ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 13, 2011

5

ಅಶ್ವಮೇಧ ಯಾಗ…

‍ನಿಲುಮೆ ಮೂಲಕ

– ವೇದಸುಧೆ

ಅಶ್ವಮೇಧ ಯಾಗ: ಶತಪಥ ಬ್ರಾಹ್ಮಣದಲ್ಲಿ ಅಶ್ವಮೇಧದ ಬಗ್ಗೆ ಹೇಳಿದೆ…….. “ಅಶ್ವಂ ಇತಿ ರಾಷ್ಟ್ರಂ” ಅದರ ವಿವರಣೆ ಹೀಗಿದೆ. ಶ್ವ: ಅಂದರೆ ನಾಳೆ. ಅಶ್ವ: ಅಂದರೆ ಯಾವುದಕ್ಕೆ ನಾಳೆ ಇಲ್ಲವೋ ಅದು.ಯಾವುದಕ್ಕೆ ನಾಳೆ ಎನ್ನುವುದು ಇಲ್ಲವೋ ಅದಕ್ಕೆ ನಿನ್ನೆ ಎಂಬುದೂ ಇಲ್ಲ. ಅಂದರೆ ಯಾವುದು ನಿರಂತರವಾಗಿ ಇದ್ದೇ ಇರುತ್ತದೋ ಅದಕ್ಕೆ ನಿನ್ನೆ ನಾಳೆಗಳಿಲ್ಲ.ಯಾವುದಕ್ಕೆ ನಿನ್ನೆ ನಾಳೆಗಳಿರುತ್ತದೆ ಎಂದರೆ ಯಾವುದುಶಾಶ್ವತ ವಲ್ಲವೋ ಅದಕ್ಕೆ ಇರುತ್ತದೆ. ನಿನ್ನೆ ಇತ್ತು, ಇವತ್ತು ಇದೆ. ನಾಳೆ ಗೊತ್ತಿಲ್ಲ ಅಂದರೆ ಅದು ಶಾಶ್ವತವಲ್ಲ ಎಂದಾಯ್ತು.ಯಾವುದು ನಿನ್ನೆ ಇತ್ತು, ಇವತ್ತೂ ಇದೆ, ನಾಳೆಯೂ ಇರುತ್ತದೋ ಅದು ಮಾತ್ರ ಶಾಶ್ವತ.ಯಾವುದು ನಿರಂತರವಾಗಿರುತ್ತದೆ, ಅದು ಅಶ್ವ.ಆದ್ದರಿಂದಲೇ “ಅಶ್ವಂ ಇತಿ ರಾಷ್ಟ್ರಂ” ನಾನು ಇವತ್ತು ಇದ್ದೀನಿ, ನಾಳೆ ಗೊತ್ತಿಲ್ಲ.ಆದರೆ ರಾಷ್ಟ್ರಶಾಶ್ವತ.[“ದೇಹ ನಶ್ವರವೆಂದು, ದೇಶಶಾಶ್ವತವೆಂದು, ನಶ್ವರವುಶಾಶ್ವತಕೆ ಮುಡಿಪಾಗಲೆಂದು” ಎಂಬ ಗೀತೆ ಕೇಳಿರುವೆ] ನಾವೆಲ್ಲಾ ಪ್ರಜೆಗಳು ಇಂದು ಇದ್ದೀವಿ. ಇನ್ನೊಂದು ಐವತ್ತು ವರ್ಷ ನಾವು ಇರಬಹುದೇನೋ , ಮತ್ತೆ ಬೇರೆ ಪ್ರಜೆಗಳ ಹುಟ್ಟು, ಸಾವು, ಇದೆಲ್ಲಾ ನಡೆಯುತ್ತಲೇ ಇರುತ್ತದೆ.ಎಷ್ಟೋ ತಲೆಮಾರು ಕಳೆಯುತ್ತಲೇ ಇರುತ್ತದೆ ,ಅದರೆ ರಾಷ್ಟ್ರ ಮಾತ್ರ ನಿರಂತರ. ನಿರಂತರವಾಗಿರುವ ಭೂಮಿ ರಾಷ್ಟ್ರ. ಇಂದು ಇದ್ದು ನಾಳೆ ಇಲ್ಲಾವಾಗುವವರು ನಾವು ನೀವು.

ಇನ್ನು “ಮೇಧ” ಎಂದರೆ ” ಸಂಗಮೇ” ಅಂದರೆ ಒಟ್ಟು ಗೂಡಿಸು.ಎಂದಾಗ ರಾಷ್ಟ್ರವನ್ನು ಒಟ್ಟು ಗೂಡಿಸಲು ಮಾಡುವ ಕಾರ್ಯಕ್ರಮಗಳೆಲ್ಲಾ ” ಅಶ್ವಮೇಧ ಯಾಗವೇ” ಎಂದಂತಾಯ್ತು. ಎಂತಹಾ ಶ್ರೇಷ್ಠವಾದ ಅರ್ಥ ಇದೆಯಲ್ಲವೇ?. ಅಂದರೆ ವೇದಕ್ಕೆ ಸರಿಯಾದ ಅರ್ಥವಿದೆ,ಆದರೆ ನಾವು ಸರಿಯಾಗಿ ಅರ್ಥೈಸದೆ ತಪ್ಪಾಗಿ ಅರ್ಥೈಸಿದ್ದೇವೆ.
ಗೋಮೇಧ: ಗೋಮೇಧ ಎಂದಾಕ್ಷಣ ಗೋವಿನ ಬಲಿ ಎಂದು ತಪ್ಪಾಗಿ ಅರ್ಥೈಸಲಾಗಿದೆ. ಆದರೆ ಗೋ ಎಂದರೆ ಹಸು ಎಂದಷ್ಟೇ ಅಲ್ಲ. ಯಾಸ್ಕರ ಪ್ರಕಾರ ಗೋ ಎಂದರೆ ” ಇಂದ್ರಿಯ ” ಎಂದೂ ಅರ್ಥವಿದೆ.” ವಾಕ್” ವಾಣಿ ಎಂದೂ ಅರ್ಥವಿದೆ.ಇಲ್ಲಿ ಗೋಮೇಧ ಎಂದರೆ “ವಾಕ್ ಸಂಯಮ” ಎಂದು ಅರ್ಥ. ಮಾತನ್ನು ನಿಯಂತ್ರಣದಲ್ಲಿಡು ಎಂದು ಅರ್ಥ. ಅಂದರೆ ವಾಕ್ ಸಂಯಮ ಯಜ್ಞಕ್ಕೆ ಗೋಮೇಧಾ ಎಂದು ಹೆಸರು.ಗೋಮೇಧಾ ಎಂದರೆ ಹಸುವನ್ನು ಬಲಿಕೊಡುವ ಯಜ್ಞವಲ್ಲ.ವೇದಗಳ ಮೂಲ ಸಿದ್ಧಾಂತವೇ ಅಹಿಂಸೆಯಾದ್ದರಿಂದ ಈ ಅರ್ಥಗಳು ನಾವು ಹುಡುಕಿದರೆ ಸಿಗುತ್ತವೆ.ಮಾತನ್ನು ಹೇಗೆ ಆಡಬೇಕೆಂದೂ ವೇದದಲ್ಲಿಯೇ ಹೇಳಿದೆ. “ಹಿಟ್ಟನ್ನು ಜರಡಿ ಆಡಿದಂತೆ ಜರಡಿಯಾಡಿ ಮಾತನಾಡು” ಎಂದು ಹೇಳಿದೆ. ಹಿಟ್ಟನ್ನು ಜರಡಿಯಾಡಿ ಕಸ ಕಡ್ಡಿ ತೆಗೆದು ನಂತರವಷ್ಟೇ ರೊಟ್ಟಿ ಮಾಡುವುದಿಲ್ಲವೇ ಹಾಗೆ ಮಾತನ್ನು ಆಡುವ ಮುಂಚೆ ಜರಡಿಯಾಡಿ ಮಾತನಾಡು. ಅಂದರೆ ಮಾತನಾಡುವ ಮುನ್ನ ನಾವಾಡುವ ಮಾತು ಸತ್ಯವೇ, ಎಂದು ತಿಳಿದಿರಬೇಕು.ಇದು ಮೊದಲನೆಯ ಹಂತ. ಎರಡನೆಯದು “ಪ್ರಿಯವೇ” . ನಾನಾಡುವ ಮಾತು ಬೇರೆಯವರಲ್ಲಿ ದ್ವೇಶ ಉಂಟುಮಾಡುತ್ತದೋ, ಉದ್ವೇಗ ಉಂಟುಮಾಡುತ್ತದೋ, ಅಥವಾ ಪ್ರಿಯವಾಗುತ್ತದೋ , ಹಿತವಾಗುತ್ತದೋ ಎಂಬುದನ್ನು ಆಲೋಚಿಸಿ ನಂತರ ನಮ್ಮ ಬಾಯಿಂದ ಮಾತು ಹೊರಬರಬೇಕು. ಈಬಗ್ಗೆ ನಾವು ಯೋಚಿಸಿದ್ದೇವೆಯೇ?

ಈ ಒಂದು ಮಾತಿನ ನಿಯಂತ್ರಣವಿದ್ದರೆ ಮನೆಯಲ್ಲಿ, ಸಮಾಜದಲ್ಲಿ, ದೇಶದಲ್ಲಿ ಅಶಾಂತಿ ಮೂಡುವುದೇ ಇಲ್ಲ. ಮಾತನಾಡುವ ಮುಂಚೆ ಅದು ಸತ್ಯವೇ,ಪ್ರಿಯವೇ, ಹಿತವೇ ಎಂದು ಆಲೋಚಿಸಿ ಮಾತನಾಡಿದರೆ ಸಮಾಜದಲ್ಲಿ ಸಾಮರಸ್ಯಕ್ಕೆ ಬಂಗ ಬರುವುದಿಲ್ಲ.ಸತ್ಯವೂ, ಪ್ರಿಯವೂ, ಹಿತವೂಆದ ಮಾತನ್ನಾಡಿದರೆ ಯಾರಿಗೆ ಇಷ್ಟವಾಗುವುದಿಲ್ಲ? ಭದ್ರೈಷಾಂ ಲಕ್ಷ್ಮೀರ್ನಿಹಿತಾಧಿವಾಚಿ”ಮಂಗಳಕರವಾದ ಸಂಪತ್ತು ,ಶ್ರೇಯಸ್ಕರವಾದ ಹಿತ ಅಂತಹಾ ಮಾತಿನಲ್ಲಿ ನೆಲೆಗೊಂಡಿದೆ. ಬ್ಯಾಂಕಿನಲ್ಲಿರುವ ಡಿಪಾಸಿಟ್ ನಮ್ಮನ್ನು ಕಾಪಾಡುವುದಿಲ್ಲ. ನಿಜವಾದ ಸಂಪತ್ತು ನಮ್ಮ ಮಾತಿನಲ್ಲಿದೆ. ಮಾತು ಸರಿಯಾಗಿದ್ದಲ್ಲಿ ಸಂಪತ್ತನ್ನು ಗಳಿಸುವುದು ಕಷ್ಟವಿಲ್ಲ.ಆದರೆ ಮಾತು ಸರಿಯಿಲ್ಲದಿದ್ದಾಗ ಇರುವ ಸಂಪತ್ತನ್ನೂ ಕಳೆದುಕೊಳ್ಳಬೇಕಾಗುತ್ತದೆ.ಹೀಗೆ ಜರಡಿಯಿಂದಆಡಿಸಿ ಮಾತನಾಡಬೇಕು, ಇದನ್ನು ವಾಕ್ ಸಂಯಮ ಎನ್ನುವರು. ವಾಕ್ ಸಂಯಮ ಯಜ್ಞಕ್ಕೆ ಗೋಮೇಧಾ ಯಜ್ಞ ಎಂದುಕರೆದರು.ಆದರೆ ಅದನ್ನು ಹಸುವನ್ನು ಬಲಿಕೊಡುವ ಒಂದು ಯಜ್ಞಎಂದು ತಪ್ಪಾಗಿ ಅರ್ಥೈಸಿ ಹಸುವನ್ನು ಬಲಿಕೊಟ್ಟು ಅದರ ವಪೆಯನ್ನು ಯಜ್ಞಕ್ಕೆ ಹಾಕಿ, ಇನ್ನು ಯಜ್ಞಕ್ಕೆ ಗೋಬಲಿ ಕೊಟ್ಟಮೇಲೆ ಮಾಂಸವನ್ನು ತಿನ್ನುವುದರಲ್ಲಿ ತಪ್ಪೇನು, ಎಂದೆಣಿಸಿ ಮಾಂಸವನ್ನೂ ಭಕ್ಷಿಸಿದರು.ಇದಕ್ಕಿಂತ ಮೂರ್ಖತನ ಬೇರೊಂದಿದೆಯೇ? ಇಂತಾ ಅನರ್ಥ ಎಲ್ಲಿಯವರೆಗೆ ಬೆಳೆದಿದೆ ಎಂದರೆ “ಗೋಘ್ನ” ಎಂಬ ಮಾತಿದೆ. ಇದಕ್ಕೆ ಏನು ಅರ್ಥೈಸಿದ್ದಾರೆಂದರೆ ಮನೆಗೆ ಬಂದ ಅಥಿತಿಗಳಿಗೆ ಊಟದಲ್ಲಿ ಗೋಮಾಂಸ ಬಡಿಸು. ಗೋಘ್ನ ಎನ್ನುವುದಕ್ಕೆ ಇನ್ನೊಂದು ಅರ್ಥ ಗೋವಿನ ಉತ್ಪತ್ತಿ , ಎಂದರೆ ಹಾಲು ಮೊಸರು, ತುಪ್ಪ ಬಡಿಸಿ ಸತ್ಜರಿಸು ಎಂದು ಅರ್ಥೈಸುವ ಬದಲು ಗೋಮಾಂಸ ಬಡಿಸು ಎಂದು ಅರ್ಥೈಸಿದರು!

ಅಥಿತಿಯನ್ನು ಗೋವಿನಿಂದ ಉಪಚರಿಸಬೇಕೆಂದರೆ ಗೋ ಎಂದರೆ ವಾಕ್ ಎಂತಲೂ ಅರ್ಥವಿರುವುದರಿಂದ ಅಥಿತಿಯನ್ನು ಒಳ್ಳೆಯ ಹಿತವಾದ ಮಾತುಗಳಿಂದ ಉಪಚರಿಸು ಎಂದರ್ಥವಾಗುತ್ತದೆ. ದೊಡ್ದ ದೊಡ್ಡ ವಿಸ್ವಾಂಸರುಗಳೂ ಸಹ ಇದನ್ನು ತಪ್ಪು ತಪ್ಪಾಗಿ ಅರ್ಥೈಸಿದ್ದರ ಪರಿಣಾಮ ಬಹಳ ಅನರ್ಥಗಳು ಸಂಭವಿಸಿವೆ, ವೇದದ ಮುಖಕ್ಕೆ ಮಸಿ ಬಳಿಯುವಂತಹ ಕೆಲಸವಾಗಿದೆ. ಅಂದರೆ ಒಂದೊಂದುಶಬ್ಧವನ್ನೂ ಅರ್ಥಮಾಡಿಕೊಳ್ಳುವಾಗ ಮೂಲ ಸಿದ್ಧಾಂತವನ್ನು ಮರೆತಿದ್ದರಿಂದ ಇಂತಹಾ ಅನರ್ಥಗಳಾಗಿವೆ. ಅಂದರೆ ಮೂಲ ಸಿದ್ಧಾಂತವೇನು? ಯಜ್ಞವೆಂದರೆ ಅಹಿಂಸೆ. ಅದನ್ನೇ ಮರೆತು ಅರ್ಥಹುಡುಕಿದ್ದರಿಂದ ಬಹಳ ಅನರ್ಥಗಳು ಘಟಿಸಿರುವುದು ಸುಳ್ಳಲ್ಲ.

5 ಟಿಪ್ಪಣಿಗಳು Post a comment
  1. Kumar's avatar
    ಸೆಪ್ಟೆಂ 13 2011

    ಅರ್ಥಪೂರ್ಣವಾದ ಮಾತುಗಳು.
    “ಯದ್ ಭಾವಂ ತದ್ ಭವತಿ” ಎನ್ನುವಂತೆ, ವೇದಗಳಲ್ಲಿ ಅನರ್ಥ ಹುಡುಕಲೆಂದೇ ಹೊರಟವರು ಇಲ್ಲದ ಅರ್ಥ ಹುಡುಕಿದರು;
    ಏನು ಹೇಳಿದರೂ ಒಪ್ಪುವ ನಮ್ಮ ಭೋಳೇ ಸ್ವಭಾವದ ಜನ ಅದನ್ನು ಒಪ್ಪಿದರು!

    ನಮ್ಮೆಲ್ಲಾ ಶಾಸ್ತ್ರಗ್ರಂಥಗಳ ಸರಿಯಾದ ಅರ್ಥವನ್ನು ತಿಳಿಸುವ ಲೇಖನಗಳು, ಗ್ರಂಥಗಳು ಹೆಚ್ಚೆಚ್ಚು ಪ್ರಕಟಗೊಳ್ಳಬೇಕು ಮತ್ತು ಅವುಗಳಿಗೆ ಹೆಚ್ಚಿನ ಪ್ರಚಾರವನ್ನೂ ನೀಡಬೇಕು.

    ಉತ್ತರ
  2. sriharsha's avatar
    sriharsha
    ಸೆಪ್ಟೆಂ 13 2011

    ನೇರ ಪ್ರಶ್ನೆಗಳಿಗೆ ದಯವಿಟ್ಟು ನೇರ ಉತ್ತರ ಕೊಡಿ:

    1. {{ “ಯಾಸ್ಕರ ಪ್ರಕಾರ ಗೋ ಎಂದರೆ ” ಇಂದ್ರಿಯ ” ಎಂದೂ ಅರ್ಥವಿದೆ.” ವಾಕ್” ವಾಣಿ ಎಂದೂ ಅರ್ಥವಿದೆ.}}
    ವೇದದಲ್ಲಿ ಅಲ್ಲದೇ ಬೇರೆ ಎಲ್ಲಾದರೂ ‘ಗೋ’ ಬದಲಾಗಿ ಇಂದ್ರಿಯ ಎಂಬ ಅರ್ಥದಲ್ಲಿ ಉಪಯೋಗಿಸಲಾಗಿದೆಯೇ? ಅಲ್ಲದೇ ವೇದಗಳಲ್ಲೇ ಬೇರೆಡೆ ‘ಗೋ’ ವಿಗೆ ಸಮನಾಗಿ ಮೇಲ್ಕಂಡ ಅರ್ಥ ಬರುವಂತೆ ಹೇಳಲಾಗಿದೆಯೇ? ಹೇಳಿದ್ದರೆ ದಯವಿಟ್ಟು ಉಲ್ಲೇಖಿಸಿ. ಯಾಸ್ಕರ ಹೇಳಿಕೆಯನ್ನೂ ಬರೆದರೆ ಚೆನ್ನ.
    2. ಗೋ ಮೇಧಾ = ಮಾತಿನ ಕೊಲೆ ಎಂಬ ಅರ್ಥವೇ? ಮಾತಿನ ಯಜ್ಞ ಎನ್ನುವುದಾದರೆ ಗೋ ಯಜ್ಞ ಎಂದು ಯಾಕೆ ಕರೆಯಲಿಲ್ಲ?
    3. ಅಶ್ವಮೇಧ ಯಾಗ ಮಾಡುವುದೆಂದರೆ ರಾಜರು ಬೇರೆ ದೇಶಗಳ ಮೇಲೆ ದಂಡಯಾತ್ರೆ ಕೈಗೊಳ್ಳುತ್ತಿದ್ದರಲ್ಲವೇ? ಆಗ ನಡೆಯುವ ನರ ಸಂಹಾರಕ್ಕೆ ಯಾವ ಹೊಣೆಯನ್ನು ಬ್ರಾಹ್ಮಣವು ಹೊರುತ್ತದೆ? ಅಥವಾ ರಾಜರೇ ಈ ಬ್ರಾಹ್ಮಣವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರೇ? ಶ್ರೀಕೃಷ್ಣನೂ ಸಹ ಅಶ್ವಮೇಧಕ್ಕೆ ಪ್ರಚೋದನೆ ನೀಡಿದ. ವೇದಗಳ ತಳಹದಿ ಅಹಿಂಸೆಯಾಗಿದ್ದರೆ ಈ ರೀತಿ ಹಿಂಸೆಯ ಮೂಲಕ ದೇಶವನ್ನು ಒಗ್ಗೂಡಿಸುವುದು ಎಷ್ಟು ಸರಿ?
    4. ವೇದಕಾಲದಲ್ಲಿ ಗೋಮಾಂಸ ಭಕ್ಷಣೆ ಇತ್ತು ಎಂಬುದಕ್ಕೆ ಆಧಾರಗಳಿವೆ. ವೇದದಲ್ಲಿ ಹೇಳಿದ್ದು ಈ ಗೋಮಾಂಸ ಭಕ್ಷಣೆಯ ಬಗ್ಗೆ ಅಲ್ಲ ಎಂದು ಹೇಗೆ ಹೇಳುತ್ತೀರಿ?
    ಸಂಸ್ಕೃತದ ಬಗ್ಗೆ ಆಳ ಜ್ಞಾನ ಇಲ್ಲದೇ ಇವನ್ನು ಕೇಳುತ್ತಿದ್ದೇನೆ. ಪ್ರಾಮಾಣಿಕ ುತ್ತರ ಬರುತ್ತದೆಂದು ನಿರೀಕ್ಷಿಸುತ್ತಿದ್ದೇನೆ.

    ಉತ್ತರ
  3. ಕೃಷ್ಣಪ್ರಕಾಶ ಬೊಳುಂಬು's avatar
    ಕೃಷ್ಣಪ್ರಕಾಶ ಬೊಳುಂಬು
    ಸೆಪ್ಟೆಂ 14 2011

    ವೇದಸುಧೆ,
    ಇಂಥ ಅನರ್ಥಗಳು ಸ್ವತಃ ಸಂಸ್ಕೃತ ಕಲಿತು ವ್ಯಾಖ್ಯಾನ ಮಾಡಲೆಳಸದೆ ಪಾಶ್ಚಾತ್ಯ ವಿದ್ವಾಂಸರ ಮಾತೇ ನೈವೇದ್ಯವೆಂದುಕೊಂಡದ್ದರ ಪರಿಣಾಮವೂ ಆಗಿರಬಹುದು.

    ಉತ್ತರ
  4. sriharsha's avatar
    sriharsha
    ಸೆಪ್ಟೆಂ 15 2011

    ಈ ಸನಾತನ ಬಾಜಾ ಬಜಂತ್ರಿಗಳ ಹಣೇಬರಹವೇ ಇಷ್ಟು.
    ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವುದಿಲ್ಲ. ಮತ್ತೆ ಮೇಲೆ ಅದು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಇದು ತಪ್ಪಾಗಿದೆ ಎಂಬ ಸಮಝಾಯಿಶಿ ಬೇರೆ! ಪ್ರಶ್ನೆ ಕೇಳದೇ ಎಲ್ಲ ಒಪ್ಪಿಕೊಳ್ಳಬೇಕೆಂದು ಒತ್ತಾಯಿಸುವುದು ಮೂರ್ಖತನ.
    ಈ ವೇದಗಳೆಲ್ಲ ಜೊಳ್ಳು. ಇದರಲ್ಲೇನೂ ಇಲ್ಲ. ಜೊತೆಗೆ ಇವನ್ನು ಓದುವವರನ್ನೂ ಇವು ಟೊಳ್ಳಾಗಿ ಮಾಡುತ್ತವೆ ಎಂದು ಇದರಿಂದ ತಿಳಿಯುತ್ತದೆ. ವೇದಗಳೆಂಬ ಕಾಡು ನುಡಿಗಳನ್ನು ನಂಬಿ ಸುಮ್ಮನೆ ಹೊತ್ತು ಹಾಳುಮಾಡಿಕೊಳ್ಳುವುದು ಬೇಡ.

    ಉತ್ತರ
  5. Rajesh Gobat's avatar
    Rajesh Gobat
    ಡಿಸೆ 3 2011

    ಶ್ರೀಹರ್ಷರವರೇ… ಸಾವಧಾನವಿರಲಿ…ಯಾಕೆ ಈ ಆವೇಗ. ನೀವೇ ನಮ್ಮ ತನವನ್ನು ಗೌರವಿಸದಿದ್ದರೆ ಹೇಗೆ? ಭಾರತೀಯ ಸಂಸ್ಕೃತಿಯನ್ನು ತುಳಿದವರು ಭಾರತೀಯರಲ್ಲವೇ?? ಒಮ್ಮೆ ವೇದಗಳನ್ನು ಸರಿಯಾಗಿ ಅಧ್ಯನಿಸಿ ಬನ್ನಿ. ನಿಮ್ಮ ಪ್ರಶ್ನೆಗಳು ವೇದ ಮತ್ತು ಪಾರಮಾರ್ಥತೆಯನ್ನು ಅರ್ಧಂಬರ್ಧ ತಿಳಿದಂತವರದು. ಮೊದಲು ಜ್ಞಾನ ಸಂಪಾದಿಸಿ ನಂತರ ಈ ಉದ್ವೇಗದ ಮಾತುಗಳನ್ನಾಡಿ. ಮೊದಲು ನಮ್ಮ ಸಂಸ್ಕೃತಿಯನ್ನು ಗೌರವಿಸುವುದನ್ನು ಕಲಿಯಿರಿ. ಸುಮ್ಮನೆ ಯಾಕೆ ಅರ್ಥವಿಲ್ಲದ ಪ್ರಶ್ನೆಗಳಲ್ಲಿ ನಿಮ್ಮನ್ನು ನೀವು ಸುಟ್ಟುಕೊಳ್ಳುತ್ತಿರಿ. ವೇದಕಾಲದ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಂಡು ಮುಂದುವರೆಯಿರಿ. ವಂದನೆಗಳು..

    ಉತ್ತರ

Leave a reply to Rajesh Gobat ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments