ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಮಗು ಅರ್ಥ ಹೇಳುತ್ತಾನೆ…
ಬಣ್ಣದ ಬದುಕು 2
ಚಟುವಟಿಕೆಯ ಕಾರ್ಯಕ್ರಮಗಳು ಏನಿದ್ದರೂ, ತಂದೆಯವರು ಪ್ರಮುಖ ಕಾರ್ಯಕರ್ತರಲ್ಲೊಬ್ಬರಾಗಿರುವಾಗ, ನಮಗೆ ಸುದ್ದಿ ಸಿಗದಿರುತ್ತದೆಯೆ? ನನ್ನ ಜೊತೆಯವರೊಂದಿಗೆ ನಾನೂ ಅಲ್ಲಿ ಹಾಜರಾಗುತ್ತಿದ್ದೆ. ಮನೆಯಿಂದ ಕೋಳ್ಯೂರಿಗೆ ಇರುವ ನಾಲ್ಕು ಮೈಲು ದೂರವೇನು ಮಹಾ? ಬಯಲಿನ ತುದಿಗೆ ಬಂದು, ಇನ್ನೊಂದು ಬಯಲು ಕಳೆದ ಮೇಲೆ, ಹೊಳೆಯನ್ನು ದಾಟಿ, ಒಂದು ಗುಡ್ಡವನ್ನು ಏರಿ, ನಡುವೆ ಇದ್ದ ತಟ್ಟಿನಲ್ಲಿ ಅಷ್ಟು ದೂರ ನಡೆದು ಗುಡ್ಡ ಇಳಿದರೆ ಆಯಿತು. ಕೋಳ್ಯೂರ ದೇವಸ್ಥಾನ ಕಾಣಿಸುತ್ತದೆ.
ಅಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದರ ಒಂದು ಕೂಟ ನಡೆಯಲಿತ್ತು. ಬರಲಿರುವವರ ಹೆಸರುಗಳನ್ನು ಕೇಳಿದ ತರುವಾಯ ಎಂತಹ ರಸದೌತಣ ನಮಗಾಗಬಹುದು ಎಂದು ನಾನೂ ಯೋಚಿಸಿದ್ದೆ.
ಹಾಡುಗಾರಿಕೆ ಶ್ರೀ ಬಲಿಪ ನಾರಾಯಣ ಭಾಗವತರು (ಅವರಿಗೆ ರಾಜ್ಯ ಪ್ರಶಸ್ತಿ ದೊರೆತಿದೆ). ಅವರಿಗೆ ಸರಿಸಮರಾದ ಶ್ರೀ ಕೆಮ್ಮಣ್ಣು ನಾರ್ಣಪ್ಪಯ್ಯನವರ ಮೃದಂಗ-ಚೆಂಡೆಗಳು. ಅರ್ಥದಾರಿಗಳೂ ಅವರಂತೆ ಪ್ರಸಿದ್ಧರೇ. ಶ್ರೀ ಬಳ್ಳಮಜಲು ರಂಗಪ್ಪಯ್ಯ, ಕವಿ ಶ್ರೀಬಡಕಮೈಲು ಪರಮೇಶ್ವರಯ್ಯ, ಶ್ರೀ ಹೊಸಹಿತ್ಲು ಗಣಪತಿ ಭಟ್ಟರು, ಶ್ರೀ ಕುಂಜಾರು ರಾಮಕೃಷ್ಣಯ್ಯ, ದಿ. ಮಂಕುಡೆ ಬಳ್ಳುಕ್ರಾಯರು. ಇವರ ಅರ್ಥಗಳನ್ನು ಕೇಳಲೆಂದು ಸಾರಿಗೆ ಸಂಪರ್ಕ ಅಷ್ಟು ಸುಲಭವಲ್ಲದ ಆ ಕಾಲದಲ್ಲೂ ಎಷ್ಟೋ ದೂರದಿಂದ ಜನರು ಬರುತ್ತಿದ್ದರು.
ಕೂಟದ ದಿನ ಬಂದಿತು. ಪ್ರಸಂಗ: ನಂದಳಿಕೆ ಲಕ್ಷ್ಮೀ ನಾರ್ಣಪ್ಪಯ್ಯ ಅವರು (ಮಹಾಕವಿ ಮುದ್ದಣ್ಣ) ರಚಿಸಿದ “ಕುಮಾರ ವಿಜಯ”. ಭಾಗವಹಿಸುವವರ ಹೆಸರು ಮತ್ತು ಅವರ ಪಾತ್ರಗಳ ವಿವರಗಳನ್ನು ಸಾರಲಾಯಿತು. ಸಣ್ಣಪುಟ್ಟ ಪಾತ್ರಗಳು ಸ್ಥಳೀಯ ಕಲಾಸಕ್ತರಿಗೇ ದೊರೆಯುವುದು ರೂಢಿ.
ಸಂತೋಷ – ಅಳುಕು
ಆದರೆ 15 ವರ್ಷ ಪ್ರಾಯದ ‘ಮಗು’ ನಾನು. ಹಳೆಯ ಹುಲಿಗಳೆನಿಸಿದವರ- ಜಿಲ್ಲೆಯಾದ್ಯಂತ ಹೆಸರು ಪಡೆದವರ- ಎದುರು ಮಾತನಾಡುವುದೆಂದರೆ? ಏನಾದರೂ ಹೆಚ್ಚು ಕಡಿಮೆಯಾದರೆ? ಅದಕ್ಕಾಗಿ ಅಳುಕು.
ತಾಳಮದ್ದಳೆ ಪ್ರಾರಂಭವಾಗಿ ನನ್ನ ಪಾತ್ರದ ಪದ್ಯ ಬರುವವರೆಗೂ ನಾನು ಮೈಯೆಲ್ಲ ಕಿವಿಯಾಗಿ ಕುಳಿತಿದ್ದೆ. ಸಾಸಿವೆ ಬಿದ್ದರೂ ಸದ್ದು ಕೇಳುವಂತಹ ವಾತಾವರಣವನ್ನು ಶ್ರಾವಕರು ನಿರ್ಮಿಸಿದ್ದರು. ತುಂಬಿದ ಸಭೆಯಲ್ಲಿ ಕಲಾವಿದರ ಹೊರತು ಇತರ ಯಾರ ಧ್ವನಿಯೂ ಇರಲಿಲ್ಲ. ಪದ್ಮ ಕೋಮಲೆಯ ಮೊದಲನೇ ಪದ್ಯವನ್ನು ಭಾಗವತರು ಹಾಡತೊಡಗಿದೊಡನೆ, ನನ್ನ ಮೈ ಬೆವರತೊಡಗಿತು.ಏನೇನೋ ಎಣಿಸಿಕೊಂಡು ಮೈ ನಡುಕ ಬರಿಸಿಕೊಂಡೆ. ನನ್ನನ್ನೇ ಗಮನಿಸುತ್ತಿದ್ದು, ನನ್ನ ಕಡೆ ನೋಡಿದ ಭಾಗವತರು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡರು.
ಇದೊಂದು ಹುಚ್ಚು ಎಂದು ನುಡಿದರಾದರೂ, ಹುಚ್ಚಿನ ಆ ಬಳ್ಳಿಗೆ ಕಿಚ್ಚು ಹಚ್ಚಲಿಲ್ಲ. ನೀರನ್ನೆರೆದು ಪ್ರೋತ್ಸಾಹಿಸಿದರು. ಅದೊಂದು ದೃಷ್ಟಿಯಲ್ಲಂತೂ ನಾನು ಪುಣ್ಯವಂತ.
ಸಾಮಾನ್ಯವಾಗಿ ನಮ್ಮೂರಲ್ಲಿ ಯಕ್ಷಗಾನಕ್ಕೆ ಧಾರಾಳ ಪ್ರೋತ್ಸಾಹವಿದ್ದರೂ, ಅದು ದೂರದಿಂದ ನೋಡಿ ಆನಂದಿಸಬಹುದಾದ ಬೆಟ್ಟವೆಂದೇ ಭಾವನೆ ಬೆಳೆದಿತ್ತು. ಬಳಿಗೆ ಹೋಗಬಾರದು- ಒಳಗೆ ಸೇರಿ ಅಲ್ಲಿ ಬೆಳೆಯಬಾರದು ಎನ್ನುವವರೇ ಹೆಚ್ಚಾಗಿದ್ದರು.
ಯಕ್ಷಗಾನ (ತಾಳಮದ್ದಳೆ) ಕೂಟಗಳಲ್ಲಿ ರಾತ್ರಿಯಿಡೀ ನಿದ್ದೆಗೆಟ್ಟು ಭಾಗವಹಿಸಿ ಮನೆಗೆ ನಿದ್ದೆ ಕಳೆಯಲು ಬಂದರೂ, ಪ್ರಸಂಗ- ಅರ್ಥ- ಪಾತ್ರಗಳ ಗುಂಗಿನಲ್ಲೇ ಇರುವುದು, ಒಂದಷ್ಟು ಮಾತು ಬಲ್ಲವನ ಮಟ್ಟಕ್ಕೆ ಏರಿದ ತರುವಾಯ ಎದುರಾಳಿ ಆಗುವವನ ಮುಖಭಂಗ ಮಾಡುವುದು ಹೇಗೆ ಎಂಬ ಯೋಚನೆಯ ಸುಳಿಯಲ್ಲೇ ಸುತ್ತಿ ಸಲ್ಲದ ಸಾಹಿತ್ಯದ ಸಂಗ್ರಹಕ್ಕೆ ಹೊರಡುವುದು, ಯಾರಿಗೂ ಅರ್ಥವಾಗದ ಕ್ಲಿಷ್ಟ ಪದಗಳನ್ನೇ ಸಂಗ್ರಹಿಸಿ ಹೇಳುವುದು, ಇವೆಲ್ಲ ಸಾಮಾನ್ಯ ಅಭ್ಯಾಸಗಳೆಂದೇ ಜನರಲ್ಲಿ ಬೆಳೆದಿದ್ದ ಭಾವನೆ.
ಅಂದಿನ ವೇಷಧಾರಿಗಳ ಸ್ಥಿತಿ
ಇನ್ನು ಬಯಲಾಟಗಳಲ್ಲಿ ವೇಷಧಾರಿಯಾಗಿ ಮುಂದುವರಿಯಲೆಂದು ಹೊರಟವನ ಬಗ್ಗೆ ಮತ್ತೂ ಹೆಚ್ಚಿನ ಕಳವಳ ಇರುತ್ತಿತ್ತು. ತಾಳಮದ್ದಳೆಯಲ್ಲಾದರೆ, ಕೂಟ ಮುಗಿದು ಮನೆಗೆ ಬರುವ ಹವ್ಯಾಸವಾದರೂ ಇರುತ್ತದೆ. ಅದೊಂದು ಸಂಭಾವನೆ ತಾರದ ಹವ್ಯಾಸ ಎಂದಾದ ಕಾರಣ ಜೀವನೋಪಾಯಕ್ಕೆ ಬೇರೆಯೇ ಒಂದು ವೃತ್ತಿಯನ್ನು ಅವಲಂಬಿಸಿರಬೇಕಾಗುತ್ತದೆ. ಆಟದಲ್ಲಾದರೆ ಹಾಗಲ್ಲ. ಇಂದು ಒಂದು ಊರಿನಲ್ಲಿ ಇದ್ದರೆ ನಾಳೆ ಇನ್ನೊಂದು ಗ್ರಾಮಕ್ಕೆ ಪಯಣ. ಮನೆ ಬಿಟ್ಟ ಮಗ ತಿರುಗಿ ಬರಬೇಕಾದರೆ ಆರು ತಿಂಗಳುಗಳು ಕಳೆದೇ ಸರಿ. ಅಲ್ಪವಾದರೂ, ಕಾಸು ಕೈಯಲ್ಲಿ ತಿರುಗುವ ಕಾರಣ, ಕುಟುಂಬದ ನಿಯಂತ್ರಣಕ್ಕೆ ಯಾವುದೇ ರೀತಿಯ ಅವಕಾಶ ಅಲ್ಲಿ ಇಲ್ಲ- ಇತ್ಯಾದಿ ಕಾರಣಗಳು, ಕಲಾವಿದನಾಗ ಬಯಸುವವನಿಗೆ ಹಿರಿಯರು ಅಡ್ಡಿ ತಂದೊಡ್ಡುವ ಹಿನ್ನೆಲೆಗಳಾಗಿದ್ದುವು.
ಅಂದಿನ ಕಾಲದ ಯಕ್ಷಗಾನ ಮೇಳಗಳ ಮತ್ತು ವೇಷಧಾರಿಗಳ ಸ್ಥಾನ ಶೋಚನೀಯವಾಗಿತ್ತು. ಕಲಾವಿದರು ಎಲ್ಲರ ಪರಿಸ್ಥಿತಿಯೂ ಹಾಗೆಯೇ.
ರಾತ್ರೆಯ ಹೊತ್ತು ರಾಜಾಧಿರಾಜರಾಗಿ ಮೆರೆದ ಕಲಾವಿದರು, ‘ಸ್ವರ್ಗ ವೈಭವದ ಭೋಗವನ್ನುಣ್ಣುವುದಾಗಿ’ ಸಾರಿದ್ದ ದೇವೇಂದ್ರರು, ಹಗಲಿನಲ್ಲಿ ಒಂದು ಹೊತ್ತಿನ ಗ್ರಾಸಕ್ಕಾಗಿ ಪರದಾಡಬೇಕಾಗುತ್ತಿತ್ತು.
ಮರದಡಿಯಲ್ಲಿ ಮೇಳಗಳ ಬಿಡಾರ ಇರುವುದು ದೈನಂದಿನ ಸಾಮಾನ್ಯ ಘಟನೆ. ನಾಲ್ಕು ಬಿದಿರ ತುಂಡುಗಳನ್ನು ಊರಿ, ಅವುಗಳಿಗೆ ಮಾವಿನ ಎಲೆಗಳ ಅಲಂಕಾರ ಮಾಡಿದ ‘ರಂಗಮಂಟಪ’ದಲ್ಲಿ ಬಯಲಾಟ ನಡೆಯುವುದು ಎಂದಿನ ಅನುಭವ.
ಆರು ತಿಂಗಳ ಅಲೆದಾಟದಲ್ಲಿ ದೊರೆತು ಉಳಿದ ದುಡಿಮೆಯ ಹಣ, ನಿರುದ್ಯೋಗದ ಆರು ದಿನಗಳಿಗೂ ಸಾಕಾಗುತ್ತಿರಲಿಲ್ಲ. ದೂರದಿಂದ ವೇಷಗಳನ್ನು ನೋಡಿ ಆನಂದಿಸುವ ಊರವರಿಗೂ, ಮೇಳದವರು ಎಂದರೆ ತಿರಸ್ಕಾರ. ಅವರಿಗೆ ಸಮಾಜ ಕೊಡುವ ಗೌರವ- ನಕಾರ. ಮರ್ಯಾದಸ್ಥರು ಮರೆಯಬೇಕಾದ ಪ್ರಪಂಚವೇ ಅದಾಗಿತ್ತು.
ಆದರೆ ತೀರ್ಥರೂಪರು ಆ ಪ್ರಪಂಚಕ್ಕೆ ಧೈರ್ಯವಾಗಿ ಕಾಲಿರಿಸಿದ್ದಲ್ಲದೆ ಅದರ ಸುಧಾರಣೆಯಲ್ಲಿ ಆಸಕ್ತರಾಗಿದ್ದರು. ತಮ್ಮ ಮಿತ್ರವರ್ಗದವರೂ ಆಸಕ್ತಿ ವಹಿಸುವಂತೆ ಮಾಡಿದ್ದರು. ಸಣ್ಣ ಪುಟ್ಟ ಪರಿಮಾಣದಲ್ಲಾದರೂ ನಮ್ಮ ಮನೆಯಲ್ಲೇ ಯಕ್ಷಗಾನ (ತಾಳಮದ್ದಳೆ) ಕೂಟಗಳು ನಡೆಯುವಂತೆ ಮಾಡಿದ್ದರು.
ಮಾರ್ಗದರ್ಶನ
ನಾನು ಕೋಳ್ಯೂರಿನ ಕೂಟದಲ್ಲಿ ಭಾಗವಹಿಸಿದ ನಂತರ, ನನ್ನ ಆಸೆ, ಅವರ ಪ್ರೋತ್ಸಾಹದಿಂದಾಗಿ ಬೆಳೆಯಿತು. ಸರಿಯಾದ ಪ್ರೋತ್ಸಾಹವಿತ್ತು. ಆಗತ್ಯದ ವಿಮರ್ಶೆಗಳನ್ನೂ ಒದಗಿಸಿ ನನ್ನ ಅಭಿರುಚಿ ವಿಕಾಸಗೊಳ್ಳುವಂತೆ ಮಾಡಿದವರು ಅವರೇ.
ಯಕ್ಷಗಾನದಲ್ಲಿ ಅರ್ಥದ ಮಾತಿಗೆ ತೂಕವಿರಬೇಕು. ಯಾವ ರೀತಿಯ ಏರಿಳಿತವೂ ಇಲ್ಲದೆ, ಮೈಲುದ್ದದ ಮಾತುಗಳ ಮಾಲೆಯನ್ನು ಕಟ್ಟುವುದಕ್ಕೆ ಕಲಾವಿದನ ಪಾಂಡಿತ್ಯ ಸೀಮಿತಗೊಳ್ಳಬಾರದು. ರಸಪೋಷಣೆ- ಭಾವ ಪ್ರೇರಣೆಗಳು ಬೇಕಾದಲ್ಲಿ ಪಾತ್ರಗಳ ಪರಸ್ಪರ ಸಂಭಾಷಣೆಗೆ ಅವಕಾಶ ಇರಬೇಕು. ಎದುರಾಗಿ ಅರ್ಥಹೇಳುವವನು ಚಿಕ್ಕವನಾದರೂ, ಅವನಿಗೇ ಪ್ರೋತ್ಸಾಹ ದೊರಕಬೇಕು. ಕಥೆಯ ಸನ್ನಿವೇಶ ಕೇಳುವವರ ಕಣ್ಣೆದುರು ಮೈವೆತ್ತು ನಿಲ್ಲಬೇಕು ಎಂಬಿತ್ಯಾದಿ ಅಂಶಗಳನ್ನು ನಿದರ್ಶನಗಳೊಂದಿಗೆ ನನ್ನ ತಲೆಗೆ ತುರುಕಿದವರು ಅವರೇ.
ರೇಡಿಯೋ ನಾಟಕಗಳನ್ನು ನಾನು (ಈಚೀಚೆಗೆ) ಕೇಳಿದಾಗಲೆಲ್ಲ, ಅವರ ಉಪದೇಶಗಳ ನೆನಪು ಬರುತ್ತದೆ. ದಶಕಗಳ ಹಿಂದೆ ಅವರು ಹೇಳಿದ್ದ ಮಾತುಗಳು ಮರುಕಳಿಸುತ್ತವೆ.
(ಮುಂದುವರಿಯಲಿದೆ)
************
ಕೃಪೆ : ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನ ಮತ್ತು ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟ್ (ರಿ).






ನಮ್ಮ ಊರಿನ ಹಿರಿಯ ಯಕ್ಷಗಾನ ಕಲಾವಿದರ ಪರಿಚಯ ಲೇಖನ ಮಾಲೆ ಪ್ರಕಟವಾಗುತ್ತಿರುವುದು ತುಂಬಾ ಸಂತಸದ ವಿಷಯ, ಅದರಲ್ಲೂ ಯಕ್ಷಗಾನ ಪ್ರೇಮಿಯಾದ ನನಗೆ ಮತ್ತು 25 ವರ್ಷಗಳ ಹಿಂದೆ ಧರ್ಮಸ್ಥಳ ಮೇಳದ ಆಟವನ್ನು ನನ್ನ ಹುಟ್ಟೂರಿನಲ್ಲಿ ಆಡಿಸಿದ ಆದಿನಗಳ ಮದುರ ನೆನಪನ್ನು ಈ ಲೇಖನ ನೀಡುತ್ತಿರುವುದು ಸಂತಸ ತಂದಿದೆ.
– ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
ಈಗಿನ ಕಾಲದಲ್ಲಿ ಕೆಲವು ಕಲೆಗಳನ್ನು ಹಣಕ್ಕೆ ಮಾರುವವರೇ ಹೆಚ್ಚು. ಆ ಒಂದು ಕಾಲದಲ್ಲಿ ಜೀವನಕ್ಕೆ ಈ ಹವ್ಯಾಸದಿಂದ ಪುಡಿಗಾಸು ಸಿಗದೇ ಇದ್ದರೂ, ಹಿರಿಯರ ವಿರೋಧದ ನಡುವೆಯೂ ಯಕ್ಷಗಾನವನ್ನು ಇವರು ತಮ್ಮ ಜೀವನದಲ್ಲಿ ಮುಡುಪಾಗಿ ಇರಿಸುತಿದ್ದರು.
ಭಲೇ ಬೇಷ್ ಇಂತಹ ವ್ಯಕ್ತಿಗಳ ಒಂದು ಪರಿಶ್ರಮದಿಂದಲೇ ಇವತ್ತಿಗೆ ಯಕ್ಷಗಾನ ಎಂಬುದು ಎಂತಹ ಕಲೆಯೆಂದು ನಮಗೆಲ್ಲರಿಗೂ ತಿಳಿದಿದೆ. ಇವರನ್ನು ನಮಗೆ ಇಲ್ಲಿ ನೆನಪಿಸಿ ಕೊಟ್ಟ ಲೇಖಕರಿಗೆ ಮತ್ತು ಅಂತರಜಾಲ ತಾಣಕ್ಕೆ ವಂದನೆಗಳು.
ಮಾನ್ಯ ಕುರಿಯ ವಿಠಲ ಶಾಸ್ತ್ರಿಯವರ ಆತ್ಮಕಥನ “ಬಣ್ಣದ ಬದುಕು” ಲೇಖನಮಾಲೆಯಾಗಿ ಉತ್ತಮ ರೂಪದಲ್ಲಿ ಮೂಡಿಬರುತ್ತಲಿದೆ.
ಅಂದು “ಆದಿನಗಳ” ರಂಗಸ್ಥಳಗಳಲ್ಲಿನ ಮೇರು ದಿಗ್ಗಜರು ಗಳಲ್ಲಿ ಒಬ್ಬರಾಗಿ ಮೆರೆದ ವಿಠಲ ಶಾಸ್ತ್ರಿ ಯವರ ಆತ್ಮಕಥನದಲ್ಲಿನ ಅವರ ಸ್ವ ಅನುಭವಗಳು ಯಕ್ಷಗಾನ ರಂಗದಲ್ಲಿ ಇಂದು ಮೂಡಿ ಬರುತ್ತಲಿರುವ ಹಲವಾರು ಯುವ ಕಲಾವಿದರುಗಳಿಗೆ ಮಾರ್ಗದರ್ಶಿಕೆಯಂತಿದೆ.
ಅಂಥಹ ಕಲಾವಿದರ ಜೀವನ ಯಾತ್ರೆಯ ಹೆಜ್ಜೆಗಳನ್ನು ಅಕ್ಷರ ರೂಪದಲ್ಲಿ ಮೂಡಿಸಿಟ್ಟ ಪತ್ರಕರ್ತ, ಅಂಕಣಗಾರರಾಗಿದ್ದ ಶ್ರೀಯುತ ಪದ್ಯಾಣ ಗೋಪಾಲಕೃಷ್ಣ ರವರು ಧನ್ಯರು. ಆತ್ಮೀಯ ಗೌರವಾರ್ಪಣೆಗಳು ಅವರಿಗೆ.
-ವಿಜಯ್ ಬಾರಕೂರು , ಕತಾರ್