ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 15, 2012

ಸ್ವಾತಂತ್ರ್ಯ …

‍ನಿಲುಮೆ ಮೂಲಕ

– ಅನಿತ ನರೇಶ್ ಮಂಚಿ

ಶತ ಶತಮಾನಗಳ ಸಂಕೋಲೆಯ ಕಿತ್ತೊಗೆಯಲು
ರಾಷ್ಟ್ರದೊಳಗೆ ಉದಿಸಿತು ಧೀಮಂತ ಕಲಿಗಣ
ಒಳಗೊಳಗೇ ತಳ ಊರಿದ ಪರದಾಸ್ಯದ
ಹಿಮ ಬಂಡೆಯ ಕರಗಿಸಲು ಮೂಡಿತದೋ ಹೊಂಗಿರಣ

ಬೆಂಕಿ ಉಗುಳುವ ಬಂದೂಕುಗಳ ಲೆಕ್ಕಿಸದೆ ಎದೆಯೊಡ್ಡಿ
ನಿಂತವು ತಾಯಿ ಭಾರತಿಯ ಧೀರ ಮಕ್ಕಳು
ಜಾತಿ ಮತಗಳ ಬದಿಗೊತ್ತಿ ಒಮ್ಮತದಿ ನಿಂದು
ಕೆಂಪ ಅಳಿಸಿ ಹಸಿರ ಹರಡುವ ಛಲ ಹೊತ್ತ ಒಕ್ಕಲು

ವಂದೇ ಮಾತರಂ ಆಯಿತು ತಾರಕ ಮಂತ್ರ
ಆಳುವವನ ಎದೆಯಲ್ಲಿ ಕುಟ್ಟುತ್ತಿತ್ತು ಭಯದ ಒನಕೆ
ಸಿಕ್ಕವರ ಸೆರೆಗೆ ತಳ್ಳಿ ಮಾಡಿದರು ಹಿಂಸಾ ನರ್ತನ
ಅದೆಷ್ಟೋ ಕೊರಳಿಗೆ ಬಿದ್ದಿತ್ತು ಹಸಿ ಸಾವಿನ ಕುಣಿಕೆ

 


ಆಳಿದವರು ಅಮರರಾದರು, ಉಳಿದವರು ಪ್ರಬಲರಾದರು
ಛಲದಂಕ ಮಲ್ಲರು ,ಇವರಿಗೆ ತಾಯ್ನಾಡ ಮೇಲದೆಷ್ಟು ಒಲವು
ಪ್ರಜ್ವಲಿಸಿದ ಒಂದೇ ಒಂದು ಕ್ರಾಂತಿಯ ಕಿಡಿಗೆ
ಹೊತ್ತಿದ್ದವು ನೂರು ಸೊಡರು, ಬೆಳಕಿನೊಳಗೆ ಗೆಲವ ಛಲವು

ಕಿತ್ತೊಗೆದು ದಾಸ್ಯಪಾಶ ಒಂದಾಗಿ ಭರತ ದೇಶ
ಕೆಂಪು ಕೋಟೆಯ ಮೇಲೆ ಅರಳಿ ನಮ್ಮ ಬಾವುಟ
ತ್ಯಾಗ ಬಲಿದಾನದಿಂದ ಬಂದ ಈ ಉಡುಗೊರೆಗೆ
ಮೆತ್ತ ಬೇಡಿ ಮಲಿನ , ಭ್ರಷ್ಟಾಚಾರ, ಹಿಂಸೆ, ಕಪಟ

ದೂರ ಏಕೆ ನಮ್ಮೊಳಗೆ ನಮ್ಮದೇ ನಾಡಿನಲ್ಲಿ
ಒಪ್ಪಿಕೊಂಡರಾಗದೇ, ಪ್ರೀತಿ ಪ್ರೇಮ ಮನುಜ ಮತ
ಮುಂದೆ ಕುಡಿಯೊಡೆವ ಪ್ರತಿ ಚಿಗುರಿಗೂ ಬೇಕೀ ನೆಲ ಜಲ
ಒಂದಾಗಿ ಸಾಗೋಣ ಹಸನಾಗಲಿ ಬಾಳ ಪಥ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments