ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 15, 2012

1

ಈ ಸ್ವಾತಂತ್ರ್ಯಕ್ಕೆ ಅಸ್ಸಾಮಿನ ಉರಿಯ ಅರಿವುಂಟೇ?

‍ನಿಲುಮೆ ಮೂಲಕ

– ಸಂತೋಶ್ ತಮ್ಮಯ್ಯ

ನೇಪಾಳದ ಹಿಂದೂ ರಾಜನನ್ನು ಪದಚ್ಯುತಗೊಳಿಸಿದಾಗ ಭಾರತದಲ್ಲಿ ಯಾವ ಕಮ್ಯುನಿಷ್ಟ್ ಕಾಮ್ರೆಡನಿಗೂ ಪೆಟ್ಟು ಬಿದ್ದಿರಲಿಲ್ಲ. ಪಾಕಿಸ್ಥಾನದ ರಿಂಕಲ್ ಕುಮಾರಿಯನ್ನು ಮತಾಂಧರು ಮತಾಂತರಿಸಿದಾಗ ಇಲ್ಲಿನ ಯಾವ ಹಿಂದುವೂ ಬೀದಿಗೆ ಇಳಿದಿರಲಿಲ್ಲ. ಅಲ್ಲೆಲ್ಲೋ ಪಾಶ್ಚಾತ್ಯ ದೇಶದಲ್ಲಿ ಗಣಪತಿ, ಲಕ್ಷ್ಮಿ, ಬ್ರಹ್ಮದೇವರನ್ನು ಹೆಂಗಸರ ಚಡ್ಡಿಗಳಲ್ಲಿ ಚಿತ್ರಿಸಿ ರಾಂಪ್‌ವಾಕ್ ಮಾಡಿದಾಗಲೂ ಹಿಂದುಗಳಾರೂ ಬಸ್ಸುಗಳಿಗೆ ಕಲ್ಲು ಬಿಸಾಡಿರಲಿಲ್ಲ. ಅದಾವುದೋ ಕೆರೆಬಿಯನ್ ದೇಶದಲ್ಲಿ ಹಿಂದುವಾದವನು ಅಧ್ಯಕ್ಷನಾಗಬಾರದು ಎಂದಾಗ ಜಗತ್ತಿನಾದ್ಯಂತ ಹಿಂದುಗಳಾರೂ ಖಂಡಿಸಲಿಲ್ಲ. ಅವೆಲ್ಲಾ ಬಿಡಿ. ಕಾಶಿ ವಿಶ್ವನಾಥನ ದರ್ಶನಕ್ಕೆ ಹೋದರೂ ಹಿಂದುಗಳಿಗೆ ಪಕ್ಕದ ಪರಮ ಅಸಹ್ಯವಾದ ಕಟ್ಟಡವೊಂದು ಸಾಮರಸ್ಯದ ಪ್ರತೀಕದಂತೆಯೇ ಕಾಣುತ್ತದೆ. ಅಯೋಧ್ಯೆಯ ರಾಮ ಇನ್ನೂ ಟೆಂಟ್ ವಾಸಿಯಾದರೂ ಬಹುತೇಕರಿಗೆ ಅದೇನೂ ಅಂಥ ಕೊರಗಿನಂತೆ ಕಾಣುವುದಿಲ್ಲ. ಯಾವ ಹಿಂದೂ ಸಂನ್ಯಾಸಿಯೂ ಮೌಲ್ವಿಗಳಂತೆ ಅಬ್ಬರಿಸುವುದಿಲ್ಲ. ಒಂದು ವೇಳೆ ಸಂನ್ಯಾಸಿ ಅಬ್ಬರಿಸಿದರೂ ಯಾರಿಗೂ ಹೆದರಿಕೆಯಾಗುವಂತೆ ಕಾಣುವುದೂ ಇಲ್ಲ.

ಅದು ಹಿಂದುವಿನ ಅತಿಯಾದ ಸಾತ್ತ್ವಿಕತೆಯೋ ಅಥವಾ ಭಂಡತನ ಮಿಶ್ರಿತ ಅತಿಯಾದ ಭಯವೋ ಎಂದು ವಿಶ್ಲೇಷಿಸುವುದು ಕಷ್ಟ. ಆದರೆ ಆತನಿಗೆ ಹಿಂದು ಎಂಬ ಕಾರಣಕ್ಕೆ ಸಿಟ್ಟು ಬರದಿರುವುದಂತೂ ಸತ್ಯ. ಮೇಲಿನ ಎಲ್ಲಾ ಸಂದರ್ಭಗಳಲ್ಲಿ ಅದು ಸಾಭೀತಾಗಿದೆ. ಬೀದಿಗಿಳಿಯಲು, ಪ್ರತಿಭಟಿಸಲು ಹಿಂದುವಿಗೆ ದಿನಕ್ಕೊಂದು ಕಾರಣವಾದರೂ ಸಿಗುತ್ತವೆ. ಆದರೆ ಅದು ನಡೆಯುವುದಿಲ್ಲ. ಏಕೆಂದರೆ ಹಿಂದುವಿಗೆ ಸಮಾಜಕ್ಕಾಗಿ ಎಂದಿಗೂ ಸಿಟ್ಟು ಬರುವುದಿಲ್ಲ.

ಆದರೆ ಮುಸ್ಲಿಮರಿಗೇಕೆ ಅಷ್ಟೊಂದು ಸಿಟ್ಟು ಬರುತ್ತದೆ? ಏಕೆ ಬರಬೇಕು? ಹಿಂದುಗಳಿಗೆ ಸಿಟ್ಟು ಬರಲು ನ್ಯಾಯವಾದ ಕಾರಣವಾದರೂ ಇದೆ. ಆದರೆ ಮುಸ್ಲಿಮರಿಗಾದರೂ ಏನಿದೆ?  ಅವರು ಹಿಂದುಗಳ ದೇವಸ್ಥಾನ ಒಡೆದರು, ಹಿಂದೂ ಸ್ತ್ರೀಯನ್ನು ಕೆಡಿಸಿದರು, ಹಿಂದೂ ಆಸ್ತಿಗಳನ್ನು ಕಬಳಿಸಿದರು, ಹಿಂದೂ ರಾಷ್ಟ್ರವನ್ನು ಒಡೆದರು, ಹಿಂದೂ ನಾಯಕನನ್ನು ತೆಗಳಿದರು, ಭಾರತದಲ್ಲಿ ಅವರು ತಮ್ಮ ನಡೆಯುದ್ದಕ್ಕೂ ಹಿಂದು ಎಂಬುದರ ಮೇಲೆಲ್ಲಾ ದ್ವೇಷ ಬೆಳೆಸಿಕೊಂಡೇ ಬದುಕಿದರು. ಹೆದರಿಸಿದರು, ಭಯವನ್ನು ಹುಟ್ಟಿಸಿದರು. ಆಳಿದರು. ಆದರೂ ಅವರಿಗೆ ಇನ್ನೂ ಸಿಟ್ಟು ಬರುತ್ತದೆ.  ಹಿಂದುವಿನ ಮೇಲೆಯೇ ಸಿಟ್ಟು ಬರುತ್ತದೆ. ಅವರ ಸಿಟ್ಟಿಗೆ ಪದೇ ಪದೇ ಹಿಂದುವೇ ಬಲಿಯಾಗುತ್ತಾನೆ.ಅದು ಹದೀಸ್ ಪ್ರೇರಿತ, ಕಠೋರ, ಹಳೇ ಶಿಲಾಯುಗವನ್ನು ನೆನಪಿಸುವ ಮತಾಂಧತೆ.

ಆ ಮತಾಂಧತೆಗೆ ದೇಶ ಸಾಕಷ್ಟು ಅನುಭವಿಸಿಯಾಗಿದೆ. ಡೆನ್ಮಾರ್ಕಿನ ಪತ್ರಿಕೆಯೊಂದರಲ್ಲಿ ಬಂದ ವ್ಯಂಗ್ಯ ಚಿತ್ರಕ್ಕೆ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಹಿಂದೂ ಸ್ಟಿಕ್ಕರ್ ಅಂಟಿಸಿದ್ದ ಕಾರುಗಳೇ ಪುಡಿಯಾಗುತ್ತವೆ. ಸದ್ದಾಮನ ಸಾವಿಗೆ ಹೈದರಾಬಾದಿನಲ್ಲಿ ಹೆಣ ಬೀಳುತ್ತದೆ. ಪಾನ್ ಇಸ್ಲಾಂ ಅಥವಾ ಇಸ್ಲಾಂ ಬ್ರದರ್‌ಹುಡ್ ಗೆ ಹಿಂದೂ ಬಲಿಯಾಗುತ್ತಾ ಬಂದಿದ್ದಾನೆ. ಪಾನ್ ಇಸ್ಲಾಮನ್ನು ಪ್ರಕಟಪಡಿಸಲು ಮುಸಲ್ಮಾನ ಜಗತ್ತು ಸದಾ ಕಾಯುತ್ತಿದೆಯೇನೋ ಎಂಬಂತೆ ಘಟನೆಗಳು ನಡೆಯುತ್ತವೆ. ಅಥವಾ ಅಂಥ ಘಟನೆಗಳನ್ನು ಸೃಷ್ಟಿಸಲಾಗುತ್ತದೆ.

ಅದನ್ನು ಸಾಭೀತು ಪಡಿಸಲು ಇದೀಗ ಅಸ್ಸಾಂ ಮತ್ತು ಬರ್ಮಾದ ಪಾಳಿ.

ಅಸ್ಸಾಂ ಮತ್ತು ಬರ್ಮಾದಲ್ಲಿ ಮುಸಲ್ಮಾನರ ಮೇಲೆ ದೌರ್ಜನ್ಯವಾಯಿತೆಂದೂ , ಅದಕ್ಕೆ ಸುನ್ನತ್ ಮಾಡಿದ ಮೃತದೇಹಗಳು ಸಿಕ್ಕಿದ್ದೇ ಸಾಕ್ಷಿಯೆಂದೂ ಮುಸಲ್ಮಾನ ಸಂಘಟನೆಗಳು ಪ್ರಚಾರ ಮಾಡಿದವು. ಅದಕ್ಕಾಗಿ ಅದರದ್ದು ಅದೇ ರಾಗ. ಅದೇ ಪ್ರತಿಭಟನೆ. ಪಾನ್ ಇಸ್ಲಾಮಿನ ಪ್ರಕಟೀಕರಣ. ಆಗಸ್ಟ್ ೧೦ ರಂದು ಮಧ್ಯಾಹ್ನ  ರಾಂಚಿಯಲ್ಲಿ ಶುಕ್ರವಾರ ಪ್ರಾರ್ಥನೆ ಮುಗಿಸಿದವರೇ ನೇರವಾಗಿ ಬೀದಿಗೆ ಬಂದರು. ರಾಂಚಿಯ ಪ್ರಮುಖ ರಸ್ತೆಗಳನ್ನು ವಶಪಡಿಸಿಕೊಂಡರು. ಸುಮಾರು ೫೦೦ರಷ್ಟಿದ್ದ  ಮುಸಲ್ಮಾನರು ಕಂಡಕಂಡವರನ್ನು ಹೊಡೆದರು. ಬೈಕುಗಳನ್ನು ಸುಟ್ಟರು. ಸುಮಾರು ಒಂದೂವರೆ ಗಂಟೆಗಳ ಕಾಲ ಅಲ್ಲಿ ಪುಂಡ ಮುಸಲ್ಮಾನರು ನಿರಂತರ ದಾಂಧಲೆ ನಡೆಸಿದರು.

ಅದಾದ ಮಾರನೆ ದಿನ ಆಗಸ್ಟ್ ೧೧ ರಂದು ಮುಂಬೈನಲ್ಲಿ ಸುಮಾರು ೨೦,೦೦೦ ಜನರ ಪ್ರತಿಭಟನೆ. ಅವರ ಪ್ರತಿಭಟನೆ ಎಂದರೆ ಹೆಣ ಬೀಳಬೇಕು, ರಕ್ತ ಹರಿಯಬೇಕು ಎಂಬಂತೆ ಮುಂಬೈನಲ್ಲೂ ಹೆಣ ಬಿತ್ತು. ೬೩ ಜನರು ಗಾಯಗೊಂಡರು. ೪೯ ಬಸ್ಸುಗಳು, ಅವೆಷ್ಟೋ ಬೈಕುಗಳು ಕರಕಲಾದವು. ಮುಸಲ್ಮಾನರ ಉಚ್ಚಿಷ್ಠವನ್ನೂ ಪರಮ ಪವಿತ್ರವೆಂದು ಭಾವಿಸುವ ಮಾಧ್ಯಮಗಳ ವಾಹನಗಳ ಮೇಲೆ ದಾಳಿಯಾಯಿತು. ಮಹಿಳಾ ವರದಿಗಾರರನ್ನು ಎಳೆದಾಡಲಾಯಿತು. ಭಾರತದ ವಾಣಿಜ್ಯ ರಾಜಧಾನಿ ಮುಂಬೈಯಲ್ಲೇ ಇವೆಲ್ಲವೂ ನಡೆದವು. ಈ ಪ್ರತಿಭಟನೆಯನ್ನು ಆಯೋಜಿಸಿದ್ದ ರಜಾ ಅಕಾಡೆಮಿ ಯ ಮುಖ್ಯಸ್ಥ ಫರಾನ್ ಶೇಖ್ ಗಲಭೆಯ ಅನಂತರ ” ಇದೊಂದು ಪ್ರಾರ್ಥನಾ ಕೂಟವಾಗಿತ್ತು. ಈ ಪ್ರಾರ್ಥನಾ ಕೂಟದಲ್ಲಿ ಅಸ್ಸಾಂ ಮತ್ತು ಬರ್ಮಾದ ಮುಸ್ಲಿಂ  ಸಹೋದರರ ಸಮಸ್ಯೆಯ ಬಗ್ಗೆ ಚರ್ಚಿಸಲು ವಿವಿಧ ಸಂಘಟನೆಗಳು ಸೇರಿದ್ದೆವು ಅಷ್ಟೇ” ಎಂದು ಪ್ರತಿಕ್ರಿಯೆ ನೀಡಿದ್ದರು.  ಸಮಸ್ಯೆಯ ಬಗ್ಗೆ ಚರ್ಚಿಸಲು ಶುದ್ಧಾನುಶುದ್ಧ ಅನಕ್ಷರಸ್ಥ ಜನರು! ಅದೂ ಹಾಕಿ ಸ್ಟಿಕ್ಕುಗಳು, ಪೆಟ್ರೋಲ್ ಬಾಂಬ್‌ಗಳು, ಮರದ ಹಲಗೆಗಳು, ಕಲ್ಲುಗಳು, ಬೆಂಕಿ ಪೊಟ್ಟಣಗಳು!  ಮುಸಲ್ಮಾನರ ಪ್ರಾರ್ಥನೆಗೆ ಇವೆಲ್ಲವೂ ಅಗತ್ಯವೇ? ಅಮರ್ ಜವಾನ್ ಸ್ಮಾರಕವನ್ನು ಒಡೆಯಲೇ ಬೇಕೇನು? ಅವರ ಪ್ರಾರ್ಥನೆಯೆಂದರೆ ದೊಂಬಿಯ ಸ್ವರೂಪವೇ? ಅಥವಾ ದೊಂಬಿಯೇ ಪ್ರಾರ್ಥನೆಯೇ ಎಂಬ ಸಂಶಯ ಫರಾನ್ ಶೇಖ್ ಮಾತಿನಿಂದ ಬಾರದೇ ಇರದು. ಸಮಸ್ಯೆಯ ಬಗ್ಗೆ ಚರ್ಚಿಸುವುದು ಪ್ರಜ್ನಾವಂತರು ಒಂದೆಡೆ ಸೇರಿ ವಿಷಯವನ್ನು ಸ್ಪಷ್ಟಪಡಿಸಿಕೊಂಡ ಬಳಿಕ. ಆದರೆ ಅಜಾದ್ ಮೈದಾನದಲ್ಲಿ ಎಲ್ಲರೂ ಎಲ್ಲದಕ್ಕೂ ಸಿದ್ಧವಾಗಿಯೇ ಬಂದಿದ್ದರು. ಕಣ್ಣಲ್ಲಿ ರಕ್ಕಸತನ, ಮನದಲ್ಲಿ ಘೋರ ತಾಮಸ, ಹಳೇ ಶಿಲಾಯುಗವನ್ನು ಹೊತ್ತಂತಹ ಮುಖಗಳು. ಇವರೇ ಹೀಗಿಬೇಕಾದರೆ ಇನ್ನು ಅಸ್ಸಾಂ ಮತ್ತು ಬರ್ಮಾದಲ್ಲಿರುವ ಇವರ ” ಸಹೋದರರು” ಇನ್ನು ಹೇಗಿರಬಹುದು?

