“ಡುಂಢಿ” ಅನ್ನುವ ಕೃತಿ ಮತ್ತು “ಸೆಕ್ಯುಲರಿಸಂ” ಅನ್ನುವ ಅವಕಾಶವಾದ …!
– ರಾಕೇಶ್ ಶೆಟ್ಟಿ
“ಡುಂಢಿ”ಯ ಬಗ್ಗೆ ಗೆಳೆಯರೊಬ್ಬರ ಜೊತೆ ಮಾತನಾಡುತಿದ್ದೆ. ಅವರು “Immortals of Meluha” ಪುಸ್ತಕವನ್ನು ಉಲ್ಲೇಖಿಸಿ, “ಆ ಪುಸ್ತಕದಲ್ಲಿ ಶಿವ, ಗಾಂಜಾ ಸೇದುತ್ತಾನೆ,ಟಿಬೆಟಿಯನ್ ಮೂಲದವನು ಅಂತ ಬರೆದಿತ್ತು ಅದು ಭರ್ಜರಿ ಸೇಲ್ ಆಗಿತ್ತು.ಈ ಡುಂಢಿ ಪ್ರಿಂಟ್ ಹಾಕಿಸಿದ್ದೇ ೧೫೦-೨೦೦ ಪ್ರತಿಯಂತಲ್ಲ” ಅಂದರು. ನಾನಂದೆ “ನಿಮಗೆ, ’ದೇವರ ಪಾಲಿಟಿಕ್ಸ್’ ಅರ್ಥವಾಗಿಲ್ಲ. ಆ ಪುಸ್ತಕದಲ್ಲಿ ಶಿವನನ್ನು, ’ಟಿಬೆಟಿಯನ್’ ಅನ್ನುವ ಬದಲೋ ’ಬ್ರಾಹ್ಮಣ/ಆರ್ಯ’ ಅಂತೇನಾದರೂ ಚಿತ್ರಿಸಿದ್ದರೇ ಈಗ ಡುಂಢಿಯ ಪರ ಮಾತನಾಡುತ್ತಿರುವ ಕರ್ನಾಟಕದ ಸೋ-ಕಾಲ್ಡ್ ಸೆಕ್ಯುಲರ್ ಗಳೆಲ್ಲ ಆ ಪುಸ್ತಕದ ವಿರುದ್ಧ ಮಾತನಾಡುತಿದ್ದರು”.
“ಒಬ್ಬ ನಕಲಿಯೋ ಅಥವಾ ಹಲವಾರು ಅಸಲಿಗಳ ಒಂದು ಸಂಕೇತವೊ ಆಗಿರುವ ಗಣಪತಿಯನ್ನು ಕುರಿತು ಹಲವು ಪುರಾಣಗಳು ಹಲವಾರು ರೀತಿಯ ಕಥೆಗಳನ್ನು ಹೇಳಿವೆ. ಈ ಢುಂಢೀಯೂ ಹಾಗೇ ಒಂದು ಮನೋರಂಜನೆ ಅಥವಾ ವಿಚಾರಕ್ಕೆ ಹಚ್ಚಬಹುದಾದ, ನಿಜವೆಂದು ನಂಬಲು ಇಷ್ಟ ಪಡುವ ಹೂರಣದ ಒಂದು ಕಲ್ಪನೆಯ ಪುರಾಣವೇ.” ಅನ್ನುವ ಮಾತುಗಳನ್ನಿಟ್ಟುಕೊಂಡ “ಡುಂಢಿ” ಅನ್ನುವ ಕೃತಿಯನ್ನು ಓದದೇ ಅದು ಕೃತಿಯೋ,ವಿಕೃತಿಯೋ ಅಂತ ನಿರ್ಧಾರ ಮಾಡುವುದು ಹೇಗೆ? ಅನ್ನುವ ಪ್ರಶ್ನೆಯನ್ನು ಮುಂದಿಡುತ್ತ ಮತ್ತು ಒಬ್ಬ ಲೇಖಕನನ್ನು ಬಂಧಿಸುವಂತ ಮಟ್ಟದವರೆಗೂ ಹೋಗಿದ್ದನ್ನು ವಿರೋಧಿಸುತ್ತಲೇ,ಈ ಮಾತು ಕೇಳುತಿದ್ದೇನೆ.ನಾನು ನನ್ನ ಗೆಳೆಯರಿಗೆ ಹೇಳಿದ ಮಾತಿನಲ್ಲಿ ಸತ್ಯವಿರಬಹುದು ಅಂತ ನಿಮಗೂ ಅನ್ನಿಸುವುದಿಲ್ಲವೇ? (“ಶಿವ”ನಮ್ಮವನು ಅವನನ್ನು ಹೈಜಾಕ್ ಮಾಡಿದ್ದಾರೆ ಅಂತ ಬರೆದವರನ್ನೂ ನೋಡಿದ್ದೇನೆ. ದೇವರನ್ನೂ ಈ ಮಂದಿ ತಮ್ಮ ಗುಂಪಿನೊಳಗೆ ಸೇರಿಸಿಕೊಳ್ಳುತ್ತಾರೆ ಶಿವಾ ಶಿವಾ…!)





