ನೊಂದ ಹುಡುಗಿಯ ಡೈರಿಯಿಂದ…
– ವಿದ್ಯಾ ರಮೇಶ್
ದೇವರೆ,
ಇದೊ ನಿನಗೊಂದು ಪತ್ರ. ಏನು ಈ ಹುಚ್ಚು ಹುಡುಗಿ ನನಗೆ ಪತ್ರ ಬರೆಯುತ್ತಿದ್ದಾಳೆ ಎಂದುಕೊಳ್ಳುತ್ತಿದ್ದೀಯ? ಏನು ಮಾಡಲಿ, ನಿನ್ನ ಜೊತೆ ಯಾವಗಲೊ ಒಂದು ಸರತಿ ಸಂಪರ್ಕಿಸುವ ನಾನು,
ಒಂದೇ ಕ್ಷಣದಿ ಎಲ್ಲಾ ಹೇಳಲು ಹೇಗೆ ಸಾಧ್ಯ? ಅದು ಅಲ್ಲದೆ ನಿನಗೆ ಎಲ್ಲಾ ಕೇಳುವ ತಾಳ್ಮೆಯಾದರು ಎಲ್ಲಿದೆ? ಎಷ್ಟೋ ಜನರ ಕೋರಿಕೆಗಳನ್ನ ನೋಡ್ಕೊಬೇಕು ನೀನು.., ಅಂತಹದರಲ್ಲಿ ನನ್ನ ನಿಧಾನಗತಿಯಲ್ಲಿ ಹೇಳುವ ಮಾತುಗಳ ಕೇಳಿಸಿಕೊಳ್ಳಲು ಸಧ್ಯವೆ ನಿನಗೆ? ಕಂಡಿತಾ ಇಲ್ಲ. ಇನ್ನು ನೀನು ಈ ಪತ್ರವನ್ನೂ ಓದ್ತಿಯಾ ಅಂತ ನಾ ಅಂದುಕೊಂಡಿಲ್ಲ…ಹಾಗೆ ಅಂದುಕೊಳ್ಳುವುದು ಮೂರ್ಖತನ ಅಂತಲೂ ಗೊತ್ತು. ಆದ್ರೇನು ಮಾಡ್ಲಿ, ಹೇಗಾದರು ನಿನಗೆ ಕನಿಕರ ಬಂದೋ ಏನೊ ಒಮ್ಮೆ ಈ ಪತ್ರ ಓದಿ ನನ್ನ ಮನಸ್ಥಿತಿ ತಿಳಿದಿಕೊಳ್ತಿಯೇನೋ ಅನ್ನೊ ಒಂದು ಚೂರು ನಂಬಿಕೆ…, ಅದಕ್ಕೆ ನಿನಗೆ ಪತ್ರ ಬರೆಯುತಿರುವುದು…
ನಿನಗೆ ತಿಳಿದಿದೆ ಅಲ್ವ ದೇವ್ರೆ, ನಾನು ನಿನ್ನನ್ನು ಜಾಸ್ತಿ ಏನೂ ಕೇಳಿಕೊಳ್ಳುವುದಿಲ್ಲ. ಅಲ್ಲದೆ ನಿನ್ನ ಬಳಿ ಬರುವುದು ನಾನು ಎಂದೊ ಒಂದು ದಿನ, ಯಾವುದೋ ಹಬ್ಬದಂದು. ಆಗ “ಎಲ್ಲರನ್ನು ಚೆನ್ನಾಗಿ ಇಡು” ಅಥವಾ ಪರೀಕ್ಷೆಗಳು ಹತ್ತಿರ ಬರುತಿದ್ದರೆ “ಓದು ಚೆನ್ನಾಗಿ ಆಗಲಿ, ಪರೀಕ್ಷೆ ಸುಲಭವಾಗಿ ಇರಲಿ” ಎಂದು ಕೇಳಿಕೊಳ್ಳುತೀನಿ. ಅದು ಬಿಟ್ಟು ಬೇರೆ ಏನಾದರು ಕೇಳಿರುವೆನೇನು? ಬೆಳಗೆ ಎದ್ದಾಗ ಒಮ್ಮೆ ನಿನ್ನ ಆ ಫೋಟೊ ನೋಡಿದರೆ ಮತ್ತೆ ನಿನ್ನ ನೋಡುವುದು ಮಾರನೆ ದಿನವೇ! ಇದೇ ನಿನಗೆ ಕೋಪವನ್ನುಂಟು ಮಾಡುತಿದೇಯ? ಮನಸ್ಸಿನಲ್ಲಿರುವ ಭಕ್ತಿ ಸಾಲದೆ? ಬೂಟಾಟಿಕೆಗಾಗಿ ನಡೆಸುವವರ ಭಕ್ತಿಯೇ ನಿನಗೆ ಮೆಚ್ಚೆ?
ಮಧ್ಯಮ ವರ್ಗದಲ್ಲಿದ್ದರೂ ನಿನ್ನ ಎಂದೂ ಇಶ್ವರ್ಯಕ್ಕಾಗಿ ಕೇಳಿಲ್ಲ. ನನ್ನನ್ನು ಸಿರಿಯುಳ್ಳವರ ಮನೆಯಲ್ಲಿ ಹುಟ್ಟಿಸಲಿಲ್ಲವಲ್ಲ ಎಂದು ದೂಡಿಲ್ಲ.., ಅಂತಹದರಲ್ಲಿ ಇದ್ದ ಅಲ್ಪ ಸ್ವಲ್ಪ ಖುಷಿಗೂ ಕಲ್ಲೊಡೆಯುವುದೆ ನೀನು? ಸಂತೊಷವ ಬಯಸಲೇ ಬಾರದೆ ನಾನು? ಬಯಸಬಾರದಂತಾದರೆ ನಾನು ಮಾಡಿರುವ ತಪ್ಪಾದರೂ ಏನು?





