ಸಾಹಿತ್ಯ ಕ್ಷೇತ್ರದ ಒಳಹೊರಗು – ಭಾಗ ೩
-ಡಾ.ಶ್ರೀಪಾದ ಭಟ್, ತುಮಕೂರು
ಸಾಹಿತ್ಯ ಕ್ಷೇತ್ರದ ಒಳಹೊರಗು – ಭಾಗ ೧
ಸಾಹಿತ್ಯ ಕ್ಷೇತ್ರದ ಒಳಹೊರಗು – ಭಾಗ ೨
ಸಾಹಿತ್ಯದ ಮಾರ್ಕೆಟಿಂಗ್!
ಇಂದು ಎಲ್ಲ ಕ್ಷೇತ್ರಕ್ಕೂ ಅನಿವಾರ್ಯವಾದ ಮಾರ್ಕೆಟಿಂಗ್ ಸಾಹಿತ್ಯವನ್ನು ಬಿಡುತ್ತದೆಯೇ? ಹೇಳಿಕೇಳಿ ಸಾಹಿತ್ಯ ಎಂಬುದು ಪುಸ್ತಕೋದ್ಯಮದ ಭಾಗವಾಗಿ ಹೋಗಿದೆ. ಉದ್ಯಮ ಎಂದ ಮೇಲೆ ಮುಗೀತು. ಆದರ್ಶಗಳು ಏನಿದ್ದರೂ ಅದನ್ನು ಹಿಂಬಾಲಿಸಬೇಕಷ್ಟೆ. ಸಾಹಿತಿಗಳೆನಿಸಿಕೊಂಡವರು ಈ ಉದ್ಯಮವನ್ನು ಹಿಂಬಾಲಿಸುತ್ತಿದ್ದಾರೆ. ಕೆಲವೊಮ್ಮೆ ಇದು ಉಲ್ಟಾ ಆಗಿ ತಮಾಷೆಗಳೂ ಆಗುವುದುಂಟು. ಕನ್ನಡದಲ್ಲಿ ಎಲ್ಲೂ ಹೆಸರೇ ಕೇಳಿರದ ಸಂಪತ್ತೈಯ್ಯಂಗಾರ್ ಎಂಬ ಎಪ್ಪತ್ತು ದಾಟಿದ ವೃದ್ಧರೊಬ್ಬರಿಗೆ ತಮ್ಮ ಅರುವತ್ತು ವರ್ಷದ ಪಾಕಶಾಸ್ತ್ರದ ಪ್ರಾವೀಣ್ಯವನ್ನು ಕನ್ನಡದಲ್ಲಿ ದಾಖಲಿಸಬೇಕೆಂಬ ಹಂಬಲ ಹುಟ್ಟಿತು. ಅನುಭವವನ್ನು ಬರೆದರು. ಒಂದಿಷ್ಟು ಪುಟಗಳಾದವು. ಆಸಕ್ತರಿಗೆ ಓದಲು ನೀಡಿ ಸಲಹೆ ಕೇಳಿದರು. ಅದರಂತೆ ತಿದ್ದಿ ತೀಡಿ ಮತ್ತೆ ಬರೆದು ಒಂದು ಪುಸ್ತಕವಾಗುವಷ್ಟು ಬರೆದರು. ಅಚ್ಚುಮಾಡಿಸಲು ಹೆಸರಾಂತ ಪ್ರಕಾಶಕರ ಅಂಗಡಿ ಮುಂದೆ ದಿನಗಟ್ಟಲೆ ನಿಂತರು. ಅವರು ಕಾಣದ ಪ್ರಕಾಶಕರಿಲ್ಲ. ಆದರೆ ಎಲ್ಲರದೂ ಒಂದೇ ಉತ್ತರ-ಆಗಲ್ಲ ಹೋಗಿ. ಪುಟ ತೆರೆದು ನೋಡುವ ವ್ಯವಧಾನವೂ ಪ್ರಕಾಶಕರಿಗಿಲ್ಲ. ಯಾಕೆಂದರೆ ಈ ಅಯ್ಯಂಗಾರರು ಹೆಸರಾಂತ ಸಾಹಿತಿಗಳ ಶಿಫಾರಸು ಇಟ್ಟುಕೊಂಡವರಲ್ಲ, ಈಗಾಗಲೇ ಪಾಕಶಾಸ್ತ್ರದಲ್ಲಿ ಮಾಧ್ಯಮಗಳಲ್ಲಿ ಹೆಸರು ಮಾಡಿದವರೂ ಅಲ್ಲ. ಬೇರೆ ದಾರಿ ಕಾಣದೇ ಅಯ್ಯಂಗಾರರು ಸ್ವತಃ ಅಚ್ಚು ಹಾಕಿಸಲು ಮುಂದಾದರು. ಸ್ವಂತ ಹಣವಿಲ್ಲ. ಯಾವುದೋ ಡಿಟಿಪಿ ಸೆಂಟರಿಗೆ ಹಸ್ತಪ್ರತಿ ಕೊಟ್ಟರು. ಮೂರ್ನಾಲ್ಕು ತಿಂಗಳು ಅಲೆಸಿದ ಅಂಗಡಿಯಾತ ಟೈಪು ಮಾಡುವುದಿರಲಿ, ಮೂಲ ಹಸ್ತಪ್ರತಿಯನ್ನೇ ಕಳೆದು ಕೈಝಾಡಿಸಿದ!
ಅಜ್ಜ ಸೋಲದೇ ಮತ್ತೆ ಹಸ್ತಪ್ರತಿ ತಯಾರಿಸಿದರು. ಅಜ್ಜನ ಕಷ್ಟ ನೋಡಿದ ಯುವ ಸಾಹಿತ್ಯಾಸಕ್ತರೊಬ್ಬರು ಈ ಬಾರಿ ಸ್ವತಃ ಟೈಪು ಮಾಡುವ ಜವಾಬ್ದಾರಿ ಹೊತ್ತು ಕೆಲಸ ಮುಗಿಸಿಕೊಟ್ಟರು. ಒಂದು ಪುಸ್ತಕ ಪ್ರಕಟಿಸಲು ಅಪ್ಪ ಇಷ್ಟೆಲ್ಲ ಕಷ್ಟ ಪಡುತ್ತಿರುವುದನ್ನು ಕಂಡ ಕಾರ್ಪೊರೇಟ್ ಸಂಸ್ಥೆಯಲ್ಲಿ ಕೆಲಸಮಾಡುವ ಮಗ ಪ್ರಕಟಣೆಗೆ ತಾನೇ ಹಣ ಹೂಡಲು ಮುಂದಾದ. ಮೊಮ್ಮಗಳ ಹೆಸರಲ್ಲಿ ಪ್ರಕಾಶನ ಸಂಸ್ಥೆ ಹುಟ್ಟಿತು. ಫಲವಾಗಿ ಸಂಪತ್ತೈಯ್ಯಂಗಾರರ ಸಾಂಪ್ರದಾಯಿಕ ಪಾಕಶಾಸ್ತ್ರ 2008ರಲ್ಲಿ ಪ್ರಕಟವಾಯಿತು. ಕೆಲವು ಪತ್ರಿಕೆಗಳಲ್ಲಿ ಇದೊಂದು ಭಿನ್ನವೂ ಅಪರೂಪವೂ ಆದ ಪಾಕಶಾಸ್ತ್ರ ಕೃತಿ ಎಂಬ ಮೆಚ್ಚುಗೆಗಳು ಬಂದವು. ವಸ್ತು, ವಿನ್ಯಾಸ, ಪ್ರಸ್ತುತಪಡಿಸುವಿಕೆ, ಅಡುಗೆ ಪದಾರ್ಥಗಳ ಮಹತ್ತ್ವ, ಸಂದರ್ಭ, ಆಹಾರದ ಪೌರಾಣಿಕ ಹಿನ್ನೆಲೆ ಇತ್ಯಾದಿ ಹೊಸ ವಿಷಯಗಳ ಕಾರಣದಿಂದ ನಿಜಕ್ಕೂ ಇದು ಭಿನ್ನ ಕೃತಿ. ಬಿಸಿ ದೋಸೆಯಂತೆ ಕೃತಿ ಮಾರಾಟವಾಯಿತು. 2013ರ ವೇಳೆಗೆ ಈ ಕೃತಿ ಪರಿಷ್ಕøತ ಐದು ಮುದ್ರಣ ಕಂಡಿದೆ. ಅಜ್ಜನಿಗೆ ಈಗ ಧನ್ಯತಾ ಭಾವ. ಕನ್ನಡದಲ್ಲಿ ನೂರಾರು ಪಾಕಶಾಸ್ತ್ರ ಕೃತಿಗಳಿವೆ. ಇದ್ಯಾವುದೋ ಅಂಥದ್ದೇ ಒಂದು ಎಂದು ಶುರುವಿನಲ್ಲಿ ಮೂಗು ಮುರಿದಿದ್ದ ಪ್ರಕಾಶಕರು ಈಗ ಅಜ್ಜನ ಬಳಿ ಪ್ರಕಟಣೆಗೆ ಅನುಮತಿ ಕೇಳಿ ದುಂಬಾಲು ಬಿದ್ದಿದ್ದಾರೆ. ಅಜ್ಜ ಒಪ್ಪಿಲ್ಲ! ದೊಡ್ಡಬಳ್ಳಾಪುರದಂಥ ಊರಿನಲ್ಲಿದ್ದು ಅಜ್ಜ ಇಷ್ಟು ಮಾಡಿದ್ದು ಸಣ್ಣ ಕೆಲಸವೇ? ಗೆದ್ದೆತ್ತಿನ ಬಾಲ ಹಿಡಿಯುವುದು ಎಂದರೆ ಇದೇ. ಇದೊಂದು ನಿದರ್ಶನ ಅಷ್ಟೆ.
ಕಳೆದ ಅಂಕಣದಲ್ಲಿ ಪ್ರಸ್ತಾಪಿಸಿದ್ದ ಗೈಡ್ ಸಂಸ್ಕೃತಿಯನ್ನು ಇಲ್ಲಿ ತುಸು ವಿಸ್ತರಿಸಬಹುದು. ನಮಗೆ ಸೃಷ್ಟಿಗಿಂತಲೂ ಉಪಸೃಷ್ಟಿಗಳ ಮೇಲೆಯೇ ವ್ಯಾಮೋಹ ಹೆಚ್ಚು. ಯಾಕೆಂದರೆ ಇಲ್ಲಿ ಕಷ್ಟ ಕಡಿಮೆ. ಲಾಭ ಜಾಸ್ತಿ. ಯಾವ ಪದವಿ ಪಡೆದರೂ ಉದ್ಯೋಗ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಿರುವುದು ಸಾಮಾನ್ಯ. ಕರ್ನಾಟಕದಲ್ಲಿ ನಡೆಯುವ ಯುಜಿಸಿ ಆದಿಯಾಗಿ ಎಲ್ಲ ಬಗೆಯ ಕನ್ನಡ ಪರೀಕ್ಷಾ ಪತ್ರಿಕೆಗೆ ಎಲ್ಲದಕ್ಕೂ ಇರುವಂತೆ ಒಂದಿಷ್ಟು ಮೂಲ ಪರಾಮರ್ಶನಗಳಿರುತ್ತವೆ. ಅದನ್ನೆಲ್ಲ ಓದುವ ಬದಲು ಅವುಗಳ ನೋಟ್ಸಿನ ಗೈಡ್ ತಯಾರಿಸಿದರೆ? ಇಂಥ ಯೋಚನೆಯಲ್ಲೇ ಕೆಲವರ್ಷಗಳ ಹಿಂದೆ ವಿವಿಯೊಂದರ ಎಂಎ ತರಗತಿಯ ಮೇಷ್ಟ್ರುಗಳ ಹಳೆ ನೋಟ್ಸ್ ಆಧರಿತ ಕೋಶವೊಂದು ಹೊರಬಂತು. ಆ ಕೋಶವಿದ್ದರೆ ಕನ್ನಡ ಎಂಎಯಿಂದ ಹಿಡಿದು ಯುಜಿಸಿ, ರೈಲ್ವೆ, ಬ್ಯಾಂಕು ಇತ್ಯಾದಿ ಎಲ್ಲೇ ಕೇಳುವ ಕನ್ನಡ ಸಂಸ್ಕøತಿ, ಜಾನಪದ, ಸಾಹಿತ್ಯ, ಮೀಮಾಂಸೆ, ವಿಮರ್ಶೆ ಹೀಗೆ ಒಂದೇ ಎರಡೇ ಎಲ್ಲಕ್ಕೂ ಸಿದ್ಧ ಉತ್ತರ ದೊರೆಯುತ್ತದೆ. ಕರ್ನಾಟಕ ಸಾಹಿತ್ಯ ಸಂಸ್ಕøತಿ ಕುರಿತ ಪ್ರಶ್ನೆಗೆ ಕರ್ನಾಟಕ ಸಂಸ್ಕøತಿ ಸಮೀಕ್ಷೆ, ಸಾಹಿತ್ಯ ಚರಿತ್ರೆಯ ಒಂದೂ ಮೂಲ ಪುಸ್ತಕವನ್ನೇ ನೋಡದೇ ಉತ್ತರಿಸಿ ಸ್ಪರ್ಧಿಗಳು ಗೆದ್ದುಬರುತ್ತಾರೆ! ಇಂಥ ಪರೀಕ್ಷೆಗೆ ಪ್ರಶ್ನೆಪತ್ರಿಕೆ ತಯಾರಿಸುವವರೂ ನೋಡುವುದು ಇದೇ ಕೋಶವನ್ನು ಎಂಬುದು ಹೇಗೋ ಸ್ಪರ್ಧಿಗಳಿಗೆ ಗೊತ್ತಾಗಿಹೋಗಿದೆ! ಮೂಲ ಪರಾಮರ್ಶನದ ಶ್ರೇಷ್ಠ ಗ್ರಂಥಗಳು ಮೂಲೆಗುಂಪಾದರೆ, ನೋಟ್ಸ್ ಆಧರಿತ ಕೋಶ ಮಾತ್ರ ಆರಾರು ತಿಂಗಳಿಗೆ ಮುದ್ರಣ ಕಾಣುತ್ತಲೇ ಇದೆ! ಜೈ ಕನ್ನಡ ಸಾಹಿತ್ಯ!
ಇವೆಲ್ಲ ಮಾರುಕಟ್ಟೆಯಾಧಾರಿತ ವಲಯ ಸಾಹಿತ್ಯವನ್ನು ನಡೆಸಿಕೊಳ್ಳುತ್ತಿರುವ ರೀತಿಯಾದರೆ, ಸಾಹಿತ್ಯದೊಳಗೇ ನಡೆಯುವ ಮಾರ್ಕೆಟಿಂಗ್ ಇನ್ನೂ ತಮಾಷೆಯದು. ಇಲ್ಲಿ ಸಾಹಿತ್ಯದಲ್ಲಿ ಅಷ್ಟಿಷ್ಟು ಕೆಲಸ ಮಾಡುತ್ತಿರುವ ವ್ಯಕ್ತಿಗಳೇ ಸಾಮಗ್ರಿಗಳು! ತೋಚಿದ ಒಂದಿಷ್ಟು ಕಾವ್ಯವನ್ನೋ ಕಥೆಯನ್ನೋ ಬರೆದು ಅದನ್ನೊಂದು ಸಂಕಲನ ಮಾಡುವುದು. ಅವರಿವರಿಂದ ಹೇಳಿಸಿ, ದುಂಬಾಲು ಬಿದ್ದು ಹೆಸರಾದವರಿಂದ ಅದಕ್ಕೆ ಮುನ್ನುಡಿಯೋ ಬೆನ್ನುಡಿಯೋ ಬರೆಸಿಕೊಳ್ಳುವುದು. ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಅವರು ಪ್ರೋತ್ಸಾಹದಾಯಕ ಎಂಬಂತೆ ಒಂದೆರಡು ಒಳ್ಳೆ ಮಾತು ಹೇಳಿದ್ದರೆ ಅಷ್ಟು ಸಾಕು. ಈಗಾಗಲೇ ಸಾಕಷ್ಟು ಹೆಸರು ಮಾಡಿದವರಿಂದ ಹಿಡಿದು ಒಂದೆರಡು ಕವಿಗೋಷ್ಠಿಯಲ್ಲಿ ಕಾಣಿಸಿಕೊಂಡ ಕವಿಪುಂಗವರವರೆಗೆ ಎಲ್ಲರಿಗೂ ಅದನ್ನು ಹಂಚುತ್ತ, ಸಾಹಿತ್ಯವಲಯದಲ್ಲಿ, ಎಲ್ಲೆಂದರಲ್ಲಿ ಹಲ್ಲುಗಿಂಜುತ್ತ ತಮ್ಮನ್ನು ತಾವು ಬಿಂಬಿಸಿಕೊಳ್ಳುವುದು. ಕೆಲವೊಮ್ಮೆ ಗಂಡ ಹೆಂಡತಿಯರು ಇಬ್ಬರೂ ಸಾಹಿತಿಗಳಾದಲ್ಲಿ ಪರಸ್ಪರ ಮಾರ್ಕೆಟ್ ಮಾಡಿಕೊಳ್ಳುವುದೂ ಇದೆ. ಕೆಲವೊಮ್ಮೆ ಗಂಡ ಬೇರೆ ಕ್ಷೇತ್ರದಲ್ಲಿದ್ದು ಹೆಂಡತಿ ಸಾಹಿತ್ಯ ಕ್ಷೇತ್ರದಲ್ಲಿದ್ದರೆ-ಪಂಚಾಯ್ತಿಯಲ್ಲಿ ಹೆಂಡತಿ ಮೀಸಲು ಅಧ್ಯಕ್ಷೆಯಾಗಿದ್ದರೂ ಮನೆಯಲ್ಲಿರುವ ಗಂಡ ಅವಳ ಪರವಾಗಿ ರಾಜಕೀಯ, ಅಧ್ಯಕ್ಷೀಯ ಕೆಲಸ ಮಾಡುವಂತೆ-ಗಂಡನೇ ತನ್ನ ಹೆಂಡತಿಯ ಸಾಹಿತ್ಯ ಸೇವೆಯನ್ನು ಸಂಬಂಧಿಸಿದವರಿಗೆಲ್ಲ (ವಿಶೇಷವಾಗಿ ಮಾಧ್ಯಮಗಳಿಗೆ) ತಿಳಿಸುವ, ಅವಳಿಗೆ ಊರು ಕೇರಿಗಳಲ್ಲಾಗುವ ಸಮ್ಮೇಳನ, ಗೋಷ್ಠಿಗಳಲ್ಲಿ ಸ್ಥಾನ ಕೊಡಿಸುವ, ಇತ್ಯಾದಿ ಮಾರ್ಕೆಟಿಂಗ್ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದೂ ಹೊಸದಲ್ಲ. ಹೀಗೆಲ್ಲ ಮಾರ್ಕೆಟಿಂಗ್ ಮಾಡಿಕೊಳ್ಳದಿದ್ದರೆ ಇಷ್ಟೊಂದು ಜನ ಬರೆಯುವಾಗ ನೀವು ಬರೆದಿದ್ದನ್ನು ಯಾರು ಓದುತ್ತಾರೆ? ಓದದಿದ್ದರೆ ಬೇಡ, ಇವರು ಬರೆಯುತ್ತಾರೆ, ಇವರೊಬ್ಬ ಸಾಹಿತಿ ಎಂದು ಜನಕ್ಕೆ ಗೊತ್ತಾಗುವುದಾದರೂ ಹೇಗೆ, ಅಲ್ಲವೆ?
ಇಂಥ ಸಾಹಿತ್ಯಕ ದುರಂತಗಳಿಂದಲೇ ಇಂದು ಸಾಹಿತ್ಯ ಚರ್ಚೆ ವಿಷಯ ನಿಷ್ಠ ಅಥವಾ ವಸ್ತು ನಿಷ್ಠವಾಗದೆ ವ್ಯಕ್ತಿನಿಷ್ಠವಾಗಿರುವುದು. ವ್ಯಾಪಾರ ವಹಿವಾಟುಗಳೇ ವೃತ್ತಿಯಾಗಿರುವ, ರಾಜಕೀಯವನ್ನು ನಿಯಂತ್ರಿಸುವ ಕಾರ್ಪೊರೇಟ್ ವಲಯವನ್ನು ಮಾತೆತ್ತಿದರೆ ಪ್ರಶ್ನಿಸುವ ಸಾಹಿತ್ಯಕ ವಲಯ ವಾಸ್ತವವಾಗಿ ಮಾಡುತ್ತಿರುವುದಾದರೂ ಏನು? ಕಾರ್ಪೊರೇಟ್ ವಲಯ ಅತ್ಯಂತ ವೃತ್ತಿನಿಷ್ಠವಾಗಿ ಮಾಡುವ ಅದೇ ಕೆಲಸ ಸಾಹಿತ್ಯಕ ವಲಯದಲ್ಲಿ ಒಳಗೊಳಗೇ ಕದ್ದುಮುಚ್ಚಿ ನಡೆಯುತ್ತದೆ. ಪ್ರಶಸ್ತಿ, ಪುರಸ್ಕಾರಗಳ ಸಂದರ್ಭದಲ್ಲಿ ಇವೆಲ್ಲ ಢಾಳಾಗಿ ಗೋಚರವಾಗುತ್ತವೆ. ಒಂದಿಷ್ಟು ಬರೆದರೆ ಸಾಕು. ಹೆಸರು ಬಂದುಬಿಡಬೇಕು, ಸಾಹಿತ್ಯವಲಯದ ಹಳಬರಿಂದ ಹಿಡಿದು ನಿನ್ನೆಮೊನ್ನೆ ಬಂದವರಿಗೆಲ್ಲ ತನ್ನ ಪರಿಚಯವಿರಬೇಕು ಎಂಬ ಹಪಾಹಪಿತನ ಅಧ್ಯಯನಶೀಲತೆಯೇ ಇಲ್ಲದ ಹೊಸಪೀಳಿಗೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಪರಿಣಾಮ ಓದುಗರ ಪಾಲಿಗೆ ದೊರೆಯುವುದು ಯಾವ ಸಾಹಿತ್ಯಕ ಬದ್ಧತೆಯೂ ಇಲ್ಲದ ಭ್ರಷ್ಟ ಸಾಹಿತ್ಯ.
ಜನಪ್ರಿಯ ಸಾಹಿತ್ಯ, ಸಾಹಿತಿಗಳ ಭರಾಟೆಯಲ್ಲಿ ಸಂಶೋಧನೆಯಂಥ ಗಂಭೀರ ಪ್ರಕಾರ ಸಾಹಿತ್ಯದ ಅನಿವಾರ್ಯವೂ ಅವಿಭಾಜ್ಯವೂ ಆದ ಅಂಗ ಎಂಬುದೇ ಮರೆತುಹೋಗಿದೆ. ಬೇಗನೇ ಜನಪ್ರಿಯವಾಗುವ ಕಾವ್ಯ ಕಥೆಗಳ ಅಬ್ಬರದಲ್ಲಿ ನೂರ್ಕಾಲ ಉಳಿಯುವ ಸಂಶೋಧನೆಗಳಿಗೆ ಹೇಳಿಕೊಳ್ಳುವ ಮನ್ನಣೆಯೇ ಇಲ್ಲ. ಸಂಶೋಧನೆಯನ್ನು ಸೃಜನೇತರ ಎಂದು ಬೇರೆ ಗುರುತಿಸಲಾಗುತ್ತದೆ. ಇದನ್ನು ಗುರುತಿಸಿದವರೂ ಓದುಗರಲ್ಲ. ಸೃಜನಶೀಲತೆ ಇಲ್ಲದಿದ್ದರೆ ಪಂಪ ಅಥವಾ ಕುಮಾರವ್ಯಾಸನ ಕಾವ್ಯಕ್ಕೆ ಸರಿಯಾದ ಅರ್ಥ ನೀಡಲು ಸಾಧ್ಯವೇ ಇಲ್ಲ, ಹೊಸ ಶಾಸನವನ್ನು ಓದಿ ಹೇಳಲೂ ಸಾಧ್ಯವಿಲ್ಲ. ಇಂಥವರ ಸಂಖ್ಯೆ ಸದ್ಯ ನಮ್ಮ ರಾಜ್ಯದಲ್ಲಿರುವುದೇ ಬೆರಳೆಣಿಕೆಯಷ್ಟು. ಇಂಥ ವಿದ್ವಾಂಸರಿಗೆ ಎಲ್ಲಾದರೂ ಜಾಗವಿದೆಯೇ? ಹಾಗೆಂದು ಈಗಾಗಲೇ ಸೃಜನಶೀಲರೆಂದು ಕರೆಸಿಕೊಂಡವರಿಗೆ ಅರ್ಥೈಸುವಂತೆ ಹಳೆಗನ್ನಡದ ಪದ್ಯಕೊಡಿ, ಶಾಸನವೊಂದನ್ನು ಕೊಡಿ. ಬಹುತೇಕರು ಇವುಗಳನ್ನು ಕಂಡು ಓಡಿಯೇಹೋಗುತ್ತಾರೆ. ಹೆಚ್ಚೆಂದರೆ ಅಲ್ಲೇ ನಿಂತು ನಮ್ಮ ಕ್ಷೇತ್ರ ಇದಲ್ಲ ಎಂದು ಹೇಳಬಹುದು. ಅವರಿಂದ ಅರ್ಥವಂತೂ ಸಿಗಲಾರದು. ಅಂದರೆ ಸಾಹಿತ್ಯದ ನಿಜವಾದ ಕೆಲಸವೇ ಬೇರೆ, ಜನಪ್ರಿಯತೆಯ ಬೆನ್ನಿಗೆ ಹೋಗುವುದೇ ಬೇರೆ. ಜನಪ್ರಿಯತೆಯ ಹುಚ್ಚು ರಾಜಕೀಯ, ಸಿನಿಮಾಗಳಿಗಷ್ಟೇ ಮೀಸಲಲ್ಲ. ಸಾಹಿತ್ಯವನ್ನೂ ಅದು ವ್ಯಾಪಿಸಿದೆ. ಸಾಹಿತ್ಯದೊಂದಿಗೆ ರಾಜಕೀಯ ಮತ್ತು ಮಾಧ್ಯಮಗಳು ಸೇರಿದರೆ ಅದರ ಮಜವೇ ಬೇರೆ.
ಶ್ರೀಪಾದ್ ಭಟ್ ಅವರಿಗೆ –(೧) ಗೈಡ್ ಸಂಸ್ಕೃತಿಯ ಬಗ್ಗೆ –ರಾಜ್ಯ/ಕೇಂದ್ರ ಸರ್ಕಾರ,ಬ್ಯಾಂಕು , ಎಲ್ ಐ ಸಿ ಜತೆಗೆ ಕೆ ಎ ಎಸ್ /ಐ ಎ ಎಸ್ ಪ್ರವೇಶ ಪರೀಕ್ಷೆಗಳಿಗೆ ಕೂರುವವರು ಅದರಲ್ಲಿ ಪಾಸಾದ ನಂತರ ಮಾಡುವ ಕೆಲಸಕ್ಕೂ, ಈ ಹಿಂದೆ ಅವರು ಕಾಲೇಜಿನಲ್ಲಿ ಓದಿದಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಇಂತಹ ಒಂದೋ,ಎರಡೋ ಅಥವಾ ಹೆಚ್ಚೆಂದರೆ ಐದು ಅಂಕಗಳ ಪ್ರಶ್ನೆಗೆ ಆಯಾ ವಿಷಯವನ್ನು ತಳ ಮಟ್ಟ ತಿಳುದುಕೊಳ್ಳುವ ಅವಶ್ಯಕತೆ ಇದೆಯೇ?,ತಾಲ್ಲೋಕು ಆಫೀಸಿನಲ್ಲಿ ಜಮೀನು,ಪಹಣಿ, ಕಂದಾಯದ ಲೆಕ್ಕ ಮಾಡುತ್ತಾ ಕೂರುವವನಿಗೆ, ,ಬ್ಯಾಂಕಿನಲ್ಲಿ ಹಣ ಎಣಿಸುತ್ತಾ,ಬಡ್ಡಿ ಲೆಕ್ಕ ಹಾಕಿ ಕೊಂಡು, ಕಾರಿಗೆ ,ಮನೆಗೆ ಸಾಲ ಮಂಜೂರು ಮಾಡುವವನಿಗೆ ದೇಶ-ವಿದೇಶದ ಚರಿತ್ರೆಯ ಪಾಠ ಗಳನ್ನು ಕಲಿತು ಏನು ಪ್ರಯೋಜನ? ಶಾಲಾ ಶಿಕ್ಷಕರಿಗೆ, ಕಾಲೇಜು ಅಧ್ಯಾಪಕರಿಗೆ ಅವರವರ ಕೆಲಸದ ಮಟ್ಟಕ್ಕೆ ತಕ್ಕಂತೆ, ಅವರು ಆಯ್ದುಕೊಂಡ ವಿಷಯಗಳಲ್ಲಿ ಸಾಕಷ್ಟು ಪರಿಣಿತಿಬೇಕಾಗುತ್ತದೆ. ಇದರ ಬಗ್ಗೆ ಎರಡು ಮಾತಿಲ್ಲ. (೨) ಸಾಹಿತ್ಯದ ಮಾರ್ಕೆಟಿಂಗ್ ಬಗ್ಗೆ — ಇದು ಮೂರು,ನಾಲ್ಕನೇ ದರ್ಜೆಗಳ ಲೇಖಕರಿಗೆ ಬೇಕಾಗುತ್ತದೆ. ತಾವೇ ಪ್ರಕಾಶಕರಾಗಿ, ರಾಜ್ಯ ಸರ್ಕಾರದ ಗ್ರಂಥಾಲಯ ಇಲಾಖೆ ಕೊಂಡುಕೊಳ್ಳುವ ಮುನ್ನೂರೋ, ನಾಲ್ಕುನೂರೋ ಪ್ರತಿಗಳಿಂದ ಬರುವ ಹಣದಿಂದ ಮುದ್ರಣದ ವೆಚ್ಚವನ್ನು ತುಂಬಿಕೊಸಿಳ್ಳುತ್ತಾರೆ. ಒಂದು ಲೆಕ್ಕಾಚಾರದ ಪ್ರಕಾರ ಕನ್ನಡದಲ್ಲಿ ವರ್ಷವೊಂದಕ್ಕೆ ಸುಮಾರು ಮೂರು ಸಾವಿರ ಪುಸ್ತಕಗಳು ಪ್ರಕಟವಾಗುತ್ತದಂತೆ. ಇದರಲ್ಲಿ ಸುಮಾರು ಒಂದು ಮೂವತ್ತು ಪುಸ್ತಕಗಳನ್ನು ಬಿಟ್ಟರೆ ಉಳಿದವೆಲ್ಲಾ ಮೇಲೆ ಹೇಳಿದಂತಹ “ಲೈಬ್ರರಿ” ಪುಸ್ತಕಗಳು!! ಹವ್ಯಾಸಿ ಓದುಗರೂ ಸಹ ಈಗ choosy ಆಗಿದ್ದಾರೆ. ಮುನ್ನುಡಿ ಬೆನ್ನುಡಿಗಳ marketing advertisement ನಿಂದ ಪುಸ್ತಕಗಳನ್ನು ಕೊಳ್ಳುವವರಿಗೆ ಒಂದೆರೆಡು ಸಲ ಕಿವಿಗೆ ಹೂವಿಟ್ಟು ಯಾಮಾರಿಸಬಹುದು. ಯಾವಾಗಲೂ ಅಲ್ಲ. (೩) ಹಳೆಗನ್ನಡ ಸಾಹಿತ್ಯದ ಓದು ನಮ್ಮ ಸಾಹಿತ್ಯಿಕ ಪರಂಪರೆ ತಿಳಿದುಕೊಳ್ಳಲು ಕನ್ನಡ ಎಂ ಎ ಓದುವವರಿಗೆ ಅನಿವಾರ್ಯವಾಗಿರಬಹುದು. ಆದರೆ ಅವರನ್ನು ಬಿಟ್ಟು ಅಪಾರ ಸಂಖ್ಯೆಯಲ್ಲಿರುವ ಓದುಗರಿಗೆ ಅದು ಅನಿವಾರ್ಯವೇನಲ್ಲ. ಏಕೆಂದರೆ ಈಗ ಚಾಲ್ತಿಯಲ್ಲಿರುವುದು ಹೊಸಕನ್ನಡ ಸಾಹಿತ್ಯ. ಇಂದಿನ ಓದುಗರಿಗೆ ಕಾರಂತ,ಭೈರಪ್ಪ,ಅನಂತಮೂರ್ತಿ,ಬೇಂದ್ರೆ ,ಅಡಿಗ, …………. ಇವರುಗಳು ಮುಖ್ಯವಾಗುತ್ತಾರೆ.ಪಂಪ,ರನ್ನ,ಕುಮಾರವ್ಯಾಸರಲ್ಲ. ಸುಮಾರು ಮೂರು ವರ್ಷಗಳ ಹಿಂದೆ ‘ಕನ್ನಡ ಪ್ರಭ’ದ ಸಾಪ್ತಾಹಿಕ ಪ್ರಭದಲ್ಲಿ ಆರೇಳು ವಾರಗಳ ಕಾಲ ಕಥೆಗಾರ ನಾಗರಾಜ ವಸ್ತಾರೆ ಮತ್ತು ಇತರ ಲೇಖಕರ ನಡುವೆ ಪರಂಪರೆ vs ಪ್ರತಿಭೆ ಕುರಿತು ಒಳ್ಳೆಯ ಚರ್ಚೆ ನಡೆದಿತ್ತು. ‘ಅವಧಿ’ ಕನ್ನಡ ಬ್ಲಾಗಿನಲ್ಲೂ ಸುಮಾರು ಒಂದು ತಿಂಗಳ ಹಿಂದೆ ಇದೇ ವಿಷಯ ಕುರಿತಂತೆ ವಸ್ತಾರೆಯವರ ಲೇಖನ ಪ್ರಕಟವಾಗಿದೆ. ತಾವು ಇವುಗಳನ್ನು ಗಮನಿಸಿರಬಹುದು ಎಂದು ಭಾವಿಸುತ್ತೇನೆ. (೪) ಇಂದು ಕನ್ನಡ/ಇಂಗ್ಲಿಷ್ ಸಾಹಿತ್ಯವನ್ನು ಸ್ನಾತಕೋತ್ತರ ಮಟ್ಟದಲ್ಲಿ ಓದಿಕೊಂಡವರ ಜತೆ ಜತೆಗೆ ಮತ್ತು ಒಂದು ರೀತಿಯಲ್ಲಿ ಪ್ರಸ್ತುತ ಕನ್ನಡ ಸಾಹಿತ್ಯದಲ್ಲಿ ಕ್ರಿಯಾಶೀಲರಾಗಿದ್ದವರು ಮತ್ತು ಈಗ ಇರುವವರು ಈ “ಅಕಾಡೆಮಿಕ್” ವಲಯದ ಆಚೆ ಇರವವರು. ಉದಾಹರಣೆ: ಯಶವಂತ ಚಿತ್ತಾಲ ವ್ಯಾಸರಾಯ ಬಲ್ಲಾಳ ,ಕೆ ಸತ್ಯನಾರಾಯಣ,ವಸುಧೆಂದ್ರ , ಜಯಂತ ಕಾಯ್ಕಿಣಿ,ವಸ್ತಾರೆ,ಹೀಗೆ ಈ ಪಟ್ಟಿಯನ್ನು ಮುಂದುವರಿಸಬಹುದು. ಹಾಗೆ ನೋಡಿದರೆ ಶಿವರಾಮ ಕಾರಂತರು ಹಳಗನ್ನಡ ಸಾಹಿತ್ಯವನ್ನು ಅಭ್ಯಾಸ ಮಾಡಿದ್ದರೆ? ಎಂಬ ಅನುಮಾನ ಬರುವುದೂ ಸಹಜ! ಇವರನ್ನು ಹಳೆಗನ್ನಡ ಸಾಹಿತ್ಯ,ಶಾಸನಗಳನ್ನು ‘ಅರ್ಥೈಸಲಾರದೆ’ ತಪ್ಪಿಸಿಕೊಳ್ಳುವವರು ಎಂದು ಕುಹಕವಾಡುವುದು ಸರಿಯಲ್ಲ. ಜತೆಗೆ ಕಥೆ,ಕಾದಂಬರಿಗಳನ್ನು ಬರೆಯುವುದನ್ನು ಅಂತಹ ದೊಡ್ಡ ವಿಷಯವೇನೂ ಅಲ್ಲ ಎಂಬ ದೃಷ್ಠಿ ಕೋನವೂ ತರವಲ್ಲ. (೫) ಇನ್ನುಳಿದಂತೆ ತಾವು ಹೇಳಿರುವ ಇತರ ಮಾನವಿಕ ವಿಷಯಗಳನ್ನು ಕುರಿತ ಕೃತಿಗಳ ಕೊರತೆ, ಸಂಶೋಧನೆ ಇತ್ಯಾದಿಗಳು ‘ಸಾಹಿತ್ಯದ definition’ನ ಪರಿಧಿಯಲ್ಲಿ ಬರುವುದಿಲ್ಲ. ಅದು ತಮ್ಮ ಪ್ರಸ್ತುತ ಲೇಖನದ ಶೀರ್ಷಿಕೆಯ ವ್ಯಾಪ್ತಿಯ ಹೊರಗಿನದ್ದು ಎಂದು ನನ್ನ ಅಭಿಪ್ರಾಯ. ಹೀಗಾಗಿ ಆ ಬಗ್ಗೆ ನಾನು ಹೇಳುವುದೇನೂ ಇಲ್ಲ.