…ಆದರೆ ಒಂದೊಂದ್ ಸಲ ಅದು ಕೇಳಿಸೋದೇ ಇನ್ನೊಂದು ಥರ !!!
– ಅಭಿನಂದನ್.ಎಸ್
ಮೊನ್ನೆ ಟ್ರೈನಿನಲ್ಲಿ ಶಿವಮೊಗ್ಗಕ್ಕೆ ಹೋಗ್ತಾ ಇದ್ದೆ. ಮುಂಜಾನೆ ಮಂಪರು..ಯಥಾ ಪ್ರಕಾರ ಮಲಗಿದ್ದೆ.
“ಮಲ್ಗೋರ್ರಿ..ಮಲ್ಗೋರ್ರಿ….!” ಅಂತ ಕೂಗಿಕೊಂಡು ಹೋದ ನಾಸಿಕ ವಾಣಿಯೊಂದು ಮಲಗಿದ್ದ ನನ್ನನ್ನು ಎಬ್ಬಿಸಿತು. ಯಾರಪ್ಪ pirvate ಆಗಿ ಮಲ್ಗಿರೋದನ್ನ public ಮಾಡ್ತಿದಾರೆ ಅಂತ ಕಣ್ಣು ತೆಗೆದು ನೋಡಿದಾಗ ಗೊತ್ತಾಯ್ತು, ಮಲ್ಲಿಗೆ ಹೂವು ಮಾರುವವ ಅವನ ಸಂಕ್ಷಿಪ್ತ, ಕ್ಷಿಪ್ರ, ಗೌಪ್ಯ ಶೈಲಿಯಲ್ಲಿ, “ಮಲ್ಲಿಗೆ ಹೂವು ರೀ, ಮಲ್ಲಿಗೆ ಹೂವು ರೀ….” ಅಂತಿದ್ರು ಅಂತ. ಅವರ speed ಗೆ ಒದ್ದಾಡಿ ಹೋಗಿ, ಬಾಯಿಂದ ಹೊರಗೆ ಬೀಳೋ ಹೊತ್ತಿಗೆ ಅದು “ಮಲ್ಗೋರ್ರಿ” ಆಗೋಗಿತ್ತು.
ಈ ಆಸಾಮಿ ಎಷ್ಟೋ ಪರವಾಗಿಲ್ಲ. ನಮ್ಮ ಮನೆ ಹತ್ತಿರ ಹೂವು ಮಾರುವವ ಏನು ಹೇಳುತ್ತಾರೋ ಇದುವರೆಗೂ ನಂಗೆ ಗೊತ್ತಾಗಿಲ್ಲ. ಒಟ್ಟಿನಲ್ಲಿ “ನಾನು ಹೂವು ಮಾರುತ್ತಿದ್ದೀನಿ” ಅನ್ನೋದನ್ನ ಅವ ಭಾರೀ effective ಆಗಿ ವರ್ಷಗಳಿಂದ communicate ಮಾಡುತ್ತಾ ಬಂದಿದ್ದಾರೆ…ಅದೂ ಅವರದೇ ಬಾಯಿಂದ.
ಇನ್ನು ಎಳನೀರಿನ ಗತಿಯಂತೂ ಬ್ಯಾಡ್ವೇ ಬ್ಯಾಡ. “ಎನ್ನೀರ್ರು”, “ನ್ನೀರ್ರು”, “ಈರ್ರು”, “…ರ್ರು”…ಅದಕ್ಕೇ ಒಂದು ತತ್ಸಮ ತದ್ಭವ ಗ್ರಂಥ ಬರೀಬೋದೇನೋ.
ಬಸ್ಸಿನಲ್ಲಿ ಕಂಡಕ್ಟರ್ರು “ಓಲ್ಡೈನ್” ಅಂತಿದ್ದಿದ್ದು ನನಗೆ ಚಿಕ್ಕಂದಿನಲ್ಲಿ ಸುಮಾರು ವರ್ಷಗಳ ಕಾಲ ತಲೆ ಕೆಡೆಸಿತ್ತು, ಅದ್ಯಾವ ಭಾಷೆಯಲ್ಲಿ ಅದರ ಅರ್ಥ ಎನು ಅಂತ. ಯಾರೋ ಪುಣ್ಯಾತ್ಮೆ sophisticated ಅಜ್ಜಿ ಒಂದು ದಿನ ಸ್ಟಾಪಿನಲ್ಲಿ ನಿಲ್ಲಿಸದೆ ಮುಂದೆ ಹೋಗುತ್ತಿದ್ದ ಬಸ್ಸಿನಿಂದ ಇಳೀಬೇಕಾದ್ರೆ ದಯನೀಯವಾಗಿ “HOLD ON PLEASE” ಅಂತ ಕೂಗಿದಾಗ್ಲೇ ಗೊತ್ತಾಗಿದ್ದು , ಓಲ್ಡೈನ್ ಎಲ್ಲಿಂದ ದಾರಿ ತಪ್ಪಿ ಬಂತು ಅಂತ.
ರೈಲು, ಬಸ್ಸು ಸ್ಟೇಷನ್ನುಗಳಲ್ಲಿ ಇಡ್ಲೀನ ಹೇಗೆಲ್ಲಾ ಚಿತ್ರಾನ್ನ ಮಾಡಲ್ಲ. “ಯಾರ್ರೀಡ್ಲಿ?”, “ಯಾರ್ಗಿಡ್ಲಿ?”, “ಎಲ್ರೀಡ್ಲಿ?”…





