ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 9, 2011

ಕಾರ್ಯಕರ್ತ

‍parupattedara ಮೂಲಕ

– ಪವನ್ ಪರುಪತ್ತೆದಾರ

ಊರಲೆಲ್ಲ ತಲೆಯ ಮೇಲೆ ಹಾರ್ನ್ ಹೊತ್ತ ಆಟೋ ಒಂದೇ ಡೈಲಾಗ್ ಅನ್ನು ಹೇಳುತ್ತಾ ತಿರುಗಾಡುತಿತ್ತು,ಮರಯದಿರಿ ಮತ ಬಾಂಧವರೆ ಮರೆತು ನಿರಾಶರಾಗದಿರಿ, ಈಗ ಮರೆತು ಮುಂದೆ ಯಾಕಾದರೂ ಇಂತಹ ತಪ್ಪು ಮಾಡಿದೆನೋ ಎಂದು ಮರುಗದಿರಿ, ನಿಮ್ಮ ಮತವನ್ನು ನಮ್ಮ ಕಮಲಣ್ಣನ ಪಾರ್ಟಿಯ ಅಭ್ಯರ್ಥಿಯಾದಂಥ ಬಡವರ ಬಂಧು ಧಿಮಂತ ನಾಯಕ ಶ್ರೀಮಾನ್ ಸಿದ್ದಣ್ಣ ನವರಿಗೆ ನೀಡಿ, ಸಿದ್ದಣ್ಣ ನವರಿಗೆ ಮತ ನಮ್ಮೂರಿನ ಜನತೆಗೆ ಹಿತ  ಇದನ್ನೇ ಮತ್ತೆ ಮತ್ತೆ ಅರಚುತ್ತ ಸಾಗುತಿದ್ದ ಆಟೋ ಒಳಗಿಂದ ಸುರೇಶ ಸಿದ್ದಣ್ಣನ ಹೆಸರಿನಲ್ಲಿರುವಂತಹ ಒಂದು pamplet ಅನ್ನು ಹಂಚುತಿದ್ದ, ಅದಕ್ಕಾಗಿ ಮಕ್ಕಳು ಆ ಆಟೋ ಹಿಂದೆಯೇ ಓಡುತ್ತಾ ಇದ್ದರು………

ಅಂಗಡಿ ಬೀದಿಯಲ್ಲಿ ಅಬ್ಧುಲ್ಲ ತನ್ನ ಒಂದು ಸಣ್ಣ ಗುಂಪನ್ನು ಕಟ್ಟಿಕೊಂಡು ಅಲ್ಲಿರುವ ಕರೆಂಟ್ ಕಂಬಗಳನೆಲ್ಲ ನೋಡುತ್ತಾ, ಅರೆ ಇಸ್ಕಿ ಕ್ಯಾ ರೆ ಕಮಲಣ್ಣನ ಪಾರ್ಟಿ ಅವ್ರು ಆಗಲೇ banner ಗೆ ಕಟ್ಬಿಟ್ಟಿ ಅವ್ರೆ. ನಮ್ದುಕೆ ಇನ್ನು ಎಲ್ಡು ಅಡಿ ಮೇಲಕ್ಕೆ ಕಟ್ಟೋಣ ಅಂತ ತನ್ನ ಶಿಷ್ಯನ್ನ ಕರೆದ, ಹೇ ಪಟ್ಟೆ ಅರೆ ಇದರ್ ಅಂತ ಕಂಬ ಹತ್ತಿಸಿ ಹಸ್ತಣ್ಣನ ಪಾರ್ಟಿ ಕಡೆ ಇಂದ ನಿಂತಿದ್ದ ಸನಾಉಲ್ಲ ನ ಫೋಟೋ ಸಮೇತ ಇರೋ ಹಸ್ತಣ್ಣನ ಪಾರ್ಟಿಗೆ ಮತ ನಮ್ಮೂರಿನ ಜನಕ್ಕೆ ಹಿತ. ಅಂತ ಇರೋ banner ಗಳನ್ನ ಕಟ್ಟಿಸ್ತ ಇದ್ದ. ಅಷ್ಟರಲ್ಲೇ ಅಲ್ಲಿದ್ದ ಕೆಲವರು ಗುಂಪು ಸೇರಿ ಇವರು ಮಾಡುತ್ತಾ ಇದ್ದ ಕೆಲಸವನ್ನು ಗಮನಿಸ್ತ ಇದ್ರು, ಅವರನ್ನ ನೋಡಿದ ಅಬ್ದುಲ್ಲ ಹೇ ಅಣ್ಣ ನಮಸ್ಕಾರ ನಮ್ಮ ನೆಚ್ಚಿನ ನಾಯಕ, ಬಡವರ್ಗೆ ಸಹಾಯ ಮಾಡೋದ್ರಾಗ ಎತ್ತಿದ ಕೈ ನಮ್ ಸನಾಉಲ್ಲಾದು. ನಿಮ್ಮದು ಎಲ್ಲರ್ದುಗೆ ಓಟು ನಮ್ದು ಹಸ್ತಣ್ಣ ಪಾರ್ಟಿ ಗೆ ಹಾಕಿ ಅಂತ ಭಾಷಣ ಮಾಡಿದ. ಅದೇ ಬೀದಿಲಿ ಹಾದು ಹೋಗುತ್ತಿದ್ದ ಕಮಲಣ್ಣನ ಪಾರ್ಟಿಯ ಒಬ್ಬ ವ್ಯಕ್ತಿ ಇದನ್ನ ನೋಡಿ ಮಖ ಕೆಂಪಗ ಮಾಡಿಕೊಂಡು ಹೋದ…….

ಬಸ್ ಸ್ಟ್ಯಾಂಡ್ ಹಿಂದಿನ ಛತ್ರದಲ್ಲಿ ತೆನೆಯಣ್ಣನ ಪಾರ್ಟಿಯ ಜೋಸೆಫ್ ಬಾಡೂಟದ ತಯಾರಿ ಮಾಡಿಸಿದ್ದ. ಬಂದವರಿಗೆಲ್ಲ ತರಹೇವಾರಿ ಮಾಂಸ ಭೋಜನ, ವಿಧ ವಿಧವಾದ ತಿಂಡಿಗಳು, ಜನ ಕಿಕ್ಕಿರಿದಿದ್ದರು. ಇದರ ಮಧ್ಯೆ ಅಂತೋನಿ ತನ್ನ ತಂಡದೊಂದಿಗೆ ಬಂದವರಿಗೆಲ್ಲ ಉಪಚಾರ ಮಾಡುತಿದ್ದ. ಅಷ್ಟರಲ್ಲೇ ಬಂದ ಪ್ರದೀಪ, ಅಂತೋನಿ ಅಣ್ಣ ಚಿಕೆನ್ ಖಾಲಿ ಆಗ್ತಾ ಬಂದಿದೆ ಜನ ಇನ್ನು ಬರ್ತಾನೆ ಇದ್ದಾರೆ ಅಂದ. ತಕ್ಷಣ ತನ್ನ ಜೇಬಿನಿಂದ 2000 ತೆಗೆದುಕೊಟ್ಟು ತಂದು ರೆಡಿ ಮಾಡಕ್ ಹೇಳೋ ಅಡುಗೆಯವರಿಗೆ, ಜೋಸೆಫ್ ಅಣ್ಣ ಊಟ ಸರಿಯಾಗಿ ಹಾಕಿಸಿಲ್ಲ ಅಂತ ಮಾತು ಬರಬಾರದು ಅಂದ, 2000 ತೊಗೊಂಡ ಪ್ರದೀಪ ಚಿಕೆನ್ ಮಾರ್ಕೆಟ್ ಕಡೆ ಹೆಜ್ಜೆ ಹಾಕಿದ. ಚಿಕನ್ ತಿನ್ನಲು ಬಂದಿದ್ದ ಗಫಾರ್ ಸಾಭಿ ಮತ್ತೆ ಪ್ರಕಾಶ ಇವನ್ನೆಲ್ಲ ಗಮನಿಸುತ್ತ ನಿಂತಿದ್ದರು….

ಇಷ್ಟು ಮುನ್ನುಡಿ ಕೊಟ್ಟರೆ ಸಾಕು ನಿಮಗೆಲ್ಲ ಅರ್ಥವಾಗಿದೆ ಅಲ್ಲಿ ಚುನಾವಣೆ ನಡೆಯುತ್ತಿದೆ ಅಂತ, ಆದರೆ ಚುನಾವಣೆಯಲ್ಲಿ ನಡೆಯುವ ಬಿರುಸಿನ ಚಟುವಟಿಕೆಗಳಲ್ಲಿ ಕೆಲವರು ಆಟೋಗಳಲ್ಲಿ  ಅರಚುತ್ತ, ಇನ್ನು ಕೆಲವರು banner ಗಳು ಕಟ್ಟಿ ಕರಪತ್ರಗಳನ್ನು ಹಂಚುತ್ತಾ, ಮತ್ತೆ ಕೆಲವರು ಮತದಾರರಿಗೆಲ್ಲ ಊಟ ತಿಂಡಿಗಳನ್ನು ಹಾಕುತ್ತ,  ಬೀದಿಗಳಲ್ಲಿ ಅಲೆಯುತ್ತ ತಮ್ಮ ನೆಚ್ಚಿನ ನಾಯಕನ ಬಗ್ಗೆ ಪ್ರಚಾರ ಮಾಡುತ್ತ ಇರುತ್ತಾರೆ. ಇದರ ಮಧ್ಯೆ ಒಬ್ಬಬ್ಬರು ಒಂದೊಂದು ಪಾರ್ಟಿ, ಆದ್ದರಿಂದ ಬೇರೆ ಪಾರ್ಟಿ ಯವರು ಸ್ನೇಹಿತರಾದರು ಎದುರು ಬಂದರು ಮಾತನಾಡಿಸುವುದಿಲ್ಲ. ಆ ಪಾರ್ಟಿ ಯವರು ಏನು ಮಾಡುತಿದ್ದಾರೆ ಯಾವ ತಂತ್ರಗಾರಿಕೆಯನ್ನು ಹೆಣೆಯುತ್ತಿದ್ದಾರೆ ಅಂತೆಲ್ಲ ನೋಡಲು ಗೂಢಚಾರರು ಇರುತ್ತಾರೆ. banner ಗಳು ಕಟ್ ಔಟ್ ಗಳು ಇಂತವನ್ನು ಮರದ ಕೊಂಬೆಯ ಮೇಲೆ, ಎಲೆಕ್ಟ್ರಿಕ್ ಕಂಬ, ಇಂತದ ಅಪಾಯಕಾರಿ ಜಾಗಗಳೆಲ್ಲ ಹತ್ತಿ ಕಟ್ಟುವವರು ಇರುತ್ತಾರೆ, ಇವುಗಳ ನಡುವೆ ಹೊಡೆದಾಟ ಬದೆದಾಟ ಮುಂತಾದವೆಲ್ಲ ನಡೆದು ಒದೆ ತಿಂದು ಆಸ್ಪತ್ರೆ ಸೇರುವ ವ್ಯಕ್ತಿಗಳು ಇರುತ್ತಾರೆ. ಇವರೆಲ್ಲ ಯಾರು?? ಇವರೇ ನಿಷ್ಠಾವಂತ ಕಾರ್ಯಕರ್ತರು ತಮ್ಮ ನಾಯಕರು ಎಂತಹ ಶಕುನಿಗಳು ಎಂಬುದನ್ನೇ ಅರಿಯದ ಪಾಪದ ಪ್ರಾಣಿಗಳು.

ಸುರೇಶ, ಅಂತೋನಿ, ಗಫಾರ್, ಅಬ್ದುಲ್ಲ, ಪ್ರದೀಪ ಎಲ್ಲರು ಚುನಾವಣೆ ಇಲ್ಲದಾಗ ಸಂಜೆ ತಮ್ಮ ಕೆಲಸಗಳೆಲ್ಲ ಮುಗಿದ ಮೇಲೆ ಅರಳಿ ಕಟ್ಟೆ ಮೇಲೆ ಕೂತು ಹರಟೆ ಹೊಡೆಯುವುದು, ಬೇಸಿಗೆಯಲ್ಲಿ ನಾಟಕಗಳನ್ನು ಆಡುವುದು, ಒಬ್ಬರ ಮನೆಯಲ್ಲಿ ಏನಾದ್ರು ಶುಭ ಕಾರ್ಯವೋ ಸಾವೋ ಆದರೆ ಸಹಾಯ ಮಾಡುವುದು, ಮುಂತಾದುವು ನಡೆಯುತ್ತಿತ್ತು. ಆದರೆ ಚುನಾವಣಾ ಬಂದೊಡನೆ ಆ ಸಂಬಂಧಗಳೆಲ್ಲ ಹಾಳಾಗಿಬಿಟ್ಟಿವೆ. ಚುನಾವಣೆ ಮುಗಿದ ಮೇಲು ಸಹ ಎಷ್ಟೋ ದಿನ ಒಬ್ಬರನ್ನೊಬ್ಬರು ಮಾತನಾಡಿಸುವುದಿಲ್ಲ. ಇಷ್ಟಕ್ಕೂ ಗೆದ್ದ ನಾಯಕರೆ ತಮ್ಮ ತತ್ವ ಸಿದ್ಧಾಂತ ಗಳಿಗೆ ವಿರುದ್ಧವಾಗಿ ಕೇವಲ ಅಧಿಕಾರ ದಾಹದಿಂದ ಪಕ್ಷಾಂತರ ಮಾಡುತ್ತಾರೆ. ಆದರೆ ನಮ್ಮ ಕಾರ್ಯಕರ್ತರು ಬೇರೆ ಪಕ್ಷದವರ ಜೊತೆ ಹೊಡೆದಾಟ ಬಡಿದಾಟ ಎಲ್ಲ ಮಾಡಿಕೊಂಡಿರುತ್ತಾರೆ ಅವರು ಮತ್ತೆ ಒಂದಾಗಲು ಸಾಧ್ಯವೇ ಇಲ್ಲ. ಹೀಗೆ ಮುಂದುವರಿದರೆ ಮುಂದೊಂದು ದಿನ ನಾನು ಇಂತಹ ಪಕ್ಷದ ಕಾರ್ಯಕರ್ತ ಅಂತ ಹೇಳಿಕೊಳ್ಳೋಕೆ ಯಾರಿಗದ್ರು ಭಯವಾಗುತ್ತದೆ. ರಾಜಕಾರಿಣಿಗಳು ಬಹಳ ಬೇಗ ಅರ್ಥ ಮಾಡಿಕೊಳ್ಳಬೇಕು

ಕಾರ್ಯಕರ್ತರೆಂದರೆ ಹೆಂಡ ಮತ್ತು ಬಿರಿಯಾನಿಗಾಗಿ ಬರುವವರು ಮಾತ್ರವಲ್ಲ
ತಮ್ಮ ಕೆಲಸ ಕಾರ್ಯಗಳೆಲ್ಲಾ ತೊರೆದು ಪಕ್ಷಕ್ಕಾಗಿ ದುಡಿಯುವವರು

ಕಾರ್ಯಕರ್ತರೆಂದರೆ ಎಂಜಲು ಕಾಸಿಗೆ ಅಸೆ ಪಡುವ ನಾಯಿಗಳಲ್ಲ
ತಮ್ಮ ದಿನಗೂಲಿ ಸಿಗದಿದ್ದರೂ ತಮ್ಮ ನಾಯಕನಿಗಾಗಿ ದುಡಿಯುವರು

ಕಾರ್ಯಕರ್ತರೆಂದರೆ ಬರೀ ವ್ಯಕ್ತಿಗೆ ಸೀಮಿತವಲ್ಲ
ಪಕ್ಷದ ತತ್ವ ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟವರು

ಅಂದ ಹಾಗೆ ನಾ ಒಂದು ವಿಷಯ ಹೇಳೋದು ಮರೆತಿದ್ದೆ. ನಾನು ಸಹ ಕೆಲ ದಿನಗಳ ಹಿಂದಿನ ತನಕ ಒಬ್ಬ ನಿಷ್ಟಾವಂತ ಕಾರ್ಯಕರ್ತನಾಗಿದ್ದೆ….. !!!!!!

*******************

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments