ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 28, 2012

12

ಚಿನ್ನದ ಬಾಗಿಲಿಗೆ ‘ದೋಷ’ವಿಲ್ಲವೇ?!

‍ನಿಲುಮೆ ಮೂಲಕ

– ಡಾ. ಅಶೋಕ್ ಕೆ.ಆರ್

ಕೆಲವು ದಿನಗಳ ಹಿಂದೆ ವಿಜಯ್ ಮಲ್ಯರವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಎಂಭತ್ತು ಲಕ್ಷ ಬೆಲೆಬಾಳುವ ಚಿನ್ನದ ಬಾಗಿಲನ್ನು ದಾನವಾಗಿ ನೀಡಿದ್ದಾರೆ. ತಿಂಗಳುಗಳ ಹಿಂದೆ ಅವರು ಹೊತ್ತಿದ್ದ ಹರಕೆಯಂತೆ ಅದು. ಮತ್ತೊಂದು ಬಾಗಿಲನ್ನು ದಾನವಾಗಿ ನೀಡುತ್ತಾರಂತೆ. ಕಿಂಗ್ ಫಿಷರ್ ಏರ್ ಲೈನ್ಸಿನ ಸಿಬ್ಬಂದಿಗಳಿಗೆ ಸಂಬಳ ಸರಿಯಾಗಿ ನೀಡದ ಮಲ್ಯ ಲಕ್ಷಾಂತರ ರುಪಾಯಿಗಳನ್ನು ಹೀಗೆ ‘ದಾನ’ದ ರೂಪದಲ್ಲಿ ಕೊಟ್ಟಿರುವುದು ಕೆಲವರ ಕಣ್ಣು ಕೆಂಪಗಾಗಿಸಿದೆ. ಇದೇ ದುಡ್ಡನ್ನು ಸಮಾಜದ ಕೆಳಸ್ತರದಲ್ಲಿರುವವರಿಗೆ ನೀಡಬಹುದಿತ್ತಲ್ಲ? ಎಂದೂ ಹಲವರು ಪ್ರಶ್ನಿಸುತ್ತಿದ್ದಾರೆ. ಬಿಡಿ, ಮೊದಲನೆಯದು ಅವರ ವ್ಯವಹಾರಕ್ಕೆ ಸಂಬಂಧಿಸಿದ್ದು, ಎರಡನೆಯದು ಅವರ ಭಕ್ತಿಗೆ ಸಂಬಂಧಿಸಿದ್ದು. ಹರಕೆ ತೀರಿಸುವುದಕ್ಕೆ ಲಕ್ಷಾಂತರ ರುಪಾಯಿ ವ್ಯಯಿಸುವುದು ಅವರ ಮರ್ಜಿ. ಆದರೆ ಅವರೆಲ್ಲಿದ್ದಾರೆ ಹಿಂದೂ ಧರ್ಮ ‘ರಕ್ಷಕರು’, ಪೇಜಾವರ ಸ್ವಾಮಿಗಳು, ಮುಖ್ಯವಾಗಿ ಅವರೆಲ್ಲಿದ್ದಾರೆ ಆ ದೇವರು?!
        ಪೇಜಾವರ ಸ್ವಾಮಿಗಳು ಮದ್ಯಪಾನ ಸೇವನೆಯನ್ನು ಖಂಡಿಸುತ್ತ ಜೊತೆಗೆ ಮಾಂಸಹಾರ ಸೇವನೆಯನ್ನು ತುಚ್ಛವಾಗಿ ಕಾಣುವ ಕೆಲವು ಮಾತುಗಳನ್ನಾಡಿದ್ದರು. ಅವರ ಮದ್ಯಪಾನ ವಿರೋಧಿ ಹೇಳಿಕೆಯ ಬಗ್ಗೆ ಸ್ವತಃ ಮದ್ಯಪಾನಿಗಳದೂ ವಿರೋಧವಿರಲಾರದು! ಆದರೆ ಮಾಂಸಹಾರಿಗಳ ಪಕ್ಕ ಸಸ್ಯಹಾರಿಗಳು ಕುಳಿತುಕೊಳ್ಳುವುದರಿಂದ ಸಸ್ಯಹಾರಿಗಳೂ ಮಾಂಸ ಸೇವಿಸುವ ‘ದುಷ್ಟ’ ಕೆಲಸ ಆರಂಭಿಸಿಬಿಡುತ್ತಾರೆಂಬ ಅವರ ‘ಭಯ’ (ಅಲ್ಲಿಗೆ ಮಾಂಸ ಸೇವನೆಯಲ್ಲಿರುವ ಆಕರ್ಷಣೆಯ ಅರಿವು ಸ್ವಾಮಿಗಳಿಗೂ ಇದೆ!) ಜಾತಿಯಾಧಾರಿತ ಪಂಕ್ತಿ ಭೇಧವನ್ನು ಬದಲಾದ ಕಾಲಘಟ್ಟದಲ್ಲಿ ಹೊಸತೊಂದು ವಾದದಿಂದ ಸಮರ್ಥಿಸಿಕೊಳ್ಳುವ ಯತ್ನವಷ್ಟೇ. ಇನ್ನು ಹಿಂದೂ ಧರ್ಮ ‘ರಕ್ಷಿಸುತ್ತ’ ಮದ್ಯಪಾನಿಗಳ ಮೇಲೆ, ಮಾಂಸಹಾರಿಗಳ ಮೇಲೆ, ಮಹಿಳೆಯರ ಮೇಲೆ ಅವ್ಯಾವತವಾಗಿ ದಾಳಿ ಮಾಡುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಹತ್ತಾರು ಸಂಘಟನೆಗಳೂ ಕೂಡ “ಹೆಂಡ ಮಾರುವವರಿಂದ ಯಕಶ್ಚಿತ್ ಕ್ಯಾಲೆಂಡರಿಗಾಗಿ ಅರೆಬೆತ್ತಲೆ ಹುಡುಗಿಯರ ಫೋಟೋಶೂಟ್ ಮಾಡುವವರಿಂದ ಚಿನ್ನದ ಬಾಗಿಲನ್ನು ದಾನವಾಗಿ ಪಡೆದುಕೊಳ್ಳಬೇಡಿ” ಎಂದು ಸುಬ್ರಹ್ಮಣ್ಯ ದೇವಾಲಯದವರಿಗೆ ‘ಬುದ್ಧಿ’ ಹೇಳಿದ ವರದಿಗಳಾಗಿಲ್ಲ. ಕುಡಿಯೋದಷ್ಟೇ ತಪ್ಪು, ಕುಡಿಸುವುದಲ್ಲ ಎಂಬ ಮನೋಭಾವವೇ? ದೇವಸ್ಥಾನ ಪ್ರವೇಶಿಸುತ್ತ ಚಿನ್ನದ ಬಾಗಿಲೊಳಗೆ ಪ್ರವೇಶಿಸುವವರಿಗೆ ನಶೆಯೇರಿ ವಿಜಯ್ ಮಲ್ಯ ನೆನಪಾಗಿ ಸುಬ್ರಹ್ಮಣ್ಯ ಸ್ವಾಮಿಯೇ ಮರೆತುಹೋದರೆ ಯಾರು ಹೊಣೆ?! ನಮ್ಮ ಮದ್ಯಪಾನ, ಮಾಂಸಹಾರಗಳೆಲ್ಲವೂ ಈ ಸಂಘಟನೆಗಳಿಗೆ, ಸ್ವಾಮೀಜಿಗಳಿಗೆ ಪಥ್ಯವಾಗಬೇಕಾದರೆ ನಾವೂ ಕೂಡ ಕೋಟಿ ಲೆಕ್ಕದಲ್ಲಿ ದುಡಿದು ಚಿನ್ನದ್ದೋ ವಜ್ರದ್ದೋ ಬಾಗಿಲು – ಕಿರೀಟಗಳನ್ನು ದಾನ ಮಾಡಬೇಕೇನೋ?!
          ನೇರ ಸಂಬಂಧವಿರದಿದ್ದರೂ ಸುಬ್ರಹ್ಮಣ್ಯ ದೇವಾಲಯ ಹಿಂದೊಮ್ಮೆ ನನ್ನಲ್ಲಿ ಹುಟ್ಟಿಸಿದ್ದ ಪ್ರಶ್ನೆಯೊಂದಿದೆ.
ಚಿಕ್ಕಂದಿನಿಂದಲೂ ನನಗೆ ದೇವರಲ್ಲಿ ‘ಬಹಳ’ ಎನ್ನುವಷ್ಟು ನಂಬುಗೆಯಿರಲಿಲ್ಲ. ಅಮ್ಮನ ಜೊತೆ ದೇವಸ್ಥಾನಕ್ಕೆ ಹೋಗುತ್ತಿದ್ದೆ. ಹಬ್ಬಹರಿದಿನಗಳಲ್ಲಿ ಮನೆಯಲ್ಲಿ ಪೂಜೆಯನ್ನೂ ಮಾಡುತ್ತಿದ್ದೆ. ದೇವರ ಅಸ್ತಿತ್ವದ ಬಗ್ಗೆ ಇದ್ದ ಗೊಂದಲಗಳನ್ನು ಕೊನೆಗಾಣಿಸಿ ನನ್ನನ್ನು ಸಂಪೂರ್ಣವಾಗಿ ನಾಸ್ತಿಕನನ್ನಾಗಿಸಿದ ಶ್ರೇಯ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಗೆ ಸೇರಬೇಕು! ಹತ್ತನೇ ತರಗತಿಯಲ್ಲಿ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾಗ ದೇವಾಲಯದೊಳಗೆ ಪ್ರವೇಶಿಸಲು ಶರ್ಟು ತೆಗೆಯುವುದು ಕಡ್ಡಾಯವೆಂದು ಗೊತ್ತಾಯಿತು. ದೇವಲಾಯದ ಆವರಣ ಕೊಳೆಯಾಗಬಹುದೆಂಬ ಕಾರಣದಿಂದ ಚಪ್ಪಲಿ ಬಿಟ್ಟು ಒಳಹೋಗುವುದೇನೋ ಸರಿ, ಆದರೆ ಶರ್ಟು ಬಿಚ್ಚಿ ಹೆಗಲ ಮೇಲೆ ಹಾಕಿಕೊಳ್ಳುವುದು ಯಾವ ಪುರುಷಾರ್ಥಕ್ಕೆ? ಅವತ್ತಿನ ನನ್ನ ಮನಸ್ಸಿಗೆ ಕಾರಣ ಹೊಳೆದಿದ್ದು ಜನಿವಾರದವರಿಗೆ ಮತ್ತು ಜನಿವಾರರಹಿತರಿಗೆ ದೇವಲಾಯದ ಸಿಬ್ಬಂದಿ ಮಾಡುತ್ತಿದ್ದ ಭೇದಭಾವವನ್ನು ಕಂಡಾಗ! ಆ ಸಿಬ್ಬಂದಿಯವರ ಮೇಲೆ ಹುಟ್ಟಿದ ಅಸಹ್ಯ, ಕೋಪ, ಜಿಗುಪ್ಸೆ ಅವರ ನಡುವೆಯೇ ಕುಳಿತು ಕಣ್ಣು ಮುಚ್ಚಿದ್ದ ದೇವರ ಮೇಲೆಯೂ ಹುಟ್ಟಿತು. ಅಂದಿನಿಂದ ನಾಸ್ತಿಕನಾದೆ. ಶರ್ಟು ತೆಗೆಸುವುದಕ್ಕೆ ಬೇರೆ ಯಾವುದಾದರೂ ಕಾರಣವಿದ್ದಲ್ಲಿ ಅರಿತವರು ತಿಳಿಸಬೇಕಾಗಿ ವಿನಂತಿ!
12 ಟಿಪ್ಪಣಿಗಳು Post a comment
  1. ksraghavendranavada's avatar
    ಆಗಸ್ಟ್ 28 2012

    ಸಾಮಾನ್ಯವಾಗಿ ಹಳೇ ದೇವಳಗಳು ಊರ ಹೊರಗೆ ಸು೦ದರವಾದ ಪ್ರಕೃತಿಯ ನಡುವೆ ಇವೆ. ಹಿ೦ದೆಲ್ಲಾ ಹೆ೦ಚಿನ ಮಾಡಿನ ದೇವಸ್ಠಾನಗಳೇ ಹೆಚ್ಚು.. ಶಿಲಾಮಯ ಗರ್ಭಗುಡಿಗಳು,, ನೈಸರ್ಗಿಕ ಸೌ೦ದರ್ಯದ ನಡುವೆ ಮೈ-ಮನಕ್ಕೂ ತ೦ಪನ್ನೀಯುವ ತಾಣಗಳಾಗಿದ್ದವು. ಈಗಿನ೦ತೆ ಆರ್ಸೀಸಿ ದೇವಸ್ಠಾನಗಳು ಆಗ ಇರಲಿಲ್ಲ. ಹಾಗೆಯೇ ರಸ್ತೆ ಮಾರ್ಗಗಳೂ ಹೆಚ್ಚು ಅಭಿವೃದ್ಧಿ ಹೊ೦ದಿರದ ಕಾಲವಲ್ಲವೇ? ಬಿಸಿಲು-ಮಳೆಗೆ ಬೆ೦ದು ಬ೦ದ ಭಕ್ತಾದಿಗಳು ದೇವಳದೊಳಗೆ ಬ೦ದು ಅ೦ಗಿ-ಬನಿಯನ್ನುಗಳನ್ನು ಬಿಚ್ಚಿ.. ಸ್ವಲ್ಪ ಆ ತ೦ಪಾದ ವಾತಾವರಣದಲ್ಲಿ ಕುಳಿತು ಆಯಾಸ ಪರಿಹರಿಸಿಕೊ೦ಡು ನ೦ತರ ದೇವರ ದರ್ಶನವನ್ನು ಪಡೆಯುತಿದ್ದರು. ಈಗಲ್ಲವೇ ದೇವರ ದರ್ಶನಕ್ಕೂ ಸರತಿ ಪದ್ಧತಿ ಆರ೦ಭವಾಗಿರುವುದು !ಈಗಲ್ಲವೇ ಹೆಚ್ಚಾಗಿ ಜನ ದೇವಳಗಳತ್ತ ಮುಖ ಮಾಡುತ್ತಿರುವುದು! ಹಿ೦ದೆ ಕಾಯಕವೇ ಕೈಲಾಸವೆ೦ದು ಬೆಳಿಗ್ಗೆಯಿ೦ದ ಸ೦ಜೆಯವರೆಗೆ ನಿಷ್ಠೆಯಿ೦ದ ದುಡಿದು ಸಮಯ ಉಳಿದಲ್ಲಿ ದೇವಸ್ಠಾನಗಳಿಗೆ ಇಲ್ಲವೆ೦ದರೆ ಹಬ್ಬ -ಹರಿದಿನಗಳಲ್ಲಿ ಧೇವಸ್ಠಾನಕ್ಕೆ ಹೋಗಿ ದೇವರ ದರ್ಶನ ಪಡೆಯುತ್ತಿದ್ದುದು ಸಾಮಾನ್ಯ.. ಈಗ ಎಲ್ಲಾ ಧೇವಸ್ಠಾನಗಳಿಗೂ ಜನಸ೦ದಣಿ ಹೆಚ್ಚಾಗಿದೆ. ಬಿಸಿಲು-ಮಳೆಯಲ್ಲಿ ನೆ೦ದು ಬೆ೦ದು ಬ೦ದ ಭಕ್ತಾದಿಗಳು ವಿಶ್ರಮಿಸಿಕೊಳ್ಳುವಾಗ ಅ೦ಗಿ ತೆಗೆಯುತ್ತಿದ್ದುದು ಈಗಲೂ ಕೆಲವೊ೦ದು ದೇವಳಗಳಲ್ಲಿ ಪದ್ಧತಿಯಾಗಿ ಮು೦ದುವರಿದುಕೊ೦ಡು ಬ೦ದಿದೆ! ಅಷ್ಟೇ.. ದೇವಳಗಳಲ್ಲಿ ಶರ್ಟು ತೆಗೆಸುವುದು ಜನಿವಾರವಿಲ್ಲದವರಿಗೆ ಮಾತ್ರವಲ್ಲ! ಎಲ್ಲರಿಗೂ ತೆಗೆಸುತ್ತಾರೆ. ಆಗೆಲ್ಲಾ ಕಳ್ಳ-ಕಾಕರು ಹೆಚ್ಚಿರಲಿಲ್ಲ. ಬ೦ದ ಭಕ್ತಾದಿಗಳು ತಮ್ಮ ಅ೦ಗಿಯ ಕಿಸೆಗಳಲ್ಲಿದ್ದ ಹಣ ಇತರೆಗಳನ್ನು ಭದ್ರವಾಗಿ ತೆಗೆದು ಒ೦ದು ಕಡೆ ಇಟ್ಟು ಆನ೦ದವಾಗಿ ದೇವರ ದರ್ಶನ ಪಡೆಯುತ್ತಿದ್ದರು. ಆ ಒ೦ದು ಕ್ಷಣವಾದರೂ ನಮ್ಮೆಲ್ಲಾ ನಿತ್ಯ ಜ೦ಜಡ ( ಹಣ ಮತ್ತೊ೦ದು, ಮಗದೊ೦ದು)ಗಳನ್ನು ಮರೆಯಬೇಕೆನ್ನು ವ ಸದುದ್ದೇಶವಿರಬಹುದು ನಮ್ಮ ಹಿ೦ದಿನವರ ಬಳಿ! ಅದಕ್ಕಾಗಿಯೇ ಶರ್ಟು ತೆಗೆಸುವ ಪದ್ಧತಿ ಆರ೦ಭವಾಗಿರಬಹುದೆ೦ದು ನನ್ನ ಅನಿಸಿಕೆ ಬೇರೆ ಕಾರಣಗಳಿದ್ದರೆ ಕೇವಲ ಅ೦ಗಿಯನ್ನು ಮಾತ್ರವಲ್ಲ.. ಬೆತ್ತಲೆಯಾಗಿ ದೇವರ ದರ್ಶನ ಪಡೆಯೆರೆ೦ದು ಹೇಳುತ್ತಿದ್ದರೇನೊ! ಶರ್ಟು ತೆಗೆಸುವ ಕೆಲವು ದೇವಳಗಳಲ್ಲಿನ ಪಧ್ಧತಿಯಲ್ಲಿ ಜಾತಿಯ ಪ್ರಶ್ನೆ ಉದ್ಬವಿಸಿಲ್ಲವೆ೦ದು ನನ್ನ ಅನಿಸಿಕೆ.

    ಉತ್ತರ
    • ashok's avatar
      ಸೆಪ್ಟೆಂ 3 2012

      ನಾನು ಲೇಖನದಲ್ಲೇ ತಿಳಿಸಿದಂತೆ ಶರ್ಟು ಬಿಚ್ಚಿಸುವುದಕ್ಕೆ ಇರುವ ನಿಜವಾದ ಕಾರಣ ನನಗೆ ತಿಳಿದಿರಲಿಲ್ಲ. ದೇವಾಲಯದಲ್ಲೇ ಕೆಲವರಿಗೆ ಕೇಳಿದ್ದೆನಾದರೂ ಅವರಿಗೂ ಉತ್ತರ ಗೊತ್ತಿರಲಿಲ್ಲ. ನೀವು ತಿಳಿಸಿರುವ ಕಾರಣ ಸರಿಯಾಗಿದೆ ಎಂದೇ ಅನ್ನಿಸುತ್ತೆ. ಮಾಹಿತಿಗೆ ಧನ್ಯವಾದಗಳು. ನೀವೇ ಹೇಳಿದ ಹಾಗೆ ಒಂದು ಸಂಪ್ರದಾಯ ಈಗಲೂ ವಿನಾಕಾರಣ ಚಾಲ್ತಿಯಲ್ಲಿದೆ. ಅದರ ಅವಶ್ಯಕತೆ ಎಷ್ಟೋ ನೀವೇ ತಿಳಿಸಬೇಕು……ಆ ಪದ್ಧತಿಗೆ ಮೂಲಕಾರಣ ಯಾವುದೇ ಇರಲಿ ಈಗಿರುವವರು ಜನಿವಾರ ನೋಡಿ ಭೇಧಮಾಡುವುದು [ಅದು ಸಣ್ಣ ಸಣ್ಣ ಭೇದವೇ ಇರಬಹುದು] ಎಷ್ಟರ ಮಟ್ಟಿಗೆ ಸರಿ ಸರ್?

      ಉತ್ತರ
      • Balachandra Bhat's avatar
        ಸೆಪ್ಟೆಂ 3 2012

        @Ashok: ಜನಿವಾರ ನೋಡಿ ಬೇದ-ಭಾವ ಮಾಡಿದರೆ ಅಲ್ಲಿ ಹೋಗದಿದ್ದರಾಯಿತು ಅಷ್ಟೇ. ಇನ್ನು ಅದು ಸರ್ಖಾರಿ ಶಾಖೆಯಾಗಿದ್ದರೆ ಅದರ ವಿರುದ್ಧ ಹೋರಾಟ ಮಾಡಬಹುದು. ಮೆಕ್ಕಾದಲ್ಲೂ non-Muslims ಗೆ ಹೋಗಲು ಅಪ್ಪಣೆಯಿಲ್ಲ ತಿಳಿಯಿತೆ.
        ಇನ್ನು ಶರ್ಟು ಬಿಚ್ಚುವ ಪದ್ಧತಿ ತುಂಬಾ ಕಡೆ ಇದೆ. ಅದಕ್ಕೆ ಸ್ಪಷ್ಟ ಕಾರಣ ಗೊತ್ತಿಲ್ಲ. ಕೆಲವು ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬಗಳಲ್ಲಿ ಊಟಕ್ಕೆ ಕೂರುವಾಗ ಶರ್ಟು ಬಿಚ್ಚಬೇಕೆಂದು ನಿಯಮಾವಳಿ ಇರುತ್ತದೆ. ಇನ್ನು ಕೆಲವೆಡೆ ಮಡಿ ಪಂಚೆಯನ್ನು ಧರಿಸಿಯೇ ಊಟಮಾಡಬೇಕೆಂದು ನಿಯಮಾವಳಿಗಳಿವೆ. ಅಲ್ಲಿ ಬೇರೆಯವರನ್ನು ಪ್ರತ್ಯೇಕಿಸುವ ಪ್ರಶ್ನೆಯೇ ಇರುವದಿಲ್ಲವಾದರೂ ಕೆಲವರು ನಿಯಮಾವಳಿಗೆ ಅಂಟಿಕೊಂಡಿರುತ್ತಾರೆ. ನಮಗೆ ಇಷ್ಟವಾದಲ್ಲಿ ಅನುಸರಿಸಬಹುದು ಇಲ್ಲವಾದಲ್ಲಿ ಬಿಡಬಹುದು ಅಷ್ಟೇ.

        ಉತ್ತರ
        • ashok's avatar
          ಸೆಪ್ಟೆಂ 4 2012

          ನಿಮ್ಮೆಲ್ಲ ಮಾತುಗಳನ್ನು ಒಪ್ಪುತ್ತೇನೆ ಭಟ್ ಸರ್. ಆದ ಕಾರಣದಿಂದಲೇ ನಾನು ಸುಬ್ರಹ್ಮಣ್ಯಕ್ಕೆ ಹೋದರೂ ದೇವಸ್ಥಾನದ ಒಳಗೆ ಹೋಗುವುದಿಲ್ಲ.

          ಉತ್ತರ
  2. Kumar's avatar
    ಸೆಪ್ಟೆಂ 2 2012

    ನಾವಡರೇ, ನಿಮ್ಮ ಮಾತು ಸರಿಯಾಗಿದೆ.
    ಜಾತಿಯ ಕಾಮಾಲೆ ಹಿಡಿದವರಿಗೆ ಪ್ರತಿಯೊಂದರಲ್ಲೂ ಜಾತಿಯೇ ಕಾಣಿಸುವುದರಲ್ಲಿ ಆಶ್ಚರ್ಯವಿಲ್ಲ.
    ಅಂಗಿ ಬಿಚ್ಚಿಸುವುದು ಜನಿವಾರ ನೋಡಲು ಎಂದಾದರೆ, ಜನಿವಾರ ಹಾಕಿದವರೆಲ್ಲರೂ ಬ್ರಾಹ್ಮಣರೇನು ಎಂದೂ ಪ್ರಶ್ನಿಸಬಹುದು.
    ನನಗೆ ತಿಳಿದಿರುವಂತೆ ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಬ್ರಾಹ್ಮಣರಿಗೆ ಮತ್ತು ಬ್ರಾಹ್ಮಣರಲ್ಲದವರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆಯೇನೂ ಇಲ್ಲ.

    ಉತ್ತರ
    • ashok's avatar
      ಸೆಪ್ಟೆಂ 3 2012

      ಜಾತಿಯ ಕಾಮಾಲೆ ಖಂಡಿತ ಹಿಡಿದಿಲ್ಲ ಕುಮಾರರೇ…… ನನ್ನ ಸ್ನೇಹ ವರ್ಗದಲ್ಲಿ ಎಷ್ಟೋ ಜಾತಿಯವರಿದ್ದಾರೆ… ಕೆಲವರ ಜಾತಿ ತಿಳಿದೂ ಇಲ್ಲ ನನಗೆ….. ನೀವು ಬಹುಶಃ ಲೇಖನವನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಲಿಲ್ಲವೇನೋ…… ಅಂಗಿ ಬಿಚ್ಚಿಸುವುದಕ್ಕೆ ನಿಜವಾದ ಕಾರಣವೇನೋ ನನಗೂ ಗೊತ್ತಿಲ್ಲ. ನಾವಡರು ಕೊಟ್ಟ ಉತ್ತರವನ್ನು ಒಪ್ಪಬಹುದು. ಇನ್ನು ದೇವರ ದರ್ಶನಕ್ಕೆ ಬ್ರಾಹ್ಮಣರಿಗೆ ಮತ್ತು ಬ್ರಾಹ್ಮಣರಲ್ಲದವರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಖಂಡಿತ ಇಲ್ಲ. ದೇವರ ಮೇಲೆ ವಿಶೇಷವಾದ ನಂಬುಗೆ ಇಲ್ಲದಿದ್ದರೂ ಸುಬ್ರಮಣ್ಯಕ್ಕೆ ನಾನು ಬಹುಶಃ ದೇವರನ್ನು ನಂಬುವವರಿಗಿಂತ ಹೆಚ್ಚಾಗೇ ಹೋಗುತ್ತೇನೆ! ಕಾರಣ ಅದಿರುವ ಪರಿಸರ……. ನನ್ನ ಲೇಖನ ಬ್ರಾಹ್ಮಣರ ವಿರುದ್ಧವಾಗಿ ನಿಮಗೆ ಕಂಡಿದ್ದರೆ ಕ್ಷಮೆಯಿರಲಿ…. ಲೇಖನದ ುದ್ದೇಶ ಻ನವಶ್ಯಕ ಬ್ರಾಹ್ಮ್ಯದ ವಿರುದ್ಧವೇ ಹೊರತು ಬ್ರಾಹ್ಮಣರ ವಿರುದ್ಧವಲ್ಲ…..

      ಉತ್ತರ
  3. SSNK's avatar
    ಸೆಪ್ಟೆಂ 3 2012

    A comment to your article is added in the following url also: http://goo.gl/O7J33

    ಉತ್ತರ
  4. Kumar's avatar
    ಸೆಪ್ಟೆಂ 3 2012

    ashok> ಶರ್ಟು ಬಿಚ್ಚಿ ಹೆಗಲ ಮೇಲೆ ಹಾಕಿಕೊಳ್ಳುವುದು ಯಾವ ಪುರುಷಾರ್ಥಕ್ಕೆ?
    ashok> ಮಾಂಸಾಹಾರಕ್ಕೂ ಪೇಜಾವರರಿಗೂ ಏನು ಸಂಬಂಧ? ಅವರ್ಯಾಕೆ ಮಾಂಸಾಹಾರಿಗಳ ಬಗ್ಗೆ ವಿನಾಕಾರಣ ಹೇಳಿಕೆ ನೀಡಬೇಕಿತ್ತು?
    ashok> ಮಡೆಸ್ನಾನದ ಬಗ್ಗೆ ನಿಮಗೆ ತಿಳಿದಿರಬಹುದು. ಮಡೆಸ್ನಾನ ನಡೆಯುತ್ತಿದ್ದಿದ್ದು ಸುಬ್ರಹ್ಮಣ್ಯದಲ್ಲಿ. ಅದರ ಪರ ವಿರೋಧದ ಬಗ್ಗೆ ಪೇಜಾವರರೇಕೆ ಮೂಗು ತೂರಿಸಿದರು?
    ನೋಡಿ, ನಿಮ್ಮ ವಾದವು ಹೇಗೆ ದಾರಿ ತಪ್ಪುತ್ತಿದೆ ಎಂದು? ನೀವು ಬರೆದಿರುವ ಲೇಖನ ವಿಜಯ ಮಲ್ಯ ಅವರು ದೇವಸ್ಥಾನಕ್ಕೆ ಚಿನ್ನದ ಬಾಗಿಲನ್ನು ನೀಡಿದ್ದಕ್ಕೆ ಸಂಬಂಧಿಸಿದ್ದಲ್ಲ ಎಂದು ಹೇಳುವುದಕ್ಕೆ ಮೇಲಿನ ನಿಮ್ಮ ಧಾಟಿಗಿಂತ ಬೇರೆ ಬೇಕೆ?

    ashok> ವ್ಯಕ್ತಿಯನ್ನು ಹಂಗಿಸುವುದರ ಬಗ್ಗೆ, ಮಲ್ಯನಿಗೂ ಪೇಜಾವರರಿಗೂ ಏನು ಸಂಬಂಧ ಎಂಬ ಸಕಾಲಿಕ ಪ್ರಶ್ನೆ ಎತ್ತಿದ್ದೀರಿ. ನೀವು ಯಾವ ಭಾಗದವರೋ ಗೊತ್ತಿಲ್ಲ. ನಾನು
    ashok> ಕಳೆದ ಒಂದೂವರೆ ವರುಷದಿಂದ ಕರಾವಳಿ ಭಾಗದಲ್ಲಿದ್ದೇನೆ. ಇಲ್ಲಿರುವ ಅನಾರೋಗ್ಯಕರ ಮುಸ್ಲಿಂ ಮತ್ತು ಹಿಂದೂ ಮತಾಂಧತೆಗಳೆರಡನ್ನೂ ಹತ್ತಿರದಿಂದ ಕಂಡಿದ್ದೇನೆ. ಆ
    ashok> ಕಾರಣದಿಂದ ನನ್ನ ಲೇಖನದಲ್ಲಿ ಚಿನ್ನದ ಬಾಗಿಲಿನ ಜೊತೆಗೆ ಪೇಜಾವರರು, ಇಲ್ಲಿನ ಹಿಂದೂ ಸಂಘಟನೆಗಳ ವಿಷಯ ಪ್ರಸ್ತಾಪವಾಗಿದೆಯೇ ಹೊರತು
    ಕರಾವಳಿಯಲ್ಲಿರುವ ಮುಸ್ಲಿಂ ಮತಾಂಧತೆ-ಹಿಂದು ಮತಾಂಧತೆಯ ವಿಷಯಗಳು ವಿಜಯ ಮಲ್ಯ ಕುರಿತು ಮಾತನಾಡುವಾಗ ಹೇಗೆ ಬರಲು ಸಾಧ್ಯ ಎಂದೇ ನನಗೆ ಹೊಳೆಯುತ್ತಿಲ್ಲ! ಅಥವಾ ಲೇಖನದ ವಿಷಯಕ್ಕೆ ಸಂಬಂಧಿಸಿರದಿದ್ದರೂ ನೀವು “ಹತ್ತಿರದಿಂದ ಕಂಡಿರುವ” ವಿಷಯಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ “ವಿಶೇಷ” ಆಸಕ್ತಿಯೋ?
    ಆದರೆ, ಮುಸ್ಲಿಂ ಮತಾಂಧತೆ ಮತ್ತು ಹಿಂದು ಮತಾಂಧತೆಗೆ ಒಂದು ಮೂಲಭೂತ ವ್ಯತ್ಯಾಸವನ್ನು ತಿಳಿದಿದ್ದರೆ ನಿಮ್ಮ ವಿಶ್ಲೇಷಣೆಗೆ ಉಪಯೋಗವಾದೀತು – ಮುಸ್ಲಿಂ ಮತಾಂಧತೆ “ಜೆಹಾದ್”ನ ಪ್ರೇರಣೆಯಿಂದ ಹುಟ್ಟಿದ್ದು. ಜಗತ್ತಿನಲ್ಲಿ ಎಲ್ಲೇ ಮುಸ್ಲಿಮರಿಗೆ ಅಥವಾ ಇಸ್ಲಾಂಗೆ ತೊಂದರೆಯಾದರೂ ಏಟು ಬೀಳುವುದು ಭಾರತದ ಹಿಂದುಗಳಿಗೆ. ಉದಾಹರಣೆಗೆ, ಯಾವುದೋ ದೇಶದಲ್ಲಿ ಬರೆದ ವ್ಯಂಗ್ಯಚಿತ್ರಕ್ಕೆ ಪ್ರತಿಭಟನೆ ನಡೆಸುವ ನೆಪದಲ್ಲಿ ಭಾರತದಲ್ಲಿ ಹಿಂಸಾಚಾರ ನಡೆಸಿದ್ದರು. ಇದಕ್ಕೆ ಹಿಂದುಗಳು ಸುಮ್ಮನೆ ಕೂಡುತ್ತಿಲ್ಲ, ಅವರೂ ಪ್ರತಿಕ್ರಿಯಿಸುತ್ತಿದ್ದಾರೆ. ಆ ಪ್ರತಿಕ್ರಿಯೆ ಹಿಂದು-ಮತಾಂಧತೆಯ ರೂಪದಲ್ಲಿ ಕಾಣುತ್ತಿದೆ. ಹೀಗಾಗಿ ಹಿಂದು ಮತಾಂಧತೆಯನ್ನು ಇಲ್ಲವಾಗಿಸಬೇಕಾದರೆ, ಅದು ಯಾವ ಕಾರಣಕ್ಕಾಗಿ ಪ್ರಾರಂಭವಾಗಿದೆಯೋ ಅದನ್ನು ಮೊದಲು ಇಲ್ಲವಾಗಿಸಬೇಕು. ಕೇವಲ “ಜಾತ್ಯಾತೀತ” ಎಂದು ತೋರಿಸಿಕೊಂಡು “ಬುದ್ಧಿಜೀವಿ”ಯಾಗಿ ಮೆರೆಯಲು “ತ್ರಯಸ್ಥ”ನಂತೆ ಸೋಗು ಹಾಕಲು ಮುಸ್ಲಿಂ ಮತಾಂಧತೆಯನ್ನು ಮತ್ತು ಹಿಂದು ಮತಾಂಧತೆಯನ್ನು ಒಂದೇ ತಕ್ಕಡಿಯಲ್ಲಿ ತೂಗುವುದರಿಂದ ಯಾವ ಉಪಯೋಗವೂ ಇಲ್ಲ. “Action and Reaction are equal and opposite.” If you don’t want the reaction, then stop the action!

    ashok> ಆದರೆ ಅವರೆಲ್ಲಿದ್ದಾರೆ ಹಿಂದೂ ಧರ್ಮ ‘ರಕ್ಷಕರು’, ಪೇಜಾವರ ಸ್ವಾಮಿಗಳು, ಮುಖ್ಯವಾಗಿ ಅವರೆಲ್ಲಿದ್ದಾರೆ ಆ ದೇವರು?!
    ನೋಡಿ ನೀವು ಎಷ್ಟು “ಗೌರವ”ದಿಂದ ಬರೆದಿದ್ದೀರಿ? ಇಷ್ಟೆಲ್ಲಾ ಬರೆದ ನಂತರ, ಪೇಜಾವರಶ್ರೀಗಳ ಬಗೆ ನನಗೂ ಬಹಳ ಗೌರವವಿದೆ ಎಂಬ ಸಮರ್ಥನೆ ಬೇರೆ! ಎರಡು ನಾಲಗೆಯ ರಾಜಕಾರಣಿಗಳ ನೆನಪಾಗುತ್ತದೆ ಅಷ್ಟೇ!

    ashok> ಆದರೆ ಮಾಂಸಹಾರಿಗಳ ಪಕ್ಕ ಸಸ್ಯಹಾರಿಗಳು ಕುಳಿತುಕೊಳ್ಳುವುದರಿಂದ ಸಸ್ಯಹಾರಿಗಳೂ ಮಾಂಸ ಸೇವಿಸುವ ‘ದುಷ್ಟ’ ಕೆಲಸ ಆರಂಭಿಸಿಬಿಡುತ್ತಾರೆಂಬ ಅವರ ‘ಭಯ’
    ಬನಿಯನ್ ತೆಗೆಯುವುದು ಜನಿವಾರ ನೋಡುವುದಕ್ಕೆಂದು ನೀವಂದುಕೊಂಡಿಲ್ಲವೇ? ಪೇಜಾವರಶ್ರೀಗಳ ಅಭಿಪ್ರಾಯ ತಪ್ಪೇ ಆಗಿರಬಹುದು. ಅದು ಅವರ ಅಭಿಪ್ರಾಯ ಮತ್ತು ಅವರಿಗೂ “ಸ್ವತಂತ್ರ” ಭಾರತದಲ್ಲಿ ಅಭಿಪ್ರಾಯ ಸ್ವಾತಂತ್ರ್ಯ ಇದೆ. ಆದರೆ, ಅದನ್ನೇ ನೆನಪು ಮಾಡಿಕೊಂಡು ಮೂದಲಿಕೆಯ ಧ್ವನಿಯಲ್ಲಿ ಮಾತನಾಡುವುದು ಎಷ್ಟರಮಟ್ಟಿಗೆ ಸರಿ?

    ashok> “ಹೆಂಡ ಮಾರುವವರಿಂದ ಯಕಶ್ಚಿತ್ ಕ್ಯಾಲೆಂಡರಿಗಾಗಿ ಅರೆಬೆತ್ತಲೆ ಹುಡುಗಿಯರ ಫೋಟೋಶೂಟ್ ಮಾಡುವವರಿಂದ ಚಿನ್ನದ ಬಾಗಿಲನ್ನು ದಾನವಾಗಿ
    ashok> ಪಡೆದುಕೊಳ್ಳಬೇಡಿ” ಎಂದು ಸುಬ್ರಹ್ಮಣ್ಯ ದೇವಾಲಯದವರಿಗೆ ‘ಬುದ್ಧಿ’ ಹೇಳಿದ ವರದಿಗಳಾಗಿಲ್ಲ.
    ಪ್ರತಿಯೊಂದು ವಿಷಯಕ್ಕೂ ಪೇಜಾವರಶ್ರೀಗಳು ಹೇಳಿಕೆ ನೀಡಬೇಕು, ಅದನ್ನು ಮಾಧ್ಯಮ ಒಂದು ವಿವಾದವನ್ನಾಗಿ ಮಾಡಬೇಕು. ಆಗ, ಅವರನ್ನು ತೆಗಳಿ ಒಂದು ಲೇಖನ ಬರೆಯುವ ಅವಕಾಶ. ಆದರೆ, ಅವರು ಹೇಳಿಕೆ ನೀಡದಿದ್ದರೂ ಅದನ್ನೊಂದು ವಿವಾದ ಮಾಡುವ ಅಸಾಧ್ಯ “ಬುದ್ಧಿ”ವಂತರು ಇದ್ದಾರೆ ಎನ್ನುವುದು ನಿಮ್ಮ ಈ ಲೇಖನದಿಂದ ಸಾಬೀತಾಯಿತು!

    ನಿಮ್ಮ ಲೇಖನದ ಶೀರ್ಷಿಕೆ ವಿಜಯ ಮಲ್ಯ ಹಾಗೂ ಚಿನ್ನದ ಬಾಗಿಲು ಆದರೂ, ಮುಖ್ಯವಸ್ತು ಅದಲ್ಲ ಎನ್ನುವುದು ಬಹಳ ಸ್ಪಷ್ಟ. ನಿಮ್ಮ ಮನಸ್ಸಿನಲ್ಲಿರುವ “ಕಹಿ” ಅನೇಕ ಸ್ಥಳಗಳಲ್ಲಿ ಆಗಾಗ ಇಣುಕಿ ಹಾಕಿದೆ. ನೀವೇ ನಿಮ್ಮ ಲೇಖನವನ್ನು ಒಮ್ಮೆ ಓದಿಕೊಂಡು ಸ್ವವಿಮರ್ಶೆ ಮಾಡಿಕೊಳ್ಳಿ.

    ಒಂದು ವಿಷಯ ನೆನಪಿಟ್ಟುಕೊಳ್ಳಿ. ನೀವು ಹಿಂದುಗಳನ್ನು ಟೀಕಿಸಬಹುದು. ಹಿಂದು ಸಮಾಜದ ಕುರೂಡಿಗಳನ್ನು ಕುರಿತಾಗಿ ಬರೆಯಬಹುದು. ಹಿಂದು ಸಮಾಜ ತನ್ನಲ್ಲಿರುವ ಕೆಟ್ಟದ್ದನ್ನೆಲ್ಲಾ ತೆಗೆದುಹಾಕಿಕೊಂಡು ಸ್ವಚ್ಛವಾಗಲು ಸಿದ್ಧವಾಗಿದೆ. ಆದರೆ, ಹಿಂದು ಸಮಾಜದ ಸುಧಾರಣೆಯನ್ನು ಪೇಜಾವರಶ್ರೀಗಳೋ ಅಥವಾ ಶಂಕರಾಚಾರ್ಯರೋ ಅಥವಾ ಇನ್ಯಾರೋ ಮಠಾಧೀಶರೋ ತೆಗೆದುಕೊಂಡಿಲ್ಲ. ಸಮಾಜದ ಒಳಗಿನಿಂದ ಸುಧಾರಣೆಯ ಕೂಗು ಹೊರಗೆ ಬರಬೇಕು. ಕುರೂಢಿಗಳ ಆಚರಣೆ ಚಾಲ್ತಿಗೆ ಬರಲು ಹಲವು ಶತಮಾನಗಳೇ ಸಂದಿರಬಹುದು. ಅವು ಹೋಗಲೂ ಅಷ್ಟೇ ಸಮಯ ತೆಗೆದುಕೊಳ್ಳುತ್ತದೆ. ಸುಧಾರಣೆಯ ಆಸಕ್ತಿಯುರುವವರು ಸುಧಾರಣೆ ಆಗುವತನಕ ತಾಳ್ಮೆಯಿಂದ ಕೆಲಸ ಮಾಡಬೇಕಾಗುತ್ತದೆ. ಕೇವಲ ವ್ಯಕ್ತಿಗಳನ್ನು, ಸಮಾಜವನ್ನು ಮೂದಲಿಸುವುದರಿಂದ ಏನೂ ಸಾಧಿಸಿದಂತಾಗುವುದಿಲ್ಲ. ಹಿಂದು ಸಮಾಜ ಸಹನಶೀಲ ಸಮಾಜ. ಹೀಗಾಗಿ, ನಿಮಗೆ ಅದನ್ನು ಟೀಕಿಸುವುದರಿಂದ ತೊಂದರೆಯೂ ಇಲ್ಲ. ಅದನ್ನೇ ಇತರ ಸಮಾಜಗಳೊಡನೆ ಪ್ರಯತ್ನಿಸಿ ನೋಡಿ. ಆಗ ತಿಳಿಯುತ್ತದೆ ನನ್ನ ಮಾತಿನ ಅರ್ಥ.

    ಉತ್ತರ
    • ashok's avatar
      ಸೆಪ್ಟೆಂ 4 2012

      ನೋಡಿ ಕುಮಾರ್ ಸರ್, ನಿಮಗೆ ನನ್ನನ್ನು ಟೀಕಿಸುತ್ತಲೇ ಇರಬೇಕೆಂಬ ಉದ್ದೇಶವಿದೆ ಸಂತೋಷ ಬೇಕಾದಷ್ಟು ಟೀಕಿಸಿ. ಚಿನ್ನದ ಬಾಗಿಲಿಗೂ ಪೇಜಾವರರಿಗೂ ಏನು ಸಂಬಂಧ ಹಿಂದೂ ಸಂಘಟನೆಗಳಿಗೆ ಏನು ಸಂಬಂಧ ಎಂದು ಕೇಳುತ್ತಲೇ ಇದ್ದೀರಿ. ಹಿಂದು ಧರ್ಮದ ಪ್ರತಿಪಾದಕರು ನಾವೇ ಎಂದು ಅವರಲ್ಲಿ ಕೆಲವರು ಹೇಳಿಕೊಳ್ಳುವುದರಿಂದಷ್ಟೇ ಲೇಖನದ ದಾಟಿ ಆ ರೀತಿ ಇದೆ. action and reaction are equal and opposite ಎಂದಿದ್ದೀರಿ. ಸಂತೋಷ ನೀವು ಕೂಡ ಒಂದಷ್ಟು ಬಾಂಬು ತಯಾರಿಸಿ ಮುಸ್ಲಿಮರನ್ನು ಸಾಯಿಸಿ ಖುಷಿಪಡಿ. ಹಿಂದು ಸಮಾಜ ಸಹನಶೀಲ ಸಮಾಜ ಎಂದಿದ್ದೀರಿ. ಆ ಸಹನಶೀಲತೆಯ ಮರೆಯಲ್ಲಿರುವ ಮಾನಸಿಕ ಹಿಂಸಾಚಾರಗಳ ಬಗ್ಗೆ ನೀವು ಮಾತನಾಡುವುದಿಲ್ಲ, ನಾವು ಅದರ ಬಗ್ಗೆ ಹೇಳಿದರೆ ‘ಬುದ್ಧಿಜೀವಿ, ಪ್ರಗತಿಪರ ಎಂದು ಹೇಳುತ್ತ ಮೂದಲಿಸುತ್ತೀರಿ. ನಂತರ ನಮಗೆ ಮೂದಲಿಸಬೇಡಿ ಎಂದು ಬುದ್ಧಿಮಾತನ್ನು ಹೇಳುತ್ತೀರಿ!
      ಬೇಕೋ ಬೇಡವೋ ನಾನುಹಿಂದೂ ಧರ್ಮಕ್ಕೆ ಸೇರಿದ್ದೇನೆ ಆದ್ದರಿಂದ ಹಿಂದು ಧರ್ಮದಲ್ಲಿ ಸರಿ ಕಾಣದ ಸಂಗತಿಗಳ ಬಗ್ಗೆ ಮಾತನಾಡುವುದು ನನ್ನದೂ ಹಕ್ಕೇ ಅಲ್ಲವೇ? ಬೇರೆ ಧರ್ಮದ ಬಗ್ಗೆ ಮಾತನಾಡಿ ನೋಡೋಣ ಅವರು ಸಾಯಿಸಿಬಿಡ್ತಾರೆ ಎಂಬ ನಿಮ್ಮ ಧ್ವನಿ ಮುಂದೆ ಹಿಂದೂ ಧರ್ಮದ್ದೂ ಆಗುತ್ತದೆಯಷ್ಟೆ.
      ಇನ್ನು ಪ್ರತಿಯೊಂದಕ್ಕೂ ಹಿಂದೂ ಸಂಘಟನೆಗಳು ಯಾಕೆ ಪ್ರತಿಕ್ರಿಯೆ ಕೊಡಬೇಕು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ನಿಮಗೇ ಗೊತ್ತಿರಬೇಕು! ಇಲ್ಲಿನ ಕೆಲವು ಸಂಘಟನೆಗಳು ಜನರ ವೈಯಕ್ತಿಕ ವಿಚಾರಗಳಲ್ಲೂ ಮೂಗು ತೂರಿಸುತ್ತಾರೆ. ಅಂದ ಮೇಲೆ ನೀವೇ ಹೇಳಿದ ಹಾಗೆ ಕೋಟ್ಯಂತರ ಜನರು ನಂಬುವ ದೇವಸ್ಥಾನದ ವಿಷಯದಲ್ಲೂ ಅವರ ಅಭಿಪ್ರಾಯ ಮುಖ್ಯವಾಗುತ್ತದಲ್ಲವೇ?
      ಇನ್ನು ಬನಿಯನ್ ತೆಗೆಸುವ ವಿಚಾರ. ಯಾಕೋ ನೀವು ಲೇಖನವನ್ನು ಸರಿಯಾಗಿ ಗಮನಸಿಲ್ಲವೇನೋ. ಶರ್ಟು ತೆಗೆಸುವ ಕಾರಣ ನನಗೂ ಸರಿ ತಿಳಿದಿಲ್ಲವೆಂದೇ ಬರೆದಿದ್ದೆ. ಅದರ ಬಗ್ಗೆ ಮತ್ತೊಬ್ಬರು ವಿವರಣೆಯನ್ನೂ ಕೊಟ್ಟಿದ್ದಾರೆ [ಮೇಲಿನ ಕಮೆಂಟುಗಳನ್ನು ಗಮನಿಸಿ]. ಜನಿವಾರ ನೋಡಿ ಅಲ್ಲಿನ ಪೂಜಾರಿಗಳು ಮಾಡುವ ವ್ಯತ್ಯಾಸವನ್ನು ಮಾತ್ರ ನಾನು ಸ್ವತಃ ಅನುಭವಿಸಿದ್ದೇನೆ, ಇನ್ನೂ ಹಲವಾರು ದೇವಲಾಯಗಳಲ್ಲೂ ಅನುಭವಿಸಿದ್ದೇನೆ.
      ಲೇಖನ ಕಂಡಿತವಾಗಿಯೂ ಕೇವಲ ಮಲ್ಯರ ಬಾಗಿಲಿನ ಬಗೆಗಲ್ಲ. ಚಿನ್ನದ ಬಾಗಿಲಿಗೆ ದೋಷವಿಲ್ಲವೇ ಎಂಬ ಶೀರ್ಷಿಕೆಯಲ್ಲೇ ಲೇಖನದ ಉದ್ದೇಶವೂ ಇದೆ.

      ಉತ್ತರ
      • Kumar's avatar
        Kumar
        ಸೆಪ್ಟೆಂ 4 2012

        ashok> ಇನ್ನು ಪ್ರತಿಯೊಂದಕ್ಕೂ ಹಿಂದೂ ಸಂಘಟನೆಗಳು ಯಾಕೆ ಪ್ರತಿಕ್ರಿಯೆ ಕೊಡಬೇಕು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ನಿಮಗೇ ಗೊತ್ತಿರಬೇಕು!
        ashok> ಇಲ್ಲಿನ ಕೆಲವು ಸಂಘಟನೆಗಳು ಜನರ ವೈಯಕ್ತಿಕ ವಿಚಾರಗಳಲ್ಲೂ ಮೂಗು ತೂರಿಸುತ್ತಾರೆ.
        ನಿಮ್ಮ ಎರಡನೇ ವಾಕ್ಯದಲ್ಲಿ “ಕೆಲವು” ಸಂಘಟನೆಗಳು ಎಂದು ಸ್ಪಷ್ಟವಾಗಿ ತಿಳಿಸಿದ್ದೀರಿ.
        ಹಾಗಿದ್ದ ಮೇಲೆ, “ಹಿಂದು ಸಂಘಟನೆಗಳು” ಎಂಬ “Generalization” ಏತಕ್ಕೆ?
        ಎಲ್ಲಾ ಹಿಂದು ಸಂಘಟನೆಗಳೂ ಒಂದೇ ಛತ್ರದಡಿ ಬರುವುದಿಲ್ಲ ಮತ್ತು ಎಲ್ಲವೂ ಒಂದೇ ಉದ್ದೇಶವನ್ನಿಟ್ಟುಕೊಂಡಿಲ್ಲ.
        ಮತ್ತು ಹಿಂದು ಸಮಾಜದಲ್ಲಿರುವ ಕೊಳಕನ್ನು ತೆಗೆಯುವ ಕೆಲಸಗಳನ್ನೂ “ಕೆಲವು” ಹಿಂದು ಸಂಘಟನೆಗಳು ದಶಕಗಳಿಂದ ಮಾಡುತ್ತಿವೆ.

        ashok> ಆ ಸಹನಶೀಲತೆಯ ಮರೆಯಲ್ಲಿರುವ ಮಾನಸಿಕ ಹಿಂಸಾಚಾರಗಳ ಬಗ್ಗೆ ನೀವು ಮಾತನಾಡುವುದಿಲ್ಲ,
        ಕೇವಲ ಹೇಳಿಕೆಗಳನ್ನು ನೀಡುವುದರಿಂದ ಏನೂ ಸಾಧಿಸುವುದಿಲ್ಲ ಎನ್ನುವುದು ನಿಮಗೆ ತಿಳಿದೇ ಇದೆ. ಮೌನವಾಗಿ ಕಾರ್ಯ ಮಾಡುತ್ತಿರುವ ಈ ಸಂಘಟನೆಗಳ ಕುರಿತಾಗಿ ನಿಮಗೆ ತಿಳಿದಿರಬಹುದು. ನೀವು “Generalize” ಮಾಡಿದಾಗ ಇವರು ಮಾಡುತ್ತಿರುವ ಸಾಮಾಜಿಕ ಕಾರ್ಯಕ್ಕೂ ಮಸಿ ಬಳೆದಂತೆ ಅಲ್ಲವೇ?
        ಮಹಾರಾಷ್ಟ್ರದ ನಾಸಿಕದಲ್ಲಿನ ಕಾಳಾರಾಮ ದೇವಸ್ಥಾನ ಪ್ರವೇಶಕ್ಕೆ ಡಾ||ಅಂಬೇಡ್ಕರ್ ಪ್ರಯತ್ನಿಸಿದ್ದರು. ಅಲ್ಲಿನ ಪುರೋಹಿತ ಸಮುದಾಯ ಅವರನ್ನು ವಿರೋಧಿಸಿತ್ತು.
        ಅಂದು ಅಂಬೇಡ್ಕರರನ್ನು ತಡೆದಿದ್ದ ಅದೇ ಪುರೋಹಿತರ ಮೊಮ್ಮಗ “ನನ್ನ ತಾತ ಅಂಬೇಡ್ಕರರನ್ನು ತಡೆದು ದೊಡ್ಡ ಪಾಪ ಮಾಡಿದ್ದಾರೆ. ಅದಕ್ಕೆ ನಾನಿಂದು ಪ್ರಾಯಶ್ಚಿತ್ತ ಮಾಡಿಕೊಳ್ಳುವೆ” ಎಂದು ಘೋಷಿಸಿ, ಎಲ್ಲ ವರ್ಗದವರಿಗೂ ದೇವಸ್ಥಾನದಲ್ಲಿ ಸ್ವಾಗತ ನೀಡಿದ್ದಾರೆ. ಅಷ್ಟೇ ಅಲ್ಲ, ದೇವಸ್ಥಾನದ ಮೂಲಕ ಹಲವು ಸಾಮಾಜಿಕ ಸೇವಾ ಕಾರ್ಯಗಳಿಗೂ ನಾಂದಿ ಹಾಡಿದ್ದಾರೆ.
        ಈ ಪರಿವರ್ತನೆ ಇದ್ದಕ್ಕಿದ್ದಂತೆ ಬಂತೇ? ಇದರ ಹಿಂದೆ ಯಾವ ಸಂಘಟನೆ ಇದೆ?

        ನನಗೆ ನಿಮ್ಮನ್ನು ಟೀಕಿಸುವುದೇ ಉದ್ದೇಶವಲ್ಲ. ನಿಮ್ಮ ಪ್ರತಿಯೊಂದು ಲೇಖನವನ್ನೂ ಓದಿದ್ದೇನೆ. ಅನೇಕ ಸಲ ಪ್ರತಿಕ್ರಿಯಿಸಬೇಕೆಂದುಕೊಂಡರೂ “ಪ್ರಯೋಜನವಿಲ್ಲ” ಎಂದು ಸುಮ್ಮನಾಗಿಬಿಟ್ಟಿದ್ದೇನೆ. ನಿಮ್ಮ ಲೇಖನಗಳಲ್ಲಿ ನನಗೆ ಎದ್ದು ಕಾಣುವ ವಿಷಯ, ಹಿಂದು ಸಮಾಜದ ಕುರಿತಾಗಿ ಬರೆಯುವಾಗ, ಹಿಂದು ಸಂಘಟನೆಗಳ ಕುರಿತಾಗಿ ಬರೆಯುವಾಗ ನೀವು ಮಾಡುವ “Generalization”. ಮತ್ತು ಕೇವಲ ದೋಷಗಳನ್ನೇ ಎತ್ತಿ ಆಡುವುದು – ನಿಮ್ಮ ಬರಹಗಳಲ್ಲಿ “ಚಿಕಿತ್ಸಕ” ಮನೋಭಾವದ ಬದಲು “ಮೂದಲಿಕೆ”ಯ ಧ್ವನಿಯೇ ಹೆಚ್ಚು ಕೇಳಿಸುತ್ತದೆ.

        ashok> ನಿಮಗೆ ನನ್ನನ್ನು ಟೀಕಿಸುತ್ತಲೇ ಇರಬೇಕೆಂಬ ಉದ್ದೇಶವಿದೆ
        ನನಗೆ ನೀವಾರೋ ತಿಳಿಯದು; ಮತ್ತು ನಿಮ್ಮನ್ನೆಂದೂ ಭೇಟಿಯಾಗಿಲ್ಲ. ಹೀಗಿರುವಾಗ ನಾನ್ಯಾಕೆ ನಿಮ್ಮನ್ನು ಟೀಕಿಸುವುದನ್ನೇ ಕಸುಬು ಮಾಡಿಕೊಳ್ಳಲಿ.
        ನಿಮ್ಮ ಬರಹದಲ್ಲಿ ನನಗೆ ಸರಿ ಕಾಣದ ವಿಷಯಗಳನ್ನಷ್ಟೇ ನಾನು ಎತ್ತಿ ತೋರಿಸುವೆ. ನಿಮ್ಮ ಲೇಖನದ ಕುರಿತಾಗಿ ಮೆಚ್ಚುವವರು ಮಾತ್ರ ಪ್ರತಿಕ್ರಿಯೆ ಬರೆಯಬೇಕೆಂದರೆ, ನಿಮ್ಮದೇ “ವೈಯಕ್ತಿಕ” ಬ್ಲಾಗಿನಲ್ಲಿ ಬರೆದುಕೊಳ್ಳುವುದು ಉತ್ತಮ. ಅಥವಾ ಲೇಖನದ ಪ್ರಾರಂಭದಲ್ಲೇ, “ನನಗೆ ಟೀಕಿಸುವುದು ಎಂದರೆ ಆಗುವುದಿಲ್ಲ. ನನ್ನ ಲೇಖನವನ್ನು ಹೊಗಳುವವರು ಮಾತ್ರ ಪ್ರತಿಕ್ರಿಯಿಸುವುದು” ಎಂದು ಬರೆದುಬಿಡಿ. 😉

        ಉತ್ತರ
        • ashok's avatar
          ಸೆಪ್ಟೆಂ 4 2012

          ayyo if i had the intention that the comments should only praise me why would i have replied to almost all your comments!!
          we will blame each others views in positive way that will definitely help to shape our views in better manner.

          ಉತ್ತರ
  5. ರವಿಕುಮಾರ ಜಿ ಬಿ's avatar
    ರವಿಕುಮಾರ ಜಿ ಬಿ
    ಸೆಪ್ಟೆಂ 4 2012

    ಕುಮಾರ್ , ನಿಮ್ಮದು ವ್ಯರ್ಥ ಪ್ರಯತ್ನ! ಇವರು ಅಂಗಿ ತೆಗೆದೇ ಯಾಕೆ ಬರಬೇಕು ಅಂತ ಕೇಳುತ್ತಾರೆ ಆದರೆ ಬುರ್ಖಾ ಹಾಕಿಯೇ ಯಾಕೆ ಬರಬೇಕು ಅಂತ ಕೇಳೋದಿಲ್ಲ! ಅದಲ್ಲದೆ ನಾನು ಹಿಂದೂ ಹಾಗಾಗಿ ಅದರಲ್ಲಿರುವ ಕೆಟ್ಟದ್ದನ್ನು (ಅವರ ಮುಗಿನಾ ನೇರಕ್ಕೆ) ತೆಗೆಯೋದು ನನ್ನ ಹಕ್ಕು ಅಂತ ಪಕ್ಕಾ ಮೂಲಭೂತವಾದಿಗಳ ತರಹ ಹೇಳುತ್ತಾರೆ, ತತ್ಕ್ಷಣ ಹಿಂದೂ ಸಂಘಟನೆಗಳು ಹಿಂದೂ ಧರ್ಮದ ಉದ್ದಾರಕರೆಂದು ಹೇಳಿಕೊಳ್ಳುತ್ತಾರೆಂದೂ ಹೇಳುತ್ತಾರೆ! ಎಲ್ಲಾ ಇವರೇ ಹೇಳುತ್ತಾರೆ! ಮತ್ತೆ ಎಲ್ಲರನ್ನೂ ಟೀಕಿಸುತ್ತಾರೆ, ಮತ್ತೆ ಪುನಃ ಬೇರೆಯವರಿಗೆ ತನ್ನನ್ನು ಟೀಕಿಸುವುದೇ ಕಾಯಕ ಅಂತಲೂ ಹೇಳುತ್ತಾರೆ! ಅಯ್ಯೋ ಡಾಕ್ಟ್ರೆ !!!!!

    ಇವರಿಗೆ ಕುಕ್ಕೆಯ ಪೂಜಾರಿಗಳು, ಅವರ ಭಂದುಗಳಿಗೆ/ಪರಿಚಯದವರಿಗೆ/ವಿ ಐ ಪಿ ಗಳಿಗೆ ಹೆಚ್ಚೂ ಆಸಕ್ಸ್ತಿ ವಹಿಸಿದ್ದು , ಬೇದ ಭಾವದ ತರಹ ಕಾಣುತ್ತೆ! ಅದೇ ಇವರು ಹೋದಾಗ ಯಾರ್ಯಾರದ್ದೋ ಕೈ ಕಾಲು ಹಿಡಿದು ವಿಶೇಷ ದರ್ಶನ ಪಡೆದರೆ ಅದು ಬೇದ ಭಾವದ ತರಹ ಕಾಣಲ್ಲ! (ಈಗ ಪುನಃ ಹೇಳುತ್ತಾರೆ ನೋಡಿ ನಾನು ಈ ತರಹದ ಬೇದ ಭಾವ ನೋಡಿಯೇ ನಾಸ್ತಿಕನಾದೆ ಎಂದು!!! ಪ್ರೂ….) ನೀವು ಹೇಳಿದ ಹಾಗೆ ಬೇರೆಯವರ ಧರ್ಮದ ಬಗ್ಗೆ ಸೋಲ್ಲೆತ್ತಲು ಇವರಿಗೆ ಧೈರ್ಯ ಬೇಕಲ್ಲ? ನಾವು ಹಿಂದೂಗಳು ಏನೇ ಮಾಡಿದರು ಸಹನೆಯಿಂದ ಎಲ್ಲಾ ದೇವರು ನೋಡಿಕೊಳ್ತಾನೆ ಬಿಡಿ ಅಂದು ಸುಮ್ಮನಾಗ್ತೀವಿ ! ಅದು ಇಂತಹವರಿಗೆ ವರದಾನ, ಏನು ಬೇಕಾದರೂ ಅಂದು ಧೈರ್ಯವಾಗಿ ತಿರುಗಾಡುತ್ತಾರೆ! ಯಾರೋ ಒಂದಿಬ್ಬರು ನಿಮ್ಮತಹವರು ಕೇಳಿದರೆ ಏನೇನೋ ಹೇಳಿ ಬಿಡಬಹುದು ,ನಿಮಗೆ ಅವರ ತರಹ ಮಾತಾಡೋ ಮನಸ್ಸಗೋಲ್ಲ ಅಂತ ಅವರಿಗೆ ಚೆನ್ನಾಗಿ ಗೊತ್ತು!

    ಉತ್ತರ

Leave a reply to ರವಿಕುಮಾರ ಜಿ ಬಿ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments