ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 13, 2012

2

ಮಲಾಳ ಯೂಸುಫ್ ಝಾಯಿಯ ಡೈರಿಯಿಂದ

‍ನಿಲುಮೆ ಮೂಲಕ

–  ಡಾ ಅಶೋಕ್ ಕೆ ಆರ್

ಪಾಕಿಸ್ತಾನಿ ತಾಲಿಬಾನಿಗಳಿಂದ ಗುಂಡೇಟು ತಿಂದು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಈ ಹೋರಾಟಗಾರ್ತಿ ಮಾಡಿದ ತಪ್ಪಾದರೂ ಏನು? ಹೆಣ್ಣುಮಕ್ಕಳು ಶಾಲೆಗೆ ಹೋಗಬಾರದು ಎಂಬ ತಾಲಿಬಾನ್ ಆದೇಶವನ್ನು ವಿರೋಧಿಸಿದ್ದೇ ಇವಳ ಅಪರಾಧ! ಎರಡು ವರುಷದ ಮುಂಚೆ ಬರೆದ ದಿನಚರಿಗಳನ್ನು ಗುಲ್ ಮಕಾಯಿ ಎಂಬ ಕಾವ್ಯನಾಮದಡಿಯಲ್ಲಿ ಬಿಬಿಸಿ ಉರ್ದುವಿನಲ್ಲಿ ಪ್ರಕಟಣೆಗೆ ನೀಡಿದ್ದು ಇವಳ ಬಹುದೊಡ್ಡ ತಪ್ಪು. ಅಂದಹಾಗೆ ಮಲಾಳ ಯೂಸುಫ್ ಝಾಯಿ ಎಂಬ ಹೆಸರಿನ ಈ ಹೋರಾಟಗಾರ್ತಿಯ ವಯಸ್ಸು ಹದಿನಾಲ್ಕು!

ಶನಿವಾರ ಜನವರಿ 3 : ಭಯವಾಗ್ತಿದೆ
ನಿನ್ನೆ ಕನಸಿನಲ್ಲಿ ಮಿಲಿಟರಿ ಹೆಲಿಕಾಪ್ಟರ್ ಗಳು ಮತ್ತು ತಾಲಿಬಾನಿಗಳು ಬಂದಿದ್ದರು. ನಮ್ಮ ಸ್ವಾಟ್ ಜಿಲ್ಲೆಯಲ್ಲಿ ಸೈನಿಕ ಕಾರ್ಯಾಚರಣೆ ಶುರುವಾದಾಗಿನಿಂದ ಈ ರೀತಿಯ ದುಸ್ವಪ್ನಗಳು ಮಾಮೂಲಾಗಿದೆ. ಅಮ್ಮ ಮಾಡಿಕೊಟ್ಟ ತಿಂಡಿ ತಿಂದು ಶಾಲೆಗೆ ಹೊರಟೆ. ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ತಾಲಿಬಾನಿಗಳು ನಿಷೇಧಿಸಿರುವುದರಿಂದ ನನಗೆ ಭಯವಾಗುತ್ತಿದೆ.
27 ಜನರಲ್ಲಿ 11 ಮಂದಿ ಮಾತ್ರ ಶಾಲೆಗೆ ಬಂದಿದ್ದೆವು. ತಾಲಿಬಾನ್ ಆದೇಶದಿಂದ ಹಾಜರಾತಿ ಕಡಿಮೆಯಾಗಿತ್ತು. ನನ್ನ ಮೂವರು ಗೆಳತಿಯರು ಈ ಆದೇಶದ ನಂತರ ತಮ್ಮ ಕುಟುಂಬದೊಡನೆ ಲಾಹೋರ್, ಪೇಷಾವರ, ರಾವಲ್ಪಿಂಡಿಗೆ ಹೊರಟುಹೋಗಿದ್ದಾರೆ.
“ಸಾಯಿಸಿಬಿಡ್ತೀನಿ ನಿನ್ನ” ಶಾಲೆಯಿಂದ ಮರಳುವಾಗ ವ್ಯಕ್ತಿಯೊಬ್ಬನ ಧ್ವನಿ ಕೇಳಿ ಗಾಬರಿಯಾಗಿ ನಡೆಯುವ ವೇಗ ಹೆಚ್ಚಿಸಿದೆ. ಸ್ವಲ್ಪ ದೂರ ಕ್ರಮಿಸಿದ ಮೇಲೆ ಆ ವ್ಯಕ್ತಿ ಹಿಂಬಾಲಿಸುತ್ತಿದ್ದಾನಾ ಎಂಬ ಕುತೂಹಲದಿಂದ ತಿರುಗಿ ನೋಡಿದೆ. ನೆಮ್ಮದಿ ನೀಡಿದ ಸಂಗತಿಯೆಂದರೆ ಆತ ಫೋನಿನಲ್ಲಿ ಮಾತನಾಡುತ್ತಿದ್ದ, ಫೋನಿನಲ್ಲಿ ಯಾರಿಗೋ ಬೆದರಿಕೆ ಹಾಕುತ್ತಿರಬೇಕು.

ಭಾನುವಾರ ಜನವರಿ 4: ಶಾಲೆಗೆ ಹೋಗಬೇಕು:

ಇಂದು ಶಾಲೆಗೆ ರಜೆ; ಹಾಗಾಗಿ ತಡ ಮಾಡಿ ಎದ್ದೆ, ಹತ್ತು ಘಂಟೆಗೆ. ಗ್ರೀನ್ ಚೌಕದಲ್ಲಿ ಬಿದ್ದ ಮೂರು ಹೆಣಗಳ ಬಗ್ಗೆ ತಂದೆ ಮಾತನಾಡುತ್ತಿದ್ದುದನ್ನು ಕೇಳಿ ಬೇಸರವಾಯಿತು. ಈ ಸೈನಿಕ ಕಾರ್ಯಾಚರಣೆ ಆರಂಭಗೊಳ್ಳುವುದಕ್ಕೆ ಮುಂಚೆ ಪ್ರತಿ ಭಾನುವಾರ ಮರ್ಗಾಜರ್, ಫಿಜಾ ಘಾಟ್ ಅಥವಾ ಕಡ್ಜುಗೆ ಪಿಕ್ನಿಕ್ಕಿಗೆ ಹೋಗುತ್ತಿದ್ದೆವು. ಆದರೆ ಈಗಿನ ಪರಿಸ್ಥಿತಿಯಲ್ಲಿ ಅದ್ಯಾವುದೂ ಸಾಧ್ಯವಿಲ್ಲ; ಪಿಕ್ನಿಕ್ಕಿಗೆ ತೆರಳಿ ಒಂದೂವರೆ ವರುಷದ ಮೇಲಾಯಿತು.

ರಾತ್ರಿ ಊಟದ ನಂತರ ಒಂದಷ್ಟು ತಿರುಗಾಡಿ ಬರುತ್ತಿದ್ದೆವು; ಈಗ? ಸೂರ್ಯ ಮುಳುಗುವುದಕ್ಕೆ ಮುಂಚಿತವಾಗಿಯೇ ಮನೆ ಸೇರಬೇಕು. ಒಂದಷ್ಟು ಮನೆಗೆಲಸ ಮಾಡಿ, ಹೋಮ್ ವರ್ಕ್ ಮುಗಿಸಿ ತಮ್ಮನ ಜೊತೆ ಆಟವಾಡಿದೆ. ನಾಳೆ ಪುನಃ ಶಾಲೆಗೆ ಹೋಗುವಾಗ ಏನಾಗಬಹುದು ಎಂಬುದನ್ನು ನೆನೆಸಿಕೊಂಡರೇ ಎದೆಬಡಿತ ಹೆಚ್ಚುತ್ತದೆ.
ಸೋಮವಾರ ಜನವರಿ 5: ಬಣ್ಣದ ಬಟ್ಟೆಗಳನ್ನೂ ಧರಿಸಬಾರದು  :

ಶಾಲೆಗೆ ಹೊರಡಲು ತಯ್ಯಾರಾಗುತ್ತ ಯೂನಿಫಾರ್ಮ್ ಕೈಗೆತ್ತಿಕೊಂಡಾಗ ಪ್ರಿನ್ಸಿಪಾಲ್ ಹೇಳಿದ್ದು ನೆನಪಾಯಿತು. ಯುನಿಫಾರಂ ಧರಿಸಿ ಬರಬೇಡಿ, ಸಾದಾ ಉಡುಪಿನಲ್ಲೇ ಶಾಲೆಗೆ ಬನ್ನಿ ಎಂದು ತಿಳಿಸಿದ್ದರು. ನನ್ನ ಮೆಚ್ಚುಗೆಯ ಪಿಂಕ್ ಬಣ್ಣದ ಬಟ್ಟೆಯನ್ನು ಧರಿಸಿ ಹೊರಟೆ. ಶಾಲೆಯ ಹುಡುಗಿಯರೆಲ್ಲ ಬಣ್ಣ ಬಣ್ಣದ ಬಟ್ಟೆ ಧರಿಸಿ ಬಂದಿದ್ದರು; ಮನೆಯ ವಾತಾವರಣವಿತ್ತು ಶಾಲೆಯಲ್ಲಿ.

“ಸತ್ಯ ಹೇಳು. ತಾಲಿಬಾನಿಗಳು ನಮ್ಮ ಶಾಲೆಯ ಮೇಲೆ ದಾಳಿ ಮಾಡುತ್ತಾರಾ?” ಗೆಳತಿಯೊಬ್ಬಳು ಬಳಿ ಬಂದು ಕೇಳಿದಳು. ಬೆಳಗಿನ ಅಸೆಂಬ್ಲಿಯಲ್ಲಿ ಬಣ್ಣದ ಬಟ್ಟೆ ಧರಿಸಿ ಬರಬೇಡಿ, ತಾಲಿಬಾನ್ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಬಹುದು ಎಂದು ತಾಕೀತು ಮಾಡಿದರು.

ಶಾಲೆಯಿಂದ ಬಂದು ಊಟ ಮುಗಿಸಿ ಟ್ಯೂಷನ್ನಿಗೆ ಹೋಗಿ ಬಂದೆ. ಸಂಜೆ ಟಿವಿ ನೋಡುತ್ತಿದ್ದಾಗ ಶಕರ್ದದಲ್ಲಿ ಹದಿನೈದು ದಿನಗಳ ನಂತರ ಕರ್ಫ್ಯೂ ಹಿಂದೆಗೆದುಕೊಂಡ ಸುದ್ದಿ ಕೇಳಿ ಖುಷಿಯಾಯಿತು. ನಮ್ಮ ಇಂಗ್ಲೀಷ್ ಟೀಚರ್ ಶಕರ್ದದಲ್ಲಿ ವಾಸವಿದ್ದರು; ಬಹುಶಃ ಅವರು ನಾಳೆ ಶಾಲೆಗೆ ಬರುತ್ತಾರೆ.

ಬುಧವಾರ ಜನವರಿ 7: ಗುಂಡಿನ ಸದ್ದಿಲ್ಲ; ಭಯವೂ ಇಲ್ಲ:

ಮೊಹರಂ ರಜೆಗೆ ಬುನೈರಿಗೆ ಬಂದಿದ್ದೇನೆ. ಎತ್ತರದ ಪರ್ವತ ಹಸಿರು ನೆಲದ ಹಾಸಿರುವ ಬುನೈರ್ ನನಗೆ ಪ್ರಿಯವಾದ ಜಾಗ. ನನ್ನ ಸ್ವಾಟ್ ಕೂಡ ಸುಂದರವಾಗಿದೆ; ಆದರೆ ಶಾಂತತೆಯಿಲ್ಲ. ಬುನೈರಿನಲ್ಲಿ ಶಾಂತಿಯಿದೆ; ನೆಮ್ಮದಿಯಿದೆ; ಗುಂಡಿನ ಸದ್ದು ಕೇಳುವುದಿಲ್ಲ. ಭಯವೂ ಇಲ್ಲ. ನಾವೆಲ್ಲರೂ ಸಂತಸದಿಂದಿದ್ದೇವೆ.

ಇಂದು ಪೀರ್ ಬಾಬಾ ಸಮಾಧಿಗೆ ಹೋಗಿದ್ದೆವು. ಜನರಿಂದ ಗಿಜಿಗುಡುತ್ತಿತ್ತು. ಅವರು ಪ್ರಾರ್ಥಿಸಲು ಬಂದಿದ್ದರೆ ನಾವು ರಜೆ ಕಳೆಯಲು ಬಂದಿದ್ದೆವು. ಆವರಣದಲ್ಲಿ ಬಳೆ, ಕಿವಿಯೋಲೆ, ನಕಲಿ ಗಿಲೀಟು ಒಡವೆಯ ಅಂಗಡಿಗಳಿದ್ದವು. ಏನನ್ನಾದರೂ ಖರೀದಿಸಬೇಕು ಎಂದುಕೊಂಡೆನಾದರೂ ಯಾವುದೂ ಅಷ್ಟು ಇಷ್ಟವಾಗಲಿಲ್ಲ. ಅಮ್ಮ ಕಿವಿಯೋಲೆ ಮತ್ತು ಬಳೆ ಖರೀದಿಸಿದರು.

ಶುಕ್ರವಾರ ಜನವರಿ 9: ಮೌಲಾನಾ ರಜೆ ಹಾಕಿದ್ದಾರಾ?:

ಇವತ್ತು ಶಾಲೆಯಲ್ಲಿ ಬುನೈರ್ ಪ್ರವಾಸದ ಬಗ್ಗೆ ಗೆಳತಿಯರಲ್ಲಿ ಹೇಳಿದೆ. ಬುನೈರ್ ಕಥೆ ಕೇಳಿ ಕೇಳಿ ನಮಗೆ ಬೇಸರವಾಗಿದೆ ಎಂದು ಮುಖ ತಿರುಗಿಸಿದರು. ಎಫ್ ಎಮ್ ರೇಡಿಯೋದಲ್ಲಿ ಭಾಷಣ ಮಾಡುತ್ತಿದ್ದ ಮೌಲಾನ ಶಾಹ ದುರಾನ್ ರ ಸಾವಿನ ಬಗ್ಗೆ ಹರಡಿದ್ದ ವದಂತಿಗಳ ಬಗ್ಗೆ ಹರಟಿದೆವು. ಹುಡುಗಿಯರು ಶಾಲೆಗೆ ಹೋಗಬಾರದು ಎಂದು ಘೋಷಿಸಿದ್ದು ಇದೇ ಮೌಲಾನ.

ಕೆಲವು ಹುಡುಗಿಯರು ಮೌಲಾನ ಸತ್ತು ಹೋಗಿದ್ದಾರೆ ಎಂದರು; ಉಳಿದವರು ಒಪ್ಪಲಿಲ್ಲ. ನಿನ್ನೆ ರಾತ್ರಿ ಎಫ್ ಎಮ್ ರೇಡಿಯೋದಲ್ಲಿ ಅವರ ಎಂದಿನ ಭಾಷಣ ಬರಲಿಲ್ಲವಾಗಿ ಅವರ ಸಾವಿನ ಗಾಳಿ ಸುದ್ದಿ ಹರಡುತ್ತಿತ್ತು. ಮೌಲಾನ ರಜೆಯ ಮೇಲೆ ಹೋಗಿದ್ದಾರಷ್ಟೇ ಎಂದೊಂದು ಹುಡುಗಿ ಹೇಳಿದಳು.

ಶುಕ್ರವಾರ ಟ್ಯೂಷನ್ ಇಲ್ಲದ ಕಾರಣ ಇಡೀ ಮಧ್ಯಾಹ್ನ ಎಂದಿಗಿಂತ ಹೆಚ್ಚು ಆಟವಾಡುತ್ತ ಕಳೆದೆ. ಸಂಜೆ ಟಿ ವಿ ಮುಂದೆ ಕುಳಿತಾಗ ಲಾಹೋರಿನಲ್ಲಿ ಬಾಂಬ್ ಸ್ಪೋಟವಾದ ಸುದ್ದಿ ಭಿತ್ತರವಾಗುತ್ತಿತ್ತು. ‘ಪಾಕಿಸ್ತಾನದಲ್ಯಾಕೆ ಇಷ್ಟೊಂದು ಬಾಂಬ್ ಸ್ಪೋಟಗಳಾಗುತ್ತವೆ?’ ನನಗೆ ನಾನೇ ಕೇಳಿಕೊಂಡೆ

ಬುಧವಾರ ಜನವರಿ 14 : – ಮತ್ತೆ ಶಾಲೆಗೆ ಹೋಗುವುದು ಅನುಮಾನ:

ಇಂದು ಶಾಲೆಗೆ ಹೋಗುವಾಗ ಮನಸ್ಸು ಸರಿಯಿರಲಿಲ್ಲ. ನಾಳೆಯಿಂದ ಚಳಿಗಾಲದ ರಜೆ ಪ್ರಾರಂಭವಾಗುತ್ತದೆ. ಪ್ರಿನ್ಸಿಪಾಲರು ರಜೆಯ ಆರಂಭದ ಬಗ್ಗೆ ನಿನ್ನೆ ತಿಳಿಸಿದರಾದರೂ ಮತ್ತೆ ಶಾಲೆ ಪ್ರಾರಂಭವಾಗುವುದರ ಬಗ್ಗೆ ಏನೂ ಹೇಳಲಿಲ್ಲ. ಇದೇಮೊದಲ ಬಾರಿಗೆ ಈ ರೀತಿ ಆಗುತ್ತಿದೆ.

ಮುಂಚೆ ಶಾಲೆ ಪುನರಾರಾಂಭವಾಗುವ ದಿನವನ್ನು ಸ್ಪಷ್ಟವಾಗಿ ತಿಳಿಸುತ್ತಿದ್ದರು. ಈ ಬಾರಿ ಪ್ರಿನ್ಸಿಪಾಲರು ದಿನಾಂಕವನ್ನೂತಿಳಿಸಲಿಲ್ಲ, ಕಾರಣವನ್ನೂ ಹೇಳಲಿಲ್ಲ. ನನ್ನ ಅಂದಾಜಿನಂತೆ ತಾಲೀಬಾನ್ ಜನವರಿ 15ರಿಂದ ಹುಡುಗಿಯರ ಶಿಕ್ಷಣವನ್ನುನಿಷೇಧಿಸಿರುವುದೇ ಪ್ರಿನ್ಸಿಪಾಲರ ಮೌನಕ್ಕೆ ಕಾರಣ.

ಈ ಬಾರಿ ನಮಗ್ಯಾರಿಗೂ ರಜೆಯ ಬಗ್ಗೆ ಹೆಚ್ಚು ಸಂತಸವಿರಲಿಲ್ಲ. ತಾಲೀಬಾನ್ ಆದೇಶ ಜಾರಿಗೆ ಬಂದರೆ ಮತ್ತೆ ನಾವು ಶಾಲೆಗೆ ಬರಲಾಗುವುದಿಲ್ಲ ಎಂಬ ವಿಷಯ ನಮ್ಮ ಅರಿವಿಗೆ ಬಂದಿತ್ತು. ಕೆಲವು ಹುಡುಗಿಯರು ಮತ್ತೆ ಫೆಬ್ರವರಿಯಲ್ಲಿ ಶಾಲೆ ಪ್ರಾರಂಭವಾಗುವುದರ ಬಗ್ಗೆ ಆಶಾವಾದ ಹೊಂದಿದ್ದರು. ಆದರೆ ಇತರರು ತಮ್ಮ ತಂದೆ ತಾಯಿ ಶಿಕ್ಷಣದ ಸಲುವಾಗಿ ಸ್ವಾಟ್ಪ್ರ ನಗರದಿಂದ ಬೇರೆ ನಗರಗಳಿಗೆ  ಹೋಗುವ ನಿರ್ಧಾರ ಮಾಡಿರುವುದಾಗಿ ತಿಳಿಸಿದರು.

ಕೊನೆಯ ದಿನವಾದ ಕಾರಣ ಎಂದಿಗಿಂತ ಹೆಚ್ಚು ಸಮಯ ಮೈದಾನದಲ್ಲಿ ಆಟವಾಡಿದೆವು. ಶಾಲೆ ಮತ್ತೆ ಪ್ರಾರಂಭವಾಗುತ್ತದೆಂಬುದು ನನ್ನ ಅಭಿಪ್ರಾಯವಾಗಿತ್ತು. ಆದರೂ ಶಾಲೆಯಿಂದ ಮರಳುವಾಗ ಮತ್ಯಾವತ್ತೂ ಇಲ್ಲಿಗೆ ಬರಲಾರನೆಂಬ ಭಾವದಿಂದ ನಮ್ಮ ಕಟ್ಟಡದ ಕಡೆಗೆ ನೋಡಿದೆ.

ಗುರುವಾರ ಜನವರಿ 15: ಬಂದೂಕಿನ ಮೊರೆತದ ರಾತ್ರಿ:

ರಾತ್ರಿಯಿಡೀ ಬಂದೂಕಿನ ಮೊರೆತದ ಕಾರಣದಿಂದ ನಿದ್ರೆ ಸರಿಯಾಗಿ ಬರಲಿಲ್ಲ. ಮೂರು ಬಾರಿ ಎಚ್ಚರವಾಗಿತ್ತು.ಶಾಲೆಯಿಲ್ಲದ ಕಾರಣ ಹತ್ತರ ಸುಮಾರಿಗೆ ಹಾಸಿಗೆಯಿಂದೆದ್ದೆ. ನಂತರ ಮನೆಗೆ ಬಂದ ಗೆಳತಿಯೊಡನೆ ಹೋಮ್ ವರ್ಕಿನ ಬಗ್ಗೆ ಚರ್ಚಿಸಿದೆ. ಇಂದು ಜನವರಿ 15, ತಾಲೀಬಾನ್ ಆದೇಶ ಜಾರಿಗೆ ಬರಲು ಕೊನೆಯ ದಿನ. ನನ್ನ ಗೆಳತಿ ಇದ್ಯಾವುದರ ಪರಿವೆ ಮಾಡದೇ ಏನೂ ಆಗದವಳ ಹಾಗೆ ಹೋಮ್ ವರ್ಕಿನ ಬಗ್ಗೆ ಮಾತನಾಡುತ್ತಿದ್ದಳು.

ಇಂದು ಬಿಬಿಸಿ [ಉರ್ದು]ಗೆ ಬರೆದ ನನ್ನ ಡೈರಿಯ ಪುಟಗಳನ್ನು ಓದಿದೆ ಮತ್ತು ಪತ್ರಿಕೆಯಲ್ಲಿ ಪ್ರಕಟಿಸಿದೆ.‘ಗುಲ್ ಮಕಾಯಿ’ಎಂಬ ನನ್ನ ಕಾವ್ಯನಾಮವನ್ನು ತಾಯಿ ಮೆಚ್ಚಿದರು. ‘ಅವಳ ಹೆಸರನ್ನು ಗುಲ್ ಮಕಾಯಿ ಎಂದೇ ಬದಲಾಯಿಸಬಹುದಲ್ಲವೇ?’ ಎಂದು ತಂದೆಯ ಬಳಿ ಹೇಳುತ್ತಿದ್ದರು.ನನಗೂ ಗುಲ್ ಮಕಾಯಿ ಎಂಬ ಹೆಸರೇ ಇಷ್ಟ, ಕಾರಣ, ನನ್ನ ನಿಜ ಹೆಸರಿನ ಅರ್ಥ ’ದುಃಖ ಭರಿತಳು’!

ತಂದೆ ಹೇಳುತ್ತಿದ್ದರು, ಕೆಲವು ದಿನಗಳ ಹಿಂದೆ ಡೈರಿಯ ಪ್ರಿಂಟ್ ಔಟನ್ನು ಒಬ್ಬ ಯಾರೋ ತೆಗೆದುಕೊಂಡು ಬಂದು ಎಷ್ಟುಚೆಂದ ಬರೆದಿದ್ದಾರಾಲ್ವ ಎಂದು ಹೊಗಳುತ್ತಿದ್ದರಂತೆ. ಬರೆದಿರುವುದು ನನ್ನ ಮಗಳು ಎಂದು ಹೇಳಿಕೊಳ್ಳಲಾಗದೆ ತಂದೆ ಮುಗುಳ್ನಕ್ಕು ಸುಮ್ಮನಾದರಂತೆ!
******************************************************
ಮೂಲ – ಬಿಬಿಸಿ
ಅನುವಾದ –  ಡಾ ಅಶೋಕ್ ಕೆ ಆರ್

2 ಟಿಪ್ಪಣಿಗಳು Post a comment
  1. satya hanasoge's avatar
    ಆಕ್ಟೋ 13 2012

    ಇದು ಓದುತ್ತಿದ್ದರೆ ಕರುಳು ಚುರುಕ್ ಅನ್ನುತ್ತಿದೆ. ಆ ದೇಶಗಳಲ್ಲಿ ಯಾಕೆ ಹೀಗೆ?

    ಉತ್ತರ

Trackbacks & Pingbacks

  1. ಗುಂಡಿನ ಸದ್ದಿಲ್ಲ; ಭಯವೂ ಇಲ್ಲ: « Avadhi / ಅವಧಿ

Leave a reply to satya hanasoge ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments