ವಿಷಯದ ವಿವರಗಳಿಗೆ ದಾಟಿರಿ

ಜೂನ್ 23, 2014

3

ಸಾಹಿತ್ಯಕ್ಷೇತ್ರದ ಒಳಹೊರಗು – 4

‍ನಿಲುಮೆ ಮೂಲಕ

– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ,ತುಮಕೂರು ವಿಶ್ವವಿದ್ಯಾನಿಲಯ

ಡಿವಿಜಿ ಹೇಳಿದರು: ಹಳೆ ಬೇರು ಹೊಸ ಚಿಗುರು ಕೂಡಿರಲು ಮರಸೊಗಸು! ಎಂಥಾ ಮಾತು! ಇದನ್ನು ಸಮಾಜ-ಕುಟುಂಬ ಸೇರಿದಂತೆ ಯಾವ ಕ್ಷೇತ್ರಕ್ಕೂ ಅನ್ವಯಿಸಬಹುದು. ಹಾಗೆಯೇ ಸಂಗೀತ, ಸಾಹಿತ್ಯಕ್ಕೂ ಅನ್ವಯಿಸಿ ನೋಡಬಹುದು. ಇದರಿಂದ ನಿರಾಸೆ ಕಾದಿದ್ದರೂ ಅಚ್ಚರಿ ಇಲ್ಲ.

ಮೈಸೂರಿನಲ್ಲಿ ವರ್ಷಗಳ ಹಿಂದೆ ಒಂದು ಕಾರ್ಯಕ್ರಮ. ಖ್ಯಾತ ನೃತ್ಯಗುರು, ಹಿರಿಯ ಕಲಾವಿದೆ ಡಾ. ವಸುಂಧರಾ ದೊರೆಸ್ವಾಮಿ ಅವರಿಗೆ ಶಿಷ್ಯವೃಂದದಿಂದ ಅಭಿನಂದನೆ. ಆಮೇಲೆ ಅವರು ಮಾತನಾಡುತ್ತ, ನನ್ನ ಬಳಿ ಭರತ ನಾಟ್ಯ ಕಲಿಯಲು ಉತ್ಸಾಹದಿಂದಲೇ ಹೊಸಬರು ಬರುತ್ತಾರೆ. ನಾಲ್ಕಾರು ಹೆಜ್ಜೆಗಳನ್ನು, ಒಂದಿಷ್ಟು ಅಂಗಾಭಿನಯ ಕಲಿತು ವಿದೇಶಕ್ಕೆ ಹೋಗಿಬಿಡುತ್ತಾರೆ. ಹಣ ಮಾಡುವ ಹುಮ್ಮಸ್ಸು. ನಾಟ್ಯ, ನಟುವಾಂಗಗಳ ಬಗ್ಗೆ ಸಮಗ್ರ ಪರಿಜ್ಞಾನ ಪಡೆಯುವ ವ್ಯವಧಾನವೇ ಇಂದಿನ ತಲೆಮಾರಿನಲ್ಲಿ ಇಲ್ಲ ಎಂದು ಹೇಳಿದರು. ಅಸಾಧಾರಣ ಕಲಾವಿದೆಯಾದ ಅವರು ವಿಷಾದದಿಂದಲೇ ಈ ಮಾತು ಹೇಳಿದ್ದರು. ಕಲಿಕೆಯಲ್ಲಿನ ಶ್ರದ್ಧೆ ಕುರಿತ ಇದೇ ಮಾತು ಸಾಹಿತ್ಯಕ್ಕೂ ಸಲ್ಲುತ್ತದೆ. ಸಾಹಿತ್ಯ ಕ್ಷೇತ್ರ ಪ್ರವೇಶಿಸುವವರೆಲ್ಲ ವಿದೇಶಕ್ಕೆ ಹೋಗಿಬಿಡುವುದಿಲ್ಲ. ಕನ್ನಡ ಸಾಹಿತ್ಯ ಓದುದವವರ ಕಾರ್ಯವ್ಯಾಪ್ತಿಯೂ ದೇಶ, ಭಾಷೆಗಳ ಕಾರಣದಿಂದ ಸೀಮಿತವಾಗಿಹೋಗಿದೆ; ಅಥವಾ ಹಾಗೆ ಭಾವಿಸಲಾಗಿದೆ; ಅಥವಾ ತಮಗೆ ತಾವೇ ಮಿತಿಯನ್ನು ಇವರೇ ವಿಧಿಸಿಕೊಂಡುಬಿಡುತ್ತಾರೆ. ಸ್ನಾತಕೋತ್ತರ ಪದವಿ ಅಥವಾ ಪಿಎಚ್.ಡಿ ಪದವಿಯಲ್ಲಿ ಭಾಷಾ ಪ್ರಯೋಗವನ್ನು ಅರ್ಧಂಬರ್ಧ ಕಲಿತು ತಾವು ಚಿಂತಕರೆಂದೋ ಸಾಹಿತಿಗಳೆಂದೋ ಇಲ್ಲವಾದಲ್ಲಿ ಕೊನೆಗೆ ಲೇಖಕರೆಂದೋ ಬೋರ್ಡು ಹಾಕಿಕೊಂಡೇಬಿಡುತ್ತಾರೆ. ಜೊತೆಗೆ ಪತ್ರಿಕೆ, ಟಿವಿ ಕಾರ್ಯಕ್ರಮ ಇತ್ಯಾದಿಗಳ ಲಾಬಿ ಶುರು ಮಾಡಿ ಪ್ರಚಾರದ ಹಿಂದೆ ಹೋಗುತ್ತಾರೆ. ಅಲ್ಲಿಗೆ ಅವರ ಕಲಿಕೆ ಮುಗಿದಂತೆ. ಹಳೆಯದನ್ನು ತಿರುಗಿಯೂ ನೋಡದೇ ಹೊಸದನ್ನು ಅರಗಿಸಿಕೊಳ್ಳದೇ ಕಲಿತಷ್ಟೇ ವಿದ್ಯೆಯನ್ನು ತಿರುಚುತ್ತ ಚಾಲ್ತಿಯಲ್ಲಿ ಇರಲು ಬಯಸುತ್ತಾರೆ. ಇದು ಯುವ ಸಾಹಿತ್ಯಾಸಕ್ತರ ಒಂದು ಮುಖ.

ಇನ್ನು ಹಳೆಬೇರುಗಳು. ಇದಕ್ಕೊಂದು ನಿದರ್ಶನ. ತಂಜಾವೂರಿನ ತಮಿಳು ವಿಶ್ವವಿದ್ಯಾನಿಲಯದಲ್ಲಿ ಜಾನಪದ ಸಂಬಂಧಿಯಾದ ಎರಡು ದಿನಗಳ ರಾಷ್ಟ್ರ ಮಟ್ಟದ ಸಮ್ಮೇಳನ. ಅದರ ಉದ್ಘಾಟಕರು ಅದೇ ವಿವಿಯ ಮೊದಲ ಕುಲಪತಿಗಳಾಗಿದ್ದ ಪ್ರೊ. ವಿ ಐ ಸುಬ್ರಹ್ಮಣ್ಯಂ ಅವರು. ಅವರು ಮೂಲತಃ ಭಾಷಾವಿಜ್ಞಾನಿ. ಅದಾಗಲೇ ಎಪ್ಪತ್ತು ದಾಟಿದ್ದ ಅವರು ಮಾನವಿಕ, ಸಮಾಜವಿಜ್ಞಾನಗಳ ಬಗ್ಗೆ ಅಪಾರ ಒಲವು ಇರಿಸಿಕೊಂಡು ಚಟುವಟಿಕೆಯಿಂದ ಇದ್ದವರು. ಸಮ್ಮೇಳನದ ಉದ್ಘಾಟನೆಗೆ ಬಂದ ಅವರು ಜಾನಪದ ಕುರಿತ ಎಲ್ಲ ವಿಚಾರಗೋಷ್ಠಿಗಳಲ್ಲಿ ಆಸಕ್ತಿಯಿಂದ ಪಾಲ್ಗೊಂಡರು, ಎರಡೂ ದಿನ ಅಲ್ಲಿಂದ ಕದಲಲಿಲ್ಲ. ಯುವಕರ, ಹೊಸಬರ, ಹಳೆಯ ವಿದ್ವಾಂಸರ-ಹೀಗೆ ಎಲ್ಲರ ಪ್ರಬಂಧಗಳನ್ನೂ ಗಮನವಿಟ್ಟು ಕೇಳಿದರು. ಎಲ್ಲರೊಂದಿಗೂ ಚರ್ಚೆ ನಡೆಸಿ, ಸರಿ-ತಪ್ಪುಗಳ ಜಿಜ್ಞಾಸೆ ನಡೆಸಿದರು. ಅವರೊಬ್ಬ ಅಪರೂಪದ ವ್ಯಕ್ತಿಯಾಗಿ ಕಂಡಿದ್ದರು. ಯಾಕೆಂದರೆ ಅದಾಗಲೇ ಇಂಥ ಹತ್ತಾರು ಸಮ್ಮೇಳನಗಳಲ್ಲಿ ಭಾಗವಹಿಸಿದ್ದ ನಾನು ಹಿರಿಯರೊಬ್ಬರು ಆಸಕ್ತಿಯಿಂದ ಕಿರಿಯರು ಹೇಳುವುದನ್ನು ಕೇಳಿ, ತಿದ್ದಿ, ಉತ್ತೇಜಿಸುವ ಸಂದರ್ಭವನ್ನೇ ಅನುಭವಿಸಿರಲಿಲ್ಲ! ಈ ಘಟನೆಯಾಗಿ ಹತ್ತು ವರ್ಷಗಳೇ ಕಳೆದಿವೆ. ಈಗಲೂ ನಾನು ಭಾಗವಹಿಸುವ ಸಮ್ಮೇಳನಗಳಲ್ಲಿ ಅಂಥ ಒಂದಿಬ್ಬರನ್ನು ಮಾತ್ರ ನೋಡಲು ಸಾಧ್ಯವಾಗಿದೆಯಷ್ಟೆ.

ಸಾಮಾನ್ಯವಾಗಿ ಸಾಹಿತ್ಯ ಸಮ್ಮೇಳನ, ವಿಚಾರಗೋಷ್ಠಿಗಳ ಉದ್ಘಾಟನೆಗೆ ಬರುವವರು ಆಯಾ ಕ್ಷೇತ್ರದಲ್ಲಿ ಹೆಸರು ಮಾಡಿದವರೇ ಆಗಿರುತ್ತಾರೆ. ವಯಸ್ಸಿನಲ್ಲೂ ಹಿರಿಯರೇ ಆಗಿರುತ್ತಾರೆಂದು ಬೇರೆ ಹೇಳಬೇಕಿಲ್ಲ. ಉದ್ಘಾಟನೆಯ ತರುವಾಯ ಒಂದಿಷ್ಟು ಗೋಷ್ಠಿಗಳು ಇದ್ದೇ ಇರುತ್ತವೆ. ಅದನ್ನೆಲ್ಲ ಅವರು ಕೇಳಿಸಿಕೊಳ್ಳುವ ವ್ಯವಧಾನವನ್ನು ತೋರಿಸುವುದು ಕಷ್ಟ. ತಮ್ಮ ಭಾಷಣದ ಕೆಲಸ ಮುಗಿಯುತ್ತಿದ್ದಂತೆ ಸಂಘಟಕರಿಂದ ಪಡೆಯಬೇಕಾದುದನ್ನು ಪಡೆದು ಹೊರಟುಬಿಡುವುದು ಸಾಮಾನ್ಯ ಸಂಗತಿ. ತಮ್ಮ ಪರಿಚಿತರು, ಸಮ ಸಾಧಕರು, ವಯಸ್ಸಿನವರೇನಾದರೂ ಪ್ರಬಂಧ ಮಂಡಿಸುವವರಿದ್ದರೆ ದಾಕ್ಷಿಣ್ಯಕ್ಕೆ ಅವರ ಸರದಿ ಮುಗಿಯುವವರೆಗೆ ಅಲ್ಲಿ ಇರಬಹುದು. ತುಂಬ ಚೆನ್ನಾಗಿ ಮಾತನಾಡಿದಿರಿ ಎಂದು ಉಪಚಾರಕ್ಕೆ ಹೇಳಿ ಹೊರಡಬಹುದು. ಇಷ್ಟಲ್ಲದೇ ಯುವಕರು ಅದರಲ್ಲೂ ಹೊಸಬರೇನಾದರೂ ಮಾತನಾಡುವವರಿದ್ದಾರೆಯೇ ಅವರು ಹೇಗೆ ಮಾತನಾಡುತ್ತಾರೆ, ವಿಷಯ ಸಿದ್ಧತೆ ಹೇಗಿದೆ, ಹೊಸ ತಲೆಮಾರಿನ ದೃಷ್ಟಿಕೋನ ಹೇಗಿದೆ ಎಂದು ತಿಳಿಯುವ, ಅವರು ತಪ್ಪಿದ್ದಲ್ಲಿ ತಿದ್ದುವ ಜವಾಬ್ದಾರಿಯನ್ನು ಇಂದಿನ ಹಿರಿಯರು ಸಮ್ಮೇಳನ, ಗೋಷ್ಠಿಗಳಲ್ಲಿ ಮಾಡುವುದನ್ನು ಕಾಣುವುದೇ ಕಷ್ಟ. ಯಾಕೆ ಹೀಗೆ? ಹುಡುಗರು ನಮ್ಮ ಮಾತನ್ನೇನು ಕೇಳುತ್ತಾರೆ ಎಂಬ ಭಾವನೆಯೋ ಅಥವಾ ಅವರ ಮಾತನ್ನೇನು ಕೇಳುವುದು ಎಂಬ ತಾತ್ಸಾರವೋ? ಉತ್ತರ ಏನೇ ಇರಲಿ, ಇಂಥ ಬೆಳವಣಿಗೆಯಿಂದಾಗಿ ಹಳೆ ಬೇರು ಮತ್ತು ಹೊಸ ಚಿಗುರುಗಳ ನಡುವೆ ದೃಷ್ಟಿಕೋನ, ವಿಚಾರಗಳ ಕಂದಕವಂತೂ ಉಂಟಾಗಿರುವುದು ಸುಳ್ಳಲ್ಲ. ಇದರಿಂದ ನಷ್ಟ ಯಾರಿಗೆ? ಸಾಹಿತ್ಯಕ್ಕಲ್ಲವೇ?

ಸಾಹಿತ್ಯಕ ಸಮ್ಮೇಳನ, ವಿಚಾರಗೋಷ್ಠಿಗಳ ಆಯೋಜನೆ ಇನ್ನೂ ಮಜವಾದ ಅನುಭವ ನೀಡುತ್ತದೆ. ಗೋಷ್ಠಿಗಳೇನಿರಬೇಕು, ಯಾರನ್ನು ಆಹ್ವಾನಿಸಬೇಕು ಎಂಬುದರಿಂದ ಸಮಸ್ಯೆ ಆರಂಭ. ಧನ ಸಹಾಯ ಮಾಡುವವರಿದ್ದರೆ ಅವರು ಸೂಚಿಸುವವರನ್ನು ಆಹ್ವಾನಿಸಲೇಬೇಕು! ಸಂಘಟಕರು ಬೇರೆ ಬೇರೆ ಕಾರಣಕ್ಕೆ ಹೆಸರುಮಾಡಿದ ಕೆಲವರ ಮರ್ಜಿಯಲ್ಲಿ ಇರುವುದುಂಟು. ಅಂಥ ಸಂದರ್ಭದಲ್ಲಿ ಅವರು ಸೂಚಿಸುವವರನ್ನು ಆಹ್ವಾನಿಸಲೇಬೇಕು. ಕನ್ನಡದ ಪರಿಸ್ಥಿತಿ ಹೇಗಿದೆ ನೋಡೋಣ. ಈಗಾಗಲೇ ನಮ್ಮ ನಡುವೆ ಇರುವ ದೊಡ್ಡವರನ್ನು (ದೊಡ್ಡ ದೊಡ್ಡ ಪ್ರಶಸ್ತಿ ಪಡೆದವರು, ಚಿಂತಕರು ಎನಿಸಿಕೊಂಡವರು ಇತ್ಯಾದಿ) ಸಮ್ಮೇಳನದ ಉದ್ಘಾಟನೆಗೋ ಸಮಾರೋಪಕ್ಕೋ ಆಹ್ವಾನಿಸಲು ತೀರ್ಮಾನಿಸಿ ಸಂಘಟಕರು ಅವರ ಬಳಿ ಹೋದರೆ ಸಮ್ಮೇಳನದ ಮೂಲಚೂಲ ವಿಚಾರಿಸಿ ಯಾರೆಲ್ಲ ವೇದಿಕೆಗೆ ಬರುತ್ತಾರೆ ಎಂಬ ಮಾಹಿತಿ ಪಡೆದು ತಮ್ಮ ವಲಯವೇ ಇದೆ ಎಂದರೆ ಒಪ್ಪಿಗೆ ಕೊಡುವುದು ಇಲ್ಲವಾದಲ್ಲಿ ಅಂದು ಬಿಡುವೇ ಇಲ್ಲ ಎಂದು ಜಾರುವುದೂ ಹೊಸದಲ್ಲ. ಕೆಲವೊಮ್ಮೆ ಸಂಘಟಕರೇನಾದರೂ ಪ್ರಬಂಧಕಾರರ ಪಟ್ಟಿಯನ್ನು ಅಂತಿಮಗೊಳಿಸಿಯೇ ಬಿಟ್ಟಿದ್ದರೆ ಅದನ್ನು ಬದಲಿಸಲು ಸೂಚಿಸುವುದಷ್ಟೇ ಅಲ್ಲ, ಬದಲಿಸಿದ್ದೂ ಇದೆ! ಇಂಥ ಸಂದರ್ಭದಲ್ಲಿ ಸಂಘಟಕರ ಪರಿಸ್ಥಿತಿ ದೇವರಿಗೇ(ಆತನಿದ್ದರೆ)ಪ್ರೀತಿ.

ಇದರ ಮತ್ತೊಂದು ಮುಖ: ಇದೇ ಅಂಕಣದ ಹಿಂದಿನ ಭಾಗದಲ್ಲಿ ಹೇಳಿದ ಗಂಡ-ಹೆಂಡತಿ ಸಾಹಿತ್ಯಕ ರಾಜ್ಯಭಾರದ ಮುಂದುವರಿದ ರೂಪ ಇದು. ಹೆಸರು ಮಾಡಿದವರು ಎಂಬ ಕಾರಣಕ್ಕೆ ಗಂಡನನ್ನು ಸಮ್ಮೇಳನಕ್ಕೆ ಆಹ್ವಾನಿಸಿದರೆ ಅವರ ಹೆಂಡತಿಯನ್ನೂ ಆಹ್ವಾನಿಸಲೇಬೇಕು. ಇವರು ಬರುವುದು ಸಾಮಾನ್ಯ ಪ್ರಬಂಧ ಮಂಡನೆಗಲ್ಲ, ಉದ್ಘಾಟನೆಗೆ ಗಂಡ ಬಂದರೆ, ಸಮಾರೋಪದ ಅಧ್ಯಕ್ಷತೆಗೆ ಹೆಂಡತಿಯನ್ನು ಆಹ್ವಾನಿಸಲೇಬೇಕು. ಇಲ್ಲವಾದಲ್ಲಿ ಅವರ ವಿದ್ವತ್ತು ಸಮ್ಮೇಳನಕ್ಕೆ ಲಭಿಸುವುದಿಲ್ಲ. ಇಂಥ ಚಾಳಿಗಳೂ ನಮ್ಮ ಹಿರಿಯರಲ್ಲಿದೆ. ಒಬ್ಬಿಬ್ಬರಲ್ಲಿ ಅಲ್ಲ. ಬಹುತೇಕರಲ್ಲಿ. ಇದು ಈಗೀಗ ಕಿರಿಯರಲ್ಲೂ ವ್ಯಾಪಿಸುತ್ತಿದೆ. ತಾವು ಹಾಕಿಕೊಡುತ್ತಿರುವ ಮಾದರಿಯ ಪರಿಣಾಮ ಮುಂದೇನಾಗಬಹುದು ಎಂದು ಹಿರಿಯರು ಎಂದಾದರೂ ಯೋಚಿಸಿದ್ದಾರಾ? ಇದಕ್ಕೆ ದೊರೆಯುವ ಸಾಮಾನ್ಯ ಉತ್ತರ-ಏನು ಮಾಡೋದು ಸಾರ್? ಇದೇ ಇಂದಿನ ಕ್ರಮವಾಗಿದೆ ಎಂಬುದು.

ಸಾಹಿತ್ಯಕ್ಕೆ ಹೋಲಿಸಿದರೆ ಸಂಗೀತ ಕ್ಷೇತ್ರ ತುಸು ವಾಸಿ. ಗಮಕ ಗ್ರಾಮ ಮತ್ತೂರಿನಲ್ಲಿ ವರ್ಷದ ಹಿಂದೆ ಅಹೋರಾತ್ರಿ ಗಮಕೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಒದಗಿತ್ತು. ಅದೊಂದು ಅಪರೂಪದ ಉತ್ಸವ. ಐದಾರು ವರ್ಷದ ಚಿಲ್ಟಾರಿಗಳಿಂದ ಹಿಡಿದು ಎಂಬತ್ತು ದಾಟಿದ ಜ್ಞಾನ-ವಯೋ ವೃದ್ಧರಿಗೆ ಒಂದೇ ವೇದಿಕೆ! ಗಂಟೆಗೆ ಒಂದೊಂದು ಜೋಡಿ. ಸಂಜೆ ಉದ್ಘಾಟನೆಯ ವೇಳೆ ಎಂಬತ್ತರ ಯುವಕರಾದ ಮಾರ್ಕಂಡೇಯ ಅವಧಾನಿಗಳ ಗಮಕ. ಅದಾದ ಮೇಲೆ ಹತ್ತಾರು ಜೋಡಿಗಳು. ಬೆಳಗಿನ ಜಾವ ಮೂರು ಗಂಟೆ ವೇಳೆಗೆ ಐದಾರು ವರ್ಷದ ಮಕ್ಕಳ ಗಮಕ ವಾಚನ-ವ್ಯಾಖ್ಯಾನ ಪ್ರದರ್ಶನ. ಅಜ್ಜ ಅವಧಾನಿಗಳು ಜಾಗ ಬಿಟ್ಟಿದ್ದರೆ ಕೇಳಿ. ಮಾರನೆಯ ದಿನ ಬೆಳಕು ಹರಿದರೂ ಬೇರೆ ಬೇರೆ ವಯೋಮಾನ, ಊರಿನ ಜನರ ವಾಚನ, ವ್ಯಾಖ್ಯಾನ ಕೇಳಿಯೇ ಅವರು ಎದ್ದದ್ದು. ಅಬ್ಬಬ್ಬಾ! ಈ ಅವಧಾನಿಗಳ ವ್ಯವಧಾನ ಯಾರಿಗಿರಲು ಸಾಧ್ಯ? ಬರೀ ಇಷ್ಟೇನೇ? ಅಲ್ಲ. ತಾವು ಆಗ ತಾನೇ ಕೇಳಿದ ಗಮಕ ವಾಚನ-ವ್ಯಾಖ್ಯಾನ ಮಾಡಿದವರ ಬಳಿ ಸ್ವತಃ ಹೋಗಿ ವಯೋಭೇದ, ಅನುಭವಭೇದಗಳನ್ನೆಲ್ಲ ಮರೆತು ಹತ್ತಿರ ಕರೆದು ಅವರ ಗುಣಾವಗುಣಗಳನ್ನು ತಿಳಿಹೇಳಿ, ಬೆನ್ನು ಚಪ್ಪರಿಸಿ ಭೇಷ್ ಎಂದು ಹೇಳುತ್ತಿದ್ದರು. ಎಳೆಯರಿಗೆ ರೋಮಾಂಚನ! ಅಜ್ಜನಿಗೆ ತೃಪ್ತಿ. ಇಂಥ ಮಾದರಿಗಳನ್ನು ಸಾಹಿತ್ಯಕ ವಾತಾವರಣದಲ್ಲಿ ಅನುಭವಿಸಲು ಸಾಧ್ಯವೇ?

ತಮ್ಮ ತಮ್ಮ ವಲಯದಲ್ಲಿ ಗುರುತಿಸಿಕೊಂಡ ಒಂದಿಷ್ಟು ಜನರನ್ನು ಮಾತ್ರ ಹೆಸರಾದವರು ಉತ್ತೇಜಿಸುತ್ತ ಹೋಗುವಂತಾದರೆ ಸಾಹಿತ್ಯದಲ್ಲಿ ಸ್ಥಾಪಿತವಾದ ವಲಯ ಮತ್ತು ಪಂಥಗಳ ಅಂತರ ಎಂದಾದರೂ ಕಡಿಮೆಯಾಗುವ ಸಾಧ್ಯತೆ ಇದೆಯೇ? ಕಿರಿಯರು ಕೇಳಲಿ, ಬಿಡಲಿ ಆದರ್ಶಪ್ರಾಯವಾದ ಮಾರ್ಗ ಹಾಗೂ ಮಾದರಿ ರೂಪಿಸಬೇಕಾದ ಜವಾಬ್ದಾರಿ ಹಿರಿಯರದ್ದು.  ಸಾಹಿತ್ಯ ಕ್ಷೇತ್ರದಲ್ಲಿ ಇದು ಈಗೀಗ ನಾಪತ್ತೆಯಾಗುತ್ತಿರುವುದು, ಸಾಲದ್ದಕ್ಕೆ ಕಂಡಕಂಡ ಸಮ್ಮೇಳನ, ಪ್ರಶಸ್ತಿ, ಪುರಸ್ಕಾರಗಳೆಲ್ಲ ತಮಗೇ ಬರಲಿ, ಎಲ್ಲೆಲ್ಲೂ ತಮ್ಮ ತಮ್ಮ ವಲಯವೇ ಇರಲೆಂಬಂತೆ ಹಿರಿಯರೇ ಲಾಬಿಗೆ ಇಳಿಯುತ್ತಿರುವುದು ಮಾತ್ರ ಸಾಹಿತ್ಯಕ ದುರಂತ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments