ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 10, 2012

3

ರಾಮಲೀಲಾ ಮೈದಾನದಿಂದ, ನೇರವಾಗಿ….

‍ನಿಲುಮೆ ಮೂಲಕ

-ಚಕ್ರವರ್ತಿ ಸೂಲಿಬೆಲೆ

ನಾನೀಗ ರಾಮಲೀಲಾ ಮೈದಾನದಲ್ಲಿದ್ದೇನೆ. ೭ನೇ ತಾರೀಖಿನಿಂದಲೇ ಆಂದೋಲನಕ್ಕಾಗಿ ಜನಸಾಗರ ಹರಿದುಬರತೊಡಗಿತ್ತು. ಇಂದು ಇಲ್ಲಿ ಸೇರಿರುವ ಸಂಖ್ಯೆ ನಿರೀಕ್ಷೆಗೂ ಮೀರಿದ್ದು. ರಾಮದೇವ ಬಾಬಾ ನೇತೃತ್ವದ ಈ ಆಂದೋಲನದ ಕುರಿತಂತೆ ಕೆಲವು ಒಳನೋಟಗಳು ಇಲ್ಲಿವೆ…

ಎಲ್ಲರ ಚಿತ್ತ ರಾಮಲೀಲಾ ಮೈದಾನದತ್ತ! ಹಾಗಂತ ನೋಡಿದರೆ ಅನ್ನಿಸುತ್ತಿದೆ. ಒಂಭತ್ತನೆ ತಾರೀಖಿನ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಅದಾಗಲೇ ಜನಸಾಗರ ಬಂದು ಸೇರುತ್ತಿದೆ. ಏಳನೆ ತಾರೀಖಿನ ವೇಳೆಗಾಗಲೇ ಐದಾರು ಸಾವಿರ ಕಾರ್ಯಕರ್ತರು ವೇದಿಕೆಯ ಹಿಂದೆ ಮುಂದೆ ಗಿಜಿಗುಡುತ್ತ ನಿಂತಿದ್ದರು. ತಯಾರಿಗಳು ಬಿರುಸಾಗಿ ನಡೆದಿದ್ದವು. ಕಾರ್ಯಕರ್ತರ ಹೆಸರು ನೋಂದಾಯಿಸುವುದರಿಂದ ಹಿಡಿದು ವೇದಿಕೆಯ ರಕ್ಷಣೆಯವರೆಗೆ ಕೆಲಸಗಳನ್ನು ಹಂಚಲಾಗುತ್ತಿತ್ತು. ಅಚ್ಚರಿಯೆಂದರೆ ಪ್ರತಿ ವಿಭಾಗಕ್ಕೂ ನೂರು- ನೂರೈವತ್ತು ಜನರ ತಂಡ. ಒಟ್ಟಾರೆ ಲೆಕ್ಕ ಹಾಕಿದರೆ, ಅಣ್ಣಾ ತಂಡದ ಹೋರಾಟಕ್ಕೆ ಅದೆಷ್ಟು ಜನ ಬಂದಿದ್ದರೋ ಅಷ್ಟು ಕಾರ್ಯಕರ್ತರು ಪೂರ್ವ ತಯಾರಿಗೆಂದೇ ಇಲ್ಲಿಗೆ ಬಂದಿದ್ದಾರೆ. ಬಾಬಾ ರಾಮದೇವ್‌ಜೀ ಇದನ್ನೊಂದು ಐತಿಹಾಸಿಕ ನಿರ್ಣಾಯಕ ಹೋರಾಟ ಎಂದಿದ್ದು ತಪ್ಪಲ್ಲವೇನೋ ಎಂದು ಇಲ್ಲಿನ ಜನರನ್ನು ನೋಡಿದಾಗ ಭಾಸವಾಗಿಬಿಡುತ್ತದೆ.

ಯಾವುದೇ ಹೋರಾಟ ಒಂದು ದಿನ ಅಥವಾ ಕೆಲವು ವಾರಗಳದ್ದಲ್ಲ. ಅದೊಂದು ಸುದೀರ್ಘ ಯಾತ್ರೆ. ಅದರಲ್ಲೂ ಈ ಬಗೆಯ ಕಾದಾಟಗಳಂತೂ ದಶಕಗಳಷ್ಟು ಆಳದ ಬೇರುಗಳನ್ನು ಇಳಿ ಬಿಟ್ಟುಕೊಳ್ಳಲಿಲ್ಲವೆಂದರೆ ಫಲ ನೀಡುವುದು ಕಷ್ಟ. ಸಾಮರ್ಥ್ಯ ನರ ನಾಡಿಗಳಲ್ಲಿ ಬೆರೆತುಕೊಂಡು ಹರಿಯಲಿಲ್ಲವೆಂದರೆ, ಹೋರಾಟ ದೀರ್ಘ ಕಾಲದವರೆಗೆ ಮುಂದುವರೆಯುವುದೂ ಅಷ್ಟೇ ಕಷ್ಟ. ಅದಕ್ಕೇ ಗಾಂಧೀಜಿ ವಿಶೇಷ ಅನ್ನಿಸೋದು. ಹತ್ತಿಪ್ಪತ್ತು ವರ್ಷಗಳ ಕಾಲ ಜನರ ನಾಡಿ ಹಿಡಿಹಿಡಿದು ಅಧ್ಯಯನ ಮಾಡಿ ವಿಶ್ವಾಸ ಬಲಿತಾಗ ಹೋರಾಟಕ್ಕಿಳಿಯುತ್ತಿದ್ದವರು ಅವರು. ಹಾಗೆ ಹೋರಾಟಕ್ಕಿಳಿವಾಗ ಅತ್ಯಂತ ಸಹಜ ಹಾಗೂ ಜನರಿಗೆ ಹತ್ತಿರವಾದ ವಿಚಾರಗಳನ್ನಿಟ್ಟುಕೊಂಡೇ ಕದನ ಭೂಮಿಗೆ ಬರುತ್ತಿದ್ದರು. ಹೋರಾಟ ಕಾವು ಪಡಕೊಳ್ಳುತ್ತಿತ್ತು. ಉಪ್ಪಿನ ಸತ್ಯಾಗ್ರಹ ಅಂಥದ್ದೇ ಹೋರಾಟ ತಾನೆ? ಸ್ವತಃ ಗಾಂಧೀಜಿಯ ಕಮ್ಯಾಂಡರ್ ಇನ್ ಚೀಫ್ ಪಟೇಲರು ಲೇವಡಿ ಮಾಡಿದ್ದ ಹೋರಾಟ ಅದು. ಆದರೆ ಜನರು ತೆರಿಗೆಯ ವಿರುದ್ಧ ತಿರುಗಿಬಿದ್ದರು. ಕ್ರಮೇಣ ದೊಡ್ಡ ಆಂದೋಲನವೆ ಶುರುವಾಯ್ತು. ದೇಶ ಗೆಲುವಿನತ್ತ ಹೊರಳಿತು.
ಸ್ವಲ್ಪ ತುಲನೆ ಮಾಡಿ ನೋಡಿ. ಗಾಂಧೀಜಿಯ ಹೋರಾಟದೊಂದಿಗೆ ಅಣ್ಣಾ ಹಜಾರೆಯವರ ಹೋರಾಟದ ಸಾಮ್ಯತೆ ಇತ್ತು. ಅಣ್ಣಾ ಸಮಾಜ ಪರಿವರ್ತನೆಯ ರಣ ಭೂಮಿಯಲ್ಲಿ ವರ್ಷಗಟ್ಟಲೆ ಸೇನಾನಿಯಾಗಿದ್ದವರು. ಮಹಾರಾಷ್ಟ್ರದಲ್ಲಿ ಅಣ್ಣಾ ಬ್ರ್ಯಾಂಡ್ ಅನ್ನು ಹುಟ್ಟುಹಾಕಲು ಆ ವೃದ್ಧನಿಗೆ ಸಾಧ್ಯವಾಗಿದ್ದು ಶುದ್ಧ ಪ್ರಾಮಾಣಿಕತೆಯಿಂದ, ದೇಶದೆಡೆಗಿನ ನಿಷ್ಠೆಯಿಂದ ಮಾತ್ರ. ಮೂರ್ನಾಲ್ಕು ದಶಕಗಳ ಸಾಧನೆಯನ್ನು ದೇಶ ಗುರುತಿಸಿತು. ಭ್ರಷ್ಟಾಚಾರವೆಂಬ ಜನ ಮೆಚ್ಚುವ ದ್ವೇಷಿಸುವ ವಿಚಾರವನ್ನು ಆತ ಕೈಗೆತ್ತಿಕೊಂಡೊಡನೆ ಜನ ಸಾಗರ ಹರಿದು ಬಂತು.
ಮಹತ್ವದ ಸಂಗತಿಯೆಂದರೆ ಅಣ್ಣಾ ರಾಷ್ಟ್ರೀಯ ಮಟ್ಟದಲ್ಲಿ ಭ್ರಷ್ಟಾಚಾರದ ವಿರುದ್ಧ ದನಿಯೆತ್ತುವ ಮೊದಲೇ ರಾಮದೇವ್ ಬಾಬಾ ಕೂಗಾಟ ಶುರುವಿಟ್ಟಿದ್ದರು ಎನ್ನುವುದು. ಕಪ್ಪು ಹಣದ ಕುರಿತಂತೆ ಅವರ ಮಾತುಗಳು ಕಾಂಗ್ರೆಸ್ಸಿನ ರಾಜಕಾರಣಿಗಳನ್ನು ಚೂರಿಯಂತೆ ಇರಿಯುತ್ತಿದ್ದವು. ಎಷ್ಟೆಂದರೆ, ಸ್ವತಃ ಪಾರ್ಟಿಯ ಪ್ರಮುಖರು ಬಾಬಾಜಿಯ ಯೋಗ ಶಿಬಿರಗಳಿಗೆ ಕಾಂಗ್ರೆಸ್ಸಿಗರು ಹೋಗಬಾರದೆಂದು ಆದೇಶ ಹೊರಡಿಸುವವರೆಗೂ! ಅದಾಗಲೇ ಸೋನಿಯಾರೊಂದಿಗೆ ಆಗಾಗ ಜಟಾಪಟಿಗಿಳಿಯುತ್ತಿದ್ದ ಬಾಬಾ ಸ್ವದೇಶೀ ಆಯುರ್ವೇದದ ವಿಚಾರವನ್ನು ಮೊದಲಿಗಿಂತ ಪ್ರಖರವಾಗಿಯೇ ಹೇಳಲಾರಂಭಿಸಿದರು. ಅವರ ಯೋಗ ಶಿಬಿರ, ಯೋಗ ತರಬೇತಿಯಷ್ಟೇ ರಾಷ್ಟ್ರ ಭಕ್ತಿಯ ಭಾಷಣಗಳನ್ನೂ ಬಿತ್ತರಿಸತೊಡಗಿತ್ತು ಎನ್ನುವುದನ್ನು ಯಾರು ತಾನೆ ಅಲ್ಲಗಳೆಯಬಲ್ಲರು ಹೇಳಿ? ಅವರ ಕಾರ್ಯಕ್ರಮಗಳಿಗೆ ರಾಷ್ಟ್ರಕ್ಕಾಗಿ ಕೆಲಸ ಮಾಡುವ ಅನೇಕರು ಆಗಾಗ ಬಂದು ಭಾಷಣವನ್ನೂ ಮಾಡುತ್ತಿದ್ದರು. ರಾಜೀವ್ ದೀಕ್ಷಿತರು ಅದರಲ್ಲಿ ಅಗ್ರಣಿಗಳಾದರೆ, ಅರವಿಂದ್ ಕೇಜ್ರಿವಾಲ್‌ರಂಥವರು ಮಾಹಿತಿ ಹಕ್ಕು ಕಾಯ್ದೆಯ ಕುರಿತಂತೆ ವೇದಿಕೆಯ ಮೇಲೆ ಮಾತನಾಡಿ ಹೋಗಿದ್ದಾರೆ.
ಕಾಲ ಪಕ್ವವಾಗಿ ಬಾಬಾ ರಾಮದೇವ್ ಹೋರಾಟಕ್ಕೆ ಅಣಿಯಾಗುವ ವೇಳೆಗೆ ಎಡ ಚಿಂತನೆಗಳಿಂದ ಪ್ರಭಾವಿತರಾದ ಕೆಲವರು ಸೇರಿ ಕೇಸರಿಯಿಂದ ದೂರವಾದ ಆಂದೋಲನ ರೂಪಿಸಬೇಕು ಎಂದು ಸಿದ್ಧರಾದರು. ಕಾಂಗ್ರೆಸ್ಸಿನ ಕೈವಾಡ ಇದರಲ್ಲಿದ್ದರೆ ಅಚ್ಚರಿ ಪಡಬೇಕಿಲ್ಲ. ಭೂಷಣ್ ಕುಟುಂಬ, ಅರವಿಂದ್ ಕೇಜ್ರಿವಾಲ್, ಕಿರಣ್ ಬೇಡಿಯ ತಂಡ ಒಂದಾಯ್ತು. ದೇಶದಲ್ಲಿದ್ದ ಜಾತ್ಯತೀತ (!?), ಬಿಜಿಪಿ ವಿರೋಧಿ ಶಕ್ತಿಗಳನ್ನು ಒಂದುಗೂಡಿಸಲಾಯ್ತು. ಹೀಗಾಗಿಯೇ ಸಂತೋಷ್ ಹೆಗಡೆಯವರಿಗೂ ಅಲ್ಲೊಂದು ಸ್ಥಾನ ದಕ್ಕಿದ್ದು. ಇಷ್ಟೆಲ್ಲ ಮುಗಿದ ನಂತರ ಕೇಸರಿಯನ್ನೂ ಸೇರಿಸಿ ತಂಡವನ್ನು ಎಲ್ಲರೂ ಮೆಚ್ಚುವಂತೆ ಮಾಡುವ ಭರದಲ್ಲಿ ಎಡಪಂಥೀಯ ವಿಚಾರ ಧಾರೆಗಳುಳ್ಳ, ವಿಶ್ವ ಮಾನವರಾಗುವ ಅವಸರದಲ್ಲಿ ಭಾರತೀಯತೆಯನ್ನೆ ಬಿಟ್ಟ ಸ್ವಾಮಿ ಅಗ್ನಿವೇಶರನ್ನು ಸೇರಿಸಿಕೊಂಡು, ಟೀಮ್ ಅಣ್ಣರಚಿಸಿಕೊಳ್ಳಲಾಯ್ತು. ರಾಮದೇವ್ ಬಾಬಾ ಮೊದಲ ಹಂತದಲ್ಲಿ ಮೈದಾನದಿಂದ ಕಾಣೆಯಾಗಿ ಅನಂತರ ಆಂದೋಲನ ಹಳ್ಳ ಹಿಡಿಯಿತಲ್ಲ, ಆಗ ಜನರ ಕೇಂದ್ರ ಸಕಾರದ ವಿರುದ್ಧದ ಆಕ್ರೋಶ ಅಣ್ಣಾ ತಂಡಕ್ಕೆ ಧನಾತ್ಮಕವಾಯ್ತು.

ಬಾಬಾಜಿಗೆ ಆಂದೋಲನ ಎಂದರೇನೆಂದೆ ಗೊತ್ತಿಲ್ಲ; ಗಾಂಧಿ ಮಾದರಿಯ ಹೋರಾಟ ಸುಲಭವಲ್ಲ. ಅದು ಅಣ್ಣಾಜಿಯ ಆಸ್ತಿ ಎಂಬಂತೆಲ್ಲ ಟೀಮ್ ಅಣ್ಣಾ ಮಾತನಾಡಿತು. ನಾಲಿಗೆ ಚಾಚುವಷ್ಟೂ ಉದ್ದ ಹರಿಬಿಡಲಾಯ್ತು. ಕ್ಯಾಮೆರಾ ಕಂಡಾಕ್ಷಣ ಅರವಿಂದ್, ಬೇಡಿಯವರೆಲ್ಲ ಮನಸೋಯಿಚ್ಛೆ ಮಾತನಾಡಿದರು. ಕಪಿಲ್ ಸಿಬಲ್‌ಗೆ ಈಗ ಸಮಾಧಾನ.
ಸೇನೆಯೊಂದರ ಶಕ್ತಿ ಏನೆಂದು ಗೊತ್ತಾಗುವುದು ಗೆದ್ದಾಗಲಲ್ಲ, ಸೋತಾಗಲೇ. ಸೋಲಿನಲ್ಲೂ ಏಕತೆ, ಮರು ಹೋರಾಟದ ಉತ್ಸಾಹ, ಸ್ಫೂರ್ತಿ ತುಂಬುವ ಸಾಮರ್ಥ್ಯಗಳನ್ನು ಉಳಿಸಿಕೊಂಡವರು ಛಂಗನೆದ್ದು ಮುಂದಿನ ಕದನಕ್ಕೆ ಅಣಿಯಾಗುತ್ತಾರೆ. ಭ್ರಾಮಕ ಗೆಲುವಿನ ವಾರಸಿಕೆಯಿಂದ ಮೈಮರೆತವರು ಮುಂದಿನ ಫ್ಲಾಪ್ ಶೋಗಳಿಗೆ ಸಿದ್ಧರಾಗುತ್ತಾರೆ. ಟೀಮ್ ಅಣ್ಣಾಗೂ ಬಾಬಾಜಿಗೂ ವ್ಯತ್ಯಾಸವಿರೋದು ಇಲ್ಲೇ. ಜೂನ್೩ಕ್ಕೆ ರಾಮ್‌ದೇವ್ ಬಾಬರ ಕಾರ್ಯಕ್ರಮಕ್ಕೆ ಬಂದಿದ್ದ ಅರವಿಂದ್ ಕೇಜ್ರಿವಾಲ್ ಬಾಬಾ ಹೋರಾಟಗಳಿಗೆ ಬೆಂಬಲವಿದೆಯೆಂದು ಕ್ಯಾಮೆರಾಗಳ ಮುಂದೆ ನುಡಿದರು. ಅನವಶ್ಯಕ ಆವೇಶಕ್ಕೆ ಒಳಗಾಗಿ, ಸೇರಿದ್ದ ಗಣ್ಯರು ಹಾಕಿಕೊಂಡಿದ್ದ ಕೆಲವು ಸ್ವಯಂ ನಿರ್ಬಂಧಗಳನ್ನು ಮುರಿದು, ಮನಮೋಹನ್ ಸಿಂಗರ ವಿರುದ್ಧ ಹರಿಹಾಯ್ದರು. ಇಡಿಯ ಹೋರಾಟವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ಅದಾಗಿತ್ತು. ಆದರೆ ಹಿಂದಿನ ಅನುಭವಗಳಿಂದ ಪಾಠ ಕಲಿತಿದ್ದ ಬಾಬಾಜಿ, ಅರವಿಂದರನ್ನೆ ಎಲ್ಲದಕ್ಕು ಹೊಣೆಯಾಗಿಸಿ ಕೈತೊಳೆದುಕೊಂಡುಬಿಟ್ಟರು. ಅಗಸ್ಟ್ ೯ರ ದಿನಾಂಕ ನಿರ್ಧಾರವಾಯ್ತು. ಅಣ್ಣಾ ಮತ್ತವರ ತಂಡವೂ ಸಹಮತ ವ್ಯಕ್ತಪಡಿಸಿತು. ಬಾಬಾ ರಾಮದೇವ್ ತಮ್ಮ ಬೇಡಿಕೆಗಳ ಪಟ್ಟಿಯಲ್ಲಿ ಜನಲೋಕಪಾಲ್ ಅನ್ನು ಸೇರಿಸಿಕೊಂಡು ಎರಡೂ ಹೋರಾಟಗಳನ್ನು ಒಂದೇ ವಾಹಿನಿಗೆ ತಂದರು.
ಅರವಿಂದ್ ಕೇಜ್ರಿವಾಲ್‌ರ ಬುದ್ಧಿ ಚುರುಕಾಯಿತು. ಆಂದೋಲನಗಳೆರಡು ಒಟ್ಟಿಗೆ ಸೇರಿದರೆ ಗೆಲುವಿನ ಕ್ರೆಡಿಟ್ಟು ತಮ್ಮ ಪಾಳಯದಿಂದ ಬಾಬಾಜಿ ಹೆಗಲಿಗೇರಿಬಿಡುವುದು ಎಂಬ ಹೆದರಿಕೆ ಅವರ ನಿದ್ದೆಯನ್ನು ಅಪಹರಿಸಿತು. ಎಂದಿನಂತೆ ತಮ್ಮ ಆಪ್ತರೊಂದಿಗೆ ಮಾತನಾಡಿ, ಏಕಾಏಕಿ ಜುಲೈ ೨೫ಕ್ಕೆ ಆಮರಣಾಂತ ಉಪವಾಸ ಕೂರುವುದಾಗಿ ಘೋಷಿಸಿಬಿಟ್ಟರು. ಅವರ ಉದ್ದೇಶ ಸ್ಪಷ್ಟವಾಗಿತ್ತು. ಆಗಸ್ಟ್ ೯ಕ್ಕೆ ಮುನ್ನ ನಡೆಯಬೇಕಾದ್ದೆಲ್ಲ ನಡೆದುಹೋಗಲಿ. ಸರ್ಕಾರವನ್ನು ಮಣಿಸಿ ಕೆಲಸ ಕೈಗೂಡಿಸಿಕೊಂಡರೆ ಸಾಧನೆಗಳ ಸರದಾರರು ತಾವೇ ಆಗಲಿದ್ದೇವೆ ಎನ್ನಿಸಿತು ಅವರಿಗೆ.

ಅಂದುಕೊಂಡದ್ದೇನೊ ಸರಿಯಾಗಿತ್ತು. ಆದರೆ ಸಮಯದ ಆಯ್ಕೆ ಸೂಕ್ತವಾಗಿರಲಿಲ್ಲ ಮತ್ತು ಮಾಡಬೇಕಾದಷ್ಟು ಕೆಲಸವನ್ನೂ ಅವರು ಮಾಡಿರಲಿಲ್ಲ. ಇಷ್ಟಕ್ಕೂ ಅಣ್ಣಾ ಟೀಮಿನ ಕೆಲಸ ಹಳ್ಳಿಗಳಿರಲಿ, ತಾಲೂಕಿಗೇ ಇನ್ನೂ ತಲುಪಿಲ್ಲ. ಹೀಗಿರುವಾಗ ನಿರ್ಣಾಯಕ ಹೋರಾಟಕ್ಕೆ ಅವರು ಕರೆಕೊಟ್ಟದ್ದೇ ಹಾಸ್ಯಾಸ್ಪದ. ಜನರನ್ನು ಒಟ್ಟುಗೂಡಿಸಬೇಕಿದ್ದ ಐಎಸಿ, (ಇಂಡಿಯಾ ಎಗೆನೆಸ್ಟ್ ಕರಪ್ಷನ್) ತಾನೇ ಒಡೆದು ಚೂರು ಚೂರಾಯ್ತು. ಕರ್ನಾಟಕದಲ್ಲಂತೂ ಅದು ಮೂರು ತುಂಡಾಯ್ತು. ಒಟ್ಟಿಗೆ ಎಲ್ಲರೂ ಕಾಣಿಸಿಕೊಳ್ಳುತ್ತಿದ್ದರಾದರೂ ಸಮನ್ವಯದ ಕೊರತೆಯಿತ್ತು. ಈ ಎಲ್ಲದರ ಫಲಿತಾಂಶವೆಂಬಂತೆ ಜುಲೈ೨೫ರ ಆಂದೋಲನ ಬಿಕೋ ಎನ್ನಲಾರಂಭಿಸಿತ್ತು. ಮಾಧ್ಯಮಗಳು ಹೋರಾಟವನ್ನು ಗಣನೆಗೂ ತೆಗೆದುಕೊಳ್ಳಲಿಲ್ಲ. ತಮ್ಮನ್ನು ತಾವು ರಾಷ್ಟ್ರೀಯ ನಾಯಕರೆಂದುಕೊಂಡಿದ್ದ ಕೇಜ್ರಿವಾಲರ ಭ್ರಮೆ ಸರ್ರನೆ ಇಳಿಯಿತು. ಕೆಲವು ನೂರು ಸಂಖ್ಯೆಯ ಜನ ಕುಳಿತರು, ಕುಳಿತರು, ಸುಮ್ಮನೆ ಕುಳಿತರು- ಅಷ್ಟೇ. ನಡುವೆ ಒಮ್ಮೆ ಬಾಬಾ ರಾಮ್‌ದೇವ್ ಸ್ಥಳಕ್ಕೆ ಬಂದಾಗ ಹುಯ್ಯನೆ ಬಂದ ಜನ, ಅಷ್ಟೇ ಬೇಗನೆ ಮಾಯವಾದರು. ಈಗ ಟೀಮ್ ಅಣ್ಣಾ ಎಚ್ಚೆತ್ತುಕೊಂಡಿತು. ಈ ಹೋರಾಟದ ನಿಜವಾದ ಹೀರೋ ಅಣ್ಣಾ, ನಾವಲ್ಲ ಎಂದರಿತು, ಅವರನ್ನೂ ಕರೆತಂದು ಉಪವಾಸ ಕೂರಿಸಿತು. ಹಾಗೆ ನೋಡಿದರೆ, ವೈದ್ಯರ ಆದೇಶದ ಮೇರೆಗೆ ಅವರನ್ನು ಉಪವಾಸ ಕೂರಿಸಲಿಲ್ಲ ಎಂದ ತಂಡ, ಸರ್ಕಾರಕ್ಕೆ ಕೊನೆಯ ಎಚ್ಚರಿಕೆಯನ್ನೂ ಕೊಟ್ಟುಬಿಟ್ಟಿತು. ನಾಲ್ಕು ದಿನಗಳ ಬಿಡುವಿನ ನಂತರ ಅಣ್ಣಾ ಉಪವಾಸ ಕುಳಿತರೆ ಮೊದಲಿನಂತೆ ಜನ ಬಂದಾರೆಂಬ ಭರವಸೆ ಟೀಮ್ ಅಣ್ಣಾಗಿತ್ತು. ಈ ಬಾರಿ ಹಾಗಾಗಲಿಲ್ಲ. ಡೆಲ್ಲಿ ಗದ್ದುಗೆ ಗಟ್ಟಿಯಾಗುಳಿಯಿತು. ಒಬ್ಬೇ ಒಬ್ಬ ಮಂತ್ರಿ ಸೌಜನ್ಯಕ್ಕಾದರೂ ಇತ್ತ ಮೂಸಿ ನೋಡಲಿಲ್ಲ. ಪುಣೆಯ ಸ್ಫೋಟವೂ ಜನರ ಚಿತ್ತವನ್ನು ಅತ್ತ ಸೆಳೆಯಿತು. ಹತಾಶವಾದ ಟೀಮ್ ಅಣ್ಣಾ ಎಲ್ಲರ ಕೋರಿಕೆ (!) ಮೇರೆಗೆ ಉಪವಾಸ ಮುರಿಯಿತು. ಹಾಗೆ ಮಾಡುವ ಮುನ್ನ, ತಾನೊಂದು ಪಾರ್ಟಿ ಕಟ್ಟುವ ಚಿಂತನೆ ಹರಿಬಿಟ್ಟಿತು. ಅಂದು ಸಂಜೆ ಕಥಾನಾಯಕ ಅರವಿಂದ್ ಕೇಜ್ರಿವಾಲರ ಭಾಷಣ ಕೇಳಿದ ಪ್ರತಿಯೊಬ್ಬ ರಾಜಕಾರಣಿ ಗ್ರೇಟ್ ಇಂಡಿಯನ್ ಲಾಫ್ಟರ್ ಶೋನೋಡಿದವರಂತೆ ಬಿದ್ದುಬಿದ್ದು ನಕ್ಕಿರಬೇಕು. ಅಲ್ಲದೆ ಮತ್ತೇನು? ಪಾರ್ಟಿಗೆ ಜನ ಹೆಸರು ಕೊಡುತ್ತಾರಂತೆ. ಪ್ರಣಾಳಿಕೆಯನ್ನೂ ಜನರೇ ರಚಿಸುತ್ತಾರಂತೆ. ಅಭ್ಯರ್ಥಿಯ ಆಯ್ಕೆಯೂ ಜನರದ್ದೇ ಅಂತೆ. ಕೊನೆಗೆ ಅದೇ ಜನರು ಅಭ್ಯರ್ಥಿಯನ್ನು ಗೆಲ್ಲಿಸುತ್ತಾರಂತೆ! ಗಾಂಧಿ ಮಾದರಿಯ ಹೋರಾಟದ ಕುರಿತಂತೆ ಗಂಟೆಗಟ್ಟಲೆ ಭಾಷಣ ಬಿಗಿದಿದ್ದ ಅಣ್ಣಾ ಟೀಮ್ ಈಗ ಈ ಹೋರಾಟಗಳಿಂದ ಪ್ರಯೋಜನವಿಲ್ಲವೆಂದು ಷರಾ ಬರೆದುಬಿಟ್ಟರಲ್ಲಾ, ಗಾಂಧಿಯ ಶವ ಅಂದು ಸಮಾಧಿಯೊಳಗೆ ಒಮ್ಮೆ ಬೆಚ್ಚಿ ಬಿದ್ದಿರಲು ಸಾಕು.
ಮುಂದಿನ ಹೋರಾಟವನ್ನು ಸರ್ವನಾಶ ಮಾಡುವ ಪ್ರಯತ್ನ ಅದಾಗಿತ್ತು. ಒಂದು ದಿನದ ನಂತರ ಅಣ್ಣಾ ತಿರುಗಿಬಿದ್ದರು. ಈ ತಂಡದ ಸಹವಾಸವೇ ಸಾಕಪ್ಪಾ ಎಂದರು. ಜನಕ್ಕೀಗ ಗೊಂದಲವೋ ಗೊಂದಲ. ಮುಂದಿನ ಆಂದೋಲನಕ್ಕೆ ನಡೆಯಬೇಕೋ, ಮುಂದಿನ ಕೆಲಸ ನೋಡಿಕೊಂಡು ತೆಪ್ಪಗೆ ಮನೆಯಲ್ಲೇ ಉಳಿಯಬೇಕೋ.. ಗೆಲ್ಲುವ ಸಂಭವ ಬಲು ಕಡಿಮೆ. ಬಾಬಾ ರಾಮದೇವ್ ಬಾಯಿಗೆ ಬೀಗ ಹಾಕಿದ್ದು ಮೊದಲ ಬಾರಿ. ದೇಶದ ಯಾವುದೇ ವಿಚಾರದಲ್ಲೂ ಅವರ ಪ್ರತಿಕ್ರಿಯೆ ಯಾವಾಗಲೂ ಇದ್ದದ್ದೇ! ಈ ಬಾರಿ ಮಾತ್ರ ಅವರು ಮೌನವಹಿಸಿಬಿಟ್ಟರು. ಮುಂದೇನೆಂದು ಅವರಿಗೂ ಒಂದು ಕ್ಷಣ ಗೊಂದಲವಾಗಿರಬೇಕು.
ಆ ಹೆದರಿಕೆಯನ್ನೆಲ್ಲ ಓಡಿಸಿಬಿಡುವಂಥ ಪ್ರತಿಕ್ರಿಯೆ ಈಗ ಸಿಕ್ಕಿದೆ. ಕಳೆದ ಎರಡು ದಿನಗಳಿಂದ ರಾಮಲೀಲಾ ಮೈದಾನದತ್ತ ಹರಿದು ಬರುತ್ತಿರುವ ಜನ ಸಂದಣಿ ಭರವಸೆ ಹುಟ್ಟಿಸಿದೆ. ದೂರದಿಂದ ಬಂದವರು ವಿಳಾಸ ಕೇಳಲೆಂದು ಹೋದರೆ, ರಾಮಲೀಲಾ ಮೈದಾನಕ್ಕೆ ಹೀಗೆ ಹೋಗಿಅಂತ ಹೇಳುವ ಮುನ್ನ ಜನ ದಾರಿ ಕಂಡುಕೊಂಡುಬಿಡುತ್ತಾರೆ. ಹರಿಯಾಣಾದಿಂದ ಇಪ್ಪತ್ತು ಇಪ್ಪತ್ತೆರಡು ಸಾವಿರ ಜನರಾದರೂ ಬಂದು ಪೆಂಡಾಲಿನೊಳಕ್ಕೆ ಕೂತುಬಿಟ್ಟಿದ್ದಾರೆ. ಮಳೆಯಿಂದ ಭೂಮಿ ಒದ್ದೆಯಾಗಿ ಕೂರಲು ಸ್ವಲ್ಪ ತೊಂದರೆಯೆನಿಸಿದೆಯಾದರೂ ವಾತಾವರಣ ತಂಪಾಗಿದೆಯಲ್ಲ, ಅದೇ ಖುಷಿ.
ಬಾಬಾರ ತಂಡವೂ ಪಾಠ ಕಲಿತಿದೆ. ಕಳೆದ ಬಾರಿ ಮಾಡಿದ ಲಕ್ಷುರಿ ವ್ಯವಸ್ಥೆಗಳು ಈ ಬಾರಿ ಇಲ್ಲ. ಫ್ಯಾನುಗಳಿಲ್ಲ, ನೀರು ಸಿಂಪಡಿಸುವ ಏಸಿಗಳಿಲ್ಲ. ಕುಡಿಯುವ ನೀರಿಗಾಗಿ ಸ್ವಲ್ಪ ದೂರ ಹೋಗಬೇಕು. ಊಟ ತಿಂಡಿಯ ವ್ಯವಸ್ಥೆಯೂ ಅತ್ಯಂತ ಸರಳ. ಹೀಗಾಗಿ ಈ ಬಾರಿಯ ಹೋರಾಟ ಗಾಂಧಿ ಮಾದರಿಗೆ ಅತ್ಯಂತ ಹತ್ತಿರ. ಕರ್ನಾಟಕದಿಂದ ಸುಮಾರು ಎರಡು ಸಾವಿರದಷ್ಟು ಜನ ಮುಂಚಿತವಾಗಿಯೇ ಬಂದು ಸೇರಿದ್ದಾರೆ. ದಕ್ಷಿಣದ ಕೊಡಗಿನಿಂದ ಹಿಡಿದು ಉತ್ತರದ ಬೀದರ್‌ನ ವರೆಗೆ ಜನ ನೋಡಲು, ಮಾತನಾಡಲು ಲಭ್ಯ. ಪೂರ್ಣಾವಧಿ ಕಾರ್ಯಕರ್ತ ಗಿರೀಶ್‌ರನ್ನು ಮಾತನಾಡಿಸಿದಾಗ ಆತ, ಉಪವಾಸ ಕೂರಲು ಇಚ್ಛಿಸುತ್ತೇನೆ. ಸತ್ತರೂ ಚಿಂತೆ ಇಲ್ಲಎಂದರು ಆ ಮಾತುಗಳಲ್ಲಿ ದೃಢತೆ ಕಂಡಿತು. ಮೈದಾನದ ಮೂಲೆಮೂಲೆಗೂ ಮಾಧ್ಯಮಗಳು ಸುತ್ತಾಡುತ್ತಿವೆ. ಹೋರಾಟಗಾರರನ್ನು ಮಾತನಾಡಿಸುತ್ತಿವೆ. ಬಹುಶಃ ಈ ಬಾರಿ ಒಂದು ಫಲಿತಾಂಶ ಬರಬಹುದು ಎನ್ನಿಸುತ್ತಿದೆ.
ನೆನ್ನೆ ತಾನೆ ಸಂಸತ್ತಿನ ಅಧಿವೇಶನ ಶುರುವಾಗಿದೆ. ವಿರೋಧ ಪಕ್ಷಗಳು ಈ ಹೋರಾಟವನ್ನೆ ಅಸ್ತ್ರವನ್ನಾಗಿಟ್ಟುಕೊಂಡು ಕುಳಿತರೆ ಸರ್ಕಾರಕ್ಕೆ ಮುಜುಗರವಾಗುವ ಎಲ್ಲ ಸಾಧ್ಯತೆಗಳೂ ಇವೆ. ಮುಖ ಉಳಿಸಿಕೊಳ್ಳಲು ಅವರು ಒಂದೆರಡು ವಿಚಾರಗಳೊಂದಿಗೆ ಸಮ್ಮತಿ ವ್ಯಕ್ತಪಡಿಸಲೂಬಹುದು. ಅಥವಾ ಪ್ರತಿಪಕ್ಷಗಳೂ ಕೈಜೋಡಿಸಿ ಅಸ್ಸಾಮ್ ವಿಚಾರವನ್ನು, ಪುಣೆಯ ಬಾಂಬ್ ಸ್ಫೊಟವನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಸಭಾತ್ಯಾಗ ಮಾಡಿದರೂ ಮಾಡಬಹುದು. ಹಾಗಾಗಿಬಿಟ್ಟರೆ ಕಾಂಗ್ರೆಸ್ಸಿಗೆ ನಿರಾಳ. ರಾಮಲೀಲಾ ಮೈದಾನದಲ್ಲಿ ಎದೆಬಡಿತ ಹೆಚ್ಚುವುದು. ನಂತರದ ಒಂದೊಂದು ದಿನವೂ ಹೋರಾಟಗಾರರ ಪಾಲಿಗೆ ಕರಾಳವಾಗಬಹುದು ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. ನವೆಂಬರ್ ೧೧ಕ್ಕೆ ಅಧಿವೇಶನಕ್ಕೆ ತೆರೆ. ಅದಕ್ಕೆ ಮುಂಚೆ ಪರಿಹಾರ ದಕ್ಕಲಿಲ್ಲವೆಂದರೆ ಉತ್ಸಾಹ ಕುಂದಿ, ಕೊನೆಗೆ ಹೋರಾಟ ಅಣ್ಣಾ ಟೀಮಿನ ಹಾದಿ ಹಿಡಿದುಬಿಡುತ್ತಾ? ಈ ಭಯ ಅನೇಕರನ್ನು ಕಾಡುತ್ತಿದೆ.
ಈ ವಿಚಾರವಾಗಿ ಸಂಘಟನೆಯ ಕೇಂದ್ರಮಟ್ಟದ ನಾಯಕರು ಮುಗುಮ್ಮಾಗಿದ್ದಾರೆ. ಹಿಂದೆ ಆಗಿದ್ದನ್ನೂ ಇಂದು ಆಗುತ್ತಿರುವುದನ್ನೂ ಮುಂದೆ ಆಗಬಹುದಾದ್ದನ್ನು ತೌಲನಿಕವಾಗಿ ಅಧ್ಯಯನ ನಡೆಸಿ ಗೆಲುವು ನಿಶ್ಚಯವೆಂದು ಖಚಿತಪಡಿಸಿಕೊಂಡ ಮೇಲೆಯೂ ಚಿಂತೆಯ ಗೆರೆಗಳು ಇದ್ದೇ ಇವೆ. ೬೫ ವರ್ಷಗಳಿಂದ ರಕ್ತದ ಕಣಕಣದಲ್ಲಿ ರಾಜಕೀಯವನ್ನೆ ತುಂಬಿಕೊಂಡಿರುವ ಕಾಂಗ್ರೆಸ್ಸಿನ ದಾಳ ಹೇಗಿರುತ್ತದೆ ಎನ್ನುವ ಆಧಾರದ ಮೇಲೆ ಹೋರಾಟದ ಭವಿಷ್ಯ ನಿಶ್ಚಯವಾಗಲಿದೆ. ಶಕುನಿ ಎಷ್ಟೆಲ್ಲ ಕುತಂತ್ರ ಮಾಡಿದರೂ ಗೆದ್ದಿದ್ದು ಮಾತ್ರ ಪಾಂಡವರೇ ಅಂತ ಎಲ್ಲರಿಗೂ ಗೊತ್ತು. ಅದಕ್ಕೇ ಕಾರ್ಯಕರ್ತರಲ್ಲಿ ವಿಶ್ವಾಸ ಮಾಸಿಲ್ಲ.
ಗೆಲುವಿನ ಸಾಧ್ಯತೆ ೬೦:೪೦ಇಂದ ಅಣ್ಣಾ ಹಜಾರೆಯವರ ಹಿನ್ನಡೆಯಿಂದಾಗಿ ೫೦:೫೦ಗೆ ಬಂದು ನಿಂತಿದೆಯೆಂದು ಯುವ ಭಾರತ್ ನ ಪ್ರಮುಖರೊಬ್ಬರು ಹೇಳಿದ ಮಾತು ಸುಳ್ಳಲ್ಲ. ಆದರೆ ಯುದ್ಧಕ್ಕೆ ಮುನ್ನ ೫೦ ಪ್ರತಿಶತದಷ್ಟು ಗೆಲ್ಲೋದು; ಅದರಲ್ಲೂ ಪರಮ ಭ್ರಷ್ಟ ಶತ್ರುಗಳ ವಿರುದ್ಧ! ಖಂಡಿತ ತಮಾಷೆಯ ಮಾತಲ್ಲ.
ಒಂದಂತೂ ಸತ್ಯ. ಈ ಹೋರಾಟದ ನಂತರ ಗೆಲುವೋ ಸೋಲೋ.. ದೇಶಾದ್ಯಂತ ಹೋರಾಟಗಳ ಕುರಿತಂತೆ ಒಂದು ವ್ಯಾಪಕ ಚರ್ಚೆಯಂತೂ ನಡೆಯಲಿಕ್ಕಿದೆ. ರಾಜಕೀಯ ಪಕ್ಷಗಳು, ವ್ಯಕ್ತಿಗಳ ಕುರಿತಾಗಿ ಹುಟ್ಟಿರುವ ಅಸಹ್ಯ ಮುಂದೊಮ್ಮೆ ಕಾಳ್ಗಿಚ್ಚಾಗಲು ಇದು ಕಿಡಿಯಾಗಲಿದೆ. ಮುಂದೊಂದು ದಿನ ಯಾರದ್ದೇ ನೇತೃತ್ವವಿಲ್ಲದೆ ಜನ ಗ್ರಾಮಗ್ರಾಮಗಳಲ್ಲೂ ಸಿಡಿದೇಳುತ್ತಾರಲ್ಲ, ಅದಕ್ಕೆ ಪ್ರೇರಣೆಯಾಗಲಿದೆ. ಅನುಮಾನವೇ ಇಲ್ಲ. ಅದಕ್ಕೇ ಈ ಹೋರಾಟ ನಿರ್ಣಾಯಕ. ಗೆದ್ದರಂತೂ ಗೆಲುವೇ. ಸೋತರೂ ಗೆಲುವೇ.

ಕೊನೆಯ ಮಾತು:
ಬಾಬಾ ರಾಮದೇವ್‌ರ ಮಹತ್ವದ ಹೋರಾಟದಲ್ಲಿ ಈ ಬಾರಿ ಬಲು ದೊಡ್ಡ ಕೊರತೆ ಆಚಾರ್ಯ ಬಾಲಕೃಷ್ಣರದು. ಕೇಂದ್ರ ಸರ್ಕಾರ ಬಾಬಾರ ಬಲಗೈಯಂತಿರುವ ಆಚಾರ್ಯ ಅವರನ್ನು ಸಿಬಿಐ ಬಳಸಿ ಜೈಲಿಗಟ್ಟಿದೆ. ಸೂಕ್ತ ದಾಖಲೆಗಳಿಲ್ಲದ ಪಾಸ್‌ಪೋರ್ಟ್ ಎಂಬ ಆರೋಪ. ನ್ಯಾಯಾಲಯದ ಮುಂದೆ ಒಮ್ಮೆ ಹಾಜರಾಗಲಿಲ್ಲ ಎಂಬ ಕಾರಣಕ್ಕೆ ತರಾತುರಿಯಲ್ಲಿ ಬಂಧಿಸಿರುವುದು ರಾಮದೇವ್ ಅವರ ಗೆಳೆಯರಿಗೆ ಸ್ಪಷ್ಟ ಸಂದೇಶ. ಅಣ್ಣಾರೊಂದಿಗೆ ಗುರುತಿಸಿಕೊಂಡಿದ್ದ ಕೆಲವರನ್ನೂ ಸರ್ಕಾರ ಹೀಗೇ ಗುಡಿಸಿಹಾಕುವ ಯತ್ನ ನಡೆಸಿದ್ದು ಈಗ ಇತಿಹಾಸ. ಹೀಗಾಗಿ ಅನೇಕರು ಈ ಹೋರಾಟದೊಂದಿಗೆ ಗುರುತಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಮೇಲ್ನೋಟಕ್ಕೆ ಇದು ಕೇಂದ್ರ ಸರ್ಕಾರದ ಗೆಲುವು. ಬಾಬಾರ ಬಲಗೈ ಮುರಿದು ಹೋರಾಟದ ದಿಕ್ಕು ತಪ್ಪಿಸುವ ಯತ್ನ. ಆದರೆ ಏಕೋ ಮಾಧ್ಯಮಗಳಲ್ಲಿ ಬಾಬಾರನ್ನು ಕಂಡವರಿಗೆ, ಅವರಿಗೆ ಈ ಬಂಧನದಿಂದ ವಿಶೇಷ ಶಕ್ತಿ ಹರಿದಿದೆ ಎನ್ನಿಸುತ್ತಿದೆ. ಬಹುಶಃ ಇಂದಿನಿಂದ ಶುರುವಾಗುವ ಹೋರಾಟದಲ್ಲಿ ಸಿಬಿಐ, ಸಿಎಜಿ ಕುರಿತಂತೆ ಚರ್ಚೆಯಾಗಿ, ಕಾಂಗ್ರೆಸ್ಸಿನ ವಕ್ರದೃಷ್ಟಿಗೆ ಬಿದ್ದಿರುವ ಪಕ್ಷಗಳೆಲ್ಲ ಒಂದಾಗುತ್ತವೆ ಎನ್ನುವ ಭರವಸೆ ಇರಬಹುದು.

* * * * * * *

ಚಿತ್ರಕೃಪೆ : ಚಕ್ರವರ್ತಿ ಸೂಲಿಬೆಲೆ

3 ಟಿಪ್ಪಣಿಗಳು Post a comment
  1. Kumar
    ಆಗಸ್ಟ್ 10 2012

    Wonderful!

    ಉತ್ತರ
  2. ಆಗಸ್ಟ್ 10 2012

    Photo caption gaLannu subhead thara use madideeri.or copy-paste maduvaaga haage aagide. dayavittu sari padisi.
    – CheT

    ಉತ್ತರ
  3. ರವಿ
    ಆಗಸ್ಟ್ 10 2012

    ಸೂಪರ್ , ಶುಭ ಹಾರೈಕೆಗಳು ಸರ್ . ನಮ್ಮ ಬೆಂಬಲ ಸದಾ ಇರುತ್ತೆ. ಹಾಗೆಯೇ ಇನ್ನೊಂದು ಮಾತು ಇದು ಇನ್ನೊಂದು ಅಣ್ಣಾ ಹೋರಾಟ ಆಗದಿರಲಿ ಎಂದು ದೇವರಲ್ಲಿ ಕೈಮುಗಿದು ಪ್ರಾರ್ಥಿಸುವೆ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments