ವಿಷಯದ ವಿವರಗಳಿಗೆ ದಾಟಿರಿ

Archive for

10
ಜುಲೈ

ಧರ್ಮವೆಂಬ ಅಫೀಮು ಮತ್ತು ಜಾತಿಯೆಂಬ ಮರಿಜುವಾನ….

– ಡಾ. ಅಶೋಕ್ ಕೆ.ಆರ್

ಮಾರ್ಕ್ಸ್ ವಾದ ಮತ್ತದರ ವಿವಿಧ ಸರಣಿವಾದಗಳು ಪದೇ ಪದೇ ವಿಫಲವಾದ ನಂತರೂ ಮತ್ತೆ ಮತ್ತೆ ಪ್ರಸ್ತುತವೆನ್ನಿಸುತ್ತಲೇ ಸಾಗುವುದಕ್ಕೆ ಕಾರಣಗಳೇನು? ಕರ್ನಾಟಕದ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದಾಗ “Religion is opium” ಎಂದು ದಶಕಗಳ ಹಿಂದೆ ಯಾವಗಲೋ ಮಾರ್ಕ್ಸ್ ಹೇಳಿದ್ದ ಮಾತುಗಳು ನೆನಪಾಗದೇ ಇರದು. ‘ಭಿನ್ನ’ ಪಕ್ಷವೆಂದು ತನ್ನ ಬೆನ್ನು ತಾನೇ ತಟ್ಟಿಕೊಳ್ಳುವ ಭಾ.ಜ.ಪದ ಭಿನ್ನತೆ ಇಷ್ಟೊಂದು ಅಸಹ್ಯಕರವಾಗಿರಬಲ್ಲದು ಎಂದು ಸ್ವತಃ ಅದರ ಕಾರ್ಯಕರ್ತರೇ ನಿರೀಕ್ಷಿಸಿರಲಿಲ್ಲವೇನೋ?!

 ಮಾತೆತ್ತಿದರೆ ‘ಹಿಂದೂ’ವಾದದ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಮಾಡುವ, ‘ಅಖಂಡ’ ಹಿಂದೂ ರಾಷ್ಟ್ರ ನಿರ್ಮಾಣವೇ ನಮ್ಮ ಗುರಿ ಎಂದು ಚುನಾವಣೆ ಸಮಯದಲ್ಲಿ ಅಬ್ಬರಿಸುವ ಭಾರತೀಯ ಜನತಾ ಪಕ್ಷ ಮೊದಲಿನಿಂದಲೂ ‘ಹಿಂದೂ’ ಎಂಬ ಧರ್ಮದ ಒಳಗಿನ ಜಾತಿಯೆಂಬ ಅನಿಷ್ಟದ ಬಗ್ಗೆ ಪ್ರಜ್ಞಾಪೂರ್ವಕ ಮೌನಕ್ಕೆ ಶರಣಾಗುತ್ತಿತ್ತು. ಯಾರಾದರೂ ಜಾತಿಯಾಧಾರಿತ ‘ಹಿಂದೂ’ ಧರ್ಮದ ಬಗ್ಗೆ ಖಂಡನೀಯ ಮಾತುಗಳನ್ನಾಡಿದರೆ ಅವರನ್ನು ಸ್ಯೂಡೋ ಸೆಕ್ಯುಲರ್ ಎಂದು, ರಾಷ್ಟ್ರದ್ರೋಹಿಯೆಂದು ಪಟ್ಟ ಕಟ್ಟುವಲ್ಲಿ ಭಾ.ಜ.ಪ ಮತ್ತದರ ಅಂಗಸಂಸ್ಥೆಗಳದು ಎತ್ತಿದ ಕೈ. ‘ನಾವೆಲ್ಲರೂ ಒಂದು ನಾವು ಹಿಂದು’ ಎಂದು ಪ್ರಚಾರ ಮಾಡುತ್ತ ಜನರನ್ನು ನವ ಬ್ರಾಹ್ಮಣ್ಯದ ಕಡೆಗೆ ಆಕರ್ಷಿತರನ್ನಾಗಿ ಮಾಡಿ ದಲಿತ-ಶೂದ್ರ-ಬ್ರಾಹ್ಮಣ-ಅಬ್ರಾಹ್ಮಣ ಯುವಜನತೆಯಲ್ಲಿ ಕೋಮುದ್ವೇಷವನ್ನು ಬಿತ್ತುವಲ್ಲಿಯೂ ಭಾ.ಜ.ಪದ ಪಾತ್ರ ಹಿರಿದು.