ಬಿಜೆಪಿಯ ಅಪಸ್ವರಕ್ಕೆ ‘ಆರ್.ಎಸ್.ಎಸ್’ನದ್ದೇ ಟ್ಯೂನ್
– ರಾಕೇಶ್ ಶೆಟ್ಟಿ
ಅಂದು ಪಾಕಿಸ್ತಾನದ ನೆಲದಲ್ಲಿ ನಿಂತು “ಜಿನ್ನಾ ಜಾತ್ಯಾತೀತರಾಗಿದ್ದರು” ಅನ್ನುವ ಸತ್ಯ ಹೇಳಿದ್ದೆ ಆ ಹಿರಿಯ ಮಾಡಿದ ದೊಡ್ಡ ತಪ್ಪು(!).ಆ ಒಂದು ಮಾತು ಅವರು ಅಲ್ಲಿವರೆಗೂ ದೇಶದ ಮೂಲೆ ಮೂಲೆಗೆ ಹೋಗಿ ಅವರು ಪಕ್ಷಕಟ್ಟಲು ಪಟ್ಟ ಶ್ರಮ,೨ ಸೀಟಿನಿಂದ ಅಧಿಕಾರದ ಚುಕ್ಕಾಣಿ ಹಿಡಿಯುವವರೆಗೂ ಪಕ್ಷ ಸಾಗಿ ಬಂದ ಹಾದಿಯಲ್ಲಿ ಅವರು ವಹಿಸಿದ ಜವಬ್ದಾರಿ ಎಲ್ಲವನ್ನು ಮರೆಸಿಹಾಕಿತ್ತು.ಧುತ್ತನೆ ಅವರ ಮಾತೃ ಸಂಘಟನೆಗೆ ಈ ಹಿರಿಯ ನಾಯಕ ಮತ್ತು ಮುಂದಿನ ಲೋಕಸಭೆ ಚುನಾವಣೆಯ ಪ್ರಧಾನಿ ಅಭ್ಯರ್ಥಿಯಾಗಿದ್ದವರಿಗೆ ವಯಸ್ಸಾಯಿತು ಅನ್ನುವ ಜ್ನಾನೋದಯ ಅರ್ಧ ರಾತಿಯಲ್ಲಿ ಆಗಿಬಿಟ್ಟಿತ್ತಲ್ಲ,ಅಷ್ಟೇ ಸಾಕಿತ್ತು ಅವಮಾನಕಾರಿಯಾಗಿ ಅವರನ್ನು ಪಕ್ಕಕ್ಕೆ ತಳ್ಳಿ,ಅಲ್ಲಿಯವರೆಗೂ ಮಹಾರಾಷ್ಟ್ರ ಬಿಟ್ಟು ಹೊರಗೆ ಹೆಸರೇ ಕೇಳಿರದ ‘ಯುವ ನಾಯಕ(?)’ ನನ್ನು ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.
ಇವತ್ತಿಗೆ ‘ಆ ಹಿರಿಯ’ರನ್ನು ಮರೆತು ಮುಂದೆ ಹೋದ ಆ ಪಕ್ಷದ ಪಾಡು, ಅಹಂಕಾರದಿಂದ ಕೃಷ್ಣ ಪರಮಾತ್ಮನನ್ನು ಬಿಟ್ಟು ಬಿಲ್ವಿದ್ಯೆ ಮರೆತು ನಿಂತ ‘ಅರ್ಜುನ’ನಂತೆಯೇ ಆಗಿದೆ.ಕೂದಲು ಬೆಳೆಯೋ ಜಾಗವೆಲ್ಲ ತಲೆ ಅಂದುಕೊಂಡವರಂತೆ ಆ ಪಕ್ಷದಲ್ಲಿರುವ ಜನರೆಲ್ಲಾ ತಾವೇ ‘ಪ್ರಧಾನಿ ಅಭ್ಯರ್ಥಿ’ಗಳು ಅಂದುಕೊಂಡಿದ್ದಾರೆ.ಅಂದ ಹಾಗೆ,ಆ ಹಿರಿಯರ ಹೆಸರು ಲಾಲ್ ಕೃಷ್ಣ ಅಡ್ವಾಣಿ,ಪಕ್ಷ ಬಿಜೆಪಿ,ಮಾತೃ ಸಂಘಟನೆಯ ಹೆಸರು ‘ಆರ್.ಎಸ್.ಎಸ್’ ಮತ್ತೆ ಆ ಯುವನಾಯಕ(?) ಮೊನ್ನೆ ಮೊನ್ನೆ ತಾನೇ ಎಕರೆಗಟ್ಟಲೆ ರೈತರ ಜಮೀನು ಸ್ವಾಹ ಮಾಡಿದ್ದಾರೆ ಅನ್ನುವ ಆರೋಪ ಹೊತ್ತ ನಿತಿನ್ ಗಡ್ಕರಿ.