ಅಸ್ಸಾಂ,ಮುಸಲ್ಮಾನರ ಸಂಖ್ಯೆ ಹೆಚ್ಚುವ ಮೊದಲು ಅದು ಚೆನ್ನಾಗಿಯೇ ಇತ್ತು. ಬೋಡೋ. ಕಚರಿ, ದಿಮ್ಸ ವೊದಲಾದವರು ಬೆಟ್ಟದ ಮೇಲೊಂದು ಮನೆ ಮಾಡಿಕೊಂಡು ಸುಖವಾಗಿಯೇ ಇದ್ದರು. ಆದರೆ ಯಾವಾಗ ಟೋಪಿವಾಲಾಗಳು ಬಾಂಗ್ಲಾದಿಂದ ಮಾವನ ಮನೆಗೆ ಬಂದಂತೆ ಬರತೊಡಗಿದರೋ ಸಮಸ್ಯೆಗಳು ಒಂದೊಂದಾಗಿ ಆರಂಭವಾಗತೊಡಗಿದವು.  ಆರಂಭದಲ್ಲಿ ವನವಾಸಿಗಳಿಂದ ಕಾಡುತ್ಪತ್ತಿಗಳನ್ನು ಕೊಂಡುಕೊಳ್ಳಲು ಆರಂಭಿಸಿದವರು ನಂತರ  ಕಾಡನ್ನೇ ಕದಿಯಲು ಶುರುಮಾಡಿದರು. ಆರಂಭದಲ್ಲಿ ಘರ್ಷಣೆಗಳು ಹೀಗೆ ಪ್ರಾರಂಭವಾದವು. ಮೆಲ್ಲಮೆಲ್ಲನೆ ಅವರಿರುವಲ್ಲೇ ನೆಲೆಯೂರತೊಡಗಿದರು. ನೋಡನೋಡುತ್ತಿದ್ದಂತೆ ಬಾಂಗ್ಲಾದವರ ಸಂಖ್ಯೆ ಆಸ್ಸಾಮೀಯರ ಸಂಖ್ಯೆಗಿಂತ ವೇಗವಾಗಿ ಬೆಳೆಯತೊಡಗಿತು. ಪರಿಣಾಮ ಇಂದು ಅಸ್ಸಾಂನಲ್ಲಿ ಒಂದು ಕೋಟಿಗೂ ಅಧಿಕ ಬಾಂಗ್ಲಾ ಮುಸಲ್ಮಾನರಿದ್ದಾರೆ.  ೧೪ಕ್ಕೂ ಹೆಚ್ಚಿನ ಜಿಹಾದಿ ಸಂಘಟನೆಗಳಿವೆ.  ಫರಾನ್ ಶೇಖ್ ಮತ್ತು ಅವರಂಥ ಹಲವರ ಪ್ರಕಾರ ಇವರೆಲ್ಲರೂ ಅಜಾದ್ ಮೈದಾನದಲ್ಲಿದ್ದವರೂ ಸೋದರರು!  ಇವರ ಪ್ರಕಾರ ಶೇ. ೫ರಷ್ಟಿರುವ ಬೋಡೋಗಳು ಶೇ. ೩೫ರಷ್ಟಿರುವ ಮುಸಲ್ಮಾನರನ್ನು ಕೊಲ್ಲುತ್ತಿದ್ದಾರಂತೆ. ಬಾಲವೇ ನಾಯಿಯನ್ನು ಅಲ್ಲಾಡಿಸುತ್ತಿದೆಯಂತೆ.

ಇದು ಕೇವಲ ೧೦ ವರ್ಷಗಳ ಹಿಂದಿನ ಘಟನೆ.

ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೋಯ್ ಅಸ್ಸಾಂ ನತ್ತ ನುಸುಳುತ್ತಿರುವ ಬಾಂಗ್ಲಾ ಮುಸ್ಲಿಮರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಅದರ ಮರುದಿನವೇ ಮುಖ್ಯಮಂತ್ರಿಗಳನ್ನು ಹತ್ತಾರು ಮುಲ್ಲಾಗಳು  ಭೇಟಿಯಾದರು. ಆ ಮುಲ್ಲಾಗಳು” ಮುಂದಿನ ಚುನಾವಣೆಯ ಬಗ್ಗೆ” ಮುಖ್ಯಮಂತ್ರಿಗಳ ಬಳಿ ಚರ್ಚಿಸಿದ್ದರು ಎಂದು ಮೂಲಗಳು ಬಹಿರಂಗ ಮಾಡಿದ್ದವು. ಅದಾದ ಒಂದೆರಡು ದಿನದಲ್ಲೇ ಮುಖ್ಯಮಂತ್ರಿ ಗೊಗೋಯ್ “ಅಸ್ಸಾಮಿನಲ್ಲಿ ಒಬ್ಬನೇ ಒಬ್ಬ ಬಾಂಗ್ಲಾ ಮುಸಲ್ಮಾನನಿಲ್ಲ”ಎಂಬ ಹೇಳಿಕೆ ಕೊಟ್ಟಿದ್ದರು.  ಹೀಗಂದ ಗೊಗೋಯ್‌ಗೆ ಗಡಿಯ ಪ್ರಜ್ನೆ ಇಲ್ಲವೆಂದಲ್ಲ.  ಅಸ್ಸಾಮ್ ಮತ್ತು ಬಾಂಗ್ಲಾದ ಹಲವು ಭಾಗಗಳಲ್ಲಿ  ಗಡಿಯೆಂದು ಗುರುತಿಸಲು  ಒಂದು ಮಣ್ಣಿನ ದಿಬ್ಬವೂ ಇಲ್ಲ ಎಂದು ಅಸ್ಸಾಮಿಗೆ ಹೋಗಿದ್ದ ವಿದ್ಯಾರ್ಥಿ ಪರಿಷತ್ತಿನ ಹುಡುಗರು ಹೇಳುತ್ತಾರೆ. ಇಂಥ ಗಡಿಯನ್ನು ದಾಟಿ ಬಾಂಗ್ಲಾದ ಊರಿನಿಂದ ಅಟೋಗಳು ಭಾರತಕ್ಕೆ ಬರುತ್ತವೆ. ಅಸ್ಸಾಂನಲ್ಲಿ ಅಟೋ ಓಡಿಸಿ ಸಂಜೆ ಬಾಂಗ್ಲಾದ ಮನೆಗೆ ಮರಳುವವರೂ ಇದ್ದಾರೆ. ಇವರೂ ಭಾರತೀಯ ಮುಸಲ್ಮಾನರಿಗೆ ಸಹೋದರರೇ!

೧೯೫೧ರಲ್ಲಿ ಅಸ್ಸಾಂ ನಲ್ಲಿ ೧೯೮೧೮೫೭ ರಷ್ಟಿದ್ದ ಮುಸಲ್ಮಾನರು ೧೯೯೯ರ ಹೊತ್ತಿಗೆ ೬೩೭೩೨೦೪ಕ್ಕೆ ಏರಿತು. ಅಂದರೆ ಈ ಅವಯಲ್ಲಿ ಶೇ. ೩೦ರಷ್ಟು ಮುಸಲ್ಮಾನರು ಹೆಚ್ಚಿದ್ದರು. ೨೦೦೫ರ ಹೊತ್ತಿಗೆ ಇವರಲ್ಲಿ ಪುನಃ ಶೇ. ೩ರಷ್ಟು  ಹೆಚ್ಚಳವಾಯಿತು. ಇದಕ್ಕೆಲ್ಲಾ ಕುಟುಂಬ ಯೋಜನಾ ಸಾಮಾಗ್ರಿಗಳ ವೈಫಲ್ಯ ಎಂದು ತಿಪ್ಪೇ ಸಾರಿಸುವಂತಿಲ್ಲ. ಏಕೆಂದರೆ ಕಳೆದ ೨೦ ವರ್ಷಗಳಲ್ಲಿ ಹಿಂದುಗಳ ಸಂಖ್ಯೆ ಶೇ. ೫ರಷ್ಟು ಕುಸಿದಿದೆ. ಹೀಗೆ ಏರುತ್ತಿರುವವರು  ಬಾಂಗ್ಲಾದೇಶಿ ಮುಸಲ್ಮಾನರು. ಮತಾಂಧರು. ಇವರಿಗೆ ಬೆಂಬಲ ಕೊಡುತ್ತಿರುವವರು ದೇಶದ ಹೃದಯ ಭಾಗದಲ್ಲಿರುವವರು. ಹಿಂದು ಎಲ್ಲೆಲ್ಲಿಯೂ ಅನುಭವಿಸಬೇಕು. ಅಸ್ಸಾಂ ನಲ್ಲೂ ಪೆಟ್ಟು ತಿನ್ನಬೇಕು. ಇಲ್ಲೂ ಅದೇ ಕಾರಣಕ್ಕೆ  ಸ್ವದೇಶಿಯರಿಂದಲೂ ಪೆಟ್ಟುತಿನ್ನಬೇಕು.  ಏಕೆ ಹೀಗೆ? ಉತ್ತರ ಸ್ಪಷ್ಟ ಮತ್ತು ಒಂದೆ. ಮುಸಲ್ಮಾನರಿಗೆ ವಿನಾ ಕಾರಣ ಸಿಟ್ಟು ಬರುತ್ತದೆ. ಹಿಂದುಗಳಿಗೆ ಕಾರಣವಿದ್ದರೂ ಸಿಟ್ಟು ಬರುವುದಿಲ್ಲ.

ಯುಗಾದಿ ಮತ್ತೆ ಮತ್ತೆ ಬರುವಂತೆ ಸ್ವಾತಂತ್ರ್ಯ ದಿನವೂ ಮತ್ತೆ ಬಂದಿದೆ.  ಈ ದಿನಕ್ಕಾಗಿ ಕೆಂಪು ಕೋಟೆಯನ್ನು ಸಿಂಗರಿಸಲಾಗುತ್ತದೆ.  ಹಾಜಾರಗಳನ್ನು ಉಜ್ಜಿ ಉಜ್ಜೀ ಹೊಳಪು ಮಾಡಿ ನಾಯಿ ಕರೆಸಿ ಪರೀಕ್ಷಿಸಲಾಗುತ್ತದೆ.  ರಸ್ತೆಗಳನ್ನು ಅಂದಗಾಣಿಸಲಾಗುತ್ತದೆ. ಆಸುಪಾಸಿನ ಕಟ್ಟಡಗಳನ್ನು ಭದ್ರತಾಪಡೆಗಳು ವಶಕ್ಕೆ ತೆಗೆದುಕೊಳ್ಳುತ್ತವೆ.  ನಿಗದಿತ ಸಮಯಕ್ಕೆ ಸರಿಯಾಗಿ  ಕೀ ಕೊಟ್ಟ ಗೊಂಬೆಯಂತೆ ಪ್ರಧಾನಿಗಳು ಬರುತ್ತಾರೆ. ದೇಶದ ಸ್ವಾತಂತ್ರ್ಯ , ಸಾರ್ವಭೌಮತೆಗಳನ್ನು  ಉದ್ದರಿಸಿ ಭಾಷಣ ಮಾಡುತ್ತಾರೆ.   ಮಕ್ಕಳು ಕುಣಿಯುತ್ತಾರೆ. ಚಾನಲ್‌ಗಳು ರಂಗ್‌ದೇ ಬಸಂತಿ ಸಿನಿಮಾ ಪ್ರಸಾರ ಮಾಡುತ್ತವೆ. ಎಸ್ ಎಂ ಎಸ್ ಗಳು ಬರುತ್ತವೆ. ಆ ಸ್ವಾತಂತ್ರ್ಯಕ್ಕೆ  ಅಸ್ಸಾಂ ನ ಉರಿ ನೆನಪಾಗುವುದಿಲ್ಲ. ಮತಾಂಧತೆಯ ತೀವ್ರತೆ ಅರಿವಾಗುವುದಿಲ್ಲ.  ಅದು ಶುದ್ಧ ಸೆಕ್ಯುಲರ್ ಸ್ವಾತಂತ್ರ್ಯೋತ್ಸವ. ಅತ್ತ ಗಡಿಗಳು,  ಇತ್ತ ರಾಜಧಾನಿಗಳೇ  ಸರಿ ಇಲ್ಲದಿರುವಾಗ  ಈ ಸ್ವಾತಂತ್ರ್ಯ ದಿನ ತೀರಾ ಕೃತಕವೆನಿಸುತ್ತದೆ.  ಇಲ್ಲದಿದ್ದರೇನು ೨೦೦೦೦ ಜನರು ಒಂದೆಡೆ ಸೇರಿ  ವ್ಯವಸ್ಥೆಯನ್ನೇ ಧಿಕ್ಕರಿಸಿ,ಸ್ವಾತಂತ್ರ್ಯ, ಸಾರ್ವಭೌಮತೆಗೆ ಸೆಡ್ಡು ಹೊಡೆದಿರುವಾಗ ಧ್ವಜ ಆರೋಹಣವಾಗುತ್ತದೆ.  ಆ ಸ್ವಾತಂತ್ರ್ಯಕ್ಕೆ ಮುಂಬೈನಲ್ಲಿ ನಡೆದಿರುವುದು ನಾಳೆ ಭಟ್ಕಳದಲ್ಲಿ ನಡೆದರೇನು ಎಂಬ ಆತಂಕವಿಲ್ಲ. ಮಡಿಕೇರಿಯಲ್ಲಿ ನಡೆದರೆ ಇಡೀ ಕೊಡಗೇ ಇರುವುದಿಲ್ಲ ಎಂಬ ಸುಳಿವೇ ಇಲ್ಲ.  ಆ ಧ್ವಜವನ್ನು ಕಾಶ್ಮೀರದಲ್ಲಿ ಹಾರಿಸುವ ತಾಕತ್ತಿಲ್ಲ.  ಸ್ವಾತಂತ್ರ್ಯ ಮುಂದೊಂದು ದಿನ ಗಂಜಿ ಕೇಂದ್ರದಲ್ಲಿರಬಹುದು ಎಂದು ಅನಿಸುವುದೇ ಇಲ್ಲ.

ಅಸ್ಸಾಮಿನ ಘಟನೆಗಳು ಉರಿಯನ್ನೇ ಎಬ್ಬಿಸುತ್ತಿರುವಾಗ ” ಸ್ವಾತಂತ್ರ್ಯವೆನ್ನುವುದು ಬೆಚ್ಚಗಿನ ಭಾವನೆ”ಎಂದು ಹೇಗೆ ಹೇಳುವರೋ ?

(ಹೊಸದಿಗಂತದಲ್ಲಿ ಪ್ರಕಟಿತ ಲೇಖನ)

1 ಟಿಪ್ಪಣಿ Post a comment
  1. makara's avatar
    makara
    ಆಗಸ್ಟ್ 19 2012

    ಸಂತೋಶ್ ತಮ್ಮಯ್ಯನವರೆ,
    ವಸ್ತುನಿಷ್ಠ ಬರಹ. ನಿಮ್ಮ ಮಾತು ನೂರಕ್ಕೆ ನೂರರಷ್ಟು ನಿಜ, ಹಿಂದೂಗಳು ಕಾರಣವಿದ್ದರೂ ಪ್ರತಿಭಟಿಸುವುದಿಲ್ಲ. ಕೆಲವು ವರ್ಷಗಳ ಹಿಂದೆ ಪಂಜಾಬಿಗೆ ಕಂಪನಿಯ ಕಾರ್ಯನಿಮಿತ್ತ ಹೋಗಿದ್ದೆ. ಆಗ ಅಲ್ಲಿಯವನೊಬ್ಬ ಹೇಳಿದ್ದು ಹೀಗೆ: ಹಿಂದು ಮೇಲಿದ್ದರೂ ಅಳುತ್ತಾನೆ, ಕೆಳಗೆ ಬಿದ್ದರೂ ಅಳುತ್ತಾನೆ. ಕೆಳಗೆ ಬಿದ್ದಾಗ ಸಿಗುವ ಪೆಟ್ಟಿಗಾಗಿ ಅಳುತ್ತಾನೆ, ಮೇಲಿದ್ದಾಗ ಈಗೇನೋ ನಾನು ಇವನನ್ನು ಹೊಡೆಯುತ್ತಿದ್ದೇನೆ, ನಾಳೆ ಇವನು ನನ್ನನ್ನು ಸುಮ್ಮನೆ ಬಿಡುತ್ತಾನೆಯೇ ಎಂದು ಅಳುತ್ತಾನಂತೆ. :((

    ಉತ್ತರ

Leave a reply to makara ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments