ ಪರಂಪರೆಯ ಕೊಂಡಿಗಳು ಇರುವವರೆಗೂ ಸ್ವತಃ ಒಂದು ವಿವಿಯಂತೆ ಕಾಣಿಸುತ್ತಿತ್ತು. ಕನ್ನಡದ ಜೊತೆಗೆ ಹಸ್ತಪ್ರತಿಶಾಸ್ತ್ರ, ಶಾಸನ, ವಿಶ್ವಕೋಶ, ಭಾಷಾಂತರ, ಜಾನಪದ, ಭಾಷಾವಿಜ್ಞಾನ, ದಾಸ ಸಾಹಿತ್ಯ, ದಕ್ಷಿಣ ಭಾರತ ಅಧ್ಯಯನ ಹೀಗೆ ಅಲ್ಲಿ ನಡೆಯುತ್ತಿದ್ದ ಅಧ್ಯಯನ ಸ್ವರೂಪ ಒಂದೇ ಎರಡೇ? ಪ್ರತಿ ವಿಭಾಗದಲ್ಲೂ ಅಪ್ರತಿಮರು. ಎಲ್ಲಿಂದಲೋ ಬಂದವರು. ಅವರನ್ನು ಹೆಕ್ಕಿ ತಂದವರು ಹಾಮಾನಾ ಹಾಗೂ ದೇಜಗೌ. ಎಲ್ಲೋ ಯಾವುದೋ ಕೆಲಸ ಮಾಡುತ್ತಿದ್ದ ಜನರನ್ನು ಹುಡುಕಿ, ಅವರನ್ನು ಎಳೆತಂದು ಪ್ರೀತಿಯಿಂದ ಅವರು ಕೆಲಸ ತೆಗೆಸಿದ ಕಾರಣ ಅವರೂ ಬೆಳೆದರು, ಇವರೂ ಬೆಳೆದರು, ಕನ್ನಡವೂ ಬೆಳೆಯಿತು. ಪಿ ಆರ್ ತಿಪ್ಪೇಸ್ವಾಮಿ, ಜೀಶಂಪ, ಕ್ಯಾತನಹಳ್ಳಿ ರಾಮಣ್ಣ, ಟಿ ಎಸ್ ರಾಜಪ್ಪನವರಂಥ ಜಾನಪದ ವಿದ್ವಾಂಸರು, ಅದ್ಭುತ ಕ್ಷೇತ್ರಕಾರ್ಯಕರ್ತರು ಬೆಳಕಿಗೆ ಬಂದಿದ್ದು ಇವರಿಂದಲೇ. ಕನ್ನಡ ವಿಶ್ವಕೋಶ ವಿಭಾಗದಲ್ಲಿ ವಿಜ್ಞಾನ ಸಂಪಾದಕರಾಗಿ ಕೆಲಸ ಮಾಡಿದ ಜಿ ಟಿ ನಾರಾಯಣರಾವ್, ಎಚ್ ಎಸ್ ಕೆ ಮೊದಲಾದವರು ಬೆಳಕಿಗೆ ಬಂದಿದ್ದು, ದೇಜಗೌ ಅವರಿಂದ. ಜಿಟಿಎನ್ ಅವರಂತೂ ತಮ್ಮ ಕೊನೆಗಾಲದವರೆಗೆ ಅನ್ಯ ಶಿಸ್ತುಗಳನ್ನು ಅದರಲ್ಲೂ ವಿಜ್ಞಾನವನ್ನು ಕನ್ನಡದಲ್ಲಿ ಬರೆಯಲು ಅಸಂಖ್ಯ ಜನರನ್ನು ಉತ್ತೇಜಿಸಿದರು, ತಿದ್ದಿ, ತೀಡಿದರು. ಇದರ ಫಲವಾಗಿ ಇಂದು ನಮ್ಮ ನಡುವೆ ವಿಜ್ಞಾನ ಸಾಹಿತ್ಯವನ್ನು ಕನ್ನಡದಲ್ಲಿ ನೀಡಬಲ್ಲ ಪಡೆಯೇ ಸೃಷ್ಟಿಯಾಗಿದೆ. ಕನ್ನಡಕ್ಕೆ ಇದು ಸಾಧಾರಣ ಕೊಡುಗೆಯಲ್ಲ.

ಕನ್ನಡ ಸಾಹಿತ್ಯ ಎಂದಲ್ಲ, ಭಾಷೆ, ಸಾಹಿತ್ಯಗಳಿಗೆ ನೇರ ಸಂಬಂಧವುಳ್ಳ ಮಾಧ್ಯಮ ಕ್ಷೇತ್ರದಲ್ಲೂ ಈಚಿನ ತಲೆಮಾರುಗಳು, ಉದ್ಯಮಿಗಳು ಕೇವಲ ಪ್ರತಿಭೆಯನ್ನೇ ನೋಡಿ ಉತ್ತೇಜಿಸುವುದು ಅಪರೂಪವಾಗಿದೆ. ತಾಯಿನಾಡು ಪತ್ರಿಕೆಯ ಪಿ ಆರ್ ರಾಮಯ್ಯ, ಸಾಧ್ವಿ ಪತ್ರಿಕೆಯ ತಾತಯ್ಯ, ಅಗರಂ ರಂಗಯ್ಯ, ಖಾದ್ರಿ ಶಾಮಣ್ಣ, ದ ಬಾ ಕುಲಕರ್ಣಿ, ವೈ ಎನ್ ಕೆ, ಚಿತ್ರಗುಪ್ತ ಹೆಸರಿನ ಭಾರದ್ವಾಜ್, ಎಂ ಬಿ ಸಿಂಗ್ ಹೀಗೆ ಹತ್ತಾರು ಮಹನೀಯರು ಹೊಸ ಪೀಳಿಗೆಯ ಪ್ರತಿಭೆಗಳನ್ನು ಗುರುತಿಸಿದ ಫಲವಾಗಿ ಕನ್ನಡ ಪತ್ರಿಕೋದ್ಯಮ ಹುಲುಸಾಗಿ ಬೆಳೆಯಿತು. ಅವರು ಗುರುತಿಸಿದ ಪ್ರತಿಭೆಗಳು ಮುಂದಿನ ತಲೆಮಾರಿಗೆ ಅದನ್ನು ದಾಟಿಸಿದರು. ಈಗೀಗ ಈ ಕ್ಷೇತ್ರವೂ ಸಾಹಿತ್ಯದಂತೆ ಅಡ್ಡ ದಾರಿ ಹಿಡಿದಿದೆ. ಏನಾದರೂ ಸ್ಥಾನ ಪಡೆಯಬೇಕಾದರೆ ಅಲ್ಲಿಯೂ ನಮ್ಮ ಸಂಬಂಧಿಕ, ನಮ್ಮ ಜಾತಿ, ನಮ್ಮೂರು, ನಮ್ಮ ಭಾಷೆ, ನನ್ನ ಶಿಷ್ಯ ಕೊನೆಗೆ ಏನೂ ಇಲ್ಲವಾದಲ್ಲಿ ತಮಗೆ ಬೇಕಾದವರೊಬ್ಬರ ಶಿಫಾರಸು ಉಳ್ಳವನು ಎಂಬ ಪ್ರವೇಶಾರ್ಹತೆಯಾದರೂ ಇರಬೇಕು! ಇವುಗಳಲ್ಲಿ ಒಂದೂ ಇಲ್ಲದಿದ್ದರೆ ಈ ಕ್ಷೇತ್ರಗಳಲ್ಲಿ ಪ್ರತಿಭೆ ಹೊರಸೂಸುವುದು ಅಷ್ಟು ಸುಲಭವಲ್ಲ. ಗುಣಕ್ಕೆ ಮತ್ಸರವುಂಟೇ ಎಂದು ಬಹು ಹಿಂದೆಯೇ ಕವಿ ಕೇಳಿರಬಹುದು. ಆದರೆ ಗುಣಕ್ಕೆ ಮತ್ಸರ ಹುಟ್ಟಿಸುವ ಗುಣವಂತೂ ಇದೆ!

ಇವೆಲ್ಲ ಶಿಷ್ಟ ಪರಂಪರೆಯ ಮಾತಾಯಿತು. ಆದರೆ ಜನಪದರಲ್ಲಿ ಇದಕ್ಕೆಲ್ಲ ಅವಕಾಶವಿಲ್ಲ. ಜನಪದ ರಂಗಭೂಮಿ, ಪ್ರದರ್ಶನ ಕಲೆ, ಹಾಡು, ಹಸೆಗಳನ್ನು ಕಿರಿಯರು ಹಿರಿಯರ ಜೊತೆ ಬೆರೆತೇ ಅಲ್ಲಿ ಇಂದಿಗೂ ಕಲಿಯುತ್ತಾರೆ. ಕಲಿಕೆಯ ಆಸಕ್ತಿ, ಕೊಂಚ ಪ್ರತಿಭೆಗಳನ್ನು ಕಿರಿಯರಲ್ಲಿ ಕಂಡರೆ ಯಾವ ಅಪೇಕ್ಷೆಯೂ ಇಲ್ಲದೇ ಆ ಕ್ಷೇತ್ರದ ಹಿರಿಯರು ಅವರಿಗೆ ತರಬೇತು ನೀಡುತ್ತಾರೆ. ಕಂಸಾಳೆ ಮಹದೇವಯ್ಯ 90ರ ಇಳಿವಯಸ್ಸಿನಲ್ಲೂ ತಾಳ ಹಿಡ್ಕಳದು ಹಂಗಲ್ಲ ಮಗ, ಹಿಂಗೆ ಎಂದು ಪ್ರೀತಿಯಿಂದ ಕಲಿಸುತ್ತಿದ್ದುದುಂಟು. ಅಲ್ಲಿ ಕಲಿಕೆಗೆ ತರಗತಿ ಎಂಬುದಿಲ್ಲ. ಹಿರಿಯರು ತಮ್ಮ ಪ್ರದರ್ಶನದ ಭಾಗವಾಗಿಯೇ ಎಳೆಯರನ್ನು ಸೇರಿಸಿಕೊಂಡು ಹಾಡುತ್ತ, ಕುಣಿಯುತ್ತ ಹೋಗುತ್ತಾರೆ. ಕಿರಿಯರು ಪ್ರಯೋಗದ ಜೊತೆಯಲ್ಲೇ ಕಲಿಕೆಯನ್ನೂ ನಡೆಸುತ್ತಾರೆ. ಇಲ್ಲಿ ಹಿರಿ-ಕಿರಿಯ ಎಂಬ ಭೇದವಿಲ್ಲ. ಅದು ಸಣ್ಣ ಪುಟ್ಟ ತೊರೆ, ಮಳೆ ಹನಿಗಳೆಲ್ಲವನ್ನೂ ಒಟ್ಟಿಗೇ ಸೇರಿಸಿಕೊಂಡು ಹರಿಯುವ ನದಿ ಇದ್ದಂತೆ. ರಭಸವಾಗಿ ಹರಿಯುವ ನದಿಯಲ್ಲಿ ಹನಿ ಯಾವುದು, ತೊರೆ ಯಾವುದು ಎಂದು ಗೊತ್ತೇ ಆಗುವುದಿಲ್ಲ. ಜ್ಞಾನ ಪರಂಪರೆ ಹೀಗಾಗಬೇಕಿತ್ತಲ್ಲವೇ? ಈ ದೃಷ್ಟಿಯಿಂದ ಜನಪದರಿಂದ ಶಿಷ್ಟರು ಕಲಿಯಬೇಕಾದ ಸಂಗತಿ ಬಹಳಷ್ಟಿದೆ ಎನಿಸುತ್ತದೆ. ಅದರಲ್ಲಿ ಪ್ರತಿಭಾವಂತ ಕಿರಿಯರನ್ನು ಹಿರಿಯರು ಹೇಗೆ ನಡೆಸಿಕೊಳ್ಳಬೇಕು ಎಂಬುದು ಮುಖ್ಯವಾದುದು.

ಹಾಗೆ ನೋಡಿದರೆ ಶಿಷ್ಟರು ಸಾಹಿತ್ಯ, ಸಂಗೀತ, ನೃತ್ಯ ಹೀಗೆ ಬಹುತೇಕ ಎಲ್ಲವನ್ನೂ ಜನಪದರಿಂದಲೇ ಪಡೆದುಕೊಂಡು ಸ್ವಂತದ್ದನ್ನಾಗಿ ಮಾಡಿಕೊಂಡಿದ್ದಾರೆ. ಈಗಲೂ ಹೆಸರಾಂತ ಶಿಷ್ಟ ಕನ್ನಡ ನಾಟಕಕಾರರು ಜನಪದ ಕಥೆ, ದಾಟಿ, ಗೀತ, ಸಂಗೀತ ಹೀಗೆ ಎಲ್ಲವನ್ನೂ ಜನಪದದಿಂದ ಕದ್ದು ಸ್ವಂತದ್ದನ್ನಾಗಿ ಮಾಡಿಕೊಂಡು ದೊಡ್ಡ ದೊಡ್ಡ ಪ್ರಶಸ್ತಿ ಪಡೆದಿಲ್ಲವೇ? ಆದರೇನು ಔದಾರ್ಯದ ಗುಣವನ್ನು ಮಾತ್ರ ಶಿಷ್ಟರು ಜನಪದರಿಂದ ಕದಿಯಲಾಗಲಿಲ್ಲ! ಯಾಕೆಂದರೆ ಗುಣವನ್ನು ಕದಿಯಲಾಗದು! ಶಿಷ್ಟರು ಕಿರಿಯರನ್ನು ಬೆಳೆಸುವ ವಿಷಯದಲ್ಲಿ ಜನಪದರಷ್ಟು ಉದಾರಿಗಳಾಗದಿದ್ದರೂ ಬೇಡ, ಕನಿಷ್ಟ ಪಕ್ಷ ಅವರನ್ನು ಅನುಕರಿಸಬಹುದಾಗಿತ್ತು. ಅಷ್ಟರಿಂದಲೂ ಸಾಹಿತ್ಯಕ್ಕೆ ಲಾಭವಿತ್ತು ಎನಿಸುತ್ತದೆ.

5 ಟಿಪ್ಪಣಿಗಳು Post a comment
 1. simha sn
  ಜುಲೈ 9 2014
 2. lakshmigopalakrishna
  ಜುಲೈ 18 2014

  nimma lekhana sogasagi moodi bandide.nice.

  ಉತ್ತರ
 3. ವಿಜಯ್ ಪೈ
  ಜುಲೈ 20 2014

  ಶ್ರೀಪಾದ ಭಟ್ಟರ ‘ಸಾಹಿತ್ಯ ಕ್ಷೇತ್ರದ ಒಳ-ಹೊರಗು’ ಲೇಖನಮಾಲೆ ಚೆನ್ನಾಗಿ ಮೂಡಿಬರುತ್ತಿದೆ. ಧನ್ಯವಾದಗಳು ಲೇಖಕರಿಗೆ 🙂

  ಉತ್ತರ

Trackbacks & Pingbacks

 1. ಸಾಹಿತ್ಯಕ್ಷೇತ್ರದ ಒಳಹೊರಗು-6 | ನಿಲುಮೆ
 2. ಸಾಹಿತ್ಯಕ್ಷೇತ್ರದ ಒಳಹೊರಗು-6 | ನಿಲುಮೆ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments