ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 12, 2014

11

ಸಾಹಿತ್ಯ ಕ್ಷೇತ್ರದ ಒಳಹೊರಗು – ಭಾಗ ೨

‍ನಿಲುಮೆ ಮೂಲಕ

-ಡಾ.ಶ್ರೀಪಾದ ಭಟ್, ತುಮಕೂರು

ಕನ್ನಡ ಸಾಹಿತ್ಯಸಾಹಿತ್ಯ ಕ್ಷೇತ್ರದ ಒಳಹೊರಗು – ಭಾಗ ೧

ಕವಿಕಾಣದ್ದನ್ನು ವಿಮರ್ಶಕ ಕಂಡ!

ಕಾವ್ಯದಲ್ಲಿ ಕವಿ ಊಹಿಸದೇ ಇರುವ ಸಂಗತಿಯನ್ನು ಕೂಡ ವಿಮರ್ಶಕ ಖಚಿತವಾಗಿ ಹೇಳಬಲ್ಲ ಎಂಬ ಕಾರಣಕ್ಕೆ ಈ ಮಾತು. ಕುವೆಂಪು ಅವರು ಹೇಳಿದ್ದು: ರವಿ ಕಾಣದ್ದನ್ನು ಕವಿ ಕಂಡ. ಇದನ್ನು ಮುಂದುವರೆಸಿದ ಹಿರಣ್ಣಯ್ಯ ಕವಿ ಕಾಣದ್ದನ್ನು ಕುಡುಕ ಕಂಡ ಎಂದಿದ್ದರು. ಕನ್ನಡ ವಿಮರ್ಶೆಗಳನ್ನು ಅವಲೋಕಿಸಿದವರು ಆರಂಭದ ನನ್ನ ಮಾತನ್ನು ಒಪ್ಪಬಹುದು. ಇದಕ್ಕೆ ನಿದರ್ಶನವೊಂದಿದೆ. ಮೈಸೂರಿನಲ್ಲಿ ಕೆ.ಎಸ್ ನರಸಿಂಹಸ್ವಾಮಿಯವರ ಕಾವ್ಯ ಕುರಿತ ವಿಚಾರಗೋಷ್ಠಿ ನಡೆದಿತ್ತು. ಖ್ಯಾತರಾದ ಸ್ಥಾಪಿತ ವಿಮರ್ಶಕರೊಬ್ಬರು ಕೆಎಸ್‍ನ ಕಾವ್ಯದ ಜನಪ್ರಿಯ ಗೀತೆಯ ’ಪದುಮಳು ಒಳಗಿಲ್ಲ’ ಎಂಬ ಸಾಲನ್ನು ವಿಮರ್ಶಿಸುತ್ತ ಪದುಮ ಹೆಣ್ಣು ಕುಲದ ಪ್ರತೀಕ. ಗಂಡಸರು ಹೆಣ್ಣನ್ನು ಎಂದೂ ಒಳಗೆ ಬಿಟ್ಟುಕೊಂಡೇ ಇಲ್ಲ. ಆದ್ದರಿಂದ ಪದುಮಳು ಒಳಗಿಲ್ಲ ಎಂದರೆ ಹೆಣ್ಣನ್ನು ಗಂಡಸರು ತಮ್ಮ ವ್ಯಾವಹಾರಿಕ ಪ್ರಪಂಚದಿಂದ ಯಾವಾಗಲೂ ಹೊರಗೇ ಇಟ್ಟಿದ್ದಾರೆ ಎಂದರ್ಥ! ಎನ್ನುತ್ತ ವಿಶೇಷ ವ್ಯಾಖ್ಯಾನ ಮಾಡಿದರು. ಕೆಎಸ್‍ನ ಅವರನ್ನು ಒಮ್ಮೆ ಭೇಟಿಯಾದಾಗ ಪದ್ಯದ ಅರ್ಥ ಹಿಂಗಂತಲ್ಲಾ ಸಾರ್? ಅಂದೆ. ಅದೇನೋಪ್ಪ, ನಾನಂತೂ ಪದ್ಯ ಬರೆಯುವಾಗ ಅದನ್ನೆಲ್ಲ ಖಂಡಿತ ಯೋಚಿಸಿರಲಿಲ್ಲ. ಅದೇನಿದ್ದರೂ ಮುಟ್ಟು-ಮೈಲಿಗೆ ಅರ್ಥದಲ್ಲಿ ಹೊಳೆದ ಸಹಜ ಸಾಲು ಎಂದಿದ್ದರು. ಹೀಗಾಗಿಯೇ ಹೇಳಿದ್ದು: ಕವಿ ಕಾಣದ್ದನ್ನು ವಿಮರ್ಶಕ ಕಂಡ ಎಂದು. ಇರಬಹುದು. ಅನೇಕಾರ್ಥಗಳನ್ನು ಹೊಳೆಸಿದಾಗಲೇ ನಿಜವಾದ ಕಾವ್ಯವಾಗುವುದು. ಅಲ್ಲವೇ?

ಇಂದು ನಮ್ಮದು ಅವಸರದ ಜೀವನಶೈಲಿ. ಯಾವುದಕ್ಕೂ ನಮಗೆ ಟೈಮಿಲ್ಲ. ಓದುವ ಆಸಕ್ತಿಯವರಿಗೂ ಪತ್ರಿಕೆಯನ್ನು ಕೂಡ ಓದುವಷ್ಟು ವ್ಯವಧಾನವಿಲ್ಲ, ಹೆಚ್ಚೆಂದರೆ ನೋಡಬಹುದು ಅಷ್ಟೆ. ಹೀಗಿರುವಾಗ ಗಂಭೀರ ಸಾಹಿತ್ಯಾಸಕ್ತರನ್ನು ಹುಡುಕುವುದೆಲ್ಲಿ? ಸಾಹಿತ್ಯದ ವಿದ್ಯಾರ್ಥಿಗಳಿಗೆ ಇರಲಿ, ಮೇಷ್ಟ್ರುಗಳಿಗೂ ಪಠ್ಯೇತರ ಚಟುವಟಿಕೆಗಳೇ ಬಹಳವಾಗಿರುತ್ತವೆ. ಆದರೆ ಅವರು ಓದದಿದ್ದರೂ ಒಂದಿಷ್ಟು ಕಣ್ಣಾಡಿಸಿಕೊಂಡಿರಬೇಕಲ್ಲ? ಇವರು ಮೊರೆಹೊಗುವುದು ಸಿದ್ಧ ಪಠ್ಯಗಳಿಗೆ. ಇವರಿಗೆ ನೆರವಾಗುವವವನು ವಿಮರ್ಶಕ. ಈ ದೃಷ್ಟಿಯಲ್ಲಿ ವಿಮರ್ಶಕ ರೆಡಿ ಟು ಈಟ್ ಆಹಾರ ನೀಡುವ ವ್ಯವಹಾರಿ. ಓದಲೇ ಬೇಕಾದ ಕಷ್ಟಕ್ಕೆ ಮೂಲ ಪಠ್ಯಗಳ ಬದಲು ಅವುಗಳ ಸಾರ ಹೇಳುವ ಗೈಡುಗಳನ್ನೇ ಕಲಿಕೆಯ ಎಲ್ಲ ಹಂತದಲ್ಲೂ ರೂಢಿಮಾಡಿಕೊಂಡ ನಮಗೆ ಮೂಲಚೂಲದ ಬಗ್ಗೆ ಅನುಮಾನ ಹುಟ್ಟುವ ಪ್ರಶ್ನೆಯೇ ಇಲ್ಲ. ಹೇಳಿಕೇಳಿ ನಮ್ಮದು ತೋಂಡಿ ಪರಂಪರೆ. ಯಾರಾದರೂ ಹೇಳಿದ್ದನ್ನು ಕೇಳುವವರು ನಾವು. ಓದಿ ಬರೆಯುವ ಸಂಪ್ರದಾಯ ನಮಗಿನ್ನೂ ಒಗ್ಗಿಲ್ಲ. ಹೀಗಾಗಿ ವಿಮರ್ಶಕರೋ ಚಿಂತಕರೋ ಹೇಳಿದ್ದನ್ನು ನಂಬುತ್ತೇವೆ. ಮೂಲವನ್ನು ನೋಡುವ ಅಥವಾ ಓದುವ ಗೋಜಿಗೇ ಹೋಗದೇ ವಿಮರ್ಶಕನ ಅಭಿಪ್ರಾಯವನ್ನೇ ನಮ್ಮದನ್ನಾಗಿ ಮಾಡಿಕೊಂಡುಬಿಡುತ್ತೇವೆ.

ವಿಮರ್ಶಕರು ಏನಿದ್ದರೂ ಉಪಸೃಷ್ಟಿ. ಕವಿ ಕೆಟ್ಟು ವಿಮರ್ಶಕನಾಗುತ್ತಾನೆ ಎಂಬ ಮಾತಿದೆ. ಮೊದಲು ಕೃತಿ. ಆಮೇಲೆ ಅದನ್ನು ಕುರಿತ ವಿಮರ್ಶೆ. ಆದರೆ ವಿಮರ್ಶಕರು ಕವಿ ಹೀಗೇ ಬರೆಯಬೇಕಿತ್ತು, ಹಾಗೆ ಬರೆಯಬಾರದಿತ್ತು ಇತ್ಯಾದಿ ಹೇಳುವುದೂ ಇದೆ. ಹಾಗೆ ನೋಡಿದರೆ ವಿಮರ್ಶಕ ಕವಿ ಮತ್ತು ಓದುಗನ ನಡುವೆ ಬಂದು ಕೂರುವ ಉಪದ್ರವಿ. ಇಬ್ಬರ ನಡುವೆ ಸ್ವಲ್ಪ ಜಾಗ ಮಾಡಿಕೊಂಡು ಒತ್ತರಿಸಿಕೊಂಡು ಆತ ಕೂತೇ ಬಿಡುತ್ತಾನೆ. ದೇವರು ಮತ್ತು ಭಕ್ತರ ನಡುವೆ ಪೂಜಾರಿ ಇದ್ದ ಹಾಗೆ. ಒಂದು ಕೃತಿ ಇದೆ, ಅದನ್ನೋದುವ ಓದುಗನಿದ್ದಾನೆ. ಕವಿ, ಕೃತಿಕಾರನಿಗೆ ಇಷ್ಟು ಸಾಕು. ವಿಮರ್ಶಕನ ಹಂಗೇಕೆ? ಹೀಗಾಗಿಯೇ ಇರಬೇಕು ಕುವೆಂಪು ಅವರು ವಿಮರ್ಶಕರ ತಲೆಹರಟೆ ನೋಡಿ ನಾನೇರುವ ಎತ್ತರಕ್ಕೆ ನೀನೇರಬಲ್ಲೆಯಾ ಎಂದಿದ್ದು. ಭೈರಪ್ಪನವರಂಥ ಕಾದಂಬರಿಕಾರರು, ವಿಮರ್ಶಕರು ಏನಾದರೂ ಹೇಳಿಕೊಳ್ಳಲಿ, ತಮ್ಮ ಓದುಗರು ತಮಗಿದ್ದಾರೆ ಎಂದು ವಿಮರ್ಶಕರನ್ನು ಉದಾಸೀನ ಮಾಡುವುದು ಕೂಡ ಇದೇ ಕಾರಣಕ್ಕೆ ಇರಬೇಕು.

ಕೆಎಸ್‍ನ ಕವಿಯೇ ಅಲ್ಲ, ಭೈರಪ್ಪ ಲೇಖಕರೇ ಅಲ್ಲ ಎಂದೆಲ್ಲ ವಿಮರ್ಶಕರು ಹೇಳಿದ್ದಿದೆ. ಇದನ್ನೆಲ್ಲ ಓದುಗರು ಕಿವಿ ಮೇಲೆ ಹಾಕಿಕೊಂಡೇ ಇಲ್ಲ. ಯಾಕೆಂದರೆ ಓದುಗರಿಗೆ ಪಂಥವಿಲ್ಲ, ಆದರೆ ವಿಮರ್ಶಕರು ಪಂಥ ಬಿಡಲು ಸಿದ್ಧವಿಲ್ಲ. ಕನ್ನಡದಲ್ಲಿ ಇರುವಷ್ಟೇ ವಿಮರ್ಶೆಯನ್ನು ಹೆಕ್ಕಿ ತೆಗೆದರೆ ಎದ್ದು ಕಾಣುವುದು ಒಂದೋ ಹೊಗಳು ವಿಮರ್ಶೆ ಅಥವಾ ತೆಗಳು ವಿಮರ್ಶೆ. ಈ ಹೊಗಳಿಕೆ ಅಥವಾ ತೆಗಳಿಕೆ ಯಥಾಪ್ರಕಾರ ಪಂಥ ನಿಷ್ಠ ಅಥವಾ ವ್ಯಕ್ತಿನಿಷ್ಠ. ವಸ್ತುನಿಷ್ಠ ವಿಮರ್ಶೆಗೆ ಜಾಗವೇ ಇಲ್ಲ. ನಿಷ್ಠುರ ವಿಮರ್ಶೆ ಮಾಡುವ ಕೆ ಜಿ ನಾಗರಾಜಪ್ಪನವರಂಥ ವಿಮರ್ಶಕರನ್ನು ಸಾಹಿತ್ಯ ಕ್ಷೇತ್ರ ಆದಷ್ಟೂ ದೂರವೇ ಇಡುತ್ತದೆ. ಇದು ಒಂದು ರೀತಿ ಒಂದಿಷ್ಟು ಲೇಖಕರು ಮತ್ತು ಸ್ಥಾಪಿತ ವಿಮರ್ಶಕರ ನಡುವಿನ ಒಳ ಒಪ್ಪಂದ. ಹೀಗಾಗಿಯೇ ಕನ್ನಡ ಸಾಹಿತ್ಯಕ್ಕೆ ಭಿನ್ನ ವಸ್ತು ವಿಷಯಗಳಿಂದ ಸತ್ವ ತುಂಬಿದ ಮಧುರಚೆನ್ನರಂಥ ಸಂತ ಮನದ ಕವಿಗಳು, ಸತ್ಯಕಾಮರಂಥ ಅಪರೂಪದ ಭಾಷೆ, ಶೈಲಿಯ ಲೇಖಕರು ವಿಮರ್ಶಕರ ವಾರೆನೋಟಕ್ಕೂ ಬಿದ್ದಿಲ್ಲ. ಇಂಥ ಕಾರಣದಿಂದಲೇ ಕನ್ನಡದಲ್ಲಿ ವಿಮರ್ಶೆಗೆ ಒಳಗಾದ ಕೃತಿ, ಲೇಖಕರಿಗಿಂತ ವಿಮರ್ಶೆಗೇ ಎತ್ತಿಕೊಳ್ಳದ ಕೃತಿ, ಲೇಖಕರೇ ಹೆಚ್ಚು. ಬೊಳುವಾರರ ಕಥೆಯನ್ನು ಸಾಹಿತ್ಯ ಪ್ರೀತಿಯುಳ್ಳ ಓದುಗ ಸುಮ್ಮನೇ ಓದಿ ಅರಿಯುತ್ತಾನೆಯೇ ವಿನಾ ಓದುವ ಮುನ್ನ ಅವರು ಮುಸ್ಲಿಂ ಲೇಖಕರೇ ಎಂಬುದು ಅವನಿಗೆ ಖಂಡಿತ ಮುಖ್ಯವಾಗುವುದಿಲ್ಲ. ದೇವನೂರರನ್ನು ಸಾಹಿತ್ಯ ಪ್ರೀತಿಗಾಗಿ ಓದುತ್ತಾರೆಯೇ ವಿನಾ ದಲಿತ ಲೇಖಕ ಎಂದು ಓದುವುದಿಲ್ಲ.

ವೈದೇಹಿ ಅಥವಾ ಗೀತಾ ನಾಗಭೂಷಣರ ಸಾಹಿತ್ಯವನ್ನು ಓದುಗ ಕೇವಲ ಸಾಹಿತ್ಯವಾಗಿ ಮಾತ್ರ ಓದುತ್ತಾನೆ. ಅವರು ಮಹಿಳೆ ಎಂಬುದು ಗೌಣ. ಸಾಹಿತಿ ದೊಡ್ಡರಂಗೇಗೌಡರು ಉತ್ತಮ ಸಾಹಿತ್ಯ ರಚಿಸಿದ್ದರೂ ಅವರು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದೇ ತಪ್ಪಾಯಿತು ಎನ್ನುವಂತೆ ಅವರನ್ನು ಸಿನಿಮಾ ಸಾಹಿತಿ ಎಂದು ಗುರುತಿಸಿ ಅವರ ಸಾಹಿತ್ಯ ಸೃಷ್ಟಿಗೆ ಸೂಕ್ತ ವಿಮರ್ಶೆಯೇ ಆಗದಂತೆ ಬದಿಗೆ ತಳ್ಳಲಾಯಿತು. ಹೀಗೆಲ್ಲ ಮುಸ್ಲಿಂ ಲೇಖಕ, ಮಹಿಳಾ ಸಾಹಿತಿ, ದಲಿತ ಕವಿ, ದಲಿತ ನಾಟಕಕಾರ, ಸಿನಿಮಾ ಸಾಹಿತಿ ಎಂದೆಲ್ಲ ಕರೆದು ಬ್ರಾಂಡ್ ಮಾಡಿದವರು ಯಾರು? ವಿಮರ್ಶಕರು, ಓದುಗರಲ್ಲ. ಆಯಿತು. ಇವರು ಮುಸ್ಲಿಂ ಸಾಹಿತಿ, ಅವರು ಮಹಿಳಾ ಸಾಹಿತಿ. ಒಪ್ಪಿದೆವು. ಮುಂದೇನು? ಇವನ್ನೆಲ್ಲ ಸೇರಿಸಿಯೇ ತಾನೆ ನಾವು ಕನ್ನಡ ಸಾಹಿತ್ಯವನ್ನು ನೋಡಬೇಕಿರುವುದು. ಅಧ್ಯಯನದಲ್ಲಿ ಹೀಗಾಗುತ್ತಿಲ್ಲ ಅಂದರೆ ಅದಕ್ಕೆ ಹೊಣೆ ಯಾರು? ನಷ್ಟ ಯಾರಿಗೆ?

ಸಾಹಿತ್ಯವನ್ನು ಗಂಭೀರ ಅಧ್ಯಯನಕ್ಕೆ ಒಳಪಡಿಸುವ ವಿಶ್ವವಿದ್ಯಾನಿಲಯಗಳಲ್ಲಿ ತೀರ ಈಚಿನವರೆಗೂ ಸಾಹಿತ್ಯ ಎಂದರೆ ಮೇಷ್ಟ್ರುಗಳು, ಪ್ರಾಧ್ಯಾಪಕರು, ಬುದ್ಧಿಜೀವಿಗಳು ಅಥವಾ ವಿಚಾರವಾದಿಗಳು ಬರೆದಿದ್ದು ಅಥವಾ ಹೇಳಿದ್ದು ಎಂಬ ಧೋರಣೆಯೇ ಮನೆ ಮಾಡಿತ್ತು. ಇದು ಇಂದಿಗೂ ಪೂರ್ತಿಯಾಗಿ ಹೋಗಿಲ್ಲ. ಯಾಕೆಂದರೆ ಅನೇಕ ದಶಕಗಳಿಂದ ಬೆಳೆದುಬಂದ ಈ ದೃಷ್ಟಿಯ ಬೇರುಗಳು ಆಳವಾಗಿವೆ. ಈ ಕಾರಣದಿಂದಲೇ ಕೃಷಿ, ವಿಜ್ಞಾನ-ತಂತ್ರಜ್ಞಾನ, ಸಂವಹನ ಇತ್ಯಾದಿ ಭಿನ್ನ ಕ್ಷೇತ್ರಗಳಿಗೆ ಸಂಬಂಧಿಸಿದ ಕನ್ನಡ ಸಾಹಿತ್ಯ ಕನ್ನಡ ಸಾಹಿತ್ಯ ಅಧ್ಯಯನದಲ್ಲಿ ಅಷ್ಟಾಗಿ ಸ್ಥಾನ ಪಡೆದಿಲ್ಲ. ಇಂದಿಗೂ ಜಾನಪದವನ್ನು ಒಪ್ಪಿಕೊಳ್ಳದ ಮನಸ್ಸುಗಳೂ ಉನ್ನತ ಶಿಕ್ಷಣದಲ್ಲಿ ಬೇಕಾದಷ್ಟಿವೆ. ಇಂಥ ಕ್ಷೇತ್ರಗಳಲ್ಲಿ ಸಾಹಿತ್ಯ ರಚಿಸಿದವರು ಬುದ್ಧಿಜೀವಿಗಳೂ ಅಲ್ಲ, ವಿಚಾರವಾದಿಗಳೂ ಅಲ್ಲ, ಮೇಷ್ಟ್ರುಗಳಂತೂ ಮೊದಲೇ ಅಲ್ಲ. ಹೀಗಾಗಿ ಒಟ್ಟಾರೆ ಅವು ಸಾಹಿತ್ಯವೇ ಅಲ್ಲ ಎಂಬ ದೃಷ್ಟಿ ಮೊಳಕೆಯೊಡೆದು ಹೆಮ್ಮರವಾಯಿತು. ಮುಕ್ತವಾಗಿ ಸಾಹಿತ್ಯವನ್ನು ನೋಡಬೇಕಿದ್ದ ವಿಮರ್ಶಕರು ಕೂಡ ಒಂದೋ ಮೇಷ್ಟ್ರುಗಳೋ ಬುದ್ಧಿಜೀವಿಗಳೋ ಆಗಿಬಿಟ್ಟಿದ್ದರಿಂದ (ಸಾಮಾನ್ಯವಾಗಿ ಮೇಷ್ಟ್ರುಗಳೇ ಬುದ್ಧಿಜೀವಿಗಳಾಗುವುದು, ಬೇರೆ ಕ್ಷೇತ್ರದವರಿಗೆ ಈ ಬ್ರಾಂಡ್ ಇಲ್ಲ) ಅವರೂ ಇತ್ತ ಸಹಜವಾಗಿಯೇ ಗಮನಹರಿಸಲಿಲ್ಲ. ನಷ್ಟವಾದುದು ಕನ್ನಡಕ್ಕೆ.
ಹೊಸಗನ್ನಡ ಕಾಣುವವರೆಗೂ ಪರಿಸ್ಥಿತಿ ಭಿನ್ನವಾಗಿತ್ತು. ಕಾವ್ಯ ಕೃತಿಗಳಂತೆ ಪ್ರಾಚೀನ ಕನ್ನಡದಲ್ಲಿ ಶಾಸ್ತ್ರ, ವಿಜ್ಞಾನ, ವ್ಯಾಕರಣ, ವೈದ್ಯ ಮೊದಲಾದ ಭಿನ್ನ ಕ್ಷೇತ್ರಗಳಲ್ಲಿನ ಸಾಹಿತ್ಯ ಸೃಷ್ಟಿಯನ್ನು ಸಾಹಿತ್ಯವಾಗಿಯೇ ಗುರುತಿಸಲಾಗಿತ್ತು. ಆಧುನಿಕ ಶಿಕ್ಷಣ ವ್ಯವಸ್ಥೆ ಕಲಿಸಿದ ಒಡೆದು ನೋಡುವ ವಿಧಾನದಿಂದ ಸಾಹಿತ್ಯದಲ್ಲಿರಬೇಕಿದ್ದ ಸಮಷ್ಟಿ ದೃಷ್ಟಿಯೇ ನಾಪತ್ತೆಯಾಯಿತು. ಸಾಹಿತ್ಯವನ್ನು ಗಂಭೀರವಾಗಿ ಓದುವ ವಿದ್ಯಾರ್ಥಿಗಳು ಕೂಡ ಬಹು ಹಿಂದಿನಿಂದ ಗುರುತಿಸುತ್ತ ಬಂದಿರುವುದನ್ನಷ್ಟೇ ಸಾಹಿತ್ಯ ಎಂದು ಓದಿಕೊಳ್ಳುತ್ತಾರೆ. ಅಲ್ಲಿಗೆ ಅವರ ದೃಷ್ಟಿಯೂ ಫಿಕ್ಸ್ ಆದಂತೆ. ಈಗೀಗ ಅಂತರ್‍ಶಿಸ್ತೀಯ ಅಧ್ಯಯನ ಕ್ರಮ ಸಾಹಿತ್ಯದಲ್ಲಿ ಕಾಣಿಸುತ್ತಿರುವುದರಿಂದ ಮೇಷ್ಟ್ರುಗಳ ಹಾಗೂ ವಿದ್ಯಾರ್ಥಿಗಳ ನೋಟ ಸ್ವಲ್ಪ ವಿಶಾಲವಾಗುತ್ತಿದೆ. ಪಂಥ, ಸಿದ್ಧಾಂತಗಳ ಕಟ್ಟುಪಾಡಿಗೆ ಬಿದ್ದ ಸಾಹಿತಿಗಳು ಮತ್ತು ವಿಮರ್ಶಕರು ಕನ್ನಡ ಸಾಹಿತ್ಯದಲ್ಲಿ ರೂಪಿಸಿದ್ದ ತಥಾಕಥಿತ ಮಾದರಿ ಕನ್ನಡಕ್ಕೆ ಎಷ್ಟು ನಷ್ಟ ಉಂಟುಮಾಡಿತೆಂಬುದೇ ಪ್ರತ್ಯೇಕ ಅಧ್ಯಯನದ ವಿಷಯವಾಗಬಹುದು. ಹೀಗಾಗಿ ಇಂದು ತುರ್ತಾಗಿ ಕನ್ನಡದಲ್ಲಿ ನಡೆಯಬೇಕಾದುದು ವಿಮರ್ಶೆಯ ಪೂರ್ವ-ಪಶ್ಚಿಮಗಳ ಅಧ್ಯಯನವಲ್ಲ; ಬದಲಿಗೆ ವಿಮರ್ಶೆಯ ವಿಮರ್ಶೆ!

11 ಟಿಪ್ಪಣಿಗಳು Post a comment
 1. M.A.Sriranga
  ಏಪ್ರಿಲ್ 13 2014

  ಶ್ರೀಪಾದ್ ಭಟ್ ಅವರಿಗೆ — ತಾವು ಕನ್ನಡ ವಿಮರ್ಶೆ ಮತ್ತು ವಿಮರ್ಶಕರ ಬಗ್ಗೆ ಅಸಮಾಧಾನ ಹೊಂದಿರುವಂತೆ ಕಾಣುತ್ತದೆ. ‘ನಾನೇರುವೆತ್ತರಕ್ಕೆ ನೀನೇರಬಲ್ಲೆಯಾ?’ ಎಂದು ಕುವೆಂಪು ಅವರು ಹೇಳಿದ್ದರೂ ಸಹ ಮೈಸೂರಿನಲ್ಲಿ ಅವರ ಸುತ್ತ ಇದ್ದ ಅವರ ಶಿಷ್ಯರು ,ಭಕ್ತರು ಮತ್ತು ವಿಮರ್ಶಕರಿಂದ ಕುವೆಂಪು ಅವರ image ಬೆಳೆದಿದ್ದನ್ನು ತಾವು ನಿರಾಕರಿಸುತ್ತೀರಾ? ಅದೇ ರೀತಿ ಧಾರವಾಡದಲ್ಲಿ ಬೇಂದ್ರೆಯವರ ಪರ ಕೀರ್ತಿನಾಥ ಕುರ್ತುಕೋಟಿ ಮತ್ತು ಇತ್ತ ಬೆಂಗಳೂರಿನಲ್ಲಿ ಗೋಪಾಲಕೃಷ್ಣ ಅಡಿಗರಿಗೆ ಯು ಆರ್ ಅನಂತಮೂರ್ತಿಯವರ ವಿಮರ್ಶೆಗಳಿಂದ ಅನುಕೂಲವೇ ಆಗಿದ್ದು ಈಗ ಇತಿಹಾಸ. ಈ ವಿಮರ್ಶಕರಿಲ್ಲದಿದ್ದರೆ ಆ ಕವಿಗಳು ಬೆಳೆಯುತ್ತಿರಲಿಲ್ಲವೋ? ಎಂದು ತಾವು ಪ್ರಶ್ನಿಸಬಹುದು. ಬೆಳವಣಿಗೆಯನ್ನು ಬೆಳಕಿಗೆ ತರುವುದೂ ಅಷ್ಟೇ ಮುಖ್ಯ. ಈ ಕೆಲಸದಲ್ಲಿ ವಿಮರ್ಶಕರು ಆಗಾಗ ಸ್ವಲ್ಪ ಅತ್ಯುತ್ಸಾಹ ತೋರಿಸಿರಬಹುದು. ಆದರೆ ಅದೊಂದರಿಂದಲೇ ವಿಮರ್ಶಕರನ್ನು “ವಾರೆಗಣ್ಣಿನಿಂದ” ನೋಡುವುದು ಸರಿಯೇ?

  ಉತ್ತರ
 2. valavi
  ಏಪ್ರಿಲ್ 13 2014

  ಶ್ರೀರಂಗರೆ ನೀವು ಹೇಳಿದಂತೆ ಸಾಹಿತ್ಯ ಬೆಳೆಯಲು ವಿಮರ್ಶಕ ಬೇಕೆನ್ನುವದು ಸ್ವಲ್ಪ ಮಟ್ಟಿಗೆ ಸರಿಯಾದರೂ ಸಹ ಉತ್ತಮ ಸಾಹಿತ್ಯಕ್ಕೆ ಇವುಗಳ ಹಂಗೇ ಇಲ್ಲ್. ಉದಾಹರಣೆಗೆ ಕೆ. ಎಸ್ ನ ಅವರ ಸಾಹಿತ್ಯಕ್ಕೆ ಅದು ಸಾಹಿತ್ಯವೇ ಅಲ್ಲ ಎಂದು ಹೇಳಿದರೂ ಅವರ ಮೈಸೂರು ಮಲ್ಲಿಗೆ ಇಂದಿಗೂ ತನ್ನ ಪ್ರಸಿದ್ಧಿಯನ್ನು ಕಳೆದುಕೊಳ್ಳಲಿಲ್ಲ. ಅದೇ ರೀತಿ ಭೈರಪ್ಪ ಕಾದಂಬರಿಕಾರರಲ್ಲ ಎಂದೆಲ್ಲ ಕೆಲವರು ಕಟುವಾಗಿ ಟೀಕೆ ಮಾಡಿದರೂ ಅವರ ಕೃತಿಗಳು ಅಪಾರವಾಗಿ ಮಾರಾಟವಾಗುತ್ತಿರುವದು ಸುಳ್ಳಲ್ಲ. ಕನ್ನಡ ವಿಮರ್ಶಕರು ಕೃತಿನಿಷ್ಟರಾಗಿ ವಿಮರ್ಶೆ ಮಾಡುವದಿಲ್ಲ. ವಿಮರ್ಶಕರಿರಬಾರದು ಎಂದೇನು ಇಲ್ಲ. ಆದರೆ ವಿಮರ್ಶಕರಿಗೂ ಕೆಲವು ನಿಭಂಧನೆಗಳನ್ನು ವಿಧಿಸಬೇಕೇನೋ ಎನ್ನಿಸುವಂತೆ ಇವತ್ತಿನ ವಿಮರ್ಶೆಗಳು ಬರುತ್ತಿವೆ. ಕೃತಿಕಾರನ, ಜಾತಿ, ಧರ್ಮ, ಅವನ ಪಂಥ ಇವನ್ನೇ ಮೊದಲು ವಿಮರ್ಶಕರು ಗಮನಿಸುತ್ತಿದ್ದಾರೆ. ಕೃತಿ ಗೌಣವಾಗುತ್ತಿದೆ. ನಾನೇರುವ ಎತ್ತರಕ್ಕೆ ನೀನೇರಬಲ್ಲೆಯಾ ಎಂದ ಕುವೆಂಪುರವರು ಸಹ ಕುಮಾರವ್ಯಾಸನ ಕಾವ್ಯ ವಿಮರ್ಶೆ ಮಾಡಿದ್ದಾರೆ. ವಸ್ತು ನಿಷ್ಠವಾಗಿ.

  ಉತ್ತರ
 3. M.A.Sriranga
  ಏಪ್ರಿಲ್ 14 2014

  ವಾಳವಿ ಅವರಿಗೆ— ನಾನು ಕೀರ್ತಿನಾಥ ಕುರ್ತುಕೋಟಿ ಮತ್ತು ಯು ಆರ್ ಅನಂತಮೂರ್ತಿ ಅವರುಗಳನ್ನು ಪ್ರಸ್ತಾಪಿಸಿದ್ದು ಅವರ ಗುಣನಿಷ್ಠ ವಿಮರ್ಶೆಯ ಕಾರಣದಿಂದ. ಕುರ್ತುಕೋಟಿಯವರಂತೂ ರಾಜಕೀಯದಿಂದ ದೂರವಿದ್ದವರು. ಅನಂತಮೂರ್ತಿಯವರ ಇತ್ತೀಚಿನ ಕೆಲವು ಪತ್ರಿಕಾ ಹೇಳಿಕೆಗಳು ಮತ್ತು ಸಾರ್ವಜನಿಕ ಜೀವನದಲ್ಲಿನ ಕೆಲವೊಂದು ನಡೆಗಳಿಂದ ನಮಗೆ ಬೇಸರ ಬರಬಹುದು. ಇಲ್ಲವೆಂದಲ್ಲ. ನಾನೇ ‘ನಿಲುಮೆ’ಯಲ್ಲಿ ಅವರ ಅಂತಹ ನಡೆ-ನುಡಿಗಳ ಪ್ರಸ್ತಾಪಮಾಡಿ ಎರಡು ಮೂರು ಲೇಖನ ಬರೆದಿರುವುದನ್ನು ತಾವು ಗಮನಿಸಿರಬಹುದು ಎಂದು ಭಾವಿಸಿದ್ದೇನೆ. ಇಷ್ಟಾದರೂ ಸಹ ಅವರು ಕನ್ನಡದ ಒಬ್ಬ ಉತ್ತಮ ಗದ್ಯ ಬರಹಗಾರರು. ಅದನ್ನು ನಾವು ಮರೆಯಬಾರದು. ಜತೆಗೆ ಸಂಸ್ಕೃತಿ,ಸಾಹಿತ್ಯ,ಚಿಂತನ ಇಂತಹ ಯಾವ ವಿಷಯವನ್ನೇ ಆಗಲಿ ಮನದಟ್ಟು ಮಾಡುವಂತಹ ಬರವಣಿಗೆಯ ಶೈಲಿ ಬಹುಶಃ ಕನ್ನಡದ ಇತ್ತೀಚಿನ ದಿನಗಳಲ್ಲಿ ಅದೇ ವಿಷಯವನ್ನು ಮಾತಾಡುವ,ಬರೆಯುವ ಇತರ ಬರಹಗಾರರಲ್ಲಿ ಇಲ್ಲ. ಒಂದು ಪ್ಯಾರಕ್ಕೆ ಮೂರ್ನಾಲಕ್ಕು ಪಾಶ್ಚಾತ್ಯ ಲೇಖಕರ ಉಲ್ಲೇಖಗಳನ್ನು ನೀಡಿ ಪುಟ ತುಂಬಿಸುವವರೇ ಇಂದು ನಮ್ಮ ಸುತ್ತಾ ಇದ್ದಾರೆ . ಅನಂತಮೂರ್ತಿಯವರ ಅಭಿಪ್ರಾಯಗಳನ್ನು ನಾವು ಒಪ್ಪಬಹುದು ಅಥವಾ ಬಿಡಬಹುದು. ಆದರೆ ಅವರನ್ನು ಇಂದಿನ ವಿಮರ್ಶಕರ ಯೋಚನೆಯ ಧ್ಯೇಯ,ಧಾಟಿ,ಧೋರಣೆಗಳ ಜತೆ ಹೋಲಿಕೆ ಮಾಡುವುದು ಅಸಾಧು ಆಗುತ್ತದೆ. ಇನ್ನು ತಾವು ಕೆ ಎಸ್ ನ ಮತ್ತು ಭೈರಪ್ಪನವರ ಬಗ್ಗೆ ಹೇಳಿದ್ದೀರಿ. ಅವರು ವಿಮರ್ಶಕರ ಪ್ರಾಯೋಜಕತ್ವ ಇಲ್ಲದೆ ಓದುಗರ ಮನದಲ್ಲಿ ನಿಂತಿದ್ದಾರೆ; ಇಲ್ಲವೆಂದಲ್ಲ. ಆದರೆ ಅವರಿಬ್ಬರಿಗೂ ವಿಮರ್ಶೆಯಿಂದ ಉಪಯೋಗವೇ ಆಗಿಲ್ಲ ಎಂಬ ತೀರ್ಮಾನಕ್ಕೆ ಬರುವುದು ಬಹುಶಃ ಸರಿಯಲ್ಲ ಎಂದು ನನ್ನ ಅಭಿಪ್ರಾಯ. ನಾನು ಬೆಳವಣಿಗೆ ಮತ್ತು ಬೆಳಕಿಗೆ ತರುವುದನ್ನು ತಮ್ಮ business promotionಗೆ ಕಂಪನಿಗಳು ಮಾಡುವ advertisement ಎಂಬ ಅರ್ಥದಲ್ಲಿ ಬರೆದಿಲ್ಲ. ಈ business promotion “ಒಂದಾನೊಂದು ಕಾಲದಲ್ಲಿ” ಮೈಸೂರಿನಲ್ಲಿ ಜೋರಾಗಿ ನಡೆದಿತ್ತು. ಅದರಿಂದ “ಕಂಪನಿ” ಮತ್ತು “ಪ್ರಾಯೋಜಕರು”ಇಬ್ಬರಿಗೂ ಅನುಕೂಲವಾಯಿತು!!

  ಉತ್ತರ
 4. Shripad Bhat
  ಏಪ್ರಿಲ್ 14 2014

  ನೀವು ಹೇಳುವುದು ಸರಿ ಶ್ರೀರಂಗ ಅವರೇ. ನನಗೆ ವಿಮರ್ಶಕರ ಬಗ್ಗೆ ಅ‍ಷ್ಟೇನೂ ಒಲವಿಲ್ಲ. ಆದರೆ ವಿಮರ್ಶೆಯ ಬಗ್ಗೆ ಒಲವಿದೆ. ಅದನ್ನು ಹೇಳಿದ್ದೇನೆ. ಇಂದಿಗೂ ನಾನು ಕುವೆಂಪು ಅವರ ವಿಮರ್ಶೆಯನ್ನು ಮತ್ತೆ ಮತ್ತೆ ಓದುತ್ತೇನೆ. ನವ್ಯ ವಿಮರ್ಶಕರು ಬೆಳೆಸಿದ ಮಾರ್ಗ ಕುರಿತು ನನ್ನ ತಕರಾರು ಇರುವುದು.
  -ಶ್ರೀಪಾದ ಭಟ್

  ಉತ್ತರ
 5. simha sn
  ಜೂನ್ 27 2014

  ಪದ್ಯಕಾವ್ಯಗಳೇ ಅಧಿಕವಾಗಿದ್ದ ಕಾಲದಲ್ಲಿ ಅವಕ್ಕೆ ವ್ಯಾಖ್ಯಾನಗಳೂ ವಿಮರ್ಶೆಗಳೂ ಅವಶ್ಯವಾದದ್ದು ಸಹಜವೇ. ಪ್ರಾಚೀನರಲ್ಲಿ ವಿಮರ್ಶ ಶಬ್ದವು, ಇಂದು ವ್ಯಾಪಕವಾಗಿರುವ ಅರ್ಥದಲ್ಲಿ ಬಳಕೆಯಾಗುತ್ತಿದ್ದಿಲ್ಲ. ಮೃಶ್ ಧಾತುವಿನ ಜ್ಞಾನ ಎಂಬ ಅರ್ಥಕ್ಕೆ ವಿ ಉಪಸರ್ಗದ ವಿಶೇಷ ಎಂಬ ಅರ್ಥ ಸೇರಿ, ವಿಶೇಷವಾಗಿ ತಿಳಿಯುವುದು ಎಂಬ ಅರ್ಥದಲ್ಲಿ ವಿಮರ್ಶ ಶಬ್ದವು ಪ್ರಯೋಗಿಸಲ್ಪಡುತ್ತಿತ್ತು. ಅಂದರೆ ಕಾವ್ಯದ ಗೂಢಾರ್ಥವನ್ನು ಸಾಮಾನ್ಯರಿಗೆ ಹೊಮ್ಮಿಸುವ, ಸಂಕೀರ್ಣ ಭಾಗಗಳನ್ನು ವಿವರಿಸುವ ವ್ಯಾಖ್ಯಾನಕ್ರಿಯೆಯಾಗಿತ್ತು ಈ ವಿಮರ್ಶೆ.
  ಆದರೆ ಒಂದು ಕೃತಿಯ ಗುಣಾವಗುಣಗಳನ್ನು ಒರೆ ಹಚ್ಚುವ ಸಂಪ್ರದಾಯವೇ ಇರಲಿಲ್ಲವೆಂದಲ್ಲ. ವ್ಯಾಖ್ಯಾನದ ಜೊತೆಗೇ ಸಾಗುವ ಈ ಕ್ರಿಯೆಗೆ ಪರಿಮರ್ಶ ಎಂಬ ಶಬ್ದವನ್ನು ಬಳಸಲಾಗುತ್ತಿತ್ತು ಅಷ್ಟೇ. ಸುತ್ತುವರಿದು, ಎಲ್ಲ ದಿಶೆಗಳಿಂದಲೂ ತಿಳಿಯುವುದು ಎಂಬರ್ಥದಲ್ಲಿ ಪರಿಮರ್ಶ ಶಬ್ದ ಬಳಸಲ್ಪಟ್ಟಿದೆ. ಕವಿಹೃದಯವನ್ನು ಸಾಮಾನ್ಯರಿಗೆ ಬಿಡಿಸಿ ತೋರಿಸುವುದಷ್ಟೇ ವಿಮರ್ಶಕನ ಕೆಲಸ. ಪ್ರಾಚೀನ ವ್ಯಾಖ್ಯಾತೃಗಳು ಕಾವ್ಯದಲ್ಲಿ ವ್ಯಾಕರಣದೋಷಗಳಿದ್ದರೆ ಆಕ್ಷೇಪಿಸುತ್ತಿದ್ದರೇ ವಿನಾ ಕವಿಯ ಉದ್ದೇಶವನ್ನೇ ಪ್ರಶ್ನಿಸುವ, ಅಲ್ಲಗಳೆಯುವ, ಅಥವಾ ಹೀಗೆಯೇ ಬರೆಯಬೇಕಿತ್ತೆಂಬ ನಿರ್ದೇಶನಗಳನ್ನು ನೀಡುವ ವಿಪರೀತ ಸಾಹಸ ಮಾಡುತ್ತಿದ್ದಿಲ್ಲ ಮತ್ತು ಕಾವ್ಯಕರ್ತನಿಗಿಂತಲೂ ತಾನು ಶ್ರೇಷ್ಠನೆನ್ನುವ ಅಹಂಭಾವ ತೋರಿದ್ದಿಲ್ಲ.

  ಆಧುನಿಕ ವಿಮರ್ಶೆಯು ಸಾಗಿರುವ, ಸಾಗುತ್ತಿರುವ ಹಾದಿಯನ್ನು ಕಂಡಾಗ ವಿಮರ್ಶೆಯ ಅಗತ್ಯವನ್ನೇ ಪ್ರಶ್ನಿಸಬೇಕಾದ ಆವಶ್ಯಕತೆ ಒದಗುತ್ತದೆ. ಇಂದು ವಿಮರ್ಶೆಯಲ್ಲಿನ ವಿ ಉಪಸರ್ಗವು ವಿಪರೀತ ಅಂದರೆ ವಿರುದ್ಧ ಎಂಬ ಅರ್ಥದಲ್ಲಿ ಬಳಕೆಯಾಗುತ್ತಿದೆಯೋ ಎಂಬ ಸಂದೇಹ ಕಾಡುತ್ತದೆ. ಯಾವೊಂದು ಕೃತಿಯ ಬಗೆಗೆ ವಿಪರೀತಜ್ಞಾನ ಅಂದರೆ ವಿರುದ್ಧ ತಿಳಿವಳಿಕೆಯನ್ನು ಪ್ರದರ್ಶಿಸುವುದೇ ವಿಮರ್ಶೆಯ ಗುರಿಯಾಗಿರುವಂತಿದೆ. ಒಂದು ಕೃತಿಯನ್ನು ಓದುಗನಿಗೆ ಪರಿಚಯ ಮಾಡಿಸುವ ಕ್ರಿಯೆಯಾಗಬೇಕಾದ ವಿಮರ್ಶೆಯು ಬಹುತೇಕ ಸಂದರ್ಭಗಳಲ್ಲಿ ವಿಮರ್ಶಕನ ಮನೋಭಾವವನ್ನು ಅನುಸರಿಸಿ; ಟೀಕಿಸುವುದರಲ್ಲೋ, ದೋಷಗಳನ್ನು ಆರೋಪಿಸಿ ಕೃತಿಯು ನಿಷ್ಪ್ರಯೋಜಕವೆಂದು ಘೋಷಿಸುವುದರಲ್ಲೋ, ಹೀಗೆಯೇ ಬರೆಯಬೇಕಿತ್ತು ಎಂದು ನಿರ್ದೇಶಿಸುವಲ್ಲೋ ಉದ್ಯುಕ್ತವಾಗಿ, ಅಂತಿಮವಾಗಿ ಓದುಗನನ್ನು ಕೃತಿಯಿಂದ ವಿಮುಖಗೊಳಿಸುವ ಕ್ರಿಯೆಯಾಗಿ ಪರಿವರ್ತನೆಯಾಗಿದೆ.

  ವಿಮರ್ಶೆಯ ಆಡಂಬರದಿಂದ ವಿಭ್ರಮಗೊಳ್ಳುವ ಓದುಗನು ಮೂಲ ಕೃತಿಯಷ್ಟನ್ನೂ ಓದುವ ತಾಳ್ಮೆಯನ್ನು ಕಳೆದುಕೊಂಡು ವಿಮರ್ಶಮಾತ್ರದಿಂದಲೇ ತೃಪ್ತನಾಗುತ್ತಾನೆ. ಮತ್ತು ಕೃತಿಯ ಬಗೆಗೆ ತನಗೆ ವಿಶೇಷ ಜ್ಞಾನವು ಲಭ್ಯವಾಗಿದೆಯೆಂದು ಭಾವಿಸುತ್ತಾನೆ. ಕೃತಿಯನ್ನೇ ಓದಿ ತಂತಮ್ಮ ಸ್ವಂತ ಅಭಿಪ್ರಾಯಗಳನ್ನು ರೂಪಿಸಿಕೊಳ್ಳಲಾಗದ ಅಶಕ್ತರಿಗೆ ಈ ಸುಲಭಮಾರ್ಗವು ಆಕರ್ಷಕವಾಗಿರುವುದರಲ್ಲಿ ಆಶ್ಚರ‍್ಯವೇನಿಲ್ಲ. ಬೇರೊಬ್ಬರ ಬೌದ್ಧಿಕ ಕ್ರಿಯೆಯನ್ನು ತಮ್ಮದೆಂದು ಪರಿಭಾವಿಸಿ ಆರೋಪಿಸಿಕೊಳ್ಳುವ ಒಂದು ಬಗೆಯ ವ್ಯಭಿಚಾರ ಇದೆಂಬಂತೆ ಕಾಣುತ್ತದೆ. ವ್ಯಭಿಚಾರವು ಯಾವ ಕಾಲಕ್ಕೂ ಆಕರ್ಷಕವೇ ಆಗಿದೆಯಲ್ಲವೇ !

  ಕೃತಿಕಾರನಿಗಿಂತಲೂ ವಿಮರ್ಶಕನು ಹೆಚ್ಚಿನವನೆಂಬ ಹಮ್ಮನ್ನು ತೋರ ಹೊರಟು, ವಿಮರ್ಶಕರು ಈ ಹಾದಿ ಹಿಡಿದಿರುವಂತಿದೆ. ಲೇಖಕನ ಅಭಿಪ್ರಾಯವನ್ನೆಲ್ಲ ಒಪ್ಪಿಬಿಟ್ಟರೆ ಅವನ ಪಾರಮ್ಯವನ್ನು ಒಪ್ಪಿದಂತಾಗುತ್ತದೆ ಎಂಬ ಭಯವೂ ಇದಕ್ಕೆ ಕಾರಣವಿರಬಹುದು. ಅದಕ್ಕಾಗಿ ಅನಿವಾರ‍್ಯವಾಗಿಯಾದರೂ ಟೀಕೆ ಮಾಡುವುದು ಅಗತ್ಯವಾಗುತ್ತದೆ. ಅಲ್ಲದೆ ಸಮರ್ಥನೆಗಿಂತಲೂ ಟೀಕಿಸುವುದರಿಂದಾಗಿ ತಮಗೆ ಹೆಚ್ಚು ಪ್ರಚಾರ ಸಿಗುವುದೆಂಬ ಅಭಿಲಾಷೆಯೂ ಇದ್ದಂತಿದೆ.

  ನಿಜವಾಗಿಯೂ ಇಂದಿನ ವಿಮರ್ಶೆಗಳಿಂದ ಓದುಗನಿಗೆ ಏನಾದರೂ ಲಾಭವಿದೆಯೇ? ಸಾಹಿತ್ಯದ ಮೂಲೋದ್ದೇಶವಾದ ರಸೋದ್ದೀಪನೆಯನ್ನು ಹೆಚ್ಚಿಸುವಲ್ಲಿ ಅವೇನಾದರೂ ಸಹಕಾರಿ ಕಾರಣಗಳಾಗಿವೆಯೇ? ಎಂದರೆ, ಬಹುತೇಕ ಇಲ್ಲ ಎಂಬ ಉತ್ತರವೇ ದೊರೆಯುತ್ತದೆ.
  ಇಷ್ಟಕ್ಕೂ ಪ್ರತಿಯೊಬ್ಬ ಓದುಗನೂ ವಿಮರ್ಶಕನೇ. ತನ್ನ ತನ್ನ ಗ್ರಹಿಕೆಯ ಸಾಮರ್ಥ್ಯ, ಸಾಂಸ್ಕೃತಿಕ ಹಿನ್ನೆಲೆ, ಪೂರ್ವಬೋಧೆ, ಓದುವಿಕೆಯ ಉದ್ದೇಶ ಇವು ಓದುಗನಿಂದ ಓದುಗನಿಗೆ ಭಿನ್ನವಾಗಿರುತ್ತವೆ. ಹೀಗಾಗಿ ವಿಮರ್ಶಕರೆಂದು ಸಾರಿಕೊಳ್ಳಲ್ಪಟ್ಟವರು ಸಮಸ್ತ ವಾಚಕವರ್ಗದ ಪ್ರತಿನಿಧಿಗಳಾಗುವುದು ಕೂಡ ಶಕ್ಯವಿಲ್ಲ. ಸಮಾನ ಮನಸ್ಕರ ಸಣ್ಣ ಗುಂಪೊಂದನ್ನು ಅವರು ಪ್ರತಿನಿಧಿಸಬಹುದಾದರೂ, ಅಂತಹ ಗುಂಪುಗಳು ಅಸಂಖ್ಯವಾಗಿರಬಹುದಾದ ಹಿನ್ನೆಲೆಯಲ್ಲಿ ಕೃತಿಕಾರನ ಶ್ರೇಷ್ಠತೆಯನ್ನೇ ಒಪ್ಪಬೇಕಾಗುತ್ತದೆ.

  ಹೀಗೆ ತಮ್ಮ ಪಾಂಡಿತ್ಯದ ಪ್ರದರ್ಶನದಲ್ಲೇ ನಿರತವಾಗಿಬಿಡುವಂತಹ ವಿಮರ್ಶೆಗಳಿಂದ ಸಾಮಾನ್ಯ ಓದುಗನಿಗೆ ಯಾವುದೇ ಹೆಚ್ಚಿನ ಲಾಭವಿಲ್ಲವಾದರೂ, ಲೇಖಕನಿಗೆ ಅವು ಉಪಕಾರಿಯಾಗಬಲ್ಲವು. ವಸ್ತುನಿಷ್ಠೆ ಹಾಗೂ ಪೂರ್ವಗ್ರಹ ರಹಿತ ದೃಷ್ಟಿಕೋನದಿಂದ ನೀಡಲ್ಪಟ್ಟ ಯಾವುದೇ ವಿಮರ್ಶೆಯೂ ಲೇಖಕನ ಬೆಳವಣಿಗೆಗೆ ಸಹಕಾರಿಯಾಗಬಲ್ಲದು. ಈ ಒಂದು ದೃಷ್ಟಿಯಿಂದ ಮಾತ್ರವೇ ಇಂದು ವಿಮರ್ಶೆಗೆ ಬೆಲೆ ನೀಡಬೇಕಿದೆ. ಕೃತಿಗಿಂತಲೂ ವಿಮರ್ಶೆಯು ದೊಡ್ಡದು, ತಮ್ಮ ವಿಮರ್ಶೆಗಳಿಂದಲೇ ಕೃತಿಯ ಮೌಲ್ಯವು ಹೆಚ್ಚುತ್ತದೆ, ಮತ್ತು ಲೇಖಕನಿಗೆ ಪ್ರಚಾರವೂ ಅಸ್ತಿತ್ವವೂ ಲಭ್ಯವಾಗುತ್ತದೆ ಎಂಬಂತಹ ವಾತಾವರಣವನ್ನು ಸೃಷ್ಟಿ ಮಾಡಿರುವ ವಿಮರ್ಶಕರ ಹುನ್ನಾರವು, ಇತ್ತೀಚೆಗೆ ಪತ್ರಿಕಾರಂಗದಲ್ಲಿ ಹೆಚ್ಚುತ್ತಿರುವ ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಸಮಾನವಾಗಿ ಕಂಡುಬರುತ್ತದೆ. ರಂಜನೆಯನ್ನೂ, ರಸೋದ್ದೀಪನೆಯನ್ನೂ ಅಪೇಕ್ಷಿಸುವ ನೈಜ ಓದುಗನು, ಪತ್ರಿಕೆಗಳ ಕಾಲಂಗಳನ್ನು ತುಂಬುವ ಇಂತಹ ವಿಮರ್ಶೆಗಳಿಗೆ ಮರುಳಾಗುವುದಿಲ್ಲ. ಮತ್ತು ವಿಮರ್ಶೆಗಳಿಂದ ವಿಮರ್ಶಕನ ಯೋಗ್ಯತೆಯನ್ನು ಮಾತ್ರ ಅಳೆದುಕೊಳ್ಳುತ್ತಾನೆ ಎಂಬುದು ನನ್ನ ಸ್ವಂತ ಅನುಭವವಾಗಿದೆ.

  ಅಂತಿಮವಾಗಿ ವಿಮರ್ಶೆಯ ಬಗೆಗೆ ಹೇಳಬೇಕಿರುವುದು ಇಷ್ಟೇ. ಯಾವೊಬ್ಬ ವಿಮರ್ಶಕನೂ ಸಮಸ್ತ ವಾಚಕವರ್ಗದ ಪ್ರತಿನಿಧಿಯಲ್ಲ. ಕೃತಿಕಾರನಿಗಿಂದ ದೊಡ್ಡವನೂ ಅಲ್ಲ. ವಿಮರ್ಶೆಗಳು ವಿಮರ್ಶಕನ ಪಾಂಡಿತ್ಯದ ದ್ಯೋತಕ ಮಾತ್ರ ಮತ್ತು ಅವುಗಳ ಅಗತ್ಯ ಲೇಖಕನಿಗೆ ಮಾತ್ರ.

  ಅಲ್ಲದೆ ಆಧುನಿಕ ವಿಮರ್ಶಕರು ಸಾಮಾಜಿಕ ಬದ್ಧತೆ ಎಂಬೊಂದು ಹೊಸ ಹುಸಿ ಮಾನದಂಡವನ್ನು ಇಟ್ಟುಕೊಂಡಿರುವುದು ಕಾಣುತ್ತದೆ. ರಸೋದ್ದೀಪಕವಾದ ಸಾಹಿತ್ಯವು ವಾಚಕನಲ್ಲಿ ಭಾವಪ್ರಕರ್ಷವನ್ನೂ, ವೈಚಾರಿಕತೆಯನ್ನೂ ಉಂಟುಮಾಡಿ ಮನಸ್ಸಿಗೆ ಸಂಸ್ಕಾರವನ್ನು ನೀಡುತ್ತದೆ. ಅದು ಸಾಹಿತ್ಯದಿಂದ ನವಿರಾಗಿ ಆಗಬೇಕಾದ ಕೆಲಸ. ಬದಲಾಗಿ ಇಂದು ಸಾಹಿತಿಯು ಸಮಾಜವನ್ನು ತಿದ್ದುವ ಕೆಲಸವನ್ನು ನೇರವಾಗಿ ಮಾಡಬೇಕು ಎಂದು ಆಗ್ರಹಿಸುವಂತೆ ತೋರುತ್ತದೆ. ರಾಜಕೀಯ ಸಿದ್ಧಾಂತಗಳನ್ನು ತುಷ್ಟೀಕರಿಸುವ ಹಿನ್ನೆಲೆಯಲ್ಲಿ ಇಂತಹ ಕ್ರಾಂತಿಯ ಕರೆಯನ್ನು, ಬದಲಾವಣೆಯ ಕೂಗನ್ನು, ಶೋಷಣೆಯ ವಿರುದ್ಧ ಜಾಗೃತಿಯನ್ನು, ಹುಯಿಲೆಬ್ಬಿಸಿ ಘೋಷಣೆಯಂತೆ ಮಾಡದ ಸಾಹಿತ್ಯವನ್ನು ವಿಮರ್ಶಕರು ನಿಷ್ಪ್ರಯೋಜಕ, ಸಾಮಾಜಿಕ ಬದ್ಧತೆ ರಹಿತ, ಪ್ರಗತಿ ವಿರೋಧಿ, ಪುರೋಹಿತಶಾಹಿ ಎಂದೆಲ್ಲ ಹಣೆಪಟ್ಟಿ ಹಚ್ಚಿ ವರ್ಗೀಕರಿಸುವುದು ಹಾಸ್ಯಾಸ್ಪದವಾಗಿದೆ. ರಾಜಕಾರಣಿಗಳ ಭಾಷಣಗಳಂತೆಯೂ, ಪತ್ರಿಕಾ ವರದಿಗಳಂತೆಯೂ ಸೃಜನಶೀಲ ಸಾಹಿತ್ಯವು ಕೂಡ ಇರಬೇಕೆಂದು ಇವರ ಬಯಕೆಯೇ? (ಸರ್ಜನಶೀಲ ಎಂಬುದು ವ್ಯಾಕರಣಶುದ್ಧ ಪ್ರಯೋಗವಾದರೂ, ಪ್ರಯೋಗಶರಣತೆಯಿಂದ ಇದನ್ನೇ ಬಳಸಬೇಕಾಗಿದೆ).

  link for full article
  http://simhasn.blogspot.in/2011/05/article-on-byrappas-novels.html

  ಉತ್ತರ
 6. M.A.Sriranga
  ಜೂನ್ 28 2014

  (೧) ಸಿಂಹ ಎಸ್ ಎನ್ ಅವರಿಗೆ– ೨೭-೬-೧೪ರ ವಿಮರ್ಶೆಯನ್ನು ಕುರಿತ ತಮ್ಮ ಪ್ರತಿಕ್ರಿಯೆ, ತಾವು ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸಿರುವ ಇಂದಿನ ವಿಮರ್ಶೆಗಿಂತ ಹೆಚ್ಚು ವಿರೋಧಾಭಾಸವಾಗಿದೆ. ಒಬ್ಬ ಓದುಗ ಕೃತಿಯೊಂದರ ವಿಮರ್ಶೆ ಓದಿ ಆ ಕೃತಿಯನ್ನು ಓದದೆ ಬಿಟ್ಟರೆ ಅದು ವಿಮರ್ಶಕನ ತಪ್ಪು ಹೇಗೆ ಆಗುತ್ತದೆ?ಕೃತಿಯನ್ನು ಓದಿ ಅದರ ಬಗ್ಗೆ ತನ್ನ ಅಭಿಪ್ರಾಯವನ್ನು ರೂಪಿಸಿಕೊಳ್ಳಲು ವಿಮರ್ಶೆ ಅಡ್ಡ ನಿಂತಿದೆ ಎಂದು ಭಾವಿಸುವುದು ಯಾರ ತಪ್ಪು?ನಿಮ್ಮ ರೀತಿಯದೇ ಅಭಿಪ್ರಾಯವನ್ನು ಸುಮಾರು ಎರಡು ವರ್ಷಗಳ ಹಿಂದೆ ‘ಕನ್ನಡ ಪ್ರಭ’ದಲ್ಲಿ ಓದುಗರೊಬ್ಬರು ವ್ಯಕ್ತಪಡಿಸಿದ್ದರು. ಅವರಿಗೆ ಭೈರಪ್ಪನವರ ‘ಕವಲು’ ಕಾದಂಬರಿಯ ಬಗ್ಗೆ ಐದಾರು ವಿಮರ್ಶೆಗಳನ್ನು ಓದಿದ ಮೇಲೆ ಆ ಕಾದಂಬರಿಯನ್ನು ಓದುವ ಆಸೆಯೇ ಬತ್ತಿಹೋಯಿತಂತೆ. ಇಲ್ಲಿ ತಪ್ಪು ಯಾರದ್ದು? ವಿಮರ್ಶೆಯದ್ದೋ? ವಿಮರ್ಶಕರದ್ದೋ? ಅಥವಾ ಅಲ್ಪ ತೃಪ್ತರಾಗಿ ಕಾದಂಬರಿಯನ್ನು ಓದದೆ ಹೋದ ಆ ಓದುಗರದ್ದೋ?
  (೨) >>>>ಯಾವೊಬ್ಬ ವಿಮರ್ಶಕನೂ ಸಮಸ್ತ ವಾಚಕವರ್ಗದ ಪ್ರತಿನಿಧಿಯಲ್ಲ>>>> ಯಾವ ವಿಮರ್ಶಕರು ತಾವು ಸಮಸ್ತ ವಾಚಕ ವರ್ಗದ ಪ್ರತಿನಿಧಿ ಎಂದು ಹೇಳಿಕೊಂಡಿದ್ದಾರೆ? ಒಂದು ಕೃತಿಯನ್ನು ಓದುವವರೆಲ್ಲರೂ ಅವರವರ ಮಟ್ಟದಲ್ಲಿ ವಿಮರ್ಶಕರೇ. ತಾವು ನೀಡಿರುವ ಕೊಂಡಿಯ ತಮ್ಮದೇ ಆದ ಲೇಖನವನ್ನು ಓದಿದೆ. ನೀವೂ ಒಬ್ಬ ವಿಮರ್ಶಕರೇ. ಅದರಲ್ಲಿನ ಕೆಲವು ಅಂಶಗಳು ನನಗೆ ಒಪ್ಪಿಗೆಯಿಲ್ಲ. ಅದೇ ರೀತಿ ಅದನ್ನು ಓದಿದ ಇತರರಿಗೂ ಆ ಲೇಖನದಲ್ಲಿನ ತಮ್ಮ ಅಭಿಪ್ರಾಯದ ಬಗ್ಗೆ ಸಹಮತವಿಲ್ಲದೆ ಇರಬಹುದು. ಹೀಗಾಗಿ ತಮ್ಮ ‘ಯಾವೊಬ್ಬ ವಿಮರ್ಶಕನೂ ………’ ಎಂಬ ವಾದದ ಮೊದಲ ವಾಕ್ಯವೇ ಅಪ್ರಸ್ತುತವಾಗಿದೆ. .
  (೩) ಇಂದಿನ ಸಂಕೀರ್ಣ ಸಾಮಾಜಿಕ ಪರಿಸ್ಥಿತಿ ,ವೈಯಕ್ತಿಕ ಬದುಕಿನ ರೀತಿ-ರಿವಾಜುಗಳು ಇವುಗಳ ನಡುವೆ ಬರೆಯುತ್ತಿರುವ ಒಬ್ಬ ಸಾಹಿತಿಯಿಂದ, ಆತನ ಕೃತಿಯಿಂದ ರಂಜನೆ,ರಸೋದ್ದೀಪನೆ ಇತ್ಯಾದಿಗಳನ್ನು ಅಪೇಕ್ಷಿಸುವುದು ಸಮಾಜ ವಿಮುಖಿಯಾದ ಚಿಂತನೆಯಾಗುತ್ತದೆ. ಇದರಿಂದ ಸಾಹಿತ್ಯದಲ್ಲಿ ನಿಜವಾಗಲೂ ಆಸಕ್ತಿಯಿರುವ ಗಂಭೀರ ಓದುಗರನ್ನು– ಕಾಲ ಕಳೆಯಲು ಟಿ ವಿ ಮುಂದೆ ಕುಳಿತು ಕಾಫಿ,ಟೀ ಜತೆಗೆ ಕಾರಶೇವೆ ,ಮಂಡಕ್ಕಿ ಪುರಿಗಳನ್ನು ತಿನ್ನುತ್ತಾ ಅದರಲ್ಲಿ ಪ್ರಸಾರವಾಗುವ ಹಳಸಲು ಧಾರಾವಾಹಿಗಳನ್ನು ನೋಡುತ್ತಾ, ಹರಟುತ್ತಾ ಕೂರುವವರ ಮಟ್ಟಕ್ಕೆ ಇಳಿಸಿದಂತಾಗುತ್ತದೆ. ಆ ಟಿ ವಿ ಧಾರಾವಾಹಿಗಳಲ್ಲಿ ಅಗಾಧವಾದ ರಂಜನೆ,ರಸೋದ್ದೀಪನೆ, ಮುಂದೆ ಏನಾಗುತ್ತದೆ ಎಂಬ ಕುತೂಹಲ ಇವೆಲ್ಲಾ ಇರುತ್ತವೆ!! ಇಂತಹ ಪರಿಸ್ಥಿತಿಯ ಪ್ರತಿಪಾದನೆ ತಮ್ಮ ಉದ್ದೇಶವಾದರೆ ಇದು ಓದುಗ/ಸಾಹಿತಿ ಯಾರ ದೃಷ್ಟಿಯಿಂದಲೂ ಕ್ಷೇಮವಲ್ಲ.

  ಉತ್ತರ
  • simha sn
   ಜೂನ್ 28 2014

   ವಿಮರ್ಶಕ ಮಹಾಪ್ರಭೋ !
   ನನ್ನ ಲೇಖನವನ್ನು ಓದುವ ಶ್ರಮ ತೆಗೆದುಕೊಂಡದ್ದಕ್ಕೆ ಧನ್ಯ. ನನ್ನ ಅಭಿಪ್ರಾಯಗಳನ್ನು ಒಪ್ಪದೇ ಇರುವ ನಿಮ್ಮ ಸ್ವಾತಂತ್ರ್ಯವನ್ನು ನಾನು ಗೌರವಿಸುತ್ತೇನೆ . ರಸೋದ್ದೀಪನೆಗೆ ನಿಮ್ಮ ವ್ಯಾಖ್ಯಾನವನ್ನು ಕಂಡು ತುಂಬಾ ಸಂತೋಷವಾಯಿತು. ಹಾಗಾಗಿ ಈ ವಿಚಾರದಲ್ಲಿ ನಿಮ್ಮೊಂದಿಗೆ ಚರ್ಚಿಸುವುದೇನೂ ಇಲ್ಲ! ಆದರೆ ವಿಮರ್ಶೆಗಳು ಪುಂಖಾನುಪುಂಖವಾಗಿ ಬರುತ್ತಿರಲಿ ಎಂದು ಆಶಿಸುವವರಲ್ಲಿ ನಾನೂ ಒಬ್ಬ. ಮಕ್ಕಳ ಕುಂಡೆ ಒರೆಸಲಿಕ್ಕೆ ಎಷ್ಟೆಂದು ಟಿಶ್ಯೂ ಪೇಪರ್ ಕೊಳ್ಳುವುದು !

   ಉತ್ತರ

Trackbacks & Pingbacks

 1. ಸಾಹಿತ್ಯ ಕ್ಷೇತ್ರದ ಒಳಹೊರಗು – ಭಾಗ ೩ | ನಿಲುಮೆ
 2. ಸಾಹಿತ್ಯಕ್ಷೇತ್ರದ ಒಳಹೊರಗು – 4 | ನಿಲುಮೆ
 3. ಸಾಹಿತ್ಯ ಕ್ಷೇತ್ರದ ಒಳಹೊರಗು – 5 | ನಿಲುಮೆ
 4. ಸಾಹಿತ್ಯಕ್ಷೇತ್ರದ ಒಳಹೊರಗು-6 | ನಿಲುಮೆ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments