ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 2, 2011

14

ಸಂತಾನಹೀನತೆಯ ಕಾರಣ ಶೋಧಿಸುತ್ತ….

‍ನಿಲುಮೆ ಮೂಲಕ
– ವಿಷ್ಣುಪ್ರಿಯ
(ಯೋನಿಯ ಮೂಲಕ ಪ್ರವೇಶಿಸುವಂಥ ವೀರ್ಯವು ಗರ್ಭನಾಳವನ್ನು ಹಾದು, ಗರ್ಭಕೋಶವನ್ನು ಸೇರಿ ಅಲ್ಲಿರುವ ಅಂಡಾಣುವಿನೊಂದಿಗೆ ಮಿಲನವಾಗಬೇಕು. ಅಂದರೆ ಗರ್ಭವತಿಯಾಗಬೇಕೆಂದರೆ ಎರಡು ಮಿಲನಗಳಾಗಬೇಕು- ಒಂದು ಸ್ತ್ರೀ-ಪುರುಷ ಮಿಲನ, ಇನ್ನೊಂದು ಈ ಮಿಲನದ ಬಳಿಕದ ಅಂಡಾಣು-ವೀರ್ಯಾಣು ಮಿಲನ. ದೇಹದಲ್ಲಿರುವಂಥ ಪ್ರತಿರಕ್ಷಣಾ ವ್ಯವಸ್ಥೆ (ಇಮ್ಯೂನ್ ಸಿಸ್ಟಮ್) ವೀರ್ಯದ ಚಲನೆಯನ್ನು ತಡೆಯುವುದಕ್ಕೆ ಪ್ರಯತ್ನಿಸುತ್ತದೆ. ಆದರೆ ವೀರ್ಯಕ್ಕೆ ಹೊದಿಕೆಯಂತೆ (ಕೋಟ್ನಂತೆ) ಇರುವ ಪ್ರೋಟೀನ್ ಡಿಇಎಫ್ ಬಿ 126 ಈ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸೀಳಿಕೊಂಡು ಮುಂದಕ್ಕೆ ಚಲಿಸಿ ಅಂಡಾಣುವಿನೊಂದಿಗೆ ಮಿಲನವಾಗುತ್ತದೆ. ಒಂದು ವೇಳೆ ವೀಯಾಣುವಿನಲ್ಲಿ ಈ ಪ್ರೋಟೀನ್ ಹೊದಿಕೆ ಇಲ್ಲದೇ ಹೋದರೆ?  )
`ಮಕ್ಕಳಿರಲವ್ವ ಮನೆತುಂಬ’ ಎಂದರು ಹಿರಿಯರು. ಸುಮ್ಮನೇ ಹೇಳಿರುತ್ತಾರೆಯೇ? ಈ ಬಯಕೆಯ ಹಿಂದೊಂದು ವಾಸ್ತವವಿದೆ. ಮಕ್ಕಳು ಮನೆಯಲ್ಲಿದ್ದರೆ ಅದೆಷ್ಟೋ ನೋವುಗಳು ತಮ್ಮಷ್ಟಕ್ಕೇ ಶಮನಗೊಳ್ಳುತ್ತವೆ.ಮಗುವಿನ ಕಿಲಕಲ ನಗು, ಅದರ ಅಳು, ರಂಪಾಟ, ಅದರ ಚೇಷ್ಟೆಗಳು, ಆಟಗಳು… ಮಗುವಿನ ಒಂದೊಂದು ಕ್ಷಣದಲ್ಲೂ ಬೆರೆತುಕೊಂದಡರೆ ದೊಡ್ಡವರೂ ಕೂಡಾ ಮಕ್ಕಳೇ ಆಗುತ್ತಾರೆ! ಆ ಕಂದಮ್ಮಗಳೊಂದಿಗೆ ತಾವೂ ತೊದಲುನುಡಿಯಲ್ಲಿ ಮಾತನಾಡುತ್ತಾರೆ. ಮಕ್ಕಳೊಂದಿಗೆ ಕಳೆಯುವ ಆ ಕ್ಷಣಗಳನ್ನು ಪದಗಳಲ್ಲಿ ವರ್ಣಿಸುವುದು ಕಷ್ಟವೇನೋ? ಮುದ್ದಾದ ಮಕ್ಕಳನ್ನು ಕಂಡಾಗ ಭಾವುಕರಾಗದವರು ಯಾರಿದ್ದಾರೆ? ಇಂಥದ್ದೇ ಒಂದು ಮುದ್ದು ಕಂದ ನನಗೂ ಇರಬೇಕು… ಹಾಗಂತ ಹೆಂಗಸರೂ ಬಯಸುತ್ತಾರೆ, ಪುರುಷರೂ ಕೂಡಾ! ಬಯಕೆಗಳು ಎಲ್ಲಾ ಕಾಲದಲ್ಲೂ ಈಡೇರುವುದಿಲ್ಲ. ಸಂತಾನ ಪಡೆಯುವುದು ಸುಲಭದ ವಿಚಾರವೂ ಅಲ್ಲ. ಸ್ತ್ರೀ-ಪುರುಷ ಮಿಲನಗೊಂಡರೆ ಸಾಕು ಸಂತಾನವಾಗದೇ ಏನು ಎಂಬ ಪ್ರಶ್ನೆಗಳು ಸಹಜ. ಮಿಲನವೊಂದಷ್ಟೇ ಸಂತಾನದ ವಿಚಾರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದಲ್ಲ.

ಸ್ತ್ರೀ-ಪುರುಷರಿಬ್ಬರಲ್ಲಿಯೂ ಇರಬಹುದಾದಂಥ ನ್ಯೂನತೆಗಳದ್ದು ಇಲ್ಲಿ ಪ್ರಮುಖ ಪಾತ್ರ. ಯಾವುದೇ ಸಮಸ್ಯೆಗಳಿಲ್ಲ ಎಂದಾದರೆ ಮಿಲನ ಮಾತ್ರಕ್ಕೇ ಸಂತಾನ ಪಡೆಯಬಹುದು. ಸಮಸ್ಯೆಗಳಿದ್ದದ್ದೇ ಆದಲ್ಲಿ ಆ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಕಡೆಗೆ ಮೊದಲು ಗಮನ ಹರಿಸಬೇಕು. ಸ್ತ್ರೀಯರಲ್ಲಿ ಉತ್ಪತ್ತಿಯಾಗುವಂಥ ಅಂಡಾಣು ಫಲಪ್ರದವಾಗಿರಬೇಕು, ಜೊತೆಗೆ ಆರೋಗ್ಯಪೂರ್ಣವಾಗಿರಬೇಕು. ಪುರುಷರ ವೀರ್ಯವೂ ಅಷ್ಟೇ ಫಲಪ್ರದ ಮತ್ತು ಆರೋಗ್ಯದಿಂದ ಇರಬೇಕು. ಅದೆಷ್ಟೋ ಬಾರಿ ಸ್ತ್ರೀಯರಲ್ಲೋ ಪುರುಷರಲ್ಲೋ ಸಮಸ್ಯೆಗಳಿರುವ ಕಾರಣ ಸಂತಾನ ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಅಂಥ ಸಂದರ್ಭಗಳಲ್ಲಿ ನಮಗೆ ಮಕ್ಕಳಾಗಿಲ್ಲ ಎಡಂದು ಕೊರಗುತ್ತಾರೆಯೇ ವಿನಃ ಏನು ಸಮಸ್ಯೆ ಇರಬಹುದು ಎಂಬ ಬಗ್ಗೆ ಚಿಂತನೆ ನಡೆಸುವುದಿಲ್ಲ. ಕೊರಗೇ ಹೆಚ್ಚಾಗಿರುವಾಗ ಚಿಂತನೆ ನಡೆಸುವುದಕ್ಕೆ ಸಾಧ್ಯವೂ ಇಲ್ಲ. ಇಷ್ಟೆಲ್ಲಾ ಪ್ರಸ್ತಾಪ ಮಾಡಬೇಕಾಗಿ ಬಂದದ್ದು ಪುರುಷರಲ್ಲಿ ಸಂತಾನ ಹೀನತೆಗೆ ಏನು ಕಾರಣಗಳಿರಬಹುದು ಎಂಬ ಬಗ್ಗೆ ಅಮೆರಿಕದ ಯುಸಿ ಡೇವಿಸ್ ಬೊಡೇಗಾ ಮೆರೈನ್ ಲ್ಯಾಬೊರೇಟರಿ ಮತ್ತು ಸೆಂಟರ್ ಫಾರ್ ಹೆಲ್ತ್, ಎನ್ವಿರಾನ್ಮೆಂಟ್ ನಡೆಸಿದ ಸಂಶೋಧನೆ ನಡೆಸಿದ ಸುದ್ದಿ ಗಮನಿಸಿದಾಗ.

ಪ್ರಸ್ತುತ ಜಗತ್ತಿನಲ್ಲಿ ಬಹಳಷ್ಟು ಪುರುಷರು ಸಂತಾನ ಹೀನತೆಯಿಂದ ಬಳಲುತ್ತಿದ್ದಾರೆ. ಅದಕ್ಕೆ ಕಾರಣವೇನಿರಬಹುದು ಎಂಬುದನ್ನು ಅರಿತುಕೊಳ್ಳುವ ಸಲುವಾಗಿ ಇಲ್ಲಿನ ಸಂಶೋಧಕರು ಜಗತ್ತಿನ ವಿವಿಧ ದೇಶಗಳ ಪುರುಷರನ್ನು ಪರಿಶೀಲಿಸಿದರು. ಅವರ ವೀರ್ಯದ ಸ್ಯಾಂಪಲ್ ಅನ್ನು ಪರೀಕ್ಷಿಸಿದರು. ಗಂಡು ಹೆಣ್ಣು ಮಿಲನಗೊಂಡ ತಕ್ಷಣ ಹೆಣ್ಣು ಗರ್ಭವತಿಯಾಗುವುದಿಲ್ಲ. ಯೋನಿಯ ಮೂಲಕ ಪ್ರವೇಶಿಸುವಂಥ ವೀರ್ಯವು ಗರ್ಭನಾಳವನ್ನು ಹಾದು, ಗರ್ಭಕೋಶವನ್ನು ಸೇರಿ ಅಲ್ಲಿರುವ ಅಂಡಾಣುವಿನೊಂದಿಗೆ ಮಿಲನವಾಗಬೇಕು. ಅಂದರೆ ಗರ್ಭವತಿಯಾಗಬೇಕೆಂದರೆ ಎರಡು ಮಿಲನಗಳಾಗಬೇಕು- ಒಂದು ಸ್ತ್ರೀ-ಪುರುಷ ಮಿಲನ, ಇನ್ನೊಂದು ಈ ಮಿಲನದ ಬಳಿಕದ ಅಂಡಾಣು-ವೀರ್ಯಾಣು ಮಿಲನ.

ಇಲ್ಲೇ ಸಮಸ್ಯೆ ಎದುರಾಗುವುದು
ಈ ಎರಡು ಮಿಲನಗಳಲ್ಲಿ ಹೆಚ್ಚಾಗಿ ಮೊದಲನೆ ಮಿಲನದಲ್ಲಿ ಎಂಥ ಸಮಸ್ಯೆಗಳಿರುವುದಿಲ್ಲ. ಎರಡನೇ ಮಿಲನ ಇದೆಯಲ್ಲ? ಅದು ಸುಲಭಕ್ಕೆ ಸಾಧ್ಯವಾಗುವುದಿಲ್ಲ. ಯೋನಿ ಪ್ರವೇಶಿಸಿದಂಥ ವೀರ್ಯ ಅಂಡಾಣುವನ್ನು ಹುಡುಕಿಕೊಂಡು ಚಲಿಸುವಾಗ ಅದಕ್ಕೆ ಹಲವು ತಡೆಗಳು ಎದುರಾಗುತ್ತವೆ. ದೇಹದಲ್ಲಿರುವಂಥ ಪ್ರತಿರಕ್ಷಣಾ ವ್ಯವಸ್ಥೆ (ಇಮ್ಯೂನ್ ಸಿಸ್ಟಮ್) ವೀರ್ಯದ ಚಲನೆಯನ್ನು ತಡೆಯುವುದಕ್ಕೆ ಪ್ರಯತ್ನಿಸುತ್ತದೆ. ಆದರೆ ವೀರ್ಯಕ್ಕೆ ಹೊದಿಕೆಯಂತೆ (ಕೋಟ್ನಂತೆ) ಇರುವ ಪ್ರೋಟೀನ್ ಡಿಇಎಫ್ ಬಿ  126 ಈ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸೀಳಿಕೊಂಡು ಮುಂದಕ್ಕೆ ಚಲಿಸಿ ಅಂಡಾಣುವಿನೊಂದಿಗೆ ಮಿಲನವಾಗುತ್ತದೆ. ಒಂದು ವೇಳೆ ವೀಯಾಣುವಿನಲ್ಲಿ ಈ ಪ್ರೋಟೀನ್ ಹೊದಿಕೆ ಇಲ್ಲದೇ ಹೋದರೆ?
ಪ್ರಸ್ತುತ ಜಗತ್ತಿನ ಬಹುತೇಕ ಪುರುಷರಿಗೆ ಸಮಸ್ಯೆಯಾಗಿರುವುದು ಇದುವೇ ಎನ್ನುತ್ತಿದೆ ಸಂಶೋಧನೆ. ಜಗತ್ತಿನಲ್ಲಿ ಶೇಕಡಾ 25ರಷ್ಟು ಪುರುಷರಲ್ಲಿ ಸಮಸ್ಯೆಗಳಿರುವ ವಂಶವಾಹಿಗಳ ಎರಡು ಪ್ರತಿಗಳಿರುತ್ತವೆ. ಈ ಸಮಸ್ಯಾಪೂರ್ಣ ವಂಶವಾಹಿಗಳೇ ಅವರಲ್ಲಿ ಸಂತಾನಹೀನತೆಗೆ ಕಾರಣವಾಗುತ್ತವೆ. ಈ ವಂಶವಾಹಿಗಳಲ್ಲಿ ಸಮಸ್ಯೆ ಇತ್ತೆಂದಾದಲ್ಲಿ ವೀರ್ಯಾಣುವಿಗೆ ಇರಬೇಕಾದ ಪ್ರೋಟೀನ್ ಹೊದಿಕೆ ಇರುವುದಿಲ್ಲ. ಇನ್ನೂ ಒಂದು ಪ್ರಮುಖ ವಿಚಾರವೆಂದರೆ ಪುರುಷರಲ್ಲಿ ಇರುವಂಥ ವೀರ್ಯಾಣುಗಳ ಪ್ರಮಾಣ ಫಲಪ್ರದ ಸಂತಾನಕ್ಕೆ ಕಾರಣವೆನಿಸುವುದಿಲ್ಲ. ವೀರ್ಯಾಣುಗಳ ಸಂಖ್ಯೆ ಸ್ವಲ್ಪ ಕಡಿಮೆ ಇದ್ದರೂ ಸಹ ಆ ವೀರ್ಯಾಣುಗಳಿಗೆ ಪ್ರೋಟೀನ್ ಹೊದಿಕೆ ಇಲ್ಲದೇ ಇದ್ದರಷ್ಟೇ ಸಮಸ್ಯೆ ಬರುವ ಸಾಧ್ಯತೆಗಳಿವೆ ಎಂದೂ ಈ ಸಂಶೋಧನೆ ಹೇಳುತ್ತಿದೆ.

ಜೊತೆಗೆ ಪ್ರತಿಯೊಂದು ವೀರ್ಯಾಣುವಿನ ಗುಣಮಟ್ಟವೂ ಉತ್ತಮವಾಗಿರುವುದಕ್ಕೆ ಸಾಧ್ಯವಿಲ್ಲ. ಕೆಲವೊಂದು ಕಡಿಮೆ ಗುಣಮಟ್ಟದ ವೀರ್ಯಾಣುಗಳು ಇರಬಹುದು ಮತ್ತು ಇದ್ದೇ ಇರುತ್ತವೆ. ಆದರೆ ಮಿಲನ ಫಲಪ್ರದವಾಗಲು ಕೆಲವೇ ಕೆಲವು ಉತ್ತಮ ಗುಣಮಟ್ಟದ ವೀರ್ಯಾಣು ಇದ್ದರೂ ಸಾಕು. ಅಂಡಾಣುವಿನೊಂದಿಗೆ ಮಿಲನಗೊಳ್ಳುವ ವೀರ್ಯಾಣುವಿನ ಗುಣಮಟ್ಟ ಹೇಗಿರುತ್ತದೆ ಎಂಬುದರ ಮೇಲೆ ಅದು ಅವಲಂಬಿತ. ಅಂಡಾಣುವಿನ ಜೊತೆಗೆ ಮಿಲನಗೊಳ್ಳುವ ವೀಯಾಣುವೊಂದೇ ಉತ್ತಮ ಗುಣಮಟ್ಟದ್ದಾದರೂ ಸ್ತ್ರೀ ಗರ್ಭವತಿಯಾಗುತ್ತಾಳೆ.

ವೀರ್ಯಾಣು ಉತ್ಪತ್ತಿಯಾಗುವುದು ವೃಷಣದಲ್ಲಿ. ನಂತರ ಅದು ವೃಷಣನಾಣದಲ್ಲಿ (ಎಪಿಡಿಡೈಮಿಸ್) ಸಂಗ್ರಹಗೊಳ್ಳುತ್ತದೆ. ವೀರ್ಯಾಣುವಿಗೆ ಹೊದಿಕೆಯಾಗುವ ಪ್ರೋಟೀನ್ ಉತ್ಪತ್ತಿಯಾಗುವುದು ವೃಷಣನಾಳದಲ್ಲಿ. ಹೀಗಾಗಿ ವೃಷಣದಲ್ಲಿ ಉತ್ಪತ್ತಿಯಾದ ವೀರ್ಯಾಣು ವೃಷಣನಾಳಕ್ಕೆ ಬಂದ ತಕ್ಷಣ ಅಲ್ಲಿ ಉತ್ಪತ್ತಿಯಾದಂಥ ಪ್ರೋಟೀನ್ ವೀರ್ಯಾಣುವಿಗೆ ಹೊದಿಕೆಯಾಗುತ್ತದೆ. ಸ್ತ್ರೀ-ಪುರುಷರ ಮಿಲನವಾದಾಗ ವೀರ್ಯಾಣು ಪ್ರೋಟೀನ್ ಹೊದಿಕೆಯ ಸಹಿತ ಯೋನಿಯ ಮೂಲಕ ಗರ್ಭ ಪ್ರವೇಶಿಸುತ್ತದೆ. ಯೋನಿಯಿಂದ ಗರ್ಭದ್ವಾರದವರೆಗೂ ಲೋಳೆಯಂಥ ದ್ರವ (ಸೆರ್ವಿಕಲ್ ಮ್ಯೂಕಸ್) ಇರುತ್ತದೆ. ಇದರ ಮೂಲಕ ವೀರ್ಯ ಹಾದು ಹೋಗಬೇಕು. ಪ್ರೋಟೀನ್ ಹೊದಿಕೆಯಿಲ್ಲದ ವೀರ್ಯಾಣು ಸಾಮಾನ್ಯ ಸೂಕ್ಷ್ಮದರ್ಶಕದಲ್ಲಿ ಸಹಜ ವೀರ್ಯಾಣುವಿನಂತೆಯೇ ಕಾಣುತ್ತದೆ. ಆದರೆ ಈ ಲೋಳೆಯಂಥ ದ್ರವದ ಮೂಲಕ ಹಾದು ಹೋಗುವುದು ಅದಕ್ಕೆ ಸಾಧ್ಯವಾಗುವುದಿಲ್ಲ.

ಪರಿಹಾರ ಸಿಗಬಹುದೇ?
ಸಮಸ್ಯೆಯ ಮೂಲವೇನೋ ಪತ್ತೆಯಾಗಿದೆ. ಆದರೆ ಪರಿಹಾರ? ಇದರ ಬಗ್ಗೆಯೇ ವಿಜ್ಞಾನಿಗಳು ಸಂಶೋಧನೆ ನಡೆಸುತ್ತದ್ದಾರೆ. ಅಂಡಾಣು ಮತ್ತು ವೀರ್ಯಾಣುಗಳನ್ನು ಪಡೆದು ಪ್ರಯೋಗಾಲಯದಲ್ಲಿ ಸಂಯೋಜಿಸಿ ನಂತರ ಮತ್ತೆ ಗರ್ಭದೊಳಗೆ ಅದನ್ನು ಸೇರಿಸಬಹುದು. ಆದರೆ ಈ ಪ್ರಕ್ರಿಯೆಯನ್ನು ಸಹಜವಾಗಿಸಲು ಸಾಧ್ಯವಿಲ್ಲವೇ ಎಂಬ ಬಗ್ಗೆ ಚಿಂತನೆ ನಡೆದಿದೆ. ಆದರೆ ಪ್ರೋಟೀನ್ ಡಿಇಎಫ್ ಬಿ 126ಯನ್ನು ಹೊತ್ತು ತರುವಂಥ ವಂಶವಾಹಿಗೆ ಯಾವ ರೀತಿಯ ಚಿಕಿತ್ಸೆ ಕೊಡುವುದು ಎಂಬುದು ಇನ್ನೂ ಗೊತ್ತಾಗಿಲ್ಲ ಸಂಶೋಧನೆ ಮುಂದುವರಿದಿದೆ.

ಆದರೆ ಈ ವಿಚಾರಗಳನ್ನೆಲ್ಲ ಸಹಜವಾಗಿಯೇ ಗಮನಿಸಿದಾಗ ನಮ್ಮ ಆಹಾರ ಪದ್ಧತಿ ಮತ್ತು ಜೀವನ ಶೈಲಿಯೇ ಇದಕ್ಕೆ ಕಾರಣವೇನೋ ಎನ್ನಿಸುತ್ತದೆ. ಉಸಿರಾಡುವುದು ವಿಷವಾಯು, ಕುಡಿಯುವುದು ಕ್ಲೋರಿನ್ ಬೆರೆತ ನೀರು, ತಿನ್ನುವುದು ಕೀಟನಾಶಕ ಸಿಂಪಡಿಸಿದ ಆಹಾರ. ಬೆಳೆಗಳಿಗೆ ಸಿಂಪಡಿಸಿದಂಥ ಕೀಟನಾಶಕ ಆಹಾರ ಸರಪಣಿಯ ಮೂಲಕ ನಮ್ಮ ದೇಹಕ್ಕೂ ಪ್ರವೇಶಿಸುತ್ತದೆ. ಇನ್ನೂ ಜೀವನಶೈಲಿ- ಒಂದು ಸ್ವಲ್ಪ ದೂರ ನಡೆದಾಡುವುದಕ್ಕೂ ನಮಗೆ ಆಲಸ್ಯ. ನಮ್ಮ ಆರೋಗ್ಯವೇ ಸರಿಯಿಲ್ಲದಿರುವಾಗ ವೀರ್ಯ ಹೇಗೆ ತಾನೇ ಆರೋಗ್ಯಪೂರ್ಣವಾಗಿದ್ದೀತು? ಫಾಸ್ಟ್ ಫುಡ್, ಜಂಕ್ ಫುಡ್… ಇವನ್ನೆಲ್ಲ ತಯಾರಿಸುವ ವಿಧಾನವನ್ನು ಗಮನಿಸಿದರೇ ತಿನ್ನುವುದು ಬೇಡ ಅನ್ನಿಸುತ್ತದೆ. ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರ, ನಮ್ಮ ಜೀವನಶೈಲಿ ಎಲ್ಲವೂ ನೇರ್ಪಾಗಿದ್ದರಷ್ಟೇ ಮಿಲನ ಫಲಪ್ರದವಾಗುವುದಕ್ಕೆ ಸಾಧ್ಯ.

ನಮ್ಮ ಹಿರಿಯರು ನವವಿವಾಹಿತರು ಅರಳಿಕಟ್ಟೆಗೆ ಪ್ರದಕ್ಷಿಣೆ ಹಾಕಬೇಕು, ಅಶ್ವತ್ಥಕಟ್ಟೆಗೆ ಪ್ರದಕ್ಷಿಣೆ ಹಾಕಬೇಕು ಎಂದಿದ್ದು ಯಾಕೆ ಗೊತ್ತೆ?- ಈ ಮರಗಳು ಅಧಿಕ ಪ್ರಮಾಣದ ಆಮ್ಲಜನಕವನ್ನು ಹೊರಸೂಸುತ್ತವೆ. ಆ ಮರಗಳ ಕೆಳಗಿದ್ದಷ್ಟು ಹೊತ್ತು ಹಿತವಾದ ಆಮ್ಲಜನಕ ಸೇವಿಸಿ ಆರೋಗ್ಯ ವೃದ್ಧಿಯಾಗಲಿ ಎಂಬ ಕಾರಣಕ್ಕೆ. ಇವೆಲ್ಲ ಗೊಡ್ಡು ಸಂಪ್ರದಾಯ ಎಂದು ಮೂಗುಮುರಿದರೆ?
***************

14 ಟಿಪ್ಪಣಿಗಳು Post a comment
  1. sriharsha's avatar
    sriharsha
    ಆಗಸ್ಟ್ 2 2011

    Everything is fine.
    Last paragraph is junk.

    ಉತ್ತರ
  2. Prabhushankar Prakasha's avatar
    ಆಗಸ್ಟ್ 2 2011

    Good article. Thanx to writer.

    ಉತ್ತರ
  3. ಜಗನ್ನಾಥ್ ಶಿರ್ಲಾಲ್'s avatar
    ಜಗನ್ನಾಥ್ ಶಿರ್ಲಾಲ್
    ಆಗಸ್ಟ್ 11 2011

    good article….

    ಉತ್ತರ
  4. Nanjunda Raju's avatar
    ಆಗಸ್ಟ್ 26 2011

    ಮಾನ್ಯರೇ, ಇದು ತುಂಬಾ ಒಳ್ಳೆಯ ಲೇಖನ. ಮಕ್ಕಳಿಲ್ಲದ ಬಾಳು ಬೇಡವೆನಿಸುತ್ತದೆ. ಲೇಖನದಲ್ಲಿ ತಿಳಿಸಿರುವಂತೆ, ಸಣ್ಣಪುಟ್ಟ ತೊಂದರೆಯಿಂದಲೇ ಮಕ್ಕಳಾಗುವುದಿಲ್ಲ. ಕೆಲವು ಹೆಣ್ಣು ಮಕ್ಕಳು ಮಕ್ಕಳಾಗದಿದ್ದರೆ, ಇದು ಪೂರ್ವಜನ್ಮದ ಕರ್ಮ. ನನ್ನ ಜೀವನ ಇಷ್ಟೆ ಎನ್ನುತ್ತಾರೆ. ಇದರಿಂದ ದೇವರ ಅಥವಾ ಮಂತ್ರವಾದಿಗಳ ಮೊರೆ ಹೋಗುತ್ತಾರೆ ಹೊರತು ವೈದ್ಯರಲ್ಲಿಗೆ ಮಾತ್ರ ಹೋಗುವುದಿಲ್ಲ. (ಸರ್ಕಾರಿ ಆಸ್ಪತ್ರೆಯ ವೈದ್ಯರ ಮತ್ತು ಸಿಬ್ಬಂದಿವರ್ಗದವರ ನಡವಳಿಕೆಯೂ ಕಾರಣವಾಗಿರುತ್ತದೆ)ಮಕ್ಕಳಾಗದವರು ಕೂಡಲೆ ಗಂಡ ಹೆಂಡತಿ ಇಬ್ಬರೂ ನುರಿತ ವೈದ್ಯರಲ್ಲಿಗೆ ಹೋಗಿ ಚಿಕಿತ್ಸೆಗೆ ಒಳಗಾಗಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಸರ್ಕಾರ ಸಹ ಇದಕ್ಕಾಗಿಯೇ ಅಂದೋಳನ ಮಾಡಿ, ಸಾಕಷ್ಟು ಪ್ರಚಾರ ಮಾಡಿ, ಲಂಚರಹಿತವಾಗಿ ಚಿಕಿತ್ಸೆ ನೀಡಿದರೆ ದೇವರನ್ನು ಮರೆತು ಚಿಕಿತ್ಸೆ ನೀಡಿದ ವೈದ್ಯರನ್ನೇ ದೇವರೆನ್ನುತ್ತಾರೆ. ಅಲ್ಲವೆ?

    ಉತ್ತರ
  5. ರವಿ ಕುಮಾರ್ ಜಿ ಬಿ's avatar
    ರವಿ ಕುಮಾರ್ ಜಿ ಬಿ
    ಆಗಸ್ಟ್ 27 2011

    ಉತ್ತಮ ಉಪಯುಕ್ತ ಲೇಖನ , ಧನ್ಯವಾದ .

    ಇನ್ನು ಶ್ರೀಹರ್ಷ ರವರೆ , ಕೊನೆ ಪ್ಯಾರ ನೋಡಿ ಮೂಗು ಮುರಿಯುವ ಅವಶ್ಯಕತೆ ಇಲ್ಲ ಅನ್ನಿಸುತ್ತಿದೆ , ಯಾಕೆಂದರೆ ಅದೂ ಕೂಡ ವೈಜ್ಞಾನಿಕ ಸತ್ಯವೇ ಅಲ್ಲವೇ? ಮಾಟ ಮಂತ್ರ ಮಾಡಿ ಅಂತ ಹೇಳಿಲ್ಲವಲ್ಲ?

    ಉತ್ತರ
  6. sriharsha's avatar
    sriharsha
    ಆಗಸ್ಟ್ 27 2011

    ಶ್ರೀಯುತ ರವಿಕುಮಾರರೇ,

    ಅದು ಹೇಗೆ ವೈಜ್ಞಾನಿಕ ಸತ್ಯ? ಮಕ್ಕಳಾಗುವುದಕ್ಕೂ ಮರ ಸುತ್ತುವುದಕ್ಕೂ ಏನು ಸಂಬಂಧ? ಆಮ್ಲಜನಕ ಸೇವಿಸಿದರೆ ಮಕ್ಕಳಾಗುತ್ತವಾ? ಹಾಗಿದ್ದರೆ ಆಮ್ಲಜನಕದ ಸಿಲಿಂಡರ್ ಹಾಕಿಕೊಂಡು ಉಸಿರಾಡಿದರೆ ಮಕ್ಕಳಾಗುತ್ತವಾ?

    ಉತ್ತರ
  7. ರವಿ ಕುಮಾರ್ ಜಿ ಬಿ's avatar
    ರವಿ ಕುಮಾರ್ ಜಿ ಬಿ
    ಸೆಪ್ಟೆಂ 2 2011

    ಸ್ನೇಹಿತ ಶ್ರೀಹರ್ಷರವರೆ,
    ಎಲ್ಲೂ ಆಮ್ಲಜನಕ ಸೇವಿಸಿದರೆ ಮಕ್ಕಳಗುತ್ತವೆ ಎಂದು ಹೇಳಿದ್ದು ಆ ಪ್ಯಾರದಲ್ಲಾಗಲಿ, ನನ್ನ ಕಾಮೆಂಟ್ ನಲ್ಲಾಗಲಿ ಕಾಣಿಸಿಲ್ಲ !! ನಿಮಗೇ ಹೇಗೆ ಕಾಣಿಸಿತೋ ಗೊತ್ತಿಲ್ಲ !! ಆಮ್ಲಜನಕ ಸೇವಿಸಿದರೆ ಆರೋಗ್ಯವ್ರುದ್ದಿ ಅಂತ ಹೇಳಿದ್ದಾರೆ ಅದರಿಂದ ಮಕ್ಕಳಾಗುವುದಕ್ಕೆ ಅನುಕೂಲ ಅಂತ ಹೇಳಿದ್ದು ಅದು ನಿಮಗೂ ಗೊತ್ತು ಅಂತ ಎಲ್ಲರಿಗೂ ಗೊತ್ತು. ಕೇವಲ ವಿಜ್ಞಾನದ ಮಾತ್ರೆ ನುನ್ಗೊದರಿಂದ ಖಾಯಿಲೆ ವಾಸಿಯಗೊದಾದ್ರೆ , ನಿಮ್ಹಾನ್ಸ್ ನಲ್ಲಿ ಕೌನ್ಸೆಲ್ಲಿಂಗ್ ಮಾಡೋ ಅವಶ್ಯಕತೆನೆ ಇಲ್ಲ. ಒಂದು ಗುಳಿಗೆ ನುಂಗಿದರೆ ಎಲ್ಲಾ ರೋಗ ಫಿನಿಶ್ ಸೂಪರ್ ಕಣ್ರೀ. ಅಲ್ವೇ?

    ಉತ್ತರ
  8. sriharsha's avatar
    sriharsha
    ಸೆಪ್ಟೆಂ 2 2011

    ರವಿ,
    ಇದಪ್ಪಾ ಕಾಮೆಡಿ…! ಅಶ್ವತ್ಥ ವೃಕ್ಷದ ಸುತ್ತ ಎರಡು ನಿಮಿಷ ಸುತ್ತು ಹಾಕಿಬಿಟ್ಟರೆ ಆರೋಗ್ಯ ವೃದ್ಧಿಯಾಗಿಬಿಡುತ್ತದಂತೆ.. ಉಳಿದ ಇಪ್ಪತ್ ಮೂರು ಗಂಟೆ ಐವತ್ತೆಂಟು ನಿಮಿಷ ಏನು ಮಾಡಬೇಕು ಸ್ವಾಮಿ? ಅದಿಷ್ಟೂ ಇಂಗಾಲದ ಡೈ ಆಕ್ಷೈಡ್ ಎರಡು ನಿಮಿಷದಲ್ಲಿ ಇಂಗಿ ಹೋಗಿಬಿಡುವುದೋ?
    ಖಾಯಿಲೆಗೆ ಔಷಧಿಯಿದೆ. ಮೂಢನಂಬಿಕೆಗೆ ನಿಮ್ಹಾನ್ಸ್ ಕೌನ್ಸಿಲಿಂಗೇ ಮದ್ದು…!
    ನವವಿವಾಹಿತರು ಮಾತ್ರ ಯಾಕೆ? ಉಳಿದವರೇಕಲ್ಲ? ಎಲ್ಲರೂ ಸುತ್ತಿ ಎನ್ನದೇ ನವವಿವಾಹಿತರು ಮದುವೆಯಾಗದವರು ಮಾತ್ರ ಯಾಕೆ ? ವೈಜ್ಞಾನಿಕವಾಗಿ ಏನನ್ನೂ ಸಾಧಿಸುವ ಪ್ರಯತ್ನ ಮಾಡಲಾಗಿಲ್ಲ ಈ ಪ್ಯಾರಾದಲ್ಲಿ. ಹಾಗೆಯೇ ಮೇಲಿನ ಪ್ಯಾರಾಗಳಿಗೂ ಈ ಕೊನೆಯ ಪ್ಯಾರಾಕ್ಕೂ ಸಂಬಂಧವಿಲ್ಲದೇ ಹಾರಲಾಗಿದೆ. ಇದೊಂದು ಕೆಟ್ಟ ಬರಹ ಪದ್ಧತಿ.
    ಲೇಖನ ಬರೆದ ಮಹಾನುಭಾವರು ತಲೆತಪ್ಪಿಸಿಕೊಂಡಿದ್ದಾರೆ. ತಾವು ಇಂತಹವರು ಘೋಷಿಸುವ ದುರ್ವಾಕ್ಯಗಳನ್ನು ಅನುಮೋದಿಸುತ್ತೀರಿ. ಇದು ಸಮಾಜದ್ರೋಹವಾದ್ದರಿಂದ ನಾನು ಇಂತಹವನ್ನು ವಿರೋಧಿಸುತ್ತೇನೆ.

    ಉತ್ತರ
  9. ರವಿ's avatar
    ರವಿ
    ಸೆಪ್ಟೆಂ 3 2011

    ಕೊನೆಯ ಪ್ಯಾರಾ ಇಡೀ ಲೇಖನ ಸೃಷ್ಟಿಸಿದ ಕುತೂಹಲವನ್ನು ಟುಸ್ಸೆನಿಸುತ್ತದೆ .. ಅರಳೀ ಕಟ್ಟೆ ಹಾಗೂ ಅದರ ಪ್ರದಕ್ಷಿಣೆಯ ಸಮರ್ಥನೆಗೆ ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ ಇಷ್ಟೆಲ್ಲಾ ಪೀಠಿಕೆ ಬೇಡವಿತ್ತು..

    ಉತ್ತರ
  10. ರವಿ ಕುಮಾರ್ ಜಿ ಬಿ's avatar
    ರವಿ ಕುಮಾರ್ ಜಿ ಬಿ
    ಸೆಪ್ಟೆಂ 3 2011

    ನಿಮ್ಜೊತೆ ಮತಾಡೋಕ್ಕಾಗಲ್ಲ ಬಿಡಿ. ನಿಮಗೆ ಎಲ್ಲವೂ ಮೂಡನಂಬಿಕೆ ಅನ್ನಿಸುತ್ತೆ (ನಮ್ಮದೆಲ್ಲ ಮೂಡನಂಬಿಕೆ , ಬೇರೆಲ್ಲ ವೈಜ್ಞಾನಿಕ !) ! ಎಲ್ಲೂ ಇಂಗಾಲ ಪೂರ್ತಿ ಕರಗಿ ಹೋಗಿ ಅರೋಗ್ಯ ಸಿದ್ದಿಸುತ್ತೆ ಅಂತ ಹೇಳಿಲ್ಲ , ಆರೋಗ್ಯವ್ರುದ್ದಿಗೆ ಸಹಕಾರಿ ಅಂತ ಮಾತ್ರ ಹೇಳಿದ್ದು, ಹಾಗೆಯೇ ನವವಿವಾಹಿತರು ಮದುವೆಯಾಗದವರು ಮಾತ್ರವಲ್ಲ ಎಲ್ಲರೂ ಸುತ್ತಬಹುದು ಆರೋಗ್ಯವ್ರುದ್ದಿಗಾಗಿ(ಪೂರ್ತಿ ಖಾಯಿಲೆ ವಾಸಿಯಗತ್ತೆ ಅಂತ ಅರ್ಥ ಅಲ್ಲ). ಬೇಕೆಂದರೆ ನೀವೂ ಟ್ರೈ ಮಾಡಿ ನೋಡಿ, ಬೇರೆ ಮರದ ಕೆಳಗೆ ನಿಂತಿದ್ದಕ್ಕಿಂತ ಅರಳಿ ಮರದ ಕೆಳಗೆ ನಿಂತಾಗ ಹೆಚ್ಚು ಹಾಯೆನಿಸುತ್ತದೆ.

    ಸ್ಪಷ್ಟನೆ: ಮೂಡನಂಬಿಕೆ ಗಳನ್ನೂ ನಾನೂ ವಿರೋಧಿಸುತ್ತೇನೆ , ಆದರೆ ಶಾಸ್ತ್ರಗಳೆಲ್ಲವೂ ಮೂದನಂಬಿಕೆಗಳಲ್ಲ ! ಇಂತಹ ಮೂಢ ನಂಬಿಕೆಗಳನ್ನ ನಾವು ಮೊದಲು ಬಿಡಬೇಕು, ಆಗ ಮಾತ್ರ ನಾವು ಮೂಡನಂಬಿಕೆ ಗಳನ್ನ ಹೋಗಲಾಡಿಸಬಹುದು.

    ಹಾಗೆಯೇ ನಿಮ್ಮ ಹೇಳಿಕೆಯನ್ನು ಈ ವಿಷಯದಲ್ಲಿ ಒಪ್ಪುತ್ತೇನೆ ಕೂಡ “ಮೇಲಿನ ಪ್ಯಾರಾಗಳಿಗೂ ಈ ಕೊನೆಯ ಪ್ಯಾರಾಕ್ಕೂ ಸಂಬಂಧವಿಲ್ಲದೇ ಹಾರಲಾಗಿದೆ. ಇದೊಂದು ಕೆಟ್ಟ ಬರಹ ಪದ್ಧತಿ.”

    ಇನ್ನು ನಾನು ಯಾರನ್ನೂ ,ಯಾರ ವಾಕ್ಯಗಳನ್ನೂ ಅನುಮೊದಿಸುತ್ತಿಲ್ಲ, ಅಗತ್ಯವೂ ಇಲ್ಲ ನನಗೆ.

    ಉತ್ತರ
  11. sriharsha's avatar
    sriharsha
    ಸೆಪ್ಟೆಂ 5 2011

    ರವಿ,
    ತಮ್ಮ ಅಜ್ಞಾನ ಮುಚ್ಚಿಕೊಳ್ಳಲಿಕ್ಕೆ ನನ್ನ ಹಟಮಾರಿತನವನ್ನು ಮುಂದಿಟ್ಟು ಸಿನಿಕರಾಗಬೇಡಿ. ಎರಡು ನಿಮಿಷ ಅರಳಿಕಟ್ಟೆ ಸುತ್ತುವುದರಿಂದ ಹೇಗೆ ಆರೋಗ್ಯ ವೃದ್ಧಿಯಾಗುತ್ತದೆ? ಸರಿಯಾಗಿ ಹೇಳಿ. ನವವಿವಾಹಿತರು ಸುತ್ತಬೇಕು ಅಂತ ಲೇಖಕರು ಹೇಳಿದ್ದನ್ನು ತಾವು ಏಕೆ ಇಗ್ನೋರುತ್ತಿದ್ದೀರಿ?
    ಮೂಢನಂಬಿಕೆಗಳನ್ನು ಎಷ್ಟು ಚೆನ್ನಾಗಿ ವಿರೋಧಿಸುತ್ತಿದ್ದೀರಿ ಅಂತ ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸುತ್ತದೆ ಬಿಡಿ! ನೀವು ಅವರ ವಾಕ್ಯಗಳನ್ನು ಅನುಮೋದಿಸುತ್ತಿದ್ದೀರಿ ಹಾಗೂ ಮೂಢನಂಬಿಕೆಯನ್ನು ಸಮರ್ಥಿಸುತ್ತಿದ್ದೀರಿ. ನಮ್ಮ ರಾಜಕಾರಣಿಗಳಂತೆ ಯಾಕೆ ವರ್ತಿಸುತ್ತಿದ್ದೀರಿ?

    ಉತ್ತರ
  12. ರವಿ ಕುಮಾರ್ ಜಿ ಬಿ's avatar
    ರವಿ ಕುಮಾರ್ ಜಿ ಬಿ
    ಸೆಪ್ಟೆಂ 5 2011

    ಆಯಿತು ಸ್ವಾಮೀ , ನೀವೇ ಸರಿ, ಖುಶೀನಾ?

    ಉತ್ತರ
  13. sriharsha's avatar
    sriharsha
    ಸೆಪ್ಟೆಂ 6 2011

    ವ್ಯಂಗ್ಯದಿಂದ ಬೇಡ ಮನಸ್ಸಿನಿಂದ ಒಪ್ಪಿಕೊಳ್ಳಿ.. ಖುಷಿಯಾಗುತ್ತದೆ. ಅದು ನಿಮ್ಮ ಆರೋಗ್ಯಕ್ಕೂ ಒಳ್ಳೆಯದು!

    ಉತ್ತರ
  14. LAKSHMI's avatar
    LAKSHMI
    ಫೆಬ್ರ 11 2013

    This word Is really correct . Not Blame ….

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments