ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 1, 2011

2

ಕಥೆಯಾದಳು ಹುಡುಗಿ!

‍ನಿಲುಮೆ ಮೂಲಕ

– ಚಿತ್ರ ಸಂತೋಷ್

ವೇಶ್ಯಾವಾಟಿಕೆ ಎನ್ನುವುದು ಗಂಡಸು ಸೃಷ್ಟಿಸುವ ಸಮಸ್ಯೆ ಎಂದವನು ಚಾಣಕ್ಯ. ಆದರೆ, ನನಗನಿಸಿದ ಮಟ್ಟಿಗೆ ಇದು ಸಮಾಜವೇ ಸೃಷ್ಟಿಸುವ ಸಮಸ್ಯೆ. ಉತ್ತರ ಕರ್ನಾಟಕದ ಕೆಲಭಾಗಳಲ್ಲಿ ಈಗಲೂ ಹೆಣ್ಣನ್ನು ವೇಶ್ಯಾವಾಟಿಕೆಗೆ ತಳ್ಳುವ ಕೆಟ್ಟಪದ್ಧತಿ ಚಾಲ್ತಿಯಲ್ಲಿದೆ. ಇಲ್ಲಿ ಯಾವ ಕಾನೂನುಗಳೂ ಕೆಲಸಮಾಡುತ್ತಿಲ್ಲ.

ನನಗೆ ೨೨ ವರ್ಷ. ನಾವು ಐವರು ಹೆಣ್ಣುಮಕ್ಳು. ಮನೆಯಲ್ಲಿ ಬಡತನ. ನಮ್ಮ ಮದುವೆ ಕುರಿತು ಯೋಚನೆ ಮಾಡಿ ಮಾಡಿ ಅಪ್ಪಹಾಸಿಗೆ ಡಿದಿದ್ದ. ನಾನೇ ದೊಡ್ಡವಳು. ನನ್ನ ಕೊನೆಯ ತಂಗಿಯ ಹುಟ್ಟುವಾಗಲೇ ಹೆರಿಗೆಯಲ್ಲಿ ತೊಂದರೆಯಾಗಿ ಅಮ್ಮ ಸಾವನ್ನಪ್ಪಿದ್ದಳು.  ನಾನು ದೊಡ್ಡವಳಾಗಿದ್ದರಿಂದ ನನಗೆ ಸಣ್ಣ ವಯಸ್ಸಿನಲ್ಲೇ ಒಬ್ಬ ಮುದುಕನ ಜೊತೆ ಅಪ್ಪ ಮದುವೆ ಮಾಡಿದ್ದ. ಆದರೆ, ಅವನಿಗೆ ಆಗಲೇ ಮೂರು ಮಂದಿ ಪತ್ನಿಯರಿದ್ದರು. ಮರಳಿ ಮನೆಗೆ ಬಂದೆ. ಕೆಲಸ ಹುಡುಕುವುದು ಅನಿವಾರ್ಯವಾಯಿತು. ನಮ್ಮೂರಿನ ಅಂಕಲ್ ಒಬ್ರು ಕೆಲಸ ಕೊಡಿಸುತ್ತೇನೆ ಎಂದು ಆಶ್ವಾಸನೆ ನೀಡಿದ್ದರು. ಅಪ್ಪನಿಗೂ ಹೇಳದೆ ಅವನನ್ನು ನಂಬಿ ಮುಂಬೈಗೆ ತೆರಳಿದೆ.

ನನಗಾಗ ಸಿಟಿ ಹೊಸತು. ನಮ್ಮೂರ ಹಳ್ಳಿ ಬಿಟ್ಟರೆ ಬೇರೆ ಪ್ರಪಂಚಾನೇ ಗೊತ್ತಿರಲಿಲ್ಲ. ಅಲ್ಲೊಂದು ಮನೆಯಲ್ಲಿ ನನ್ನ ಬಿಟ್ಟು ಅಂಕಲ್ ಊರಿಗೆ ವಾಪಾಸಾಗಿದ್ದರು. ಒಂದೆರಡು ದಿನ ಕಳೆದ ಮೇಲೆ ನನಗೆ ವಾಸ್ತವ ತಿಳಿಯಿತು. ನಾನು ಯಾರ ಮನೆಯಲ್ಲಿಯೂ ಕೆಲಸಕ್ಕೆ ಇರಲಿಲ್ಲ, ಬದಲಾಗಿ ವೇಶ್ಯೆಯಾಗಿ ನನ್ನ ದುಡಿಸಿಕೊಳ್ಳಲು ನನ್ನ ಕರೆತಂದಿದ್ದರು. ಮನೆಯಾಕೆಯ ಜೊತೆ ೩೨ ಮಂದಿ ವೇಶ್ಯೆಯರಿದ್ದರು. ಅವರು ದಿನಕ್ಕೆ ಇಂತಿಷ್ಟು ಹಣ ಸಂಪಾದಿಸಬೇಕೆಂದು ಆ ಒಡತಿ ಕಟ್ಟಪ್ಪಣೆ ಮಾಡಿದ್ದಳು.

ನಾನು ವಿರೋಧಿಸಿದೆ. ವಾಪಾಸ್ ಮನೆಗೆ ಕಳಿಸಲು ಪರಿಪರಿಯಾಗಿ ಬೇಡಿಕೊಂಡೆ. ಊಟ-ತಿಂಡಿ ಬಿಟ್ಟು ಪ್ರತಿಭಟಿಸಿದೆ. ಆದರೆ, ನಾನು ಗೆಲ್ಲಲಿಲ್ಲ. ಅವಳೇ ಗೆದ್ದಳು. ನನ್ನನ್ನು ಒಂದು ಕೋಣೆಯಲ್ಲಿ ಕೂಡಿಹಾಕಿ ಅಲ್ಲಿಗೇ ಎಲ್ಲವನ್ನೂ ಪೂರೈಕೆ ಮಾಡುತ್ತಿದ್ದಳು. ದಿನದಲ್ಲಿ ೧೦ರಿಂದ ೧೫ ಮಂದಿ ಪುರುಷರೂ ಬರುತ್ತಿದ್ದರು. ಅವರನ್ನು ಕಂಡಾಗಲೆಲ್ಲಾ ಪ್ರಾಣಿಗಳನ್ನು ಕಂಡತೆ ಅನಿಸುತ್ತಿತ್ತು. ಆದರೆ, ನಾನು ಪ್ರತಿಭಟಿಸುವಂತಿರಲಿಲ್ಲ. ತಂಗಿಯರ, ಅಪ್ಪನ, ನಮ್ಮನೆಯ ನೆನಪು ಕಾಡುತ್ತಿತ್ತು. ಸರಿಯಾದ ನಿದ್ದೆಯಿಲ್ಲ. ನಾನ್ಯಾಕೆ ಹೆಣ್ಣಾಗಿ ಹುಟ್ಟಿದೆ? ಎಂದು ಪದೇ ಪದೇ ಕೊರಗುತ್ತಿದ್ದೆ. ಹೆಣ್ಣು ಜನ್ಮದ ಕುರಿತಾಗೇ ಅಸಹ್ಯವಾಗುತ್ತಿತ್ತು. ಆ ವಿಷಜಾಲದಿಂದ ನನಗೆ ಬಿಡುಗಡೆ ಸಿಕ್ಕಿರಲಿಲ್ಲ
ತನ್ನ ಗತಕಾಲದ ಕಥೆ ಹೇಳಿ ಮುಗಿಸಿದಾಗ ಅರಿಲ್ಲದೆಯೇ ಆಕೆಯ ಕಣ್ಣಂಚಿನಲ್ಲಿ ಜಾರಿದ ಹನಿಬಿಂದುಗಳು ಪಾದವನ್ನು ತೊಳೆಯುತ್ತಿದ್ದವು. ಆ ಮಾರುಕಟ್ಟೆ ಸಂದಿನಲ್ಲಿ ಆಕಸ್ಮಿಕ ಎಂಬಂತೆ ಸಿಕ್ಕಿದ ಆಕೆಯ ಪರಿಚಯವೇ ಸಿಗದಷ್ಟು ಸೊರಗಿಹೋಗಿದ್ದಳು. ಹಿಂದೆ ನನಗೆ ಅವಳ ಪರಿಚಯವಾಗಿದ್ದು ಐದು ವರ್ಷಗಳ ಹಿಂದೆ ಯಾವುದೋ ಒಂದು ಪುಟ್ಟ ಕಾರ್ಯಕ್ರಮವೊಂದರಲ್ಲಿ. ಒಳ್ಳೆಯ ಗೆಳತಿಯಾಗಿದ್ದಳು. ಫೋನ್‌ಗಿಂತ ಪತ್ರವನ್ನೇ ಇಷ್ಟಪಡುತ್ತಿದ್ದ ಅವಳಿಂದ ಕಳೆದ ಎರಡು ವರ್ಷಗಳಿಂದ ಪತ್ರಗಳೂ ಬಂದಿರಲಿಲ್ಲ. ಪರಿಚಯ ಮಾಸುತ್ತಾ ಹೋಗಿತ್ತು. ಆದರೆ, ಎರಡು ವಾರದ ಹಿಂದೆ ಆ ತರಕಾರಿ ಮಾರುಕಟ್ಟೆ ಸಂದಿನಲ್ಲಿ ಅವಳು ಮತ್ತೆ ಎದುರಾಗಿದ್ದಳು. ಅವಳ ಕಥೆ ಕೇಳಿ ನಾನು ಮೌನವಾಗಿದ್ದೆ. ಅವಳ ಮೂಕರೋದನದ ಎದುರು ನಾನು ಅಸಹಾಯಕಳಾಗಿದ್ದೆ. ಈಕೆ ಬಾಗಲಕೋಟೆಯ ಹಳ್ಳಿಯೊಂದರ ಹುಡುಗಿ.

“ವೇಶ್ಯಾವಾಟಿಕೆ ಎನ್ನುವುದು ಗಂಡಸು ಸೃಷ್ಟಿಸುವ ಸಮಸ್ಯೆ”ಎಂದವನು ಚಾಣಕ್ಯ. ಆದರೆ, ನನಗನಿಸಿದ ಮಟ್ಟಿಗೆ ಇದು ಸಮಾಜವೇ ಸೃಷ್ಟಿಸುವ ಸಮಸ್ಯೆ. ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ಈಗಲೂ ಹೆಣ್ಣನ್ನು ವೇಶ್ಯಾವಾಟಿಕೆಗೆ ತಳ್ಳುವ ಕೆಟ್ಟಪದ್ಧತಿ ಚಾಲ್ತಿಯಲ್ಲಿದೆ. ಇಲ್ಲಿ ಯಾವ ಕಾನೂನುಗಳೂ ಕೆಲಸಮಾಡುತ್ತಿಲ್ಲ. ಇತ್ತೀಚೆಗೆ ನನ್ನ ಗೆಳೆಯರೊಬ್ಬರು ಹೇಳುತ್ತಿದ್ದರು, ಮುಂಬೈಯ ಕಾಮಾಟಿಪುರ ಅಥವಾ ಪುಣೆಯ ಬುಧವಾರಪೇಟೆಯೇ ಆಗಲಿ, ಅಥವಾ ಬೆಂಗಳೂರಿನಂಥ ಹೈಟೆಕ್ ನಗರಗಳಲ್ಲಿ ಅನಕೃತವಾಗಿ ವೇಶ್ಯಾವಾಟಿಕೆ ನಡೆಸುವವರೇ ಆಗಿರಲಿ, ಅದರಲ್ಲಿ ಬಹುಪಾಲು ಮಂದಿ ಉತ್ತರ ಕರ್ನಾಟಕದ ಬಡ ಕುಟುಂಬದಿಂದ ಬಂದವರೇ! ಎಂದು.

ದೇಶದಲ್ಲಿ ವೇಶ್ಯಾವಾಟಿಕೆ ಹೆಚ್ಚಲು ಮೂಲ ಕಾರಣವೇ ಬಡತನ ಮತ್ತು ನಿರುದ್ಯೋಗದಂಥ ಸಮಸ್ಯೆಗಳೇ. ಇದರಿಂದ ದೇಶದ ಸಾಂಸ್ಕತಿಕ ಮೌಲ್ಯಗಳು ಅಧಪತನಗೊಳ್ಳುತ್ತಿವೆ ಎಂದು ಸುಪ್ರೀಂಕೋರ್ಟ್ ಕೂಡ ಅಭಿಪ್ರಾಯಪಟ್ಟಿತ್ತು. ಆದರೆ, ಇಂದಿಗೂ ವೇಶ್ಯಾವಾಟಿಕೆ ಕಾನೂನುಬದ್ಧವಾಗಬೇಕೆನ್ನುವ ಅಭಿಪ್ರಾಯಗಳು ಕೇಳಿಬರುತ್ತಿವೆ. ಕಾಮವೆಂಬುವುದು ನಿಜ ಎಂದ ಮೇಲೆ ವೇಶ್ಯಾವಾಟಿಕೆ ಅದೇಕೆ ಅಪಥ್ಯ,  ದೇವರು, ಋಷಿಮುನಿಗಳು ಕೂಡ ಇದರಿಂದ ಹೊರತಾಗಿಲ್ಲ, ಇದೊಂದು ಪುರಾತನ ವೃತ್ತಿ ಎನ್ನುವುದಾದರೆ ಅದನ್ನೇಕೆ ಕಾನೂನುಬದ್ಧಗೊಳಿಸಬಾರದು ಎನ್ನುವ ವಾದವನ್ನು ಮುಂದಿಡುವವರಿದ್ದಾರೆ.

ಆದರೆ, ಈ ರೀತಿಯ ಚರ್ಚೆಯನ್ನು ಹುಟ್ಟುಹಾಕುವ ಬದಲು ವೇಶ್ಯಾವಾಟಿಕೆಯಂಥ ಸಮಸ್ಯೆಗೆ ಮೂಲ ಕಾರಣಗಳೇನು ಎಂಬುವುದನ್ನು ಚರ್ಚಿಸಬೇಕು. ವೇಶ್ಯಾವಾಟಿಕೆ ಪುರಾತನ ವೃತ್ತಿ ಆಗಿರಬಹುದು, ದೈಹಿಕ ದೌರ್ಬಲ್ಯಗಳೇ ಆಗಿರಬಹುದು ಹಾಗಂತ ಅದನ್ನು ಸಮಾಜ ಒಪ್ಪುವುದೇ? ಎಂಬುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಎಲ್ಲವನ್ನೂ ಕಾನೂನಿಂದಲೇ ನಿಯಂತ್ರಿಸುವುದು ಕಷ್ಟ. ಆದರೆ, ಹೆಣ್ಣಮಕ್ಕಳ ಕಳ್ಳಸಾಗಣೆ ದಂಧೆಯನ್ನು  ಕಠಿಣ ಕಾನೂನು ಮೂಲಕ ತಡೆಗಟ್ಟಬಹುದು. ಅಂತೆಯೇ, ಬಡತನದಲ್ಲಿರುವ ನಿರುದ್ಯೋಗಿ ಹೆಣ್ಣುಮಕ್ಕಳಿಗೆ ಉದ್ಯೋಗ ಸೌಲಭ್ಯ ನೀಡಿದರೆ ಇಂಥ ಸಮಸ್ಯೆಗಳನ್ನು ಸಾಕಷ್ಟು ಮಟ್ಟಿಗೆ ಸುಧಾರಿಸಬಹುದು. ಆದರೆ, ನಮ್ಮ ಸಮಸ್ಯೆಯ ಮೂಲ ಎಲ್ಲಿದೆ ಎಂದರೆ ವೇಶ್ಯಾವಾಟಿಕೆಯಂಥ ದಂಧೆಯನ್ನು ನಿಷೇಧಿಸಬೇಕು ಎಂದು ಬೀದಿಗಿಳಿದು ಹೋರಾಡುವವರೇ ಎಲ್ಲೋ ಒಂದು ಕಡೆ ಇಂಥ ಪ್ರವೃತ್ತಿಗಳಿಗೆ ಒಳಗೊಳಗೇ ಕುಮ್ಮಕ್ಕು ನೀಡುತ್ತಿದ್ದಾರೆ. ಅದಕ್ಕೆ ನಿದರ್ಶನ ಮೇಲೆ ಹೇಳಿದ ಹುಡುಗಿ, ಆಕೆಯನ್ನು ಮುಂಬೈಗೆ ಸಾಗಿಸಿದ್ದು ಆ ಊರಿನ ಪ್ರಭಾವಿ ರಾಜಕಾರಣಿ!

ಆ ಹುಡುಗಿಯ ಕಥೆ ಕೇಳುತ್ತಾ, ಒಂದಷ್ಟು ಯೋಚನೆಗಳೊಂದಿಗೆ ಮನೆಯತ್ತ ಹೆಜ್ಜೆ ಹಾಕಿದ್ದೆ. ತಲೆಯಲ್ಲಿ ಅವಳ ಬದುಕಿನ ಕಥೆ ಗಿರಕಿಹೊಡೆಯುತ್ತಿತ್ತು. ಇಂಥ ಸಮಸ್ಯೆಗಳ ನಡುವೆ ಸಿಕ್ಕಿ, ತನ್ನೆಲ್ಲಾ ಭಾವ-ಬದುಕನ್ನು ಮಾರಣಹೋಮ ಮಾಡುತ್ತಿದ್ದರಲ್ಲಾ? ಎಂದನಿಸಿತ್ತು.

2 ಟಿಪ್ಪಣಿಗಳು Post a comment
  1. Pavan Harithasa's avatar
    ಆಗಸ್ಟ್ 1 2011

    anadi kaladinda banda anishta paddhatiyannu tadiyoke lancha padedu avakashagalanna koduva police mattu sikki haki kondavarige sariyada shikshe kathinavada shikshe koduva vyavasthe baruva tanaka tolaguvudilla madam, eega badavaru matra alla costly life corporate badukina kelavaru saha shokigaagi veshyavatikeyalli todagiddare. ittichigashte cinema tareyaru sikkihaki kondiddu neevilli smarisabahudu. olleya lekhana olleya vishayagalanna heliddira…

    ಉತ್ತರ
  2. ಸಿಂಧು ಕಲ್ಕಣಿ's avatar
    ಫೆಬ್ರ 26 2016

    Awesome & amazing story …plzzz ಪ್ರತಿಯೊಬ್ಬರು ಇದನ್ನು ಓದಿ…

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments