ಸಾಹಿತ್ಯ ಕ್ಷೇತ್ರದ ಒಳಹೊರಗು
-ಡಾ.ಶ್ರೀಪಾದ ಭಟ್, ತುಮಕೂರು
ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ವರ್ಷಗಟ್ಟಲೆ ಸೂತ್ರಧಾರರಿರಲಿಲ್ಲ. ಇದೀಗ ಪ್ರೊ. ಮಾಲತಿ ಪಟ್ಟಣಶೆಟ್ಟಿಯವರನ್ನು ಸರ್ಕಾರ ಅಧ್ಯಕ್ಷರಾಗಿ ಆಯ್ಕೆ ಮಾಡಿದೆ. ಇವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಪತ್ರಕರ್ತನೊಬ್ಬ ಅವರನ್ನು ಸಂದರ್ಶನ ಮಾಡಿದ. ಚಾನೆಲ್ಲೊಂದರಲ್ಲಿ ಅದು ಪ್ರಸಾರವಾಯಿತು. ಆತ ಅವರ ಯೋಜನೆಗಳ ಬಗ್ಗೆ ಪ್ರಶ್ನೆ ಕೇಳಿದ. ಯುವ ಜನತೆಯನ್ನು, ಹೊಸಬರನ್ನು ಕನ್ನಡ ಭಾಷೆ, ಸಾಹಿತ್ಯದತ್ತ ಸೆಳೆಯುವ ತಮ್ಮ ಪ್ರಾಮಾಣಿಕ ಅನಿಸಿಕೆಯನ್ನು ಪ್ರೊ. ಮಾಲತಿಯವರು ಹೇಳಿದರು. ನೀವು ಸಾಹಿತ್ಯದಲ್ಲಿ ಎಡಪಂಥದ ಸಾಹಿತಿಗಳಿಗೆ ಮನ್ನಣೆ ನೀಡುವಿರೋ ಬಲಪಂಥದವರಿಗೋ ಎಂದು ಆತ ಕೇಳಿದ. ನನಗೆ ಕನ್ನಡಕ್ಕೆ ಯಾರು ಏನು ಕೊಡುಗೆ ನೀಡಿದ್ದಾರೆ ಎಂಬುದು ಮುಖ್ಯವೇ ವಿನಾ ಎಡ, ಬಲ ಪಂಥಗಳಲ್ಲ ಎಂದು ಒಬ್ಬ ನಿಜವಾದ ಸಾಹಿತ್ಯಪ್ರೇಮಿ ಹೇಳುವ ಮಾತನ್ನು ಮಾಲತಿಯವರು ಉತ್ತರವಾಗಿ ನೀಡಿದರು. ಇಂಥ ಸಮ ದೃಷ್ಟಿಕೋನ ಎಷ್ಟು ಜನರಿಗೆ ಇರಬಹುದು? ಹೇಳುವುದು ಕಷ್ಟ.
ಕನ್ನಡ ಸಾಹಿತ್ಯದ ಇಂದಿನ ಪರಿಸ್ಥಿತಿಯನ್ನು ಪತ್ರಕರ್ತನ ಪ್ರಶ್ನೆ ಪ್ರತಿನಿಧಿಸುತ್ತದೆ. ಇದು ನಿಜಕ್ಕೂ ಸಾಹಿತ್ಯಕ ದುರಂತ. ಸಾಹಿತ್ಯ ರಚಿಸುವವರು, ಸಾಹಿತ್ಯ ಓದುವವರು ಇಬ್ಬರೂ ತಾವು ಎಡಪಂಥದವರೋ, ಬಲಪಂಥದವರೋ ಎಂದು ಮೊದಲೇ ನಿರ್ಧರಿಸಿಕೊಳ್ಳಬೇಕು. ಇಲ್ಲವಾದಲ್ಲಿ ಈಗಾಗಲೇ ಆಯಾ ಪಂಥೀಯರು ಅಥವಾ ಮಾಧ್ಯಮದವರು ಅಥವಾ ಕೊನೆಗೆ ವಿಮರ್ಶಕರು ನಿಮಗೆ ಹಣೆಪಟ್ಟಿ ಹಚ್ಚಿಯೇಬಿಡುತ್ತಾರೆ! ಹೀಗೆ ಹಣೆಪಟ್ಟಿ ಅಂಟಿಸಿಕೊಳ್ಳದವ ಸಾಹಿತಿಯೂ ಆಗಲಾರ ಓದುಗನೂ ಆಗಲಾರ!
ಸುಮ್ಮನೆ ಓದುವ, ಬರೆಯುವ ಪ್ರೀತಿಗಾಗಿ ಸಾಹಿತ್ಯ ಲಭ್ಯವಿಲ್ಲವೇ? ಒಬ್ಬ ನಿಜವಾದ ಸಾಹಿತ್ಯಪ್ರೇಮಿಗೆ ಯಾವ ಪಂಥಗಳೂ ಮುಖ್ಯವಾಗದು. ಆತ ಆ ವಿಷಯ, ಈ ವಿಷಯ, ಆ ಸಿದ್ಧಾಂತ, ಈ ಸಿದ್ಧಾಂತ ಎಂದೆಲ್ಲ ನೋಡಲಾರ. ತನಗೆ ಯಾವುದು ಇಷ್ಟವೋ, ಆಸಕ್ತಿಯೋ ಅದನ್ನೆಲ್ಲ ಆತ ಓದಿ ಅರಗಿಸಿಕೊಳ್ಳುತ್ತಾನೆ, ತನ್ನದೇ ಒಂದು ನಿಲುವಿಗೆ ಆತ ಬರಬಹುದು, ಬರದೆಯೂ ಇರಬಹುದು. ಹೀಗೆ ಯಾವ ಪಂಥ, ಸಿದ್ಧಾಂತಕ್ಕೂ ತನ್ನನ್ನು ಅಡವಿಟ್ಟುಕೊಳ್ಳದ ಸಾಹಿತಿ ಅಥವಾ ಓದುಗನೇ ನಿಜವಾದ ಸಾಹಿತಿ ಅಥವಾ ಓದುಗನಾಗಬಲ್ಲ. ಜನಪ್ರೀತಿಯ ಕವಿ ಜಿಎಸ್‍ಎಸ್ ಅವರ ಕಾವ್ಯವನ್ನು ನವೋದಯ, ನವ್ಯ, ದಲಿತ-ಬಂಡಾಯ ಹೀಗೆ ಯಾವುದಕ್ಕಾದರೂ ತಗುಲಿಸಲೇಬೇಕು ಎಂಬ ವಿಮರ್ಶಕರ, ಮಾಧ್ಯಮದವರ ಹಠ ಕೊನೆಗೂ ಈಡೇರಲೇ ಇಲ್ಲ. ಯಾವುದೂ ದಾರಿ ಕಾಣದೇ ಅವರಿಗೆ ಕೊನೆಗೆ ಸಮನ್ವಯ ಕವಿ ಎಂಬ ಹಣೆಪಟ್ಟಿ ಕಟ್ಟಿದರು. ಜಿಎಸ್‍ಎಸ್ ಅವರಿಗೇ ಸ್ವತಃ ಇದು ಇರಿಸುಮುರಿಸು ತಂದರೂ ನಾವು ಅವರನ್ನು ಹಾಗೆ ಕರೆಯುವುದನ್ನು ಬಿಡಲಿಲ್ಲ! ಜನರನ್ನು ಪ್ರೀತಿಯಿಂದ ಆವರಿಸಿದ ಕೆಎಸ್‍ನ ಅವರನ್ನು, ಅವರದು ಪುಷ್ಪಕಾವ್ಯ, ಅವರು ಕವಿಯೇ ಅಲ್ಲ, ಅವರು ಪುಷ್ಪಕವಿ ಎಂದೆಲ್ಲ ಗೇಲಿ ಮಾಡಲಾಯಿತು. ಕನ್ನಡ ಪ್ರಾಧ್ಯಾಪಕರಾಗಿರದೇ, ಯಾವ ಸಿದ್ಧಾಂತಕ್ಕೂ ಕಟ್ಟುಬೀಳದೇ ಒಬ್ಬ ಸಾಹಿತ್ಯ ಪ್ರೀತಿಯ ಸರ್ಕಾರಿ ನೌಕಕರಾಗಿ ಅವರು ರಚಿಸಿದ ಕಾವ್ಯ ಪಡೆದ ಜನಮನ್ನಣೆ ಸಾಹಿತ್ಯದ ಅಧಿಕೃತ ಗುತ್ತಿಗೆ ಪಡೆದವರ ಹೊಟ್ಟೆಯುರಿಗೆ ಕಾರಣವಾಯಿತೋ ಅಥವಾ ಯಾವುದೇ ಪಂಥಗಳ ಲಕ್ಷಣ ಕಾಣಿಸದೇ ಎರಡೂ ಪಂಥದವರು ಅವರನ್ನು ವ್ಯವಸ್ಥಿತವಾಗಿ ನಿರಾಕರಿಸಲು ಹವಣಿಸಿದರೋ-ಎರಡೂ ಇರಬಹುದು. ಆದರೆ ಇಂದಿಗೂ ಜನ ಮಾತ್ರ ಅವರ ಪುಷ್ಪಕಾವ್ಯ ಪ್ರೀತಿಸುವಷ್ಟು ಸಿಡಿಲ ಕಾವ್ಯವನ್ನು ಪ್ರೀತಿಸುತ್ತಿಲ್ಲ. ಇವೆಲ್ಲ ಸಾಹಿತ್ಯದಲ್ಲಿ ರಾಜಕೀಯ, ಸಾಮಾಜಿಕ ಸಿದ್ಧಾಂತಗಳು ಸೇರಿ ಸಾಹಿತ್ಯವನ್ನು ಕೇವಲ ಸಾಹಿತ್ಯವಾಗಿ ಇರಲು ಬಿಡದಂತೆ ಮಾಡಿದುದರ ಲಕ್ಷಣಗಳು.
ಹಾಗೆ ನೋಡಿದರೆ ನಮ್ಮ ಸಾಹಿತ್ಯಕ್ಕೂ ರಾಜಕಾರಣಕ್ಕೂ ಪಂಪನ ಕಾಲದಿಂದಲೂ ಬಿಟ್ಟೂಬಿಡದ ನಂಟು. ಪ್ರಾಚೀನ ಕಾಲದ ಸಾಹಿತ್ಯದಲ್ಲಿ ಇವುಗಳ ನಡುವೆ ಗೆರೆ ಎಳೆಯಬಹುದಾದ ಸಾಧ್ಯತೆಯಾದರೂ ಇದೆ. ಆದರೆ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಇದರ ಆಯಾಮ ಬಹುಮುಖ. ಜನತಂತ್ರ ವ್ಯವಸ್ಥೆ ಬಂದ ಮೇಲೆ ಸಾಹಿತ್ಯದ ಮೂಲಕ ಸುಲಭವಾಗಿ ಜನಮನ್ನಣೆ ಪಡೆಯಬಹುದು ಎಂಬುದನ್ನು ವ್ಯವಸ್ಥೆಯಲ್ಲಿರುವವರು ಬಹುಬೇಗ ಅರ್ಥಮಾಡಿಕೊಂಡರು. ಕೆಲವರ ಓಲೈಕೆಯಲ್ಲಿ ಅಥವಾ ಕೃಪಾಕಟಾಕ್ಷದಲ್ಲಿ ಹೊಸಗನ್ನಡ ಸಾಹಿತ್ಯ ಬೆಳೆಯುತ್ತಬಂತು. ಉತ್ತರ ಕರ್ನಾಟಕ ಅಂದ ಕೂಡಲೇ ಬೇಂದ್ರೆ ಎನ್ನುವುದು, ದಕ್ಷಿಣ ಕರ್ನಾಟಕ ಅಂದರೆ ಕುವೆಂಪು ಅನ್ನುವುದು, ಕರಾವಳಿ ಅಂದರೆ ಕಾರಂತ ಅನ್ನುವುದು ಹೀಗೆ ಸಾಹಿತ್ಯದ ಬ್ರಾಂಡುಗಳು ತಯಾರಾದವು. ಇಂಥ ಮೇಲೈಕೆ, ಓಲೈಕೆಗಳಿಂದ ಕನ್ನಡ ಸಾಹಿತ್ಯಕ್ಕೆ ನಿಜಕ್ಕೂ ನಷ್ಟವಾಗಿದೆ. ಇಲ್ಲೊಂದು ನಿದರ್ಶನ. ಬೆಳ್ಳೆ ರಾಮಚಂದ್ರರಾಯರು ಕಾರಂತರ ಸಮಕಾಲೀನರು, ಅದೇ ಪರಿಸರದಲ್ಲಿದ್ದ ಅವರ ಆಪ್ತರು. ಹಿಂದೊಮ್ಮೆ ಪ್ರಕಟವಾಗಿ ಮೂಲೆಗುಂಪಾಗಿದ್ದ ಅವರ ಕೃತಿಗಳನ್ನು ಶಿವಮೊಗ್ಗ ಕರ್ನಾಟಕ ಸಂಘ ಬೆಳ್ಳೆ ರಾಮಚಂದ್ರರಾಯರ ಎರಡು ಕಾದಂಬರಿಗಳು ಎಂದು ಮರು ಮುದ್ರಣ ಮಾಡಿ ಉಪಕರಿಸಿದೆ. ಇದರಲ್ಲಿ ಒಂದು ಚಿರವಿರಹಿ ಎಂಬ ಕಾದಂಬರಿ. 1950ರಲ್ಲಿ ಪ್ರಕಟವಾದ ಇದರ ವಸ್ತು, ತಂತ್ರ, ಭಾಷೆ, ಸಂವಿಧಾನಗಳು ಇಂದಿಗೂ ಅನೂಹ್ಯ. ಆ ಕಾದಂಬರಿಯ ಗೋಪಿ, ಮಾಲತಿ, ಸುಮಿತ್ರ ಪಾತ್ರಗಳು ಅವು ಆಧುನಿಕತೆಯೊಂದಿಗೆ ಮುಖಾಮುಖಿಯಾಗುತ್ತ ಸ್ವಂತಿಕೆಯನ್ನು ಉಳಿಸಿಕೊಳ್ಳಲು ಹೆಣಗುವ ಪರಿ, ಸಂಪ್ರದಾಯ ಮತ್ತು ಆಧುನಿಕತೆ ಸಂಘರ್ಷ ಮೊದಲಾದವುಗಳನ್ನು ಆ ಕಾದಂಬರಿ ಓದಿಯೇ ಅರಿಯಬೇಕು. ಕಾರಂತರ ಮೈಮನಗಳ ಸುಳಿಯಲ್ಲಿ ಕಾದಂಬರಿಯ ಜೊತೆಯಲ್ಲೇ ಪ್ರಕಟವಾದರೂ ಈ ಕಾದಂಬರಿಗೆ ಸಿಗಬೇಕಾದ ನ್ಯಾಯ ಆಗಲೂ ಸಿಗಲಿಲ್ಲ, ಈಗಲೂ ಸಿಕ್ಕಿಲ್ಲ. ಅನಕೃ ಅವರಂತೂ ಇದು ಅನ್‍ಕಾಮನ್ ನಾವೆಲ್ ಎಂದು ಅಂದೇ ಕರೆದಿದ್ದರು. ಆದರೂ ವಿಮರ್ಶಕರಿಗೆ ಇದು ಕಾಣಲೇ ಇಲ್ಲ. ಯಾಕೆಂದರೆ ಬೆಳ್ಳೆ ರಾಮಚಂದ್ರರಾಯರು ಎಂದರೆ ಯಾರು? ಎಂಬುದೇ ಅವರಿಗೆ ಈಗಲೂ ಇರುವ ಪ್ರಶ್ನೆ!
ಸ್ವತಃ ಕಾರಂತರನ್ನೇ ನೋಡಿ. ಅವರ ಯಕ್ಷಗಾನ ಬಯಲಾಟ ಪ್ರಕಟವಾಗಿ ವರ್ಷಗಳೇ ಕಳೆದಿದ್ದರೂ ನಮ್ಮಲ್ಲಿ ಯಾರಿಗೂ ಅದು ಮಹತ್ವದ್ದು ಎನಿಸಲೇ ಇಲ್ಲ. 1958ರಲ್ಲಿ ಸ್ವೀಡಿಷ್ ಅಕಾಡೆಮಿ ಅದಕ್ಕೆ ಪ್ರಶಸ್ತಿ ನೀಡಿದಾಗ ನಾವೂ ಅದಕ್ಕೆ ಅಕಾಡೆಮಿ ಅವಾರ್ಡ್ ನೀಡಿದೆವು! ಇದೇ ಪರಿಸ್ಥಿತಿ ಈಗಲೂ ಇದೆ. ಕನ್ನಡದಲ್ಲಿ ಈಗ ವಿಮರ್ಶೆ ಸತ್ತೇ ಹೋಗಿದೆ ಎಂದರೆ ತಪ್ಪೇನೂ ಇಲ್ಲ. ಇದ್ದರೂ ಅದು ತಥಾಕಥಿತ ಮಾದರಿಗೆ ಒಳಪಟ್ಟಿದೆ. ಆಯಾ ವಿಮರ್ಶಕರ ಕಣ್ಣಿಗೆ ಬಿದ್ದರೆ, ಅವರ ವಿಮರ್ಶಾ ಧಾಟಿಗೆ ಕೃತಿ ಸರಿ ಬರುತ್ತದೆ ಎನಿಸಿದರಷ್ಟೇ ವಿಮರ್ಶೆ ನಡೆಯಬಹುದು. ಈಚೆಗೆ ಕನ್ನಡದಲ್ಲಿ ಹೊಸಬಗೆಯ ಕಾದಂಬರಿಗಳು, ಕಥೆಗಳು ಬರುತ್ತಿವೆ. ಬೇರೆ ಬೇರೆ ಕ್ಷೇತ್ರಗಳಲ್ಲಿದ್ದು ಕನ್ನಡ ಸಾಹಿತ್ಯವನ್ನು ರಚಿಸುತ್ತಿರುವುದರಿಂದ ಇಂದಿನ ಕನ್ನಡ ಸಾಹಿತ್ಯ ರಚಿಸುತ್ತಿರುವವರಿಗೆ ಯಾವ ಸಿದ್ಧಾಂತ, ಪಂಥಗಳ ಹಂಗಿಲ್ಲ. ಹೀಗಾಗಿ ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ಕೃತಿಗಳನ್ನು ವಿವರಿಸಲು ಸ್ಥಾಪಿತ ವಿಮರ್ಶಕರಿಗೆ ಸಾಧ್ಯವಾಗುತ್ತಿಲ್ಲ. ಗೋಪಾಲಕೃಷ್ಣ ಪೈ ಅವರ ಸ್ವಪ್ನಸಾರಸ್ವತ, ಶ್ರೀನಿವಾಸ ವೈದ್ಯರ ಹಳ್ಳ ಬಂತು ಹಳ್ಳ ಕೃತಿಗಳು ಪ್ರಕಟವಾಗಿ ಬಹುಕಾಲವಾದರೂ ಪ್ರಶಸ್ತಿ ಬಂದಮೇಲೆಯೇ ಅವುಗಳತ್ತ ಒಂದಿಷ್ಟು ವಿಮರ್ಶಕರು ಕಣ್ಣಾಡಿಸಿದ್ದು. ಇವುಗಳಿಂದ ಭಿನ್ನವಾದ ವಿ ತಿ ಶೀಗೇಹಳ್ಳಿಯವರ ತಲೆಗಳಿ ಎಂಬ ಕಾದಂಬರಿ ಪ್ರಕಟವಾಗಿ ಕೆಲವು ವರ್ಷಗಳೇ ಕಳೆದಿವೆ. ಕೃತಿಯಲ್ಲಿ ಹವ್ಯಕ ಕನ್ನಡವಿದೆ. ಈ ಕಾದಂಬರಿಯ ವಸ್ತು, ಪಾತ್ರ ನಿರ್ವಹಣೆ, ಸಂವಿಧಾನ, ತಂತ್ರಗಳು ವಿಮರ್ಶಕರಿಗೆ ಇನ್ನೂ ದಕ್ಕಿಲ್ಲ. ಏಕೆಂದರೆ ಈ ಕೃತಿಗೆ ಇನ್ನೂ ಎಲ್ಲಿಂದಲೂ ಪ್ರಶಸ್ತಿ ಬಂದಿಲ್ಲ!
ಈಗೀಗ ಕನ್ನಡದಲ್ಲಿ ಕಥೆ ಬರೆಯುತ್ತಿರುವವರಲ್ಲಿ ಹೆಸರಾದವರಲ್ಲಿ ಬಹುತೇಕರು ಸಾಹಿತ್ಯದ ಅಧ್ಯಾಪಕರಲ್ಲ. ಅವರ ಜೀವನ, ವೃತ್ತಿ ಕ್ಷೇತ್ರಗಳೆಲ್ಲ ಬಹುರಾಷ್ಟ್ರೀಯ ಕಂಪನಿಗಳು, ಇನ್ನಿತರ ಸೇವಾ ವಲಯಗಳು. ಅವರ ಜೀವನದ ಅನುಭವಗಳನ್ನು ಅವರು ಪ್ರಾಮಾಣಿಕವಾಗಿ ಕಥೆಯಾಗಿಸುತ್ತಿದ್ದಾರೆ. ಹೊಸ ಕಸುವು ಕನ್ನಡ ಸಾಹಿತ್ಯಕ್ಕೆ ಹರಿದುಬರುತ್ತಿದೆ. ಇದನ್ನು ಇಂದಿಗೂ ನಮ್ಮ ಸ್ಥಾಪಿತ ವಿಮರ್ಶಕರು ಸರಿಯಾಗಿ ಗುರುತಿಸಿಲ್ಲ. ವಸುಧೇಂದ್ರ ಅವರ ಈಚಿನ ಕಥೆ ಪೂರ್ಣಾಹುತಿ. ಸಂಪ್ರದಾಯ, ಆಧುನಿಕ ತಂತ್ರಜ್ಞಾನ ಹಾಗೂ ವ್ಯಕ್ತಿ ಸ್ವಾತಂತ್ರ್ಯ, ಕಟ್ಟುಪಾಡುಗಳ ಸಂಘರ್ಷವನ್ನು, ಹಳೆಯದು-ಹೊಸದರ ಸಮನ್ವಯತೆಯನ್ನು ಸೂಕ್ಷ್ಮವಾಗಿ ಆಧುನಿಕ ಜೀವನ ಶೈಲಿಯ ಆಧಾರದಲ್ಲೇ ಕಟ್ಟಿಕೊಡುವ ಮೂಲಕ ಓದುಗರನ್ನು ಕಾಡುವ ಹೊಸತನದ ವಸ್ತು-ವಿನ್ಯಾಸದ ಕಥೆ ಅದು. ಅಂತೆಯೇ ಸುಮಂಗಲಾ, ಕಾಗಿನೆಲೆ ಮುಂತಾದ ಹೊಸ ಕತೆಗಾರರ ಕಥೆಗಳ ಶೋಧವನ್ನು ಯಾವ ವಿಮರ್ಶಕರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಯಾಕೆಂದರೆ ಇವರೆಲ್ಲ ಯಾವ ಪಂಥಕ್ಕೂ ಸೇರಿಲ್ಲ! ಆದರೆ ಓದುಗರನ್ನು ಇವರೆಲ್ಲ ತಲುಪಿಬಿಟ್ಟಿದ್ದಾರೆ. ಸದ್ಯ ನಮ್ಮೆದುರಿನ ಸಾಹಿತ್ಯ ಹೇಗಿದೆ ಎಂಬುದನ್ನು ಪ್ರಾಮಾಣಿಕವಾಗಿ ನೋಡದೇ ಪಂಥ, ಸಿದ್ಧಾಂತಗಳ ಒಣ ಹಠದಲ್ಲಿ ಸಾಹಿತ್ಯ ವಿಮರ್ಶೆ, ಪ್ರಚಾರ ನಡೆದರೆ ನಷ್ಟ ಸಾಹಿತ್ಯ ಕ್ಷೇತ್ರಕ್ಕೇ ತಾನೇ? ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಕನ್ನಡ ಭಾಷೆ ಮತ್ತು ಸಾಹಿತ್ಯ ಸದ್ಯ ಕಾಣುತ್ತಿರುವ ನಿರಾಶಾದಾಯಕ ಪರಿಸ್ಥಿತಿಯನ್ನು ಅನೇಕ ಅಂಕಣಗಳಲ್ಲೇ ಹೇಳಬೇಕು.
ಚೆನ್ನಾಗಿದೆ. ಈಗಿನ ಮಾಧ್ಯಮದವರ (ಮತ್ತೆ ವಿಮರ್ಶಕರ) ಕುಂದುಗಳನ್ನೂ , ಪಂಥಗಳ ಗೊಡವಿಗೆ ಬಿದ್ದು ಸಾಹಿತ್ಯ ಹೇಗೆ ಸೊರಗುವುದೆಂಬುದನ್ನು ಸರಿಯಾಗಿ ತಿಳಿಸಿದ್ದೀರಿ. ಈಗ ಎಷ್ಟೋ ಹೊಸಬರು ಬರೆಯತೊಡಗಿರುವುದರಿಂದ ಪರಿಸ್ಥಿತಿ ಬದಲಾಗಬಹುದೆಂದು ಒಂದು ದೂರದ ಆಸೆಯಿದೆ!
ಪ್ರಸಕ್ತ ವಿಷಯ ಹಾಗು ಸಶಕ್ತ ಅಭಿವ್ಯಕ್ತಿ.ಸಾಹಿತ್ಯದ ಮೂಲಕ ಪಂಥ,ವಿಚಾರಗಳ ಪ್ರಸಾರ ನಡೆದುಕೊಂಡು ಬಂದ ಪದ್ಧತಿ ಆದರೆ ಅದೇ ಸಾಹಿತ್ಯವಲ್ಲ . ದುರಾದೃಷ್ಟವಶಾತ್ ಸಾಹಿತ್ಯದಲ್ಲಿಯೂ ಈ ರೀತಿಯ narrow mindedness ಗೆ ಸಹಾನುಭೂತಿ ತೋರಿಸುವರ ದೊಡ್ಡ ಪಡೆಯೇ ಇದೆ.
ಉತ್ತಮ ಬರಹ..ಧನ್ಯವಾದಗಳು ಶ್ರೀಪಾದವರಿಗೆ..
ನಾನು ಓದಿಕೊಂಡಂತೆ, ತಿಳಿದುಕೊಂಡಂತೆ, ಮೊದ ಮೊದಲು ಜಾತಿ/ಪಂಥಕ್ಕಿಂತ ‘ಸಾಹಿತಿ ಗುಂಪು’ಗಳಿದ್ದವು..ಉದಾ: ಧಾರವಾಡದಲ್ಲಿ ಬೇಂದ್ರೆ ಗುಂಪು, ಶಂಭಾ ಜೋಶಿಯವರ ಗುಂಪು. ಶಿವರಾಂ ಕಾರಂತ ಇವ್ಯಾವ ಗುಂಪಿಗೆ ಸೇರಲಿಲ್ಲ..ಗುಂಪನ್ನು ಕಟ್ಟಲೂ ಇಲ್ಲ. ಅವರಿಗೆ ತಮ್ಮದೇ ಆದ ಬದ್ಧತೆಯಿತ್ತು. ತನಗೆ ಸರಿ ಅನಿಸಿದ್ದನ್ನು ನಿಷ್ಠುರವಾಗಿ, ಮುಲಾಜಿಲ್ಲದೇ ಹೇಳಿದರು. ಅಕಾಡೆಮಿ ಪಟ್ಟ, ಅವಾರ್ಡುಗಳಿಗಾಗಿ ನಾಜೂಕಯ್ಯನ ವೇಷ ತೊಡಲಿಲ್ಲ, ರಾಜಕೀಯ ಮಾಡಲಿಲ್ಲ. ಸಮಾಜದ ಬಹುತೇಕ ಎಲ್ಲ ಸಮಸ್ಯೆಗಳಿಗೂ ಸ್ಪಂದಿಸಿದವರು ಕಾರಂತರು. ಕುವೆಂಪುರವರ ಪುತ್ರ ಪೂಚಂತೇ ಯವರಿಗೂ ಆದರ್ಶವೆನಿಸಿದವರು ಕಾರಂತರು..ಅದರೆ ಈಗ ನಮ್ಮ ಕೆಲವು ಪ್ರಗತಿಪರಾವಲಂಬಿಗಳಿಗೆ ಗೋಷ್ಠಿ/ಲೇಖನಗಳಲ್ಲಿ ಕಾರಂತರು ನೆನಪಿಗೆ ಬರುವುದೇ ಇಲ್ಲ!.
ಆಮೇಲಿನ ಹಂತ ನವ್ಯ/ಬಂಡಾಯಗಳದ್ದು. ಲಕ್ಷ್ಮಿನಾರಾಯಣ ಭಟ್ಟ, ನಿಸಾರ ಅಹಮ್ಮದರನ್ನು ಕ್ಯಾಸೆಟ್ ಕವಿಗಳೆಂದು, ಕೆ.ಎಸ್.ನ ರನ್ನು ಪುಷ್ಪಕವಿಯೆಂದು ಟ್ಯಾಗ್ ಮಾಡಲಾಯಿತು. ಬಿ.ಸಿ ರಾಮಚಂದ್ರಶರ್ಮರಿಗೆ ಕಾವ್ಯ ಎನ್ನುವುದು ಹಾಡುವಂತಿರಬಾರದು ಎನ್ನುವ ನಿಲುವಿತ್ತು ಎಂದು ಓದಿದ್ದೇನೆ. ಜಾತಿ/ಪಂಥ ದ ವ್ಯಾಧಿ ಗರಿಷ್ಟ ಮಟ್ಟ ತಲುಪಿದ್ದು.. ಒಂದು ಟ್ಯಾಬ್ಲಾಯಿಡ್ ಇಟ್ಟುಕೊಂಡು ತನಗೆ ಬೇಡವಾದವರನ್ನು ಹಣಿಯುತ್ತ (ಇದು ೧೦೦ಕ್ಕೆ ೯೦ ಸಂದರ್ಭಗಳಲ್ಲಿ ಜಾತಿ/ಪಂಥದ ಆಧಾರದ ಮೇಲೆಯೆ), ತನ್ನ ವಂಧಿಮಾಗಧರ ಗುಂಪು ಕಟ್ಟಿ, ಬೆಳೆಸಿ ಸಮಾಜಕ್ಕೆ ಜಾಣ-ಜಾಣೆಯರನ್ನು ಕೊಟ್ಟು ಹೋದೆ ಎಂದುಕೊಂಡ ಸಾಹೇಬರಿಂದಾಗಿ. ಅವರು ಸೃಷ್ಟಿಸಿಹೋದ ಸಂತಾನ ಮತ್ತು ಆ ಸಂತಾನ ಸೈಷ್ಟಿಸುತ್ತಿರುವ ಪೀಳಿಗೆ ಇವತ್ತಿಗೂ ಕನ್ನಡ ಸಾಹಿತ್ಯವನ್ನು ಜಾತಿ/ಪಂಥದ ಕನ್ನಡಕದಲ್ಲಿಯೇ ನೋಡಿಯೇ ತೀರ್ಮಾನ ಕೊಡುವಂತದ್ದು…ಇವಕ್ಕೆ ಇವರ ನಿರೀಕ್ಷೆಯ ತವಕ, ತಲ್ಲಣಗಳಿದ್ದರೆ ಮಾತ್ರ ಸಾಹಿತ್ಯ. ಈಗ ಈ ಗುಂಪು/ಪಂಥ/ಜಾತಿ/ಪ್ರಾದೇಶಿಕ ವ್ಯಾಧಿಗಳ ಬಾಲ ಆ ಮಟ್ಟದಲ್ಲಿ ಬಿಚ್ಚದಿರಲು ಸ್ವತಂತ್ರ ಮಾಧ್ಯಮವಾದ ಅಂತರಜಾಲ ಕೂಡ ಬಹುಮಟ್ಟಿಗೆ ಕಾರಣವಾಗಿದೆ. ಇವರು ಬಾಲ ಬಿಚ್ಚಿದ ಕ್ಷಣಕ್ಕೆ ಮೂತಿಗೆ ಇಕ್ಕಲು ‘ನಿರ್ಲಿಪ್ತ’ರಿಗೆ ಈಗ ಅವಕಾಶವಿದೆ. ಮೊದಲಿನಂತೆ ಸುಳ್ಳಿನ ಪುಂಗಿ ಊದುವುದು ಅಷ್ಟು ಸುಲಭವಲ್ಲ ಈಗ.
ಬರುವ ವರುಷಗಳಲ್ಲಾದರೂ ಕನ್ನಡ ಸಾಹಿತ್ಯದಲ್ಲಿ ಈ ಜಾತಿ/ಪಂಥದ ವ್ಯಾಧಿ ಕಡಿಮೆಯಾಗುತ್ತದೆ ಎಂಬ ನಿರೀಕ್ಷೆ :).
ವಿಜಯ ಅವರೇ ನೀವು ಹೇಳುವುದು ನಿಜ. ಇಂಥ ಗುಂಪುಗಳ ಬಗ್ಗೆ ಮುಂದೆ ಹೇಳುವೆ. ಹೆಸರು ಮಾಡಿದ ಲೇಖಕರು ಹೊಸಬರೊಂದಿಗೆ ನಡೆದುಕೊಳ್ಳುವ ರೀತಿಯೇ ಬೇರೆ. ಅವರು ವಲಯ ಕಟ್ಟಿಕೊಳ್ಳುವ ವಿಧಾನ ಹೊಸತಲೆಮಾರಿಗೆ ತಿಳಿಯದ್ದೇನಲ್ಲ.
-ಶ್ರೀಪಾದ ಭಟ್
>>> ಹೆಸರು ಮಾಡಿದ ಲೇಖಕರು ಹೊಸಬರೊಂದಿಗೆ ನಡೆದುಕೊಳ್ಳುವ ರೀತಿಯೇ ಬೇರೆ.
ಇದು job security ಕಾರಣಕ್ಕೆ ಇರಬಹುದೇ 😉 ?
ನೀಲಾಂಜನ ಅವರೇ, ಅದು ಜಾಬ್ ಸೆಕ್ಯೂರಿಟಿ ಪ್ರಶ್ನೆ ಅಲ್ಲ, ಇನ್ ಸೆಕ್ಯೂರಿಟಿ ಪ್ರಶ್ನೆ!
-ಶ್ರೀಪಾದ ಭಟ್
ಸಾಹಿತಿಗಳ ಬಗ್ಗೆ ವ್ಯವಸ್ಥಿತವಾಗಿ ವಿಮರ್ಶಕರು ಗುಂಪುಗಾರಿಕೆ ನಡೆಸುತ್ತಾರೆ,ನಡೆಸುತ್ತಿದ್ದಾರೆ ಎಂಬುದು ಅರ್ಧ ಸತ್ಯ. ಅಭಿಪ್ರಾಯ ಭೇದಗಳನ್ನೇ ದೊಡ್ಡದಾಗಿ ಬಿಂಬಿಸುತ್ತಾ ಹೋಗುವುದು ಸರಿಯಲ್ಲ. ತಾವು ಕೆ ಎಸ್ ನರಸಿಂಹಸ್ವಾಮಿಯವರ ಪ್ರಸ್ತಾಪ ಮಾಡಿರುವುದರಿಂದ ಒಂದೆರೆಡು ಮಾತುಗಳು – ಕೆ ಎಸ್ ನ ಅವರು ಹೊಸ ವಿಮರ್ಶೆಯಿಂದ ತಮ್ಮ ಬರವಣಿಗೆಯ ಧಾಟಿ ಬದಲಾಯಿಸಿಕೊಂಡಿದ್ದು ಸಾಹಿತ್ಯಾಸಕ್ತರಿಗೆ ಈಗಾಗಲೇ ತಿಳಿದ ವಿಷಯವಾಗಿದೆ. ಅದು ತಮ್ಮ ಬೆಳವಣಿಗೆಯೆಂದೇ ಕೆ ಎಸ್ ನ ಭಾವಿಸಿದ್ದರು. ‘ಮೈಸೂರು ಮಲ್ಲಿಗೆ’ ತನ್ನ ಗೇಯತೆ(=ಹಾಡುವಿಕೆ)ಯಿಂದ ಈಗಲೂ ಚಾಲ್ತಿಯಲ್ಲಿದೆ. ಅವರು ಯಾವಾಗಲೂ ಅದೇ ರೀತಿಯ ಕವನಗಳನ್ನು ರಚಿಸಬೇಕೆಂದು ಅಪೇಕ್ಷಿಸಿದ್ದರೆ ಅವರೊಳಗಿನ ” ಕವಿಯ” ಬೆಳವಣಿಗೆಯ ದೃಷ್ಟಿಯಿಂದ ಸರಿಯಾಗುತ್ತಿತ್ತೆ? ಕೆ ಎಸ್ ನ ಅವರನ್ನು ‘ಪುಷ್ಪ ಕವಿ’ ಎಂದು brand ಮಾಡಿದ ವಿಮರ್ಶಕರೇ ಅವರ ‘ಶಿಲಾಲತೆ’ ಮತ್ತು ‘ತೆರೆದ ಬಾಗಿಲು’ ಕವನ ಸಂಕಲನಗಳ ಬಗ್ಗೆ ಯಾವ ಪಂಥ,ಪಂಕ್ತಿ ಭೇದವಿಲ್ಲದೆ ಮುಕ್ತವಾಗಿ ಉತ್ತಮ ವಿಮರ್ಶೆ ಬರೆದಿದ್ದಾರೆ. ಸಾಹಿತಿಯ ಕೃತಿಯಲ್ಲಿನ ಕುಂದು ಕೊರತೆ ಸೂಚಿಸುವುದರಿಂದ ಅವರ ಬೆಳವಣಿಗೆಗೂ ಸಹಕಾರಿ ಆಗುತ್ತದೆ ಎಂಬುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕಿಲ್ಲ ಎಂದು ಭಾವಿಸಿದ್ದೇನೆ.
@ಶ್ರೀರಂಗ ಸರ್..
[ಕೆ ಎಸ್ ನ ಅವರು ಹೊಸ ವಿಮರ್ಶೆಯಿಂದ ತಮ್ಮ ಬರವಣಿಗೆಯ ಧಾಟಿ ಬದಲಾಯಿಸಿಕೊಂಡಿದ್ದು ಸಾಹಿತ್ಯಾಸಕ್ತರಿಗೆ ಈಗಾಗಲೇ ತಿಳಿದ ವಿಷಯವಾಗಿದೆ. ]
ಕವಿ/ಕತೆಗಾರ ವಿಮರ್ಶಕನನ್ನು ಗಮನದಲ್ಲಿಟ್ಟುಕೊಂಡು ಕಥೆ/ಕವನ ಹೆಣೆಯುತ್ತಾನೆಯೆ ? ಹೆಣೆಯಬೇಕೆ?
[ಅದು ತಮ್ಮ ಬೆಳವಣಿಗೆಯೆಂದೇ ಕೆ ಎಸ್ ನ ಭಾವಿಸಿದ್ದರು]
ಯಾವ ರೀತಿಯ ಬೆಳೆವಣಿಗೆ? ವಿಮರ್ಶಕರನ್ನು ಮೆಚ್ಚಿಸುವಲ್ಲಿ ಸಾಧಿಸಿದ ಬೆಳವಣಿಗೆಯೆ?
[ಮೈಸೂರು ಮಲ್ಲಿಗೆ’ ತನ್ನ ಗೇಯತೆ(=ಹಾಡುವಿಕೆ)ಯಿಂದ ಈಗಲೂ ಚಾಲ್ತಿಯಲ್ಲಿದೆ. ಅವರು ಯಾವಾಗಲೂ ಅದೇ ರೀತಿಯ ಕವನಗಳನ್ನು ರಚಿಸಬೇಕೆಂದು ಅಪೇಕ್ಷಿಸಿದ್ದರೆ ಅವರೊಳಗಿನ ” ಕವಿಯ” ಬೆಳವಣಿಗೆಯ ದೃಷ್ಟಿಯಿಂದ ಸರಿಯಾಗುತ್ತಿತ್ತೆ?]
ಕೆ.ಎಸ್.ನ ರೊಳಗೆ ಸತ್ವ ಇದ್ದಿದ್ದರಿಂದಲೇ ಒಳ್ಳೆಯ ಕವಿತೆಗಳು ಬಂದವು ತಾನೆ?. ಅವರೊಳಗಿನ ‘ಕವಿ” ಸರಿಯಾದ ಸಮಯದಲ್ಲಿ ಹೊರಬಂದೇ ಬರುತ್ತಿದ್ದ. ವಿಮರ್ಶಕರ ಒತ್ತಾಯದ ಹೇರಿಗೆ ಏಕೆ?.
ಕೊನೆಗೂ ಸಾಹಿತ್ಯ ಇರುವುದು ಓದುಗರಿಗಾಗಿ. ವಿಮರ್ಶಕನೇ ಚಾಲಕನ ಸ್ಥಾನದಲ್ಲಿ ಕುಳಿತು ಕತೆಗಾರ/ಕವಿಯನ್ನು ತನಗೆ ಬೇಕಾದ ದಾರಿಯಲ್ಲಿ ಕರೆದೊಯ್ದಬೇಕೆ? ಉದಾಹರಣೆಗೆ ಸ್ವಲ್ಪ ದಿನದ ಹಿಂದೆ ಒಬ್ಬ ಸಂಪಾದಕ ಎಂದುಕೊಳ್ಳುವವರು ಬೋಳುವಾರರ ಹೊಸ ಕಾದಂಬರಿಯಲ್ಲಿ ದಲಿತ ಪಾತ್ರಗಳಿಲ್ಲ ಎಂದು ಕ್ಯಾತೆ ತೆಗೆದಿದ್ದರು..ಹೀಗೆ ಈ ತರಹದ ಎಲ್ಲ ‘ವಿಮರ್ಶಕ’ ರಿಗೆ ತಲೆಯಾಡಿಸುತ್ತ ಹೋದರೆ ನಾಳೆ ಕಾದಂಬರಿ ಬರೆಯುವವರು ಯಾವ ಪಾತ್ರಗಳಿರಬೇಕು, ಪಾತ್ರಗಳ ಮೀಸಲಾತಿಯನ್ನು ಹೇಗೆ ಅನುಸರಿಸಬೇಕು ಎಂದು ಬರೆಯುವ ಮೊದಲು ಕೇಳಿಕೊಳ್ಳಬೇಕಾಗುತ್ತದೆ.
ಪ್ರಿಯರಾದ ವಿಜಯ್ ಪೈ ಅವರಿಗೆ—ಸಾಹಿತಿ/ಕವಿ ಸಮಾಜದ ಅಂಗವೇ ಆದ್ದರಿಂದ ಸಹಜವಾಗಿ ಕೆಲವೊಂದು ಸಾಹಿತ್ಯಿಕ ಪ್ರೇರಣೆ/ಪ್ರಭಾವಗಳು ಪ್ರಜ್ಞಾಪೂರಕವಾಗೋ ಅಥವಾ ಅಪ್ರಜ್ಞಾಪೂರಕವಾಗೋ ಆತನ ಮೇಲೆ ಆಗುತ್ತಿರುತ್ತದೆ. ಇವುಗಳಿಂದ ಪೂರ್ತಿ ಬಿಡಿಸಿಕೊಂಡು ನಿರ್ವಾತದಲ್ಲಿ ಕೂತು ಆತ ಬರೆಯುತ್ತಾ ಇರಲಾರ. ಒಂದು ವೇಳೆ ಆತ ತನ್ನನ್ನು ಪೂರ್ತಿ insulate ಮಾಡಿಕೊಂಡು ಬರೆಯುತ್ತಾ ಹೋದರೆ ಆತನ ಬೆಳವಣಿಗೆ ಅಷ್ಟರಮಟ್ಟಿಗೆ ಕುಂಠಿತವಾದಂತೆ. ಇದನ್ನು ಸಾಹಿತಿ ಮೇಲೋ ಅಥವಾ ವಿಮರ್ಶಕ ಮೇಲೋ ಎಂಬ ಸ್ಪರ್ಧೆಯಂತೆ ಕಂಡಾಗ ಕೆಲವೊಂದು ಉತ್ತಮ ಅಂಶಗಳು ಮರೆಯಾಗುತ್ತವೆ. ಕಾಲಾನುಕಾಲಕ್ಕೆ ಸಾಹಿತ್ಯ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಪೂರ್ತಿ ಅರಿವು ಸಾಹಿತಿ/ಕವಿಗಳಿಗೆ ಇರಬೇಕಾಗುತ್ತದೆ. ಕೊನೆಯ ನಿರ್ಧಾರ ಅವರವರಿಗೆ ಸಂಬಂಧಿಸಿದ್ದೇ. ಇದರಲ್ಲಿ ಅನುಮಾನವಿಲ್ಲ. ವಿಮರ್ಶಕ ಸೂಚಿಸಿದಂತೆ ತನ್ನ ಕೃತಿಯಲ್ಲಿ “ಮೀಸಲಾತಿ”ಯನ್ನು ಜಾರಿಗೆ ತರಬೇಕಾಗಿಲ್ಲ. ಇನ್ನು ತಾವು ಉದಾಹರಿಸಿದ ಬೊಳುವಾರು ಅವರ’ ಸ್ವಾತಂತ್ರ್ಯದ ಓಟ’ ಕುರಿತ ”ಆ ಸಂಪಾದಕರ’ ವಿಮರ್ಶೆ ಓದಿದ್ದೇನೆ. ಅದು ವಿಮರ್ಶೆಯ ಹೆಸರಿನಲ್ಲಿ ಮಾಡಿದ ಅವಿವೇಕದ ಪರಮಾವಧಿ. ಬುದ್ಧಿಯ ಹಿಂದೆ ವಾದಗಳು ಬರಬೇಕೇ ಹೊರತು ವಾದದ ಹಿಂದೆ ಬುದ್ಧಿ ಅಲೆಯುತ್ತಾ ಹೋದರೆ ಆ ರೀತಿಯ ವಿಮರ್ಶೆಗಳು ಬರುತ್ತವೆ.
ಹೌದು..ಸಾಹಿತಿ ಸಮಾಜದ ಅಂಗ. ಸಮಾಜದ ಆಗು-ಹೋಗುಗಳು ಅವನ ಮೇಲೆ ಪರಿಣಾಮ ಬೀರುತ್ತವೆ. ಆತ ನಿರ್ವಾತದಲ್ಲಿ ಕೂತು ಬರೆಯಲಾರ ಎಂಬುದನ್ನು ಒಪ್ಪುತ್ತೇನೆ. ಅಂತೆಯೇ ವಿಮರ್ಶಕ ಅನ್ನಿಸಿಕೊಳ್ಳುವವನು ಕೂಡ ಸಮಾಜದ ಅಭಿರುಚಿಯನ್ನು, ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆತ ಸಾಹಿತಿ ಮತ್ತು ಓದುಗನ ನಡುವಿನ ಸೇತುವೆಯಾಗಬೇಕು. ನಿರ್ಲಿಪ್ತನಾಗಿರಬೇಕು. ತನ್ನ ಅಜೆಂಡಗಳಿಗನುಗುಣವಾಗಿ, ಮೂಗಿನ ನೇರಕ್ಕೆ ವಿಮರ್ಶೆ ಬರೆದು, ತೀರ್ಮಾನ ಕೊಟ್ಟು, ತಡೆಗೋಡೆಯಾಗಬಾರದು ಎಂಬುದು ನನ್ನ ಅನಿಸಿಕೆ.
ಚೆನ್ನಾಗಿ ಹೇಳಿದ್ದೀರಿ ವಿಜಯ್ ಪೈ ಅವರೇ, ವಿಮರ್ಶಕರ ಧೋರಣೆಗೆ ಉತ್ತರವಾಗಿ ಕೆ ಎಸ್ ನ ಅವರು ತೆರೆದ ಬಾಗಿಲು ಕವನ ಸಂಕಲನ ಹೊರತಂದರು. ನಾನು ಕೂಡ ನವ್ಯ ಕಾವ್ಯ ಬರೆಯಬಲ್ಲೆ ಎಂಬುದನ್ನು ತೋರಿಸಿದರು. ಶ್ರೀರಂಗ ಅವರು ಈ ಬದಲಾವಣೆಯನ್ನೇ ಬೆಳವಣಿಗೆ ಎನ್ನುತ್ತಿದ್ದಾರೋ ಎಂಬ ಶಂಕೆ ನನಗೆ.
-ಶ್ರೀ
ಹೌದು ಶ್ರೀಪಾದವರೆ.. ಕೆ.ಎಸ್.ನ ರಲ್ಲಿ ಸತ್ವದ ಕೊರತೆ ಇರಲಿಲ್ಲ.. ಅವರು ತೆರೆದ ಬಾಗಿಲು ಬರೆದದ್ದು ಬದಲಾವಣೆ ಎಂದಾಗಬಹುದು…ಬೆಳವಣಿಗೆ ಎಂದಾಗಬೇಕಾದರೆ ನವ್ಯ ಶ್ರೇಷ್ಠ ಎಂಬ ನೆಲೆಯಿಂದ ನಾವು ನೋಡಬೇಕು.
“ನವ್ಯ ಶ್ರೇಷ್ಠ”
ಶ್ರೇಷ್ಠತೆಯ ವ್ಯಸನದಿಂದ ಹೊರಬರಲು ನವ್ಯದ ವೈದಿಕರಿಗೆ ಸಾಧ್ಯವಾಗಲಿಲ್ಲ. ಆದುದರಿಂದಲೇ ಬಂಡಾಯ ಸಾಹಿತಿ ಪ್ರವರ್ಧಮಾನಕ್ಕೆ ಬಂದು ವೈದಿಕತೆಗೆ ಸವಾಲು ಒಡ್ಡಿತು. ವೈದಿಕರಿಗೆ ನವೋದಯದಿಂದ ನವ್ಯಕ್ಕೆ ಹೋಗುವುದು ಕಷ್ಟವಾಗಲಿಲ್ಲ, ಆದರೆ ಬಂಡಾಯಕ್ಕೆ ಹೋಗದಂತೆ ವೈದಿಕ ಹಿನ್ನೆಲೆಯು ತಡೆ ಒಡ್ಡಿತು.
ಶೆಟ್ಕರ್ ಅವರಿಗೆ– ನವ್ಯದ ಮಂಚೂಣಿಯಲ್ಲಿ ಲಂಕೇಶ್,ಜಿ ಎಚ್ ನಾಯಕ್, ಡಿ ಆರ್ ನಾಗರಾಜ್ , ಶೂದ್ರ ಶ್ರೀನಿವಾಸ್, ಪೂಚಂತೇ, ಗಿರಡ್ಡಿ ಗೋವಿಂದರಾಜ್,ಎಚ್ ಎಂ ಚನ್ನಯ್ಯ ಮುಂತಾದವರೂ ಇದ್ದರು. ನಂತರದಲ್ಲಿ ಗೋಪಾಲಕೃಷ್ಣ ಅಡಿಗರು ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಕ್ಕೆ(ಧರ್ಮಸ್ಥಳದಲ್ಲಿ ನಡೆದಿದ್ದು) ವಿರೋಧ ವ್ಯಕ್ತಪಡಿಸಿ ಅವರಿಂದ ದೂರ ಸಿಡಿದು ಬೆಂಗಳೂರಿನಲ್ಲಿ ಪರ್ಯಾಯ ಸಮ್ಮೇಳನ ನಡೆಸಿದರು. “ಖಡ್ಗವಾಗಲಿ ಕಾವ್ಯ” ಎಂಬ ಅಜೆಂಡಾದೊಂದಿಗೆ ಹುಟ್ಟಿದ ಬಂಡಾಯ ಸಾಹಿತ್ಯದಲ್ಲಿ ಈಗ ಖಡ್ಗ ಮಾತ್ರ ಉಳಿದಿದೆ. ಕಾವ್ಯ ಗ್ರಂಥಿಗೆ ಅಂಗಡಿ ಸೇರಿದೆ. ಎರಡು ವರ್ಷಗಳ ಹಿಂದೆ ದಲಿತ ಕವಿ ಎಂದೇ ಹೆಸರಾದ ಸಿದ್ದಲಿಂಗಯ್ಯನವರು ಇನ್ನು ಮುಂದೆ ನಾನು ಹಿಂದಿನಂತೆ “ಇಕ್ರಲಾ ವದೀರ್ಲಾ …”ಮಾದರಿಯ ಕಾವ್ಯ ಬರೆಯಲಾರೆ ಎಂದಿದ್ದಕ್ಕೆ ದಲಿತ ಮತ್ತು ಬಂಡಾಯದ ಅಭಿಮಾನಿಗಳು ಅವರ ವಿರುದ್ಧ ಅಸಮಾಧಾನ ಹೊಂದಿ ಘೋಷಣೆ ಕೂಗಿ ,ಧರಣಿ ನಡೆಸಿದರು. ಪ್ರಿಯ ಶೆಟ್ಕರ್ ಅವರೇ ಅನಿಷ್ಟಕ್ಕೆಲ್ಲಾ ಶನೀಶ್ವರ ಕಾರಣ ಎಂಬಂತೆ ಇಡೀ ಪ್ರಪಂಚದಲ್ಲಿನ ಕೆಟ್ಟದ್ದಕ್ಕೆಲ್ಲಾ ವೈದಿಕರನ್ನು ಹೀಗೆಳೆದರೆ ಏನೂ ಪ್ರಯೋಜನವಿಲ್ಲ. ಶ್ರೀಪಾದ್ ಭಟ್ ಅವರ ಲೇಖನಕ್ಕೆ ಮತ್ತು ಆ ನಂತರದ ಪ್ರತಿಕ್ರಿಯೆಗಳಿಗೆ ಸಕಾರತ್ಮಕವಾಗಿ ಸ್ಪಂದಿಸಿ ಚರ್ಚೆ ನಡೆಸಿ.
ಬಂಡಾಯ ಸಾಹಿತ್ಯ ದುಡಿಯುವ, ಹೆಸರುಗಳಿಸುವ ಒಳ್ಳೆಯ ಮಾರ್ಗ ಹೌದು.
[ ಆದರೆ ಬಂಡಾಯಕ್ಕೆ ಹೋಗದಂತೆ ವೈದಿಕ ಹಿನ್ನೆಲೆಯು ತಡೆ ಒಡ್ಡಿತು.]
ಈ ಅಧಿಕಪ್ರಸಂಗತನವನ್ನೇ ಇಲ್ಲಿ ಚರ್ಚೆ ಮಾಡುತ್ತಿದ್ದದ್ದು!!. ಇದು ಒಂಥರಾ ಶೆಟ್ಕರ್ ಸುನ್ನತಿ ಮಾಡಿಸಿಕೊಳ್ಳಲು ಅವರ ಲಿಂಗಾಯಿತ ಹಿನ್ನಲೆ ತಡೆ ಒಡ್ಡಿತು ಅಂದ ಹಾಗೆ!
ಶ್ರೀಪಾದ್ ಭಟ್ ಅವರಿಗೆ ->>>>ನಾನೂ ಕೂಡ ನವ್ಯಕಾವ್ಯ ಬರೆಯಬಲ್ಲೆ ಎಂದು (ಕೆ ಎಸ್ ನ )ತೋರಿಸಿದರು. ಈ ಬದಲಾವಣೆಯನ್ನೇ ಬೆಳವಣಿಗೆ ಎಂದು …….. >>>> ಮುಖ್ಯವಾದ ಮಾತೆಂದರೆ ಕೆ ಎಸ್ ನ ಅವರು ನವ್ಯ ಕವಿಗಳು ಮತ್ತು ವಿಮರ್ಶಕರ ಜತೆ ಸ್ಪರ್ಧೆಗೆ ಇಳಿದು ನವ್ಯ ಕಾವ್ಯ ರಚಿಸಿದರು ಎಂಬುದು ಸರಿಯಲ್ಲ. “೧೯೬೦ರ ಈಚೆಗೆ ಸುಮಾರು ೧೬ ವರ್ಷಗಳ ಕಾಲ ನನ್ನ ಹೊಸ ಸಂಗ್ರಹ ಒಂದೂ ಹೊರಬರಲಿಲ್ಲ. ಹೆಚ್ಚು ಬರೆದಿರಲಿಲ್ಲ. ಅದು ಚಿಂತನೆಯ ಕಾಲ. ಕವನದಿಂದ ಕವನಕ್ಕೆ,ಸಂಗ್ರಹದಿಂದ ಸಂಗ್ರಹಕ್ಕೆ ನನ್ನ ಕವಿತೆ ಹೇಗೆ ಸಾಗುತ್ತಿದೆ ಎಂಬುದನ್ನು ನಾನು ಶ್ರದ್ಧೆಯಿಂದ ಸಮೀಕ್ಷೆ ಮಾಡಿದೆ. ಭಾಷೆಯ ಬಳಕೆಯ ಬಗ್ಗೆ,ಕಾವ್ಯಾಲಂಕಾರಗಳ ಬಗ್ಗೆ ಇನ್ನಷ್ಟು ಪರ್ಯಾಲೋಚನೆ ಮಾಡಿದೆ …….. ಅಂತೂ ಇಂತೂ ೧೯೭೬ರ ಡಿಸೆಂಬರ್ ಹೊತ್ತಿಗೆ ನನ್ನ ‘ತೆರೆದಬಾಗಿಲು ‘ಕವನ ಸಂಗ್ರಹ ತನ್ನ ಹದಿನಾರು ಕವನಗಳೊಂದಿಗೆ ಸಿದ್ಧವಾಯಿತು …….. “( ನೋಡಿ ಕೆ ಎಸ್ ನ ಮುನ್ನುಡಿ ‘ಮಲ್ಲಿಗೆಯ ಮಾಲೆ’ ಸಮಗ್ರ ಕವನ ಸಂಕಲನ ಲಿಪಿ ಪ್ರಕಾಶನ ಬೆಂಗಳೂರು ೪ ೧೯೮೬) ೧೯೬೦ ರಿಂದ ೭೬ರ ತನಕದ ೧೬ ವರ್ಷಗಲ್ಲಿ ಕೆ ಎಸ್ ನ ರಚಿಸಿದ್ದು ಕೇವಲ ೧೬ ಕವನಗಳನ್ನು! ೧೯೬೦-೮೦ ನವ್ಯ ಕಾವ್ಯ ಮತ್ತು ವಿಮರ್ಶೆ ತನ್ನ ಉತ್ತುಂಗದಲ್ಲಿದ್ದ ವರ್ಷಗಳು. ನವ್ಯ ವಿಮರ್ಶೆಯ ಕೆಲವೊಂದು ಋಣಾತ್ಮಕ ಅಂಶಗಳನ್ನು ನಾನು ಮರೆತಿಲ್ಲ. ಆದರೆ ಅದರ ಧನಾತ್ಮಕ ಅಂಶಗಳು ಕೆ ಎಸ್ ನ ಸೇರಿದಂತೆ ನಮ್ಮ ಇತರ ಹಿರಿಯ ಕವಿಗಳು ಮತ್ತು ಕಥೆ,ಕಾದಂಬರಿಕಾರರ ಮೇಲೆ ಭಾಷೆಯ ಉಪಯೋಗ, ತಂತ್ರ ಇತ್ಯಾದಿಗಳ ಮೇಲೆ ತನ್ನ ಪ್ರಭಾವ ಬೀರಿದೆ. ಇದನ್ನು ಪಕ್ಕಕ್ಕೆ ಸರಿಸಲು ಆಗುವುದಿಲ್ಲ.
ಶ್ರೀರಂಗ ಅವರೇ, ಕೆ ಎಸ್ ನ ಅವರ ಕುಂಕುಮ ಭೂಮಿ ಮತ್ತು ಅಡಿಗರ ಭೂಮಿಗೀತಗಳ ಬಗೆಗಿನ ವಾದ ವಿವಾದ ನಡೆದಾಗ ಕೆ ಎಸ್ ನ ಅವರು ಕುಂಕುಮ ಭೂಮಿ ನವ್ಯದಿಂದ ಪ್ರೇರಿತವಲ್ಲ, ಯಾಕೆಂದರೆ ಅದು ಭೂಮಿಗೀತಕ್ಕಿಂತ ಮುಂಚೆ ಬರೆದದ್ದು ಎಂದಿದ್ದರು. ಇಷ್ಟು ಸಾಕು. ಯಾರ ಮೇಲೆ ಯಾವುದು ಎಷ್ಟು ಪ್ರಭಾವ ಬೀರಿದೆ ಎನ್ನಲು.
-ಶ್ರೀಪಾದ ಭಟ್
ಹೌದು ಶ್ರೀರಂಗ ಅವರೇ, ವಿಮರ್ಶಕರಿಂದ ಕನ್ನಡಕ್ಕೆ ಉಪಕಾರವಾಗಿಲ್ಲ ಎಂದು ಹೇಳುತ್ತಿಲ್ಲ. ಆದರೆ ಅವರು ವಿಮರ್ಶೆಗೆ ಕೃತಿಯನ್ನು ಎತ್ತಿಕೊಳ್ಳುವ ಮುಂಚಿನ ಲೆಕ್ಕಾಚಾರದ, ನಿರ್ಧಾರಗಳ ಸುತ್ತುಮುತ್ತದ ಒಂದು ಅವಲೋಕನ ಇದು.
-ಶ್ರೀಪಾದ ಭಟ್
Siddaramaiah Krupa Poshitha laddhi jeevigalige olleya uttara kottiddiri bhattare
You are fake Krishnappa. Why are you misusing Krishnappa Sir’s id?
[You are fake Krishnappa. Why are you misusing Krishnappa Sir’s id?]
ನಿಮಗೆ ಹೇಗೆ ಗೊತ್ತಾಯಿತು?? ಬಾವಿಯೊಳಗಿನಗಿನ ಕಪ್ಪೆಯಂತಹ ವಾದವೇಕೆ? ಊರಿಗೊಬ್ಬಳೇ ಪದ್ಮಾವತಿ ಇದ್ದ ಹಾಗೆ ನಿಲುಮೆಗೊಂದೇ ಕೃಷ್ಣಪ್ಪ ನಾ? ತಮ್ಮ ಗುರುಗಳು ತಾವು ಬಳಸುತ್ತಿದ್ದ ವೈದಿಕ, ಪುರಾಣದ ಹೆಸರನ್ನು ಬಿಟ್ಟು ‘ಆ.ಚೆನ್ನಬಸಪ್ಪ’ ಹೆಸರಿನಲ್ಲಿ ಬರೆದರೆ ಒಳ್ಳಯದು. ಉಳಿದವರು ಅದನ್ನು ಬಳಸಲಿಕ್ಕಿಲ್ಲ :).
ವಿಜಯ್ ಪೈ ಅವರೇ,
‘ಆ.ಚೆನ್ನಬಸಪ್ಪ’ನವರ ವಿಷಯ ಸ್ವಲ್ಪ ಬಿಡಿಸಿ ಹೇಳಿದರೆ ನಮಗೂ ಅರ್ಥವಾಗುತ್ತೆ. 😉
ಇವತ್ತು ಕನ್ನಡ ಸಾಹಿತ್ಯ ವಲಯ ಜಾತಿ ಗುಂಪುಗಳಾಗಿ ಒಡೆದುಹೋಗಿದೆ. ರಾಜ್ಯದ ಚುನಾವಣೆಯ ಸಂದರ್ಭದಲ್ಲಿ ಒಂದಾದ ಕಾಂಗ್ರೆಸ್ ಸಾಹಿತಿಗಳು ಒಂದು ರೀತಿ ಸಾಹಿತ್ಯ ವಲಯವನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ ಬೆಂಬಲಿಸಿದ್ದರಿಂದ ಈ ಗುಂಪಿನ ಮೂರು ಜನ ಒಳ್ಳೆ ಸರ್ಕಾರೀ ಸ್ಥಾನಗಳನ್ನೂ ಪಡೆದು ದರ್ಬಾರು ನಡೆಸುತ್ತಿದ್ದಾರೆ . ಒಂದು ಜಾತಿಯ ಬೆಂಬಲ ಇದ್ದರೆ ಯಾವ ಸರ್ಕಾರಿ ಗಂಜಿ ಕೇಂದ್ರ ಬೇಕಾದರೂ ಸಂಪಾದಿಸಬಹುದು ಅನ್ನುವಂತಾಗಿದೆ. ನೈಜ ಪ್ರತಿಭೆ ಮೂಲೆಗುಂಪಾಗಿದೆ.