ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 17, 2013

4

ಪಂಜಾಂಬಿನಲ್ಲಿ ಖಲಿಸ್ತಾನಿ ಕರಾಳ ದಿನಗಳು ಮರುಕಳಿಸಲಿವೆಯೇ?

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

OBS ಆ ದಂಪತಿಗಳು  ಮರುದಿನ ಸಂಜೆ ರಜೆಯ ಮೇಲೆ ಮಣಿಲಕ್ಕೆ ಹೊರಡುವವರಿದ್ದರು.ಪ್ರಯಾಣದ ಟಿಕೆಟ್ಟು ಎಲ್ಲವೂ ನಿಗದಿಯಾಗಿತ್ತು.ಅಷ್ಟರಲ್ಲಿ ಟೆಲಿಫೋನ್ ರಿಂಗಣಿಸಿತ್ತು.ಕರೆ ಸ್ವೀಕರಿಸಿದವರಿಗೆ ಮರುದಿನ ತುರ್ತು ಮಾತುಕತೆಗಾಗಿ ದೆಹಲಿಗೆ ಬರುವ ಆದೇಶ ಸಿಕ್ಕಿತು.

ಹೆಂಡತಿಯ ಜೊತೆ ಮೀರತ್ ಬಿಟ್ಟು ದೆಹಲಿಯ ಕಡೆ ಹೊರಟವರು, ಸಂಜೆಯೊಳಗೆ ಬರುವೆ ಮಣಿಲಕ್ಕೆ ಹೊರಟು ಬಿಡೋಣ ಅಂತೇಳಿ, ಚಾಂದಿಮಂದಿರದ II ಕಾರ್ಪ್ಸ್ ಅರ್ಮಿ ಹೆಡ್ ಕ್ವಾರ್ಟರ್ ತಲುಪಿಕೊಂಡರು.ತಲುಪಿಕೊಂಡವರೇ ಆಪರೇಷನ್ ರೂಮಿನೊಳ ಹೊಕ್ಕರು.ಅಲ್ಲಿ ಅಮೃತಸರದ ಗೋಲ್ಡನ್ ಟೆಂಪಲ್ ನಕ್ಷೆಗಳನ್ನು ಹರವಿ ಕುಳಿತಿದ್ದರು ಸೈನ್ಯಾಧಿಕಾರಿಗಳು.ಒಳ ಬಂದವರಿಗೆ ಏನೊಂದು ಅರ್ಥವಾಗುವ ಮೊದಲೇ “ನಿನಗೆ ಅಮೃತಸರದ ಪರಿಸ್ಥಿತಿ ಕೈ ತಪ್ಪುತ್ತಿರುವುದು ಗೊತ್ತಿದೆಯಲ್ಲ?,ಆದಷ್ಟು ಬೇಗ ನೀನು ಅಮೃತಸರ ತಲುಪಿಕೊಂಡು ಸ್ವರ್ಣಮಂದಿರದೊಳಗೆ ಸೇರಿಕೊಂಡಿರುವ ಖಲಿಸ್ತಾನಿ ಉಗ್ರಗಾಮಿಗಳನ್ನ ಹೊರಹಾಕಬೇಕು” ಅಂತ ಆದೇಶಿಸಲಾಯಿತು.ಹಾಗೆ,ಇದ್ದಕ್ಕಿದ್ದಂತೆ ಸಿಕ್ಕ ಅಪ್ಪಣೆಯನ್ನು ಯಶಸ್ವಿಯಾಗಿ ನಿರ್ವಹಿಸಿ,ಪಂಜಾಬ್ ರಾಜ್ಯ ಭಾರತದಿಂದ ಸಿಡಿದು “ಖಲಿಸ್ತಾನ” ಆಗುವುದನ್ನು ತಪ್ಪಿಸಿದ್ದು “ಆಪರೇಷನ್ ಬ್ಲೂ-ಸ್ಟಾರ್” ಅನ್ನುವ ಮಿಲಿಟರಿ ಕಾರ್ಯಾಚರಣೆ ಮತ್ತದರ ನೇತೃತ್ವ ವಹಿಸಿದ್ದ ಆ ಯೋಧನ ಹೆಸರು ಜನರಲ್.ಕೆ.ಎಸ್ ಬ್ರಾರ್.

ಆವತ್ತು ಅಮೃತಸರಕ್ಕೆ ಬಂದಿಳಿದ ಬ್ರಾರ್ ಅವರಿಗೆ ಸರಿಯಾಗಿ ಸ್ವರ್ಣಮಂದಿರದ ನಕ್ಷೆಯೂ ಗೊತ್ತಿರಲಿಲ್ಲ.ತಕ್ಷಣ ಅವರು ಅಲ್ಲಿನ ಸರ್ಕಾರಿ ಅಧಿಕಾರಿಗಳು ಮತ್ತು ಪೋಲಿಸರನ್ನು ಭೇಟಿಯಾಗಿ ಹೆಚ್ಚಿನ ಮಾಹಿತಿ ಕೇಳಿದರು.ಊಹೂಂ! ಅವರಲ್ಲಿ ಯಾವ ಮಾಹಿತಿಯೂ ಇರಲಿಲ್ಲ.ತಿಂಗಳುಗಟ್ಟಲೆ ಕೆಲಸವಿಲ್ಲದೆ ಕುಳಿತಿದ್ದ ಅವರಿಂದ ಏನು ನಿರೀಕ್ಷಿಸುವಂತೆಯೂ ಇರಲಿಲ್ಲ.ಭಿಂದ್ರನ್ ವಾಲೆಯ ಕಪಿಮುಷ್ಟಿಗೆ ಅದಾಗಲೇ ಸ್ವರ್ಣಮಂದಿರ ಸಿಕ್ಕಿಯಾಗಿತ್ತು.ಒಳಗೇನು ನಡೆಯುತ್ತಿದೆ ಯಾರಿಗೂ ಗೊತ್ತಿರಲಿಲ್ಲ.ಭಿಂದ್ರನ್ ವಾಲೆಯ ಖ್ಯಾತಿ ಆಗ ಪಂಜಾಬಿನಲ್ಲಿ ಉತ್ತುಂಗಕ್ಕೇರಿದ ಸಮಯ.ಜನ ಅವನನ್ನು ದೈವತ್ವಕ್ಕೇರಿಸುವ ಮಟ್ಟಕ್ಕೇ ಅವನ ಅಮಲೇರಿತ್ತು.

ಕಾರ್ಯಾಚರಣೆಯ ರೂಪು-ರೇಷೆಯ ಭಾಗವಾಗಿ ಸ್ವರ್ಣಮಂದಿರದ ಸುತ್ತ ಒಂದು ಸುತ್ತು ಹಾಕುತ್ತಿದ್ದ ಜನರಲ್ ಬ್ರಾರ್ ಅವರನ್ನು ನೋಡಿ ಮಂದಿರದ ಒಳಗಿನಿಂದ “ಈತ ಯಾರು ಅನ್ನುವುದು ನನಗೆ ಗೊತ್ತಿದೆ.ಅವನು ಜನರಲ್ ಬ್ರಾರ್.ನಾವಿಬ್ಬರೂ ೭೧ರ ಬಾಂಗ್ಲಾ ಯುದ್ದದಲ್ಲಿ ಪಾಕಿಗಳಿಗೆ ಮಣ್ಣು ಮುಕ್ಕಿಸಿದ್ದವರು.ಇವನು ಸಾಧರಣ ಪೆಟ್ಟಿಗೆ ಬಗ್ಗಲಾರ,ನಮ್ಮ ಮುಂದೆ ಘೋರ ಸವಾಲೊಡ್ಡಲಿದ್ದಾನೆ ಈತ” ಅಂದಿದ್ದು,ಒಂದು ಕಾಲದ ಭಾರತೀಯ ಸೈನ್ಯದ ಖಡಕ್ ಯೋಧನಾಗಿದ್ದು ಕಡೆಗೆ ಭಿಂದ್ರನ್ ವಾಲೆಯ ಉಗ್ರಗಾಮಿ ತಂಡ ಸೇರಿಕೊಂಡಿದ್ದ ’ಜನರಲ್ ಶಾ ಬೇಗ್ ಸಿಂಗ್’.

೧೯೭೧ ರ ಬಾಂಗ್ಲಾ ಯುದ್ದದಲ್ಲಿ “ಮುಕ್ತಿ ಬಾಹಿನಿ”ಗೆ ತರಬೇತಿ ನೀಡಿ ಅವರ ಜೊತೆ ಸೇರಿಕೊಂಡು ಪಾಕಿಗಳನ್ನು ಬಗ್ಗು ಬಡಿದ ದೊಡ್ಡ ಪಾಲು ಈ ಜನರಲ್ ಶಾ ಬೇಗ್ ಸಿಂಗ್ನದ್ದು.ಬಾಂಗ್ಲಾ ಯುದ್ದದಲ್ಲಿ ಆತನ ಪರಾಕ್ರಮಕ್ಕೆ ಮೆಚ್ಚಿ ಭಾರತ ಸರ್ಕಾರ ಪರಮ ವಿಶಿಷ್ಟ ಸೇವಾ ಮತ್ತು ಅತಿ ವಿಶಿಷ್ಟ ಸೇವಾ ಪದಕಗಳನ್ನು ನೀಡಿ ಗೌರವಿಸಿತ್ತು.ಇಂತ ಹಿನ್ನೆಲೆಯ ಯೋಧನೊಬ್ಬ ಹೋಗಿ ಭಿಂದ್ರನ್ ವಾಲೆಯಂತ ಉಗ್ರಗಾಮಿಯೊಂದಿಗೆ ಸೇರಿಕೊಂಡ ಬಗ್ಗೆ ಬೇರೆ ಬೇರೆಯದೇ ಕತೆಗಳಿವೆ.ಅದರಲ್ಲಿ ಮುಖ್ಯವಾದದ್ದು ಜೆಪಿ ಚಳುವಳಿಯಲ್ಲಿ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿದು ಜನಪರ ಚಳುವಳಿಯನ್ನು ದಮನಿಸಲು ಒಪ್ಪದೇ  ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ ನಿರಂತರ ಅವಮಾನಿತನಾಗಿ ಸೈನ್ಯವನ್ನು ತೊರೆದಿದ್ದು.ಆ ನಂತರ್ ಶಾ ಬೇಗ್ ಭಿಂದ್ರನ್ ವಾಲೆಯ ತೆಕ್ಕೆಗೆ ಬಂದಿದ್ದ.ಸ್ವರ್ಣಮಂದಿರವನ್ನು ಮುಕ್ತಿಗೊಳಿಸುವಲ್ಲಿ ನಿಜವಾದ ತಡೆಗೋಡೆಯಾಗಿ ನಿಂತವನೇ ಈತ.ಭಿಂದ್ರನ್ ವಾಲೆಯ ಉಪಸ್ಥಿತಿ ಖಲಿಸ್ತಾನಿ ಉಗ್ರರಿಗೆ ನೈತಿಕ ಸ್ಪೂರ್ತಿ ತುಂಬುವಂತಿದ್ದರೆ, ಶಾ ಬೇಗ್ ಉಪಸ್ಥಿತಿ ಮಿಲಿಟರಿ ರೂಪುರೇಷೆಗಳಿಂದಾಗಿ ಮಹತ್ವದ್ದಾಗಿತ್ತು.ಆ ಕಾರ್ಯಾಚರಣೆಯಲ್ಲಿ ಭಾರತೀಯ ಯೋಧರು ಹೆಚ್ಚಿನ ಸಂಖ್ಯೆಯಲ್ಲಿ ಹುತಾತ್ಮರಾಗಲು ಕಾರಣನಾಗಿದ್ದು ಈ ಶಾ ಬೇಗ್ ಸಿಂಗ್ ಅನ್ನ್ಉವ ಒಂದು ಕಾಲದ ಯೋಧನ ಸಲಹೆ ಸೂಚನೆಗಳು…!

ಒಳಗೆ ಪುಡಿ ಸಂಖ್ಯೆಯಲ್ಲಿ ಖಲಿಸ್ತಾನಿ ಉಗ್ರರಿರಬಹುದು ಅನ್ನುವ ಸಂದೇಶದೊಂದಿಗೆ ಒಳಹೊಕ್ಕಿದ ನಮ್ಮ ಸೈನಿಕರು,ಶಾ ಬೇಗ್ ಸಿಂಗ್ನ ನುರಿತ ಮಿಲಿಟರಿ ಪ್ಲಾನಿಂಗ್ಗೆ ಬಲಿಯಾಗಬೇಕಾಯಿತು.ಕೆಟ್ಟದರ ವಿರುದ್ಧ ಅಂತಿಮ ಗೆಲುವು ಒಳ್ಳೆಯದ್ದೇ ಅನ್ನುವಂತೆ ಅಪಾರ ಪ್ರಮಾಣದ ಪ್ರಾಣ-ಆಸ್ತಿ ಹಾನಿಯ ನಂತರ ಭಿಂದ್ರನ್ ವಾಲೆ ಹೆಣವಾಗಿದ್ದ.ಸ್ವರ್ಣ ಮಂದಿರ ಕೈವಶವಾಗಿತ್ತು.ಹಾಗೆ, ಭಾರತ ಮತ್ತೊಮ್ಮೆ ಭಾಗವಾಗುವುದು ತಪ್ಪಿತ್ತು.ಅದರ ಶ್ರೇಯಸ್ಸು ಗಟ್ಟಿಗಿತ್ತಿ ಇಂದಿರಾ ಗಾಂಧಿಯವರಿಗೂ ಸಲ್ಲಬೇಕು. ಭಾರತದಂತ ದೇಶದಲ್ಲಿ ದೇವಾಲಯದೊಳಗೆ ಸೈನ್ಯವನ್ನು ನುಗ್ಗಿಸುವ ಧೈರ್ಯ ತೋರಿದ್ದಕ್ಕಾಗಿ ಆಕೆ ಪ್ರಾಣವನ್ನೇ ತೆತ್ತರು.

ಭಿಂದ್ರನ್ ವಾಲೆ ಹೆಣವಾಗುವುದರೊಂದಿಗೆ ಖಲಿಸ್ತಾನ ಚಳುವಳಿಯೇನು ಮುಗಿದಿರಲಿಲ್ಲ.’ಗ್ರಂಥ ಸಾಹೀಬ್’ನ ಮುಂದೆ ನಿಂತ ಬಬ್ಬರ್ ಖಾಲ್ಸಾ,ಖಲಿಸ್ತಾನ್ ಕಮಾಂಡೋ ಫೋರ್ಸ್ ಮತ್ತು ಭಿಂದ್ರನ್ ವಾಲೆಯ ಸಂಬಂಧಿಕರು ‘ಆಪರೇಷನ್ ಬ್ಲೂ-ಸ್ಟಾರ್’ ಕಾರಣಕರ್ತರಾದ ೫ ಜನರ ಮೇಲೆ ಪ್ರತೀಕಾರ ತೆಗೆದುಕೊಳ್ಳುವ ಪ್ರಮಾಣ ಮಾಡಿದ್ದರು.ಇಂದಿರಾ ಗಾಂಧಿ,ಜನರಲ್ ಎ.ಎಸ್ ವೈದ್ಯ(ಸೈನ್ಯದ ಮುಖ್ಯಸ್ಥ),ಜನರಲ್ ಕೆ.ಸುಂದರ್ಜಿ(ಆರ್ಮಿ ಕಮಾಂಡರ್),ಜನರಲ್ ದಯಾಳ್ (ಜ.ಸುಂದರ್ಜಿಯವರ ಕೋ-ಕಮಾಂಡರ್) ಮತ್ತು ಜನರಲ್ ಬ್ರಾರ್ (ಆಪರೇಷನ್ ಬ್ಲೂ-ಸ್ಟಾರ್ ನೇತೃತ್ವ ವಹಿಸಿದ್ದವರು).ಈ ೫ ಜನರಲ್ಲಿ ಸುಂದರ್ಜಿ ಮತ್ತು ದಯಾಳ್ ಸ್ವಾಭಾವಿಕ ಸಾವನ್ನಪ್ಪಿದರೆ,ಇಂದಿರಾ ಗಾಂಧಿಯನ್ನು ಅವರ ಭದ್ರತಾ ಸಿಬ್ಬಂದಿಯೇ ಹತ್ಯೆಗೈದರು.ಜನರಲ್ ವೈದ್ಯರನ್ನು ಕಾರಿನೊಳಗೆ ಗುಂಡಿಕ್ಕಿ ಹತ್ಯೆಗೈಯ್ಯಲಾಯಿತು.ಉಳಿದವರು ಜನರಲ್ ಬ್ರಾರ್ ಒಬ್ಬರೇ…! ೭೮ರ ಹರೆಯದ ಹಿರಿಯ ಜೀವ ಬ್ರಾರ್ ಅವರ ಹತ್ಯೆ ಯತ್ನವೂ ಕಳೆದ ವರ್ಷ ಲಂಡನ್ ನಲ್ಲಿ ನಡೆದಿತ್ತು.ಅದೃಷ್ಟವಶಾತ್ ಅವರು ಅಪಾಯದಿಂದ ಪಾರಾದರು.ಆದರೆ, ಅವರಿಗೆ ತಾನು ಪ್ರಾಣ ತ್ಯಾಗ ಮಾಡಿದ್ದರೆ ಸರಿ ಅನ್ನಿಸಿತ್ತಾ? ಯಾಕೆಂದರೆ…

ಅಂದು ಯಾವ ಖಲಿಸ್ತಾನಿ ಉಗ್ರಗಾಮಿಗಳ ವಿರುದ್ಧ ಈ ಯೋಧರೆಲ್ಲ ಹೋರಾಡಿದ್ದರೋ ಇವತ್ತಿಗೆ ಅದೇ ಉಗ್ರರರನ್ನು “ಹುತಾತ್ಮ”ರ ಪಟ್ಟಕ್ಕೇರಿಸಲಾಗುತ್ತಿದೆ…! ಇಂದಿರಾ,ವೈದ್ಯ ಹತ್ಯೆ ಮಾಡಿದವರ ಸಂಬಂಧಿಕರನ್ನು ಅದೇ ಸ್ವರ್ಣ ಮಂದಿರಕ್ಕೆ ಕರೆದು ಸನ್ಮಾನ ಮಾಡುತ್ತದೆ ಶಿರೋಮಣಿ ಗುರುದ್ವಾರ ಪ್ರಬಂಧಕ ಕಮಿಟಿ (SGPC).ಆಪರೇಷನ್ ಬ್ಲೂ-ಸ್ಟಾರಿನಲ್ಲಿ ಹತ್ಯೆಯಾದ ಉಗ್ರರ ನೆನಪಿಗಾಗಿ ಅಲ್ಲೊಂದು ಹುತಾತ್ಮರ ಸ್ಮಾರಕ ನಿರ್ಮಾಣವೂ ಆಗಲಿದೆ…! ಪಂಜಾಬಿನ ಮುಖ್ಯಮಂತಿಯಾಗಿದ್ದ ಬಿಯಾಂತ್ ಸಿಂಗ್ ಅವರನ್ನು ಹತ್ಯೆಗೈದಿದ್ದಕ್ಕಾಗಿ ಮರಣದಂಡನೆಗೆ ಗುರಿಯಾಗಿರುವ ಬಲವಂತ ಸಿಂಗ್ ರಾಜೋನನಿಗೆ “ಜೀವಂತ ಹುತಾತ್ಮ” ಪದವಿ ನೀಡಲಾಗುತ್ತದೆ.ಮತ್ತು ಅವನ ಮರಣದಂಡನೆ ಶಿಕ್ಷೆಯನ್ನು ರದ್ದು ಮಾಡುವ ಬೇಡಿಕೆಯಿಡಲಾಗುತ್ತದೆ.ಈ ಎಲ್ಲ ಅತಿರೇಕಗಳ ಹಿಂದೆ ನಿಂತಿರುವುದು ಆಡಳಿತಾರೂಢ ಶಿರೋಮಣಿ ಅಕಾಲಿ ದಳ (SAD).SGPC ಯ ನಿರ್ಧಾರಗಳ ಹಿಂದೆ SAD ಕೈ ಇರುವುದು ಗುಟ್ಟೇನಲ್ಲ.

ಈ ಅಪಸವ್ಯಗಳ ಪಟ್ಟಿಗೆ ಹೊಸ ಸೇರ್ಪಡೆ ದೆಹಲಿಯಲ್ಲಿ ಯೂತ್ ಕಾಂಗ್ರೆಸ್ಸ್ ಕಛೇರಿ ಎದುರು ಬಾಂಬ್ ಸ್ಪೋಟಿಸಿ ೯ ಜನರ ಪ್ರಾಣ ತೆಗೆದುಕೊಂಡ ’ದೇವಿಂದರ್ ಪಾಲ್ ಸಿಂಗ್ ಭುಲ್ಲರ್’. ಕಳೆದ ಏಪ್ರಿಲ್ ೧೨ರ ಶುಕ್ರವಾರ ಸುಪ್ರೀಂ ಕೋರ್ಟ್ ಈತನಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿ ಆದೇಶ ಹೊರಡಿಸುತಿದ್ದಂತೆ ಮತ್ತೊಮ್ಮೆ ಪಂಜಾಬ್ ಭುಸುಗುಡುತ್ತಿದೆ.SGPC ಭುಲ್ಲರ್ ಕ್ಷಮಾದಾನಕ್ಕೆ ಆಗ್ರಹಿಸುತ್ತಿದೆ.ಲಜ್ಜೆಗೆಟ್ಟ ಮುಖ್ಯಮಂತ್ರಿ ಪ್ರಕಾಶ್ ಬಾದಲ್ ಅವರು ರಾಜೋನ,ಭುಲ್ಲರ್ ಇಬ್ಬರನ್ನೂ ಗಲ್ಲಿಗೇರಿಸಬಾರದು, ಹಾಗೇನಾದರೂ ಮಾಡಿದರೆ ರಾಜ್ಯದಲ್ಲಿ ಕಾನೂನು ಪರಿಸ್ಥಿತಿ ಹದಗೆಡುತ್ತದೆ ಅನ್ನುತ್ತಿದ್ದಾರೆ.ಅಫ್ಜಲ್,ಕಸಬ್ ವಿಷಯದಲ್ಲಿ ದೊಡ್ಡ ಮಟ್ಟದಲ್ಲಿ ದನಿಯೆತ್ತಿದ್ದ ಬಿಜೆಪಿ ಮತ್ತಿತ್ತರ ಸಂಘಟನೆಗಳು ಈ ಇಬ್ಬರ ವಿಷಯದಲ್ಲಿ ತಣ್ಣಗಿರುವುದು ಇಬ್ಬಗೆ ನೀತಿಯಲ್ಲವೇ? ಈ ಇಬ್ಬರನ್ನು ಗಲ್ಲಿಗೇರಿಸಿದಿರಲು ಕಾರಣ ನೀಡುವುದು ’ಆಪರೇಷನ್ ಬ್ಲೂ-ಸ್ಟಾರ್’ನಲ್ಲಿ ಹುತಾತ್ಮರಾದ ನಮ್ಮ ವೀರ ಯೋಧರಿಗೆ ಮಾಡುವ ಅವಮಾನವಲ್ಲವೇನು? ಪುಡಿ ವೋಟಿಗಾಗಿ ಮತ್ತೊಮ್ಮೆ ದೇಶ ವಿಭಜನೆಯಾಗಬೇಕಿದೆಯೇ?

ಪ್ರಶಾಂತವಾಗಿದ್ದ ಪಂಜಾಂಬ್ ರಾಜ್ಯದಲ್ಲಿ ಮತ್ತೊಮ್ಮೆ ಖಲಿಸ್ತಾನಿ ಕರಾಳ ದಿನಗಳು ಮರುಕಳಿಸಲಿವೆಯೇ? ಹೌದು ಎನ್ನಲು ಸಾಕಷ್ಟು ಕಾರಣಗಳಿವೆ.ಶಿರೋಮಣಿ ಅಕಾಲಿ ದಳ ಜನರ ಭಾವನೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದೇ ಇದರ ಮೊದಲ ಹೆಜ್ಜೆ.ಭಾರತದಲ್ಲಿ ನಾಮಾವಶೇಷವಾಗಿರುವ ಖಲಿಸ್ತಾನ ಚಳುವಳಿ ಯು.ಎಸ್,ಕೆನಡಾ,ಬ್ರಿಟನ್ ಗಳಲ್ಲಿ ಇನ್ನು ಜೀವಂತ ಉಸಿರಾಡುತ್ತಿದೆ.ಖುದ್ದು ಬೇಹುಗಾರಿಕಾ ವರದಿಗಳೇ ಇತ್ತೀಚಿನ ದಿನಗಳಲ್ಲಿ ಖಲಿಸ್ತಾನ್ ಚಳುವಳಿ ತೀವ್ರತೆ ಪಡೆಯುತ್ತಿದೆ ಅನ್ನುತ್ತಿವೆ.ಖಲಿಸ್ತಾನ್ ಚಳುವಳಿಯ ಹಿಂದೆ ಪಾಕಿಸ್ತಾನದ ಐ.ಎಸ್.ಐ ಇರುವುದು ದೇಶದ ಭದ್ರತೆಯ ದೃಷ್ಟಿಯಿಂದ ಆತಂಕಕಾರಿಯಲ್ಲವೇನು? ೩ನೇ ತಲೆಮಾರಿನ ಸಿಖ್ಖರಲ್ಲಿ ಭಾರತ ವಿರೋಧಿ ಭಾವನೆ ತುಂಬಿ ಮತ್ತೊಮ್ಮೆ ಭಾರತವನ್ನು ವಿಭಜನೆಯ ಅಂಚಿಗೆ ತಂದು ನಿಲ್ಲಿಸುವ ಮೊದಲು ಹೆಚ್ಚೆತ್ತುಕೊಳ್ಳಬೇಕಿದೆ.ಅಕಾಲಿ ದಳದ ಜೊತೆ ಸರ್ಕಾರ ನಡೆಸುತ್ತಿರುವ ಮಿತ್ರಪಕ್ಷ ಬಿಜೆಪಿಗೂ ಇದು ಎಷ್ಟು ಬೇಗ ಅರ್ಥವಾಗುತ್ತಿಲ್ಲ ಅಂತೇನು ಅಲ್ಲ.ಆದರೆ,ಯಾಕೋ ಖಲಿಸ್ತಾನಿ ವಿಷಯದಲ್ಲಿ ಮೃದು ಧೋರಣೆ ತೋರಲಾಗುತ್ತಿದೆಯೇ ಅನ್ನುವ ಅನುಮಾನ ಕಾಡುತ್ತಿದೆ.

ಈ ವಿಷಯದಲ್ಲಿ ಸಿಖ್ಖರ ಭಾವನೆಗಳ ಬಗ್ಗೆ ಸಾಫ್ಟ್ ಕಾರ್ನರ್ ಇಟ್ಟುಕೊಂಡಿರುವವರು ಅರ್ಥ ಮಾಡಿಕೊಳ್ಳಬೇಕಾಗಿರುವುದು, ಪಂಜಾಬಿನ ಕೈಮೀರುತಿದ್ದ ಪರಿಸ್ಥಿತಿಯನ್ನು,ಖಲಿಸ್ತಾನಿ ಚಳುವಳಿಯನ್ನು ತಡೆಯುವಲ್ಲಿ ಹಲವಾರು ಸಿಖ್ಖ ಯೋಧರೇ ಮುಂಚೂಣಿಯಲ್ಲಿ ನಿಂತು ಪ್ರಾಣ ತೆತ್ತಿದ್ದಾರೆ.ಹಲವರು ಅನ್ನುವುದಕ್ಕಿಂತ ಬಹುಷಃ ಬಹುತೇಕ ಅಲ್ಲಿನ ಎಲ್ಲಾ ಭದ್ರತೆಯ ಹೊಣೆಗಾರಿಕೆ ಸಿಖ್ಖ್ ಅಧಿಕಾರಿಗಳ ಮೇಲೆ ಬಿಡಲಾಗಿತ್ತು ಅನ್ನಬೇಕು.ಅವರು,ಈ ದೇಶ ತಮ್ಮ ಮೇಲಿಟ್ಟ ನಂಬಿಕೆಯನ್ನು ಬಲಿದಾನಗಳ ಮೂಲಕ ಸಾಬೀತು ಮಾಡಿ ಹೋಗಿದ್ದಾರೆ.ಈಗ ಸಿಖ್ಖ್ ಭಾವನೆಯ ಹೆಸರಿನಲ್ಲಿ ಖಲಿಸ್ತಾನಿ ಉಗ್ರರೆಡೆಗೆ ಮೃದು ಧೋರಣೆ ತೋರುತ್ತಿರುವ ಅಕಾಲಿ ದಳ ಮತ್ತದಕ್ಕೆ ಮೃದುವಾಗಿ ವಿರೋಧ ವ್ಯಕ್ತಪಡಿಸುತ್ತಿರುವವರೆಲ್ಲಾ ಸೇರಿಖೊಂದು ಹುತಾತ್ಮ ಯೋಧರಿಗೆ ಅವಮಾನ ಮಾಡುತಿದ್ದಾರೆ.ಮತ್ತಿವೆಲ್ಲಕ್ಕಿಂತ ಹೆಚ್ಚಾಗಿ ಖಲಿಸ್ತಾನಿಗಳ ಹಿಂದೆ ಪಾಕಿಸ್ತಾನ ಐ.ಎಸ್.ಐ ನಿಂತಿದೆ ಅನ್ನುವುದನ್ನು ಮರೆಯಬಾರದು…!

ಚಿತ್ರ ಕೃಪೆ : http://www.sikhlionz.com

4 ಟಿಪ್ಪಣಿಗಳು Post a comment
  1. ಬಸವಯ್ಯ's avatar
    ಬಸವಯ್ಯ
    ಏಪ್ರಿಲ್ 17 2013

    ಖಾಲಿಸ್ತಾನ ಚಳವಳಿಯ ಚರಿತ್ರೆ ಓದಿದರೆ, ಆಗ ಪಂಜಾಬನಲ್ಲಿ ಅಶಾಂತಿ ಯಾವ ಮಟ್ಟದಲ್ಲಿತ್ತು ಎಂದು ತಿಳಿಯುತ್ತದೆ. ಮುಖ್ಯಮಂತ್ರಿಯಾಗಿದ್ದ ಬಿಯಾಂತಸಿಂಗ್ ಪೂರ್ಣ ಸಹಕಾರದಿಂದ, ಡಿ.ಜಿ.ಪಿ ಯಾಗಿದ್ದ ಕೆ.ಪಿ.ಎಸ್ ಗಿಲ್ ಮತ್ತು ಸಹೋದ್ಯೋಗಿಗಳು ಎನಕೌಂಟರಗಳಲ್ಲಿ ಉಗ್ರರನ್ನು ಮುಗಿಸಿರದಿದ್ದರೆ ಪಂಜಾಬಿನಲ್ಲಿ ಶಾಂತಿ ಎಂಬುದು ಕನಸಾಗಿರುತ್ತಿತ್ತು. ತದ ನಂತರದ ದಿನಗಳಲ್ಲಿ ಮಾನವ ಹಕ್ಕು ಆಯೋಗ ಈ ವಿಷಯದಲ್ಲಿ ಕೆಲವು ಪೊಲೀಸ ಅಧಿಕಾರಿಗಳನ್ನು ಇನ್ನಿಲ್ಲದಂತೆ ಕಾಡಿತು ಮತ್ತು ಒಬ್ಬ ವೀರ ಅಧಿಕಾರಿ ಅವಮಾನ ತಾಳಲಾರದೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡರು. ಈ ಮಾನವ ಹಕ್ಕು ಆಯೋಗ, ಸರ್ಕಾರೇತರ ಸಂಸ್ಥೆ ನಡೆಸುವ ಕೆಲವು ಪರಾವಲಂಬಿ ಮಾನವಕ್ರಿಮಿಗಳು, ಹೇಳುವುದು ಒಂದು-ಮಾಡುವುದು ಇನ್ನೊಂದು ಜಾತಿಯ ಜಾತ್ಯಾತೀತ ವ್ಯಾಧಿಗಳು .. ಇವರೆಲ್ಲ ಈ ದೇಶಕ್ಕೆ ತಾಗಿದ ಪ್ರಾರಬ್ಧಗಳು.

    “ಅಕಾಲಿ ದಳದ ಜೊತೆ ಸರ್ಕಾರ ನಡೆಸುತ್ತಿರುವ ಮಿತ್ರಪಕ್ಷ ಬಿಜೆಪಿಗೂ ಇದು ಎಷ್ಟು ಬೇಗ ಅರ್ಥವಾಗುತ್ತಿಲ್ಲ ಅಂತೇನು ಅಲ್ಲ.ಆದರೆ,ಯಾಕೋ ಖಲಿಸ್ತಾನಿ ವಿಷಯದಲ್ಲಿ ಮೃದು ಧೋರಣೆ ತೋರಲಾಗುತ್ತಿದೆಯೇ ಅನ್ನುವ ಅನುಮಾನ ಕಾಡುತ್ತಿದೆ.”

    ಎಲ್ಲ ಅರ್ಥ ಆಗುತ್ತದೆ..ಆದರೆ ಮತ್ತದೇ ದರಿದ್ರ ರಾಜಕೀಯ. ಶಿರೋಮಣಿ ಅಕಾಲಿ ದಳವಿಲ್ಲದೆ ಬಿಜೆಪಿ ಪಕ್ಷದ ಆಟ ಪಂಜಾಬನಲ್ಲಿ ನಡೆಯುವುದಿಲ್ಲ..ಅದಕ್ಕೆ ಬಾಯಿಗೆ ಬೆಣೆ ಬಿದ್ದಿದೆ, ಕಣ್ಣು ಮಂಜಾಗಿದೆ!. ಪ್ರಕಾಶ ಸಿಂಗ ಮತ್ತು ಆತನ ಮಗನಿಗೆ ಪಂಜಾಬ ಜನರೇ ಬುದ್ದಿ ಕಲಿಸಬೇಕು.

    ಉತ್ತರ
  2. Anand's avatar
    ಏಪ್ರಿಲ್ 17 2013

    ರಾಕೇಶ್,

    >> ಆ ನವದಂಪತಿಗಳು ಮಧುಚಂದ್ರಕ್ಕಾಗಿ ಮರುದಿನ ಸಂಜೆ ಮಣಿಲಕ್ಕೆ ಹೊರಡುವವರಿದ್ದರು.ಪ್ರಯಾಣದ ಟಿಕೆಟ್ಟು ಎಲ್ಲವೂ ನಿಗದಿಯಾಗಿತ್ತು.
    >> ಪಂಜಾಬ್ ರಾಜ್ಯ ಭಾರತದಿಂದ ಸಿಡಿದು “ಖಲಿಸ್ತಾನ” ಆಗುವುದನ್ನು ತಪ್ಪಿಸಿದ್ದು “ಆಪರೇಷನ್ ಬ್ಲೂ-ಸ್ಟಾರ್” ಅನ್ನುವ ಮಿಲಿಟರಿ ಕಾರ್ಯಾಚರಣೆ ಮತ್ತದರ ನೇತೃತ್ವ ವಹಿಸಿದ್ದ ಆ ಯೋಧನ ಹೆಸರು ಜನರಲ್.ಕೆ.ಎಸ್ ಬ್ರಾರ್.
    >> “ಈತ ಯಾರು ಅನ್ನುವುದು ನನಗೆ ಗೊತ್ತಿದೆ.ಅವನು ಜನರಲ್ ಬ್ರಾರ್.ನಾವಿಬ್ಬರೂ ೭೧ರ ಬಾಂಗ್ಲಾ ಯುದ್ದದಲ್ಲಿ ಪಾಕಿಗಳಿಗೆ ಮಣ್ಣು ಮುಕ್ಕಿಸಿದ್ದವರು.ಇವನು ಸಾಧರಣ ಪೆಟ್ಟಿಗೆ ಬಗ್ಗಲಾರ,ನಮ್ಮ ಮುಂದೆ ಘೋರ ಸವಾಲೊಡ್ಡಲಿದ್ದಾನೆ ಈತ”

    ಅಲ್ಲಾರೀ… ೧೯೭೧ರ ಯುದ್ಧದಲ್ಲಿ ಹೋರಾಡಿದ ಜನರಲ್ ಬ್ರಾರ್ ಹುಟ್ಟಿದ್ದು ೧೯೩೪ರಲ್ಲಿ… ಆಪರೇಶನ್ ಬ್ಲೂಸ್ಟಾರ್ ನಡೆದದ್ದು ೧೯೮೪ರಲ್ಲಿ. ಅಂದರೆ ಆಗ ಜನರಲ್ ಬ್ರಾರ್‌ಗೆ ಬರೋಬ್ಬರಿ ೫೦ ವರ್ಷ ವಯಸ್ಸು. ನವದಂಪತಿಗಳು – ಮಧುಚಂದ್ರ ಅಂತೆಲ್ಲಾ ಬರೆದಿರೋದು ಸರಿಯಾಗಿದೆಯಾ? ತಪ್ಪಿದ್ದರೆ ತಿದ್ದಿಕೊಳ್ಳಿ.

    ಉತ್ತರ
    • ಬಸವಯ್ಯ's avatar
      ಬಸವಯ್ಯ
      ಏಪ್ರಿಲ್ 17 2013

      ಭೂತಗನ್ನಡಿ!! :).
      ನವದಂಪತಿ – ತಪ್ಪು
      ಮಧುಚಂದ್ರ – ಅನುಮಾನಾಸ್ಪದ, ಇದ್ದಿರಬಹುದು. ಇದರಲ್ಲಿ ೧-೨-೩ ಅಂತೆಲ್ಲ ಇರ್ತಾವೆ :).
      ನಿಜ ಸಂಗತಿ-ಜನರಲ್ ಬ್ರಾರ್ ದಂಪತಿಗಳು ಮನಿಲಾಕ್ಕೆ ಹೊರಟದ್ದು ವಿಹಾರಾರ್ಥ. ಒಂದು ತಿಂಗಳ ಮಟ್ಟಿಗೆ.

      ಉತ್ತರ
    • ರಾಕೇಶ್ ಶೆಟ್ಟಿ's avatar
      ಏಪ್ರಿಲ್ 17 2013

      ಆನಂದ್,

      ನೀವು ಹೇಳಿದ್ದು ನಿಜ.ತಪ್ಪು ನನ್ನದೆ.ಸರಿಪಡಿಸುವೆ.
      ಧನ್ಯವಾದ.ಇನ್ಮುಂದೆ ಈ ಲೆಕ್ಕಾಚಾರಗಳಲ್ಲಿ ಹೆಚ್ಚರವಹಿಸಬೇಕು ಒಳ್ಳೆ ಗಮನಿಸುವಿಕೆ 🙂

      ಉತ್ತರ

Leave a reply to ರಾಕೇಶ್ ಶೆಟ್ಟಿ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments