-ಸುಗುಣ ಮಹೇಶ್

ನೀನು ತೀರಾ ಗಾಂಧಿವಾದಿ ಏನು ಆಗೋಕ್ಕೆ ಹೋಗಬೇಡ್ವೇ, ಸರ್ಕಾರ ಉದ್ದಾರ ಮಾಡೋಕ್ಕೆ ಹೋಗೋದು ಸಾಕು ಸುಮ್ನೇ ಮನೆನಲ್ಲಿ ಕಾರಿದೆ ಯಾರಾದ್ರು ಡ್ರೈವರ್ ಸಿಕ್ತಾರ ನೋಡು ದಿನದ ಬಾಟಾ ಕೊಟ್ಟು ಹೋಗಿ ಬರೋದು ಕಲ್ತಕೋ..!!!
ಹೂ ನಾವುಗಳು ವಿದ್ಯಾವಂತರು, ಬುದ್ಧಿವಂತರೇ ಹಿಂಗೆ ಮಾಡಿದ್ರೆ ಹೇಗೆ… ಆದಷ್ಟು ಸರ್ಕಾರಿ ವಾಹನಗಳನ್ನ ಉಪಯೋಗಿಸಿಕೊಂಡು ಓಡಾಡಬೇಕು… ಜನ ಎಲ್ಲರೂ ಕಾರ್, ಬೈಕ್ ಅಂತಲೇ ಓಡಾಡ್ತಾ ಇದ್ದು, ಸ್ವಲ್ಪನು ಮಯ್ಯಿ ನೋಯಿಸೋಕ್ಕೆ ಇಷ್ಟಪಡದೇ ಹೋದ್ರೇ ಹೆಂಗೆ.. ಹೀಗ್ ಮಾಡೇ ಪೆಟ್ರೋಲ್, ಡೀಸಲ್ ಬೆಲೆ ಗಗನಕ್ಕೆ ಹೋಗಿರೋದು… ಜೊತೆಗೆ ವಾಯು ಮಾಲಿನ್ಯವೂ ಹೆಚ್ಚಾಗಿರೋದು.
ಅಕ್ಕನ ಮಾತಿಗೆ ಬಾರಿ ಗಾಂಧಿವಾದದ ಮಾತು ಆಡಿ ಮಧ್ಯಾಹ್ನ ಮೆಜೆಸ್ಟಿಕ್ ಬಸ್ ಹತ್ತಿದ್ದೆ… ಅದು ಆಗಲೆ ೨ಗಂಟೆ ಊಟ ಬೇರೆ ಬಿಸಿಬಿಸಿ ತಿಂದಿದ್ದೇ… ಮೆಜೆಸ್ಟಿಕ್ ಬೇಡ ಯಲಹಂಕಗೇ ಸೀದ ಹೋಗುವ ಬಸ್ಗೆ ಹೋಗಿ ಅಲ್ಲಿಂದ ದೇವನಹಳ್ಳಿಗೆ ಹೋಗು ಅಂತ ಅಂದ್ರು ಮನೆನಲ್ಲಿ… ಮಗ ಮೆಜೆಸ್ಟಿಕ್ ನೋಡಿಲ್ಲ ಅವನಿಗೂ ತೋರಿಸಿದ ಹಾಗೆ ಆಗುತ್ತೆ ಎಂದು ಒಣಜಂಭವೋ, ಪ್ರತಿಷ್ಠೆಯೋ ಮಾಡಿ ಬಸ್ ಹತ್ತಿದೆ. ಮೆಜೆಸ್ಟಿಕ್ ಗೆ ೨೪೪ಸಿ ಬಸ್ ಹತ್ತಿ ಇಳಿಯುವ ಮುನ್ನ ತಾಮುಂದು ನಾಮುಂದು ಎಂಬಂತೆ ಒಬ್ಬರ ಮೇಲೆ ಒಬ್ಬರು ಮೈಮೇಲೆ ಬಿದ್ದು ಇಳಿದಿದ್ದಾಯ್ತು…
ನೆಂಟರ ಮನೆಗೆ ಹೋಗ್ತಾ ಇದ್ದೇನೆ ಏನಾದರೂ ತಿಂಡಿ ತೆಗೆದುಕೊಳ್ಳುವ ಎಂದು ಅಲ್ಲೇ ಹತ್ತಿರ ಇದ್ದ ನಂದಿನಿ ಸಿಹಿತಿಂಡಿಯ ಅಂಗಡಿಗೆ ಹೋಗಿ ಮೈಸೂರ್ ಪಾಕ್, ಪೇಡಾ, ಬಿಸ್ಕೇಟ್, ಅದು ಇದು ಆಳು-ಮೂಳು ಎಲ್ಲಾ ಪ್ಯಾಕ್ ಮಾಡಿಸಿದೆ…. ಮಗ ಐಸ್ ಕ್ರೀಂ ಎಂದಾ…?? ಹೂ ತಗೋ ಏನ್ ಬೇಕೋ ಎಂದೆ… ನೀನು ಒಂದು ತಿನ್ನಮ್ಮ ಅಂದಾ ನಾನು ಆಹಾ..!! ನಂದಿನಿ ಹಾಲಿನಲ್ಲಿ ಮಾಡಿದ ಐಸ್ ಕ್ರೀಂ… ತಿನ್ನೋಣ ಎಂದು ಆಗಲಿ ನನಗೂ ಒಂದು ಎಂದೆ…!!! ಇನ್ನೇನು ಬಿಲ್ ಕೊಡಬೇಕು… ಮಗ ಆಗಲೇ ಐಸ್ ಕ್ರೀಂಗೆ ಬಾಯಾಕಿದ್ದಾನೇ….!! ನನ್ನ ಬ್ಯಾಗ್ ನಲ್ಲಿದ್ದ ಪರ್ಸ್ ಕಾಣ್ತಾ ಇಲ್ಲ……. ಓಹ್..!!! ದೇವರೇ ಇರೋ ಬರೋ ದೇವರನ್ನೇಲ್ಲಾ ಜಪಿಸಿದೆ .. ತಕ್ಷಣ ಅಂಗಡಿಯವನಿಗೆ ಬಸ್ ಗೆ ಕೊಟ್ಟು ಮಿಕ್ಕಿದ್ದ ಕಾಸು ಕೈನಲ್ಲೇ ಇದ್ದದ್ದನ್ನು ಮಗನ ಐಸ್ ಕ್ರೀಂಗೆ ವಜಾ ಹಾಕಿಕೊಳ್ಳಿ ನನಗೆ ಐಸ್ ಬೇಡ ಎಂದು … ನನ್ನ ಪರ್ಸ್ ಕಳ್ಳತನವಾಗಿದೆ ಎಂದು ಹೇಳಿ ಮಗನನ್ನ ಕರೆದುಕೊಂಡು ಓಡಿದೆ.
ಬಸ್ ಇಳಿದ ಜಾಗಕ್ಕೆ ಹೋಗಿ ನೋಡಿದೆ ೨೪೪ಸಿ ಬಸ್ ಕಾಣ್ತಾ ಇಲ್ಲ… ಕಣ್ಣು ಮಬ್ಬಾಗಿದೆ, ಏನು ಮಾಡುವುದು ತೋಚ್ತಾ ಇಲ್ಲ… ಸ್ವಲ್ಪ ಸಮಯದ ಮುಂಚೆ ಸ್ನೇಹಿತನಿಗೆ ಕರೆ ಮಾಡಿದ್ದೇ ಮತ್ತೆ ಅವನಿಗೆ ಕರೆ ಮಾಡಿ… ಹೀಗಾಗಿದೇ ಏನು ಮಾಡುವುದೋ ಎಂದೇ..!!! ನನ್ನ ಪರ್ಸ್ ನಲ್ಲಿದ್ದ ೫ಸಾವಿರ ರುಪಾಯಿ ಮತ್ತು ನನ್ನ ಪ್ರೀತಿಯ ಸ್ಯಾಮ್ ಕಾಣ್ತಾ ಇಲ್ಲ ಎಂದೇ…ಅಯ್ಯೋ..!! ಗೂಬೆ ಎಂತಾ ಕೆಲಸ ಮಾಡಿಕೊಂಡೆ… ಐ.ಎಂ ನಂ ಗೊತ್ತಿದ್ರೇ ಪೋಲೀಸ್ಗೆ ಕಂಪ್ಲೆಂಟ್ ಕೊಡು ಎಂದ..!!! ಯಾವುದಕ್ಕೂ ಪೋಲೀಸ್ ಠಾಣೆಗೆ ಹೋಗಿ ಬರೋಣ ಎಂದು ಉಪ್ಪಾರಪೇಟೆ ಸ್ಟೇಷನ್ ಹತ್ತಿರ ಹೋಗೋಕ್ಕೆ ಮಗನ ಕೈ ಹಿಡಿದು ಎಳೆದುಕೊಂಡೇ ಓಡಿದೆ….!!
ಮೊದಲ ಭೇಟಿ ಇದುವರೆಗೂ ಪೋಲೀಸ್ ಸ್ಟೇಷನ್ ಒಳಗಡೆ ಹೋಗಿ ನೋಡಿಲ್ಲ… ಇನ್ನೇನು ಒಳಹೋಗಬೇಕು ಎನ್ನುವಾಗ ಅಲ್ಲೇ ದ್ವಾರದಲ್ಲಿ ಬಂದೂಕುದಾರಿ ನಮ್ಮನ್ನೇ ದುರುಗುಟ್ಟುತ್ತಿದ್ದ… ಹಾಗೆ ಕಣ್ ಸರಿಸಿ ಒಳಗೆ ಹೋದೆ.. ಪೋಲೀಸ್ ಯಾರಿಗೋ ನೂರು ರುಪಾಯಿ ಎಲ್ಲಾ ಈಗ ನಡೆಯಲ್ಲಪ್ಪ… ಇದ್ದರೆ ೫೦೦ ಕೊಡು ಅಂತಾ ಇದ್ದ ಅಯ್ಯೋ ಕರ್ಮವೇ ನಾನು ಈಗ ಕೈಲಿದ್ದಿದ್ದೆಲ್ಲಾ ಕಳೆದುಕೊಂಡು ಬಂದಿದ್ದೀನಿ ಮತ್ತೆ ಇಲ್ಲಿ ಕಾಸು ಬೇರೆ ಕೇಳ್ತಾರೇನೋ ಗೊತ್ತಿಲ್ವೇ…ದೇವರೇ ಏನಪ್ಪಾ ಮಾಡೋದು ಎಂದು ಸ್ವಲ್ಪ ದೂರ ಹೊರಬಂದು ನನ್ನ ಯಜಮಾನರು ಕುವೈತ್ನಲಿದ್ದವರಿಗೆ (ನನ್ನ ಹತ್ತಿರವಿದ್ದ ಇನ್ನೊಂದು ಮೊಬೈಲಿನಿಂದ) ಕರೆ ಮಾಡಿದೆ “ಕಣ್ಣಲ್ಲಿ ಧಾರಾಕಾರ ಮಳೆ” ಆದರೆ “ಬೆಂಗಳೂರಲ್ಲಿ ಮಾತ್ರ ಆಗ ಮಳೆಯೇ ಇರಲಿಲ್ಲ”… ನನ್ನ ಮೊಬೈಲ್ ಕಳೇದೋಯ್ತು ಪೋಲೀಸ್ ಸ್ಟೇಷನ್ಗೆ ಬಂದಿದ್ದೀನಿ ನನ್ನ ಈ-ಮೈಲ್ ನಲ್ಲಿ ಐ.ಎಂ ನಂಬರ್ ಇದೆ ನೋಡಿ ಮೆಸೇಜ್ ಮಾಡೋಕ್ಕೆ ಹೇಳಿದೆ… ಸ್ವಲ್ಪವೂ ಪ್ರಜ್ಞೇ ಇಲ್ವಾ ನಿನ್ಗೆ ಬೆಂಗಳೂರಲ್ಲಿ ಜನ ಹೇಗಿರ್ತಾರೆ, ಮಯ್ಯೆಲ್ಲಾ ಕಣ್ಣಾಗಿರಬೇಕು ಗೊತ್ತಾಗೋಲ್ವಾ..?!! ಯಜಮಾನರ ಕಡೆಯಿಂದ ಸುಪ್ರಭಾತ ಬರ್ತಾನೇ ಇದೆ.. “ಅಯ್ಯೋ ನನ್ನ ಕಷ್ಟ ನನ್ನ್ಗೆ ಈವಯ್ಯದೊಂದು ಗೊಣಗಾಟ.. ನಾನೇನು ಬೇಕು ಅಂತ ಕಳ್ಳಿ ಕೈಗೆ ಕೊಟ್ಟು ಬಂದ್ನಾ” ಹಿಂಗೆ ಮನಸಲ್ಲೇ ಅಂದುಕೊಂಡೆ ಧೈರ್ಯವಾಗಿ ಜೋರಾಗಿ ಅವರಿಗೆ ಹೇಳಿಲ್ಲ ಹೇಳಿದ್ರೇ ಅಷ್ಟೇ ಕಥೆ..:) ಐ. ಎಂ ನಂಬರ್ ತಗೆದುಕೊಂಡು ಕಂಪ್ಲೇಂಟ್ ಬರೆದುಕೊಟ್ಟೆ ಅಲ್ಲೇ ಕುಳಿತಿದ್ದ ಪೋಲೀಸ್ ಏನ್ ನಿಮ್ಮ ಹೆಸರು, ಯಾವ ಊರು ಕಂತೆ ಪುರಾಣಗಳನ್ನೇಲ್ಲಾ ಕೇಳ್ತಾ ಇದ್ರೇ ನನಗೆ ಒಳಗೊಳಗೇ ಕೋಪ.. ನನ್ನ ಊರು ಕೇರಿ ಕಟ್ಟುಕೊಂಡು ಇವರಿಗೇನು ಮೊದಲು ಕಂಪ್ಲೇಂಟ್ ಬಗ್ಗೆ ಮಾತಾಡಪ್ಪಾ ಸಾಮಿ ಎಂದುಕೊಂಡೇ… ನೋಡಿ ಮೆಡಂ ದಿನಕ್ಕೆ ಇಂತಹ ಕೇಸ್ ನೂರಾರು ಬರುತ್ವೇ ನಿಮ್ಮ ಕಳುವಾದ ವಸ್ತು ಸಿಕ್ಕರೇ ನಿಮ್ಮ ಅದೃಷ್ಟ, ಇಲ್ಲವೇ ಇಲ್ಲ… ನಿಮ್ಮ ಐ. ಎಂ ನಂಬರ್ ಕೊಟ್ಟೀದ್ದೀರಲ್ಲಾ ಕಂಪ್ಯೂಟರ್ ನಲ್ಲಿ ಹಾಕ್ತೀವಿ ನೋಡೋಣ ಎಂದು ಮುಂದಿನ ಮಹಭಾರತಕ್ಕೆ ಶುರುವಿಟ್ಟರು.
ಅಲ್ಲಾ…!!! ಮೇಡಮ್ ನಿಮ್ಗೇ ಸ್ವಲ್ಪಾನೂ ಗೊತ್ತಾಗಲಿಲ್ಲ್ವೇ (ಗೊತ್ತಾಗಿದ್ರೇ ನಿಮ್ಮ ಹತ್ರಾ ಯಾಕ್ ಬರ್ತಿದ್ದೇ ಸ್ವಾಮಿ – ಇದು ಮನಸಿನ ಮಾತು), ಬೆಂಗಳೂರಿನಲ್ಲಿ ಜನ ದಿಕ್ಕು ದೆಸೆ ಇಲ್ಲದೇ ಬಂದು ಇಲ್ಲಿ ಸುಖವಾಗಿ ಬದುಕೋದನ್ನ ಆಯ್ಕೇಮಾಡ್ಕೋತಾರೆ. ಮೊನ್ನೆ ಹಿಂಗೆ ಒಬ್ಳು ಕಳ್ಳಿ ಎಂ.ಬಿ.ಎ ಮಾಡಿರೋಳು ಸಿಕ್ಕಾಪಟ್ಟೆ ಕಳ್ಳತನ ಮಾಡಿ ಸಿಕ್ಕಾಕಿಕೊಂಡಿದ್ಲು ಎಂತಾ ಜಾಣರಿರ್ತಾರೆ ಗೊತ್ತೇ..??, ನಿಮ್ಮ ಪರ್ಸ್ ಕಳುವಾದ ಕೂಡಲೇ ಅವರ ಕೈನಲ್ಲಿ ಇರೋದೇ ಇಲ್ಲ ನಿಮಿಷಕ್ಕೆ ೪,೫ ಕೈ ಬದಲಾಯಿಸಿರ್ತಾರೆ ಗೊತ್ತೇ.. ನಾವು ದಿನಕ್ಕೆ ಎಷ್ಟು ಕೇಸ್ ನೋಡಿಲ್ಲಾ ಮೇಡಂ..!!! ಸ್ವಲ್ಪ ನೀವುಗಳು ಎಚ್ಚರಿಕೆಯಿಂದ ಇರ್ಬೇಕು..!!!(ಎಚ್ಚರ ಇಲ್ಲದ್ದಕ್ಕೆ ಹಿಂಗೆ ಆಗಿದ್ದು -ಮನಸಿನ ಮಾತು) ನೀವು ಬೆಂಗಳೂರಲ್ಲಿ ಎಷ್ಟು ದಿನ ಇರ್ತೀರೋ ಏನೋ ಅಷ್ಟರೊಳಗೆ ಸಿಕ್ಕರೆ ನೋಡ್ತೀವಿ ಮೇಡಮ್, ಆನಂತರ ನಿಮ್ಮ ಸಂಬಂಧಿಕರ ನಂಬರ್ ಕೊಟ್ಟಿದ್ದೀರಲ್ಲಾ ನೋಡೋಣ ಸಿಕ್ಕರೆ ತಿಳುಸ್ತೀವಿ. ನಮಗೂ ಕಷ್ಟ ಮೇಡಮ್ ಈ ಮೆಜೆಸ್ಟಿಕ್ ನಲ್ಲಿ ಸಿಕ್ಕಾಪಟ್ಟೆ ಜನ ಬರ್ತಾರೆ ಯಾರನ್ನ ಅಂತ ನೋಡೋದು, ಯಾರಿಗೆ ಅಂತ ರೂಲ್ಸ್ ಮಾಡೋದು, ಯಾರೋ ಒಬ್ಬಳು ಕಳ್ಳಿ ತರ ಇರ್ತಾಳೇ ಅಂದುಕೊಳ್ಳಿ ಅನುಮಾನಿಸಿ ಅವರನ್ನ ಕರೆತಂದ್ರೆ… ಅವರಿಂದೆನೇ ಬರ್ತಾರೆ ಜನ ಬಿಡಿಸ್ಕೊಂಡು ಹೋಗೋಕ್ಕೆ… ಹಾಗೂ ನಾವು ಪೋಲೀಸ್ ನವರು ಜೋರು ಮಾಡಿದ್ವಿ ಅಂತ ಇಟ್ಟುಕೊಳ್ಳಿ ಅಷ್ಟೇ ಮುಗಿತು ಕಥೆ ಪೋಲೀಸ್ ನವನು ನನ್ನ ಮೈಮೇಲೇ ಬಿದ್ದ, ನನ್ನ ಹತ್ತಿರ ಅಸಭ್ಯವಾಗಿ ವರ್ತಿಸಿದ ನಾನು ಕಳ್ಳಿಯೇ ಅಲ್ಲಾ… ಮರ್ಯಾದಸ್ಥ ಕುಟುಂಬದವಳು ಹೀಗೆಲ್ಲಾ ಮಾಡ್ತಾರೆ ಎಂದು ರಸ್ತೆಬದಿ ಕೂಗಾಡಿದ್ರೆ ಸಾಕು ಈ ಮೀಡಿಯಾ ಜನ ಕ್ಯಾಮರಾ ಎತ್ತಾಕೊಂಡು ಬಂದುಬಿಡ್ತಾರೆ, ಇರೋ ಬರೋ ಟಿವಿಗಳಲ್ಲೆಲ್ಲಾ ನೇರಪ್ರಸಾರ ಮಾಡ್ತಾರೆ ನಾವು ಏನು ತಪ್ಪೇ ಮಾಡದೇ ಇದ್ರು ಮನೆಮನೆಗಳಲ್ಲಿ ಹೆಸರಾಗ್ತೀವಿ ಕೊನೆಗೆ ಮನೆಗೆ ಹೋಗೋಕ್ಕು ಮುಖವಿಲ್ಲದೇ ಎಲ್ಲಾದ್ರು ದೇಶಾಂತರ ಹೋಗ್ಬೇಕಾಗುತ್ತೆ… ಇಂತ ಪರಿಸ್ಥಿತಿನಲ್ಲಿ ಕಳ್ಳರ ಮೇಲೆ ಕಣ್ಣಿಡೋದು ಹೇಗೆ ಹೇಳಿ ಮೇಡಮ್ ನೀವೇ..!!!
ಹೂ.. ಏನು ಮಾಡೋದು ಸರ್ ನಿಮ್ಮಲ್ಲೂ ತಪ್ಪುಗಳು ಇವೆ ಹಾಗೆ ನಿಮಗೂ ತೊಂದರೆಗಳೂ ಇವೆ ಎಂಬುದು ಗೊತ್ತು… ಆದರೂ ನಮ್ಮಲ್ಲಿನ ವ್ಯವಸ್ಥೆಗಳು ಸರಿ ಇಲ್ಲ. ಇದ್ದರೂ ಒಳ್ಳೆಯ ರೀತಿ ಬಳಸಿಕೊಳ್ಳುವವರು ಕಡಿಮೆ ಸರ್… ಎಂದೇಳಿ ಯಾಪ್ ಮೋರೆ ಹಾಕುತ್ತ ಕುಳಿತಿದ್ದೇ… ನನ್ನನ್ನೇ ದುರುಗುಟ್ಟುತ್ತ ಅಲ್ಲೇ ಜೈಲಿನಲ್ಲಿದ್ದವ ನೋಡ್ತಾ ಇದ್ದ, ಮಗ ಅಮ್ಮ ಕಳ್ಳ ನೋಡು ಜೈಲಿನಲ್ಲಿರೋನು ಯಾರೋ ಪೋಲೀಸ್ ಹತ್ರಾನೇ ಸಿಗರೇಟ್ ತಕೊಂಡು ಸೇದುತಾ ಇದಾನೆ… ಪೋಲೀಸೇ ಅವರಿಗೆ ಹೆಲ್ಪ್ ಮಾಡ್ತಾರಲ್ಲಮ್ಮಾ… ಎಂದು ಮಗ ಪಿಸುಗುಡುತ್ತಿದ್ದ… ಹೌದು ಸುಮ್ಮನಿರು ಅವನ ಕಡೆ ನೋಡ್ಬೇಡ ಭಯ ಆಗುತ್ತೆ ಏನ್ ಹಂಗಿದಾನೇ ಯಪ್ಪಾ..!! ರೌಡಿ ಥರ… ಕಳ್ಳ-ಪೋಲೀಸ್ ಆಟನೇ ಹಾಗೆ ಬಿಡು ಎಂದೇಳಿ ಪೋಲೀಸ್ ಗೆ ನಮಸ್ಕಾರ ಹೇಳಿ ಅಲ್ಲಿಂದ ಕಾಲ್ ಕಿತ್ತೆ.
ಠಾಣೆಯ ಅನುಭವ ಹೊಸದಾದರು ಕೆಲವು ವಿಚಾರ ತಿಳಿದುಕೊಂಡು ಭಾರದ ಹೃದಯ ನನ್ನ ಪ್ರೀತಿಯ ಸ್ಯಾಮ್ ನ ಹತ್ತಿರವೇ ನನ್ನ ಹೃದಯದ ಅಲೆ ಬೀಸ್ತಾ ಇತ್ತು ಆದರೇನು ಮಾಡಲಾಗದು, ನನ್ನ ಜೀವನದಲ್ಲಿ ಮೊದಲಬಾರಿಗೆ ಒಂದು ವಸ್ತು ಕಳೆದುಕೊಂಡ ಅನುಭವ ನನ್ನ ಮನಸ್ಸಿಗೆ ಬಹಳ ಆಘಾತವನ್ನೇ ತಂದಿತ್ತು…!!
ಉಸಿರಿಲ್ಲದ ಅವನು
ನನ್ನವನ ಕೊಡುಗೆ
ನನ್ನತ್ತ ಬಂದಾಗ
ಬೆಸೆದೆ ಪ್ರೀತಿ ಬೆಸುಗೆ
ಸದಾ ರಿಂಗಣಿಸುತ
ಮುಂಜಾವ ರಾಗವಾಗಿ
ಸಂಜೆಯ ಹೊನಲಾಗಿ
ನನ್ನ ಆವರಿಸಿದ್ದ ಸ್ಯಾಮ್
ನನ್ನೊಡನಿಲ್ಲ…
ಅಲೆಯಾಗಿ ತೇಲಿ ಹೋದೆ
ಮತ್ತೆಂದು ಬರುವೇಯೋ
ಎಂದು ಕಾದು ಕುಳಿತಿರುವೆ
ನನ್ನ ನೆನೆದು ಬರುವೆಯಾ
ಹೇ.. ನನ್ನೊಲವ ಅಲೆಯೇ..
ಏನು ಕರ್ಮವೋ ಒಟ್ಟಲ್ಲಿ ಆಗಿನ್ನು ಕುವೈತಿನಿಂದ ಬೆಂಗಳೂರಿಗೆ ಬಂದು ವಾರವೂ ಕಳೆದಿರಲಿಲ್ಲ, ನನ್ನ ಪ್ರೀತಿಯ (ಸ್ಯಾಮ್ ಸಂಗ್ ವೇವ್-೨) ಸ್ಯಾಮ್ ನ ಅಲೆ ಅದೆಷ್ಟು ಬೇಗ ಬೀಸಿತೋ… ಬಿದ್ದೇ ಬಿಟ್ಟಿತು ಕಳ್ಳಿಯ ಬಲೆಗೆ…
ಎಷ್ಟೋಂದ್ ಜನ ಇಲ್ಲಿ ಯಾರು ಕದ್ದೋರು… ಎಲ್ಲಿ ನಮ್ಮ ಸ್ಯಾಮ್ ಸಂಗ್ ಎಲ್ಲೀ
ಐ ಮಿಸ್ ಯು… ಸ್ಯಾಮ್
* * * * * * * * *
ಚಿತ್ರಕೃಪೆ : ಸುಗುಣ ಮಹೇಶ್
ಚೆನ್ನಾಗಿದೆ ಕಣ್ರೀ ನಿಮ್ಮ ಸ್ಯಾಮ್ ಪುರಾಣ, ಸಧ್ಯ ನಿಮ್ಮ ಪುಟ್ಟನ ಕೈ ನಿಮ್ಮ ಕೈ ಅಲ್ಲೇ ಇದಿಯಲ್ಲ ಅದಕ್ಕೇ ದೇವರಿಗೆ ಧನ್ಯವಾದ ಹೇಳೋಣ. ನಮ್ಮ ಮನೆಯವರು ಹೈದರಾಬಾದ್ ನಲ್ಲಿ ಲ್ಯಾಪ್ಟ್ ಟಾಪ್ ಅವರ ಭಾಷೆಯಲ್ಲಿ TP (IBM Think pad) ಗಾಡಿಯಲ್ಲಿ ಬರುವಾಗ ಬೀಳಿಸಿಕೊಂಡು ಬಂದಿದ್ದರು, ಯಾರೋ ಪುಣ್ಯಾತ್ಮ ಅವರ ಹೆಸರು ಕ್ರಾಂತಿ ಅಂತ, ಅದನ್ನು ಪೋಲೀಸ್ ಠಾಣೆಗೆ ಕೊಟ್ಟು, ಅದರಲ್ಲಿ ಸಿಕ್ಕ ನಮ್ಮ ನಂಬರ್ ನೋಡಿ, ನಮಗೆ ವಿಷಯ ತಿಳಿಸಿದರು.
ಅದೇ ಪೋಲೀಸ್ ರಾತ್ರಿ ಹೋಗಿ ಕೇಳಿದಾಗ ಯಾರೂ ಯಾವ laptop ತಂದು ಕೊಟ್ಟಿಲ್ಲ ಎಂದಿದ್ದರು, ಇವರು ಫೋನ್ ಮಾಡಿದ ಮೇಲೆ ಮತ್ತೆ ಹೋಗಿ ಕೇಳಿದಾಗ laptop ಸಿಕ್ಕಿತು. ಅದಕ್ಕೆ ಒಮ್ಮೊಮ್ಮೆ ನನಗೆ ಹೈದರಾಬಾದ್ ನ ಹಾಗೆ ನಮ್ಮ ಬೆಂಗಳೂರು ಇಲ್ವಲ್ಲಾ ಎಂದು ಖೇದವಾಗುತ್ತದೆ.
Nimma Sam purana chenngidhe madam. Adhastu bega Sam Nimage sigli antha ashisthini.
sadya..nimge..affidvittu anta tale tinlilla..adakke 100 rs karchu bere madbekittu..!