ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 18, 2013

1

ಅನಂತ ಮುಖದ ಮೂರ್ತಿಯವರ ಕಾಲ್ಪನಿಕ ಸಂದರ್ಶನ

‍ನಿಲುಮೆ ಮೂಲಕ

– ಮು ಅ ಶ್ರೀರಂಗ ಬೆಂಗಳೂರು

anantamurthyಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ನಮ್ಮ ಹೆಮ್ಮೆಯ ಯು ಆರ್ ಅನಂತಮೂರ್ತಿಯವರು ಮತ್ತೆ ಸುದ್ದಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರ ಬಗ್ಗೆ ಲೇಖನವೊಂದನ್ನು ಬರೆಯುವುದಕ್ಕಿಂತ ಒಂದು ಕಾಲ್ಪನಿಕ ಸಂದರ್ಶನದ ಮೂಲಕ ಅವರ ನಡೆ-ನುಡಿಗಳನ್ನು ತಿಳಿದುಕೊಳ್ಳಬಹುದು ಎಂದು ಅನಿಸಿತು. ಅನಂತಮೂರ್ತಿಯವರದ್ದು ಸಮ್ಮೋಹಕವಾದ  ರೂಪ;ಅವರ ಭಾಷಣದ ಶೈಲಿ ಅನನ್ಯ. ಆ ಮಾತಿನ ಶೈಲಿಯನ್ನು ಜ್ಞಾಪಿಸಿಕೊಂಡು ಈ ಕಾಲ್ಪನಿಕ ಸಂದರ್ಶನವನ್ನು ಓದಿದರೆ ನಿಮಗೆ ಆಪ್ತವೆನಿಸಬಹುದು. ಒಮ್ಮೆ ಪ್ರಯತ್ನಿಸಿ.

ಪ್ರಶ್ನೆ: ನಿಮ್ಮನ್ನು ಗುಲ್ಬರ್ಗ ಕೇಂದ್ರಿಯ ವಿ. ವಿ. ಕುಲಪತಿಗಳನ್ನಾಗಿ ಈಗಾಗಲೇ ಕೆಂದ್ರ ಸರ್ಕಾರ ನೇಮಿಸಿದೆ. ಇದಕ್ಕೂ ಮತ್ತು ಹಿಂದೆ ನಡೆದ ಅಸ್ಸಾಂ ಹಾಗು ಮುಂಬೈ ಗಲಭೆಗಳ ಬಗ್ಗೆ ತಾವು ಇದುವರೆಗೂ ಏನೂ ಹೇಳಿಕೆ ನೀಡದೆ ಇರುವುದಕ್ಕೂ ಏನಾದರು ಸಂಬಂಧ,ಹಿಡನ್ ಅಜೆಂಡಾ ಉಂಟೆ? ಜತೆಗೆ ಇತ್ತೀಚಿನ ಉತ್ತರ ಪ್ರದೇಶದ ಗಲಭೆಗಳ ಬಗ್ಗೆಯೂ ತಾವು ಪ್ರತಿಕ್ರಿಯಿಸಿಲ್ಲ ಏಕೆ?

ಅನಂತಮೂರ್ತಿ: ನೋಡಿ ಇದಕ್ಕೆ ಹಿಡನ್ ಅಜೆಂಡಾ ಎಂಬ ಪದದ ಪ್ರಯೋಗ ಸರಿಯಲ್ಲ. ಈ ಪ್ರಶ್ನೆಗೆ ನಾನು ಎರಡು ಆಯಾಮಗಳ ಮೂಲಕ ಉತ್ತರಿಸಲು ಪ್ರಯತ್ನಿಸುತ್ತೇನೆ. ಮೊದಲನೆಯದಾಗಿ ನಾನು ಮತ್ತು ನನ್ನ ವಿಚಾರವಾದಿ ಗೆಳೆಯರು ನಂಬಿರುವ ಸೆಕ್ಯುಲರಿಸಂ ಪ್ರಕಾರ ನಾವು ಅಂದರೆ ಬಹುಸಂಖ್ಯಾತರು ಯಾವಾಗಲು ಅಲ್ಪಸಂಖ್ಯಾತರ ಭಾವನೆಗಳಿಗೆ ಬೆಲೆ ಕೊಡಬೇಕು. ಗಾಂಧೀಜಿಯವರು ಹೇಳಿದ್ದೂ ಇದನ್ನೇ. ನಮ್ಮ ಪ್ರಜಾತಂತ್ರದ ತಳಪಾಯ ನಿಂತಿರುವುದು ನಮ್ಮ ಹಿರಿಯರ ಈ ಆಶಯಕ್ಕೆ ನಾವು ಧಕ್ಕೆ ಬಾರದಂತೆ ನಡೆದುಕೊಳ್ಳುವುದರಲ್ಲಿ ಮಾತ್ರ. ಈ ಕಾರಣದಿಂದ ನಾನು ಮತ್ತು ನನ್ನ ವಿಚಾರವಾದಿ ಗೆಳೆಯರು ತಾವು ಹೇಳಿದ ಆ ಎರಡೂ ಘಟನೆಗಳ ಬಗ್ಗೆ (ಅದು ಗಲಭೆಯಲ್ಲ) ಮೌನವಹಿಸಿದ್ದು. ಇನ್ನು ಎರಡನೇ ಆಯಾಮವೆಂದರೆ ನಾನು ಈ ನನ್ನ ೮೦ರ ವಯಸ್ಸಿನಲ್ಲಿ ಕುಲಪತಿಯಾಗಲು ಒಪ್ಪಿಕೊಂಡಿರುವುದಕ್ಕೆ ನನಗೆ “ಕುರ್ಚಿ”ಯ ವ್ಯಾಮೋಹ ಕಾರಣವೆಂದು ಅಲ್ಲಲ್ಲಿ ಕೆಲವರು ಅಂದು ಕೊಂಡಿರಬಹುದು. ಆದರೆ ಅವರು ಮರೆತಿರಬಹುದಾದ ಒಂದು ಸಂಗತಿಯೆಂದರೆ ನಾನು ಕುಲಪತಿಯಾಗಿರುವುದು ನಮ್ಮ ಸುವರ್ಣ ಕರ್ನಾಟಕದ ಒಂದು ಕೇಂದ್ರಿಯ ವಿ ವಿ ಗೆ. ಕುಲಪತಿಯಾಗಿ ಅಲ್ಲಿ ನನಗೆ ದೊರಕಬಹುದಾದಂತಹ ಅಧಿಕಾರ ಏನಿದೆ ಅದರಿಂದ ಆ ಪ್ರದೇಶದಲ್ಲಿ ಶೈಕ್ಷಣಿಕವಾಗಿ ಬದಲಾವಣೆಯ ಒಂದು ವಾತಾವರಣ ನಿರ್ಮಿಸಲು ಪ್ರಯತ್ನಿಸುವ ಆಸೆ ಇದೆ. ಅದರ ರೂಪ-ರೇಷೆಗಳ ಬಗ್ಗೆ ನಾನು ಗಾಢವಾಗಿ ಯೋಚಿಸುತ್ತಿದ್ದೆ. ನಾನು “ಮೌನಿ”ಯಾಗಿರಲು ಇದೂ ಒಂದು ಕಾರಣವಾಗಿರಬಹುದು. ಇನ್ನು ಉತ್ತರ ಪ್ರದೇಶದ ಘಟನೆಗಳ ಬಗ್ಗೆ “ಸದ್ಯದ”ಪರಿಸ್ಥಿತಿಯಲ್ಲಿ ಯಾವ ರೀತಿ ಪ್ರತಿಕ್ರಿಯಿಸಿದರೆ ಅದು ಸೆಕ್ಯುಲರ್ ಅನಿಸಿಕೊಳ್ಳಬಹುದುದೆಂದು ಯೋಚಿಸುತ್ತಿದ್ದೇನೆ.

ಪ್ರಶ್ನೆ: ಆದರೆ ಈ ಗಲಭೆಗಳ ಬಗ್ಗೆ ತಮ್ಮ ಮೌನಕ್ಕೆ ತಾವು ಹೇಳಿರುವುದು ಸಕಾರಣವಲ್ಲ. ಅದಕ್ಕೆ “‘ ಮೂರನೇ ಆಯಾಮ”ವೂ ಒಂದಿರಬಹುದು ಎಂಬ ಅನುಮಾನ ಕೆಲವರಲ್ಲಿ ಬರಬಹುದಲ್ಲವೇ?

ಅನಂತಮೂರ್ತಿ: (ನಗುತ್ತಾ)ನೋಡಿ ಅನುಮಾನಕ್ಕೆ ಔಷಧಿಗಳಿಲ್ಲ. ಒಂದು ತೆಲುಗು ಗಾದೆಯೇಯಿದೆಯಲ್ಲ. “ಅನುಮಾನಂ ಪೆದ್ದ (ಅಂದರೆ ದೊಡ್ಡ)ರೋಗಂ”

ಪ್ರಶ್ನೆ:  “ನಾಡಗೀತೆ ಮತ್ತು ಶಂಕರಾಚಾರ್ಯರ ಬಗ್ಗೆ ಭಗವಾನ್ ಮತ್ತು ಇತರರ ನಡುವೆ ನಡೆದಂತಹ ವಾದ-ವಿವಾದಗಳ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುವಿರಾ?

ಅನಂತಮೂರ್ತಿ : ನೋಡಿ ಈಗಾಗಲೇ ನಿಮ್ಮ ಹಿಂದಿನ ಪ್ರಶ್ನೆಗೆ ಉತ್ತರಿಸುವಾಗ ಹೇಳಿದ್ದೇನೆ. ನಾನು ಸದ್ಯದ “ಮಾತಿನ ಚಪಲತೆಗೆ”ಕಡಿವಾಣ ಹಾಕಿಕೊಳ್ಳುತ್ತಿರುವವನು ಎಂದು. ಆದರೆ ಇಲ್ಲಿ ನಾನು ಒಂದೇ ಒಂದು ಮಾತನ್ನು ಹೇಳಬಯಸುವೆ. ಅದೇನೆಂದರೆ ನಮ್ಮ ನಮ್ಮ ಸ್ವಂತ ಆಚರಣೆಗಳು ,ನಂಬಿಕೆಗಳು, ಏನೇ ಇರಲಿ ಅವು ನಮ್ಮ ಮನೆಯ ಹೊಸ್ತಿಲ್ಲನ್ನು ದಾಟಬಾರದು. ಹೀಗಾಗಿ ಅಧಿಕೃತವಾಗಿ ನಾಡಗೀತೆ ಎಂದು ಒಂದು ಕವನವನ್ನು ಆರಿಸುವಾಗ ಯಾವುದೇ ಧರ್ಮ-ಮತ-ಜಾತಿ-ಪಂಥ-ಪಂಗಡಗಳ ಮನಸ್ಸಿಗೆ,ಭಾವನೆಗಳಿಗೆ ನೋವಾಗದಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯ ಕರ್ತವ್ಯವಾಗ ಬೇಕು. ಈ ದೃಷ್ಟಿಯಿಂದಲೇ ನಮ್ಮ ಹಿರಿಯರು ರಾಷ್ಟ್ರಗೀತೆಯಾಗಿ “ಜನಗಣಮನ”ವನ್ನು ಆರಿಸಿಕೊಂಡದ್ದು.

ಸರ್, ಕೊನೆಯದಾಗಿ ಒಂದು ಪ್ರಶ್ನೆ: ಪ್ರಧಾನ ಮಂತ್ರಿ ಅಭ್ಯರ್ಥಿಯ ಹೆಸರಿನ ಬಗ್ಗೆ ಎದ್ದಿರುವ ವಿವಾದದ ಬಗ್ಗೆ……..

ಅನಂತಮೂರ್ತಿಯವರು ಪ್ರಶ್ನೆಯನ್ನು ತಡೆದು “ನೋಡಿ ಈಗ ನನಗೆ ಅರ್ಜೆಂಟಾಗಿ ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಉನ್ನತ ಹುದ್ದೆಗಳಿಗೆ ಆಯ್ಕೆಯ ಪ್ರಕ್ರಿಯೆ ಕುರಿತಂತೆ ಒಂದು ಸಭೆಗೆ ಹೋಗಬೇಕಾಗಿದೆ. ಮತ್ತೆ ಭೇಟಿಯಾಗೋಣವೆಂದು”ತಮ್ಮ ವಿಶಿಷ್ಟವಾದ ನಗೆ ಬೀರಿ,ಅವರಿಗಾಗಿ ಕಾಯುತ್ತಿದ್ದ ಗೆಳೆಯರ ಜತೆ ಹೊರಟರು.

ಚಿತ್ರ ಕೃಪೆ : http://www.firstpost.com

1 ಟಿಪ್ಪಣಿ Post a comment
  1. Nagaraj's avatar
    Nagaraj
    ಸೆಪ್ಟೆಂ 18 2013

    Very short.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments